ಹಾವು ತುಳಿದೆನೇ ಮಾನಿನಿ
ಹಾವು ತುಳಿದೆನೇ ||ಪ||

ಹಾವು ತುಳಿದು ಹಾರಿ ನಿಂತೆ
ಜೀವ ಕಳವಳಿಸಿತು ಗೆಳತಿ
ದೇಹತ್ರಯದ ಸ್ಮೃತಿಯು ತಪ್ಪಿ
ದೇವಾ ನೀನೆ ಗತಿಯು ಎಂದು ||೧||

ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿ ಶಿವನ ದಯದಿ ||೨||

ಭೋಧಾನಂದವಾಗಿ ಬರಲು
ದಾರಿಯೊಳಗೆ ಮಲಗಿ ಇರಲು
ಪಾದದಿಂದ ಪೊಡವಿಗೊತ್ತಿ
ನಾದಗೊಳಿಸಿತು ನಿಜದಿ ನೋಡಿ ||೩||

ಕರಡಗಿ ಊರ ಹೊರಗೆ
ದಾರಿಕಟ್ಟಿ ತರುಬಿದಂಥ
ಘೋರತರದ ಉರಗ ಅದರ
ಕ್ವಾರಿಹಲ್ಲು ಮುರಿದ ತೆರದಿ ||೪||

ಸತ್ಯ ಶಿಶುನಾಳಧೀಶನ
ಉತ್ತಮ ಸೇವಕನಿಗೆ
ಕತ್ತಲೊಳು ಬಂದು ಕಾಲಿಗೆ
ಸುತ್ತಿಕೊಂಡಿತು ಸಣ್ಣನಾಗರ ||೫||