ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು
ಆಕ್ರಮಿಸಿದ ಶಬ್ದ: ಕ್ರ್‍ವಾಕ್.

ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ
ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ.

ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ.
ಮನಸ್ಸಿನಲ್ಲೆ ಮೆಸ್ಸಿನ ಲೆಕ್ಕ ಕೂಡಿಸುತ್ತಿದ್ದೆ ಅಷ್ಟೆ.

ಆಗ ಹೊಕ್ಕ ಶಬ್ದ ಅದು.  ಹೇಗೆಂದು ತಿಳಿಯದು.
ಮರೆಯಲು ಪ್ರಯತ್ನಿಸಿದಷ್ಟೂ ಆವರಿಸತೊಡಗಿತು.

ಯಾವ ಭಾಷೆಗೆ ಸೇರಿದ್ದೊ ನನಗೆ ಗೊತ್ತಿರಲಿಲ್ಲ.
ಜನ ಮಾತಾಡುವಾಗ ಗುಟ್ಟಾಗಿ ಕೇಳಿದೆ.

ತಿಳಿದವರನ್ನು ವಿಚಾರಿಸಿದೆ.  ಹಲವು ಪುಸ್ತಕಗಳನ್ನು ನೋಡಿದೆ
ಏನೂ ಉಪಯೋಗವಾಗಲಿಲ್ಲ.  ಎಂದ ಮೇಲೆ

ಇಂಥ ಶಬ್ದ ಸುಳ್ಳೆಂದುಕೊಂಡೆ.  ಆದರೆ ಕ್ರ್‍ವಾಕ್ ಮಾತ್ರ ನಿಜವಾಗುತ್ತಿದೆ.
ಕಡಲು ಕಾಗೆ ಹಾಗೆ ಮತ್ತೆ ಮತ್ತೆ ಎರಗುತ್ತಿದೆ.

ಕೆಲವೊಮ್ಮೆ ನನಗೇ ತಿಳಿಯದಂತೆ ನನ್ನ ಭಾಷೆಯನ್ನು ಅದು
ಪ್ರವೇಶಿಸಿದಂತೆ ತೋರುತ್ತದೆ.  ಯಾಕೆಂದರೆ

ಮಾತಿನ ಮಧ್ಯೆ ಕೆಲವರು ಕೇಳುವುದನ್ನು ಬಿಟ್ಟು ನನ್ನ
ಮುಖವನ್ನೆ ನೋಡುವುದನ್ನು ಕಂಡಿದ್ದೇನೆ.

ಇದು ಭಯಂಕರ.  ಹೀಗೆ ಆರಿಸಲ್ಪಡುವುದಕ್ಕೆ
ನಾನಾದರೂ ಏನು ಮಾಡಿದ್ದೇನೆ?
*****