ಮಬ್ಬಗತ್ತಲೆವರೆಗೂ ತದ್ವತ್
ಕೆಲಸ
ಸಾಕರಿ ಕೋಲಿಗೂ
ಸಾಕರಿ ಹುಲ್ಲಿಗೂ ಹಗೆ
ತೀರಿಸುವ ಅವಳ ಕೈ ಕುಣಿತ

ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ
ಸಾಕರಿ ಕಟ್ಟಿನ ಲೆಕ್ಕ
ಇಡುತ್ತಾಳೆ
ಒಡೆಯ ಕೊಡುವ ಕೂಲಿಗಾಗಿ

ಬೊಕ್ಕೆಯೆದ್ದ ಕೈಗಳು
ಬಿರುಸಾಗುತ್ತಿವೆ ಕಟ್ಟು ಬಡಿದು
ಕ್ರಮೇಣ

ಆಗಾಗ ಒಡತಿಯಿಂದ ಎಣ್ಣೆ ಬೇಡಿ ಪಡೆವ ಆಕೆ
ತಿಕ್ಕಿಕೊಳ್ಳುತ್ತಾಳೆ ಕೈಗಳಿಗೆ
“ಹಾಯ್” ಎನ್ನುವಂತೆ
“ನನಗೆ ನಾನೇ, ಗೋಡೆಗೆ ಮಣ್ಣೆ”
ಉಸುರುತ್ತಾಳೆ ಆಗಾಗ

ಕೇಯ್ಯಿಂದ ಬೇರ್ಪಟ್ಟ ಭತ್ತಕ್ಕೆ
ಕಣಜಕ್ಕೆ ಹಾರುವ ಆಸೆ
ಜೊಳ್ಳು ಸೇರದಂತೆ ಹೊಟ್ಟು
ಹಾರಿಸುವಾಕೆಯ ಮಂತ್ರ ಮುಗ್ದ ಶೈಲಿ
ಒರೆ ಸೊಂಟದ ಹೆಣ್ಣ
ಕೈಬಳೆಯ ಲಯಬದ್ಧ ಉಲಿತ
ಗಾನ ಲೋಕದ ಪರ್ಯಾಯ
ಮತ್ತೀಗ ಕಳವನ್ನೆಲ್ಲಾ ಗುಡಿಸಿ
ಇಡುತ್ತಾಳೆ ಅರೆಬೆರೆ ಜೊಳ್ಳು
ಬೆರೆತ ಭತ್ತವನ್ನೆಲ್ಲಾ ಒಟ್ಟು
ಮಾಡಿ ಸೇರಿಸುತ್ತಾಳೆ ಕೈ ಚೀಲಕ್ಕೆ
ನಡಿಗೆ ಮನೆ ಕಡೆಗೆ

ದಣಪೆಯಲ್ಲಿ ದಡಿಯ
ಯರ್‍ರಾಬಿರ್‍ರಿ ಕುಡಿದು
ತಡಕ್ಕಾಡುತ್ತಿದ್ದಾನೆ ಮನೆ ಬಾಗಿಲು

ಭಾಗ್ಯ ಜ್ಯೋತಿಯ ಬೆಳಕಿನಲ್ಲಿ
ತಂದ ಭತ್ತವ ಕುಟ್ಟಿ
ಅನ್ನಕ್ಕಿಟ್ಟಿದ್ದಾಳೆ ಆಕೆ
ಇರುಳುಗತ್ತಲೆಯಲ್ಲಿ ಸಂಚಿಯ
ಕವಳ ತೆಗೆದು ಬಾಯಿಗಿಡುತ್ತಾಳೆ
ಪುರಸೊತ್ತು ಮಾಡಿ

ಅನ್ನದ ನಿಗಿ ನಿಗಿ ಬೆಂಕಿಯ
ಪಕ್ಕ ಬೆಚ್ಚಗೆ ಕುಳಿತು ಮಗ್ಗಿ
ಓದುತ್ತಿವೆ ಪುಟಾಣಿಗಳೆರಡು


ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)