ಜನ್ಮವ ನೀಡಿಹೆ ಏಕಮ್ಮ?
ನಿನ್ನೀ ಕರುಳಿನ ಕುಡಿಗಳಿಗೆ
ಮೊಲೆಯನು ಉಂಡು ಮೊಲೆಯನೆ ಕಚ್ಚಿ
ವಿಷವನು ಉಗುಳುವ ದುರುಳರಿಗೆ
ಅರೆ ಬೆತ್ತಲೆ ನೀನಾಗಿ ಕಂಡರೂ
ಪರ ಹೆಣ್ಣಿನ ಮೈ ಮುಚ್ಚುತಿಹ
ಹಸಿವಿಂದಲಿ ನೀ ರೋಧಿಸುತ್ತಿದ್ದರೂ
ಅನ್ಯರ ಬಾಯಿಗೆ ಉಣಿಸುತಿಹ
ಹೀನರನೇಕೆ ನೀ ಹೆತ್ತೆ?
ಸರ್ಪದ ಮುತ್ತು ಅದು ಮುತ್ತೆ!
ನಿನ್ನೀ ಮಡಿಲಲಿ ಆಡುತ ಬೆಳೆದು
ಕಡೆಯಲಿ ಎದೆಗೇ ಒದ್ದವರ
ಒದೆಸಿಕೊಂಡ ಚೀತ್ಕಾರದ ದನಿಗೆ
ಕೇಕೆ ಹಾಕುತ ಕುಣಿವವರ
ಏತಕೆ ಹಡೆದೆ ನೀನಣ್ಣ
ವೈಭವ ಕರಗಿದ ರಾಜಮ್ಮ!
ಹುಲಿ-ಸಿಂಹಗಳ ನಿನ್ನೀ ಚರಿತೆಗೆ
ಇಂದೇತಕೆ ನರಿಗೂಬೆಗಳು
ತಾಯ್ದರುಳಿನ ಸರ ಧರಿಸಿ ಬೀಗುವ
ವಿಧ್ವಂಸಕ ರಣಹೇಡಿಗಳು
ಹೇಳೇ ತಾಯಿ ನನ್ನಮ್ಮ
ಕಂಬನಿ ಉತ್ತರ ಅಲ್ಲಮ್ಮ!
*****