Home / ಲೇಖನ / ವ್ಯಕ್ತಿ / ವಿಶ್ವಸುಂದರಿಯ ಸುತ್ತ

ವಿಶ್ವಸುಂದರಿಯ ಸುತ್ತ

ದಿನಾಂಕ ೨೧-೫-೧೯೯೪ ರಂದು ಶನಿವಾರ ಬೆಳಗ್ಗೆ ೮-೨೦ ಕ್ಕೆ ದೂರದರ್ಶನದಲ್ಲಿ ವಿಶ್ವಸುಂದರಿ ಸ್ಪರ್ಧೆ ನೇರ ಪ್ರಸಾರ ಪ್ರಾರಂಭವಾಯಿತು. ಮೊದಮೊದಲು ತೀವ್ರಾಸಕ್ತಿಯೇನೂ ಇಲ್ಲದೆ ಆಯ್ಕೆ ವಿಧಾನದ ಬಗ್ಗೆ ಕುತೂಹಲ ಮಾತ್ರದಿಂದ ನೋಡುತ್ತಾ ಕೂತಿದ್ದ ನನ್ನಲ್ಲಿ ಬರಬರುತ್ತಾ ಉತ್ಕಟತೆ ಮೂಡುತ್ತ ಬಂತು. ನಮ್ಮ ದೇಶದ ಸುಸ್ಮಿತ ಸೆನ್ ಮೊದಲ ಹಂತಗಳನ್ನು ದಾಟಿ ಸ್ಪರ್ಧೆಯ ಅಂತ್ಯ ಹಂತಗಳು ನಗೆಹೆಜ್ಜೆ ಇಡುತ್ತ ಹೋದಂತೆ ಉಳಿದೆಲ್ಲ ವಿಷಯಗಳೂ ಗೌಣವಾಗುತ್ತ ನಮ್ಮ ದೇಶದ ಯುವತಿ ವಿಶ್ವ ಸುಂದರಿಯಾದಾಳೆಂಬ ನಿರೀಕ್ಷೆಯಲ್ಲಿ ಹುಟ್ಟಿದ ಉತ್ಕಟತೆ ಉತ್ತರವೆಂಬಂತೆ ಆಕೆ ಗೆದ್ದೇಬಿಟ್ಟಳು. ಗೆಲ್ಲುವ ಗಳಿಗೆಯಲ್ಲಿ ಕೈಮುಗಿಯುವ ಸಹಜ ಕ್ರಮದಿಂದ ಹತ್ತಿರವಾಗುತ್ತ ಅತ್ತುಬಿಟ್ಟಳು. ಆಕೆಯ ಅಳುವಿನಲ್ಲಿ ಆನಂದದ ಆಪ್ತ ಒತ್ತಡವಿತ್ತು. ಸಾಧನೆಯ ಸಂತೋಷವಿತ್ತು. ಸ್ಪರ್ಧೆಯಲ್ಲಿದ್ದ ೭೭ ಜನರಲ್ಲಿ ೭೬ ಜನರನ್ನು ಹಿಂದಕ್ಕೆ ಹಾಕಿದ ಉತ್ಸಾಹವಿದೆ. ಇಂಥ ಅಪರೂಪದ ಅಳು ಎಷ್ಟು ಜನಕ್ಕೆ ಸಾಧ್ಯ?

ಸುಸ್ಮಿತಾಸೆನ್‌ರ ಅಳುವಿಗೆ ಇನ್ನೊಂದು ಆಯಾಮವೂ ಲಭ್ಯವಾಗಿದ್ದರೆ ಎಷ್ಟು ಚೆನ್ನ ಎಂದು ನನಗನ್ನಿಸುತ್ತದೆ. ನಾನು ಬಯಸುವ ಇನ್ನೊಂದು ಆಯಾಮ ಹೀಗಿದೆ: ಒಟ್ಟು ೮೬ ಜನರೊಂದಿಗೆ ಒಂದಾಗಿ ಸೇರಿಕೊಂಡು ಸಂಖ್ಯೆಯನ್ನು ೭೬ ಕ್ಕೇರಿದ ಸುಸ್ಮಿತಾ ಸೇನ್ ಈಗ ಒಂಟಿ! ತನ್ನೊಂದಿಗೆ ಜೊತೆಗೂಡಿದ ೭೬ ಜನರಲ್ಲಿ ಒಂದೊಂದು ಹಂತದಲ್ಲೂ ಕೆಲವರನ್ನು ಕಳೆದು ಕೊಳ್ಳುತ್ತ ಕಡೆ ಮೂರು ಜನರ ಗುಂಪಾಗಿ, ಪರಸ್ಪರ ತಬ್ಬಿಕೊಂಡು ಪ್ರೀತಿ ಪ್ರಕಟಿಸುತ್ತಲೇ, ಮತ್ತೆ ಇಬ್ಬರನ್ನು ಕಳೆದುಕೊಂಡು, ಏಕಾಕಿಯಾಗಿ ಕಿರೀಟ ಧರಿಸಿದ ಸಂದರ್ಭದಲ್ಲಿ, ಕಟ್ಟಿಕೊಂಡ ಕೀರ್ತಿಗಿಂತ ಕಳೆದುಕೊಂಡ ಪ್ರಕ್ರಿಯೆ ಕ್ಷಣಕಾಲ ಕಾಣಿಸಿದರೆ ಸಾಕು. ಈಗ ಸುಸ್ಮಿತಾ ಅಳು ಕೇವಲ ಸಂಭ್ರಮವನ್ನು ಹೇಳುವುದಿಲ್ಲ; ಸಂಕಟವನ್ನೂ ಅನುಭವಿಸುತ್ತದೆ; ಉತ್ಕಟ ಭಾವುಕತೆಯಲ್ಲಿ ಬರಿದುಗೊಳ್ಳುವ ಭಾವನೆಲೆ ಸೆಳೆಯುತ್ತದೆ. ವ್ಯಕ್ತಿ ವ್ಯಕ್ತಿಗಳ ಆವರಣದಲ್ಲಿ ಅಳುವಿಗೆ ಆನಂದ ಮತ್ತು ಆತಂಕಗಳು ಅನುಭವ ಒಟ್ಟಿಗೆ ಆಗುತ್ತದೆ. ಸುಸ್ಮಿತಾ ಹೀಗೆಲ್ಲ ಆಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಹೀಗೆ ಆಗುವಂತಿದ್ದರೆ ಸಾಧನೆಗೆ ಸಂತೋಷಕ್ಕೆ ಸಿಗುವ ಒಳನೋಟದ, ನಿಲುವುಗಳ ಆಯಾಮ ಮಾತ್ರ ವಿಶಿಷ್ಟವಾದುದು.

ಸುಸ್ಮಿತಾ ವಿಶ್ವ ಸುಂದರಿ ಪಟ್ಟ ಹತ್ತಿದಾಗ ಸ್ಪರ್ಧಾತ್ಮಕ ಸಾಧನೆ ವೈಚಿತ್ರ್ಯಗಳು ನನ್ನನ್ನು ಕಾಣತೊಡಗಿದವು. ಸಾಧನೆ ಎನ್ನುವುದು ವ್ಯಕ್ತಿಯನ್ನು ಒಂಟಿಯನ್ನಾಗಿಸುವ ವಿಚಿತ್ರ ಹುನ್ನಾರವೆ ಎನಿಸಿಬಿಟ್ಟಿತು. ಮೇಲಕ್ಕೆ ಏರುತ್ತಲೇ ತಾನು ಬದುಕಿದ ಸ್ತರಗಳ ಜೊತೆ ನಿಕಟ ಸಂಬಂಧವನ್ನು ಸಾಧಿಸುತ್ತ ಹೋಗದಿದ್ದರೆ ಮೂಲವಲಯದಿಂದ ವಂಚಿತವಾದ ಒಂಟಿಯಾಗ ಬಹುದು, ಅಥವಾ ಹೊಸ ವಲಯದ ವಯ್ಯಾರ ತೋರಬಹುದು. ಏನೇ ಆದರೂ ಅಲ್ಲಿವರೆಗೆ ಸಮೂಹ ಸ್ಪರ್ಶವನ್ನು ಕಳೆದುಕೊಳ್ಳುತ್ತ ಒಂಟಿಯಾಗುತ್ತ ಹೋದ ಮೇಲೆ ತಾನೆ ಹೊಸ ವಲಯದ ಹೊಂದಾಣಿಕೆ? ಏನೇ ಹೊಸ ಹೊಂದಾಣಿಕೆಯಾದರೂ ಮುಂದಿನ ಸಂಬಂಧಗಳನ್ನು ಕಳೆದುಕೊಳ್ಳುವ ಕ್ರಿಯೆಯಂತೆ ನಡೆಯುತ್ತದೆ. ಎತ್ತರಕ್ಕೆ ಏರುತ್ತಲೇ ಕೆಳಕ್ಕೆ ಇಳಿಯುವ ವೈಚಿತ್ರ್ಯಗಳು ಜೀವನದ ವ್ಯಂಗ್ಯವಾಗಿ ಬಿಡುತ್ತವೆ.

ಸುಸ್ಮಿತಾಸೇನ್ ತನ್ನೊಂದಿಗಿದ್ದ ೭೬ ಜನರಿಂದ ಬೇರ್ಪಟ್ಟು ‘ವಿಶ್ವ ಸುಂದರಿ’ಯಾದಾಗ ಉಳಿದ ಸುಂದರಿಯರ ಜೊತೆಗಿದ್ದ ಸಮಾನ ಸ್ಥಾನವನ್ನು ಕಳೆದುಕೊಂಡರು. ಎಲ್ಲರ ಜೊತೆಗಿದ್ದು ಒಂಟಿಯಾದ. ಕಿರೀಟಧಾರಣೆಯ ಸುಖ ಸಂಭ್ರಮದಲ್ಲಿ ಉಳಿದ ಸುಂದರಿಯರ ಮಾನಸಿಕ ಸ್ಥಿತಿ ಮರೆತುಹೋಗಿರುವ ಬಹುದು; ಎದುರಿಗೆ ಚಪ್ಪಾಳೆ ತಟ್ಟುವ ಜನರಷ್ಟೇ ಕಾಣಿಸಬಹುದು, ಆದರೆ ಸೌಂದರ್ಯವೆನ್ನುವುದು ಕೆಲವೇ ನಿಮಿಷಗಳ ಹಿಂದೆ ಸಮಾನವಾಗಿದ್ದ ಸುಂದರಿಯರಿಂದಲೂ ಬೇರ್ಪಡಿಸಿದ್ದಲ್ಲದೆ, ಮುಂದೆ, ಎದುರಿಗಿದ್ದ ಜನರಿಂದಲೂ ಬೇರ್ಪಡಿಸುತ್ತದೆ. ಯಾಕೆಂದರೆ ಈ ವಿಶ್ವ ಸುಂದರಿ ಸಮಾನ ಸುಂದರಿಯರು ಮತ್ತು ಸಾಮಾನ್ಯ ಸುಂದರಿಯರಿಗಿಂತ ಭಿನ್ನವಾದ ಬದುಕಿಗೆ ತಳ್ಳಲ್ಪಡುತ್ತಾಳೆ, ವಿಮಾನದಲ್ಲಿ ಊರೂರು ಸುತ್ತುತ್ತಾ ಹುಸಿ ನಗೆ ಸತ್ಕಾರದಲ್ಲಿ ಸೊರಗುತ್ತ, ಅದನ್ನೇ ಸುಖವೆಂದು ಭ್ರಮಿಸುತ್ತಾ ಬದುಕುತ್ತಾಳೆ. ಇಂಥ ಬದುಕಿನ ನಡುವೆ ಭ್ರಮಗಳನ್ನು ಸೀಳುವ ಸುಂದರ ವಾಸ್ತವವನ್ನು ಪಡೆಯಲು ಸಾಧ್ಯವಾಗುವಂಥ ಅಳು, ಅಂದು ಸುಸ್ಮಿತಾ ಬಂದಿರಬಹುದೆ ಎಂದು ಸಣ್ಣ ಆಸೆ ಇಟ್ಟು ಕೊಂಡಿದ್ದೇನೆ. ಯಾಕೆಂದರೆ ಎತ್ತರಕ್ಕೆ ಏರಿದವರೆಲ್ಲ ನೆಲದ ಜೊತೆಗಿರಬೇಕೆಂಬ ಕನಸು ನನ್ನದು.

ಸುಸ್ಮಿತಾಸೆನ್ ಅವರ ವಿಜಯದಲ್ಲಿ ನನಗೆ ಇಷ್ಟವಾದ ಇನ್ನೊಂದು ಅಂಶವೆಂದರೆ ನಮ್ಮ ಪಠ್ಯಪುಸ್ತಕಗಳ ಸೌಂದರ್ಯ ರಾಣಿಯಂತೆ ಆಕೆ ಇರಲಿಲ್ಲ ಎನ್ನುವುದು. ಹಾಗೆ ನೋಡಿದರೆ ನಮ್ಮ ಸೌಂದರ್ಯದ ಕಲ್ಪನೆಯೇ ವಿಚಿತ್ರವಾದದ್ದು. ಯಾರಾದರೂ ನಮಗಿಂತ ಬೆಳ್ಳಗಿದ್ದರೆ, ಉತ್ತಮ ಉಡುಪು ಧರಿಸಿದರೆ, ಸೊಟ್ಟ ಮೂತಿಯವರೂ ಸುಂದರವಾಗಿ ಕಾಣಿಸುವಂತೆ ನಮ್ಮ ಮನಸ್ಸನ್ನು ಸಿದ್ಧಗೊಳಿಸಿದ ಇತಿಹಾಸದಲ್ಲಿ ನಾವು ಹುಟ್ಟಿದ್ದೇವೆ. ಶ್ರೇಣೀಕೃತ ಸಮಾಜದಲ್ಲಿ ಉನ್ನತ ವೆಂದು ಕರೆದುಕೊಳ್ಳುವ ಶ್ರೇಣಿಗಳ ಸೌಂದರ್ಯದತ್ತ ಆಕರ್ಷಣೆಯುಳ್ಳವರಾಗಿದ್ದೇವೆ. ಇದಕ್ಕೆ ಅವರು ಉನ್ನತ ಶ್ರೇಣಿಯವರೆಂಬುದಷ್ಟೇ ಕಾರಣವಲ್ಲ. ಅವರು ಉಡುಪನ್ನು ಕ್ರಮಬದ್ಧವಾಗಿ ಧರಿಸಬಲ್ಲರು; ಮುಖಕ್ಕೆ ಅಲಂಕಾರ ಮಾಡಿಕೊಳ್ಳಬಲ್ಲರು; ತಲೆ ಕೂದಲನ್ನು ಚೊಕ್ಕವಾಗಿ ಕೂಡಿಸಬಲ್ಲರು. ಇಂಥ ಸಿಂಗಾರಕ್ಕೆ ಸಾಕಷ್ಟು ಬಿಡುವು ಮಾಡಿಕೊಳ್ಳುವ ಅವಕಾಶ ಪಡೆಯ ಬಲ್ಲವರಾದ್ದರಿಂದ ಚೆನ್ನಾಗಿ ಕಾಣಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಾರೆ. ಉಡುಗೆ, ನಡಿಗೆ -ಎಲ್ಲವನ್ನೂ ಕ್ರಮಬದ್ಧಗೊಳಿಸಿಕೊಳ್ಳುತ್ತಾರೆ. ಇಂಥವರನ್ನು ಕಂಡಾಗ ಬಿಟ್ಟ ಕಣ್ಣು ಬಿಟ್ಟಂತೆ ನಿಂತರೆ ಅದು ಸ್ವಾಭಾವಿಕ ಪ್ರತಿಕ್ರಿಯೆಯಾಗಿ ಇರುತ್ತದೆ. ಈ ಅಂಶ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆಯೆಂದರೆ, ನಮ್ಮ ಹಳ್ಳಿಗಳಿಗೆ ಯಾರಾದರೂ ಮೇಡಂ ಕೆಲಸಕ್ಕೆ ಬಂದರೆ ನಾವೆಲ್ಲ ಬೆಕ್ಕಸಬೆರಗಾಗಿ ನೋಡುವುದಕ್ಕಾಗಿಯೇ ಅವತರಿಸಿದವರಂತೆ ವರ್ತಿಸುತ್ತಿದ್ದೆವು. ಆಗ ಚಿಕ್ಕ ಹುಡುಗರಾಗಿದ್ದಾಗ ನಮಗೆ ಅವರು ವಿಶ್ವ ಸುಂದರಿಯಂತೆ ಕಾಣುತ್ತಿದ್ದರು. ಹಳ್ಳಿ ಗಾಡಿನಲ್ಲಿ ಅದೇ ತಾನೆ ಹುಟ್ಟುತ್ತಿದ್ದ ವಿದ್ಯೆಯ ಕಣ್ಣಿಗೆ ಸೌಂದರ್ಯದ ಅಂತಿಮ ಹಂತವೆಂದರೆ ಸ್ಕೂಲ್ ಮೇಡಮ್ಮೊ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಆಗಿರುತ್ತಿದ್ದರು. ನನಗೆ ಅವರ ಬಗ್ಗೆ ವಿಶೇಷ ಗೌರವವಿದ್ದಂತೆಯೇ ವಿಶೇಷ ಆಕರ್ಷಣೆ ಇರುತ್ತಿತ್ತು. ಇದು ಸೌಂದರ್ಯದ ಕಲ್ಪನೆ ಹುಟ್ಟು ಹಾಕಿದ ಒಂದು ವೈರುಧ್ಯವೇ ಸರಿ.

ಇದನ್ನು ನಾವು ಶಾಲೆ ಕಾಲೇಜುಗಳಲ್ಲಿ ಕಲಿಸುವ ಪಾಠಗಳಲ್ಲಿ ಬರುವ ಸೌಂದರ್ಯ ವರ್ಣನೆಗಳು ಬೆಳೆಸಿದ್ದು ಏನು ಎಂಬ ಪ್ರಶ್ನೆ ಕಾಡುತ್ತಿದೆ. ಸೌಂದರ್ಯವೆಂದರೆ ಸ್ತ್ರೀ ಮಾತ್ರ ಎನ್ನುವಂತೆ ಸಮೀಕರಿಸುವ ಸನ್ನಿವೇಶಗಳನ್ನು ಓದಿದವರು ಕಲ್ಪಿಸಿಕೊಳ್ಳುವ ಸುಂದರ ಸ್ತ್ರೀಗೆ ಸೊಂಟ ಸಣ್ಣಗಿರಲೇ ಬೇಕು; ಮೂಗು ನೀಳವಾಗಿರಲೇಬೇಕು. ಬಿಲ್ಲಿನಂಥ ಕಣ್ಣುಬ್ಬುಗಳು, ಉದ್ದವಾದ ಜಡೆ, ಅಗಲವಾದ ಕಣ್ಣು, ಕಮಲದಂಥ ಮುಖ ಇರಬೇಕು; ಬಣ್ಣವಂತೂ ಬೆಳ್ಳಗಿರಲೇಬೇಕಲ್ಲ? ಈ ಸೌಂದರ್ಯ ಪಾಠಕ್ಕನುಗುಣವಾಗಿ ಹುಡುಕಾಟ ನಡೆಸಿದರೆ ಕಾವ್ಯಗಳಲ್ಲಷ್ಟೇ ಸುಂದರಿಯರು ಸಿಕ್ಕಬಹುದು.

ಅಸಮಾನತೆಯ ವಿರುದ್ಧ ನಡೆಯುವ ಆಂದೋಲನಗಳು ತಂದುಕೊಡುವ ಆತ್ಮವಿಶ್ವಾಸಕ್ಕೂ ಸೌಂದರ್ಯಕ್ಕೂ ಸಂಬಂಧವಿದೆಯೆಂಬುದನ್ನು ದಕ್ಷಿಣ ಆಫ್ರಿಕಾದ ಕರಿಯರು ತೋರಿಸಿಕೊಟ್ಟಿದ್ದಾರೆ. ಬಿಳಿಯ ಬಣ್ಣ, ಸಣ್ಣ ಸೊಂಟಗಳು ಇಲ್ಲದೆ ಸೌಂದರ್ಯವನ್ನು ಕಾಣಲು ಸಾಧ್ಯವೆಂಬುದನ್ನು `Black is Beautiful’ ಎಂಬ ಘೋಷಣೆಯ ಮೂಲಕ ಸಾರಿದ್ದಾರೆ; ಸಾರ್ಥಕಗೊಳಿಸಿದ್ದರೆ. ಆದ್ದರಿಂದ ನಾನು ಅರಿಯಬೇಕು- ಆತ್ಮವಿಶ್ವಾಸದ ಆಂತರಂಗಿಕ ಶಕ್ತಿ ಬಹಿರಂಗದ ಸೌಂದರ್ಯವಾಗಿ ಮಿಂಚಬಲ್ಲದು. ಈಗ ಅಂಗಾಂಗಗಳಲ್ಲಿ ಅಲ್ಪಸ್ವಲ್ಪ ಅರೆಕೊರೆ ಹಾಗೂ ಅಸಮತೋಲನವಿದ್ದರೂ ಯಾವುದೋ ಕೋನದಲ್ಲಿ ಹೊಳೆಯುವ ಮಿಂಚು ನಮ್ಮನ್ನು ಆಕರ್ಷಿಸ ಬಲ್ಲದು. ಸೌಂದರ್ಯ ಎನ್ನುವುದು ಭೌತಿಕ ಆಕರ್ಷಣೆಗಳನ್ನು ಮೀರಿದ ಸ್ಥಿತಿಯನ್ನು ಹೇಳಬಹುದುದಾದರೂ ನಾನಿಲ್ಲಿ ಸಾಮಾನ್ಯ ಸಂದರ್ಭದ ಸೌಂದರ್ಯ ಪ್ರಜ್ಞೆ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ. ವಾಸ್ತವ ಬದುಕಿನ ಸಂದರ್ಭದಲ್ಲಿ ಇದು ಬಹುಮುಖ್ಯವೆಂದೂ ನಂಬಿದ್ದೇನೆ. ಅದೇನೇ ಇರಲಿ, ಇಂದು ಸೌಂದರ್ಯ ಎನ್ನುವುದು ತನ್ನ ಸಾಂಪ್ರದಾಯಿಕ ನೆಲೆಗಳನ್ನು ಕಳೆದುಕೊಳ್ಳುತ್ತಿದೆ. ವಿವಿಧ ಪ್ರದೇಶ, ಸಮಾಜ, ಸಂಸ್ಕೃತಿಗಳ ನಡುವೆ ಅಷ್ಟೇ ಅಲ್ಲದೆ, ಅವುಗಳ ಆಂತರ್ಯದಲ್ಲೂ ಸೌಂದರ್ಯ ಕಲ್ಪನೆಗಳು ವ್ಯತ್ಯಸ್ತಗೊಳ್ಳುತ್ತಿವೆ. ಅರಮನೆ, ಗುರುಮನೆ ಮತ್ತು ಸಿರಿಮನೆಗಳಲ್ಲಿ ಮಾತ್ರ ಸೌಂದರ್ಯವಿದೆಯೆಂದೋ ಅಥವಾ ಈ ಮನೆಗಳ ಮನ್ನಣೆ ಪಾತ್ರವಾಗಿ ಸುಂದರ-ಸುಂದರಿ ಎನ್ನಿಸಿಕೊಂಡವರಲ್ಲಿ ಮಾತ್ರ ಸೌಂದರ್ಯವಿದೆಯೆಂದೋ ನಂಬುವ ಕಾಲ ಬದಲಾಗುತ್ತಿದೆ. ವಿಶ್ವಸುಂದರಿಯೆಂದರೆ ವಿಶ್ವದಲ್ಲಿರುವ ಹೆಂಗಸರಿಗೆಲ್ಲ ಏಕೈಕ ಸುಂದರಿ ಎಂಬ ಕಲ್ಪನೆಯಲ್ಲಿದ್ದ ನನ್ನಂಥ ಹಳ್ಳಿ ಗಮಾರನಲ್ಲಿ ಸ್ಪರ್ಧೆಯಲ್ಲಿ ನಿಯಮಾನುಸಾರ ಗೆದ್ದವಳು ವಿಶ್ವಸುಂದರಿಯಾಗುತ್ತಾಳೆಂಬ ತಿಳುವಳಿಕೆ ಬಂದಿರುವುದು ಇಂಥ ಬದಲಾವಣೆಯ ಒಂದು ಭಾಗ.

ಹೀಗೆ ನಮ್ಮ ಸಾಮಾಜಿಕ-ಆರ್ಥಿಕ ವ್ಯವಸ್ಥೆ ಬೆಳೆಸಿದ ಶ್ರೇಣೀಕೃತ ಸೌಂದರ್ಯ ಕಲ್ಪನೆಯಲ್ಲದೆ, ವಸಾಹತುಶಾಹಿ ಸಂಸ್ಕೃತಿಯ ಸೌಂದರ್ಯ ಕಲ್ಪನೆಯೂ ಸ್ವಲ್ಪಮಟ್ಟಿಗೆ ಸಡಿಲಗೊಳ್ಳುತ್ತಿದೆ. ಇಂಡಿಯಾದಂಥ ದೇಶಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡು ಬಿಳಿ ಬಣ್ಣದ ನೆಲೆಯಿಂದ ಸೌಂದರ್ಯದ ಕಲ್ಪನೆಯನ್ನು ಒಂದು ನಿಲುವಾಗಿ ಬೆಳೆಸಿದ ವಸಾಹತುಶಾಹಿಗಳ ಹಿಡಿತಕ್ಕೆ ಜನರ ಹೋರಾಟಗಳು ಪೆಟ್ಟು ಕೊಡುತ್ತಿವೆ. ಇದರ ಫಲವಾಗಿ ಹಿಂದುಳಿದ ದೇಶಗಳಲ್ಲೂ ಆತ್ಮವಿಶ್ವಾಸ ಪ್ರೇರಿತ ಪರಿಕಲ್ಪನೆಗಳು ವಿಕಾಸ ಹೊಂದುತ್ತಿವೆ. ಇಷ್ಟಾದರೂ ಆರ್ಥಿಕ ಉದಾರೀಕರಣದ ನೆಪದಲ್ಲಿ ವಿದೇಶಿ ಹಿಡಿತಕ್ಕೆ ಹಾಸಿಗೆ ಹಾಸುವ ‘ಆರ್ಥಿಕ ಸೌಂದರ್ಯ ಪ್ರಜ್ಞೆ’ಯನ್ನೂ ಪ್ರದರ್ಶಿಸಲಾಗುತ್ತಿದೆ. ವಿಶ್ವದ ಶ್ರೇಣಿಕೃತ ವ್ಯವಸ್ಥೆಯಲ್ಲಿ ಇಂಡಿಯಾ ದೇಶವನ್ನು ಕೆಳವರ್ಗದ ಸ್ಥಾನಕ್ಕೆ ತಳ್ಳಲಾಗುತ್ತಿದೆ. ಪ್ರಬಲ ದೇಶಗಳ ರಾಜಕೀಯ ಸೌಂದರ್ಯದ ಎದುರು ನಮ್ಮ ದೇಶವನ್ನು ಕುರೂಪಿಯಂತೆ ಕಾಣಲಾಗುತ್ತಿದೆ.

ಇಂಥ ಸನ್ನಿವೇಶದಲ್ಲಿ, ಹಿಂದುಳಿದ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲೊಂದಾದ ನಮ್ಮ ಇಂಡಿಯಾಕ್ಕೆ ಸೇರಿದ ಸುಸ್ಮಿತ ಸನ್, ಸೌಂದರ್ಯ ಸ್ಪರ್ಧೆಯಲ್ಲಾದರೂ ವಿಶ್ವಶ್ರೇಣೀಕೃತ ಸೀಮೆಯ ಉಲ್ಲಂಘನೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತ, ಸೌಂದರ್ಯವು ಸರಮನೆಯಾಗದಿರಲಿ ಎಂದು ಹಾರೈಸುತ್ತೇನೆ.
*****
೦೫-೦೬-೧೯೯೪

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...