ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ
ನಿನ್ನೆದುರು ಏನಿಲ್ಲ ಮಾನಾವಮಾನ!

ನಿಗಿ ನಿಗೀ ಉರಿಯುವ
ಕೆಂಡ ಈ ಮನಸು
ಘಮ ಘಮದ ಹುಡಿಧೂಪ
ನೀನಿತ್ತ ಕನಸು
ಬಿದ್ದಂತೆ ಹುಡಿ ಧೂಪ
ಉರಿ ಕಾರಿ ಬಣ್ಣ
ಏಳುವುವು ಗೀತೆಗಳು
ಪರಿಮಳಿಸಿ ನನ್ನ!

ಕಾದು ಎದೆ ಬಿರಿದಿರುವ
ಬೇಸಿಗೆಯ ಭೂಮಿ
ಕಾದಿರುವೆ ಸುರಿದೀತು ಕಾರ್ಮುಗಿಲ ಬಾನಿ
ಕುಡಿದೇನು ಇಡಿಧಾರೆ
ಬೇಡುವೆನು ಮತ್ತೆ
ಜನುಮಗಳೆ ಸರಿದರೂ
ಕಾಯುವೆನು ಗೊತ್ತೆ?
*****

ಪುಸ್ತಕ: ನಿನಗಾಗೇ ಈ ಹಾಡುಗಳು