ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ….
ನಿನ್ನ ಬಾದಾಮಿ ಕಣ್ಣುಗಳ
ಪರಿಚಯ ನನಗಿರಲಿಲ್ಲ.
ನಿನ್ನ ಬೆವರಿನ ಪರಿಮಳಕ್ಕೆ
ನನ್ನ ಮೂಗು ಅರಳುತ್ತದೆಯೆಂದು
ನನಗೆ ಗೊತ್ತಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ಬೆಚ್ಚನೆಯ ಎದೆಯಲ್ಲಿ
ಮರೆತ ಸಂಗತಿಗಳಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.
ನನ್ನ ಪ್ರೀತಿವಂಚಿತ ಕವಿತೆಗೆ
ನೀನು ಬಣ್ಣದ ಅಂಗಿ ತೊಡಿಸುತ್ತಿ
ಎಂದು ತಿಳಿದಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ಭಾರವಾದ ಹೆಜ್ಜೆಗಳು
ನನ್ನ ದಣಿಸುತ್ತವೆ
ಎಂದು ತಿಳಿದಿರಲಿಲ್ಲ.
ನಿನ್ನ ಬಡಿದ ಕೆನ್ನೆಗಳು
ನನ್ನನ್ನು ಕಂಗೆಡಿಸುತ್ತವೆ
ಎಂದುಕೊಂಡಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ತುಟಿಯಲ್ಲಿ ವಸಂತನ
ನಗುವನ್ನು ಕಂಡು
ಓಡಿಬಂದಿದ್ದೆನಾದರೂ
ಇದೀಗ ಮಂಜಿನಲ್ಲಿ ಇಡಿಯಾಗಿ
ಹೂತುಹೋಗಿದ್ದೇನೆ.

ಈ ಒಂದು ಕ್ಷಣದ ಹಿಂದೆ….
ಬೆಳಗಿನ ಸೂರ್ಯನನ್ನು
ಭೇಟಿಯಾಗೋಣ ಎಂದು
ಕರೆದದ್ದು ನೀನೆ.
ಇದೀಗ ಮುಸ್ಸಂಜೆ
ಹೊರಡೋಣ ಅನ್ನುತ್ತಿದ್ದೀಯಾ….
… ಎಂತಹ ಕೊನೆ??


Previous post ಆಸೆ – ೧
Next post ಪ್ರಕೃತಿ ಮತ್ತು ಪುರುಷ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…