Home / ಕಥೆ / ಜನಪದ / ಕೊಂಡು ತಂದ ಮಾತು

ಕೊಂಡು ತಂದ ಮಾತು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಚಿಕ್ಕ ಹಳ್ಳಿಯೊಂದರಲ್ಲಿ ಸಮಗಾರ ಗಂಡಹೆಂಡಿರಿದ್ದರು. ಗಂಡನು ಹಳೆಯ ಕಾಲ್ಮರೆಗಳನ್ನು ಗಟ್ಟಿಮಾಡಿಕೊಡುವ ಕೆಲಸಮಾಡುತ್ತಿದ್ದನು. ಇಡಿಯವಾರ ದುಡಿದರೂ ಅವನಿಗೆ ಒಂದು ರೂಪಾಯಿಗಿಂತ ಹೆಚ್ಚು ಗಳಿಕೆ ಆಗುತ್ತಿದ್ದಿಲ್ಲ.

ನೆರೆಯೂರಿನ ಸಂತೆಗೆ ಹೋಗಿ ಉಪ್ಪು – ಮೆಣಸಿನಕಾಯಿ ಮೊದಲಾದವುಗಳನ್ನು ಕೊಂಡುತರುವದಕ್ಕಾಗಿ ಹೆಂಡತಿಯು ಹನ್ನರಡಾಣೆ ಹಣವನ್ನು ಗಂಡನ ಕೈಗಿತ್ತಳು. ಹಸಿವೆಯಾದಾಗ ಉಣ್ಣಲೆಂದು ಒಂದೆರಡು ರೊಟ್ಟಿಗಳನ್ನೂ ಕಟ್ಟಿದಳು.

ಸಮಗಾರನು ದಾರಿ ಹಿಡಿದು ಸಾಗುತ್ತಿರಲು ಅವನಿಗೆ ಕುದುರೆಯ ಮೇಲೆ ಕುಳಿತು ಸಂತೆಗೆ ಹೊರಟವನು ಚೊತೆಯಾದನು. ಅವನನ್ನು ಕುರಿತು ಸಮಗಾರನು – “ಅಪ್ಪಾ, ಏನಾದರೊಂದು ಮಾತು ಹೇಳಿರಿ. ಅಂದರೆ ದಾರಿಸಾಗುತ್ತದೆ” ಎಂದನು.

“ಮಾತೆಂದರೆ ಸುಮ್ಮನೇ ಬರುವವೇ ? ಮಾತಿಗೆ ರೊಕ್ಕ ಬೀಳುತ್ತವೆ” ಎಂದನು ಕುದುರೆಯವನು.

“ಒಂದು ಮಾತಿನ ಬೆಲೆ ಎಷ್ಟು?” ಸಮಗಾರನ ಪ್ರಶ್ನೆ.

“ನಾಲ್ಕಾಣೆಗೊಂದು ಮಾತು.”

ಹೆಂಡತಿ ಸಂತೆಗಾಗಿ ಕೊಟ್ಟ ಹನ್ನರಡಾಣೆಗಳಲ್ಲಿ ನಾಲ್ಕಾಣೆಕೊಟ್ಟು ಒಂದು ಮಾತು ಕೊಂಡರಾಗುತ್ತದೆ. ಕೊಂಡಮಾತು ಎಂಥವಿರುತ್ತವೆಯೋ ನೋಡೋಣ – ಎಂದುಕೊಂಡು, ಕಿಸೆಯೊಳಗಿನ ನಾಲ್ಕಾಣೆ ರೊಕ್ಕ ತೆಗೆದು ಕುದುರೆಯವನ ಕೈಯಲ್ಲಿಟ್ಟು – “ಒಂದು ಮಾತು ಹೇಳಿರಿ” ಅಂದನು.

“ಸತ್ತವನನ್ನು ಹೊತ್ತು ಹಾಕಬೇಕು.”

“ಇಷ್ಟಕ್ಕೇ ನಾಲ್ಕಾಣೆ ಕೊಟ್ಟಂತಾಯಿತು. ಆಗಲಿ. ಇನ್ನೊಂದು ಮಾತು ಹೇಳಿ. ಇಕೊಳ್ಳಿರಿ, ನಾಲ್ಕಾಣೆ” ಸಮಗಾರನು ಅನ್ನಲು “ಸರಕಾರದ ಮುಂದೆ ಸುಳ್ಳು ಹೇಳಬಾರದು” ಇದು ಕುದುರೆಯವನು ಹೇಳಿದ ಎರಡನೇಮಾತು. ಸಮಗಾರನಿಗೆ ಅನಿಸಿತು – “ಇನ್ನುಳಿದ ನಾಲ್ಕಾಣೆಯಿಂದ ಸಂತೆಯಲ್ಲಿ ಏನುಕೊಳ್ಳಲಿಕ್ಕಾಗುತ್ತದೆ? ಇನ್ನೊಂದು ಮಾತನ್ನೇ ಕೊಂಡರಾಯಿತು” ಕುದುರೆಯವನಿಗೆ ಮತ್ತೆ ನಾಲ್ಕಾಣೆಕೊಟ್ಟು ಮೂರನೇ ಮಾತು ಕೇಳಿದನು-

“ಹೆಂಡತಿಯ ಮುಂದೆ ನಿಜ ಹೇಳಬಾರದು” ಇದೇ ಆತನು ಹೇಳಿಕೊಟ್ಟ ಮೂರನೇಮಾತು. ಸುಮಗಾರನಿಗೆ ಸಂತೆಯಲ್ಲಿ ಮಾಡಬೇಕಾದ ಯುವಕೆಲಸವೂ ಇರಲಿಲ್ಲ,- ನೇರವಾಗಿ ಹಳ್ಳಕ್ಕೆ ಹೋಗಿ ಹೆಂಡತಿಕಟ್ಟಿಕೊಟ್ಟ ಎರಡು ರೊಟ್ಟಿಗಳನ್ನು ತಿಂದು ಊರ ಚಾವಡಿ ಮುಂದಿನ ಕಟ್ಟಿಯಮೇಲೆ ಕುಳಿತುಕೊಂಡನು. ಅ ಅಷ್ಟರಲ್ಲಿ ಓಲೆಕಾರನು ಬಂದು – “ನಿನ್ನನ್ನು ಗೌಡರು ಕರೆಯುತ್ತಾರೆ” ಎನ್ನಲು ಸಮಗಾರನು ಗೌಡನ ಬಳಿಗೆ ಹೋದನು. ಗೌಡ ಹೇಳಿದನು ಆತನಿಗೆ – “ಇಗೋ, ಇಲ್ಲಿ ಯಾವ ಊರಿನವನೋ ಏನೋ, ಮಲಗಿಕೊಂಡಲ್ಲಿಯೇ ಸತ್ತಿದ್ದಾನೆ. ಆತನನ್ನು ಹೊತ್ತೊಯ್ದು ಹುಗಿದು ಬಾ, ಎರಡು ರೂಪಾಯಿ ಕೊಡುತ್ತೇನೆ.”

ಸಮಗಾರನಿಗನಿಸಿತು – ನಾಲ್ಕಾಣೆಗೆ ಕೊಂಡ ಒಂದು ಮಾತು ಎರಡು ರೂಪಾಯಿ ಗಳಿಸಿಕೊಡುತ್ತಿರುವಾಗ ಒಲ್ಲೆನೆನ್ನಬಾರದು. ಗೌಡನಿಂದ ಎರಡು ರೂಪಾಯಿ ಇಸಗೊಂಡು ಮಲಗಿದವನ ಬಳಿಗೆ ಹೋಗಿ, ಅವನನ್ನು ಎತ್ತಿ ಕುಳ್ಳಿರಿಸುವಷ್ಟರಲ್ಲಿ ಒಂದು ಹಮ್ಮಿಣಿಯೇ ಸಿಕ್ಕಿತು. ಅದನ್ನು ಭದ್ರವಾಗಿರಿಸಿಕೊಂಡು ಹೆಣವನ್ನು ಹೊತ್ತು ಹುಗಿದುಬಂದನು ಸಂತೆಗೆ.

ಜೀವ ಬೇಡಿದ್ದನ್ನು ಮೊದಲು ಕೊಂಡು ತಿಂದು, ಆ ಬಳಿಕ ಒಂದು ಕುದುರೆಯನ್ನು ಕೊಂಡು ಅದರ ಮೇಲೆ ಕುಳಿತುಕೊಂಡು ತನ್ನೂರ ಹಾದಿ ಹಿಡಿದನು- ದಾರಿ ನೋಡುತ್ತ ಕುಳಿತ ಹೆಂಡತಿಯು ದೂರದಿಂದಲೇ ಗಂಡನನ್ನು ಗುರುತಿಸಿ, “ಕುದುರೆ ಎಲ್ಲಿಂದ ತಂದಿ” ಎಂದು ಕೇಳಿದಳು. “ತಡೆ, ಹೇಳುತ್ತೇನೆ” ಎಂದು ಕುದುರ ಕಟ್ಟಿ ಹಾಕಿ ಒಳಗೆ ಹೋಗಿ ಹೆಂಡತಿಯ ಕೈಯಲ್ಲಿ ಹಮ್ಮೀಣಿಕೊಟ್ಟು ತೆಗೆದು ಇಡಲು ಹೇಳಿದನು.

“ಇದೆಲ್ಲಿ ಸಿಕ್ಕಿತು ?” ಹೆಂಡತಿಯ ಪ್ರಶ್ನೆ.
‘ನೀನು ಕಟ್ಟಿಕೊಟ್ಟ ಎರಡು ರೊಟ್ಟಿಯಿಂದ ಹೊಟ್ಟಿತುಂಬಲಿಲ್ಲ. ಒಂದು ಎಕ್ಕಲೆ ಗಿಡದ ಬಳಿಗೆ ಹೋಗಿ ಅದರ ಹಾಲು ತೆಗೆದುಕೊಂಡು ಕುಳಿತಾಗ ಈ ಹಮ್ಮೀಣಿ ಕಾಣಿಸಿತು” ಎಂದು ಸುಳ್ಳುಸುಳ್ಳು ಹೇಳಿದೆನು. ಹೆಂಡತಿಯ ಮುಂದೆ ನಿಜ ಹೇಳಬಾರದು – ಎಂಬ ಮಾತು ಕೊಂಡಿದ್ದನಲ್ಲವೇ ?

ಹಮ್ಮೀಣಿಯ ಸಹಾಯದಿಂದ ಸುಮಗಾರಮ ಹೊಸಮನೆ ಕಟ್ಟಿಸಿದನು.
ಎತ್ತುಗಳನ್ನು ಕೊಂಡನು. ಗಾಡಿ ಮಾಡಿಸಿದನು. ಹಯನಿಗೆ ಎಮ್ಮೆ ಕಟ್ಟಿದನು.
ಹೆಂಡತಿಗೆ ಒಳ್ಳೊಳ್ಳೆಯ ಸೀರ ಕುಪ್ಪಸ ಕೊಟ್ಟನು. ಆಭರಣಗಳನ್ನು ತಂದನು..
ಅದನ್ನೆಲ್ಲ ಕಂಡು ನೆರೆಹೊರೆಯವರಿಗೆ ಆಶ್ಚರ್ಯವೆನಿಸಿತು.

ಸಮಾಗಾರನ ಹೆಂಡತಿಯನ್ನು ಒತ್ತಟ್ಟಿಗೆ ಕರೆದು, ನೆರೆಮನೆಯ ಹೆಣ್ಣುಮಗಳು ಕೇಳಿದಳು – “ಇದೆಲ್ಲ ಐಶ್ವರ್ಯ ಎಲ್ಲಿಂದ ಬಂತು ?”

“ಸಂತೆಗೆ ಹೋದಾಗ ನನ್ನ ಗಂಡನು ಹೊಟ್ಟೆತುಂಬಲಿಲ್ಲವೆಂದು ಎಕ್ಕೆಲೆಯ ಹಾಲು ಕುಡಿದು, ಕುಳಿತಾಗ ರೊಕ್ಕದ ಹಮ್ಮೀಣಿಯೇ ಕಾಣಿಸಿತಂತೆ” ಎಂದು
ಸಮಗಾರತಿ ಹೇಳಿದಳು.

ನೆರೆಮನೆಯ ಹೆಂಗಸು ತನ್ನ ಗಂಡನನ್ನು ಸಂತೆಗೆ ಕಳಿಸುವ ಎತ್ತುಗಡೆ ಮಾಡಿದಳು. ಎಕ್ಕೆಲೆಯ ಹಾಲು ಕುಡಿಯುವ ರಹಸ್ಯವನ್ನು ಹೇಳಿಕೊಟ್ಟಳು. ಕೈಯಲ್ಲಿ ಹನ್ನೆರಡಾಣೆ ರೊಕ್ಕ ಕೊಟ್ಟಳು.

ಶ್ರೀಮಂತನಾಗಬೇಕೆಂಬ ಹವ್ಯಾಸದಿಂದ ಹೆಂಡತಿಯ ಮಾತು ಕೇಳಿ, ಎಕ್ಕಲೆಯ ಹಾಲು ಕುಡಿದು, ಹೊಟ್ಟಿಯುರಿಯುವದೆಂದು ಮನೆಗೆ ಬಂದು ಆ ಗೃಹಸ್ಥನು ಸತ್ತೇಹೋದನು. ಆತನ ಹೆಂಡತಿ ಸಮಗಾರ್ತಿಯ ಮಾತು ಕೇಳಿದ್ದರಿಂದ ಹೀಗಾಯಿತೆಂದು ಬೊಬ್ಬಿಟ್ಟಳು.

ಸರ್ಕಾರದವರು ಸಮಗಾರ್ತಿಯನ್ನು ಕರೆಸಿ ಕೇಳಿದರೆ ಆಕೆ ತನ್ನ ಗಂಡನ ಹೆಸರು ಹೇಳಿದಳು. ಸಮಗಾರನನ್ನು ಕರೆಯಿಸಲು, ಸರ್ಕಾರದ ಮುಂದೆ ಸುಳ್ಳು ಹೇಳಬಾರದು – ಎಂಬ ಮಾತು ನೆನಪಿಗೆ ಬಂತು. ನಡೆದ ಸಂಗತಿಯನ್ನೆಲ್ಲ ಹೇಳಿದನು. ಹೆಂಡತಿಯ ಮುಂದೆ ನಿಜ ಹೇಳಬಾರದು – ಎಂಬ ಮಾತಿನ ಪ್ರಕಾರ ನಾನು ಆಕೆಗೆ ಎಕ್ಕಲೆಯ ಕಥೆಯನ್ನು ಹುಟ್ಟಿಸಿಕೊಂಡು ಹೇಳಿದೆನೆಂದೂ ನುಡಿದನು.

“ಎಕ್ಕಲೆಯ ಹಾಲು ಕುಡಿದರೆ ಹೊಟ್ಟೆಯಲ್ಲಿ ಉರುಪುಬಿಟ್ಟು ಸಾಯುವರು” ಎಂಬುದು ನಿನ್ನ ಗಂಡನಿಗೆ ತಿಳಿಯಲಿಲ್ಲವೇ ? ಹೋಗು. ಸಮಗಾರ್ತಿಯದಾಗಲಿ ಸಮಗಾರನದಾಗಲಿ ಏನೂ ತಪ್ಪಿಲ್ಲ. ನಿನ್ನದೇ ತಪ್ಪು. ಮಾಡಿದ್ದನ್ನು ಭೋಗಿಸು” ಎಂದರು ಸರ್ಕಾರದವರು ಆಕೆಗೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...