Home / ಕಥೆ / ಜನಪದ / ನಾಲ್ವರು ಅಣ್ಣತಮ್ಮಂದಿರು

ನಾಲ್ವರು ಅಣ್ಣತಮ್ಮಂದಿರು

ನಾಲ್ವರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. “ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ” ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಾಲ್ಕು ಕುದುರೆ ಕೊಟ್ಟು ಕಳಿಸಿದರು. ಅವರೆಲ್ಲ ಎಕ್ಕೀಹಳ್ಳಿಗೆ ಹೋದರು. ಸಿನೀಮಾ ನೋಡು, ಹೋಟೆಲ್ ನೋಡು ಎಂದು ಎಲ್ಲ ರೊಕ್ಕ ಖರ್ಚುಮಾಡಿ ಹಾಕಿದರು. ದುಡ್ಡುಗಳಿಸಹೊಂಟವರು ಎಲ್ಲ ರೊಕ್ಕ ಖರ್ಚುಮಾಡಿದಾಗ ಕೋಟೆಗೆ ಹೋದರು.

ಅಲಿ ನೌಕರಿ ಹುಡುಕಿದರು. ಹತ್ತೆಂಟು ಕಡೆ ಓಡಾಡಿದರು. ಅಲ್ಲಿ ರಾಜನದೊಂದು ತೋಟವಿತ್ತು. ಅದಕ್ಕೆ ದೊಡ್ಡದೊಂದು ಹುಲಿ ಹತ್ತಿತ್ತು. ರಾತ್ರಿ ಹೊತ್ತು ಬೆಳೆಯನ್ನೆಲ್ಲ ಹಾಳುಮಾಡುತ್ತಿತ್ತು. ಎಷ್ಟೋ ಮಂದಿ ಕಾವಲುಮಾಡಿದರೂ ಉಪಯೋಗವಾಗಲಿಲ್ಲ. ಯಾರಾರಿಂದಲೂ ಹುಲಿ ಕೊಲ್ಲುವದು ಆಗಲಿಲ್ಲ. ಅದು ನಿಮ್ಮಿಂದ ಆಗಬೇಕು – ಎಂದು ರಾಜ ಹೇಳಿದನು. ನಾಲ್ಕು ಮೇರೆಗೆ ನಾಲ್ಕು ಮಂದಿ ಅಣ್ಣತಮ್ಮಂದಿರು ಅಲ್ಲೇ ಕಾವಲಿಗೆ ನಿಂತರು.

ಹಿರಿಯ ಅಣ್ಣ ಉಳಿದವರಿಗೆಲ್ಲ ಮಲಗಿಸಿ ತಾನು ಎಚ್ಚರಿದ್ದನು. ಗಡ ಗಡ ಎಂದು ಹುಲಿ ಬಂತು. ಹಿರಿಯಣ್ಣ ಛಕ್ಕನೆ ಎದ್ದುನಿಂತು ಶಾಲು ಹೊದ್ದು ಕೊಂಡು ಹುಲಿ ಬಾಯಲ್ಲಿ ಕೈಕೊಟ್ಟು ಹೊಡೆದನು. ಅದು ಸತ್ತುಬಿತ್ತು. ಆಗ ಎರಡನೇ ತಮ್ಮನನ್ನು ಎಬ್ಬಿಸಿದನು. ಅವನು ಎಚ್ಚರಿದ್ದಾಗ – ಕಳ್ಳರು ಓಡೋಡಿ ಅಲ್ಲಿ ಬಂದರು. ಪರಪರ ಎಂದು ನೆಲ ಕೆದರಿದರು. ತಂದ ರೊಕ್ಕ ಎಲ್ಲ ಹೊದರಿನಲ್ಲಿ ಬರುಕಿದರು. ಹಾಗೇ ತಗ್ಗು ಮುಚ್ಚಿ ಸಾಪಮಾಡಿದರು. ಹೊರಟುಹೋದರು. ಅದನ್ನೆಲ್ಲ ಜಪ್ಪಿಸಿ ಎರಡನೆಯವ ನೋಡಿದನು.

ಮೂರನೆಯವನಿಗೆ ಎಬ್ಬಿಸಿದರು. ಏಳು ಹೆಡೆ ನಾಗೇಂದ್ರ ಬಾಯೊಳಗೆ ಮಾಣಿಕ ಹಿಡಿದು ಹರಿಯದೂರ ಮೇಯುತ್ತ ಭುಸ್ ಎಂದು ಬುಸಗುಟ್ಟುತ್ತ ಹೋಯಿತು. ನಾಲ್ಕು ತಲವಾರ ತಕ್ಕೊಂಡು ಮಾಣಿಕದ ಮೇಲೆ ಕತ್ತರಿ ಮಾಡಿಟ್ಟು ಕತ್ತರಿಸಿದನು. ಆರು ಹಡೆಗಳೆಲ್ಲ ಕಡಿದುಬಿದ್ದವು. ಇನ್ನೊಂದು ಹೆಡೆ ಉಳಿಯಿತು ಅದು ಹೇಳಿತು – ಹುತ್ತಿನಲ್ಲಿ ಏಳು ರಂಜಣಗಿ ಮುತ್ತು ಮಾಣಿಕ್ಯ ಅವೆ. ನೀ ಅದನ್ನು ತಗೋ. ಅಷ್ಟು ಹೇಳಿ ಅದೂ ಬಿದ್ದು ಹೋಯಿತು.

ನಾಲ್ಕನೇಯವನನ್ನು ಎಬ್ಬಿಸಿದರು. ಜರಾನೆ ರಾತ್ರಿ ಉಳಿದಿತ್ತು. ಅಲ್ಲೊಂದು ಬಾವಿಯಿತ್ತು. ಆ ಬಾವ್ಯಾಗ ಏಳುಜನ ಜಲಕನ್ನಿಕೆಯರು ಜಳಕಮಾಡಲು ಬಂದರು. ಅದರೊಳಗೆ ಆರು ಜನ ಜಲಕನ್ನಿಕೆಯರು ಜಳಕಕ್ಕೆ ಇಳಿದರು. ಏಳನೇಯವಳು ಹುಡುಗನನ್ನು ಮಾಯ ಮಾಡಹತ್ತಿದಳು.. ಅದನ್ನೇ ನಾಲ್ಕನೇ ತಮ್ಮ ನೋಡಿದನು. ಆಕೆಯೂ ಬಾವಿ ಇಳಿಯಬೇಕೆಂದು ಹೊರಟಾಗ ಅವ ಹೋಗಿ ಅವಳ ಸೀರೆ ಹಿಡಿದು ಜಗ್ಗಿದನು. ತನ್ನ ಹುಡುಗನೇ ಎಂದು ತಿಳಿದು – ಸೆರಗ ಬಿಡು ಎಂದು ಬೇಡಿಕೊಂಡಳು. ಮತ್ತೆ ಬರತೀನಿ ಎಂದು ಭರವಸೆಕೊಟ್ಟಳು. “ನಿನ್ನ ಮೇಲೆ ಭರವಸೆಯಿಲ್ಲ” ಎಂದನು. ಆಗ ತಲೆಗೂದಲೊಂದು ತೆಗೆದು ವೀಣೆಮಾಡಿ ಹೇಳಿದಳು. ಇದನ್ನು ಯಾವಾಗ ಬಾರಿಸಿದರೂ ನಾನು ಬರತೀನಿ ಎಂದು ಕೂದಲು ಕೊಟ್ಟು ಬಾವಿಯಲ್ಲಿ ಇಳಿದಳು.

ನಾಲ್ಕೂ ಜನರು ತಮ್ಮ ತಮ್ಮ ಮಾತು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದರು. ಹಿರಿಯವ ಹುಲಿ ಕೊಂದ. ಎರಡನೆಯನಿಗೆ ಕಳ್ಳರ ಸಂಪತ್ತೆಲ್ಲ ಸಿಕ್ಕಿತು. ಮೂರನೇಯವಗ ಏಳು ರಂಜಣಗಿ ಮುತ್ತು ಮಾಣಿಕ್ಯ ಸಿಕ್ಕಿತು. ಅವನ್ನೆಲ್ಲ ಕುದುರೆ ಮೇಲೆ ಹಾಕಿಕೊಂಡು ಮೂರೂ ಅಣ್ಣತಮ್ಮರು ಹೊಂಟರು. ಹೆಣ್ಣು ದೊರೆತ ನಾಲ್ಲನೇಯವ ಮಾತ್ರ ಬ್ರ ಅಂತ ಯಾರ ಮುಂದೆಯೂ ಏನೂ ಹೇಳಲಿಲ್ಲ. ಕುದುರೆ ಏರಿ ನಾಲ್ಕೂ ಜನರು ಊರಹಾದಿ ಹಿಡಿದರು.

ಮೂವರು ಅಣ್ಣತಮ್ಮರಿಗೆಲ್ಲ ಹೆಣ್ಣು ಗಟ್ಟಿ ಮಾಡಿಕ್ಕಿದರು. ಹಾದಿಗೆ ಹಂದರ ಹಾಕಿ, ಬೀದಿಗೆ ಛಳಿಕೊಟ್ಟು ಲಗ್ನ ಮಾಡಿದರು. ಸಣ್ಣವ ಲಗ್ನಮಾಡಿಕೊಳ್ಳಲಿಕ್ಕೆ ಒಪ್ಪಲಿಲ್ಲ. ನಾಲ್ಕು ಜನ ಅಣ್ಣತಮ್ಮಂದಿರಿಗೆ ನಾಲ್ಕು ಮನೆ ಕೊಟ್ಟರು. ಎಲ್ಲರೂ ಬೇರೆ ಬೇರೆ ಇರಹತ್ತಿದರು.

ಸಣ್ಣವನಿಗೂ ಒಂದು ಮನೆ ಬಂತು. ಮನೆಯಲ್ಲಿ ಕುಳಿತು ವೀಣೆ ಬಾರಿಸಿದನು. ಜಲಕನ್ನಿಕೆ ಬಂದುಬಿಟ್ಟಳು. ದಿನಾಲು ಇವನು ವೀಣೆಬಾರಿಸಬೇಕು, ಅವಳು ಬರಬೇಕು. ಹೀಗೆ ಬಹಳ ದಿನ ನಡೀತು.

ಒಂದಿನ ಹಿರಿಯಣ್ಣನ ಹೆಂಡತಿ ನೀರಿಗೆಂದು ಸಣ್ಣವನ ಮನೆ ಮುಂದೆ ಬಂದಿದ್ದಳು. ಮೈದುನನ ಬಸ್ತಾನಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಅವನ ಮನೆಯೊಳಗೆ ಹೋದಳು. ಅವನ ಮನಸ್ಸು ಹೇಗಾದರೂ ನಿಲ್ಲುತ್ತದೆಂಬುದು ಅವಳಿಗೆ ಬೇಕಾಗಿತ್ತು. ಅವಳು ಅಲ್ಲಿಗೆ ಬಂದಾಗ ಮೈದುನ ಇರಲಿಲ್ಲ. ಮನೆಯೆಷ್ಟು ಆರಾಮಸಿರಿ ಇದೆ. ಮನೆ ತುಂಬ ಸಾಮಾನೇ ಸಾಮಾನ ಅವೆ.. ಗಾದಿ ಅದೆ, ಪಲ್ಲಂಗ ಅದೆ. ಸಾಕಾದಷ್ಟು ಬಾರ್ದಾನಿ ಅದೆ – ಎಂದುಕೊಂಡಳು. ಗಾದಿಯ ಮೇಲೆ ಮಲಗಿದಳು. ಅಲ್ಲೆ ಗಾದಿಯ ಬಳಿ ವೀಣೆಯಿತ್ತು. ಅದನ್ನು ಕೈಯಲ್ಲಿ ತೆಗೆದುಕೊಂಡು ಬಾರಿಸಿದಳು. ಜಲಕನ್ನಿಕೆ ಗಪ್ಪನೆ ಬಂದಳು. ನೆಗೆಣ್ಣಿಗೆ ನೋಡಿದಳು. ಇಬ್ಬರಿಗೂ ಕೈಗೆ ಕೈ ಹತ್ತಿ ಜಗಳ ಆಯಿತು. ಕೈಗೆ ಕೈ ಮೈಗೆ ಮೈ ಚೂರಾಡಿದರು. ಇದಾವ ತಿಪಲು ಎಂದು ಜಲಕನ್ನಿಕೆ ವೀಣೆ ತಕ್ಕೊಂಡು ಹೋದಳು. ಈ ಕಡೆ ಹಿರಿಯವನ ಹೆಂಡತಿ ಗಪ್ಪುಚಿಪ್ಪಾಗಿ ಮನೆಗೆ ಹೋಗಿಬಿಟ್ಟಳು.

ತಮ್ಮ ಮನೆಗೆ ಬಂದನು. ವೀಣೆ ಮನೆಯಲ್ಲಿ ಇರಲಿಲ್ಲ. ಸೀದಾ ಅಣ್ಣಗಳ ಮನೆಗೆ ಹೋಗಿ ಕೇಳಿದ. “ನಮ್ಮ ಮನೆಗೆ ಯಾರಾದರೂ ಬಂದಿದ್ದರೇ?” “ಯಾರೂ ಇಲ್ಲಪ್ಪ. ನನಗೇನೂ ಗೊತ್ತಿಲ್ಲ” ಎಂದಳು ಹಿರಿಯವನ ಹೆಂಡತಿ. ಯಾರಿಗೂ ಏನೂ ಅನ್ನಲು ಬಾರದಂತಾಯಿತು ತಮ್ಮನಿಗೆ.

ಸಣ್ಣವನು ಜಲಕನ್ನಿಕೆಯನ್ನು ಹುಡುಕುತ್ತ ಹೊರಟನು. ಹಾದಿಯಲ್ಲಿ ಇಬ್ಬರು ಕಳ್ಳರ ನಡುವೆ ನ್ಯಾಯ ಬಿದ್ದಿತ್ತು. ಅವರ ಬಳಿಯಲ್ಲಿ ಒಂದು ಬಟ್ಟಲು, ಒಂದು ಜಮಖಾನೆ, ಒಂದು ಬಡಿಗೆ ಇದ್ದವು. ತಮಗೆ ಎರಡು ಜೀನಸು ಬೇಕೆಂದು ಇಬ್ಬರು ಜಗಳಾಡುತ್ತಿದ್ದರು. ಬಟ್ಟಲು ಬೇಡಿದ್ದು ಕೊಡುತ್ತಿತ್ತು ; ಹಾಗೂ ಮನಸ್ಸಿನಲ್ಲಿ ಇಚ್ಛೆಮಾಡಿದ್ದೆಲ್ಲ ಆಗಿಬಿಡುತ್ತಿತ್ತು. ಜಮಖಾನೆ ಹಾಸಿದರೆ ಬೇಕಾದಷ್ಟು ಜನ ಕೂತರೂ ಸಾಲುತ್ತಿತ್ತು. ಬಡಿಗೆ ಯಾರನ್ನು ಹೊಡೆಯೆಂದರೂ ಅವರನ್ನು ಹೊಡೆಯುತ್ತಿತ್ತು.

ದಾರಿಹಿಡಿದು ಆತನು ಸಾಗಿದ್ದನ್ನು ಕಂಡು ಆ ಕಳ್ಳರು ಅವನನ್ನು ಕರೆದು. ತಮ್ಮಲ್ಲಿರುವ ಮೂರು ಜೀನಸುಗಳನ್ನು ಹಂಚಿಕೊಡಲು ಹೇಳಿದರು. ಬಡಿಗೆ ಬಡಿಯುವದೆಂದೂ ಬಟ್ಟಲು ಬೇಡಿದ್ದು ಕೊಡುವದೆಂದೂ ತಿಳಿಸಿದರು. ಸಣ್ಣವನು ಒಂದು ಬಾಣಬಿಟ್ಟು ಹೇಳುತ್ತಾನೆ. -ಈ ಬಾಣವನ್ನು ಯಾರು ಮೊದಲು ತರುವರೋ ಅವರಿಗೆ ಎರಡು ಜೀನಸು. ಅವರು ಬಾಣದಗುಂಟ ಓಡಿದಾಗ, ಇವನು ಬೇರೆದಿಕ್ಕು ಹಿಡಿದು ಮೂರು ಜೀನಸು ತಕ್ಕೊಂಡು ಓಡಿಬಿಟ್ಟನು.

ಎಕ್ಕೀಹಳ್ಳಿಗೆ ಹೋಗಿ ಒಂದು ಚೌರಿ ಖರೀದಿಮಾಡಿದನು. ಧಾರಣಿ ಮಾತಾಡಿದರೂ ಅದನ್ನು ಇನ್ನೂ ಕೈಯೊಳಗೆ ತಕ್ಕೊಂಡಿದ್ದಿಲ್ಲ. ಏಳು ಜನ ಕನ್ನಿಕೆಯರು ಚೌರಿ ತಕ್ಕೊಂಡು ಹೋಗಲಿಕ್ಕೆ ಬಂದಿದ್ದರು. ಇವನಿಗೆ ಪಸಂದವೆನಿಸಿದ ಚೌರೀನೆ ಅವರಿಗೂ ಪಸಂದ ಬಿತ್ತು. “ನಮಗೆ ಇದೇ ಚೌರಿ ಬೇಕು” ಅಂದಾಗ, “ಆ ಚೌರಿ ಇವನು ತಕ್ಕೊಂಡುಬಿಟ್ಟಿದ್ದಾನೆ. ಇವನಿಗೆ ಕೇಳಿ ತಕ್ಕೊಳ್ಳಿರಿ” ಎಂದು ಅಂಗಡಿಯವನು ಹೇಳಿದನು.

ಏಳನೇ ಜಲಕನ್ನಿಕೆಯ ಕಣ್ಣಿಗೆ ಇವನೇ “ನನ್ನ ಮೇಲೆ ಇನ್ನೊಬ್ಬಳನ್ನು ಇಟ್ಟುಕೊಂಡಿರುವಿ” ಎಂದಾಗ ಅವನಿಗೆ ದಿಗಿಲು ಹಿಡಿಯಿತು. ಆದರೂ ಅವಳು ಚೌರಿ ತಕ್ಕೊಂಡು ಇವನಿಗೆ ವೀಣೆ ಕೊಟ್ಟಳು. ಕರೆದಾಗ ಬರುವೆನು ಎಂದು ವಾಯಿದಾ ಮಾಡಿ ಏಳನೇ ಜಲಕನ್ನಿಕೆ ಹೋಗುತ್ತಾಳೆ.

ಸಣ್ಣವನು ಸೈರರ ಮನೆಗೆ ಹೋಗಿ ಉಳಕೊಂಡನು. ಬಟ್ಟಲವಿಟ್ಟು ಬೇಕಾಗಿದ್ದನ್ನು ಬೇಡಿದ. ಹೊಟ್ಟಿತುಂಬ ಉಂಡ. ಸೈರ ಮುದುಕಿ – “ಊಟಕ್ಕೇನು ಮಾಡಲೋ ಎಂದರೆ, `ನನಗೇನೂ ಬೇಡ’ ಅಂದನು. “ಈತನು ನಿಶ್ಚಂತನಾಗಿಯೇ ಇದ್ದಾನೆ ಇವನಿಗೆ ಊಟ ಹೇಗೆ ಸಿಗುವದು” ಎಂದು ಮುದುಕಿಗೆ ಕುದಿಯೇ ಬಿತ್ತು. ಒಮ್ಮೆ ಕೇಳಿಯೇ ಬಿಟ್ಟಳು. ಅವನು ಹೇಳಿದನು, “ಬಟ್ಟಲು ಬೇಡಿದ್ದು ಕೊಡುತ್ತದೆ. ಬಡಿಗೆ ಹೊಡೆಯುತ್ತದೆ. ಜಮಖಾನೆ ಎಷ್ಟು ಮಂದಿ ಕುಳಿತರೂ ಸಾಲುತ್ತದೆ.”

ಗೌಡರ ಮನೆಯಲ್ಲಿ ಶೋಭನಕಾರ್ಯ. ಸೈರಮುದುಕಿ ಅವನಿಗೆ ಹೇಳಿ ಜಮಖಾನೆ ಒಯ್ದಳು. ಹೊರಟಾಗ ಹೇಳಿದಳು – “ನೋಡುಮಗಾ, ಪಾತರದವರ ನಾಚು ಅದೆ ಇಂದು. ನೋಡಲಿಕ್ಕೆ ಬಾ”. ಅವನು ನಾಚು ನೋಡಲಿಕ್ಕೆ ಹೋಗಿ ಕುಳಿತನು. ಮುದುಕಿ ಮನೆಗೆ ಬಂದವಳೆ ಬಟ್ಟಲು, ಬಡಿಗೆ ಎತ್ತಿಕೊಂಡು ಓಡಿತು.

ನಾಚು ನೋಡಿ ಮನೆಗೆ ಬಂದು ವೀಣೆಬಾರಿಸಿದನು. ಜಲಕನ್ನಿಕೆ ಬಂದಳು. “ನನ್ನ ಯಾಕೆ ಕರೆದಿ” ಎನ್ನಲು, “ನನ್ನ ಬಡಿಗೆ ಬಟ್ಟಲು ಹೋಗಿವೆ” ಎಂದು ಹೇಳಿದಳು. “ಇದಿಷ್ಟೇ ಮಾತು” ಎನ್ನುತ್ತ ಹೋಗಿಬಿಟ್ಟಳು.

ಗಿಡದ ಬುಡಕ್ಕೆ ಕುಂಚಿಯಿಟ್ಟುಕೊಂಡು ಸಾಲಿಗರ ಮುದುಕಿ ಮಲಗಿತ್ತು. ಬಡಿಗೆ ಮಲಗಿದ್ದ ಮುದುಕಿಯನ್ನು ರಪರಪ ಬಡಿಯಿತು. “ಅವರದನ್ನು ಅವರಿಗೆ ಕೊಟ್ಟರೆ ನಿನಗೇಕೆ ಬಡಿಗೆ ಬಡಿಯುವದು” ಎಂದು ಜಲಕನ್ನಿಕೆಯು ಬಟ್ಟಲು ಬಡಿಗೆ ತೆಗೆದುಕೊಂಡು ಹೋದಳು. ಬಡಿತ ತಿಂದು ಮೈಯೆಲ್ಲ ಹಸಿಹುಣ್ಣು ಮಾಡಿಕೊಂಡ ಮುದುಕಿ ಸಿಳ್ಳೋ ಎಂದು ಮರಳಿಹೋಯಿತು.

ಜಲಕನ್ನಿಕೆ ನೇರವಾಗಿ ಅವನ ಮನೆಗೆ ಬಂದಳು. ಮೂವರೂ ಅಣ್ಣಗಳು ಮತ್ತು ಅವರ ಹೆಂಡಿರು ತಮ್ಮನ ಮನೆಗೆ ಬಂದರು. ಜಲಕನ್ನಿಕೆ ಹಿರಿನೆಗೆಣ್ಣಿಯ ಗುರುತುಹಿಡಿದಳು. ಆರು ತಿಂಗಳು ಮೈದುನನನ್ನು ಅಡವೀಪಾಲು ಮಾಡಿದ ಅವಳನ್ನು ಮನೆಯಿಂದ ಹೊರಗೆ ಹಾಕಿಸಿದಳು. ಜಲಕನ್ನಿಕೆಯ ಕೂಡ ತಮ್ಮನ ಲಗ್ನ ಧಾಮಧೂಮದಿಂದ ಮಾಡಿದರು. ಆ ಬಳಿಕ ನಾಲ್ವರೂ ಅಣ್ಣತಮ್ಮರು ಒಂದೇ ಕಡೆಯಲ್ಲಿ ಇರತೊಡಗಿದರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್