ಕರ್ಣಾಟಕದ ಕುಶಲತೆಯ ಪೂರ್ವಚರಿತ್ರೆ

ಕರ್ಣಾಟಕದ ಕುಶಲತೆಯ ಪೂರ್ವಚರಿತ್ರೆ

Kannada Research Lectures Series No. 6
೧೯೪೩ ಯಲ್ಲಿ ಮಾಡಿದ ಬಾಷಣ.

ಪೂರ್ವ ಚರಿತ್ರೆ:- ಚರಿತ್ರಕಾರರು ಚರಿತ್ರೆ, ಆದಿ ಚರಿತ್ರೆ (Proto-history) ಮತ್ತು ಪೂರ್ವ ಚರಿತ್ರೆ (Pre-history) ಗಳೆಂಬ ಪದಗಳನ್ನು ಉಪಯೋಗಿಸುತ್ತಾರೆ. ಕರ್ಣಾಟಕಕ್ಕೆ ಸಂಬಂಧಪಟ್ಟಂತೆ ಈ ಪದಗಳಿಗೆ ಹೀಗೆಂದು ಕಾಲ ನಿರ್ಣಯ ಮಾಡಬೇಕಾಗಿದೆ. ಕ್ರಿ. ಶ. ೩೦೦ ರ ಈಚೆಗೆ ಚರಿತ್ರೆ, ಕ್ರಿ. ಪೂ. ೩೦೦ ರಿಂದ ಕ್ರಿ. ಶ. ೩೦೦ ರ ವರೆಗೆ ಆದಿ ಚರಿತ್ರೆ, ಕ್ರಿ. ಪೂ. ೩೦೦ ರಿಂದ ಹಿಂದಕ್ಕೆ ಪೂರ್ವ ಚರಿತ್ರೆ. ಈ ಮೂರು ಕಾಲಗಳಲ್ಲಿ ಕರ್ಣಾಟಕದ ಕುಶಲತೆಯು ಹೇಗೆ ಅಭಿವೃದ್ಧಿ ಯಾಗಿದೆಯೆಂಬುದನ್ನು ಶಾಸ್ತ್ರದೃಷ್ಟಿಯಿಂದ ವಿಮರ್ಶಿಸಬೇಕಾಗುತ್ತದೆ. ಈ ವಿಚಾರಗಳಲ್ಲಿ ಭಾಷೆಯ ಚರಿತ್ರೆಯೂ ಒಂದು. ಇದನ್ನು ಸ್ವಲ್ಪವಾಗಿ ಜ್ಞಾಪಿಸಿ ಕೊಳ್ಳೋಣ.

ಭಾರತದ ಭಾಷೆಗಳು:- ಭಾಷಾಶಾಸ್ತ್ರಜ್ಞರು ಭಾರತದ ಹಳೆಯ ಭಾಷೆಗಳನ್ನು ಮೂರು ಗುಂಪಾಗಿ ವಿಂಗಡಿಸಿರುವರು. ಇವುಗಳಲ್ಲಿ ಆಸ್ಟ್ರಿಕ್ ಗುಂಪಿಗೆ ಸೇರಿದ ಭಾಷೆಗಳು, ಮಧ್ಯಪ್ರಾಂತ್ಯದ ಕಾಡುಗಳಲ್ಲಿ ವಾಸ ಮಾಡುವ ಅನಾಗರಿಕರಾದ ಕೆಲವು ಕಾಡು ಜನರಲ್ಲಿ ಬಳಕೆಯಲ್ಲಿವೆ. ಈ ಭಾಷೆಗಳು ಪ್ರಾಯಃ ಪ್ರಥಮ ಭಾರತೀಯರಾದ ನಿಷಾದಕುಲಗಳವರು ಈ ದೇಶಕ್ಕೆ ಬಂದಾಗ ಅವರ ಕೂಡ ಬಂದುವಾಗಿರಬೇಕು. ಕರ್ಣಾಟಕದಲ್ಲಿ ವಾಸಮಾಡುವ ನಿಷಾದ ಕುಲದ ಜನರು ಈ ಭಾಷೆಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಸುತ್ತಮುತ್ತಲಿನ ಮೂಲ ಹಿಂದಿಕ ಜನರಿಂದ ಇವರು ದ್ರಾವಿಡ ಭಾಷೆಗಳನ್ನು ಕಲಿತು ತಮ್ಮ ಮೂಲ ಭಾಷೆಯನ್ನೆ ಮರೆತಂತೆ ತೋರುತ್ತದೆ. ಚನ್ನಾಗಿ ಭಾಷಾಶಾಸ್ತ್ರವನ್ನು ಕಲಿತ ವಿದ್ವಾಂಸರು ಕರ್ಣಾಟಕದ ಎಲ್ಲಾ ಭಾಷೆಗಳನ್ನೂ ಪರೀಕ್ಷಿಸಿ ನೋಡಿದಲ್ಲಿ ಈ ಪ್ರಾಚೀನ ಆಸ್ಥಿಕ ಭಾಷೆಗಳ ಕುರುಹುಗಳೇನಾದರೂ ದೊರೆಯುವವೋ ಎಂಬುದನ್ನು ನೋಡಬೇಕು. ಪ್ರಕೃತಕ್ಕೆ ಇಲ್ಲವೆಂದೇ ಊಹಿಸಿಕೊಳ್ಳಬೇಕು.

ಆರ್ಯಕ ಭಾಷೆಗಳು: ತರುವಾಯ ನಮ್ಮ ದೇಶಕ್ಕೆ ಬಂದ ಭಾಷೆಯು ಮೂಲದ್ರಾವಿಡ ಭಾಷೆ, ಈ ಮೂಲ ದ್ರಾವಿಡ ಭಾಷೆಯನ್ನು ಸುಮಾರು ಕ್ರಿ. ಪೂ. ಆರು ಸಾವಿರ ಅಥವಾ ಎಂಟು ಸಾವಿರದಲ್ಲಿ ಮೂಲಹಿಂದಿಕರು ತಮ್ಮ ಕೂಡ ತಂದದ್ದಾಗಿ ತೋರುತ್ತದೆ. ಈ ಭಾಷೆಯೂ ಯುರೋಪಿನ ಉತ್ತರದ ಫಿನ್ಲೆ೦ಡಿನಿಂದ ಮುಂಗೋಲಿಯಾ ದೇಶದ `ಉಗ್ರ’ ಪುರಿಯ ವರೆಗೂ ವಿಸ್ತರಿಸಿರುವ `ಫಿನ್ನೊ-ಉಗ್ರಿಯನ್’ ಭಾಷೆಗಳ ಗುಂಪಿಗೆ ಸಂಬಂಧಪಟ್ಟಿದೆಯೆಂದೂ, ಆದಿಯಲ್ಲಿ ಮೂಲ ಆರ್ಯಕ ಭಾಷೆಯೊಂದಕ್ಕೆ ಇದು ಸಂಬಂಧಿಸಿದ್ದರೂ, ಇರಬಹುದೆಂದೂ ಊಹಿಸಲ್ಪಟ್ಟಿದೆ. ಹೀಗೆ ಬಂದ ಮೂಲ ದ್ರಾವಿಡ ಭಾಷೆಯು ಭಾರತದಲ್ಲೆಲ್ಲಾ ಹರಡಿಕೊಂಡಿತು. ಬೆಲೂಚಿಸ್ಥಾನದ `ಬ್ರಾಹ್ವಿ’ ಜನರು ದ್ರಾವಿಡ ಭಾಷೆಯೊಂದನ್ನು ಈಗಲೂ ಆಡುತ್ತಿರುವರು. ಇದಲ್ಲದೆ ಭಾಷಾಶಾಸ್ತ್ರ ಪ್ರವೀಣರಾದ ಮತ್ತು ಕಾಶ್ಮೀರದ ಜಮ್ಮು ಕಾಲೇಜಿನಲ್ಲಿ ಪ್ರೊಫೆಸರರಾದ ನನ್ನ ಮಿತ್ರರಾದ ಪ್ರೊಫೆಸರ ಸಿದ್ದೇಶ್ವರವರ್ಮರವರು ಕಾಶ್ಮೀರದ ಆಗ್ನೇಯ ಭಾಗದಲ್ಲಿ ಬೆಟ್ಟ ಗುಡ್ಡಗಳ ಗ್ರಾಮದಲ್ಲಿ ದ್ರಾವಿಡ ಭಾಷೆಗಳ ಉಪಯೋಗದ ಕುರುಹುಗಳು ಚರ್ಮಕಾರರೇ ಮೊದಲಾದ ಜನರಲ್ಲಿ ಉಳಿದಿರುವುದನ್ನು ಕಂಡುಹಿಡಿದಿದ್ದಾರೆ. ಇದರಿಂದ ಕಾಶ್ಮೀರದಲ್ಲಿಯ ಆರ್ಯರ ಆಗಮನಕ್ಕೆ ಹಿಂದೆ ದ್ರಾವಿಡ ಭಾಷೆಗಳು ಪ್ರಚಾರದಲ್ಲಿದ್ದುವೆಂಬುದು ತಿಳಿಯಬರುತ್ತದೆ. ಕೆಲವು ಕಾಲದ ನಂತರ ಉತ್ತರ ದೇಶಕ್ಕೆ ನುಗ್ಗಿ ಬಂದ ಆರ್ಯರ ಭಾಷೆಗಳು ವಿಶೇಷ ಪ್ರಚಾರದಲ್ಲಿ ಬರಲು ದ್ರಾವಿಡ ಭಾಷೆಗಳು ಹಿಮ್ಮೆಟ್ಟು, ಕಡೆಗೆ ಈಗಿನ ದಖನ್ ಪ್ರಾಂತ್ಯದಲ್ಲಿ ಮಾತ್ರ ಉಳಕೊಂಡವು. ಈ ಭಾಷೆಗಳ ಪದಗಳ ವಿಮರ್ಶೆಯಿಂದ ನಮಗೆ ಹೀಗೆಂದು ತಿಳಿಯಬರುತ್ತದೆ. ಸುಮಾರು ಕ್ರಿ. ಪೂ. ೬೦೦ ರ ವರೆಗೆ ದ್ರಾವಿಡ ಭಾಷೆಗಳು ತಕ್ಕಮಟ್ಟಿಗೆ ಶುದ್ಧವಾಗಿಯೇ ಇದ್ದುವು. ಆ ಕಾಲಕ್ಕೆ ಉತ್ತರದಿಂದ ಸಂಸ್ಕೃತ ಪ್ರಾಕೃತ ಭಾಷೆಗಳನ್ನಾಡುವ ಜನರ ಸಂಬಂಧ ಉಂಟಾಗಿ ಆ ಭಾಷೆಗಳ ಪದಗಳು ಹೆಚ್ಚಾಗಿ ಉಪಯೋಗಕ್ಕೆ ಬಂದುವು. ಕ್ರಿ. ಪೂ. ೩೦೦ ರಿಂದ ಕ್ರಿ. ಶ. ೩೦೦ ರ ವರೆಗೆ ಬೌದ್ಧ ಮತದ ಪ್ರಾಬಲ್ಯ ಕಾಲದಲ್ಲಿ ವಿಶೇಷವಾಗಿ ಪ್ರಾಕೃತ ಪದಗಳು ಕನ್ನಡದಲ್ಲಿ ಸೇರಿದುವು. ಸುಮಾರು ಕ್ರಿ. ಶ. ೨೦೦ ರಿಂದ ಪೌರಾಣಿಕ ಹಿಂದೂ ಮತವು ಹರಡಿ ಕನ್ನಡ ನಾಡಿನಲ್ಲಿ ಸಂಸ್ಕೃತದ ಅಭ್ಯಾಸವು ಹೆಚ್ಚಿ ವಿಶೇಷವಾಗಿ ಸಂಸ್ಕೃತ ಪದಗಳನ್ನೂ ಉಪಯೋಗಿಸುವ ಅಭ್ಯಾಸವು ಬಳೆಯಿತು. ಹೀಗೆ ಪ್ರಕೃತ ಸಂಸ್ಕೃತ ಪದಗಳ ಎರವಿನಿಂದ ಪರಿಪುಷ್ಟವಾದ ಕನ್ನಡ ಭಾಷೆಯು ಸುಮಾರು ಕ್ರಿಸ್ತಾಬ್ದ ನಾಲ್ಕನೆಯ ಶತಮಾನದಿಂದ ಅಂದರೆ ಗಂಗ, ಕದಂಬ, ವಾಕಾಟಕರ ಕಾಲದಿಂದ ಉಪಯೋಗದಲ್ಲಿ ಬಂದಿತು.

ದ್ರಾವಿಡ ಭಾಷೆಗಳ ಒಡೆತ:- ಇದಲ್ಲದೆ ನೈಸರ್ಗಿಕ ಮತ್ತು ರಾಜಕೀಯ ಕಾರಣಗಳಿಂದ ದ್ರಾವಿಡ ಭಾಷೆಯಲ್ಲಿ ಕವಲುಗಳು ಒಡೆದು ಬೇರೆ ಬೇರೆ ಭಾಷೆಗಳು ಹುಟ್ಟಿಕೊಂಡವು. ಇದು ನಡೆದ ಕಾಲವನ್ನು ಈಗ ಕೇವಲ ಊಹೆ ಮಾತ್ರದಿಂದ ಹೇಳಬೇಕಾಗಿದೆ. ಕ್ರಿ ಪೂ. ಸು. ೩೦೦ ರರಲ್ಲಿ ತೆಲಗು ಭಾಷೆಯು ಮೊದಲು ಒಡೆದಿರಬೇಕು. ತರುವಾಯ ಕ್ರಿ. ಶ. ಅಥವಾ ಕ್ರಿ. ಪೂ. ಒಂದನೆಯ ಶತಮಾನದಲ್ಲಿ ಕನ್ನಡವೂ ತಮಿಳೂ ಬೇರೆಯಾಗಿರಬೇಕು, ಮಲೆಯಾಳವಂತೂ ಹಳೆಯ ತಮಿಳಿನಿಂದ ಸುಮಾರು ೯-೧೦ ನೆಯ ಶತಮಾನಕ್ಕೆ ಒಡೆಯಿತು. ಅನೇಕರಿಗೆ ಈ ದ್ರಾವಿಡ ಭಾಷೆಗಳಲ್ಲಿ ಕೆಲವು ತಪ್ಪು ತಿಳಿವಳಿಕೆ ಇದೆ. ತಮಿಳು ಭಾಷೆಯು ಶುದ್ದ ದ್ರಾವಿಡ ಭಾಷೆಯನ್ನು ಹೆಚ್ಚಾಗಿ ಉಳಿಸಿಕೊಂಡಿದೆಯೆಂದೂ ಆದ್ದರಿಂದ ಇತರ ದ್ರಾವಿಡ ಭಾಷೆಗಳು ತಮಿಳಿನಿಂದ ಒಡೆದ ಕವಲುಗಳೆಂದೂ ಕೆಲವರು ಹೇಳುವ ವಾಡಿಕೆಯುಂಟು. ಆದರೆ ಭಾಷಾಶಾಸ್ತ್ರದ ರೀತ್ಯಾ ವಿಮರ್ಶೆ ಮಾಡಿ ನೋಡಿದರೆ ಮೂಲ ದ್ರಾವಿಡ ಭಾಷೆಯ ಅನೇಕ ಕುರುಹುಗಳು ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಉಳಿದಿರುವುದಾಗಿಯೂ, ತಮಿಳಿನಲ್ಲಿ ಮಾರ್ಪಾಟಾಗಿರುವುದಾಗಿಯೂ, ಕಾಣಬರುತ್ತದೆ. ಇದರಿಂದ ತೆಲಗು, ಕನ್ನಡ, ತಮಿಳು ಮೂರೂ ಸಮನಾಗಿ ಮೂಲ ದ್ರಾವಿಡಭಾಷೆಯ ಮಕ್ಕಳಾಗಿರುವುದೇ ಹೊರತು ತಮಿಳಿನಿಂದ ಈ ಭಾಷೆಗಳು ಹುಟ್ಟಿದವೆಂದು ಹೇಳಲು ಅವಕಾಶವಿಲ್ಲ. ಹೀಗೆ ಕನ್ನಡವು ಸುಮಾರು ಎರಡು ಸಾವಿರ ವರ್ಷಗಳಿಂದಲೂ ಜನರು ಆಡುತ್ತಿರುವ ಭಾಷೆ ಇದು ಒಡೆದುದು ದೇಶ ವಿಭೇದದಿಂದ. ಕರುನಾಡಿನ ಜನರಿಗೂ ತಮಿಳು ದೇಶದ ಜನರಿಗೂ ಮಧ್ಯೆ ಪೂರ್ವ ಘಟ್ಟಗಳ ಮೂಲಕ ಜನ ಸಂಚಾರವು ಬಹಳ ಹೆಚ್ಚಾಗಿಲ್ಲದುದರಿಂದಲೂ ದಖನ್ ದಿಣ್ಣೆಯು ಮೌರ್ಯ, ಶಾತವಾಹನ ಮೊದಲಾದ ಚಕ್ರಾಧಿಪತ್ಯಗಳ ಅಧೀನದಲ್ಲೂ, ತಮಿಳು ದೇಶವು ಚೋಳ, ಪಾಂಡ್ಯರಾಜರ ಕೈಯಲ್ಲಿ ಅನೇಕ ಶತಮಾನಗಳ ವರೆಗೆ ಇದ್ದುದರಿಂದ ದಿಣ್ಣೆಯ ದ್ರಾವಿಡರಿಗೂ ಘಟ್ಟದ ಕೆಳಗಣ ಬಯಲಿನ ದ್ರಾವಿಡರಿಗೂ ವ್ಯತ್ಯಾಸವು ಹುಟ್ಟಿತು. ಹೀಗೆಂದು ಭಾಷಾಶಾಸ್ತ್ರದ ಮೂಲಕ ನಮ್ಮ ಪೂರ್ವ
ಚರಿತ್ರೆಗೆ ಕೆಲವು ವಿಷಯಗಳು ತಿಳಿಯಬರುತ್ತವೆ.

ಆರ್ಯರ ಸಂಬಂಧ:- ಆರ್ಯರಿಗೂ ಕರ್ಣಾಟಕಕ್ಕೂ ಯಾವಾಗ ಸಂಬಂಧವಾಯಿತೆಂಬುದನ್ನು ಕುರಿತು ಸರ್ ರಾಮಕೃಷ್ಣ ಭಂಡಾರ್ಕರ್‌ ಅವರ ಊಹೆಯು ಹೀಗೆಂದು ಇತ್ತು. ಏನಂದರೆ ವೈಯ್ಯಾಕರಣಿಯಾದ ಪಾಣಿನಿಯು ತನ್ನ ಅಷ್ಟಾಧ್ಯಾಯದಲ್ಲಿ ದಕ್ಷಿಣ ದೇಶದ ವಿಚಾರದಲ್ಲಿ ತನ್ನ ಅಜ್ಞಾನವನ್ನು ತೋರ್ಪಡಿಸಿರುವನು. ಪಾಣಿನಿಯು ಸುಮಾರು ಕ್ರಿ. ಪೂ. ೬೦೦ ರರಲ್ಲಿ ಇದ್ದುದರಿಂದ ಆ ವೇಳೆಗೆ ಉತ್ತರ ದೇಶದ ಜನಗಳಿಗೆ ಕರ್ಣಾಟಕವನ್ನೊಳಗೊಂಡ ದಕ್ಷಿಣದೇಶದ ವಿಚಾರವು ತಿಳಿದಿರಲಿಲ್ಲ. ಆದರೆ ಸುಮಾರು ಕ್ರಿ. ಪೂ. ೩೦೦ ರರಲ್ಲಿದ್ದ ಕಾತ್ಯಾಯನನೂ, ಸು. ಕ್ರಿ. ಪೂ. ೧೭೦ ರಲ್ಲಿದ್ದ ಪತಂಜಲಿಯೂ ತಮ್ಮ ವ್ಯಾಕರಣ ಶಾಸ್ತ್ರದಲ್ಲಿ ದಕ್ಷಿಣದೇಶಕ್ಕೆ ಸಂಬಂಧಪಟ್ಟ ಉದಾಹರಣೆಗಳನ್ನೂ ಎತ್ತಿ ಹೇಳಿರುವರು. ಆದುದರಿಂದ ಸುಮಾರು ಕ್ರಿ. ಪೂ. ಆರನೆಯ ಶತಮಾನದಲ್ಲಿ ಆರ್ಯರು ಮೊದಲು ದಕ್ಷಿಣಕ್ಕೆ ಬಂದರೆಂದು ಸರ್ ರಾಮಕೃಷ್ಣರು ಹೇಳಿದ್ದಾರೆ. ಆದರೆ ಈ ಸಿದ್ದಾಂತವನ್ನು ನಾವು ಒಪ್ಪುವದಕ್ಕೆ ಕೆಲವು ಅಡಚಣಿಗಳಿವೆ. ರಾಮಾಯಣದ ಕಥೆಯು ಕ್ರಿ. ಪೂ. ಸುಮಾರು ೧೨೦೦ ರಲ್ಲಿ ಮಹಾಭಾರತದ ಕಥೆಯು ಕ್ರಿ. ಪೂ. ಸು. ೯೦೦ ರಲ್ಲೂ ನಡೆದುವೆಂದು ಪಾರ್ಜಿಟರ್ ಮೊದಲಾದ ವಿದ್ವಾಂಸರು ಹೇಳಿದ್ದಾರೆ. ಈ ವಿಚಾರಗಳು ನಡೆದ ಕಾಲವು ಈ ಕಾಲಗಳಿಗಿಂತಲೂ ಹಿಂದೆಯೇ ಹೊರತು ಮುಂದೆಯಲ್ಲ. ಅಂದರೆ ರಾಮಾಯಣ ಭಾರತಗಳ ಕಾಲದಲ್ಲಿ ಕರ್ಣಾಟಕಕ್ಕೂ ಉತ್ತರ ದೇಶಕ್ಕೂ ಏನೂ ಸಂಬಂಧವಿರಲಿಲ್ಲವೇ ಎಂದು ಕೇಳಬಹುದು. ಕರ್ಣಾಟಕದಲ್ಲಿ ಕಿಂಧಾ ನಗರವೇ ಮೊದಲಾದ ಎಡೆಗಳಲ್ಲಿ ರಾಮನ ಸಂಬಂಧದ ಕಥೆಗಳು ಅನೇಕವಾಗಿವೆ. ಇನ್ನು ಕೆಲವೆಡೆಗಳಲ್ಲಿ ಮಹಾಭಾರತದ ಕಥೆಗಳೂ ಸಂಬಂಧಿಸಿವೆ. ಇವುಗಳಿಂದ ನಾವು ಊಹಿಸಬೇಕಾದುದೇನಂದರೆ ರಾಮಾಯಣ ಮಹಾಭಾರತಗಳ ಕಾಲದಿಂದಲೂ ಆರ್ಯರಿಗೂ ಕರ್ಣಾಟಕಕ್ಕೂ ಸಂಬಂಧವಿತ್ತೆ೦ದೂ ಕ್ರಿ. ಪೂ. ಸು. ೬೦೦ ರ ತರವಾಯ ಈ ಸಂಬಂಧವು ಹೆಚ್ಚಿ ಉತ್ತಮ ವರ್ಣದ ಅನೇಕ ಜನರು ಬಹುಸಂಖ್ಯೆಯಲ್ಲಿ ದಕ್ಷಿಣಕ್ಕೆ ಬಂದು ನೆಲಸತೊಡಗಿದರೆಂದೂ ತಿಳಿಯಬೇಕು. ಅಂದರೆ ಪುರಾಣ ಮತ್ತು ಸಂಸ್ಕೃತ ವಾಙ್ಮಯ ರೀತ್ಯಾ ನೋಡಿದಲ್ಲಿ ಬ್ರಾಹ್ಮಣ ಮತ್ತು ಉಪನಿಷತ್ತುಗಳ ಕಾಲದಿಂದಲೂ ಈ ಸಂಬಂಧವು ಇದ್ದು ಸುಮಾರು ೬ನೆಯ ಶತಮಾನದಿಂದ ಇದು ಹೆಚ್ಚಾದಂತೆ ತೋರಿಬರುತ್ತದೆ.

ಇತಿಹಾಸ ಶೋಧನೆಯ ಹೊಸ ಮಾರ್ಗಗಳು

ಮೇಲೆ ಹೇಳಿದ ವಿಷಯಗಳೆಲ್ಲವೂ ಹಳೆಯ ರೀತಿಯಲ್ಲಿ ಗ್ರಂಥ, ಭಾಷೆ ಮೊದಲಾದುವನು ವಿಮರ್ಶಿಸಿ ಸಂಗ್ರಹಿಸಿದ ವಿಷಯಗಳು. ಆದರೆ ಶೋಧನೆಯ ಕ್ರಮವು ಇತ್ತೀಚೆಗೆ ಹೊಸ ಮಾರ್ಗಗಳನ್ನು ಅವಲಂಬಿಸಿದೆ. ಭೂಶೋಧನೆ ಎಂದ ಅನೇಕ ಹೊಸ ವಿಷಯಗಳು ಹೊರಪಟ್ಟು ಮನುಷ್ಯನ ಪೂರ್ವ ಚರಿತ್ರೆಗೆ ಹೊಸ ಸಾಮಗ್ರಿಗಳನ್ನು ಹಿಡಿದುಕೊಟ್ಟಿವೆ. ಈ ಹೊಸ ಮಾರ್ಗಗಳನ್ನು ಅವಲಂಬಿಸದಿದ್ದರೆ ಭಾರತದ ಚರಿತ್ರೆಯಾಗಲಿ, ಕರ್ಣಾಟಕದ ಚರಿತ್ರೆಯಾಗಲಿ ಶಾಸ್ತ್ರೀಯ ರೀತಿಯಲ್ಲಿ ವೃದ್ಧಿಯಾಗುವಂತಿಲ್ಲ. ಈ ಹೊಸ ಮಾರ್ಗಗಳ ದೃಷ್ಟಿಯಿಂದ ಕರ್ಣಾಟಕದ ಪೂರ್ವ ಚರಿತ್ರೆಯನ್ನು ವಿಮರ್ಶಿಸಿ ನೋಡೋಣ.

ಶಿಲಾಯುಗಗಳು:- ವಾನರ ರೂಪದಿಂದ ಮನುಷ್ಯರೂಪವು ಹುಟ್ಟುವಾಗ ಅವನ ಮಿದುಳು ವಿಶೇಷವಾಗಿ ದೊಡ್ಡದಾಗುತ್ತಲೂ, ಅವನ ಶರೀರವು ಗೂನಿಲ್ಲದೆ ನೆಟ್ಟಗೆ ನಿಲ್ಲುತ್ತಲೂ, ಅವನ ಕಾಲುಗಳು ಓಡುವದಕ್ಕೆ ಸಹಾಯಕವಾಗಿ ಉದ್ದವೂ ಬಲವೂ ಆಗುತ್ತಲೂ, ಅವನ ಕೈಗಳು ಪದಾರ್ಥಗಳನ್ನು ಹಿಡಿಯುವದಕ್ಕೂ, ಮುಟ್ಟಿ ನೋಡುವುದಕ್ಕೂ, ಎಸೆಯುವದಕ್ಕೂ ತಕ್ಕಂತೆ ಸೂಕ್ಷ್ಮ ವಾಗುತ್ತಲೂ ಬಂದವು. ಈಗ್ಗೆ ಸುಮಾರು ಒಂದು ಲಕ್ಷ ವರ್ಷಗಳ ಹಿಂದೆಯೇ ವಿಕೃತ ರೂಪಗಳುಳ್ಳ ಕುನರರು ಗಿಡಗಳ ರೆಂಬೆಗಳನ್ನೂ ಪ್ರಾಣಿಗಳ ಎಲಬುಗಳನ್ನೂ, ಒಡೆದು ಹರಿತವಾದ ಅಥವಾ ಮೊನೆಯಾದ ಕಲ್ಲಿನ ಚೂರುಗಳನ್ನೂ ಆಯುಧಗಳಾಗಿ ಉಪ ಯೋಗಿಸಹತ್ತಿದರು. ಕಾಲಕ್ರಮೇಣ ಈ ಆಯುಧಗಳಿಗೆ ಬೇರೆ ಬೇರೆಯಾದ ಪರಿಷ್ಕಾರಗಳನ್ನು ಮಾಡಿ ಉಪಯುಕ್ತ ರೂಪಗಳನ್ನು ಕೊಟ್ಟು ಅವುಗಳಿಂದ ತಮ್ಮ ಕೆಲಸಗಳನ್ನು ಸುಸೂತ್ರವಾಗಿ ನಡೆಸುತ್ತ ಬಂದವು. ಮೊತ್ತ ಮೊದಲು ಇವರಿಗೆ ಪಶು ಪಾಲನೆಯಾಗಲಿ ವ್ಯವಸಾಯವಾಗಲಿ ತಿಳಿಯವು. ಬರಿಯ ಬೇಟೆಯಿಂದ ಜೀವನ ಮಾಡುತ್ತಿದ್ದರು, ಆಹಾರವನ್ನು ಬೆಳಸುವದಕ್ಕಾಗಲಿ ಉಳಿಸಿ ಇಟ್ಟುಕೊಳ್ಳುವದಕ್ಕಾಗಲಿ ಇವರಿಗೆ ತಿಳಿಯದು. ಈ ರೀತಿಯಲ್ಲಿ ಇದ್ದ ಮನುಷ್ಯರ ಮೊತ್ತಮೊದಲಿನ ಕುಶಲತೆಗೆ ಪೂರ್ವಶಿಲಾಯುಗದ ಕುಶಲತೆಯೆಂದು ಹೆಸರು. ಇದರಲ್ಲಿ ಯೂರೋಪ್ ಖಂಡದಲ್ಲಿ ಈ ರೀತಿಯಾದ ಪ್ರಭೇದಗಳಿವೆಯೆಂದು ಪೂರ್ವ ಚರಿತ್ರ ಶಾಸ್ತ್ರಜ್ಞರು ನಿರ್ಧರಿಸಿದ್ದಾರೆ.

೧. ಆದಿಶಿಲೆ (Eolith) ಸು. ೧,೦೦,೦೦೦ ವರ್ಷಗಳ ಕೆಳಗೆ.
೨. ಬೃಹದುದರ ಶಿಲೆ (Chellean) ಸು. ೪೫,೦೦೦ ವರ್ಷಗಳ ಕೆಳಗೆ.
೩. ಲಘೂದರ ಶಿಲೆ (Acheulean) ಸು. ೩೫,೦೦೦ ವರ್ಷಗಳ ಕೆಳಗೆ.
೪. ಶಲಕ ಶಿಲೆ (Mousterean) ಸು. ೩೦,೦೦೦ ವರ್ಷಗಳ ಕೆಳಗೆ.
೫. ಕ್ಲಪ್ತ ಶಿಲೆ (Aurignacian) ಸು. ೨೫,೦೦೦ ವರ್ಷಗಳ ಕೆಳಗೆ.
೬. ಪರ್ಣಶಿಲೆ (Solutrian) ಸು. ೨೦,೦೦೦ ವರ್ಷಗಳ ಕೆಳಗೆ.
೭. ಅಸ್ಥಿಶಿಲೆ (Magdelinean) ಸು. ೧೫,೦೦೦ ವರ್ಷಗಳ ಕೆಳಗೆ.
೮. ಅಲ್ಪಶಿಲೆ (Azilian) ಸು. ೧೨,೦೦೦ ವರ್ಷಗಳ ಕೆಳಗೆ.

ಈ ಪಾಶ್ಚಾತ್ಯ ಕಾಲ ನಿಯಮಕ್ಕೂ, ಕೌಶಲ್ಯಕ್ಕೂ ಅನುಗುಣವಾಗಿಯೇ ಕರ್ಣಾಟಕದ ಪೂರ್ವ ಚರಿತ್ರೆಯು ನಡೆಯಿತೆಂದು ನಾವು ಹೇಳಲು ಸಾಧ್ಯವಿಲ್ಲ. ಆದರೆ ಎಷ್ಟು ಮಟ್ಟಿಗೆ ಪೂರ್ವಶಿಲಾಯುಗದ ಕುರುಹುಗಳು ನಮ್ಮಲ್ಲಿ ದೊರೆಯುತ್ತವೆಂದು ವಿಚಾರಿಸಬೇಕಾಗಿದೆ.

ಕರ್ಣಾಟಕ ಪೂರ್ವಶಿಲಾಯುಗ:- ಬಳ್ಳಾರಿಯ ಸಮೀಪದಲ್ಲೂ, ತುಮುಕೂರು ಜಿಲ್ಲೆಯ ಕಿಬ್ಬನಹಳ್ಳಿಯ ಬಳಿಯ ಗುಡ್ಡಗಳ ಪಕ್ಕದಲ್ಲಿ ಬೃಹದುದರ ಮತ್ತು ಲಘೂದರ ಶಿಲಾಪರಶುಗಳು ದೊರೆತಿವೆ. ಕಿಬ್ಬನಹಳ್ಳಿಯಿಂದ ಒಂದು ಪೆಟ್ಟಿಗೆ ತುಂಬ ಈ ಆಯುಧಗಳನ್ನು ಆರಿಸಿಕೊಂಡು ಬಂದೆವು. ಇವುಗಳನ್ನು ಪರೀಕ್ಷೆ ಮಾಡಲು ಅವು ಯೂರೋಪ್ ಖಂಡದಲ್ಲಿ ಸುಮಾರು ನಾಲ್ವತ್ತು ಸಾವಿರ ವರ್ಷಗಳ ಕೆಳಗಿನ ಆಯುಧಗಳನ್ನು ಹೋಲುತ್ತವೆ. ಅಂದರೆ ಸುಮಾರು ಅಷ್ಟು ಹಿಂದಿನ ಕಾಲದಲ್ಲಿಯೇ ಕರ್ಣಾಟಕದಲ್ಲಿ ಕಾಡು ಮನುಷ್ಯರು ಜೀವಿಸಿದ್ದರೆಂದು ಹೇಳ ಬಹುದು. ಕಿಬ್ಬನಹಳ್ಳಿಯಲ್ಲಿಯೂ ಇನ್ನೂ ಕೆಲವೆಡೆಗಳಲ್ಲಿಯ ಶಲಕಶಿಲೆಯ ಕಾಲದ ಆಯುಧಗಳು ದೊರೆಯುತ್ತವೆ. ಆದರೆ ಕ್ಲಪ್ತ ಮತ್ತು ಪರ್ಣ ಶಿಲೆಗಳ ಆಯುಧಗಳೂ, ಅಸ್ಥಿ ಶಿಲೆಯ ಆಯುಧಗಳೂ ಇದುವರೆಗೂ ದೊರೆತುದಿಲ್ಲ. ಆದುದರಿಂದ ಆ ಕಾಡು ಮನುಷ್ಯರ ಕೌಶಲ್ಯವು ಬಹಳ ಒರಟುತರಹವಾಗಿತ್ತೆಂದು ತೋರುತ್ತದೆ. ಪ್ರಾಯಶಃ ಇಲ್ಲಿನ ಪೂರ್ವ ನಿವಾಸಿಗಳಾದ ನಿಷಾದ ಕುಲದ ಜನರ ಕೌಶಲ್ಯವು ಈ ರೀತಿಯಾಗಿ ಇದ್ದಿರಬಹುದೆಂದು ಊಹಿಸಬಹುದು.

ಅಲ್ಪಶಿಲೆಯ ಕಾಲ:- ಇತ್ತೀಚೆಗೆ ಮೈಸೂರು ಶಾಸನದ ಇಲಾಖೆಯವರು ಮಾಡಿರುವ ಭೂಶೋಧನೆಯಿಂದ ಕರ್ಣಾಟಕದಲ್ಲಿ ಸುಮಾರು ಹತ್ತು ಹನ್ನೆರಡು ಸಾವಿರ ವರ್ಷಗಳ ಕೆಳಗೆ ಅಲ್ಪಶಿಲಾಯುಗಕ್ಕೆ ಸಂಬಂಧಪಟ್ಟ ಕೌಶಲ್ಯವೊಂದು ವಿಸ್ತರಿಸಿದ್ದುದು ಗೊತ್ತಾಗಿದೆ. ಇದರ ವೈಶಿಷ್ಟ್ಯವನ್ನೂ ಅದರಿಂದ ಪೂರ್ವಚರಿತ್ರೆಗೆ ತಿಳಿದುಬರುವ ಹೊಸ ಅಂಶಗಳನ್ನೂ ಮುಂದೆ ವಿವರಿಸುತ್ತೇನೆ. ಆದರೆ ಅಲ್ಪ ಶಿಲಾ ಯುಗದ ಕಡೆಯ ಕಾಲದಲ್ಲಿ ನವಶಿಲಾಯುಗದ ಕೌಶಲ್ಯವು ಕರ್ಣಾಟಕದಲ್ಲಿ ಕಾಣ ಬಂದಿತು. ಬೆಣಚುಕಲ್ಲಿಗಿಂತಲೂ ಕರಿಯ ಕಲ್ಲು ಹೆಚ್ಚಾಗಿ ಉಪಯೋಗಕ್ಕೆ ಬಂದಿತು. ಈ ಕರಿಯ ಕಲ್ಲಿನ ಸಣ್ಣ ಗುಂಡುಗಳನ್ನು ಒರಟಾಗಿ ಕೊಚ್ಚಿ, ಬಂಡೆಯ ಮೇಲೆ ಉಜ್ಜಿ ನಯಮಾಡಿ, ಹರಿತಮಾಡಿ ಬಲವಾದ ಆಯುಧಗಳನ್ನು ಉಪಯೋಗಿಸುವದಕ್ಕೆ ಜನರು ಮೊದಲು ಮಾಡಿದರು. ಮಡಕೆ, ಕುಡಿಕೆಗಳು ಉಪಯೋಗಕ್ಕೆ ಬಂದುವು, ಬಿಲ್ಲಿನಿಂದ ಬಾಣ ಪ್ರಯೋಗವಾಯ್ತು, ದನಕರುಗಳನ್ನೂ, ಕುರಿ ಆಡುಗಳನ್ನೂ, ನಾಯಿ, ಬೆಕ್ಕುಗಳನ್ನೂ ಸಾಕಿ ಕೊಳ್ಳುವುದು ವಾಡಿಕೆಗೆ ಬಂತು. ಇದಕ್ಕಿಂತಲೂ ಕಾಡಿನಲ್ಲಿ ಬೆಳೆದ ಧಾನ್ಯಗಳನ್ನೂ ಮತ್ತು ಹಣ್ಣುಗಳನ್ನೂ ಆಯ್ದು, ಕೊಯ್ದು ಉಪಯೋಗಿಸುವುದಕ್ಕೆ ಬದಲಾಗಿ ನೆಲವನ್ನು ಕಲ್ಲಿನ ಗುದ್ದಲಿಗಳಿಂದ ಅಗೆದು ಈ ಬೀಜಗಳನ್ನು ಬಿತ್ತು ವ್ಯವಸಾಯದ ಮೂಲಕ ಆಹಾರ ಸಾಮಗ್ರಿಗಳನ್ನು ಬೆಳೆಸುವುದಕ್ಕೆ ಜನರು ಮೊದಲು ಮಾಡಿದರು. ಕರ್ಣಾಟಕದ ಕುಶಲತೆಯಲ್ಲಿ ಈ ಸುಪ್ರಯತ್ನಗಳನ್ನು ನಡೆಸಿದ ಜನರು ಪ್ರಾಯಶಃ ಮೂಲ ದ್ರಾವಿಡ ಭಾಷೆಯನ್ನು ಆಡುತ್ತಿದ ಮೂಲ ಭಾರತ ಕುಲದ ಜನಾಗಿರಬೇಕೆಂದೂ, ಈ ಪ್ರಯತ್ನಗಳು ಸುಮಾರು ಈಗ್ಗೆ ಎಂಟು ಸಾವಿರ ವರ್ಷಗಳ ಕೆಳಗೆ ನಡೆದಿರ ಬೇಕೆಂದೂ ಊಹಿಸಲಾಗಿದೆ. ಕಾಲಕ್ರಮದಲ್ಲಿ ಈ ನವಶಿಲಾಯುಗದ ಜನರ ಕೌಶಲ್ಯವು ಮಾರ್ಪಾಟಾಗುತ್ತ ದೊಡ್ಡ ಕಲ್ಲುಗಳಿಂದ ಕಟ್ಟಡಗಳನ್ನು ಕಟ್ಟುವ ಬೃಹತ್ ಶಿಲಾಯುಗ (megalithic) ವು ಕರ್ಣಾಟಕದಲ್ಲಿ ಹರಡಿತು. ಆ ಕಾಲದಲ್ಲಿ ಜನರು ಕಟ್ಟಿದ ಪಾಂಡವರ ಗುಡಿಗಳು ಅಥವಾ ಮೌರ್ಯರ ಮನೆಗಳು ಎಂದು ಕರೆಯಲ್ಪಡುವ ಕಟ್ಟಡಗಳು ಕರ್ಣಾಟಕದಲ್ಲಿ ಹೇರಳವಾಗಿ ದೊರೆಯುತ್ತವೆ. ಸಾಮಾನ್ಯವಾಗಿ ಎಲ್ಲ ಗುಡ್ಡಗಳ ಪಕ್ಕದಲ್ಲಿ ಇವುಗಳನ್ನು ನೋಡಬಹುದು. ಬಳ್ಳಾರಿಯ ಬಳಿಯಲ್ಲೂ ರಾಯಚೂರು ಚಿತ್ರದುರ್ಗ ಜಿಲ್ಲೆಯಲ್ಲೂ ಅಂದರೆ ಕರ್ಣಾಟಕದ ಮಧ್ಯದೇಶದಲ್ಲಿ ಇವು ಅಸಂಖ್ಯಾತವಾಗಿ ದೊರೆಯುತ್ತವೆ.

ತಾಮ್ರಯುಗ:- ಉತ್ತರ ದೇಶದಲ್ಲಿದ್ದಂತೆ ದಕ್ಷಿಣ ದೇಶದಲ್ಲಿಯೂ ಒಂದು ತಾಮ್ರಯುಗವು ಇತ್ತೇ ಎಂಬ ವಿಷಯದಲ್ಲಿ ಹಳೆಯ ಶಾಸ್ತ್ರಕಾರರು ಇಲ್ಲವೆಂದೇ ಉತ್ತರವನ್ನು ಕೊಡುತ್ತಿದ್ದರು. ಉತ್ತರದಲ್ಲಿಯೂ ಸಹ ಪಂಜಾಬು ಮತ್ತು ಸಿಂಧೂ ದೇಶದಲ್ಲಿ ಕ್ರಿ. ಶ. ೧೯೨೨ನೆಯ ವರ್ಷದಿಂದೀಚೆಗೆ ಭಾರತ ಸರಕಾರದ ಪ್ರಾಕ್ತನ ಶಾಖೆಯವರು ಮಾಡಿರುವ ಭೂಶೋಧನೆಯಿಂದ ಹಿಂದಿನ ಇತಿಹಾಸವನ್ನೇ ಕ್ರಾಂತಿಪಡಿಸುವ, ಇತಿಹಾಸ ಪ್ರಪಂಚದಲ್ಲಿ ಆಶ್ಚರ್ಯವನ್ನು ಹುಟ್ಟಿಸುವ ಹೊಸ ವಿಷಯಗಳು ಕಂಡುಹಿಡಿಯಲ್ಪಟ್ಟವು. ಇವುಗಳಲ್ಲಿ ಮುಖ್ಯವಾಗಿ ಮೊಹೆಂಜೊದರೊ ಎಂಬಲ್ಲಿ ನಡೆದ ಭೂಶೋಧನೆಯಿಂದ ಈ ಕೆಳಕಂಡ ಆಂಶಗಳು ತಿಳಿದು ಬಂದಿವೆ. ಏನಂದರೆ ಈಗ್ಗೆ ನಾಲ್ಕೂವರೆ ಸಾವಿರ ವರ್ಷಗಳ ಕೆಳಗೆ ಸಿಂಧೂನದಿಯ ತೀರ ಪ್ರದೇಶದಲ್ಲಿ ಅತ್ಯಂತ ಉನ್ನತವಾದ ಕೌಶಲ್ಯವುಳ್ಳ ಭಾರತೀಯ ನಾಗರಿಕತೆಯೊಂದು ಬೆಳೆದಿತ್ತು. ಆದರೆ ಜನರು ತಾಮ್ರವನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು, ಕಬ್ಬಿಣದ ಆಯುಧಗಳನ್ನು ಅರಿಯರು. ಕೋಟೆಗಳಿಂದ ರಕ್ಷಿತವಾದ ಊರುಗಳನ್ನೂ, ಸೌಕರ್ಯಗಳಿಂದ ಕೂಡಿದ ಮನೆಗಳನ್ನೂ ಇಟ್ಟಿಗೆಗಳಿಂದ ಕಟ್ಟಿದ ಕೊಳಗಳು, ಭಾವಿಗಳು, ದೇವಾಲಯಗಳು, ಎತ್ತಿನ ಗಾಡಿಗಳು ಮೊದಲಾದ ಸೌಕರ್ಯಗಳನ್ನು ಹೊಂದಿದ್ದರು. ಇವರು ಚಿತ್ರ ಲಿಪಿಯನ್ನು ಅರಿತು ಮಂತ್ರಗಳನ್ನೂ, ಹೆಸರುಗಳನ್ನೂ, ಪ್ರಾಣಿಚಿತ್ರ ಯುಕ್ತವಾದ ಕಲ್ಲಿನ ಮುದ್ರೆಗಳಲ್ಲಿ ಕೊರೆಯುತ್ತಿದ್ದರು. ಇವರು ಮಾತೃ ದೇವಿಯನ್ನೂ, ಲಿಂಗವನ್ನೂ ಸಮಸ್ತ ಭೂತೇಶ್ವರನಾದ ಮತ್ತು ಯೋಗಾರೂಢನಾದ ತ್ರಿಶೂಲಧಾರಿಯಾದ ಶಿವನನ್ನೂ, ಬಸವನೇ ಮೊದಲಾದ ಪ್ರಾಣಿಗಳನ್ನೂ, ಅಶ್ವತ್ಥವೇ ಮೊದಲಾದ ವೃಕ್ಷಗಳನ್ನೂ ಪೂಜಿಸುತ್ತಿದ್ದರು. ಈ ನಾಗರಿಕತೆಯು ಇರಾಣದಿಂದ ಪೂರ್ವಕ್ಕೆ, ಹಿಮಾಚಲದಿಂದ ದಕ್ಷಿಣಕ್ಕೆ ಕಾಠೇವಾಡದವರೆಗೂ ವಿಸ್ತರಿಸಿತ್ತು. ಇದಕ್ಕೆ ಭಾರತೀಯ ತಾಮ್ರ ಸಂಸ್ಕೃತಿಯೆಂದು ಹೆಸರು. ಇಂತಹ ಉನ್ನತವಾದ ಸಂಸ್ಕೃತಿಯು ಕಾಠೇವಾಡದವರೆಗೂ ಪ್ರಚಾರವಾಗಿದ್ದಲ್ಲಿ ವ್ಯಾಪಾರಾದಿಗಳಿ೦ದ ಅದರೊಡನೆ ಸಂಪರ್ಕವು ಕರ್ಣಾಟಕಕ್ಕೆ ಆಗಿರಲಾರದೇ? ಈ ತಾಮ್ರಯುಗದವರು ಉಪಯೋಗಿಸುತ್ತಿದ್ದ ಹಸರುಕಲ್ಲು ಕರ್ಣಾಟಕದ ದಕ್ಷಿಣಾಂತ್ಯದಲ್ಲಿರುವ ನೀಲಗಿರಿಯಿಂದಲೂ, ಅವರ ಒಡವೆಗಳಿಗೆ ಉಪಯುಕ್ತವಾಗಿದ್ದ ಬಂಗಾರವು ಕನ್ನಡ ದೇಶದ ವಾಯವ್ಯ ಮೂಲೆಯ ಕೋಲಾರದ ಗಣಿಳಿ೦ದಲೋ, ರಾಯಚೂರ ಜಿಲ್ಲೆಯಲ್ಲಿರುವ ಹಟ್ಟಿಯ ಗಣಿಗಳಿಂದಲೊ ಬಂದಿರಬೇಕೆಂದು ಊಹಿಸಲಾಗಿದೆ. ಹೀಗಿದ್ದ ಪಕ್ಷದಲ್ಲಿ ವ್ಯಾಪಾರದಿಂದ ಬಂದ ಆ ಪ್ರಾಚೀನ ಕಾಲದ ಸಾಮಗ್ರಿಗಳು ಏನಾದರೂ ಕರ್ಣಾಟಕದಲ್ಲಿ ದೊರತಿವೆಯೇ? ಈ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಭೂಶೋಧನೆಯಿಂದಲೇ ಸಾಧ್ಯ.

ಲೋಹಯುಗ:- ಉತ್ತರ ದೇಶದ ಪೂರ್ವ ಚರಿತ್ರೆಯೆಂಬ ಅಂಧಕಾರದಲ್ಲಿ ಎಲ್ಲಿಯೊ ಒಂದು ನಕ್ಷತ್ರದ ಹಾಗೆ ಮಿನುಗುತ್ತಿರುವುದು. ಕ್ರಿ. ಪೂ. ಸು. ೨೨೫೦ಕ್ಕೆ ಇದರ ಕಥೆ ಮುಗಿಯಿತೆಂದೂ, ಅಲ್ಲಿಂದ ಮುಂದಕ್ಕೆ ಆರ್ಯರ ಆಗಮನದ ಹೊರತಾಗಿ ಮೌರ್ಯರ ಕಾಲದವರೆಗೂ ಯಾವ ಪ್ರಾಕ್ತನ ವಸ್ತುಗಳೂ ದೊರೆತಿಲ್ಲವೆಂದೂ ಇತಿಹಾಸಕಾರರು ಶೋಕಿಸುತ್ತಾರೆ. ಈ ಕಾಲದ ಕುರುಹುಗಳಿಗೆ ನಾವು ದಕ್ಷಿಣದ ಕಡೆಗೆ ತಿರುಗಿ ನೋಡಿದಲ್ಲಿ ಕರ್ಣಾಟಕದಿಂದ ಉಪಯುಕ್ತವಾದ ಉತ್ತರವು ದೊರೆಯುತ್ತದೆ. ಈಚೆಗೆ ಕರ್ಣಾಟಕದಲ್ಲಿ ನಡೆದಿರುವ ಭೂಶೋಧನೆಯಿಂದ ಶಿಲಾಯುಗದಿಂದ ಲೋಹಯುಗವು ಹೊರಟ ವಿಚಾರವೂ ಆ ಕಾಲದ ಕೌಶಲ್ಯದ ಹಲಕೆಲವು ವಿಷಯಗಳೂ ತಿಳಿಯಬರುತ್ತವೆ.

ಭೂಶೋಧನೆ:- ಇವೆಲ್ಲಕ್ಕೂ ಮುಖ್ಯವಾದ ಮಾರ್ಗವು ಭೂಶೋಧನೆ. ಇದು ಪುರಾತತ್ವ ಶಾಸ್ತ್ರಜ್ಞರ ಹೊಸದಾರಿ. ಇದರ ವಿಚಾರವನ್ನು ಸ್ವಲ್ಪ ಮಟ್ಟಿಗೆ ವಿವರಿಸುತ್ತೇನೆ. ಪ್ರಾಚೀನ ಕಾಲದ ನಗರಗಳೂ, ಗ್ರಾಮಗಳೂ, ಇತರ ಕುರುಹುಗಳೂ ದಿಣ್ಣೆಯ ಮೇಲಿದ್ದರೆ ಬಿಸಿಲು ಮಳೆಗಾಳಿಗಳ ಹೊಡೆತದಿಂದ ಕೊಚ್ಚಿ ಹೋಗುವುದುಂಟು. ಹಾಗಿಲ್ಲದೆ ಹಳ್ಳಗಳಲ್ಲೂ, ಇತರ ನಿಮ್ನ ಪ್ರದೇಶಗಳಲ್ಲಿ ಇದ್ದರೆ ದಿಣ್ಣೆಯಿಂದ ಕೊಚ್ಚಿಬಂದ ಮಣ್ಣಿನಿಂದ ಮುಚ್ಚಿ ಹೋಗುವುದುಂಟು. ಕೊಚ್ಚಿ ಹೋದ ಪದಾರ್ಥಗಳು ಸ್ವಸ್ಥಾನವನ್ನು ಬಿಟ್ಟು ನಮ್ಮ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಹೋಗುವುವು. ಆದರೆ ಮಣ್ಣಿನಿಂದ ಮುಚ್ಚಿಹೋದ ಪದಾರ್ಥಗಳೂ ನಗರಗಳೂ ತಮ್ಮ ತಮ್ಮ ಸ್ಥಾನಗಳಲ್ಲೇ ನಿಂತು ಭೂಗತವಾಗಿರುವವು. ಇವು ಸಾಮಾನ್ಯವಾಗಿ ಭೂಮಿಯ ಮೇಲೆ ಕಾಣವು. ಶಾಸ್ತ್ರಜ್ಞರು ಇವುಗಳು ಹೂಳಿರುವ ಸ್ಥಳಗಳನ್ನು ಕೆಲವು ಕುರುಹುಗಳಿಂದ ಕಂಡುಹಿಡಿಯುವರು. ನೆಲದ ಮೇಲೆ ಒಡೆದುಹೋದ ಬೋಕೆಗಳೊ, ಇಟ್ಟಿಗೆಯ ಚೂರುಗಳೊ ಅಥವಾ ಇತರ ವಿಧವಾದ ಮನುಷ್ಯ ಕೃತವಾದ ಪದಾರ್ಥಗಳೂ ಅಲ್ಲಲ್ಲಿ ಬಿದ್ದಿರುವುದನ್ನು ನೋಡಿ ಅವುಗಳನ್ನು ಪರೀಕ್ಷಿಸುವರು. ಅವುಗಳು ನಮ್ಮ ಕಾಲದವುಗಳೇ ಆಗಿ ಆ ಸನ್ನಿವೇಶದಲ್ಲೇ ಬಿದ್ದಿರುವುದಕ್ಕೆ ಬೇರೆ ಕಾರಣವು ಗೋಚರವಾಗದೆ ಭೂಮಿಯ ಒಳಗಣಿ೦ದಲೇ ಹೊರಬಿದ್ದ ಎಂದು ಶಾಸ್ತ್ರಜ್ಞರ ದೃಷ್ಟಿಗೆ ತೋರಿದರೆ ಆಗ ಆ ಭೂಮಿಯು ಶೋಧಿಸಲು ತಕ್ಕುದೆಂದು ತಿಳಿಯಬೇಕು. ಈ ಶೋಧನ ಕಾರ್ಯವೂ ಕೂಡ ಮೊದಲು ಅಲ್ಲಲ್ಲಿ ತೆಗೆದ ಹಳ್ಳಗಳಿಂದಲೂ, ತರುವಾಯ ಬಚ್ಚಲುಗಳ ಮೂಲಕವು ಕಡೆಗೆ ನಿರ್ದಿಷ್ಟ ಪ್ರದೇಶದಲ್ಲಿ ಅಗೆದ ಉತ್ಖಾತಗಳಿಂದಲೂ ಮುಂದುವರಿಯುತ್ತವೆ. ಈ ಅಗೆಯುವ ಕೆಲಸವೂ ಕೂಡ ಬಹಳ ಜಾಗರೂಕತೆಯಿಂದ ನೆಲದಲ್ಲಿ ದೊರೆತ ಪದಾರ್ಥಗಳನ್ನು ಒಡೆಯದೆ ಹಾಳುಮಾಡದೆ, ಪದರ ಪದರವಾಗಿ ಮಣ್ಣನ್ನು ತೆಗೆಯುತ್ತ ನಕ್ಷೆಗಳ ಮುಖಾಂತರವೂ, ಫೋಟೋಗಳ ಮುಖಾಂತರವೂ ಪದಾರ್ಥಗಳು ದೊರೆಯುವ ಸ್ಥಳಗಳನ್ನೂ, ಅದರ ಕೂಡ ದೊರೆತ ಪದಾರ್ಥಗಳನ್ನೂ, ದೊರೆತ ರೀತಿಯನ್ನೂ ಗುರುತು ಮಾಡುತ್ತ ಪುಸ್ತಕಗಳಲ್ಲಿ ಬರೆದುಕೊಳ್ಳುತ್ತ ಶಾಸ್ತ್ರಜ್ಞರು ನಡೆಸುತ್ತಾರೆ. ಹೀಗೆ ದೊರೆತ

ಪದಾರ್ಥಗಳನ್ನು ಕಾಪಾಡಿ ಪರಿಷ್ಕರಿಸಿ ಪರೀಕ್ಷಿಸಿ ಇತರ ಕಡೆಗಳಲ್ಲಿ ದೊರೆತ ಪದಾರ್ಥಗಳೊಂದಿಗೆ ಹೋಲಿಸಿ ವಿಮರ್ಶಿಸಿ ಐತಿಹಾಸಿಕ ದೃಷ್ಟಿಯಿಂದ ಅವುಗಳ ಪ್ರಯೋಜನವನ್ನು ಚರ್ಚಿಸಿ ಪ್ರಕಟಿಸುತ್ತಾರೆ. ಈ ರೀತಿಯ ಶಾಸ್ತ್ರೀಯ ಭೂ ಶೋಧನೆಯು ಕರ್ಣಾಟಕದಲ್ಲಿ ಇತ್ತೀಚೆಗೆ ಪ್ರಾರಂಭವಾಯಿತು. ಇದನ್ನು ೧೯೨೮ ರಲ್ಲಿ ಮೊದಲು ಮಾಡಿದವರು ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆಯ ಶಾಖೆಯವರೂ, ಮೈಸೂರು ಸರಕಾರದ ಶಾಸನ ಶಾಖೆಯವರೂ. ಇವರ ಸಹಾಯದಿಂದ ಶಾಸ್ತ್ರೀಯ ರೀತಿಯಲ್ಲಿ ಶೋಧನೆ ಮಾಡಲು ಅವಕಾಶವನ್ನು ದೊರಕಿಸಿಕೊಟ್ಟುದಕ್ಕಾಗಿ ಮೈಸೂರಿನ ಶ್ರೀ ಮನ್ಮಹಾರಾಜರವರಿಗೆ ನಾನು ಎಷ್ಟೊಂದು ಕೃತಜ್ಞನಾಗಿದ್ದರೂ ತೀರದು.

ಬ್ರಹ್ಮಗಿರಿಯಲ್ಲಿಯ ಅಶೋಕನ ಧರ್ಮ ಶಾಸನ (ಪು. ೨೧)

ಪೂರ್ವಚರಿತ್ರೆಯ ನಿವೇಶನಗಳು

ನನಗೆ ಹಿಂದೆಯೇ ಭಾರತ ಸರಕಾರದ ಭೂಶೋಧನ ಶಾಖೆಯ ಬ್ರೂಸ್‌ಫುಟ್ ಎಂಬವರು ಭಾರತವನ್ನೆಲ್ಲಾ ಸುತ್ತಿ ನೋಡಿ ಇಲ್ಲಿನ ಪ್ರಾಚೀನ ನಿವೇಶನಗಳನ್ನು ಗೊತ್ತು ಮಾಡಿ ಮದ್ರಾಸ್ ಪ್ರದರ್ಶನ ಶಾಲೆಯಿಂದ ಪ್ರಕಟವಾದ ಪುಸ್ತಕದಲ್ಲಿ ಅವುಗಳ ವಿಚಾರವನ್ನು ಸ್ವಲ್ಪಮಟ್ಟಿಗೆ ಚರ್ಚಿಸಿರುವರು. ಪ್ರಾಚೀನ ನಿವೇಶನಗಳನ್ನು ನಾನು ಹುಡುಕುತ್ತ ಬಂದ ಕಾಲದಲ್ಲಿ ಅವರ ಕಣ್ಣಿಗೆ ಬೀಳದ ಅನೇಕ ನಿವೇಶನಗಳು ನನಗೆ ದೊರೆತವು. ಇವುಗಳಲ್ಲಿ ಬಹುಭಾಗವು ಚರಿತ್ರೆಯಲ್ಲಿ ಈಗ ಪ್ರಸಿದ್ದವಾಗಿರುವ ರಾಜ್ಯಗಳ ಮತ್ತು ಊರುಗಳ ಸಂಬಂಧಿಗಳಾಗಿ ಕೆಲವು ಆದಿಚರಿತ್ರೆ ಮತ್ತು ಪೂರ್ವ ಚರಿತ್ರೆಗಳಿಗೆ ಸಂಬಂಧಪಟ್ಟ ವುಗಳಾಗಿಯೂ ಇವೆ. ಇವುಗಳನ್ನು ಪರೀಕ್ಷಿ ಸುತ್ತ ಭೂಶೋಧನೆಗೆ ಸರಿಯಾದ ಭೂಮಿಯು ಯಾವುದೆಂದು ನಾನು ವಿಚಾರ ಮಾಡಿದೆ. ಮತ್ತು ಇವುಗಳಲ್ಲಿ ಪೂರ್ವ ಚರಿತ್ರೆಗೆ ಸಂಬಂಧಪಟ್ಟ ಮೂರನ್ನು ಮೈಸೂರು ರಾಜ್ಯದ ಎಲ್ಲೆ ಯೊಳಗೆ ಗೊತ್ತು ಮಾಡಿದೆವು. ಇವು ಯಾವುವೆಂದರೆ :

೧. ಕೋಲಾರದ ಬಂಗಾರದ ಗಣಿಗಳ ಸಮೀಪದಲ್ಲಿರುವ ಹುನಗುಂದ
ಪಟ್ಟಣ
೨. ಚಿತ್ರದುರ್ಗದ ಪಕ್ಕದಲ್ಲಿರುವ ಚಂದ್ರವಳ್ಳಿ ಮತ್ತು
೩. ಅಶೋಕನ ಶಾಸನಗಳ ಬಳಿ ಇರುವ ಬ್ರಹ್ಮಗಿರಿ

ಇವುಗಳಲ್ಲಿ ಹುನಗುಂದವು ಇನ್ನೂ ಶೋಧಿತವಾಗಿಲ್ಲ. ಬ್ರಹ್ಮಗಿರಿಯಲ್ಲಿ ಶೋಧನೆಯು ಆರಂಭವಾಗಿ ಅಲ್ಪ ಸ್ವಲ್ಪ ಕೆಲಸವು ಮಾತ್ರ ನಡೆದಿದೆ. ಚಂದ್ರವಳ್ಳಿಯಲ್ಲಿ ಶೋಧನ ಕಾರ್ಯವು ಚೆನ್ನಾಗಿ ನಡೆದು ಅನೇಕ ಹೊಸ ವಿಷಯಗಳು ಹೊರ ಬಿದ್ದಿವೆ. ಬ್ರಹ್ಮಗಿರಿಯ ಶೋಧನೆಯಿಂದ ದೊರೆತ ಕೆಲವು ವಿಷಯಗಳನ್ನು ಈ ಉಪನ್ಯಾಸದಲ್ಲಿ ಹೇಳಿ ಚಂದ್ರವಳ್ಳಿಯ ಭೂಶೋಧನೆಯ ವಿಚಾರವನ್ನು ಮುಂದಿನ ಉಪನ್ಯಾಸದಲ್ಲಿ ಹೇಳಲು ಬಯಸುತ್ತೇವೆ.

ಬ್ರಹ್ಮಗಿರಿ:- ಬ್ರಹ್ಮಗಿರಿಯು ಬಳ್ಳಾರಿಯಿಂದ ದಕ್ಷಿಣಕ್ಕೆ ಸುಮಾರು ಇಪ್ಪತ್ತೈದು ಮೈಲಿ ದೂರದಲ್ಲಿ ಮೈಸೂರು ರಾಜ್ಯದ ಉತ್ತರ ಮೂಲಿಯಲ್ಲಿ ಸೇರಿದೆ. ಇದರ ಸುತ್ತುಮುತ್ತಲಿರುವ ಬೆಟ್ಟಗಳಲ್ಲಿ ಮೌರ್ಯ ಚಕ್ರವರ್ತಿಯಾದ ಅಶೋಕನ ಒಂದನೆಯ ಅಲ್ಪ ಶಿಲಾಶಾಸನದ (Minor Rock Edict No: 1) ಮೂರು ನಕಲುಗಳು ಕೆತ್ತಲ್ಪಟ್ಟಿವೆ. ಇವುಗಳಲ್ಲಿ ಅಶೋಕನ ದಕ್ಷಿಣದ ಉಪರಾಜ ಧಾನಿಯಾದ ಸುವರ್ಣಗಿರಿಯಿಂದ ದಕ್ಷಿಣಾಗ್ರ ಪ್ರಾಂತ್ಯದ ಮುಖ್ಯ ಪಟ್ಟಣವೆಂದು ತೋರುವ ಇಸಿಲ ಎಂಬಲ್ಲಿಗೆ ರಾಜಾಜ್ಞೆಯು ಬಂದುದಾಗಿ ಹೇಳಿದೆ. ಇದರಿಂದ ಮೌರ್ಯರ ಕಾಲದ ಇಸಿಲಪುರವು ಈ ಶಾಸನಗಳ ಸಮೀಪದಲ್ಲಿಯೇ ಇರಬೇಕೆಂದು ಊಹಿಸಿ ಚೆನ್ನ ಹಗರಿ ಹೊಳೆಯ ಪಕ್ಕದಲ್ಲಿ ನಾನು ಹುಡುಕಿದೆನು. ವಿಸ್ತಾರವಾದ ಪಟ್ಟಣದ ಗುರುತುಗಳು ಅಶೋಕನ ಬ್ರಹ್ಮಗಿರಿ ಶಾಸನದ ಎರಡು ಪಕ್ಕಗಳಲ್ಲಿ ದೊರೆಯಿತು. ಈ ಪಟ್ಟಣದ ಎಲ್ಲೆಗಳನ್ನು ಗೊತ್ತ ಹಚ್ಚಿ ನೆಲದಮೇಲೆ ದೊರೆತ ಪದಾರ್ಥಗಳನ್ನು ಸಂಗ್ರಹಿಸಲು, ನನಗೆ ಗಾಬರಿಯನ್ನು ಹುಟ್ಟಿಸುವಂತೆ ಮೌರ್ಯರ ಕಾಲದ ಪದಾರ್ಥಗಳ ಜೊತೆಯಲ್ಲಿ ಅದಕ್ಕಿಂತಲೂ ಪ್ರಾಚೀನವಾದ ಲೋಹ ಪದಾರ್ಥಗಳು, ಮಡಕೆ ಕುಡಿಕೆಗಳು, ಇನ್ನೂ ಹಿಂದಣ ಕಾಲಕ್ಕೆ ಸಂಬಂಧಪಟ್ಟ ನವಶಿಲಾಯುಗದ ಮತ್ತು ಅಲ್ಪ ಶಿಲಾಯುಗದ ಆಯುಧಗಳು ದೊರೆತವು. ಇವುಗಳ ನಿಜಾಂಶವನ್ನು ನಿರ್ಧರಿಸುವದಕ್ಕಾಗಿ ಹಲಕೆಲವು ಗುಂಡಿಗಳನ್ನು ಅಗೆಸಿ ನೋಡಿದೆನು. ಒಂದೆರಡು ಗುಂಡಿಗಳಲ್ಲಿ ಸುಮಾರು ೧೪, ೧೮ ಅಡಿಗಳ ಆಳದವರೆಗೂ ಕಡಿಸಿ ನೋಡಲಾಯಿತು. ಮಣ್ಣಿನ ಪದರುಗಳನ್ನು ನಿರ್ಧರಿಸಿ ಅವುಗಳಲ್ಲಿ ದೊರೆತ ಬೋಕೆಗಳನ್ನೂ, ಮಣಿಗಳನ್ನೂ, ಎಲುಬುಗಳನ್ನೂ, ಆಯುಧಗಳನ್ನೂ ಪರೀಕ್ಷಿಸಿ ನೋಡಿದೆವು. ಮತ್ತು ಆ ನಿವೇಶನದ ಸಮೀಪದಲ್ಲಿ ಕಾಣ ಬರುತ್ತಿದ್ದ ನೂರಾರು `ಮೌರ್ಯರ ಮನೆ’ ಗಳಲ್ಲಿ (Cromಲechs) ಕೆಲವನ್ನು ಅಗೆಸಿ ನೋಡಿದೆನು. ಈ ವಿಷಯವನ್ನು ಇಲ್ಲಿ ವಿವರಿಸದೆ ಇವರ ಫಲಿತಾಂಶವನ್ನು ಮಾತ್ರ ಇಲ್ಲಿ ಸಂಕ್ಷೇಪವಾಗಿ ತಿಳಿಸುತ್ತೇನೆ.

ಫಲಿತಾಂಶಗಳು
೧. ಅತ್ಯಂತ ಪ್ರಾಚೀನ ಕಾಲದಲ್ಲಿ ಈಗಿನ ಕನ್ನಡ ದೇಶದಲ್ಲಿ ಅಂದರೆ ಸುಮಾರು ಈಗ್ಗೆ ೫೦,೦೦೦ ದಿಂದ ೧೫,೦೦೦ ವರ್ಷಗಳ ಕೆಳಗಿನ ವರೆಗೆ ಪೂರ್ವ ಶಿಲಾಯುಗದ ಕೌಶಲ್ಯವನ್ನುಳ್ಳ ಕಾಡುಜನರು ಕರ್ಣಾಟಕದಲ್ಲಿ ವಾಸವಾಗಿದ್ದರು.

Plate II

ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೧೬) : ಅಗಿದ ನಂತರ ಕಂಡುಬಂದ ಕಲ್ಲಿನ ಪೆಟ್ಟಿಗೆ, -ಪುಟ ೨೩

೨. ಕೆಲವು ಕಾಲದ ತರುವಾಯ ಅಂದರೆ ಸುಮಾರು ಹತ್ತು ಅಥವಾ ಎಂಟು ಸಾವಿರ ವರ್ಷಗಳ ಕೆಳಗೆ ಪುಟ್ಟ ಕಲ್ಲಿನ ಆಯುಧಗಳನ್ನೂ, ಕಲ್ಲಿನ ಚೂರಿ, ಸೂಜಿ, ಅ೦ಬಿನ ಅಲಗು ಮೊದಲಾದುವನ್ನು ಪ್ರಯೋಗಿಸುವ ಮತ್ತು ಯೂರೋಪ್ ಮೊದಲಾದೆಡೆಗಳಲ್ಲಿ ಇನ್ನೆಲ್ಲಿಯೂ ಕಾಣದ ಅಲ್ಪಶಿಲಾ ಕೌಶಲ್ಯವೊಂದು ಎಲ್ಲಿಂದಲೋ ಬಂದು ಇಲ್ಲಿ ಸೇರಿಕೊಂಡಿತು.

೩. ಈ ಅಲ್ಪಶಿಲಾಯುಗದಲ್ಲಿ ಜನರು ಮೊದಲು ಕಲ್ಲಿನ ಆಯುಧಗಳ ಮೊನೆಗಳನ್ನು ತಿಕ್ಕಿ ನಯಮಾಡುತ್ತಲೂ, ನಯಮಾಡಿದ ಸಣ್ಣ ಸಣ್ಣ ಆಯುಧಗಳನ್ನು ಉಪಯೋಗಿಸುತ್ತಲೂ ಬಂದರು. ಹೀಗಿರುವಲ್ಲಿ ನವಶಿಲಾಯುಗವು ಈಗ್ಗೆ ಸುಮಾರು ಆರೇಳು ಸಾವಿರ ವರ್ಷಗಳ ಕೆಳಗೆ ವೃದ್ಧಿಗೆ ಬಂದಿತು.

೪. ಈ ನವಶಿಲಾಯುಗದ ಕಡೆಯ ಕಾಲದಲ್ಲಿ ಎಲ್ಲಿಂದಲೋ ಅಲ್ಪ ಸ್ವಲ್ಪ ತಾಮ್ರವನ್ನುಪಯೋಗಿಸುವ ಪ್ರಾಯಶಃ ಹೊರಗಣಿಂದ ಬಂದ ಕೌಶಲ್ಯವೊಂದು ಕರ್ಣಾಟಕದಲ್ಲಿ ಕಾಣಿಸಿಕೊಂಡಿತು.

೫. ಸುಮಾರು ಇದೇ ಕಾಲದಲ್ಲಿಯೇ ಅಂದರೆ ಈಗ್ಗೆ ಐದು ಸಾವಿರದಿಂದ ನಾಲ್ಕು ಸಾವಿರ ವರ್ಷಗಳ ಕೆಳಗೆ ಇತರ ದಾಕ್ಷಿಣಾತ್ಯರಂತೆ ಕನ್ನಡಿಗರು ಕಬ್ಬಿಣದ ಉಪಯೋಗವನ್ನು ಕಂಡುಹಿಡಿದರು.

೬. ಸು. ಕ್ರಿ. ಪೂ. ೨೦೦೦ ದ ವೇಳೆಗೆ ಕಬ್ಬಿಣದ ಉಪಯೋಗವು ವೃದ್ಧಿಯಾಗಿ ಕಲ್ಲಿನ ಸ್ಥಾನಕ್ಕೆ ಕಬ್ಬಿಣವು ಬಂದು ಕರ್ಣಾಟಕದ ಲೋಹಯುಗವು ಪ್ರಾರಂಭವಾಯಿತು. ಈ ಕಾಲದಲ್ಲಿ ಕುಂಬಾರರು ಚಕ್ರದ ಸಹಾಯದಿಂದ ಕರಿಯ ಕೆಂಪು ಮತ್ತು ಕಂದು ಬಣ್ಣಗಳನ್ನುಳ್ಳ ಮತ್ತು ಹೊಳಪುಳ್ಳ ಮಡಕೆ ಕುಡಿಕೆಗಳನ್ನು ಮಾಡಹತ್ತಿದರು. ನೀರು ಕುಡಿಯುವ ಪಾತ್ರೆಗಳ ಮೇಲೆ ಬಿದಿರುಕುಕ್ಕೆ ಗಳನ್ನನುಸರಿಸಿ ಬಿಳಿಯ ಮತ್ತು ಕೆಂಪು ಚಿತ್ರಗಳಿಂದ ಚಿತ್ರಗಳನ್ನು ಬರೆದರು. ಸತ್ತವರಿಗಾಗಿ ಕಲ್ಲು ಚಪ್ಪಡೆಗಳಿ೦ದ ಮನೆಗಳನ್ನು ಮಾಡಿ ಅವುಗಳ ಮೇಲೆ ದೊಡ್ಡ ಮತ್ತು ದಪ್ಪ ಚಾವಣಿ ಚಪ್ಪಡಿಗಳನ್ನು ಹೇರಿ ಸುತ್ತಲೂ ಬಂಡೆಗಳಿ೦ದ ನೆಲ ಕೋಟೆಯನ್ನು ಕಟ್ಟಿ ಈಗ ಮೌರ್ಯರ ಮನೆಗಳೆಂದು ಕರೆಯಲ್ಪಡುವ ಕಟ್ಟಡಗಳನ್ನು ಮಾಡುತ್ತಿದ್ದರು.

೭. ಈ ಲೋಹಯುಗದ ಕೌಶಲ್ಯವು ಚೆನ್ನಾಗಿ ವೃದ್ಧಿಗೆ ಬಂದ ಕಾಲದಲ್ಲಿ ಅ೦ದರೆ ಸುಮಾರು ಕ್ರಿ. ಪೂ. ೩೦೦ ರ ವೇಳೆಗೆ ಬೌದ್ಧ ಮತವೂ ಮೌರ್ಯ ಚಕ್ರಾಧಿಪತ್ಯವೂ ಕರ್ಣಾಟಕಕ್ಕೆ ಹದುವು.

೮. ಕ್ರಿ. ಪೂ. ೩೦೦ ರರಿಂದ ಸುಮಾರು ೨೦೦ ರ ವರೆಗೆ ಕರ್ಣಾಟಕದ ಸ್ಥಿತಿಯು ಹೇಗಿತ್ತೆಂಬುದನ್ನು ಮೈಸೂರಿನ ಇಸಿಲ, ನೈಜಾಮೀ ಪ್ರಾಂತ್ಯದ ಮಹಾ ಸಂಘಿ (Masagi) ಮೊದಲಾದ ಕಡೆಗಳಲ್ಲಿ ಭೂಶೋಧನೆಯಿಂದ ಸಂಗ್ರಹಿಸ ಬೇಕಾಗಿದೆ.

೯. ಕ್ರಿ. ಪೂ. ೨೦೦ ರ ರಿ೦ದ ೩೦೦ ರ ವರೆಗೆ ಕರ್ನಾಟಕದ ಸ್ಥಿತಿ ಹೇಗಿತ್ತೆಂಬುದನ್ನು ಬ್ರಹ್ಮಗಿರಿಯಿಂದ ನಾವು ಅರಿಯಲಾರೆವು. ಇವು ಚಂದ್ರವಳ್ಳಿಯ ಭೂಶೋಧನೆಯಿಂದ ನಮಗೆ ವ್ಯಕ್ತವಾಗುತ್ತವೆ.

೧೦. ಶಾತವಾಹನರೂ ಮೌರ್ಯರೂ ವೃದ್ದಿ ಯಾಗುವದಕ್ಕೆ ಹಿಂದೆಯೇ ಸಾವಿರಾರು ವರ್ಷಗಳ ಕಾಲ ದಖನ್ನಿನ ಲೋಹಯುಗವು ಏಳಿಗೆಯಲ್ಲಿದ್ದು ಕರ್ಣಾಟಕದಲ್ಲಿ ಅನೇಕ ಊರುಗಳೂ, ಹೆಚ್ಚಾದ ಕೌಶಲ್ಯವೂ ಹುಟ್ಟಿ ಬೆಳೆದಿದ್ದುವು. ಈ ನೂರಾರು ವರ್ಷಗಳ ಕಾಲದಲ್ಲಿ ದಕ್ಷಿಣ ದೇಶದ ಸ್ಥಿತಿಯು ಹೇಗಿತ್ತೆಂಬುದನ್ನು ಭೂಶೋಧನೆಯಿಂದ ಇನ್ನೂ ವಿವರವಾಗಿ ನಿರ್ಧರಿಸಬಹುದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣದ ಚೈತನ್ಯವನು ಜೀವನ ಚೈತನ್ಯವೆನಬಹುದೇ?
Next post ದುರ್‍ಲಭಯುಕ್ತಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys