ಇಂದು ವಾಸ್ತವವಾದಿ ನಾನು, ನನ್ನ ಚಿಕ್ಕ ವಯಸ್ಸಿನಲ್ಲಿ ಮಹಾ ಆಸ್ತಿಕನಾಗಿದ್ದೆ. ದೇವರು, ದಿಂಡರ ಬಗ್ಗೆ ಅಪಾರವಾದ ನಂಬಿಕೆ. ಹೀಗಾಗಿ ನಮ್ಮ ಊರಿನಲ್ಲಿ ದೀಪಾವಳಿ ಸಂದರ್ಭದಲ್ಲಿ ನಮ್ಮ ಓಣಿ ಸಿದ್ದರಾಮೇಶ್ವರ ದೇವರ ಕಂಚಿನ ಉತ್ಸವ ಮೂರ್ತಿಗಳನ್ನು ಹೊತ್ತುಕೊಂಡು, ಡೊಳ್ಳು, ಡಕ್ಕೆಗಳೊಂದಿಗೆ ೩೦ ಕಿ.ಮೀ ದೂರದಲ್ಲಿರುವ ಹೊಳೆಗೆ ನಡೆದುಕೊಂಡು ಹೋಗಿ, ಅವುಗಳನ್ನು ಶುಚಿಭೃತಗೊಳಿಸಿ, ಮೂರನೇ ದಿನಕ್ಕೆ ವಾಪಸ್ಸು ಬಂದು, ಅದ್ದೂರಿ ಜಾತ್ರೆಯನ್ನು ಆಚರಿಸುತ್ತಿದ್ದೆವು.

ಇದೇ ಸಂದರ್ಭದಲ್ಲಿ ಅಂದಿನ ಗಂಗವ್ವ ಗೌಡಶಾನಿಯ ಹೊಲದ ಮೂಲೆಯಲ್ಲಿ ಇದ್ದ, ತಿಪ್ಪಣ್ಣನ ಗುಡಿಯ ಪಕ್ಕದಲ್ಲಿ, ನಾವೇ ಒಂದು ಏಳೆಂಟು ಹುಡುಗರು ಸೇರಿಕೊಂಡು, ಕೆಸರು ಕಲಿಸಿಕೊಂಡು, ಗುಡಿಯನ್ನು ಕಟ್ಟಿ, ಅದರೊಳಗೆ ಗುಂಡುಕಲಿನ ದೇವರನ್ನು ಪ್ರತಿಷ್ಠಾಪಿಸಿ, ಅವುಗಳಿಗೆ ಕೆಂಪುಬಣ್ಣದ ಮುಖವನ್ನು ಬರೆದು, ರಾಹುವಿನಂತೆ ಕಾಣುವ ಹಾಗೆ ಮಾಡುತ್ತಿದ್ದೆವು. ಇಷ್ಟ ಮಾತ್ರವಲ್ಲದೇ, ಮಹಾ ನವಮಿಯ ದಿನ ಆ ಗುಂಡುಕಲ್ಲು ದೇವರಿಗೆ ಅದ್ದೂರಿ ಜಾತ್ರೆ ಮಾಡಲೆಂದು, ಅವರಿವರಲ್ಲಿ ಹಣ ಕೇಳುತ್ತಿದ್ದೆವು. ಅವರಿವರ ಮನೆಯಲ್ಲಿ ಜೋಳ ಸಂಗ್ರಹಿಸುತ್ತಿದ್ದೆವು. ಅವರಿವರ ಮನೆಯಲ್ಲಿ ಹತ್ತಿಯನ್ನು ಕೊಡುತ್ತಿದ್ದರು. ಇವುಗಳೆಲ್ಲವನ್ನು ಸಂಗ್ರಹಿಸಿ, ತಾಳಿಕೋಟೆಗೆ ಹೋಗಿ, ಜಾತ್ರೆಗೆ ಏನೇನು ಬೇಕೋ ಎಲ್ಲವನ್ನೂ ಕೊಂಡು, ಜಾತ್ರೆಯ ದಿನ ಓಣಿಯವರಿಗೆಲ್ಲಾ ಹುಗ್ಗಿ ಊಟ ಹಾಕಿಸುತ್ತಿದ್ದೆವು. ಇಷ್ಟು ಅಲ್ಲದೇ, ಗುಂಡು ಕಲ್ಲು ದೇವರ ಪ್ರತಿರೂಪವಾದ ಬೆಂಡಿನಲ್ಲಿ ಮಾಡಿದ ಕುದುರೆ ದೇವರುಗಳನ್ನು ಕೆಲವು ಗೆಳೆಯರು ಹೊತ್ತು ಕೊಳ್ಳುತ್ತಿದ್ದರೆ ನಮ್ಮಲ್ಲಿ ಕೆಲವರು ಸಿದ್ದರಾಮೇಶ್ವರ ದೇವಸ್ಥಾನದ ಡೊಳ್ಳುಗಳನ್ನು ತಂದು ಬಡಿಯುತ್ತಿದ್ದರು. ಮತ್ತು ಹೆಂಗಳೆಯರನ್ನು ಸೇರಿಸಿಕೊಂಡು ಜಾತ್ರೆಯ ಹಾಡುಗಳನ್ನು ಹಾಡಿಸುತ್ತಿದ್ದೆವು.

ನಾವು ಏಳೆಂಟು ಜನ ಹುಡುಗರು ಸೇರಿಕೊಂಡು ಮಾಡಿದ ಈ ಸಾಹಸ ಜಾತ್ರೆಯ ದಿನ ಮೂನ್ನೂರಕ್ಕೂ ಹೆಚ್ಚು ಜನ ಸೇರುವಂತೆ ಮಾಡಿತ್ತು. ಮಾತ್ರವಲ್ಲ ನಾವು ಮಾಡಿದ್ದ ಸೇವೆಗೆ ಪ್ರತಿಫಲದಂತೆ ಆ ದೇವಸ್ಥಾನವನ್ನು ಕಟ್ಟಿಸಲು ಉಳ್ಳವರು ಮುಂದೆ ಬಂದೇ ಬಿಟ್ಟರು.

ಕೆಲವರು ಒಂದೊಂದು ಗಾಡಿ ಕಲ್ಲುಗಳನ್ನು ಪುಕ್ಕಟೆಯಾಗಿ ಹಾಕಿಸಿದರೆ, ಕೆಲವರು ತುಂಡು-ತೊಲೆಗಳನ್ನು ಕೊಟ್ಟರು. ಇನ್ನೂ ಕೆಲವರು ಗೌಂಡಿಗಳಾಗಿ ಕೆಲಸ ಮಾಡುವುದಾಗಿ ಹೇಳಿ, ಕೊನೆಗೊಂದು ಶುಭ ಮುಹೂರ್ತದಲ್ಲಿ ೧೫ ಅಡಿ ಎತ್ತರದ ದೇವಸ್ಥಾನವನ್ನು ಕಟ್ಟಲು ಪ್ರಾರಂಭಿಸಿ, ಮತ್ತೆ ಶುಭ ಮುಹೂರ್ತದಲ್ಲಿ ಮುಕ್ತಾಯಗೊಳಿಸಿದರು. ಹತ್ತಾರು ವರ್ಷ ಕಳೆದ ನಂತರ ಶಾಲೆ, ಕಾಲೇಜು ಮುಗಿಸಿ, ಏನೆಲ್ಲಾ ಕಷ್ಟಪಟ್ಟು ನೌಕರಿಯನ್ನ ಪಡೆದುಕೊಂಡೆ. ನಂತರ ವಾಸ್ತವಿಕತೆ ಮತ್ತು ವಿಚಾರವಾದಿಗಳ ಪ್ರಭಾವ ನನ್ನ ಮೇಲೆ ಹೆಚ್ಚಾಯಿತು. ಇಂತಹ ಸಂದರ್ಭದಲ್ಲಿ ನಾನು ನಮ್ಮೂರಿಗೆ ಹೋದಾಗ, ನಮ್ಮ ಊರಿನಲ್ಲಿ ಬಲು ಜೋರಾದ ಜಾತ್ರೆ ನಡೆಯುತ್ತಿತ್ತು. ನೂರಾರು ಜನ ಭಕ್ತರು ದೇವರು ಬಂದರು ಬನ್ನಿರೊ…. ಎಂದು ಉದ್ಘೋಷ ಮಾಡುತ್ತಿದ್ದರು. ಎಂತಹ ವಿಪರ್ಯಾಸ ನೋಡಿ?.. ಹೊರಗೆ ಕಟ್ಟೆಗೆ ಬಂದು ನಿಂತು, ಕಲ್ಲು ದೇವರನ್ನು ಪೂಜಿಸುತ್ತಾ, ಗುಡಿ ಗುಂಡಾರಗಳನ್ನು ಮೇಲಕ್ಕೆತ್ತಿ ಮೂಕ ಪ್ರಾಣಿಗಳನ್ನು ಬಲಿಕೊಟ್ಟು, ಬಡವರ ರಕ್ತ ಹೀರುವ ಈ ದೇವರ ಜಾತ್ರೆ ಯಾಕೆ ಬೇಕು? ಈ ದೇವರನ್ನು ಸೃಷ್ಟಿಸಿದವರಾರು? ಎಂದು ಕಠೋರವಾಗಿ ನನ್ನೊಳಗೆ ನಾನು ಬೈಯ್ಯುತ್ತಿದ್ದೆ. ಹೊರಗಡೆ ನನ್ನ ಜೊತೆ ಬಂದು ನಿಂತಿದ್ದ ನಮ್ಮಮ್ಮ ನನ್ನನ್ನು ತಿವಿದು, ಆ ಗುಂಡುಕಲ್ಲಿಗೆ ನೀವೇ ದೇವರೆಂದು ಕರೆದು, ಬಣ್ಣ ಹಚ್ಚಿ, ದೇವರ ಸ್ವರೂಪವನ್ನು ನೀಡಿದ್ರಪ್ಪ. ಜಾತ್ರೆ ಬೇರೆ ಶುರು ಮಾಡಿಸಿದ್ರಿ, ಅದೇ ಜಾತ್ರೆ ಇದು. ನೀವ ಹುಟ್ಟು ಹಾಕಿದ ಈ ದೇವರಿಗೆ ನೀವೇ ಹಿಂಗ ಕಂಡಾಪಟ್ಟೆ ಬೈದ್ರೆ, ಆ ದೇವರು ನಿಮಗೆ ಶಾಪ ಕೊಡುವುದು ಗ್ಯಾರಂಟಿ, ಎಂದಂದುಬಿಟ್ಟಳು.

ನಾನ್ ಏಕ್ದಮ್ ಮೌನಿಯಾದೆ. ನನ್ನೊಳಗೆ ನಾನು ಇಳಿದು, ೧೫ ವರ್ಷಗಳ ಹಿಂದಕ್ಕೆ ಹೋದೆ. ಹೌದು! ತೆರೆಬಿದ್ದಿದ್ದ ನೆನಪಿನ ಚರಿತ್ರೆ ತೆಗೆದುಕೊಂಡಿತು. ಹೌದು! ದೇವರನ್ನು ಸೃಷ್ಟಿ ಮಾಡಿದವರಲ್ಲಿ ನಾನೂ ಒಬ್ಬ. ಈಗ ಬೈದರೆ ಜನ ನನ್ನನ್ನೇ ಅಪಹಾಸ್ಯ ಮಾಡುತ್ತಾರೆ. ಎಂಥವನು ಹೆಂಗಾದ್ನಲ್ಲಾ..? ಎಂದು ಓಣಿಯವರು ಬೈದು ಬಿಡ್ತಾರೆ. ಅದಕ್ಕಾಗಿ ದೇವರ ಸೃಷ್ಟಿಯ ಮೂಲ ಯಾವುದೇ ಆಗಿರಲಿ, ಹಳ್ಳಿಗಾಡಿನ ಹಬ್ಬ, ಹರಿದಿನ, ಜಾತ್ರೆಗಳೆಲ್ಲವೂ, ಒಂದು ಗ್ರಾಮೀಣ ಸಂಸ್ಕೃತಿಯ ಹಬ್ಬವೆಂದು ತಿಳಿದುಕೊಂಡು ಅನುಭವಿಸಲು ಬೇಕು. ಈ ಜಾತ್ರೆಯಲ್ಲಿ ಹಬ್ಬದ ಶಿಷ್ಟಾಚಾರವೀರುತ್ತದೆ, ಜಾನಪದ ಸಂಸ್ಕೃತಿ ಮಡುಗುಟ್ಟಿರುತ್ತದೆ. ಊರಿನವರೆಲ್ಲಾ ಈಗ ಶುಭಮನಸ್ಸಿನವರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾನೊಬ್ಬ ಕಠೋರ ಸತ್ಯವನ್ನು ಮಾತನಾಡಿದರೆ, ದೈವ ದ್ರೋಹಿಯಾಗಿಬಿಡುತ್ತೇನೆ. ಹೌದು! ನಾನು ಇವರ ಜೊತೆ ಸೇರಿಕೊಂಡು, ಈ ದೇವರ ಹುಟ್ಟು ಹಾಕುವಲ್ಲಿ ನಾನು ಒಬ್ಬನಾಗಿದ್ದರೂ ಅದನ್ನು ಮರೆತು, ಜಾನಪದ ಸಂಸ್ಕೃತಿಯನ್ನು ಸಂಭ್ರಮಿಸಲು, ಆನಂದಿಸಲು, ಅನುಭವಿಸಲು, ಆ ಜಾತ್ರೆ ಜನರೊಳಗೆ ಒಂದಾಗಿ ಹೋದೆ.
*****