ಅಂಗಳದ ತುಂಬಾ
ಮುತ್ತು ಪೋಣಿಸಿದ
ಹಾಗೆ ಚುಕ್ಕಿಗಳ
ಚಿತ್ತಾರ….
ಚಿತ್ತಾರದಲ್ಲಿನ ಚೌಕಗಳಲ್ಲಿ
ನೀಲಿ, ಬಿಳಿ, ಗುಲಾಬಿ,
ನೇರಳೆ ರಂಗುಗಳ
ಕಲಸು ಮೇಲೋಗರ.
ಭಾವಗಳ ಆಳ
ಬಣ್ಣಗಳ ಮೇಳ
ಚಿತ್ರದ ಜೀವಾಳ.


ಪರಿಕರಗಳ ಅಭಾವ
ಚಿತ್ರ ಪೂರ್ಣಗೊಳಿಸಲಾಗಲಿಲ್ಲ.
ಮಾತು ಬಣ್ಣ ಕಟ್ಟಿದ
ಭಾಷೆಯಲ್ಲ ಗೆಳೆಯಾ…
‘ಸುತ್ತು ಬಳಸಿದ ಮಾತು’
ಸಲ್ಲ… ಎಂದೆನ್ನುವಿಯಾದರೆ
ಕೇಳು-
ಅಂಗಳ ನನ್ನೀ ಹೃದಯ
ನಿನ್ನದೇ ಚಿತ್ರ ಎಲ್ಲ….


ತಿದ್ದಿ, ತೀಡಿ, ಓರಣ-ಗೊಳಿಸಿದ್ದಾಗ್ಯೂ ಅರೆಬರೆ
ಅರ್ಥ, ಅಲಂಕಾರ
ಒಂದಿಷ್ಟು…. ನಿನ್ನ
ಕ್ರೌಯ, ಮಾತ್ಸರ್‍ಯ
ಪರಿಚಯಿಸುವಿಯಾದರೆ
ಕೆಂಪು-ಹಳದಿ ಹುಡಿ
ಹಾರಿಸಿ ಅನಾವರಣ-
ಗೊಳಿಸುತ್ತೇನೆ ಚಿತ್ರ-
ಪೂರ್ಣಗೊಳಿಸಲಾರೆಯಾ?