ಐತಿಹಾಸಿಕ ಚಿತ್ರದುರ್ಗದ ಚಿನ್ನದ ಗರಿಗಳು – ಒಂದು ವಿಶ್ಲೇಷಣೆ

ಚಿತ್ರದುರ್ಗವೆಂದೊಡನೆ ಮನಸ್ಸಿನಲ್ಲಿ ಮೂಡುವ ಏಳು ಸುತ್ತಿನ ಕೋಟೆಗಳ ಚಿತ್ತಾರ, ಹೆಬ್ಬಂಡೆಗಳು, ಕೋಡುಗಲ್ಲುಗಳು, ಉಯಾಲೆ ಮಂಟಪ, ದೀಪಸ್ತಂಭ, ಕಲ್ಲತೋರಣಗಳು, ಭೀಮಗಾತ್ರದ ಬಂಡೆಗಳಲ್ಲೇ ಒಡಮಾಡಿದ ದೇವಾಲಯಗಳು, ಕೆರೆ ಹೊಂಡಗಳು, ಬೃಹನ್ಮಠ, ಇವನ್ನೆಲಾ ನಿರ್ಮಿಸಿದ ಪಾಳೆಗಾರರು, ಅವರ ಶೌರ್ಯ, ಪರಾಕ್ರಮ ಜಿದ್ದಿನ ಸ್ವಭಾವ, ಅದರ ಜೊತೆ ಜೊತೆಗೆ ಪರಧರ್ಮ ಸಹಿಷ್ಣುತೆ, ಮಾನವೀಯತೆ ಜಾತ್ಯತೀತ ಮನೋಭಾವಗಳ ಸಂಗಮದಿಂದಾಗಿ ದುರ್ಗದ ಪಾಳೇಗಾರರು ಬೇರಾವಸೀಮೆ ಪಾಳೇಗಾರರಿಗಿಂತ ಭಿನ್ನವಾಗಿ ಕಂಡು ಅಚ್ಚರಿ ಹುಟ್ಟಿಸುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗದ ಇತಿಹಾಸಕ್ಕೆ ಮಹತ್ವದ ಸ್ಥಾನ ತುಂದುಕೊಟ್ಟವರು ಪಾಳೇಗಾರರು. ದುರ್ಗವನ್ನು ಗಂಗರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಆಳಿದ್ದರೂ ದುರ್ಗದ ಮೇಲೆ ಪಾಳೇಗಾರರು ಮೂಡಿಸಿದ ಛಾಪು ಅದೆಂಥದ್ದೆಂದರೆ ದುರ್ಗವೆಂದರೆ ‘ಪಾಳೇಗಾರರ ಇತಿಹಾಸ ಕೋಶ’ವೆಂದೇ ಇಂದಿಗೂ ಜನಜನಿತ. ಚಿತ್ರದುರ್ಗವನ್ನು ಸುಮಾರು ಹನ್ನೊಂದು ಜನ ಪಾಳೇಗಾರರು ಆಳಿದ್ದರೂ ಅದರಲ್ಲಿ ಮತ್ತಿ ತಿಮ್ಮಣ್ಣನಾಯಕ, ಬಿಚ್ಚುಗತ್ತಿ ಭರಮನಾಯಕ, ಹಿರೇಮದಕರಿ ನಾಯಕ ಹಾಗೂ ಕೊನೆಯ ದೊರೆ ಗಂಡುಗಲಿ ಮದಕರಿ ನಾಯಕ ಮಹಾಪರಾಕ್ರಮಿಗಳು ಇತಿಹಾಸವಾಗಲೀ ದುರ್ಗದ ಜನರಾಗಲೀ ಈ ನಾಲ್ಕು ನಾಯಕಮಣಿಗಳನ್ನು ಮಾತ್ರ ಮರೆತಿಲ್ಲ – ಮರೆಯುವಂತಿಲ್ಲ.

ಅದರಲ್ಲೂ ಚಿತ್ರದುರ್ಗವೆಂದರೆ ಮದಕರಿನಾಯಕ ಮದಕರಿನಾಯಕನೆಂದರೆ ಚಿತ್ರದುರ್ಗ ವೆಂದೇ ಮನೆಮಾತು. ಅಚ್ಚರಿ ಅಂಶ ಮತ್ತೊಂದಿದೆ. ದೊರೆಗಳ ಹೆಸರಿನ ಜೊತೆಗೆ ರಿಂಗಣಿಸುವ ಮತ್ತೊಂದು ಹೆಸರು ದೊರೆಗಳದ್ದಲ್ಲ. ದೊರೆಸಾನಿಯರದ್ದಲ್ಲ ಅತ್ಯಂತ ಸಾಮಾನ್ಯಳೂ, ಕೆಳ ಜಾತಿಯ ಹೆಣ್ಣುಮಗಳೊಬ್ಬಳು, ಮದಕರಿ ನಾಯಕನ ಜೊತೆ ಜೊತೆಗೆ ಸಮಾನ ಖ್ಯಾತಿಯನ್ನು ಹಂಚಿಕೊಂಡ ವೀರ ವನಿತೆಯೆಂದೇ ಹೆಗ್ಗಳಿಕೆ ಪಡೆದ ಓಬವ್ವ! ಒನಕೆ ಕಿಂಡಿ ಓಬವ್ವ ಎಂದರೇನೇ ಪರಿಪೂರ್ಣವೆನಿಸೀತು.

ದುರ್ಗದ ದೊರೆಗಳು ದರ್ಪದಾಲತ್ತುಗಳಿಗೆ ಹೆಸರಾದಂತೆ ಧರ್ಮಾನುಯಾಯಿಗಳು ಆಗಿದ್ದರೆಂಬುದು ಉಲ್ಲೇಖನಾರ್ಹ. ಈ ಮಾತಿಗೆ ಅವರು ಸಂಸ್ಥಾಪಿಸಿದ ಅಷ್ಟಮಠಗಳೇ ಸಾಕ್ಷಿ. ಮದಕರಿ ಉಳಿದೆಲ್ಲ ಪಾಳೆಗಾರರಿಗಿಂತ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆಯಲೂ ಕಾರಣವಿದೆ. ಆತ ಮಹಾಪರಾಕ್ರಮಿ ಹೈದರಾಲಿಖಾನ್ ನೊಂದಿಗೆ ನಡೆಸಿದ ಸಮರ, ತೋರಿದ ದೇಶಪ್ರೇಮ, ಸ್ವಾಭಿಮಾನ ಇದರೊಂದಿಗೆ ಮದಕರಿನಾಯಕನನ್ನು ಹೈದರಾಲಿಯು ಸೋಲಿಸಲಾಗದೆ ಮೋಸದಿಂದ ಸೆರೆಹಿಡಿದುಕೊಲ್ಲಿಸಿದನೆಂಬ ಇತಿಹಾಸದಿಂದಾಗಿ ನಾಯಕನ ಮೇಲೆ ಅನುಕಂಪದ ಅಲೆಯದೂ ಇದೆ. ೧೨ ವರ್ಷಕ್ಕೆ ಪಟ್ಟಕ್ಕೆ ಬಂದ ಮದಕರಿ ಜಾನಕಲ್ ತೊದಲು ಭರಮಪ್ಪನಾಯಕನ ಮಗ ದೊಡ್ಡ ಮದಕರಿ ನಾಯಕನಿಗೆ ಪಟ್ಟವಾಗುವುದನ್ನು ತಪ್ಪಿಸಿದ ಓಬವ್ವನಾಗತಿಯ ರಾಜಕೀಯದಿಂದಾಗಿ ಬಾಲಕನಾಗಿದ್ದಾಗಲೇ ಪಟ್ಟವೇರಿದವನು ಮದಕರಿನಾಯಕ. ದುರ್ಗದ ಉಸ್ತುವಾರಿಗೆ ನಿಂತಾಕೆ ಓಬವ್ವನಾಗತಿ. ಈಕೆ ಮಾಯಕೊಂಡದಲ್ಲಿ ಮಡಿದ ಹಿರೇಮದಕರಿ ಭೂಪಾಲರ ಮಡದಿ. ಮಹಾದಿಟ್ಟೆ ಧೀರೋದಾತ್ತ ಮಹಿಳೆ ಗಂಡಿನಂತೆ ಕತ್ತಿ ಹಿಡಿದು ಹೋರಾಡುವ ಅಜ್ಜಿಯ ಜೊತೆ ಗಂಡುಸಿಂಹದಂತೆಯೇ ಬೆಳೆದ ಮದಕರಿ, ‘ವಜ್ರಾದಪಿ ಕಠೋರಾಣಿ ಕುಸುಮಾದಪಿ ಮೃದುನೀ’ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿ. ಯುದ್ಧವೆಂದರೆ ಅವನಿಗೆ ಚದುರಂಗದಾಟ.

ದುರ್ಗದವರಿಗೆ ಮೊದಲಿನಿಂದಲೂ ಸುತ್ತಮುತ್ತಲ ಸ್ವಜಾತಿ ಪಾಳೇಗಾರರೇ ಪರಮಶತ್ರುಗಳು. ಹರಪನಹಳ್ಳಿ ರಾಯದುರ್ಗ ಜರಿಮಲೆ ಪಾಳೇಗಾರರು ಅಂಗೈ ಹುಣ್ಣಾದರೆ, ಸವಣೂರು ತರೀಕೆರೆ ಕನಕಗಿರಿ ಪಾಳೇಗಾರರು ಪ್ರಗತಿಯ ಹಾದಿಗೆ ಮುಳ್ಳಾದವರು. ಬಹುಮುಖ್ಯ ವಿಷಯವೆಂದರೆ ನವಾಬ್ ಹೈದರಾಲಿಖಾನನ ವಶಕ್ಕೆ ಒಳಪಡದ ಒಂದೇ ಒಂದು ಪಾಳೆಪಟ್ಟೆಂದರೆ ದುರ್ಗ ಮಾತ್ರ. ಅದಕ್ಕೇ ಉಳಿದವರೆಲ್ಲರಿಗೆ ಒಳಗೇ ಅಸೂಯೆ. ಮದಕರಿಯೂ ಚತುರ, ಉಳಿದ ಪುಡಿಪಾಳೇಗಾರರು ಹೈದರಾಲಿ ಸ್ನೇಹ ಮಾಡುವ ಮೊದಲೇ ಹೈದರಾಲಿಯೊಂದಿಗೆ ಕೈ ಕುಲಿಕಿದ ಚಾಣಾಕ್ಷ. ಆತನನ್ನು ಮೆಚ್ಚಿಸಲೆಂದೋ ತನ್ನ ಭುಜಭಲ ಪರಾಕ್ರಮವನ್ನು ಪ್ರದರ್ಶಿಸಲೆಂದೋ ಅಥವಾ ತನ್ನ ತಂಟೆಗೆ ಬಾರದಿರಲೆಂಬ ಮುಂದಾಲೋಚನೆಯೋ ಹೈದರನಿಗಾಗಿ ಅನೇಕ ಯುದ್ಧಗಳನ್ನು ಮಾಡಿ ಬಿದನೂರು ಬಸವಾಪಟ್ಟಣ ಬಂಕಾಪುರದ ಕೋಟೆಯನ್ನು ಠಾಣೆ ಹಾಕಿಸಿಕೊಟ್ಟನು. ಕ್ರಿ. ಶ. ೧೭೬೪ ರಲ್ಲಿ ಹೈದರಾಲಿಗೂ ಮರಾಠರ ಪೇಶ್ವೆ ಮಾಧವರಾಯನಿಗೂ ಕದನವೇರ್ಪಟ್ಟಾಗ ನವಾಬನಿಗೆ ಸಹಾಯವಾಗಿ ನಿಂತು ಯುದ್ಧದಲ್ಲಿ ಗೆಲುವು ದೊರಕಿಸಿಕೊಟ್ಟನಲ್ಲದೆ ನಿಡಗಲು ದುರ್ಗವನ್ನೂ ಠಾಣೆ ಮಾಡಿಸಿಕೊಟ್ಟವನು. ಇದರಿಂದಾಗಿ ಮದಕರಿನಾಯಕ ಇತರೆ ಪಾಳೇಗಾರರಿಗೆ ಅರಿಭಯಂಕರನೆನಿಸಿದ.

ಇಷ್ಟಾದರೂ ಹೈದರಾಲಿ ತನ್ನ ಪಾಲಿಗೆ ಎಂದಿದ್ದರೂ ಮಾಂಸದಲ್ಲಿನ ಮೂಳೆಯೆಂದಂತ್ತಿದ್ದ ನಾಯಕ ನವಾಬನನ್ನು ಹತೋಟಿಯಲ್ಲಿಡಲು ಮರಾಠರೊಡನೆಯೂ ಮಿತ್ರತ್ವ ಬೆಳೆಸಿದ ಮಹಾಮುತ್ಸದ್ದಿ. ಪೇಶ್ವ ಮಾಧವರಾಯನಿಗೆ ಸಾಧಿಸಲಸಾಧ್ಯವೆನಿಸಿದ್ದ ಹೈದರಾಲಿಗೆ ಸೇರಿದ ಸಾವನದುರ್ಗ, ಹುತ್ತರಿ ದುರ್ಗ, ನುಗ್ಗೆಹಳ್ಳಿ, ಹಾಗಲವಾಡಿ, ಬಾಣಾವರ ಮೊದಲಾದ ಕೋಟೆಗಳನ್ನು ಆಕ್ರಮಿಸಿದನಲ್ಲದೆ, ೧೭೬೯ರಲ್ಲಿ ತುರುವೆಕೆರೆ, ಬೆಳ್ಳೂರು, ಕೋಲಾರ, ಮುಳುಬಾಗಿಲು, ದೇವರಾಯನ ದುರ್ಗ, ಚಿಕ್ಕಬಳ್ಳಾಪುರಗಳಿಗೂ ಠಾಣೆ ಹಾಕಿಸಿದಾ. ಇದರಿಂದಾಗಿ ಹೈದರಾಲಿ ಅಂತರಂಗದಲ್ಲಿ ನಾಯಕನನ್ನು ದ್ವೇಷಿಸಹತ್ತಿದ. ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳದೆ ಮಾಡಿಕೊಂಡ ಇಂತಹ ಸ್ನೇಹ ಸಮರಗಳು ಇಬ್ಬಂದಿತನವೇ ಮುಂದೆ ಮದಕರಿಗೆ ಮುಳುವಾದವು. ಹೊರಗಿನ ಶತ್ರುಗಳಲ್ಲದೆ ಒಳಗಿನ ಶತ್ರುಗಳೂ ಆಡಳಿತದಲ್ಲಿ ನುಸುಳಿದ್ದರಿಂದಾಗಿ ಅಂತ್ಯದಲ್ಲಿ ವಂಚನೆ ಗೊಳಗಾದ ನಾಯಕ ಎಲ್ಲರನ್ನೂ ಅನುಮಾನಿಸುವಂತಾದ.

ತನ್ನ ತಾತ ಮುತ್ತಾತಂದಿರು ನಂಬಿ ನಡೆದ ಬೃಹನ್ಮಠದ ಅವಕೃಪೆಗೂ ಒಳಗಾಗಲು ಅಹಂಕಾರ ಒಂದೆಡೆಯಾದರೆ, ಅಸಹಾಯಕತೆ ಅಪನಂಬಿಕೆ ಸಂದರ್ಭಗಳೂ ಕಾರಣವಾಗಿದ್ದರಬಹುದು. ಮಹಾಸ್ವಾಮಿಗಳ ಕೃಪಾಶೀರ್ವಾದಗಳಿಗಾಗಿ ಶತ್ರು ಪಾಳೇಗಾರರ ಸೀಮೆಯ ಜನರು ಮಠಕ್ಕೆ ಬಂದು ಹೋಗುತ್ತಿದ್ದುದು ನಾಯಕನಲ್ಲಿ ಮುಜುಗರ ಉಂಟುಮಾಡಿತು. ಮರಾಠರು ಮುಸಲರು ಆಜನ್ಮಶತ್ರುಗಳಾಗಿರುವಾಗ ಇವರ ಸ್ನೇಹಗಳಿಕೆ ಎರಡು ದೋಣಿಯಲ್ಲಿ ಕಾಲಿಟ್ಟು ಪಯಣಿಸಿದಂತೆ ದೊರೆಗೆ ಗಂಡಾಂತರವೆಂದು ನಂಬಿದ್ದ ಸಾಮಿಗಳಲ್ಲಿ ಕಸಿವಿಸಿಯನ್ನುಂಟುಮಾಡಿತ್ತು. ಅವರ ಸಲಹೆಯಾಗಲೀ ಯುದ್ಧದಾಹ ಭೂಮಿಪಾಶ ಒಳ್ಳೆಯದಲ್ಲವೆಂಬ ಉಪದೇಶವಾಗಲೀ ಸದಾ ಕಾದಾಡಲೆಂದೇ ಹುಟ್ಟಿದ ನಾಯಕನಿಗೆ ಹಿಡಿಸದೇ ಹೋಯಿತು. ಇಂತಹ ಮನಸ್ಸಿನ ಕಿರಿಕಿರಿಗಳೇ ದೊರೆ ಗುರುವಿನ ಮಧ್ಯೆ ಮಹಾಕಂದಕವಾಗಿ ಪರಿಣಮಿಸಿರಲೂಬಹುದು. ‘ಹಂಗಿನರಮನೆಗಿಂತ ಭಂಗುರದ ಗುಡಿಲೇಸು’ ಎಂದು ಮಹಾಸಾಮಿಗಳು ದುರ್ಗವನ್ನೇ ಬಿಟ್ಟುಬಿಟ್ಟರು. ಆದರೆ ಕಡೆಯ ಉಸಿರಿರುವ ತನಕ ದುರ್ಗವನ್ನು ಬಿಡದೇ ದುರ್ಗದ ಒಂದಂಗುಲ ನೆಲವನ್ನೂ ಮುಸಲರಿಗೆ ಒಪ್ಪಿಸದೆ ಹೋರಾಡಿದ ಮದಕರಿನಾಯಕ ಎಂದಿಗೂ ನಾಯಕ ಕುಲತಿಲಕನೆಂದೇ ಪ್ರಖ್ಯಾತ.

ಮದಕರಿಯ ಏಳ್ಗೆಯನ್ನು ಸಹಿಸದಂತಾದ ಹೈದರಾಲಿ ಬೇಕೆಂದೇ ಎರಡು ಲಕ್ಷ ವರಹ ಪೊಗದಿ ಕೊಡುವಂತೆ ಆಜ್ಞಾಪಿಸಿದ. ಆಜ್ಞೆ ಮಾಡಿ ಮಾತ್ರವೇ ಗೊತ್ತಿದ್ದ ನಾಯಕ ತಿರಸ್ಕರಿಸಿದ. ಕಾಲುಕೆದರಿ ಕದನಕ್ಕೆ ನಿಂತ ಹೈದರ ದುರ್ಗವನ್ನು ವಶಪಡಿಸಿಕೊಳ್ಳಬೇಕೆಂಬ ಹಠದಲ್ಲಿ ನಾಲ್ಕು ಬಾರಿ ದಂಡೆತ್ತಿ ಬಂದ. ೧೭೬೨, ೧೭೭೪ ಮತ್ತು ೧೭೭೭ ರಲ್ಲಿ ಯುದ್ಧ ಸಾರಿದ ನವಾಬ ಮೂರು ಯುದ್ದಗಳಲ್ಲೂ ಹಿಮ್ಮೆಟ್ಟಿದ. ಮದಕರಿಯನ್ನು ಮಣಿಸಲು ಅಸಾಧ್ಯವೆಂದರಿತಾಗ ಕುತಂತ್ರಕ್ಕೆ ಮೊರೆಹೋದ. ಹಣ ಪದವಿಗಳ ಆಮಿಷಕ್ಕೆ ಬಲಿಯಾದ ಪ್ರಧಾನಿ ಕಳ್ಳಿನರಸಪ್ಪ ಉಪ್ಪಿಟ್ಟ ಮನೆಗೆ ಕಿಚ್ಚಿಟ್ಟ ಮೊದಲಿಗ. ತನ್ನ ಸಮಾನ ಮನಸ್ಕರೊಂದಿಗೆ ಮೊಹರಂ ಹಬ್ಬದಂದು ವೇಷ ಮರೆಸಿಕೊಂಡು ದುರ್ಗವನ್ನು ಬಿಟ್ಟು ಹೈದರಾಲಿ ಪಡೆ ಸೇರಿದ.

ದುರ್ಗಮವಾದ ಏಳುಸುತ್ತಿನಕೋಟೆ ಚಿತ್ರಕಲ್ ದುರ್ಗವನ್ನು ಪ್ರವೇಶಿಸಲು ಅನುಕೂಲಕರವಾದ ಕಳ್ಳಗಿಂಡಿಯ ರಹಸ್ಯ ಬಯಲಾದಾಗ ಹೈದರನಿಗೆ ದುರ್ಗವನ್ನು ಗೆದ್ದಷ್ಟೇ ಸಂತಸ… ಕೋಟೆಯ ವಾಯುವ್ಯ ದಿಕ್ಕಿನಲ್ಲೇ ಕಳ್ಳಗಿಂಡಿ, ಇಕ್ಕೆಲಗಳಲ್ಲಿ ಮತ್ತು ಮೇಲ್ಭಾಗದಲ್ಲಿ ದೋಣಿಯಂತೆ ಬಾಗಿರುವ ಬೃಹತ್ ಬಂಡೆಗಳು, ಅವುಗಳ ಮೇಲೆ ಹಬ್ಬಿರುವ ಉಕ್ಕಿನ ಕೋಟೆಯ ಸಾಲು. ಎರಡು ಬಂಡೆಗಳ ನಡುವೆಯಿರುವ ಪುಟ್ಟಸಂದಿಯಲ್ಲಿ ಒಬ್ಬನು ಮಾತ್ರವೇ ಪ್ರಯಾಸದಿಂದ ನುಸುಳಿ ತೆವಳಿಕೊಂಡು ಒಳ ಪ್ರವೇಶಿಸುವಷ್ಟು ಜಗೆ. ಇದರ ಸಮೀಪವೇ ಓಬವ್ವ ಮತ್ತು ಮದ್ದಹನುಮಪ್ಪ ದಂಪತಿಗಳ ಕಲ್ಲಿನಮನೆ. ಓಬವ್ವ ಅಡಿಗೆ ಬೇಯಿಸಿಟ್ಟು ಬೆಂಕಿ ಕಾಯಿಸಿಕೊಂಡಳು. ಗಂಡನಿಗಾಗಿ ಕಾದಳು. ಕಹಳೆಬತೇರಿಯಲ್ಲಿ ಕಣ್ಣೆವ ಮುಚ್ಚದೆ ಕಾವಲು ಕಾಯುವ ಗಂಡ ಯಾವಾಗ ಬರುವನೋ ಹೇಳುವಂತಿಲ್ಲ, ಗಡಿಯಲ್ಲಿ ಯುದ್ಧ ನಡೆದಿದೆ. ಯಾವ ಸಮಯದಲ್ಲಿ ಯಾವ ಮಾಯದಲ್ಲಿ ಶತ್ರುಗಳು ಹೇಗೆ ಒಳ ನುಸುಳುವರೋ ಎಂಬ ಚಿಂತೆ ಆಕೆಯ ಮನದಲ್ಲೂ ಹಬ್ಬಿಕೊಂಡಿತು. ಮಕ್ಕಳು ಹೊರಗೆಲ್ಲೋ ಹೋಗಿವೆ. ನೆರೆಮನೆಯಿಂದ ತಂದ ಒನಕೆಯನ್ನು ಕೊಟ್ಟಾದರೂ ಬರೋಣವೆಂದಾಕೆ ಒನಕೆ ಹಿಡಿದು ಹೊರಟಳು. ಆಗಲೇ ಕಳ್ಳಗಿಂಡಿಯಲ್ಲಿ ಸದ್ದು! ಪಿಸುಮಾತುಗಳು! ಬೆಚ್ಚಿಬಿದ್ದಳು. ಕಿವಿ ನಿಮಿರಿಸಿ ಆಲಿಸಿದಳು. ಕೋಟೆಯ ಹೊರಗೆ ಗುಜುಗುಜು, ಉರ್ದು ಮಾತುಗಳು ಕೇಳಿದವು. ಅವಳ ಕಿವಿ ಬೆಚ್ಚಗಾದವು. ಶತ್ರು ಸೇನೆ ಹೊರಗಿದೆ ಎಂಬುದು ಖಾತರಿಯಾಯಿತು. ಚಳಿಯಲ್ಲೂ ಬೆವೆತಳು ಓಬವ್ವ. ಯಾರೋ ಒಬ್ಬ ನೆಲಕ್ಕೆ ಹೊಟ್ಟೆಹಚ್ಚಿ ಕಿಂಡಿಯಲ್ಲಿತೆವಳುತಾಕೋಟೆಯ ಒಳಗಡೆ ಬರಲು ಹವಣಿಸುವುದನ್ನು ಕಂಡಳು. ಕೂಗಿಕೊಳ್ಳಲು ಬಾಯ್ದೆರೆದಳು ಬಾಯಿಯೇ ಬರಲಿಲ್ಲ. ಶತ್ರು ಒಳತೂರಿದರೆ ತನಗೂ ಉಳಿಗಾಲವಿಲ್ಲ. ದುರ್ಗಕ್ಕೂ ಆಪತ್ತೆಂದು ಬಗೆದ ಓಬವ್ವ ಆ ಕ್ಷಣವೇ ಏನು ಮಾಡಬೇಕೆಂಬುದನ್ನು ನಿರ್ಧರಿಸಬೇಕಿತ್ತು. ಇತರರನ್ನು ಸಹಾಯಕ್ಕೆ ಕರೆಯಲು, ಸುದ್ದಿಮುಟ್ಟಿಸಲೂ ಸಮಯವಿಲ್ಲ. ಕಳ್ಳಗಿಂಡಿಯಲ್ಲಿ ತುರುಕನ ತಲೆ ಇಣುತ್ತಿತು. ಕೈನಲ್ಲಿದ್ದ ಒನಕೆ ರಪ್ಪನೆ ಅವನ ತಲೆಯ ಮೇಲೆರಗಿತು. ಆ ಹೊಡೆತಕ್ಕೆ ಕೂಗಿಕೊಳ್ಳಲೂ ತೋಚದೆ ಉಸಿರುಗಟ್ಟಿರಕ್ತಕಾರಿದ ಸೈನಿಕ. ಗಂಡಾಳು ಓಬವ್ವ ಅವನ ಮುಂಗೂದಲ್ಲನ್ನು ಹಿಡಿದು ದರದರನೆ ಎಳೆದು ಪಕ್ಕಕ್ಕೆಸೆದಳು. ಕೈನಲ್ಲಿರುವ ಒನಕೆಯಿಂದ ಪ್ರಚೋದಿತಳಾದ ಆಕೆ ಗಂಡುಕಚ್ಚೆ ಹಾಕಿ ಸೆರಗನ್ನು ಸೊಂಟಕ್ಕೆ ಬಿಗಿದು ಕಳ್ಳಗಿಂಡಿಯತ್ತ ಕಣ್ಣಿಟ್ಟಳು. ಮತ್ತೊಂದು ತಲೆ ಈಚೆ ಬಂತು. ತಲೆ ಎತ್ತುವುದರಲ್ಲೇ ಒನಕೆಯ ಪ್ರಹಾರ. ಒನಕೆ ಪೆಟ್ಟಿಗೆ ಮೆದುಳು ಅಷ್ಟು ದೂರಕ್ಕೆ ಹಾರಿ ರಕ್ತ ಚಿಮ್ಮಿತು. ಹೀಗೇ ಅದೆಷ್ಟು ಜನರ ತಲೆಯೊಡೆದಳು. ನವಣೆ ಕುಟ್ಟಿದಂತೆ ಕುಟ್ಟಿದಳು ಶತ್ರುಗಳ ಶಿರವನ್ನು, ಶವಗಳ ರಾಶಿಯೇ ಬಿದ್ದವು. ಆಗಲೇ ಊಟಕ್ಕೆಂದು ಮನೆಗೆ ಬಂದ ಮದ್ದಹನುಮಪ್ಪ ಭೀಕರ ದೃಶ್ಯವನ್ನು ಕಂಡು ನಿಬ್ಬೆರಗಾದ, ಕಹಳೆ ಊದಿದ. ಓಬವ್ವಗೆ ಪರಿವೆಯಿಲ್ಲ – ಒನಕೆಗೆ ಬಿಡುವಿಲ್ಲ. ದುರ್ಗದ ದಂಡು ಧಾವಿಸಿ ಬಂದಿತು ಕೋಟೆ ಏರಿನಿಂತು ಶತ್ರುಗಳಿಗೆ ಮುಖಾಮುಖಿಯಾಯಿತು. ಮದ್ದಹನುಮಪ್ಪ ಓಬವ್ವಯನ್ನು ಸಮೀಪಿಸಿ ಶಾಂತಳಾಗಲು ಭಿನ್ನವಿಸಿದ. ಕೈಲಿದ್ದ ಒನಕೆ ಕಿತ್ತುಕೊಳ್ಳಲು ಯತ್ನಿಸಿದ. ಈ ಸಮಯದಲ್ಲೇ ಒಳನುಸುಳಿದ ಶತ್ರುಗಳ ಖಡ್ಗಕ್ಕೆ ಓಬವ್ವ ಬಲಿಯಾದಳು. ನೆಲಕ್ಕುರುಳುವ ಮುನ್ನ ಆಕೆಯನ್ನು ಇರಿದವರನ್ನು ತನ್ನ ಒನಕೆಗೆ ಆಹುತಿಕೊಟ್ಟಳು. ಹೆಣದ ರಾಶಿಯ ಮೇಲೆಯೇ ಬಿದ್ದು ಅಸುನೀಗಿದಳು. ದುರ್ಗಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ಮಹಿಳೆಯ ಸಾಹಸ ದುರ್ಗದ ಮನೆಮಾತಾಯಿತು. ಅಂದಿನ ಯುದ್ಧದಲ್ಲಿ ದುರ್ಗಕ್ಕೆ ಜಯವೂ ಆಯಿತು. ಖುದ್ ದೊರೆಯೇ ಬಂದು ಓಬವ್ವಗೆ ಅಂತಿಮ ಗೌರವ ಸಲ್ಲಿಸಿದ. ಆಕೆಯ ವಿಗ್ರಹವನ್ನು ಅಷ್ಟಧಾತುಗಳಲ್ಲಿ ನಿರ್ಮಿಸಿ ಕಳ್ಳಗಂಡಿಯ ಬಳಿಯೇ ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದ. ಅಗಸನಕಲ್ಲು ಗ್ರಾಮವನ್ನು ಆಕೆಗೆ ಜಹಗೀರಾಗಿ ನೀಡಿ ವಂಶಪಾರಂಪರ್ಯವಾಗಿ ಅದನ್ನು ಅನುಭವಿಸಿಕೊಂಡು ಬರುವಂತೆ ಬರೆಯಿಸಿಕೊಟ್ಟನು. ಚಿತ್ರದುರ್ಗ ಸಂಸ್ಥಾನದಲ್ಲಿಯೂ ಅದರ ಆಶ್ರಿತ ಸಂಸ್ಥಾನಗಳಲ್ಲಿಯೂ ಜರುಗುವ ಎಲ್ಲಾದೇವರುಗಳ ಜಲಧಿ ಉತ್ಸವ ಮತ್ತು ವಿವಾಹಗಳಲ್ಲಿ ‘ಓಬವ್ವ ವೀಳೆ’ ಯವೆಂದು ತೆಗೆದು ಮುಂದಲವರ ವಂಶಜರಿಗೆ ಕೊಡಬೇಕೆಂದು ಮತೀಯ ಸುಧಾರಣೆಯನ್ನೂ ಮಾಡಿ ದೊರೆ ಬಹುವಾಗಿ ಗೌರವಿಸಿದ.

ತನ್ನ ರಾಜ್ಯಕ್ಕಾಗಿ, ತನ್ನ ಪತಿ ಪುತ್ರರಿಗಾಗಿ ತನ್ನ ರಾಜ್ಯ ವಿಸ್ತರಣೆಗಾಗಿ ಹೋರಾಡಿದ ವೀರ ರಾಣಿಯರು ಇತಿಹಾಸದಲ್ಲಿ ಆಗಿ ಹೋಗಿದ್ದಾರೆ. ಆದರೆ ಸಾಮಾನ್ಯ ಚಲವಾದಿ ಹೆಣ್ಣೊಬ್ಬಳು ತನ್ನ ದೊರೆಗಾಗಿ ಇಂತಹ ತ್ಯಾಗ ಮಾಡಿದಳು ಎಂದರೆ ದೊರೆಯಾದವನು ತನ್ನ ಪ್ರಜೆಗಳನ್ನು ಅದರಲ್ಲೂ ಕೆಳವರ್ಗದ ಪ್ರಜೆಗಳನ್ನು ಅದೆಷ್ಟು ಸಮಾನ ಗೌರವ ಪ್ರೀತಾದರಗಳಿಂದ ಕಾಣುತ್ತಿದ್ದಿರಬಹುದು. ದೊರೆ ಬಗ್ಗೆ ಗೌರವ ಮೂಡಬೇಕಾದರೆ, ದೊರೆಗಾಗಿ ತಮ್ಮ ಪ್ರಾಣತ್ಯಾಗಕ್ಕೂ ಜನಸಾಮಾನ್ಯರೂ ಸಿದ್ದರಾಗುತ್ತಿದ್ದರು ಎಂದರೆ ಆ ಕಾಲದಲ್ಲಿ ನಾಯಕ ಕೆಳವರ್ಗದ ಜನರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಅವರುಗಳಿಗೆ ಒದಗಿಸಿದ್ದ ಸವಲತ್ತುಗಳು, ತೋರಿದ ಅಭಿಮಾನ, ನೀಡುತ್ತಿದ್ದ ಪ್ರೋತ್ಸಾಹದ ಪ್ರಭಾವವೂ ಇಂಬು ಕೊಟ್ಟಿರುತ್ತದೆ. ಅದೇ ದುರ್ಗವನಾಳಿದ ನಾಯಕರ ವೈಶಿಷ್ಟ್ಯ. ಧನಿಕ ದರಿದ್ರರೆಂಬ ಭೇದಭಾವ ಅವರಲ್ಲಿರಲಿಲ್ಲ. ಅಂತಹ ಸಹೃದಯಿಗಳು ಅವರಾಗಿದ್ದರೂ ಹೈದರನ ಆಮಿಷಗಳಿಗೆ ಬಲಿಯಾಗುವಂತ ದುರ್ಬಲರು ಆಸೆಬುರುಕರೂ ಇದ್ದರೆಂಬುದೇ ಅಚ್ಚರಿ ಹುಟ್ಟಿಸುವ ಸಂಗತಿ. ‘ಪ್ರೇಮ ಮತ್ತು ಯುದ್ದದಲ್ಲಿ ಎಲ್ಲವೂ ಸರಿ’ ಎಂಬ ನಾಣ್ಣುಡಿ ಸುಳ್ಳಾಗಲಾದರೂ ಹೇಗೆ ಸಾಧ್ಯ.

ಹೈದರನ ಹಣ ಅಧಿಕಾರ ಲಾಲಸೆಗೆ ಬಲಿಬಿದ್ದು ಮದ್ದುಗುಂಡುಗಳು ಹಾರದಂತೆ ಎಣ್ಣೆ ಸುರಿದರು ಪಿಸುಣರು. ಕತ್ತಿ, ಗುರಾಣಿ, ಬಾಣ, ಭರ್ಜಿ ಈಟಿಗಳನ್ನು ಮುಕ್ಕಾಗಿಸಿದರು. ಯುದ್ಧ ಮಾಡದೇ ಕಾಲಹರಣ ಮಾಡಿದವರೂ ಇದ್ದರು. ನೆರವಿಗೆ ಬರುತ್ತೇನೆಂದ ಪೇಶ್ವ ಮಾಧವರಾಯ ಸಮಯದಲ್ಲಿ ಬಾರದೆ ಕೈಕೊಟ್ಟ ಸುತ್ತಲಿನ ಪಾಳೇಗಾರರೂ ಹೈದರನ ಪರವಾಗಿಯೇ ನಿಂತರು. ಇಂತಹ ಅನೇಕ ವಂಚನೆ ಒಳಸಂಚುಗಳಿಂದಾಗಿ ಜರ್ಝರಿತನಾದರು ಧೃತಿಗೆಡದೆ ಗಂಡುಮೆಟ್ಟಿನ ನಾಡನ್ನು ಉಳಿಸಿಕೊಳ್ಳಲು ಏಕಾಂಗಿಯಾಗಿ ಕಾದಾಡಿದ ಮದಕರಿ-ರಣಕಲಿ.

೧೭೭೯ರಲ್ಲಿ ನಡೆದ ಕದನದಲ್ಲಿ ಹೈದರನು ಮದಕರಿಯನ್ನು ಮೋಸದಿಂದಲೇ ಸೆರೆಹಿಡಿದನೆಂದು ಇತಿಹಾಸ ಹೇಳುತ್ತದೆ. ರಾಜಿಯಾಗುವ ನೆಪದಲ್ಲಿ ಔತಣಕೂಟಕ್ಕೆ ಕರೆದ ಹೈದರ್ ಅನ್ನದಲ್ಲಿ ವಿಷವನ್ನಿಕ್ಕಿ ಕೊಂದನೆಂತಲೂ, ಯುದ್ಧದಲ್ಲಿ ಹತಾಶೆಗೊಂಡ ನಾಯಕ ತನ್ನ ಏಕನಾಥಿ ಖಡ್ಗವನ್ನು ಮೇಲಕ್ಕೆ ತೂರಿ ಎದೆಯೊಡ್ಡಿ ಮಡಿದನೆಂತಲೂ ಶಂಕಿಸಲಾಗಿದೆ. ಹೈದರನು ಮದಕರಿ ಮತ್ತವನ ೨೦ ಸಾವಿರ ಖಾಸ ಬೇಡರ ಪಡೆಯೊಂದಿಗೆ ಟಿಪ್ಪು ಡ್ರಾಪ್ ನಿಂದ ದೂಡಿಸಿದನೆಂತಲೂ ಹೇಳುವ ಇತಿಹಾಸ, ಹೈದರನ ಸೆರೆಮನೆಯಲ್ಲಿ ಕೊರಗಿ ಕೃಶನಾಗಿ ಸತ್ತನೆಂತಲೂ ಅಭಿಪ್ರಾಯವಿದೆ. ಅದೇನೇ ಇರಲಿ ೧೭೫೪ ರಿಂದ ೧೭೭೯ರ ವರೆಗೆ ದುರ್ಗವನಾಳಿದ ಸುಮಾರು ೩೫ ವರ್ಷದವನಿರುವಾಗಲೇ ಮಡಿದ ಮದಕರಿಯ ಶೌರ್ಯ, ಪರಾಕ್ರಮಗಳ ಬಗ್ಗೆ ಜಿಲ್ಲೆಯ ಜನಕ್ಕೆ ಎಂದಿಗೂ ತುಂಬು ಗೌರವ. ಓಬವ್ವೆಯ ಬಗ್ಗೆಯೂ ಅಷ್ಟೇ ಅಭಿಮಾನ, ಈ ಮಾತುಗಳಿಗೆ ಪುರಾವೆ ಎಂಬಂತೆ ಚಿತ್ರದುರ್ಗದಲ್ಲಿ ಇವರೀರ್ವರ ಭವ್ಯ ಕಂಚಿನ ಪ್ರತಿಮೆಗಳನ್ನು ಕಾಣಬಹುದು.

ಈಟೀಟು ಹುಡುಗಾರು ; ಚೀಟಿ ಚೆಲ್ಲಣದೋರು
ಕೋಟಿ ಕೊಟ್ಟೆನೆಂದಾರು; ಕೋಟೆ ಬಿಡೆನಂದರು.
ದುರ್ಗದ ಜಿಲ್ಲೆಯ ಜನರಿಗೆ ತಮ್ಮ ಇತಿಹಾಸ, ಪಾಳೇಗಾರರ ಪೌರುಷದ ಬಗ್ಗೆ ಅದೆಷ್ಟು ಹೆಮ್ಮೆ ಎಂಬುದಕ್ಕೆ ಈ ಪುಟ್ಟ ಜಾನಪದ ಗೀತೆಯ ಸಾಲುಗಳೇ ಸಾಕಲ್ಲವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಡಿಸಲು-ಮಹಲು
Next post ವ್ಯತ್ಯಾಸ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys