ಕ್ರಾಂತಿ ಎಂಬ ಫ್ಯಾಂಟಿಸಿ

ಕ್ರಾಂತಿ ಎಂಬ ಫ್ಯಾಂಟಿಸಿ

ಮೌನ…. ಸ್ಮಶಾನ ಮೌನ….. ಮೌನದ ಭೀಕರತೆಯ ಅರಿವಾಗುವುದು ಅದರ ಹಿಂದಿನ ಭೀಕರ ಗದ್ದಲದ ಪ್ರಚಂಡತೆಯ ಪ್ರಖರತೆಯಿಂದ ಮಾತ್ರವಂತೆ.

ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕವಂತೆ…. ಯಾರು ಹಾಗೆಂದವರು?
ಮಾವೋನೋ ಲೆನಿನನೋ?

ಕ್ಷಣದ ಹಿಂದೆ “ಢಮ್ಮ್…. ಢಮ್ಂ” ಎಂದಿದ್ದ ಮೆಷಿನ್‌ಗನ್ ಮೌನವಾಗಿದೆ. ‘ಅಯ್ಯೋ’ ಎಂದು ಕಿರುಚಿದ್ದವರೂ ತಣ್ಣಗಾಗಿದ್ದಾರೆ.

ಮುಂದಿನ ಗಳಿಗೆಯಲ್ಲಿ ಬಂದೂಕನ್ನು ಬಿಸಿಯಾಗಿಸಲು ಸಿದ್ಧವಾಗಲು ಲಂಬೋದರ ಸಿಗರೇಟನ್ನು ಸುಡುತ್ತಿದ್ದಾನೆ. ಅವನ ಬಾಯಿಯ ಸುರುಳಿ ಸುರುಳಿ ಬಿಳಿಮೋಡದಂತಹ ತಿಳಿಹೊಗೆ ಬಂದೂಕಿನ ಬಾಯಿಂದಲೇ ಬರುತ್ತಿರುವಂತೆ ಭಾಸವಾಗುತ್ತದೆ. ಆ ಹೊಗೆ ಅವನ ಮೆದುಳಿನ ನರ ನರಗಳಲ್ಲೂ, ರಕ್ತದ ಕಣ ಕಣಗಳಲ್ಲೂ ತೂರಿ ತೂರಿ ಮುನ್ನುಗ್ಗುತ್ತದೆ- ಯೋಚನೆ ಯೋಜನೆಗಳ ಜೊತೆ…. ಯೋಚನೆ ಯಾಕೆ ಇಷ್ಟು ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಂದೆನೆಂದಲ್ಲ; ಮುಂದೆ ಯಾರನ್ನು ಹೇಗೆ ಎಲ್ಲಿ ಕೊಂದರೆ ಸಂತೃಪ್ತಿ ಎಂದು. ಯೋಜನೆ ಮುಂದೆ ತಾನು ಏನಾಗಬೇಕಾಗಿದೆಯೆಂದು.

ಹೊಗೆ, ರಕ್ತ ಸೇರುತ್ತಿರುವಂತೆ, ಬಿಸಿಯಾದ ವಿಷದಂತೆ ನೆನಪು ಮಾಡುತ್ತದೆ. ರಾತ್ರಿ ಲಾನ್ ಬ್ರಿಜ್ ಮೇಲಿಟ್ಟಿದ್ದ ಬಾಂಬ್ ಇಷ್ಟು ಹೊತ್ತಿಗೆ ಸ್ಫೋಟಿಸಿರಬಹುದೇ ಎಂದು. ಹದಿನಾಲ್ಕು ಬೋಗಿಗಳುಳ್ಳ ಪ್ಯಾಸೆಂಜರ್ ಟ್ರೈನ್…. ಒಂದೂವರೆ ಫರ್ಲಾಂಗ್ ಉದ್ದದ ಹಸಿರು ಹುಲ್ಲಿನ ಬ್ರಿಜ್ ಐವತ್ತುನೂರು ಅಡಿಗಳ ಆಳದಲ್ಲಿ ಝರಿಯಂತೆ ಜುಳುಜುಳನೆ ಹರಿಯುವ ಸುಹಾಸಿನಿ ನದಿ… ಮಹಾರಾಣಿ ಎಕ್ಸ್‌ಪ್ರೆಸ್…. ಪ್ರಯಾಣಿಕರ ಅಟ್ಟಹಾಸದ ನಗು.

ಸಿಟ್ಟು ಲಂಬೋದರನ ಮಸ್ತಕದಿಂದ ನುಗ್ಗಿ ಬರುತ್ತದೆ. ಅಪಹಾಸ್ಯದ ನಗು….. ಅದೂ ಹೆಂಗಳೆಯೊಬ್ಬಳ ನಗು… ಕ್ರೋಧದ ಕಡಲು ನುಗ್ಗಿ ಮಣ್ಣು ಪ್ರವಹಿಸುತ್ತದೆ.

ಮುಂಜಾನೆ ಸೂರ್ಯ ಕತ್ತಲನ್ನು ಗುದ್ದಿ ಗುದ್ದಿ ಗೆದ್ದು ರಕ್ತರಂಜಿತನಾಗಿ ಮೇಲೆ ಬರುತ್ತಿದ್ದಾನೆ.

ಬುಲೆಟ್ ‘ಬಡ್ ಬಡಾಬಡ್…..’ ಎಂದು ಮುನ್ನುಗ್ಗುತ್ತದೆ. ಗುರಿ ಮೀರಿದ ಬುಲೆಟ್ ಹಸಿರು ಚಪ್ಪರದಡಿಯ ಸುಂದರಿಯನ್ನು ಛೇದಿಸುತ್ತದೆ. ಸೆಕೆಂಡಿನ ಹಿಂದೆ ಗಂಡನೆನಿಸಿಕೊಂಡವನ ಕೊಬ್ಬು ಕುದಿಯುತ್ತದೆ, ನೆಲದಿಂದ ಚಿಮ್ಮಿದರೆ ಧೃವತಾರೆಯನ್ನೇ ಸೇರುವವನಂತೆ ಛಂಗನೆ ಸಿಡಿದು ಲಂಬೋದರನತ್ತ ಜಿಗಿಯುತ್ತಾನೆ…. ಮೆಷಿನ್‌ಗನ್ನಿನ ಸಣ್ಣ ತೂತಿನಿಂದ, ಅದಕ್ಕಿಂತಲೂ ಕಡಿಮೆ ರೇಡಿಯಸ್‌ನ ಗುಂಡು ಜಾರುತ್ತದೆ…. ವರ ಗುರಿ ಮುಟ್ಟುವ ಮೊದಲೇ ನಲಕ್ಕುರುಳುತ್ತಾನೆ. ತೋರು ಬೆರಳಿನಿಂದ ಲಂಬೋದರ ತನ್ನ ಕಾಲರ್ ಬಡಿದು ಸಾಂಕೇತಿಕವಾಗಿ ಧೂಳು ಉದುರಿಸುತ್ತಾನೆ… ಹೊಡೆಸಿಕೊಂಡಾತ ತಲೆ ಜಜ್ಜಿದ ನಾಗರ ಹಾವಿನಂತೆ, ಅದರ ಬಾಲದಂತೆ ಸತ್ತರೂ ಒದ್ದಾಡುತ್ತಾನೆ…. ಟ್ರ್ಯಾಂಗಲ್ ಗುರುತಿರುವ ಗುಂಡು ಬೆನ್ನಲ್ಲಿ ತೂರಿ ಹೊರ ಬಂದಿರುತ್ತದೆಯಂತೆ… ಗನ್ ಮೇಲಿನ ರೆಡ್ ಟ್ರ್ಯಾಂಗಲ್ ಬಿದ್ದು ಬಿದ್ದು ಗಹಗಹಿಸುತ್ತದೆ…. ಲಂಬೋದರನ ಮೀನುಖಂಡದ ಮೇಲಿನ ಅದೇ ಆಕಾರದ ಗುರುತು ದಾರಿತೋರಿಸುತ್ತದೆ.

ಸೈರನ್ ಮಾಡುತ್ತಿರುವ ವಾಹನ ಸಮೀಪಿಸುತ್ತದೆ….ಬುಲೆಟ್ `ಕೊಟರ್ ಕೊಟ್ ಕೊಟ್’ ಎಂದು ಪ್ರಾರಂಭವಾಗುತ್ತದೆ…. ಛಂಗನೆ ಜಿಗಿಯುತ್ತದೆ….

ದಾರಿಯಲ್ಲಿ ಸಿಕ್ಕ ಕುಷ್ಠರೋಗಿ ಕೈಯೊಡ್ಡಿ ಬೇಡಿದ ಭಿಕ್ಷೆಗೆ ಕಾಸಿನ ಬಿಲ್ಲೆಯ ಬದಲಾಗಿ ಗುಂಡಿನ ಬಿಲ್ಲೆ ಎಸೆಯುತ್ತಾನೆ- ಗುರಿಯಿಡದೇ…. ಒದ್ದಾಡುತ್ತಾ ರಸ್ತೆಯ ಮಧ್ಯೆ ಬಿದ್ದಿರುತ್ತಾನೆ. ಭಿಕ್ಷುಕ…. ಪೊಲೀಸ್ ಸೈರನ್ನಿಗೂ ದಾರಿ ಬಿಡದ ನಿಶ್ಚಲ ದೇಹಿ ಭಿಕ್ಷುಕ ಲಂಬೋದರನಿಗೆ ವಿಪರ್ಯಾಸವೆಂಬಂತೆ ಪ್ರಾಣಭಿಕ್ಷೆ ದಯ ಪಾಲಿಸಿರುತ್ತಾನೆ…

ಪುರುಷೋತ್ತಮ ರೆಡ್‌ಹೌಸಿನಲ್ಲಿ ಕುಳಿತು ಗಹಗಹಿಸುತ್ತಿರುತ್ತಾನೆ…. ಟಿ.ವಿ.ಯಲ್ಲಿ ಮಹಾರಾಣಿ ಎಕ್ಸ್‌ಪ್ರೆಸ್, ಸುಹಾಸಿನಿ ನದಿಯಲ್ಲಿ ಲೀನವಾಗಿರುತ್ತದೆ…. ದೇಶದ ಮೂಲೆ ಮೂಲೆಯೂ ಬಿಕ್ಕಿ ಬಿಕ್ಕಿ ಅಳುತ್ತಿರುತ್ತದೆ….. ರೆಡ್ ಟ್ರ್ಯಾಂಗಲ್ ತನ್ನ ಕೇಂದ್ರ ಬಿಂದುವಿನಿಂದ ಪಿಚಕಾರಿಯಂತೆ, ಕಾರಂಜಿಯಂತೆ ಕೆಂಪು ರಕ್ತವನ್ನು ಎತ್ತರ ಎತ್ತರಕ್ಕೆ…. ಸೂರ್ಯನಾಚೆಯ ಎತ್ತರಕ್ಕೆ…. ಚಿಮ್ಮಿಸುತ್ತಿರುತ್ತದೆ…

ಈ ಪ್ರಪಂಚದಲ್ಲಿರುವುದು ಎರಡೇ ಗುಂಪು…. ಒಂದು ಕೊಲ್ಲುವವರು, ಇನ್ನೊಂದು ಕೊಲ್ಲಿಸಿಕೊಳ್ಳುವವರು…. ಪರಿಕ್ರಮಣ ಪರಿಭ್ರಮಣಗಳಂತೆ ನಿರಂತರ…. ನೆಪೋಲಿಯನ್, ಹಿಟ್ಲರ್, ಮುಸಲೋನಿ, ಮಾರ್ಕ್ಸ್, ಲೆನಿನ್, ಮಾವೋ, ಗಾಂಧಿ… ಎಲ್ಲರೂ ನೆನಪಾಗುತ್ತಾರೆ.

ಈ ಕೊಲ್ಲುವ ವಿದ್ಯೆಗೆ ಮೊದಲ ಡೆಫನಿಷನ್ ಕೊಟ್ಟವರು ಯಾರು? ಪ್ಲೇಟೋನೋ, ಅರಿಸ್ಟಾಟಲನೋ, ಕೌಟಿಲ್ಯನೋ? ಐಡಿಯಲ್ ಸ್ಟೇಟ್, ರಿಯಲ್ ಸ್ಟೇಟಿನ ಕಾಂಪ್ಲೆಕ್ಸ್…. ಕಮ್ಯುನಿಸ್ಟಿಕ್, ಡೆಮಾಕ್ರೆಟಿಕ್ ಸ್ಟೇಟಿನ ಪರಿಕಲ್ಪನೆ….

ಇರುವುದಕ್ಕಿಂತ ಇಲ್ಲದಿರುವುದೇ ಅತ್ಯುತ್ತಮ…. ಪ್ಲೇಟೋನ ಆದರ್ಶ ರಾಜ್ಯದ ಆಶಯ ಇದೇ ಏನೋ? ಯಾವುದೂ ಉತ್ತಮವಲ್ಲವೆಂದು ಅದೇಕೆ ಆ ಮಹಾ ಮೇಧಾವಿಗಳಿಗೆ ತಿಳಿದಿರಲಿಲ್ಲವೆಂದು ಪುರುಷೋತ್ತಮನ ಮನಸ್ಸು ಚಿಂತಿಸುವುದಿಲ್ಲ…. ‘ಸೈಕಲ್‌ ಆಫ್ ಗವ‌ರ್ನಮೆಂಟ್ಸ್’ನ ಪರಿವರ್ತನೀಯ ನಿಯಮವೂ ಅವನಿಗೆ ತಿಳಿದಿಲ್ಲ….

ಎ ರಬೆಲ್ ವಿದೌಟ್ ರೀಸನ್ಸ್…. ದಂಗೆಗೆ ಕಾರಣಗಳು ಬೇಕಿಲ್ಲ… ಕಾರಣ ಇಲ್ಲ….. ವಿಜಯನಗರದ ಭವ್ಯತೆ… ಮೊಗಲ್ ಸಾಮ್ರಾಜ್ಯದ ಸುವರ್ಣತೆಯಷ್ಟೇ ಗೊತ್ತು….. ಅದನ್ನೇ ಪುನಃ ಸಾಂಪ್ರತೀಕರಿಸುವ ಪ್ರಯತ್ನ, ಸುವರ್ಣ ಯುಗದಲ್ಲಿ ಜನ ಸತ್ತ ಕತ್ತೆ ನಾಯಿ ನರಿಗಳ ಮೂಳೆಯನ್ನು ಪುಡಿಮಾಡಿ ತಿಂದರೆಂದು ಗೊತ್ತಿಲ್ಲ. ಕೊನೆಗೆ ಒಡಲಿಂದ ಹೊರಬಂದ ಕಸದ ಜೊತೆ, ಹುಟ್ಟಿದ ಹಸುಗೂಸನ್ನೂ ತಿಂದರೆಂದು ಗೊತ್ತಿಲ್ಲ…. ಕೊಚ್ಚೆ ಉಚ್ಚೆ ಯಾವುದನ್ನೂ ಬಿಡದೆ ಕುಡಿದರೆಂದು ಗೊತ್ತಿಲ್ಲ. ವಿಚ್ಛಿದ್ರಕಾರಕ ಕಲ್ಪನೆ…. ಕಾಣುವುದು ಮಾತ್ರ ರಾಬರ್ಟ್ ಸಿವೆಲ್ ಎಂಬ ಪರದೇಶೀಯ ಹೇಳಿದ ನಮಗೇ ಗೊತ್ತಿರದಿದ್ದ ನಮ್ಮದೇ ಕಥೆ…. ರಸ್ತೆ ಮೇಲೆ ಬೆಳ್ಳಿ ಬಂಗಾರ ಮಾರಿದ ಕಥೆ…. ಮರೆತ ಸಾಮ್ರಾಜ್ಯದ ಮರೆಯಲಾಗದ ಕಥೆ…

ವಿ ವಾಂಟ್ ಟು ಎಸ್ಟಾಬ್ಲಿಷ್ ವಿಜಯನಗರ್ ಎಂಪೈರ್…

ಮಾರ್ಕ್ಸ್; ತಿನ್ನಲನ್ನವಿಲ್ಲದೇ ಕೊನಗಾಲಕ್ಕೆ ಪರದೇಶಿಯಂತ ಸತ್ತ ಮಾರ್ಕ್ಸ್…. ತಿನ್ನಲನ್ನವಿಲ್ಲದವರಿಗಾಗಿ ಹೋರಾಡಿದ ಮಾರ್ಕ್ಸ್…. ಅವನ ಕ್ಯಾಪಿಟಲ್ …. ಕಣ್ಣು ತಪ್ಪಿಸುತ್ತೆ. ಅಲೆದಲೆದು ಬೂರ್ಷ್ಟಾಗಳನ್ನು ಪ್ಯೂಡಲ್ಸ್ಗಳನ್ನು ಧ್ವಂಸಿಸಿ ಕ್ರಾಂತಿ ಕ್ರಾಂತಿಯ ಕಹಳೆಯೂದಿ ಜಗತ್ತನ್ನೇ ಎಚ್ಚರಿಸಿ ನೆಟ್ಟದಾರಿಯಲ್ಲಿ ಮುನ್ನುಗ್ಗಿದ ವಿಶ್ವದ ಅತಿದೊಡ್ಡ ರಾಷ್ಟ್ರ ಕಟ್ಟಿದ ಲೆನಿನ್, ಸ್ಟಾಲಿನ್, ಗೊರ್ಬಚೇವ್…. ದಟ್ಟ ದರಿದ್ರ ಚೀನಾದಲ್ಲಿ ರಕ್ಷಣೆ ಮೂಡಿಸಿದ ಸನ್ ಯಾತ್ ಸೇನ್‌ನ ಸಮಾಧಿಯ ಮೇಲಿನ ಮಾವೋ ಅದ್ಭುತ ಗೋಡೆ….

‘ವಿ ವಾಂಟ್ ಟು ಎಸ್ಟಾಬ್ಲಿಷ್ ಎ ಕಮ್ಯುನಿಸ್ಟಿಕ್ ನೇಷನ್….’

ಪೂರ್ವಕ್ಕೆ ಜಪಾನ್, ಪಶ್ಚಿಮಕ್ಕೆ ಅಮೇರಿಕಾ…. ಮಧ್ಯೆ ನಿಂತ, ಜಗತ್ತನ್ನೇ ದೋಚಿ ದೋಚಿ ಮೆರೆಯುತ್ತಿರುವ ಇಂಗ್ಲೆಂಡ್…. ಸೂರ್ಯ ಹುಟ್ಟುವ ಸಾಮ್ರಾಜ್ಯ…. ಸೂರ್ಯ ಮುಳುಗದ ಸಾಮ್ರಾಜ್ಯ..

ರೆಡ್‌ಹೌಸಿನ ಹಸಿರು ಹಾಸಿನ ಮೇಲೆ ಕುಳಿತ ಪುರುಷೋತ್ತಮನ ಮೇಲೆ, ಮೇಲೆ ಹಾರುವ ಹಕ್ಕಿಯ ಹಸಿ ಹಿಕ್ಕೆ ಬಿತ್ತು…. ತಲೆಯೆತ್ತಿದ…. ನೋಟದಿಂದಲೇ ಸುಟ್ಟು ಕೆಳಗುರುಳಿಸುವಂತೆ ನೋಡಿದ… ಸುಡಲು ಕಣ್ಣಲ್ಲಿ ಇದ್ದುದು ರಕ್ತ…. ಕೆಂಪು ರಕ್ತ….ಕೆಂಪು ಬೆಂಕಿಯಲ್ಲ.

ನಮ್ಮ ದೇಶ ಹಾಳಾಗಿರುವುದೇ ದೇವರು ದಿಂಡಿರುಗಳಿಂದ, ದವ್ವಭೂತಗಳಿಂದ…. ಹಾಗೆಯೇ ನೈತಿಕ ಮೌಲ್ಯ ಸಹ ಜನರಲ್ಲಿ ಉಳಿದಿದ್ದರೆ ಅದೂ ಬಹುಶಃ ಇವುಗಳಿಂದಲೇ ಇರಬೇಕು.

ಹಾರಿದ ಗುಂಡು ಗುರಿತಪ್ಪದೇ ಹಕ್ಕಿಯನ್ನು ಸುಟ್ಟು ಹಾಕಿತು…

ತಾನಿಟ್ಟ ಗುರಿ ಎಂದೂ ತಪ್ಪುವುದಿಲ್ಲವೆಂದು ಪುರುಷೋತ್ತಮನಿಗೆ ಗೊತ್ತು. ಏಕೆಂದರೆ ಗುರಿಯಿಡುವುದನ್ನು ಕಲಿತದ್ದೇ ಸಜೀವ ವಸ್ತುಗಳನ್ನು ಸುಡುವ ಮೂಲಕ.

ತಲೆಯೆತ್ತಿದಾಗ ಕಣ್ಣು ಕುಕ್ಕಿದ ಸೂರ್ಯನನ್ನೇ ಗುರಿಯಿಟ್ಟು ಕೆಳಗುರುಳಿಸುವವನಂತೆ ನೋಡಿದ…. ಮರೆಯಾದ ಮೋಡದಿಂದುದಿಸಿ ಬಂದ ವಿಮಾನ ಸವಾಲು ಮಾಡಿತು. ‘ತಾಕತ್ತಿದ್ದರೆ ಮೊದಲು ನನ್ನನ್ನುರುಳಿಸು ನೋಡುವಾ….’ ಎತ್ತಿದ ಬಂದೂಕ.

‘ಹೋಗಲೋ ಹುಲ್ಲು ಕಡ್ಡಿ’ ಎನ್ನುವಂತೆ ಎಷ್ಟು ಗುಂಡಿಗೂ ಸಿಲುಕದೇ ಮುನ್ನುಗ್ಗಿತು ವಿಮಾನ…. ‘ಗುರಿಯಿಟ್ಟು ಎಂದೂ ತಪ್ಪಿಲ್ಲ’ ಎಂಬ ಅಹಂ, ಮನಸ್ಸಿನ ಮೆದುಳ ನರತಂತುಗಳ ತುದಿ ತುದಿಯಲ್ಲೆಲ್ಲಾ ಓಡಾಡಿತು…

ಲಂಬೋದರ, ಪ್ರಭಾಕರ, ಪವಾರ್, ದ್ವಿವೇದಿ, ಬಾಪಟ್… ಎಲ್ಲರೂ ಪುರುಷೋತ್ತಮನ ಮುಂದೆ ನಾಯಿಯಂತೆ ಬಂದು ನಿಂತರು….ತನ್ನ ಉದ್ದಿಶ್ಯ ಹೇಳಿದ.

ಏರ್‌ಪೋರ್ಟ್‌ನತ್ತ ಕಾರುಗಳು ಚಲಿಸಿದವು…. ಒಬ್ಬೊಬ್ಬ ಲಂಬೋದರನ ಹಿಂದೆ ನೂರಾರು ಪ್ರಭಾಕರರು, ಒಬ್ಬೊಬ್ಬ ಪ್ರಭಾಕರನ ಹಿಂದೆಯೂ ನೂರಾರು ಪರಶುರಾಮರು…. ಹಳ್ಳಿ ಹಳ್ಳಿಗಳನ್ನು ನುಗ್ಗಿ ‘ಕೊಲ್ಲುವುದೇ ಕಾಯಕ’ವೆಂಬಂತೆ ಕೊಲ್ಲುತ್ತ ಬರುತ್ತಿದ್ದರು. ಒಬ್ಬೊಬ್ಬ ಪವಾರನೂ, ಬಾಪಟನೂ ನೆರೆ ರಾಷ್ಟ್ರಗಳಿಂದ ಪರಿಣತಿ ಪಡೆದಿದ್ದರು….. ಉಚಿತ ಶಸ್ತ್ರಾಸ್ತ್ರಗಳು ಬರುತ್ತಿದ್ದವು….. ಮಕ್ಕಳು ಪಟಾಕಿ ಹಾರಿಸಲು ಖುಷಿಗೊಳ್ಳುವಂತೆ ಗುಂಡು ಹಾರಿಸಲು ಖುಷಿಗೊಳ್ಳುತ್ತಿದ್ದರು.

ಒಂದೂ ಕಾರಣವಿಲ್ಲದೇ ದ೦ಗೆ…

ಹಾರಿದ ವಿಮಾನದಲ್ಲಿ ಸೇರಿದ್ದರು ಅನೇಕ ಲಂಬೋದರರು… ನೆಲೆಯರಿಯದತ್ತ ಪ್ರಯಾಣ…. ಕೊಂದರೇ ತೃಪ್ತಿ…. ಇಟ್ಟ ಗುರಿ ನೆಟ್ಟ ನೋಟದಲ್ಲಿ ಲೀನವಾಗುವುದು…. ಛಲ್ಲನೆ ಚಿಮ್ಮುವ ರಕ್ತ…. ರೆಡ್‌ಟ್ರ್ಯಾಂಗಲ್…ಪಟಪಟನೇ ಒದ್ದಾಡಿ ಸುಮ್ಮನಾಗುವ ದೇಹ…. ವಾಹ್… ಎಂತಹ ಬೇಟೆ… ಏನು ಮಜಾ….

ಇರುವುದು ಎರಡೇ ಪ್ರಬಲ ಅಸ್ತ್ರಗಳು…. ಒಂದು ಹಣ, ಇನ್ನೊಂದು ಗುಂಡು… ಎರಡನೆಯದರ ಮುಂದೆ ಮೊದಲನೆಯದೂ ಸೋಲುತ್ತಂತೆ….

ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕವಲ್ಲ…. ಅದರ ಹಿಂದಿನ ವಿಕೃತಗಳಿಂದ, ನೂರಾರು ಅನುಯಾಯಿಗಳ ಕೈಯಲ್ಲಿದ್ದುದು ಬಂದೂಕು…. ಸುಲಭವಾಗಿ ಸಿಗುವುದು ಬ್ಯಾಂಕು…. ಎಷ್ಟೋ ಲೂಟಿಯಾದುವು.. ನಡು ರಸ್ತೆಯಲ್ಲಿ ಪ್ರಾಯದ ಹೆಣ್ಣುಗಳು ಹಣ್ಣಂತಾಗಿ ಕೊಳೆತವು….

ನ್ಯಾಷನಲ್ ಇಂಟರೆಸ್ಟ್‌ನ ನೆವದಲ್ಲಿ ಮುದುಕರು, ಹೆಳವರು ಬಲಿಯಾಗಿದ್ದರು….. ಬಲವಿದ್ದವನಿಗೇ ಬದುಕು… ಬಲ ಬಾಳಲ್ಲಿ ಅಶಾಶ್ವತವೆಂಬುದು ಗೊತ್ತಿಲ್ಲ…. ನಾಯಕರಿಲ್ಲದ ಮಾಬ್…. ಗೆದ್ದ ರಾಜ್ಯ ಸೋತ ರಾಜ್ಯವನ್ನು ಕೊಳ್ಳೆ ಹೊಡೆಯುವಂತೆ ಹೊಡೆದರು…..

ವಿಕೋಪದ ಪರಿಸ್ಥಿತಿ…. ಪುರುಷೋತ್ತಮನಿಗೆ ವಿಷಯ ತಲುಪಿತು…. ಇನ್ನಷ್ಟು ದೊಂಬಿ ಮಾಡಲು ತಿಳಿಸಿದ…. ದುರ್ಬಲರಾಗಿದ್ದಾಗಲೇ ವೈರಿಗಳನ್ನು ತುಳಿಯಬೇಕು….ಹಿಂದೆ ರಾಜರು ವೈರಿ ರಾಜ್ಯವನ್ನು ಆಕ್ರಮಿಸಿದಾಗ, ತಮ್ಮ ಆಕ್ರಮಣ ರಾಜನಿಗೆ ತಿಳಿಯಲಿ ಎಂದಷ್ಟೇ ಕಾರಣದಿಂದ ಮನುಷ್ಯರನ್ನು, ಪಶುಗಳನ್ನು ತರಿಯುವಂತೆ…. ನಾಗರೀಕರ ಜೀವಕ್ಕೆ ಬೆಲೆಯಿಲ್ಲ…. ಕೋಲಾಹಲ…. ಪೊಲೀಸ್, ಸೈನ್ಯದ ಗಮನ ಅತ್ತ ಹರಿದಾಗ, ನಿಯಮಿತ ಸೈನಿಕರಿಂದ ಕ್ಷಿಪ್ರ ಕ್ರಾಂತಿ ನಡೆಸಿ ಅಧಿಕಾರದ ಜುಟ್ಟು ಹಿಡಿಯುವ ಉಪಾಯ ಪುರುಷೋತ್ತಮನದು.

“ಸೋತರೆ ಕೆಟ್ಟವರಾಗುತ್ತೇವೆ; ದುಷ್ಟರು, ಭಯೋತ್ಪಾದಕರು ಎನಿಸಿಕೊಳ್ಳುತ್ತೇವೆ….. ಗೆದ್ದರೆ ರಾಷ್ಟ್ರನಾಯಕರಾಗುತ್ತೇವೆ, ದೇಶಭಕ್ತರಾಗುತ್ತೇವೆ, ದೇವರಾಗುತ್ತೇವೆ… ಈಗ ತೆಗಳುವ ಜನ ಹೊಗಳುತ್ತಾರೆ….. ದೇಶಪ್ರೇಮಿಗಳೆಂದು ಪೂಜಿಸುತ್ತಾರೆ…. ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಿ…” ಪುರುಷೋತ್ತಮನ ಉಪದೇಶ….

ಪರಿಸ್ಥಿತಿ ವಿಷಮಕ್ಕೇರಿತು…. ಹೆಂಡರು ಮಕ್ಕಳ ಅಳಲು ಆಕ್ರಂದನ ಗಂಡಸರ ಗಂಡಸ್ವ ಕೆರಳಿಸಿತ್ತು…… “ನಮ್ಮ ಗಂಡ, ಮಕ್ಕಳು ನಿಮಗೇನು ಅನ್ಯಾಯ ಮಾಡಿದ್ದರು? ಅವರನ್ನು ಕೊಂದು ನಮ್ಮನ್ನೇಕೆ ಉಳಿಸಿದ್ದೀರಿ-ಹೊಟ್ಟೆ ಉರಿಸುವುದಕ್ಕೆ, ಕೊಂದು ಬಿಡಿ ನಮ್ಮನ್ನೂ ಎಂಬ ಅಳಲ ಹಿಂದಿನ ಮೌನ….. ಮೌನ ಪ್ರಖರ ಅಸ್ತ್ರಕ್ಕಿಂತ ಪ್ರಖರ….

ಅತ್ತ ಸಂಧಾನಕ್ಕೆ ಪುರುಷೋತ್ತಮನಿಗೆ ಕರೆ ಬಂತು. ವಿಮಾನವನ್ನು ಯಾವುದೋ ಗೌಪ್ಯ
ಸ್ಥಳದಲ್ಲಿ ಇಳಿಸಲಾಗಿತ್ತು….

ಶರತ್ತನ್ನು ಹಾಕಲು ಪ್ರಯತ್ನಿಸಿದರೆ ಕಾರಣಗಳೇ ಸಿಗುವುದಿಲ್ಲ…. ಪುರುಷೋತ್ತಮನ ತಲೆಯಲ್ಲೆಲ್ಲಾ ಶೂನ್ಯ ಶೂನ್ಯ… ಇಷ್ಟೆಲ್ಲಾ ಏಕೆ ಮಾಡಿದನೆಂದು ಅವನಿಗೆ ತಿಳಿದಿರಲಿಲ್ಲ…. ತಲೆ ತಗ್ಗಿಸಿ ಆಲೋಚಿಸುವಾಗ ಕಂಡಿತು- ಕೈ ಮೇಲೆ ಚಾಕುವಿನಿಂದ ಕೊರೆದು, ಮೂರು ಗೆರೆಯ ಗಾಯದ ಕಲೆಯಿಂದ ಮಾಡಿಕೊಂಡಿದ್ದ ಟ್ರ್ಯಾಂಗಲ್….ತ್ರಿಕೋನ…. ತಮ್ಮ ಗುಂಪಿನ ಸಂಕೇತ…. ಉದ್ಗರಿಸಿದ: “ಟ್ರೈಲ್ಯಾಂಡ್…..”

ಗೂರ್ಖಾಲ್ಯಾಂಡ್, ಝಾರ್ಖಂಡ್, ಖಾಲಿಸ್ಥಾನದ ಸಾಲಿಗೆ ಟ್ರೈಲ್ಯಾಂಡ್….

ಏಕತೆ ಅಖಂಡತೆಯ ಅಭದ್ರತೆಗೆ ತ್ರಿಕೋನ… ಸಾರಿದ ಟ್ರಾಂಗಲ್ ಹೌಸಿನಿಂದ: `ಟ್ರೈಲ್ಯಾಂಡ್‌ನಲ್ಲಿ ನಿರುದ್ಯೋಗವಿಲ್ಲ…. ಕಿತ್ತು ತಿನ್ನುವ ಬಡತನವಿಲ್ಲ… ಏಕೆಂದರೆ ಹಸಿವಿನ ಪ್ರಖರತೆಯ, ನಿರುದ್ಯೋಗದ ಭೀಕರತೆಯ ಅರಿವು ನನಗಿದೆ…’

ಡಿಗ್ರಿ ಮಾಡಿ ಹಂಗಿನ ಕೂಳು ತಿನ್ನುತ್ತಿದ್ದ ಅನೇಕ ಯುವಕರನ್ನು ಈ ಹೇಳಿಕೆಗಳು ಆಕರ್ಷಿಸಿರಬಹುದು…. ಸಮತಾವಾದದ ಹೇಳಿಕೆ ಬಡತನದ ರೇಖೆಯ ಮೇಲಿರುವವರನ್ನು ಪ್ರೇರೇಪಿಸಿರಬಹುದು….

ಟ್ರ್ಯಾಂಗಲ್ ಹೌಸ್ ಮೇಲೆ, ಹಸಿರು ಹಿನ್ನೆಲೆಯಲ್ಲಿರುವ ಕೆಂಪು ತ್ರಿಕೋನ ಹಾರ ಲಾರಂಭಿಸಿತು…. ಅನೇಕ ಲಂಬೋದರರು, ಪ್ರಭಾಕರರು, ಪವಾರರು, ಬಾಪಟರು….ಕಂಡ ಕಂಡವರನ್ನು ಕೊಲ್ಲುತ್ತಿದ್ದರು.

ನಾಯಕ ಪುರುಷೋತ್ತಮನಿಗೆ ಮಾತುಕತೆ ಮುರಿದು ಬಿದ್ದಿದ್ದರಿಂದ ಬೇಸರವೇನೂ ಆಗದೇ ನಿರ್ಲಿಪ್ತನಾಗಿದ್ದ…. ಕಾರಣ ತನ್ನವರಿನ್ನೂ ವಿಮಾನದ ಮೇಲೆ ಹತೋಟಿ ಇಟ್ಟುಕೊಂಡಿರುವುದರಿಂದ ಪುನಃ ಸಂಧಾನಕ್ಕೆ ಕರೆಬರುತ್ತದೆಯೆಂದುಕೊಂಡಿದ್ದ… ಆದರೆ ಅಪಹರಣಕಾರರನ್ನೆಲ್ಲ ಇನ್ನಿಲ್ಲದಂತಾಗಿಸಿದ್ದು ಯಾರಿಗೂ ತಿಳಿದಿರಲಿಲ್ಲ…. ಇದು ಒತ್ತೆಯಾಳುಗಳ ಬಿಡುಗಡೆಯ ಚಕಮಕಿಯಲ್ಲಿ ಉಂಟಾದ ಅನಿವಾರ್ಯ ಅಚಾತುರ್ಯ….

ತನ್ನ ಯೋಜನೆ ಎಲ್ಲೋ ಸೋಲುತ್ತಿರುವಂತೆ ಅನುಭವ ಪುರುಷೋತ್ತಮನಿಗೆ… ರಷ್ಯಾದಲ್ಲಿ ಗೊರ್ಬಚೆವ್‌ರಿಂದ ಹೊಸ ಬೆಳಕು ಮೂಡಿದಾಗ… ಚೀನಾದಲ್ಲಿಯೂ ಹೊಸಗಾಳಿಗಾಗಿ ಆಗ್ರಹಿಸುತ್ತಿದ್ದ ವೇಳೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು, ನಾಗರಿಕರು ಟ್ಯಾಂಕರುಗಳಡಿ ಸಿಕ್ಕಿ ಅಪ್ಪಚ್ಚಿಯಾದಾಗ…. ಫ್ರಾನ್ಸ್ ಕ್ರಾಂತಿಯ ಯಶಸ್ವೀ ದ್ವಿಶತಕ ಕಳೆದಾಗ… ಅಧಿಕಾರ ಬಂದೂಕಿನ ನಳಿಕೆಯ ಮೂಲಕ ಬೆಳೆಯುತ್ತದೆ….’

ಕೊನೆಯಿಲ್ಲದಂತೆ ಕೊಲೆ ಸುಲಿಗೆಗಳು ನಡೆಯತ್ತಲೇ ಇರುವಾಗ ಎಷ್ಟೋ ಸಲ ಪುರುಷೋತ್ತಮನೇ ಗೆದ್ದಂತಹ ಭಾವನೆ….

ಆ ತುದಿಯ ಸೋಲು, ಈ ತುದಿಯ ಗೆಲುವು… ಫಲಿತಾಂಶ ಸರಳ ರೇಖೆಯ ಎರಡು ಪರಸ್ಪರ ವಿರುದ್ಧ ದಿಕ್ಕುಗಳ ನಡುವೆ ಓಲಾಡುವಾಗ, ಪ್ರಯೋಗ ಮೊದಲಿನಿಂದ ಪ್ರಾರಂಭವಾಗುವುದು…. ಪುನರಾವರ್ತನೆಯಾಗುವುದು….

ಮೌನ…. ಸ್ಮಶಾನ ಮೌನ.. ಮೌನದ ಭೀಕರತೆಯ ಅರಿವಾಗುವುದು ಅದರ ಹಿಂದಿನ ಭೀಕರ ಗದ್ದಲದ ಪ್ರಚಂಡತೆಯ ಪ್ರಖರತೆಯಿಂದ ಮಾತ್ರವಂತೆ…..
* * *

ಕೊನೆಗೊಮ್ಮೆ…. ಪ್ರತಿಯೊಂದಕ್ಕೂ ಒಂದು ಅಂತ್ಯವಿರುವಂತೆ ನಿಯಮವಿರುವುದರಿಂದ ಸರ್ಕಾರ ಮತ್ತು ಪುರುಷೋತ್ತಮರು ಎರಡು ಸರಳರೇಖೆಗಳಾಗಿ ಉಳಿಯಲಾಗಲಿಲ್ಲ….

ಬ್ರಹ್ಮಾಂಡಕ್ಕೆ ಅಂತ್ಯವಿಲ್ಲ….

ಪುರುಷೋತ್ತಮನ ಅನುಯಾಯಿಗಳೆಲ್ಲಾ ಹಿಂಸೆಯಿಂದ ರೋಸಿಹೋದ, ನಾಗರೀಕರ ಸಿಡಿದ ಮನೋಭಾವದ ಪ್ರತೀಕಾರದಿಂದ ನುಚ್ಚುನೂರಾದರು… ಗಣನೀಯವಾಗಿ, ಟ್ರೈಲ್ಯಾಂಡ್ ವಾದಿಗಳು ನಿರ್ನಾಮವಾದರು….ಟಿ.ಆರ್.ಓ.ಎಫ್.(ಟ್ರೈಲ್ಯಾಂಡ್ ರೀ ಆರ್ಗನೈಜೇಶನ್ ಫ್ರೆಂಟ್) ದುರ್ಬಲವಾಯಿತು…

ನಾಯಕನ ದುರ್ಬಲತೆಯಿಂದ ರೋಸಿದ ಅನುಯಾಯಿಗಳು ಗುಂಪುಗೂಡಿ ಪುರುಷೋತ್ತಮನತ್ತ ವಿವರಣೆ ಪಡೆಯಲು ಬರಲಾರಂಭಿಸಿದರು… ಪುರುಷೋತ್ತಮನಿಗೂ ದಿಕ್ಕು ತೋಚದಂತಾಗಿತ್ತು…. ತಲೆ ಕೆಟ್ಟವನಂತೆ, ಉಳಿದಿದ್ದ ಎಲ್ಲಾ ಬಾಂಬುಗಳನ್ನು ಸಾರ್ವಜನಿಕ ಜನನಿಬಿಡ ಸ್ಥಳಗಳಲ್ಲಿ ಸಿಡಿಸಿ, ಎಲ್ಲಾ ಸೋಲನ್ನೂ ಪರಿಹರಿಸಿಕೊಳ್ಳಬೇಕೆಂದು ನಿರ್ಧರಿಸಿದ… ಅಂತೆಯೇ ಮಾಡುವ ಒಂದು ಪ್ರಯತ್ನದಲ್ಲಿ….

ಆಸ್ಪತ್ರೆಯೊಂದರ ಮುಂದೆ… ಹುಚ್ಚನಂತೆ ತಲೆಕೆದರಿಕೊಂಡು, ಬುಲ್ಲೆಟ್ ಮೇಲೆ ಕುಳಿತು ಕೈಬಾಂಬ್ ಒಂದನ್ನು ಎಸೆಯುವಾಗ…. ಯಾರೋ ಅಣ್ಣಾ…” ಎಂದು ವ್ಯಕ್ತಪಡಿಸಲಾಗದ ಭಾವನೆಯಲ್ಲಿ, ಎಲ್ಲಿಂದಲೋ ಕಿರುಚಿದಂತೆ… ನೋಡುವಷ್ಟರಲ್ಲಿ ಕೆಂಧೂಳು ಅಡರಿ ಏನೂ ಕಾಣದಂತಾಗಿತ್ತು. ಕುಲ್ಲಕ ವಿಚಾರವೆಂಬಂತೆ ಅದರ ಬಗ್ಗೆ ಯೋಚಿಸುವುದನ್ನು ಮರೆತ… ಅವನ ಚಲನೆಯ ವೇಗದಲ್ಲಿ, ಎಲ್ಲವನ್ನೂ ಮುಗಿಸಿಬಿಡುವ ಆತುರದಲ್ಲಿ, ಯಾವುದಕ್ಕೂ ಆತ ಆಲೋಚಿಸುವ ಸೌಜನ್ಯ ತೋರಲಿಲ್ಲ… ಅದಕ್ಕೆ ಸೋಲುತ್ತಿರುವ ಅಪಮಾನ ಪುಷ್ಟಿ ನೀಡುತ್ತಿತ್ತು. ತನ್ನ ಅನುಯಾಯಿಗಳು ಇಷ್ಟು ದಿನ ಸಾಧಿಸಲಾರದ್ದನ್ನು ಸಾಧಿಸಿ ತೋರಿಸುತ್ತೇನೆಂದು ಪಣ ತೊಟ್ಟಿದ್ದ….

ಆತುರ ಅನರ್ಥಕ್ಕೆ ಕಾರಣ…. ಕ್ರಾಂತಿ ಎಂಬುದು ಒಂದು ಫ್ಯಾಂಟಿಸಿ… ಭ್ರಮೆ…. ಬಸ್ ಸ್ಟ್ಯಾಂಡ್‌ಗಳಲ್ಲಿ, ರೈಲ್ವೆ ಸ್ಟೇಷನ್‌ಗಳಲ್ಲಿ, ಆಸ್ಪತ್ರೆ, ಸಿನೆಮಾ ಥಿಯೇಟರ್‌ಗಳೆಲ್ಲಾ ಕಡೆ ಬಾಂಬ್ ಆಸ್ಫೋಟಗೊಂಡವು. ಪೊಲೀಸರು ಪ್ರತೀಕಾರ ಕ್ರಮ ಕೈಗೊಂಡಿದ್ದರೂ ಅನೇಕ ಕಾನೂನು ತೊಡಕುಗಳಿಂದ ಸ್ವಲ್ಪ ವಿಳಂಬವಾಗುತ್ತಿತ್ತು. ಅಷ್ಟರಲ್ಲಿ ಆಗಬಾರದ್ದು ಆಗಿರುತ್ತಿತ್ತು…. ಕಾನೂನಿನ ವಿಪರ್ಯಾಸ…

ಟಿ.ವಿ., ರೇಡಿಯೋಗಳಲ್ಲೆಲ್ಲಾ ಒಂದೇ ಘೋಷಣೆ: “ಪುರುಷೋತ್ತಮನನ್ನು ಸಜೀವವಾಗಿಯಾಗಲೀ, ನಿರ್ಜೀವವಾಗಿಯಾಗಲೀ ಹಿಡಿದು ಕೊಟ್ಟವರಿಗೆ ಲಕ್ಷ ರೂಪಾಯಿ ನಗದು ಬಹುಮಾನ…”

ಪುರುಷೋತ್ತಮ ಸಂಜೆ ಮನೆಗೆ ಬಂದಾಗ ಇಡೀ ಕುಟುಂಬದಲ್ಲಿ ಯಾರೂ ಬದುಕುಳಿದಿರಲಿಲ್ಲ …. ಇದ್ದ ಒಬ್ಬ ತಂಗಿ, ತಾಯಿ, ಹೆಂಡತಿ, ಮಗಳು (ಮೂರು ತಿಂಗಳ ಹಸುಗೂಸು) ಎಲ್ಲರೂ ಉಸಿರಾಡುವ ಸ್ವಾತಂತ್ರ್ಯ ಕಳೆದುಕೊಂಡು ಅಂಗಳದಲ್ಲಿ ಅಂಗಾತ ಮಲಗಿದ್ದರು. ನೋಡಲು ನೆರೆದಿದ್ದ ಸುತ್ತುಮುತ್ತಲ ಜನ ಪುರುಷೋತ್ತಮನ ಉಗ್ರತೆಯನ್ನು ತಿಳಿದಿದ್ದವರಾದ್ದರಿಂದ ತಕ್ಷಣ ಚದುರಿದರು.

ಆಸ್ಪತ್ರೆಯ ಬಳಿ ಯಾರೋ “ಅಣ್ಣಾ…” ಎಂದು ಅನುಭವಿಸಲಾಗದ ಭಾವನೆಯಿಂದ ಕೂಗಿದ್ದು ಏಕೋ ನೆನಪಾಯಿತು…. ಮತ್ತೆ ಮತ್ತೆ ಮರುಕಳಿಸಿತು. “ಅಣ್ಣಾ… ಅಣ್ಣಾ…”. ಕೂಡಲೇ, ಬೆಳಿಗ್ಗೆ ರೆಡ್ ಹೌಸಿಗೆ ಹೋಗುವ ಮುನ್ನ ಹೆಂಡತಿ, “ಮಗುವಿಗೆ ಕಾಯಿಲೆ ಜಾಸ್ತಿಯಾಗಿದೆ” ಎಂದದ್ದೂ ನೆನಪಾಯಿತು… ಆಸ್ಪತ್ರೆ… ಅಣ್ಣಾ… ಹೆಂಡತಿ… ಮಗು… ಎಲ್ಲವೂ ಅರ್ಥವಾಯಿತು…. ಅವನಿಗರಿವಿಲ್ಲದೇ ಕಠಿಣವಾದ ಎದೆಯೊಡೆದು ಉದ್ಗಾರ ಹೊರಬಂತು: “ತೇಜಸ್ವಿನೀ…”

ಅತ್ತ… ತೃಪ್ತಿಯಾಗುವವರೆಗೂ ಅತ್ತ…. ಸಮಾಧಾನಿಸಲು ಯಾರೂ ಬರುವವರಿರಲಿಲ್ಲ…. ತಾನು ಬದುಕಿಸಬೇಕಾದ ಹೊಣೆಯನ್ನು ಹೊತ್ತಿದ್ದ ಜೀವವೊಂದನ್ನು ತಾನೇ ಕೊಂದಿದ್ದ…. ಅವನನ್ನು ಅವನೇ ಕ್ಷಮಿಸಲಾರದಾಗಿದ್ದ…. ಅವನ ದೇಹ, ಅವನ ವ್ಯಕ್ತಿತ್ವ ಎರಡು ವ್ಯಕ್ತಿಗಳಂತಾದರು. ಪುರುಷೋತ್ತಮನ ವ್ಯಕ್ತಿತ್ವ ಪುರುಷೋತ್ತಮನ ದೇಹದ ಮೇಲೆ ಸೇಡು ತೀರಿಸಿಕೊಳ್ಳುವಂತೆ ಆಕ್ರಮಣ ಮಾಡಿತು….

ತಾನು ಕೊಂದವರ ದೇಹಗಳನ್ನೆಲ್ಲಾ ನೋಡಿದ… ಛಿದ್ರ ಛಿದ್ರವಾಗಿ ಹರಿದಿದ್ದ ಕೆಂಪು ಮಾಂಸದ ಮುದ್ದೆಯ ಮಧ್ಯೆ ಬಿಳಿಯ ಮೂಳೆ ಇಣುಕಿ ನಗುತ್ತಿತ್ತು, ಅಪಹಾಸ್ಯ ಮಾಡುತ್ತಿತ್ತು… ಕಣ್ಣ ಮುಂದೆ ತಾನು, ತನ್ನವರು ಕೊಂದವರೆಲ್ಲರ ದೇಹಗಳು, ಅವರವರ ಸಂಬಂಧಿಕರ ಭಾವನೆಗಳು ಏಕ ಕಾಲದಲ್ಲಿ ಅತಿಕ್ರಮಣದಿಂದ ಮುನ್ನುಗ್ಗಿ ಬಂದಂತಾದವು.

“ಹಿಂಸೆಗೆ ಪ್ರತಿ ಹಿಂಸೆ ಪರಿಹಾರವಲ್ಲ…”

ಹಿಂಬಾಲಕರಿಗೆ ತಕ್ಷಣ ಚಳುವಳಿ ನಿಲ್ಲಿಸಲು ಕರೆ ನೀಡಿದ….

ಬಹುಪಾಲು ಅನುಯಾಯಿಗಳು ತಲೆ ಕೆಟ್ಟವನೆಂಬಂತೆ ನೋಡಲಾರಂಭಿಸಿದರು. ಬೇಡಿಕೆಗೆ ಪುರಸ್ಕಾರ ಸಿಗಲಿಲ್ಲ…. ‘ಜನ ಕೆಟ್ಟದ್ದನ್ನು ಹೇಳಿದರೆ ಕೇಳುತ್ತಾರೆ, ಒಳ್ಳೆಯದನ್ನಲ್ಲ’ ಎಂಬುದು ಅರಿವಿಗೆ ಬಂದಿತು. ಕೆಲವರು ಅವನನ್ನೇ ಮುಗಿಸುವ ಯೋಚನೆ ಮಾಡದಿರಲಿಲ್ಲ… ಸರ್ಕಾರದಿಂದ ಲಂಚ ತಿಂದಿದ್ದಾನೆಂದು ಆಪಾದಿಸಿದರು… ಟ್ರ್ಯಾಂಗಲ್‌ಹೌಸಿನ, ರೆಡ್‌ಹೌಸಿನ ಮೇಲಿದ್ದ ಬಾವುಟಗಳು ಕೆಳಗಿಳಿದವು… ಟ್ರ್ಯಾಂಗಲ್‌ಹೌಸ್‌ನ ಎದುರಿದ್ದ ಸ್ಕ್ವೇರ್‌ ಸರ್ಕಲ್‌ನಲ್ಲಿ ಉಪವಾಸ ಕುಳಿತ… ಇದು ತಾನು ಮಾಡಿದ ಕುಕೃತ್ಯಕ್ಕೆ ಪರಿಹಾರವಾಗಿ, ಪಶ್ಚಾತ್ತಾಪಕ್ಕಾಗಿ ಹಾಗೂ ತನ್ನ ಸಹಚರರನ್ನು ಭಯೋತ್ಪಾದನೆಯಿಂದ ವಿಮುಖರನ್ನಾಗಿಸಲು… ಇದ್ದಕ್ಕಿದ್ದಂತೆ ಏಕೋ ಮ್ಯಾಕ್ಸಿಂಗಾರ್ಕಿಯ ‘ತಾಯಿ’ಯ ನಾಯಕ ನನಪಾದ… ಎಲ್ಲವನ್ನೂ ಮರೆಯಲು ಪ್ರಯತ್ನಿಸಿದ…

ಶಸ್ತ್ರಾಸ್ತ್ರ ಕೆಳಗಿಡಿರೆಂಬ ಅವನ ಕೋರಿಕೆಗೆ ವಿರುದ್ಧವಾಗಿ ಅನೇಕ ಅನುಯಾಯಿ ಗೆರಿಲ್ಲಾಗಳು ಅವನನ್ನೇ ಮುಗಿಸುವ ಯೋಜನೆ ರೂಪಿಸಿದರು. ಆದರೆ ಅವನು ಅನೇಕ ದಿನಗಳಿಂದ ಊಟ ನೀರಿಲ್ಲದೇ ಕೊರಗಿದ್ದ, ತನ್ನವರನ್ನು ತಾನೇ ಕೊಂದ ದುಃಖದ ಕಣ್ಣೀರಲ್ಲಿ ಬೆಂದು ಹೋಗಿದ್ದ ದೀನ ಮುಖ ನೋಡಿದ ಗುಂಡೂ ಸಹ ಹಾಗೆ ಮಾಡಲು ಮನಸ್ಸು ಬಾರದೇ ಪಕ್ಕ ಸರಿದು ಸುಮ್ಮನಾಯಿತು. ಸಂಘರ್ಷದಲ್ಲಿ ಶಕ್ತಿ ಸೋತಿತು, ಬಂದೂಕು ಸೋತಿತು.

ಶಕ್ತಿ ಪ್ರವಹಿಸುವುದು ಬಂದೂಕಿನ ಮೂಲಕವೇ?

ಒಂದು ವಾರದಲ್ಲಿ ಪುರುಷೋತ್ತಮ ಸಾಯುವ ಸ್ಥಿತಿಗೆ ಬಂದಿದ್ದ. ಇನ್ನೇನು ನಾಳೆಯೊಳಗೆ ಸಾಯಬಹುದೆಂದು ಡಾಕ್ಟರರೂ ಹೇಳಿಕೆ ನೀಡಿದ್ದರು…
ಪಶ್ಚಾತ್ತಾಪ ಎಂತಹ ಕಠೋರ ತಪ್ಪನ್ನೂ ಕ್ಷಮಿಸಬಲ್ಲುದು.

ಸ್ಕ್ವೇರ್ ಸರ್ಕಲ್‌ನಲ್ಲಿ ಜನಜಂಗುಳಿ ನೆರೆಯಿತು.

ಎಷ್ಟೋ ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದವನಿಗೆ ನಿಜವಾದ ಪ್ರಾಣದ ಬೆಲೆಯೇನು ಎಂಬುದು ಅರಿವಾದುದು ಸ್ವಾನುಭವಕ್ಕೆ ಬಂದಾಗಲೇ… ಏಕೆಂದರೆ ರಾಜಕಾರಣಿಯರು, ಭಯೋತ್ಪಾದಕರು; ರಾಜರು ಚಕ್ರವರ್ತಿಗಳಂತೆ ತಮ್ಮ ಪ್ರಾಣಕ್ಕಿರುವ ಬೆಲೆ ಬೇರೆಯವರ ಪ್ರಾಣಕ್ಕೆ ಇರುವುದಿಲ್ಲವೆಂಬಂತೆ ವರ್ತಿಸುತ್ತಿರುತ್ತಾರೆ…

ಸಂಪೂರ್ಣ ನಿತ್ರಾಣವಾಗಿ, ಅಸ್ಥಿಪಂಜರದಂತೆ ಬಿದ್ದಿದ್ದವನ ಕಣ್ಣು ಆಗಲೇ ಮೇಲೆ ಕೆಳಗೆ ಆಡಲಾರಂಭಿಸಿದವು…. ಅಷ್ಟರಲ್ಲಿ ವಾತಾವರಣದಲ್ಲಿ ವಿಚಿತ್ರವಾದ ವಿದ್ಯುತ್ ಸಂಚಾರವಾದಂತಹ ಅನುಭವ… ಪ್ರೇಕ್ಷಕರೆಲ್ಲರೂ ರೋಮಾಂಚನಗೊಂಡರು…

ತಣ್ಣನೆಯ ಗಾಳಿ ಶಾಂತವಾಗಿ, ಹಿತವಾಗಿ ಬೀಸಿತು….

ಸಾಲಾಗಿ ಪುರುಷೋತ್ತಮನ ಅನುಯಾಯಿಗಳು ತಮ್ಮ ತಮ್ಮ ಆಯುಧಗಳೊಂದಿಗೆ ಬರುತ್ತಿದ್ದರು…. ಅವನ ಮುಂದಿಟ್ಟು, ಒಬ್ಬೊಬ್ಬರೇ ಬಾಯಿಗೆ ಹಣ್ಣಿನ ರಸವನ್ನು ಬಿಡುವ ಮೂಲಕ ಅವನ ಉಪವಾಸ ವ್ರತವನ್ನು ಮುರಿದರು….

ಬಹುಪಾಲು ಎಲ್ಲರ ಸರದಿಯೂ ಮುಗಿದ ನಂತರ ಏಳಲು ಪ್ರಯತ್ನಿಸಿ ವಿಫಲನಾದರೂ ಬೇರೆಯವರ ಸಹಾಯದಿಂದ ಕುಳಿತುಕೊಳ್ಳುವಲ್ಲಿ ಯಶಸ್ವಿಯಾದ… ಆ ಸ್ಥಿತಿಯಲ್ಲೂ ಮಾತನಾಡಲು ಪ್ರಯತ್ನಿಸಿದ… ತನ್ನ ಅನುಚರರನ್ನು ಉದ್ದೇಶಿಸಿ ಹೇಳಿದ: “ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕವಲ್ಲ; ಹೃದಯದಿಂದ, ಭಾವನೆಗಳಿಂದ… ಗೆಲ್ಲುವುದು ಮಾವೋ ಅಲ್ಲ-ಗಾಂಧಿ ಹಿಂಸೆಯಲ್ಲ- ಅಹಿಂಸೆ….”

ಮಾತು ಮುಂದುವರೆಸುತ್ತಾ, ತಾನು ಈ ಒಂದು ವಾರದಲ್ಲಿ, ಗಾಂಧಿ ಪೋಟೋವನ್ನು ಮುಂದಿಟ್ಟುಕೊಂಡು ಗಹನವಾಗಿ ಯೋಚಿಸಿದಾಗ ತನ್ನ ಸಮಸ್ಯೆಗೆ ಪರಿಹಾರ ಸಿಕ್ಕಿದ್ದನ್ನು ವಿವರಿಸಿದ: “ಹಸಿವು, ಬಡತನ, ನಿರುದ್ಯೋಗ ಇತ್ಯಾದಿಗಳಿಗೆ ಕಾರಣ ಕೇವಲ ಸರ್ಕಾರವಲ್ಲ, ದೇಶವಲ್ಲ, ಅದರಲ್ಲಿ ವಾಸಿಸುವ ಜನಗಳು-ನಾವುಗಳು… ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆಯೇ ನಮ್ಮೆಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಈ ಪರಿಸ್ಥಿತಿಯಲ್ಲಿ ಯಾರೇ ಅಧಿಕಾರದಲ್ಲಿದ್ದರೂ ಎಲ್ಲರು ಮಾಡುವುದೂ ಇದನ್ನೇ…. ಈಗ ಏನು ಮಾಡಲಾಗುತ್ತಿದೆಯೋ ಅದನ್ನೇ… ಮೊನಾರ್ಕಿ, ಅರಿಸ್ಟೋಕ್ರಸಿ, ಡೆಮಾಕ್ರಸಿಯೇ ಆಗಲಿ, ಅಥವಾ ಕ್ಯಾಪಿಟಲಿಸಂ, ಕಮ್ಯುನಿಸಮ್ಮೇ ಆಗಲಿ, ಎಲ್ಲವೂ ‘ಸರ್ಕಾರದ ಪರಿವರ್ತನೀಯ ನಿಯಮ’ದ ಚಕ್ರದಲ್ಲಿ ಸಮಪಾಲು ಪಡೆದಿವೆ. ಒಂದರ ನಂತರ ಇನ್ನೊಂದು… ಸೈಕಲ್ ಆಫ್ ಗವ‌ರ್ನಮೆಂಟ್ಸ್… ಇದ್ದುದೆಲ್ಲಕ್ಕಿಂತ ಇಲ್ಲದಿರುವುದೇ ಸವೋತ್ಕೃಷ್ಟ… ಈ ನಂಬಿಕೆಯೇ ಮನುಷ್ಯನನ್ನು ಪ್ರಚೋದಿಸುವ ಅಂಶಗಳು… ಕಾಲಚಕ್ರದಲ್ಲಿ ಒಂದರ ಅವಗುಣಗಳು ಇನ್ನೊಂದಕ್ಕೆ ಕಾಣುವುದಿಲ್ಲ…. ಎಂತಹ ವಿಪರ್ಯಾಸ….”

ಪುರುಷೋತ್ತಮ ಒಮ್ಮೆಲೇ ರಾಷ್ಟ್ರನಾಯಕನಾದ, ಮಹಾತ್ಮನಾಗಿ, ದೇವರಾಗಿ ಕಂಡ…

ಗಾಂಧಿ ಡಿಫೀಟೆಡ್ ಮಾವೋ, ಲೆನಿನ್, ಮಾರ್ಕ್ಸ್ ಅಂಡ್ ಸೋ ಆನ್….
*****
(ಜುಲೈ ೨ ೧೯೮೮)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ತುತ್ತೂರಿ
Next post ಕನ್ನಡಮ್ಮನಿಗೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…