ಚಂದ್ರವಳ್ಳಿಯ ಭೂಶೋಧನೆ

ಚಂದ್ರವಳ್ಳಿಯ ಭೂಶೋಧನೆ

Kannada Research Lectures Series No. 6
೧೯೪೩ ಯಲ್ಲಿ ಮಾಡಿದ ಬಾಷಣ.

ಚಂದ್ರವಳ್ಳಿ:- ಕರ್ಣಾಟಕದಲ್ಲಿ ಭೂಶೋಧನೆಯು ಶಾಸ್ತ್ರೀಯವಾಗಿ ನಡೆದಿರುವುದು ಚಿತ್ರದುರ್ಗದ ಸಮೀಪದಲ್ಲಿರುವ ಚಂದ್ರವಳ್ಳಿ ಕಣಿವೆಯಲ್ಲಿ. ಈ ಶೋಧನೆಯಿಂದ ನಮಗೆ ಕರ್ಣಾಟಕದ ಆದಿಚರಿತ್ರೆಯ ಕಾಲದ ಒ೦ದು ಉಪ ರಾಜಧಾನಿಯಲ್ಲಿ ಕಾಣಬರುತ್ತಿದ್ದ ಸ್ಥಿತಿಗಳೂ, ಆಗಿನ ಕೌಶಲ್ಯಕ್ಕೂ ಅದಕ್ಕೆ ಹಿಂದಿನ ಪೂರ್ವ ಚರಿತ್ರೆಯ ಕಾಲದ ಕೌಶಲ್ಯಕ್ಕೂ ಇದ್ದ ಸಂಬಂಧವೂ ತಿಳಿಯ ಬರುತ್ತವೆ. ಚಂದ್ರವಳ್ಳಿಯಲ್ಲಿ ದೊರೆತ ಪದಾರ್ಥಗಳು, ತಿಳಿದು ಬಂದ ಹೊಸ ವಿಷಯಗಳು ದಕ್ಷಿಣ ಭಾರತದ ಇತರ ಭೂಶೋಧನೆಗಳಲ್ಲಿ ದೊರೆತಿರುವ ಅಥವಾ ದೊರೆಯಬಹುದಾದ ಪದಾರ್ಥಗಳಿಗೂ ಮತ್ತು ವಿಷಯಗಳಿಗೂ ಸೂಚನೆಗಾಗಿ ಪರಿಣಮಿಸಿವೆ. ಯಾವ ಶಾಸ್ತ್ರದಲ್ಲಿ ತಿಳಿದುದನ್ನು ಮೊದಲು ಅರಿತು ತರುವಾಯ ತಿಳಿಯದುದನ್ನು ಕಂಡುಹಿಡಿಯುವದಕ್ಕೆ ಪ್ರಯತ್ನಿಸಬೇಕು. ಆದುದರಿಂದ ಕರ್ಣಾಟಕದ ಪೂರ್ವ ಚರಿತ್ರೆಗೆ ಚಂದ್ರವಳ್ಳಿಯು ಬಾಗಿಲಿನಂತೆ ಇದೆ.

ನಿವೇಶನ:- ಈಗಿನ ಚಿತ್ರದುರ್ಗವೆಂಬ ಊರಿಗೆ ಪಶ್ಚಿಮದಲ್ಲಿ ಚಿತ್ರ ವಿಚಿತ್ರವಾದ ಕೋಡುಗಲ್ಲುಗಳಿಂದಲೂ ಬಂಡೆಗಳಿಂದಲೂ ಕೂಡಿದ ಮತ್ತು ಕೋಟೆಯಿಂದ ಸುರಕ್ಷಿತವಾದ ಬೆಟ್ಟವೂ, ಅದರ ಪಶ್ಚಿಮಕ್ಕೆ ಚಂದ್ರವಳ್ಳಿಯೆಂಬ ಕಣಿವೆಯೂ ಇವೆ ಈಗ್ಗೆ ೫೦ ವರ್ಷಗಳ ಕೆಳಗೆ ಈ ಕಣಿವೆಯಲ್ಲಿ ಓಡಾಡುತ್ತಿದ್ದ ಮೆರ್ಟಿನ್ ಸ್ಮಿತ್ ಎಂಬ ಭೂಗರ್ಭ ಶಾಸ್ತ್ರಜ್ಞರ ಕೈಗೆ ಅಲ್ಲಿನ ಹಳ್ಳಿಗಳಲ್ಲಿ ಕೆಲವು ಸೀಸದ ನಾಣ್ಯಗಳು ದೊರೆತುವು. ಇವುಗಳನ್ನು ಪರೀಕ್ಷಿಸಿ ಲಂಡನ್ನಿನ ಬ್ರಿಟಿಷ್ ಮ್ಯೂಝಿಯಮ್ಮಿಗೆ ಸೇರಿದ ಡಾ|| ರ್‍ಯಾಪ್ಸನ್ ಎಂಬ ವಿದ್ವಾಂಸರು ಅವುಗಳು ಶಾತವಾಹನ ಚಕ್ರಾಧಿಪತಿಗಳ ನಾಣ್ಯಗಳೆಂದು ಗೊತ್ತು ಮಾಡಿದರು. ಈ ವಿಷಯವನ್ನು ಅರಿತು ಬ್ರಿಟಿಷ್ ಇಂಡಿಯಾ ಸರಕಾರದ ಪುರಾತತ್ವ ಶಾಖೆಯ ಅಧಿಪತಿಗಳಾಗಿದ್ದ ಸರ್ ಜಾನ್ ಮಾರ್ಷಲ್ಲರು ಅಲ್ಲಿ ಭೂಶೋಧನೆಯನ್ನು ನಡೆಸಬೇಕೆಂದು ಮೈಸೂರು ಸರಕಾರಕ್ಕೆ ಸೂಚಿಸಿದರು. ಮೈಸೂರಿನ ಶಾಸನ ಶಾಖೆಯ ಅಧ್ಯಕ್ಷರಾಗಿದ್ದ ಶ್ರೀ. ರಾ. ನರಸಿಂಹಾಚಾರ್ಯರು ಈ ಕಣಿವೆಯನ್ನು ನೋಡಿಬಂದು ಶಾಸ್ತ್ರೀಯವಾದ ಶೋಧನೆಗೆ ಅದು ಯುಕ್ತಸ್ಥಳವೆಂದು ಸರಕಾರಕ್ಕೆ ಬಿನ್ನವಿಸಿದರು. ಮೈಸೂರು ಸರಕಾರದ ಮತ್ತು ವಿಶ್ವವಿದ್ಯಾನಿಲಯದ ಅಪ್ಪಣೆಯ ಪ್ರಕಾರ ನಾನು ಈ ಸ್ಥಳವನ್ನು ೧೯೨೯ ರಲ್ಲಿ ನೋಡಿ ಬಂದು ಮಧ್ಯೆ ಮಧ್ಯೆ ಬಿಟ್ಟು ನಾಲ್ಕು ವರ್ಷಗಳಲ್ಲಿ ಸುಮಾರು ಮೂರು ನಾಲ್ಕು ತಿಂಗಳು ಕಾಲ ಶೋಧನೆ ಮಾಡಿದೆನು. ಮಾಡಿದ ಕೆಲಸವು ಅಲ್ಪವಾದರೂ ಶಾಸ್ತ್ರೀಯವಾಗಿ ನಡೆದಿರುವುದರಿಂದ ಕೆಲವು ಮುಖ್ಯವಾದ ವಿಷಯಗಳನ್ನು ಅನುಮಾನವಿಲ್ಲದೆ ಹೇಳಬಹುದು.

ನಾನು ಮೊದಲು ಈ ಕಣಿವೆಯ ನೆಲವನ್ನು ಎಲ್ಲಾ ಭಾಗಗಳಲ್ಲೂ ನೋಡಿ ಒ೦ದು ನಕ್ಷೆಯನ್ನು ಮಾಡಿಸಿದೆನು. ಈ ನೆಲ ಪರೀಕ್ಸಷೆಯಿಂದಲೇ ಅದರೊಳಗೆ ಅನೇಕ ಪದರುಗಳಿವೆಯೆಂದೂ, ಅವುಗಳಲ್ಲಿ ಕೆಲವು ಎರಡು ಸಾವಿರ ವರುಷಗಳ ಕೆಳಗೆ ದೀರ್ಘಕಾಲ ಬಾಳಿದ ಒಂದು ಪಟ್ಟಣಕ್ಕೆ ಸೇರಿದುವೆಂದೂ ಗೊತ್ತಾಯಿತು.

ಭೂಶೋಧನೆ: ನೆಲದ ಮೇಲಿನ ಕುರುಹುಗಳಿಂದ ಚಂದ್ರವಳ್ಳಿ ಪಟ್ಟಣವು ಚಿತ್ರದುರ್ಗದ ಬೆಟ್ಟ, ಕಿರುಬನ ಕಲ್ಲು ಮತ್ತು ಚೋಳ ಗುಡ್ಡಗಳ ನಡುವೆ ಸುಮಾರು ಒಂದು ಮೈಲಿ ಚದರವುಳ್ಳ ತ್ರಿಕೋಣಾಕಾರವಾದ ಕಣಿವೆಯಲ್ಲಿ ವಿಸ್ತರಿಸಿತ್ತೆಂದು ಗೊತ್ತು ಮಾಡಿದೆನು. ಈ ಸನ್ನಿವೇಶದಲ್ಲಿ ಅಲ್ಲಲ್ಲೇ ನಕ್ಷೆಯಲ್ಲಿ ಗೊತ್ತು ಮಾಡಿದ ಪ್ರಕಾರ ಹಳ್ಳಗಳನ್ನು ಕಡಿಸಲು ನೆಲದೊಳಗೆ ಸ್ವಲ್ಪ ಹೆಚ್ಚು ಕಡಿಮೆ ನಾವು ಮೊದಲೇ ಊಹಿಸಿದ್ದಂತೆ ಏಳೆಂಟು ಬೇರೆ ಬೇರೆ ಕಾಲದ ಪದರುಗಳು ಕಂಡು ಬಂದವು. ಕಡೆಗೆ ಊರಿನ ಮಧ್ಯಭಾಗವು ಇರುವ ಸ್ಥಳವನ್ನು ಗೊತ್ತು ಮಾಡಿ ಅಲ್ಲಿ ವಿಸ್ತಾರವಾದ ಸನ್ನಿವೇಶವೊಂದನ್ನು ಗುರುತು ಮಾಡಿ ಅಲ್ಲಿಯ ಮಣ್ಣನ್ನು ಮೂರು ಮೂರು ಅ೦ಗುಲ ಆಳವಾಗಿಯೂ ಪದರುಗಳಿಗೆ ಅನುಸಾರವಾಗಿ ನಕ್ಷೆಗಳಲ್ಲಿ ಗುರುತು ಮಾಡಿಕೊಳ್ಳುತ್ತ ಪದಾರ್ಥಗಳು ದೊರೆತಂತೆಯೆ ಅವುಗಳ ಫೋಟೋಗಳನ್ನು ತೆಗೆಯುತ್ತ ಶೇಖರಿಸಲಾರಂಭಿಸಿದೆನು. ಪ್ರಾಚೀನ ಪದಾರ್ಥಗಳಂತೂ ಹೇರಳವಾಗಿ ಅಂದರೆ ಸುಮಾರು ಏಳೆಂಟು ಸಾವಿರಕ್ಕೆ ಮೇಲೆ ದೊರೆಯುತ್ತ ಬಂದವು. ಕೆಲಸಕ್ಕೆ ಸಾಕಷ್ಟು ಜನಸಹಾಯವೂ, ಧನಸಹಾಯವೂ ಇಲ್ಲದೆ ಅನೇಕ ತೊಂದರೆಗಳು ಒದಗಿದವು. ಅವುಗಳನ್ನು ಇಲ್ಲಿ ವರ್ಣಿಸಲು ಸಮಯವಿಲ್ಲ. ಆದರೆ ಹೇಗೋ ಆ ಪದಾರ್ಥಗಳನ್ನು ಮೈಸೂರಿಗೆ ಸಾಗಿಸಿ ಅವುಗಳನ್ನು ಸ್ವಲ್ಪ ಮಟ್ಟಿಗೆ ಪರೀಕ್ಷಿಸಿ ಅವುಗಳಿಂದ ತಿಳಿಯಬಂದ ಅಂಶಗಳನ್ನು ಸಂಗ್ರಹಿಸುವುದಕ್ಕೆ ಪ್ರಯತ್ನ ಮಾಡಿರುವೆನು. ಇವುಗಳಲ್ಲಿ ಸು ಕ್ರಿ.ಶ. ೪ನೆಯ ಶತಮಾನದಿಂದ ಹಿಂದಕ್ಕೆ ಆದಿಚರಿತ್ರೆ (Proto-history) ಮತ್ತು ಪೂರ್ವ ಚರಿತ್ರೆ (Pre-history) ಇವುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ಇಲ್ಲಿ ತಿಳಿಸುವೆನು.

ಮಯೂರಶರ್ಮನ ಶಾಸನ:- ಮೇಲಿನಿಂದ ಒಳಕ್ಕೆ ಇಳಿಯುತ್ತ ೩, ೪, ೫ ಮತ್ತು ೬ ನೆಯ ಪದರುಗಳು ಚಂದ್ರವಳ್ಳಿ ಪಟ್ಟಣಕ್ಕೆ ಸೇರಿದುವೆಂದು ಗೊತ್ತು ಮಾಡಿದೆನು. ಇದರ ಕಟ್ಟ ಕಡೆಯ ಹೆಗ್ಗುರುತಿಗೆ ಬ್ಯಾಹ್ಮೀ ಭಾಷೆಯಲ್ಲಿ ಬರೆದ ಮಯೂರಶರ್ಮನ ಶಾಸನವು ದೊರೆಯಿತು. ಚಂದ್ರವಳ್ಳಿ ನಿವೇಶನದಲ್ಲಿ `ಹುಲಿಗೊಂದಿ’ ಎಂಬ ಇಕ್ಕಟ್ಟಾದ ಕಣಿವೆಯ ಎಡಪಕ್ಕದ ಇಳಿಜಾರಿನಲ್ಲಿ ಹುಲಿಗೊಂದಿ ಸಿದ್ದೇಶ್ವರನ ಗುಡಿ ಎಂಬ ಭೈರವನ ದೇವಾಲಯವೊಂದಿದೆ. ಆ ಗುಡಿಯ ಬಾಗಿಲಿನ ಬಲಭಾಗದಲ್ಲಿ ಗೋಡೆಯಂತೆ ನಿಂತಿರುವ ಕಗ್ಗಲ್ಲಿನ ಬಂಡೆ
Plate III

ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ:-ಮಯೂರಶರ್ಮನ ಲೇಖವುಳ್ಳ ಬಂಡೆಗಲ್ಲು. ಪುಟ ೨೬

ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ:- ಚಂದ್ರವಳ್ಳಿಯಲ್ಲಿ ಕಲ್ಲುಬಂಡೆಯ ಮೇಲೆ ಕೊರೆಯಲ್ಪಟ್ಟ ಮಯೂರಶರ್ಮನ ಶಾಸನ (ನಕ್ಷೆ)- ಪುಟ೨೬

ಯೊಂದಿದೆ. ಅದರ ಮುಖದ ಮೇಲೆ ಸಾಮಾನ್ಯ ದೃಷ್ಟಿಗೆ ಗೋಚರವಾಗದಂತೆ ಮಳೆಗಾಳಿಗಳ ಹೊಡೆತದಿಂದ ಅಳಿಸಿ ಹೋದ ಶಾಸನವೊಂದು ಕಾಣಿಸಿತು. ಬ್ರಾಹ್ಮೀ ಲಿಪಿಯ ಕಟ್ಟಕಡೆಯ ರೂಪಾಂತರವಾದ ಗವಿಯ ಲಿಪಿಯಲ್ಲಿ (Cave Alphabet ಬರೆದ ಶಾಸನದ ಮೂರು ಪಂಗಿತಗಳು ಈ ಬಂಡೆಯಲ್ಲಿ ಕಾಣಿಸಿದವು. ಈ ಅಕ್ಷರಗಳು ಬಳ್ಳಾರಿ ಜಿಲ್ಲೆಯ ಮ್ಯಾಕದೋಣಿಯಲ್ಲಿ ಸಿಕ್ಕು ಎಪಿಗ್ರಾಫಿಯಾ ಇಂಡಿಕ ಸಂಪುಟ (೧೪, ಪು. ೧೫೩) ದಲ್ಲಿ ಅಚ್ಚಾಗಿರುವ ಶಾತವಾಹನರ ಇಮ್ಮಡಿ ಪುಳಿಮಾವಿಯ ಕಾಲದ ಅಕ್ಷರಗಳನ್ನು ನೆನಪಿಗೆ ತಂದುವು. ಈ ಶಾಸನವನ್ನು ಬರೆಯಿಸಿದವನು ಕದಂಬರ ಮಯೂರಶರ್ಮನೆಂದೂ, ಆ ಕಣಿವೆಯಲ್ಲಿ ಒಂದು ಕಟ್ಟೆಯನ್ನು ಕಟ್ಟಿಸಿದನೆಂದೂ ಇದರಿಂದ ತಿಳಿಯಬಂದಿತು. ಅಕ್ಷರಗಳ ರೂಪದಿಂದ ಶಾಸನವು ಸುಮಾರು ಕ್ರಿ.ಶ.೩ ನೆಯ ಶತಮಾನಕ್ಕೆ ಸೇರಿರಬಹುದೆಂದು ಗೊತ್ತು ಮಾಡಿದೆನು. ಮಯೂರನು ತಾನು ಯುದ್ಧ ಮಾಡಿ ಸೋಲಿಸಿದ್ದೇನೆಂದು ಹೇಳಿಕೊಳ್ಳುವ ಆಭೀರ, ಪುನ್ನಾಟ, ಪಲ್ಲವ, ಪಾರಿಯಾತ್ರಿಕ, ಮೌಖರಿ, ತ್ರೈಕೂಟ ಮೊದಲಾದ ಹೆಸರುಗಳು ಕಾಣಬಂದುವು. ನಾಲ್ಕನೆಯ ಶತಮಾನದಲ್ಲಿ ಪ್ರಸಿದ್ದಿಗೆ ಬಂದ ವಾಕಾಟಕ, ಗಂಗ, ಗುಪ್ತ ಮೊದಲಾದವರ ಹೆಸರೇನೂ ಕಾಣಬರಲಿಲ್ಲ. ಕದಂಬ ರಾಜ್ಯದ ನೈರುತ್ಯಕ್ಕೆ ಪುನ್ನಾಟ. ಅದರ ಉತ್ತರಕ್ಕೆ ಸುಮಾರು ಈಗಿನ ಉತ್ತರ ಕನ್ನಡ ಜಿಲ್ಲೆಗಳ ಬಳಿ ಸೇಂದ್ರಕ, ನಾಸಿಕದ ಬಳಿ ಆಭೀರ. ಮುಂಬಯಿಯ ಉತ್ತರಕ್ಕೆ ತ್ರೈಕೂಟ, ಸೂರತ್ತಿನ ಬಳಿ ಶಕ, ಓಢ್ರ ದೇಶದ ಕಡೆ ಮೌಖರಿ ಈ ರೀತಿ ರಾಜ್ಯಗಳಿದ್ದವೆಂದು ಯಾರಾದರೂ ಊಹಿಸಬಹುದು. ಈ ರಾಜ್ಯಗಳ ನಡುವೆ ಕದಂಬರ ರಾಜ್ಯವು ವಿಸ್ತರಿಸಿತ್ತೆಂದು ನಾವು ಊಹಿಸಬಹುದಾಗಿದೆ.

ನಾಣ್ಯಗಳು:- ಚಂದ್ರವಳ್ಳಿಯು ಪುರಾತನ ನಾಣ್ಯಗಳಿಗೆ ಪ್ರಸಿದ್ಧವಾದ ನಿವೇಶನ. ಇಲ್ಲಿಯ ಶೋಧನೆಯಲ್ಲಿ ನೂರಾರು ನಾಣ್ಯಗಳು ಇತರ ಪದಾರ್ಥಗಳೊಡನೆ ತಾವು ಬಿದ್ದ ಸ್ಥಳಗಳಲ್ಲಿಯೇ ಆರಿಸಲ್ಪಟ್ಟಿವೆ. ಈ ನಾಣ್ಯಗಳ ದೇಶ, ಕಾಲ, ಕರ್ತೃತ್ವಗಳನ್ನು ಗೊತ್ತು ಮಾಡಿ, ಅವುಗಳ ಕೂಡ ದೊರೆತ ಪದಾರ್ಥಗಳ ಕಾಲವನ್ನು ನಿರ್ಣಯಿಸಬಹುದು. ಆದ್ದರಿಂದ ಈ ನಾಣ್ಯಗಳನ್ನು ಚೆನ್ನಾಗಿ ಪರೀಕ್ಷಿಸಿದೆನು. ಇವುಗಳನ್ನು ಸಂಕ್ಷೇಪವಾಗಿ ಈ ರೀತಿ ವಿವರಿಸಬಹುದು.

೧. ಚೌಕೋಣಾಕಾರದ ಬೆಳ್ಳಿಯ ಪುರಾಣಗಳು. ಇವುಗಳ ಮೇಲೆ ಛಾಪಿಸಿದ ಗುರುತುಗಳು ಅಳಿಸಿ ಮಂಕಾಗಿವೆ. ಇವುಗಳು ಮೌರ್ಯ ವಂಶೀಯರ ನಾಣ್ಯಗಳೆಂದು ಮಿ ಆಲೆನ್ನ ರೂ, ಕ್ರಿ. ಪೂ. ೬೦೦ ರರಿಂದ ೧೦೦ರವರೆಗಿನ ಕಾಲದ ನಾಣ್ಯಗಳೆಂದು ಮಿ. ವಿನ್ಸೆಂಟ್ ಸ್ಮಿತ್ತರೂ, ವೇದಗಳ ಕಾಲದಿಂದಲೂ ಬಂದಿರುವ ಪ್ರಾಚೀನ ಭಾರತ ನಾಣ್ಯಗಳೆಂದು ದೇವದತ್ತ ಭಂಡಾರ್ಕರರೂ ಹೇಳಿದ್ದಾರೆ.

೨. ವೃಷಭ, ವೃಕ್ಷ, ಗಿರಿ, ಸ್ವಸ್ತಿಕ, ನಂದಿಪಾದ ಮೊದಲಾದ ಚಿಹ್ನೆಗಳಲ್ಲಿ ಒಂದೆರಡನ್ನು ಮಾತ್ರ ಉಳ್ಳ ಸಣ್ಣ ಸಣ್ಣ ಸೀಸದ ನಾಣ್ಯಗಳು.

೩. ವಿವಿಧವಾದ ಮಣ್ಣಿನ ಮತ್ತು ಕಲ್ಲಿನ ಮುದ್ರೆಗಳು. ಇವುಗಳಲ್ಲಿ ಬ್ರಾಹ್ಮಿಯಲ್ಲಿ ಹೀಗೆಂದು ಬರೆದಿದೆ. “ಸಡಕಣ, ವಲಯಸ, ಸೆಬಸ”, “ಅಮರಸ ಮಗರಿಲಸ”

೪. ಹೊರಗೆ ದುಂಡಾಗಿ ಮಧ್ಯೆ ಚೌಕಾದ ರಂಧ್ರವುಳ್ಳ ಪ್ರಾಚೀನ ಚೀಣಾದೇಶದ ಹಿತ್ತಾಳೆಯ ನಾಣ್ಯಗಳು. ಇವುಗಳನ್ನು ಕ್ರಿ. ಪೂ. ೧೩೦ ರಲ್ಲಿ ಚೀನದೇಶಕ್ಕೆ ಚಕ್ರವರ್ತಿಯಾಗಿದ್ದ ಹ್ಯಾನ್ ವಂಶದ ವೂಟಿ ಎಂಬ ಪ್ರಸಿದ್ದ ದೊರೆಯು ಛಾಪಿಸಿದನೆಂದು ಗೊತ್ತು ಮಾಡಲ್ಪಟ್ಟಿದೆ.

೫. ರೋಮ್ ಚಕ್ರಾಧಿಪತ್ಯವನ್ನು ಕ್ರಿ. ಪೂ. ೧ ನೆಯ ಶತಮಾನದಿಂದ ಕ್ರಿ.ಶ.೩ನೆಯ ಶತಮಾನದ ವರೆಗೆ ಆಳಿದ ಅಗಸ್ಟಸ್, ಟೈಬೀರಿಯಸ್ ಎ೦ಬವರ ಬೆಳ್ಳಿಯ ನಾಣ್ಯಗಳು.

೬. ದೊಡ್ಡ ಮತ್ತು ದಪ್ಪವಾದ ಸೀಸದ ನಾಣ್ಯಗಳು, ಇವುಗಳ ಮೇಲಿನ ಚಿತ್ರಗಳನ್ನು ಇಲ್ಲಿ ವರ್ಣಿಸುವುದಿಲ್ಲ. ಬರೆದಿರುವ ಹೆಸರುಗಳನ್ನು ಮಾತ್ರ ಹೇಳುತ್ತೇನೆ. `ಮಹಾರಠಿ ತಡಕಾಯಿರ’, ‘ಮಹಾರಠಿ ಸಹಾರೀತಿ ಪುತ್ರವಿಳವಾಯಕುರಸ’, `ಮಹಾರಠಿಸ ಸರಜಕಣಕಳಲಾಯಸ’ `ಸಡಕಣ ಸಳಲಾಯ ಮಹಾರಠಿಸ’, `ಮಹಾರಠಿ ಪುತಸ……..ರಾಜ್ಞೋ ಚ್ಯುಟುಕುಲಾನಂದಸ’, ‘ರಾಜ್ಞೋಮುಳಾ ನಂದಸ,’ ‘ರಾಜ್ಞೋ ಗೌತಮಿ ಪುತಸ ವಿಳಿವಾಯಕರಸ’, `ಸಿರಿ ಪುಳುಮಾವಿಸ’, `ಸಿರಿಸಾತಸ’, `ಸಿರಿಸಾತಕಣಿಸ’, `ಯಜ್ಞಶ್ರೀ’ `ರಾಜ್ಞೋ ಸಿರಿಚಂದ್ರಸ’ ಇತ್ಯಾದಿ. ಈ ನಾಣ್ಯಗಳ ವಿಮರ್ಶೆಯಿಂದ ಚಂದ್ರವಳ್ಳಿಯ ಸುತ್ತಮುತ್ತಣ ಪ್ರದೇಶದ ರಾಜಕೀಯ ಚರಿತ್ರೆಯನ್ನು ನಿರ್ಧರಿಸಬಹುದು. ಇದನ್ನು ಮುಂದೆ ಹೇಳುತ್ತೇನೆ.

ಮಣಿಗಳು:- ಪ್ರಾಚೀನ ನಿವೇಶನಗಳಲ್ಲಿ ಶಾಸನಗಳು, ನಾಣ್ಯಗಳು ಮಾತ್ರವಲ್ಲದೆ ಹಳೆಯ ಮಣಿಗಳು, ಬೋಕಿಯ ಚೂರುಗಳು, ಬೇರೆ ಬೇರೆ ಲೋಹಗಳ ಕಿಟ್ಟಗಳೂ, ಆಯುಧಗಳ ಚೂರುಗಳೂ, ಎಲುಬುಗಳೂ, ಕಲ್ಲು ಇಟ್ಟಿಗೆಗಳ ಕಟ್ಟಡಗಳೂ ದೊರೆಯುತ್ತವೆ. ಇವುಗಳ ವಿಮರ್ಶೆಯಿಂದ ಆಗಿನ ಕಾಲದ ಸ್ಥಿತಿಗತಿಗಳಿಗೆ ಸಂಬಂಧಪಟ್ಟ ಎಷ್ಟೋ ಅಂಶಗಳು ತಿಳಿಯಬರುತ್ತವೆ. ಪೂರ್ವ ಚರಿತ್ರಕಾರರು ಮಣಿಗಳ ಸಂಶೋಧನ ಕಾರ್ಯದಲ್ಲಿ ಪ್ರವೀಣರಾಗಿರಬೇಕು. ಚಂದ್ರವಳ್ಳಿಯಲ್ಲಿ ದೊರೆತಿರುವ ಮಣಿಗಳ ಪೈಕಿ ಈ ಕೆಳ ಕಂಡವು ಕೆಲವು : ವಿಧವಿಧವಾದ ಗಾಜಿನ ಮಣಿಗಳು, ದೊಡ್ಡವು, ಚಿಕ್ಕವು, ಹಸರು, ಹಳದಿ, ನೀಲಿ, ಪಟಪಟ್ಟೆ ಮೊದಲಾದ ಬಣ್ಣದವು. ಮುತ್ತಿನ ಮಣಿಗಳು, ಎರಡು ಮೂರು ವಿಧದ ಹವಳಗಳು, ಹವಳಗಳನ್ನೂ ರತ್ನಗಳನ್ನೂ ಹೋಲುವ ಬಣ್ಣದ ಸುಟ್ಟ ಮಣ್ಣಿನವು, ಕರೋವಾ ಮಣಿಗಳು, ನೀಲಮಣಿ, ಪಚ್ಚೆ, ಗೋಮೇಧಿಕ, ಕೆಂಪು, ಎಲುಬು, ವಿವಿಧವಾದ ಕಲ್ಲುಗಳು. ಇವುಗಳ ರೂಪಗಳೂ ಬಗೆಬಗೆಯಾಗಿವೆ:- ಗುಂಡು, ಕೊಳವೆ. ಪೀಪಾಯಿ, ಅಂಜೂರ, ಪಟ್ಟಿ, ಎ೦ಟು ಮೂಲೆ, ನಕ್ಷತ್ರ, ನೆಲ್ಲೀಬೀಜ ಮೊದಲಾದವು. ಇವುಗಳ ಪರೀಕ್ಷೆಯು ಇನ್ನೂ ನಡೆಯುತ್ತಿದೆಯಾಗಿ ಈ ಮಾತನ್ನು ಇಲ್ಲಿಗೆ ಬಿಡುತ್ತೇನೆ.

ಒಡವೆಗಳು

ಅನೇಕ ವಿಧವಾದ ಒಡವೆಗಳು ದೊರೆತಿವೆ. ಇವುಗಳಲ್ಲಿ ಕೆಲವನ್ನು ಇಲ್ಲಿ ಹೇಳಬಹುದು. ಬಂಗಾರದ ಮೂಗುತಿ, ತಂತಿಯಿಂದ ಸುತ್ತಿದ ತೆಳ್ಳಗೆ ನಾಜೋಕಾದ ಲೋಲಾಕು, ಕೆಂಪು, ವಜ್ರ ಕೆತ್ತಿದ ಬಂಗಾರದ ಉಂಗುರಗಳು, ತಾಮ್ರದ, ಪಂಚಲೋಹದ, ಕಬ್ಬಿಣದ ಉ೦ಗುರಗಳು; ಜೇಡಿಯ ಮಣ್ಣಿನಲ್ಲಿ ಮಾಡಿ ರೇಖು ಹಚ್ಚಿದ ಚ೦ದ್ರ ಮುರುವುಗಳು, ಬಾವಲಿಗಳು- ಕರಿಯ ಬಣ್ಣದ, ಎರಡು ಮೂರು ಬಣ್ಣದ ಬಳುಕಿನ, ಚಿತ್ರ ವಿಚಿತ್ರದ, ಕರಿಯ, ಬಿಳಿಯ, ಹಸಿರ, ವಿವಿಧವಾದ ಗಾಜಿನ ಬಳೆಗಳು, ಶಂಖದ ಬಳೆಗಳು, ಲೋಹದ ಬಳೆಗಳು, ಹಗ್ಗದ ಬಳೆಗಳು ಪಗಡೆಯ ದಾಳಗಳು, ಜಿಂಕೆಯ ಕೊಂಬಿನ ಮತ್ತು ದಂತದ ವಿವಿಧ ಸಾಮಾಗಳು, ತಾಮ್ರದ ಸರಪಣಿಗಳು, ಅಲಂಕಾರದ ಮೊಹರುಗಳು ಇತ್ಯಾದಿ.

ಶಿಲ್ಪ:- ದೊಡ್ಡದಾದ ಶಿಲ್ಪ ಸಾಮಗ್ರಿಯು ಯಾವುದೂ ದೊರೆಯದಿದ್ದರೂ ಸಣ್ಣ ಸಣ್ಣ ಶಿಲ್ಪಿತ ಪದಾರ್ಥಗಳು ಅನೇಕವಾಗಿ ದೊರೆತಿವೆ. ಇವುಗಳಲ್ಲಿ ಕಲ್ಲಿನವು, ಸುಟ್ಟ ಮಣ್ಣಿನವು, ದಂತದವು, ಹಿತ್ತಾಳೆಯವು, ತಾಮ್ರದವು ಮೊದಲಾಗಿವೆ. ಇವುಗಳಲ್ಲಿ ಗಣೇಶ, ಭೈರವ, ದುರ್ಗಿ ಮೊದಲಾದ ದೇವರುಗಳ ಪ್ರತಿಮೆಗಳೂ ಬುದ್ಧ, ಯಕ್ಷ ಗಂಧರ್ವರು, ಮನುಷ್ಯರು, ಗಂಡ ಹೆಂಡಿರು, ನರ್ತಕಿಯರು, ಆನೆ, ಕುದುರೆ, ಆಕಳು, ಕುರಿ, ಕೋಳಿ ಮೊದಲಾದ ಆಕಾರಗಳೂ ದೊರೆತಿವೆ. ಶಿಲ್ಪದ ರೀತಿಯು ಬೌದ್ದರ ಕಾಲದಲ್ಲಿ ಖಾರಹುತ್ ಅಮರಾವತಿ ಮೊದಲಾದ ಕಡೆಗಳಲ್ಲಿ ಕಾಣಬರುವಂತೆಯೇ ಸೌಂದರ್ಯದಿಂದಲೂ ಲಾಲಿತ್ಯದಿಂದಲೂ ಕೂಡಿ ಸ್ಫೂರ್ತಿಯುಕ್ತವಾಗಿ ಉತ್ತಮ ತರಗತಿಯ ಕಲಾಕೌಶಲ್ಯವನ್ನು ತೋರ್ಪಡಿಸುತ್ತದೆ.

ಆಯುಧಗಳು:- ಚಂದ್ರವಳ್ಳಿಯ ಕಾಲಕ್ಕೆ ಕಬ್ಬಿಣದ ಉಪಯೋಗವು ಸಂಪೂರ್ಣವಾಗಿ ನಡೆಯುತ್ತಿತ್ತು. ಒಂದೆರಡು ಸಮಯಗಳಲ್ಲಿ ಉಕ್ಕಿನ ಪದಾರ್ಥಗಳೂ ದೊರೆತಿವೆ. ಆಯುಧಗಳು ಈಗಿನ ಕಾಲದಲ್ಲಿರುವಂತೆಯೇ ಕಲ್ಲು, ಹಿತ್ತಾಳೆ, ತಾಮ್ರ ಮೊದಲಾದ ಸಾಮಗ್ರಿಗಳಿಂದ ಮಾಡಲ್ಪಡುತ್ತಿದ್ದವು. ಇವುಗಳಲ್ಲಿ ಕೆಲವನ್ನು ಇಲ್ಲಿ ಹೇಳಬಹುದು. ಈಟಿಯ ಕಬ್ಬಿಣದ ಅಲಗುಗಳು, ದೊಡ್ಡ ಕತ್ತಿ, ಸಣ್ಣ ಕತ್ತಿ, ಎರಡಲಗಿನ ಕತ್ತಿ, ಬಾಕು, ಭರ್ಜಿ, ತಾಳಪತ್ರದ ಮೇಲೆ ಬರೆಯುವ ಕಂಠ, ಕಬ್ಬಿಣದ ಬಾಣಲೆ, ಕೊಳವೆ, ಚಿಲಕ, ಕೊಂಡಿ, ವಿವಿಧವಾದ ಮೊಳೆಗಳು, ತಾಮ್ರದ ಚೊಂಬುಗಳು, ಈಳಿಗೆಯ ಮಣೆಯ ಅ೦ಗ, ತುರಿಯುವ ಅಲಗು ಮೊದಲಾದವು.

ಮೃತ್ಪಾತ್ರೆಗಳು: ಚ೦ದ್ರವಳ್ಳಿಯಲ್ಲಿ ದೊರೆತಿರವ ಮೃತ್ಪಾತ್ರೆಗಳು ವಿವಿಧವಾಗಿಯೂ, ಅನೇಕ ಬಂಡಿಗಳಲ್ಲಿ ತುಂಬಬಹುದಾದಷ್ಟೂ ಇವೆ. ಒಡಕು ಬೋಕೆಗಳ ಪರೀಕ್ಷೆಯಿಂದ ಒಡೆಯದಿದ್ದಾಗ ಪಾತ್ರೆಗಳು ಹೇಗಿದವೆಂದು ಊಹಿಸಿ ಅವುಗಳ ಮಣ್ಣು, ಆಕಾರ, ಬಣ್ಣ, ಹೊಳಪು, ಸುಡೋಣ, ಅಲಂಕಾರ ಮೊದಲಾದುವನ್ನು ವಿಮರ್ಶೆ ಮಾಡಿ ಮಿಕ್ಕೆಡೆಗಳಲ್ಲಿ ಸಿಗುವ ಪದಾರ್ಥಗಳೊಡನೆ ಹೋಲಿಸಿ ಚಾರಿತ್ರಿಕ ವಿಷಯಗಳನ್ನು ಸಂಪಾದಿಸುವುದು ಪುರಾತತ್ವ ಶಾಸ್ತ್ರಜ್ಞನ ವಿಚಿತ್ರವಾದೊಂದು ವಿದ್ಯೆ. ಹಾಸ್ಯಗಾರರು ಇದನ್ನು `ಒಡಕು ಮಡಕೆಯ’ ಶಾಸ್ತ್ರವೆನ್ನುವರು. ಆದರೆ ಈಜಿಪ್ಟ, ಸುಮೇರಿಯಾ ಮೊದಲಾದೆಡೆಗಳಲ್ಲಿ ಈ ಬೋ ಕೀ ಶಾಸ್ತ್ರದ ಮೂಲಕ (Ceramics) ಅಥವಾ `ಭಗ್ನ ಮೃತ್ಪಾತ್ರಶಾಸ್ತ್ರ’ ದ ಮೂಲಕ ಸರ್ ಫ್ಲಿಂಡರ್ಸ ಪೀಟ್ರಿ, ಬ್ರೆಸ್ಟೆಡ್, ರೈಸ್ನರ್, ಪ್ರಾಂಕ್ ಫರ್ಟ, ಇವಾನ್ಸ, ಮಾರ್ಷಲ್ ಮೊದಲಾದ ಮಹನೀಯರು ಕಂಡುಹಿಡಿದಿರುವ ಇತಿಹಾಸ ವಿಷಯಗಳನ್ನು ನೋಡಿದರೆ ನಾವು ಆಶ್ಚರ್ಯಚಕಿತರಾಗುವೆವು. ಚಂದ್ರವಳ್ಳಿಯಲ್ಲೂ ಈ ಪ್ರಯತ್ನವನ್ನು ಮಾಡಲು ನಾನು ತೊಡಗಿದೆನು. ನಮ್ಮ ಗುರುಗಳಾದ ಪೀಟ್ರಿಯವರ ದೃಷ್ಟಿಯಿಂದ ನೋಡಲು ಶಾತವಾಹನ ಕಾಲದ ಮೃತ್ಪಾತ್ರೆಗಳ ಲಕ್ಷಣಗಳು ಹೀಗೆಂದು ಕಂಡುಬಂದುವು. ಇವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸುತ್ತೇನೆ.

೧. ಅಗಲವಾದ ಬಾಯುಳ್ಳ ಕೋಣಾಕಾರದ ಸಣ್ಣ ಬುಡದ ಕೆಂಪಿನ ನೀರಿನ ಬಟ್ಟಲಗಳು. ಇವು ಆ ಕಾಲದಲ್ಲಿ ಭಾರತದ ವಾಯವ್ಯದಲ್ಲಿರುವ ತಕ್ಷಶಿಲೆ ಮೊದಲಾದೆಡೆಗಳಲ್ಲಿಯೂ ವಿಶೇಷವಾಗಿ ದೊರೆಯುತ್ತವೆ. ಇವು ಬಹಳ ಹೆಚ್ಚಾಗಿ ಸಿಗುವುದರಿಂದ ಕೆಲವು ಸಮಯ ದ್ರವ
ಪದಾರ್ಥಗಳನ್ನು ಕುಡಿದವರು ಇದನ್ನು ಬೀಸಾಡಿರಬಹುದು.
೨. ಗಿಂಡಿಯ ಪಾತ್ರೆಗಳು
೩. ಮುಚ್ಚಳವಿರುವ ಪಾತ್ರೆಗಳು
೪. ಅಗಲವಾದ ಮಡಕೆಯ ಮುಚ್ಚಳಗಳು.

Plate VI

ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೩೬) – ಪುಟ ೩೦

Plate VII

ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೧೬ ):ನಾನಾ ಆಕಾರದ ಮಣ್ಣಿನ ಪಾತ್ರೆಗಳು, ಕಲ್ಲಿನ ಪೆಟ್ಟಿಗೆ – ಪ್ರಟ ೩೦
Plate VIII

ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೩೫) – ಪುಟ ೩೧

೫. ಅನೇಕ ವಿಧ ಅಲಂಕಾರಗಳುಳ್ಳ ತಟ್ಟೆಗಳು, ಮತ್ತು ಅರಕನ ಚಟ್ಇಟಗಳು.
೬. ದೊಡ್ಡ ಮಡಕೆಗಳು ಮತ್ತು ಬಾನೆಗಳು. ಇವುಗಳು ಅಲುಗದಂತೆ ಅನೇಕ ವೇಳೆ ಕೊಟಡಿಗಳ ಮೂಲೆಗಳಲ್ಲಿ ಕೆಳಭಾಗವನ್ನು ಹೂಳಿ ಇಡುತ್ತಿದ್ದರು.
೭. ಶಾತವಾಹನರ ಕಾಲದ ಅನೇಕ ಮಡಕೆಗಳ ಮೇಲೆ ಒಂದು ವಿಧವಾದ ಕೆ೦ಪು ಬಣ್ಣವನ್ನು ಬಳೆದು ಹೊಳೆಹೊಳೆಯುವಂತೆ ಮಾಡಿದ್ದಾರೆ. ಆ ಕಾಲದ ಮೃತ್ಪಾತ್ರೆಗಳಿಗೆ ಈ ಹೊಳೆಯುವ ಕೆಂಪು ಬಣ್ಣವು ಹೆಗ್ಗುರುತೆಂದು ಹೇಳಬಹುದು.

ಕಟ್ಟಡಗಳು:- ಚ೦ದ್ರವಳ್ಳಿಯ ಕಟ್ಟಡಗಳು ಊರಿನ ಮಧ್ಯಭಾಗದಲ್ಲಿ ಇಟ್ಟಿಗೆ ಮಣ್ಣುಗಳಿಂದ ಕಟ್ಟಿದವು. ರಾಜಬೀದಿಯು ಉತ್ತರದಿಂದ ದಕ್ಷಿಣಕ್ಕೆ ಹರಿದು ಹುಲಿಗೊಂದಿಯ ಕೆರೆಯ ಕಟ್ಟೆಯ ಬಳಿ ಕೊನೆಯಾಗುತ್ತಿತ್ತು. ಇದು ಸುಮಾರು ಒಂದು ಮೈಲಿಗೆ ಹೆಚ್ಚಾಗಿ ಉದ್ದವಿದ್ದಂತೆ ತೋರುತ್ತದೆ. ಇದರ ಇಕ್ಕೆಡೆಗಳಲ್ಲಿ ವೈದ್ಯ, ಅಕ್ಕಸಾಲೆ, ಕುಂಬಾರ ಮೊದಲಾದ ವಿವಿಧ ಕಲಾವಂತ ಮನೆಗಳೂ, ಅಂಗಡಿಗಳೂ ಇದ್ದವು. ಇವರು ಈ ಅಂಗಡಿಗಳ ಹಿಂಭಾಗಗಳಲ್ಲಿ ಸಂಸಾರ ಸಮೇತ ವಾಸಮಾಡುತ್ತಿದ್ದರು. ಕಟ್ಟಡಗಳ ಹಿಂದುಗಡೆ ಹಿತ್ತಲೂ, ಹಿತ್ತಲಿನಲ್ಲಿ ಅನೇಕ ಬೆಳೆ ದೊಡ್ಡ ಅಥವಾ ಸಣ್ಣ ಭಾವಿಯ ಒಂದು ಮೂಲೆ ಯಲ್ಲಿ ಗುಳಿಯ ಮೇಲೆ ಕಲ್ಲು ಹಾಸಿದ ಪಯಖಾನೆಯೂ ಇದ್ದುವು. ಕಟ್ಟಡಗಳನ್ನು ಕಟ್ಟುವುದಕ್ಕೆ ಬಹಳ ಒಳ್ಳೆಯ ಮಣ್ಣಿನಲ್ಲಿ ಮಾಡಿ ಉಬ್ಬೆಯಲ್ಲಿ ಚನ್ನಾಗಿ ಸುಟ್ಟ ದೊಡ್ಡ (೧೬” x೮” x೩”) ಅಳತೆಯುಳ್ಳ ಇಟ್ಟಿಗೆಗಳನ್ನು ಉಪಯೋಗಿಸುತ್ತಿದ್ದರು. ಇವಗಳನ್ನು ಒಹಳ ಜಾಣತನದಿಂದ ಕಟ್ಟುತ್ತಿದ್ದರು. ನೆಲಕ್ಕೂ ಇಟ್ಟಿಗೆ ಗಳನ್ನು ಹಾಸುತ್ತಿದ್ದರು. ಅರ್ಧ ಅಥವಾ ಒಂದು ಗಜ ಇಟ್ಟಿಗೆ ಗೋಡೆಗಳನ್ನು ಕಟ್ಟಿ, ಅವುಗಳ ಮೇಲೆ ಬಿಸಿಲಿಟ್ಟಗೆಯ ಅಥವಾ ಬರಿಯ ಮಣ್ಣಿನ ಪುಟದ ಗೋಡೆಗಳನ್ನು ಎತ್ತಿ ಇಟ್ಟಿಗೆಯ ಸುಣಪಾದಗಳ ಮೇಲೆ ಮರದ ಕಂಭಗಳನ್ನಿಟ್ಟು, ತೊಲೆಗಳನ್ನು ಹಾಕಿ, ಹಲಗೆ ಸೇರ್ವೆಯನ್ನು ಮಾಡಿ ಬಾಗು ತಲೆಯ ಕಬ್ಬಿಣದ ಮೊಳೆಗಳಿಂದ ಅವುಗಳನ್ನು ಭದ್ರಪಡಿಸುತ್ತಿದ್ದರು. ಅಲ್ಲಲ್ಲಿ ಮಹಡಿಯ ಮನೆಗಳೂ ಇದ್ದುವು. ಒಂದು ಮನೆಯಲ್ಲಿ ರಾಜ್ಯಾಡಳಿತ ಮಾಡುವ ದೊರೆಯೊ ಅಧಿಕಾರಿಯೊ ಇದ್ದನೆಂದು ಅದರೊಳಗೆ ಸಿಗುವ ರಾಜಮುದ್ರಿಕೆಗಳಿಂದ ತಿಳಿಯಬರುತ್ತದೆ. ಈ ಕಟ್ಟಡಗಳ ಇಟ್ಟಿಗೆಯ ಭಾಗಗಳು ಮೂರು ಪದರುಗಳಾಗಿ ಸಿಕ್ಕಿರುವುದರಿಂದ ಮೂರಾವರ್ತಿ ಈ ಕಟ್ಟಡಗಳನ್ನು ಕೆಡವಿ ಕಟ್ಟಿರಬಹುದೆಂದು ಊಹಿಸಬಹುದು. ಸಾಮಾನ್ಯವಾಗಿ ಇಟ್ಟಿಗೆಯ ಕಟ್ಟಡಗಳು ಎಂಭತ್ತು ಅಥವಾ ನೂರು ವರ್ಷಗಳ ಕಾಲ ಬಾಳುತ್ತವೆ. ಆದ್ದರಿಂದ ಚಂದ್ರವಳ್ಳಿಯ ಇಟ್ಟಿಗೆಯ ಕಟ್ಟಡಗಳು ಮೂರು ನೂರು ವರ್ಷಗಳ ಕಾಲ ಅಂದರೆ ಸುಮಾರು ಕ್ರಿ. ಪೂ. ೧೦೦ ರಿಂದ ಕ್ರಿ. ಶ. ೨೦೦ ರ ವರೆಗೆ ಬಾಳಿದುವೆಂದು ಊಹಿಸಬಹುದು. ಇದೇ ಚಂದ್ರವಳ್ಳಿಯ ಅತ್ಯಂತ ಉನ್ನತಿಯ ಕಾಲ.

ರಾಜಕೀಯ ಚರಿತ್ರೆ:- ಚಂದ್ರವಳ್ಳಿಯು ಯಾವ ಕಾಲದಲ್ಲಿದ್ದ ಪಟ್ಟಣವೆಂದು ತಿಳಿಯಲು ನಾವು ಕುತೂಹಲ ಪಡಬಹುದು. ಸ್ಥಳವಂದಿಗರು ಚಂದ್ರಶೇಖರ ನೆಂಬ ರಾಯನೋ ಪುರಾಣ ಪ್ರಸಿದ್ಧನಾದ ಚಂದ್ರಹಾಸನೋ ಅಲ್ಲಿ ಆಳಿದರೆಂದೂ ಆ ಊರಿನಲ್ಲಿ ಒಂದು ಬ್ರಹ್ಮಹತ್ಯನಾಗಲು ಬ್ರಹ್ಮರಾಕ್ಷಸನು ಪಕ್ಕದ ಗುಡ್ಡದಲ್ಲಿ ಸೇರಿ ಭೂಮಿಯನ್ನು ಗುಡಗಿಸಿ ಕೋಟಿ ಸಿಡಿಲು ಬಡಿದಂತೆ ಶಬ್ದವಾಗುತ್ತಿರಲು ಊರನ್ನು ಉರಳಿಸಿ, ಬೆಂಕಿ ಹೊತ್ತಿಸಿ ಚಂದ್ರವಳ್ಳಿಯನ್ನು ನಾಶಮಾಡಿದನೆಂದು ಹೇಳುತ್ತಾರೆ. ಚಾರಿತ್ರಕ ದೃಷ್ಟಿಯಿಂದ ನೋಡಿದರೆ ಮೌರ್ಯರ ಕಾಲದಲ್ಲಿ ಚಂದ್ರವಳ್ಳಿಯು ಒಂದು ಸಣ್ಣ ಊರಾಗಿತ್ತೆಂದೂ, ಸುಮಾರು ಕ್ರಿ. ಪೂ ೨೦೦ ರಲ್ಲಿ ಶಾತವಾಹನ ಚಕ್ರವರ್ತಿಗಳ ಕಾಲವು ಬಂದಾಗ ಮಹಾರಠಿಗಳೆಂಬ ಉಪ ರಾಜರು ಇಲ್ಲಿ ಆಳಲು ಮೊದಲು ಮಾಡಿದರೆಂದು ತೋರಿಬರುತ್ತದೆ. ಇವರಲ್ಲಿ ಮಹಾರಠಿ ತ್ರಡಕಾಯಿರನು ಸು. ಕ್ರಿ. ಪೂ. ೧೮೦ ರಲ್ಲಿದ್ದಿರಬಹುದು. ಏಕೆಂದರೆ ಪುಣೆಯ ಬಳಿ ಇರುವ ನಾನಾಘಾಟಿನ ಗುಹೆಗಳಲ್ಲಿ ಶ್ರೀ ಶಾತಕರ್ಣಿಯ ಕಾಲದ ಶಾಸನದಲ್ಲಿ ಇವನ ಹೆಸರು ಕಾಣಬಂದಿರುವುದೆಂದು ಡಾ| ರಾಪ್ಸನರು ಊಹಿಸಿದಾರೆ. ಈ ಮಹಾರಠಿಗಳು ಶಾತವಾಹನ ಚಕ್ರವರ್ತಿಗಳಿಗೆ ಅಧೀನರಾಗಿದ್ದರೂ ಬಹುಮಟ್ಟಿಗೆ ಅನೇಕ ತಲೆಮರೆಗಳ ವರೆಗೆ ಸ್ವಾತಂತ್ರವನ್ನು ಅನುಭವಿಸಿ, ಸ್ವಂತ ನಾಣ್ಯಗಳನ್ನು ಛಾಪಿಸಿ ದೇಶವನ್ನು ವೃದ್ಧಿಗೆ ತಂದರು. ಇದರಲ್ಲಿ ಅತ್ಯಂತ ಶಕ್ತನೂ, ಪ್ರಸಿದ್ದನೂ ಆದವನು ಸಡಕಣಕಳಲಾಯ ಎಂಬುವವನು. `ಸಡಕಣ’ ಎಂಬ ಪದದಿಂದ ಇವನು ಶಾತಕರ್ಣಿಗಳ ಸಂಬಂಧಿಯಾಗಿದ್ದಿರಬೇಕೆಂದು ಊಹಿಸಬಹುದು. ಸಮ್ರಾಟರ ವಂಶಕ್ಕೆ ದೌಹಿತ್ರನಾಗಿದ್ದಿರಬಹುದು. ಇವನು ಕ್ರಿಸ್ತನು ಹುಟ್ಟಿದ ಕಾಲದಲ್ಲಿ ರೋಮ್ ಚಕ್ರಾಧಿಪತ್ಯವನ್ನು ಆಳುತ್ತಿದ್ದ ಅಗಸ್ಟಸ್ ಸೀಸರನ ಸಮಕಾಲೀನನು. ಇವರಿಬ್ಬರ ನಾಣ್ಯಗಳೂ ಒಂದೇ ಪದರದಲ್ಲಿ ಅಕ್ಕ ಪಕ್ಕದಲ್ಲಿ ದೊರೆಯುತ್ತವೆ. ಈ ಮಹಾರಥಿಗಳ ಕಾಲವಾದ ಮೇಲೆ ಪ್ರಸಿದ್ಧ ಚಕ್ರವರ್ತಿಯಾದ ಗೌತಮಿ ಪುತ್ರ ವಿಳಿವಾಯಕುರನೂ, ಅವನ ಅಕಾಲ ಮರಣದ ತರುವಾಯ ಅವನ ಮಗ ಪುಲುಮಾಯಿಯೂ ಈ ಪ್ರದೇಶವನ್ನು ಆಳಿದರು. ಆಗ್ಗೆ ರಾಜ್ಯದ ಬಿಗಿಯು ಸಡಲಿ ಅದೇ ವಂಶಕ್ಕೆ ಸೇರಿದ ಬೇರೆ ಭಾಗದ ಉಪರಾಜರು ಆಳ ತೊಡಗಿದರು. ಇವರಲ್ಲಿ ಚುಟುವಂಶದ ತಾಯಿಯ ಮಗನಾದ ಚುಟುಕುಲಾನಂದ ಶಾತಕರ್ಣಿಯೂ, ಮುಲವಂಶದ ತಾಯಿಯ ಮಗನಾದ ಮುಲಾನಂದನೂ ಕೆಲಕೆಲವು ಕಾಲ ಆಳಿದರು. ಕಡೆಗೆ ಕ್ರಿ. ಶ ೨ನೆಯ ಶತಮಾನದ ಉತ್ತರಾರ್ಧದಲ್ಲಿ ಅದೇ ಶಾತಕರ್ಣಿ ವಂಶಕ್ಕೆ ಸೇರಿದ ಯಜ್ಞಶ್ರೀಯು ವಿಜೃಂಭಣೆಯಿಂದ ಚಕ್ರಾಧಿಪತ್ಯವನ್ನು ಆಳಿದನು. ಅವನ ನಂತರ ಅಪ್ರಸಿದ್ದರು ಅಥವಾ ಅನಾಮಧೇಯರು ಆದ ಹಲಕೆಲವು ದೊರೆಗಳು ಆಳಿದ ಮೇಲೆ ಕ್ರಿ. ಶ. ಮೂರನೆಯ ಶತಮಾನದ ಪೂರ್ವಾರ್ಧದಲ್ಲಿ ಶಾತವಾಹನ ವಂಶವು ಕೊನೆಗಂಡು ಕೆಲವು ಕಾಲಾನಂತರ ರಾಜ್ಯವು ಕದಂಬ ವಂಶದ ಮೂಲ ಪುರುಷನಾದ ಮಯೂರಶರ್ಮನ ಕೈಸೇರಿತು. ಸುಮಾರು ಈ ಕಾಲದಲ್ಲಿ ಯಾವುದೋ ಒ೦ದು ಭೂಕಂಪವಾಗಿ ಚಂದ್ರವಳ್ಳಿಯ ನಾಶವಾಯಿತು.

ಸಾಮಾಜಿಕ ಸ್ಥಿತಿ:- ಭೂಶೋಧನೆಯಿಂದ ರಾಜಕೀಯ ಚರಿತ್ರೆಗಿಂತಲೂ ಸಾಮಾಜಿಕ, ಆರ್ಥಿಕ ಮೊದಲಾದ ವಿಷಯಗಳಲ್ಲಿ ಹೆಚ್ಚು ಸಂಗತಿಗಳು ತಿಳಿಯ ಬರುವವು. ಈ ವಿಚಾರದಲ್ಲಿ ಒಂದೆರಡು ವಿಷಯಗಳನ್ನು ಮಾತ್ರ ಹೇಳುತ್ತೇನೆ. ಗಣೇಶ, ಭೈರವ ಮೊದಲಾದ ಪೌರಾಣಿಕ ದೇವರುಗಳ ಪೂಜೆಯೂ, ಬುದ್ಧನ ಪೂಜೆಯೂ ನಡೆಯುತ್ತಿದ್ದುವು. ಗೋಮಾಂಸ ಭಕ್ಷಿಸುವ ನಿಮ್ನ ಜಾತಿಯ ಜನರು ಊರಹೊರಭಾಗದಲ್ಲಿ ವಾಸಿಸುತ್ತಿದ್ದರು. ಊರಿಗೆ ಕಾರಂಜಿಯ ಮೂಲಕ ನೀರಿನ ಸರಬರಾಯಿಯಾಗುತ್ತಿದ್ದಿತು. ಚಂದ್ರವಳ್ಳಿಯ ಜನರು ಕುಶಲ ವಿದ್ಯೆಗಳಲ್ಲಿ ಪರಿಶ್ರಮಿಗಳಾಗಿ ಕಬ್ಬಿಣವನ್ನು ಹೇರಳವಾಗಿ ತಯಾರು ಮಾಡುತ್ತ ಕಬ್ಬಿಣದ ಪದಾರ್ಥಗಳನ್ನೂ, ವಿವಿಧ ಮಣಿಗಳನ್ನೂ, ಗಾಜಿನ ಬಳೆಗಳನ್ನೂ, ನೆಯ್ದ ರೇಷ್ಮೆಯೇ ಮೊದಲಾದ ಬಟ್ಟೆಗಳನ್ನೂ ತಯಾರ ಮಾಡಿ ಚೀನಾ, ರೋಮ್, ಬರ್ಮಾ, ಗಾಂಧಾರ ಮೊದಲಾದ ದೂರ ದೇಶಗಳ ಸಂಗಡ ವ್ಯಾಪಾರ ಮಾಡುತ್ತಿದ್ದರು. ಇವರು ತಯಾರಿಸಿ ಕಳುಹಿಸುತ್ತಿದ್ದ ಸಾಮಾನುಗಳ ಬೆಲೆಯಾಗಿ ಆ ದೂರ ದೇಶದ ವರ್ತಕರು ಬೆಳ್ಳಿ ಬಂಗಾರಗಳನ್ನು ನಾಣ್ಯರೂಪದಲ್ಲಿ ಕೊಡುತ್ತಿದ್ದರು. ಚಂದ್ರವಳ್ಳಿಯು ಬಹಳ ಉತ್ತಮವಾದ ಆರ್ಥಿಕ ಸ್ಥಿತಿಯಲ್ಲಿತ್ತು.

ಮೌರ್ಯರ ಕಾಲ:- ಚಂದ್ರವಳ್ಳಿಯನ್ನು ವರ್ಣಿಸುವ ನೆಪದಲ್ಲಿ ಶಾತ ವಾಹನರ ಕಾಲದ ಕರ್ಣಾಟಕದಲ್ಲಿ ವೃದ್ಧಿಯಲ್ಲಿದ್ದ ಒಂದು ಪಟ್ಟಣದ ವಿದ್ಯಮಾನಗಳು ಹೇಗಿತ್ತೆಂದು ಮೇಲೆ ನಿರೂಪಿಸಿರುವೆನು. ಪುರಾಣಗಳಲ್ಲಿ ಹೇಳಿರುವಂತೆ ಶಾತವಾಹನ ರಾಜರ ಪಟ್ಟಿಯು ನಮಗೆ ತಿಳಿದಿದ್ದಿತು. ಅವರ ಶಾಸನಗಳ ವಿಮರ್ಶೆಯಿಂದ ದೇವದತ್ತ ಭಂಡಾರಕರರು ಆಗಿನ ಧಾರ್ಮಿಕ ಸ್ಥಿತಿಯು ಹೇಗಿತೆಂಬುದನ್ನು ಊಹಿಸಿ ಬರೆದರು. ಆದರೆ ಭೂಶೋಧನೆಯಿಂದ ಚಂದ್ರವಳ್ಳಿಯ ಜೀವನವು ನಮ್ಮ ಕಣ್ಣು ಮುಂದೆ ಬಂದು ನಿಂತಂತಾಗಿದೆ. ಈ ಊರು ಮೌರ್ಯರ ಕಾಲದಲ್ಲಿ ಸಣ್ಣದಾಗಿರಬೇಕೆಂದು ಊಹಿಸುವುದಕ್ಕೆ ಶಾತವಾಹನ ಪದರಗಳ ಬುಡದಲ್ಲಿ ದೊರೆತ ಬೋಕಿಯ ಚೂರುಗಳೇ ಕಾರಣ. ಮೌರ್ಯರ ಬೋಕೆಗಳು ಒಳಭಾಗದಲ್ಲಿ ಕಪ್ಪಾಗಿ ಮಿನು ಮಿನುಗುತ್ತಿರುವ ಮೈ ಯುಳ್ಳವು. ಶಾತವಾಹನರಿಗೆ ಹಿಂದಿನ ಪದರದಲ್ಲಿ ಇವು ದೊರೆತವು. ಇನ್ನೂ ಕೆಳಗಿನ ಪದರದಲ್ಲಿ ಬಿಳಿಯ ಮತ್ತು ಕೆಂಪಿನ ನಕಾಶೆಗಳಿಂದ ಅಲಂಕೃತವಾಗಿರುವ ಕೆಂಪು ಮತ್ತು ಎಣ್ಣೆಗೆಂಪು ಬಣ್ಣದ ಬಟ್ಟಲುಗಳು ದೊರೆತವು. ಇವು ಮೌರ್ಯರ ಕಾಲಕ್ಕೂ ಹಿಂದಿನ ವಾಗಿರಬೇಕೆಂದು ನಾನು ಊಹಿಸಿದೆನು. ಈ ಪದರದ ಕೆಳಗೂ ಸಹ ಸಣ್ಣ ಬೋಕಿಯ ಚೂರುಗಳು ಕಂಡುಬಂದುದರಿಂದ ಮತ್ತಷ್ಟು ಕೆಳಕ್ಕೆ ಕಡಿಸಿ ನೋಡುವಲ್ಲಿ ಕಡೆಗೆ ಒಂದು ಪದರದಲ್ಲಿ ನವಶಿಲಾಯುಗದ ಕಾಲದಲ್ಲಿ ಉಪಯೋಗಿಸುತ್ತಿದ್ದ ಉಜ್ಜಿ ನುಣುಪಾದ ಕಲ್ಲಿನ ಗುಂಡುಗಳೂ ಕೊಡಲಿಗಳೂ ದೊರೆತವು. ಇದರಿಂದ ನವಶಿಲಾಯುಗವಾದ ಬಹುಕಾಲವಾದ ಮೇಲೆ ಅಯೋಯುಗದ ಕಡೆಕಡೆಯಲ್ಲಿ ಚಂದ್ರವಳ್ಳಿ ಗ್ರಾಮ ಸ್ಥಾಪಿತವಾಯಿತೆಂದೂ, ಮತ್ತು ಆದಿಚರಿತ್ರೆಗೆ ಸೇರಿದ ಮೌರ್ಯ, ಶಾತವಾಹನರ ಕಾಲದಲ್ಲಿ ಬದುಕಿ ನಡೆಯಿತೆಂದೂ ತಿಳಿಯ ಬಂದಿತು.

ಬ್ರಹ್ಮಗಿರಿಯೂ, ಪೂರ್ವಚರಿತ್ರೆಯೂ

ಇದಕ್ಕೆ ಪೂರ್ವಚರಿತ್ರೆಯನ್ನು ನಾವು ಅರಿಯಬೇಕಾದರೆ ಬ್ರಹ್ಮಗಿರಿಯನ್ನು ಶೋಧಿಸಬೇಕೆಂಬುದು ನನಗೆ ವ್ಯಕ್ತವಾಯಿತು. ಏಕೆಂದರೆ ಬ್ರಹ್ಮಗಿರಿಯು ವೃದ್ಧಿ ಗೊಂಡು ಮುದಿಬೀಳುವ ಕಾಲಕ್ಕೆ ಚಂದ್ರವಳ್ಳಿಯು ತಲೆಯೆತ್ತಿತು. ಬ್ರಹ್ಮಗಿರಿಯಲ್ಲಿ ಕೆಲಸವು ಇನ್ನೂ ವಿಶೇಷವಾಗಿ ಮಾಡತಕ್ಕದ್ದಿದೆ. ನಮ್ಮ ಮನಸ್ಸಿನ ಊಹೆಯಲ್ಲಿ ಕಿಬ್ಬನ ಹಳ್ಳಿಯ ಮೇಲೆ ಚಂದ್ರವಳ್ಳಿಯನ್ನಿಟ್ಟು ಅವುಗಳಲ್ಲಿ ಕಾಣಬರುವ ಹತ್ತಾರು ಪದರುಗಳನ್ನು ಪರೀಕ್ಷಿಸಿ ನೋಡಿದರೆ ಕರ್ಣಾಟಕದ ಪೂರ್ವ ಚರಿತ್ರೆಯು ನಮಗೆ ಗೋಚರವಾಗುವುದು. ಈ ಮೂರು ಉಪನ್ಯಾಸಗಳಲ್ಲೂ ನಾನು ಹೇಳಿರುವ ತಾತ್ಪರ್ಯ ಕರ್ಣಾಟಕದ ಪೂರ್ವ ಚರಿತ್ರೆಯನ್ನು ನಾನು ಕಂಡು ಹಿಡಿದೆನೆಂದಲ್ಲ, ಕಂಡುಹಿಡಿಯಬೇಕಾದರೆ ನಾವು ಅನುಸರಿಸಬೇಕಾದ ದಾರಿಯು ಹೀಗೆಂದು ತೋರಿಸಿರುವೆನು. ವೇದಾದಿಗಳಲ್ಲಿ ಕನ್ನಡ ದೇಶದ ಚರಿತ್ರೆಗಳನ್ನು ಹೇಳಿಲ್ಲ, ರಾಮಾಯಣ ಮಹಾಭಾರತಗಳಲ್ಲಿ ನಮ್ಮ ವಿಷಯವನ್ನು ಸ್ವಲ್ಪವೇ ಹೇಳಿರುವುದು. ಹೆಚ್ಚು ವಿಷಯಗಳನ್ನು ನಾವು ಎಲ್ಲಿಂದ ಹಿಡಿದುತರಬೇಕು? ಭೂದೇವಿಯ ಉದರದಲ್ಲಿ ನಮ್ಮ ಮುತ್ತಂದಿರ ಎಲುಬುಗಳೂ, ಅವರು ಕಟ್ಟಿದ ಕಟ್ಟಡಗಳ ಮುರುಕುಗಳೂ, ಅವರು ಬಿಸುಟ ಪದಾರ್ಥಗಳ ಚೂರುಗಳೂ ಭದ್ರವಾಗಿ ಭೂಸ್ಥಾಪಿತವಾಗಿವೆ. ಬೆಳ್ಳಿ ಬಂಗಾರಗಳನ್ನೂ, ವಜ್ರ ವೈಡೂರ್ಯಗಳನ್ನೂ ಗಣಿಗಳಲ್ಲಿ ಅಗೆದು ತೆಗೆಯುವಂತೆ ಈ ಪದಾರ್ಥಗಳನ್ನು ಅಗೆದು, ವಿಮರ್ಶಿಸಿ ಚರಿತ್ರೆಯ ಸೋಪಾನವನ್ನು ನಾವು ಕಟ್ಟಬೇಕು. ಅಜ್ಞಾನವೆಂಬ ಮಹೋದಧಿಯನ್ನು ದಾಟುವುದಕ್ಕೆ ಕಟ್ಟಬೇಕಾದ ವಜ್ರ ಸೇತುವೆಗೆ ಬೇಕಾದ ಸಾಮಗ್ರಿಗಳಿಗೆ ಭೂಶೋನೆಯು ಖನಿಯ ರೂಪವಾಗಿರುವುದು. ಇತಿಹಾಸದ ಅಜ್ಞಾನಕ್ಕೆ ಗುದ್ದಲಿಯೇ ಬೆಳಕು.
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಚಿಯನರಸುವೊಡೆ ಶುಚಿಯಳಿವ ಭಯವಿರಬೇಡವೇ?
Next post ರಸಿಕ:-ವೇದಾಂತಿಗೆ

ಸಣ್ಣ ಕತೆ

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…