ಪುಂಸ್ತ್ರೀ – ೫

ಪುಂಸ್ತ್ರೀ – ೫

ಜಲದೊಳರಳಿತು ಪ್ರೇಮಕಮಲ

ಸೌಭದೇಶದ ಗಡಿಯವರೆಗೆ ಅವಳನ್ನು ಕರೆತಂದ ಹಸ್ತಿನಾವತಿಯ ರಥ ಅಲ್ಲಿ ನಿಂತಿತು. ಹಸ್ತಿನಾವತಿಯಿಂದ ಸೌಭಕ್ಕೆ ಎರಡು ದಿನಗಳ ಪಯಣ. ಎರಡು ರಾತ್ರೆಗಳನ್ನು ಛತ್ರಗಳಲ್ಲಿ ಕಳೆದು, ಅವುಗಳ ಸನಿಹದಲ್ಲೇ ಇದ್ದ ಅಶ್ವಶಾಲೆಗಳಲ್ಲಿ ಕುದುರೆಗಳನ್ನು ಬದಲಾಯಿಸಿ ಪಯಣ ಮುಂದುವರಿಸಬೇಕಾಯಿತು. ಹಸ್ತಿನಾವತಿಯಿಂದ ಹೊರಡುವಾಗ ತನ್ನ ಉಡುಪುಗಳನ್ನು ತೆಗೆದುಕೊಳ್ಳ ಬೇಕಾಗಿತ್ತೆಂದು ಅಂಬೆಗೆ ನೆನಪಾದದ್ದೇ ಆಗ. ಏನಿದ್ದರೂ ಇನ್ನು ಸ್ವಲ್ಪ ಹೊತ್ತು. ಸೌಭವನ್ನು ಕ್ಷೇಮವಾಗಿ ತಲುಪಿ ಸಾಲ್ವಭೂಪತಿಯ ಮುಖದರ್ಶನವಾದ ಮೇಲೆ ಎಲ್ಲವೂ ಸರಿಯಾಗುತ್ತದೆಂದು ಅವಳು ತನ್ನನ್ನು ಸಮಾಧಾನ ಪಡಿಸಿಕೊಂಡಳು.

ಪಯಣ ಕಾಲದಲ್ಲಿ ಹಸ್ತಿನಾವತಿಯ ಧ್ವಜ ರಾರಾಜಿಸುತ್ತಿದ್ದ ರಥವನ್ನು ಹಾದಿಯುದ್ದಕ್ಕೂ ಜನರು ನಿಂತು ಗೌರವದಿಂದ ವೀಕ್ಷಿಸುತ್ತಿದ್ದುದನ್ನು ಅವಳು ಗಮನಿಸಿದಳು. ಕೆಲವರು ಗೌರವದಿಂದ ಕೈ ಮುಗಿಯುತ್ತಿದ್ದರು. ಅದು ಆಚಾರ್ಯ ಭೀಷ್ಮರಿಗೆ ಅವರು ಸಲ್ಲಿಸುತ್ತಿರುವ ಗೌರವವಾಗಿರಬೇಕು. ಅವರು ನಿಜಕ್ಕೂ ದೊಡ್ಡವರು. ಅವರ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ತನಗೆರಡು ಒದ್ದು ಬಲಾತ್ಕಾರದಿಂದ ವಿಚಿತ್ರವೀರ್ಯನ ಅಂತಃಪುರಕ್ಕೆ ತಳ್ಳುತ್ತಿದ್ದರು. ಆರ್ಯಾವರ್ತದಲ್ಲಿ ಹೆಣ್ಣಿನ ಭಾವನೆಗಳನ್ನು ಗೌರವಿಸಬೇಕೆಂದು ಒಬ್ಬ ಕ್ಷತ್ರಿಯನಿಗಾದರೂ ಅನ್ನಿಸಿತಲ್ಲಾ? ಸಾಲ್ವ ಭೂಪತಿಗೂ ಹಾಗೆ ಅನ್ನಿಸದಿರಲಾರದು. ಕೊನೆಗೂ ಸಾಲ್ವಭೂಪತಿಯ ರಾಣಿಯಾಗುವ ಶುಭಗಳಿಗೆ ಸಮೀಪಿಸುತ್ತಿದೆ.

ವಿಚಿತ್ರವೀರ್ಯನ ಮುಖವನ್ನೊಮ್ಮೆ ಅಂಬೆ ನೆನಪಿಸಿಕೊಂಡಳು. ಮೀಸೆ, ಗಡ್ಡ ನುಣ್ಣಗೆ ಬೋಳಿಸಿಕೊಂಡ ಪುರುಷ ಕಳೆ ಲವಲೇಶವೂ ಇಲ್ಲದ ನಿರ್ಭಾವ ಮುಖ. ಹಸ್ತಿನಾವತಿಯಲ್ಲಿ ಭೀಷ್ಮ ಸತ್ಯವತಿಯರೊಡನೆ ಚರ್ಚಿಸುವಾಗ ಮಧ್ಯದಲ್ಲಿ ಒಂದೇ ಒಂದು ಮಾತು ಹೇಳಲು ಅವನಿಂದ ಸಾಧ್ಯವಾಗಿರಲಿಲ್ಲ. ಒಂದು ಹಂತದಲ್ಲವನು ತನಗೂ, ಈಗ ನಡೆಯುತ್ತಿರುವ ಮಾತುಕತೆಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಎದ್ದು ನಡೆದಿದ್ದ. ರಥಕ್ಕೆ ಕೈ ಮುಗಿಯುವ ಈ ಜನರು ಆ ವಿಚಿತ್ರವೀರ್ಯನ ಮುಖವನ್ನು ನೋಡಿದ್ದಾರೋ ಇಲ್ಲವೊ? ಅವನನ್ನು ಗಂಡೆಂದು ಭಾವಿಸಲು ಯಾರಿಂದಲೂ ಸಾಧ್ಯವಿಲ್ಲ. ಹೆಣ್ಣೆಂದು ಭಾವಿಸಲು ಅವನ ಗಂಡುಡುಗೆ ಅಡ್ಡಿಯಾಗುತ್ತದೆ.

ಅವಳ ಮನಸ್ಸು ಕಾಶಿಗೆ ಪಯಣಿಸಿತು. ಶೌರ್ಯವನ್ನು ಪಣವಾಗಿರಿಸಿ ಸ್ವಯಂವರದ ಓಲೆಗಳನ್ನು ಆರ್ಯಾವರ್ತದ ರಾಜ ಮಹಾರಾಜರುಗಳಿಗೆ ಅಪ್ಪ ಕಳುಹಿಸುವಾಗ ಅಂಬೆ ತನ್ನ ತಂಗಿಯಂದಿರೊಡನೆ ಅಸಮಾಧಾನ ತೋಡಿಕೊಂಡಿದ್ದಳು: “ಅಪ್ಪ ನಮ್ಮನ್ನು ಮೂವರನ್ನು ಒಬ್ಬನಿಗೇ ಕಟ್ಟ ಹೊರಟಿದ್ದಾನೆ. ಸ್ವಯಂವರದಲ್ಲಿ ವಧುವಿಗೆ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ. ವಿಕ್ರಮವೇ ಪಣವಾಗಿರುವುದರಿಂದ ಗೆದ್ದಾತನನ್ನು ನಾವು ಮೂವರೂ ವರಿಸಬೇಕಾಗುತ್ತದೆ. ನಮಗಿಲ್ಲಿ ಆಯ್ಕೆಯ ಸ್ವಾತಂತ್ರ್ಯವಿಲ್ಲ. ಯಾವ ಭಾಗ್ಯಕ್ಕೆ ಇದನ್ನು ಸ್ವಯಂವರವೆಂದು ಕರೆಯ ಬೇಕಿತ್ತು? ಸ್ವಯಂವರವನ್ನು ಏರ್ಪಡಿಸುವಾಗ ನಮ್ಮಲ್ಲಿ ಒಂದು ಮಾತು ಕೇಳಬೇಕೆಂದು ಅಪ್ಪನಿಗೆ ಅನ್ನಿಸಲಿಲ್ಲ. ಸ್ವಯಂವರದ ದಿನ ಹದಿಹರೆಯದವರಿಂದ ಹಿಡಿದು ಮುದಿಯರವರೆಗೆ ಕ್ಷತ್ರಿಯರು ಬಂದು ನೆರೆಯುತ್ತಾರೆ. ಅನಾಘ್ರಾತ ಪುಷ್ಪಗಳು ತಮ್ಮದಾಗಬೇಕೆಂಬ ಲಾಲಸೆ ಯಾವ ಪುರುಷನಿಗಿರುವುದಿಲ್ಲ? ಬಲ ಹೆಚ್ಚಿಸಿ ರಾಜ್ಯ ವಿಸ್ತರಣೆಗೆ ಈ ವಿವಾಹವೊಂದು ನೆಪ. ರಕ್ತಹರಿದ ಮಂಟಪದಲ್ಲಿ ಎಲ್ಲರಿಗಿಂತ ಹೆಚ್ಚು ರಕ್ತ ಹರಿಯಲು ಕಾರಣನಾಗುವ ಪುರುಷ ಸಿಂಹನೊಡನೆ ನಮ್ಮ ಮದುವೆಯಾಗುತ್ತದೆ. ಸುಮಧುರ ಭಾವನೆಗಳ ಮನುಷ್ಯನೊಡನಲ್ಲ.

ಅಂಬಿಕೆ, ಅಂಬಾಲಿಕೆಯರು ಅದಕ್ಕೇನೂ ಪ್ರತಿಕ್ರಿಯೆ ನೀಡಲಿಲ್ಲ. ಎಳವೆಯಿಂದಲೂ ಅಷ್ಟೇ. ಅವರಿಗೆ ಉಡುಪುಗಳಲ್ಲಿ, ಶೃಂಗಾರ ಸಾಧನಗಳಲ್ಲಿ, ಬಂಗಾರದ ಒಡವೆಗಳಲ್ಲಿ ಮಾತ್ರ ಆಸಕ್ತಿ. ಇವಳು ಕಾವ್ಯ, ಶಾಸ್ತ್ರ ಓದುವಾಗ ಅವರು ತಮ್ಮನ್ನು ಸಿಂಗರಿಸಿಕೊಳ್ಳುವುದರಲ್ಲಿ ಸಂತೋಷ ಕಂಡುಕೊಳ್ಳುತ್ತಿದ್ದರು. ಕಾಶಿಯಲ್ಲಿ ಸಮಸ್ತ ಆರ್ಯಾವರ್ತದ ಬಗೆಬಗೆಯ ಸುಗಂಧ ದ್ರವ್ಯಗಳು ಸಿಗುತ್ತವೆ. ಅವೆಲ್ಲವನ್ನೂ ಅವರು ತರಿಸಿಕೊಳ್ಳುತ್ತಿದ್ದರು. ಆಗಾಗ ಅವುಗಳನ್ನು ಪೂಸಿಕೊಳ್ಳುತ್ತಿದ್ದರು. ಅಧರಕ್ಕೆ ಅದೇನೇನೋ ಲೇಪಗಳನ್ನು ಹಚ್ಚುತ್ತಿದ್ದರು. ಎಡಗೈಯ ಉಗುರುಗಳನ್ನು ಉದ್ದಕ್ಕೆ ಬೆಳೆಯಗೊಟ್ಟು ಅವುಗಳಿಗೆ ಬೇರೆ ಬೇರೆ ಬಣ್ಣ ಬಳಿಯುತ್ತಿದ್ದರು. ಅದಕ್ಕಾಗಿ ಅವರನ್ನು ಶೂರ್ಪನಖಿಯರೆಂದು ಕರೆದರೂ ಅವರಿಗೆ ಬೇಸರವಾಗುತ್ತಿರಲಿಲ್ಲ. ಅವರ ದಿನಗಳು ಹಾಗೆ ತಮ್ಮನ್ನು ಸಿಂಗರಿಸಿಕೊಳ್ಳುವುದರಲ್ಲಿ, ಮುತ್ತು ರತ್ನ ಮತ್ತು ಸ್ವರ್ಣಾಭರಣಗಳನ್ನು ಹೇರಿಕೊಂಡು ದರ್ಪಣಗಳ ಮುಂದೆ ನಿಂತು ಮೈ ಮರೆಯುವುದರಲ್ಲಿ, ತರುಣರಾದ ಆಸ್ಥಾನಿಕರ ಮೈಕಟ್ಟನ್ನು ವರ್ಣಿಸುವುದರಲ್ಲಿ, ಅರಮನೆಯೊಳಗೇ ಅಡ್ಡಾಡುವುದರಲ್ಲಿ ಕಳೆದು ಹೋಗಿಬಿಡುತ್ತಿದ್ದವು. ಅವರಿಂದ ಯಾವ ಪ್ರತಿಕ್ರಿಯೆಯನ್ನೂ ನಿರೀಕ್ಷಿಸಲು ಸಾಧ್ಯವಿರಲಿಲ್ಲ.

ಅಪ್ಪ ವಿಕ್ರಮವನ್ನು ಪಣವಾಗಿಡುವ ಬದಲು ಸ್ವಯಂವರವನ್ನು ಮಾತ್ರ ಏರ್ಪಡಿಸಿದರೆ ಸಾಕಿತ್ತು. ಆಗ ಇಷ್ಟವಾದವನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಆಚಾರ್ಯ ಭೀಷ್ಮರು ಸ್ವಯಂವರ ಮಂಟಪಕ್ಕೆ ಪ್ರವೇಶಿಸಿದ ಬಳಿಕವೂ ಸಾಲ್ವಭೂತಿಯನ್ನು ವರಿಸಲು ಸಾಧ್ಯವಿತ್ತು. ಕ್ಷತ್ರಿಯನೊಬ್ಬ ಎಷ್ಟು ಬೇಕಾದರೂ ಪತ್ನಿಯರನ್ನು ಹೊಂದಲು ಸಾಧ್ಯವಿರುವ ವ್ಯವಸ್ಥೆಯೊಂದರಲ್ಲಿ ತನ್ನ ಮೂವರು ಪುತ್ರಿಯರು ಒಬ್ಬನ ಕೈಹಿಡಿದರೆ ಜೀವನದಲ್ಲಿ ನಿಜವಾದ ಸುಖ ಉಣ್ಣಲಾರರೆಂದು ಅಪ್ಪನಿಗೆ ಹೊಳೆಯಲು ಸಾಧ್ಯವೇ ಇರಲಿಲ್ಲ. ಸದಾ ಬೀದಿ ನಾಯಿಗಳ ಹಾಗೆ ಕಚ್ಚಾಡುವ ಅವನ ಆಸ್ಥಾನದ ಪಂಡಿತರಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡಬಾರದೆಂಬ ಬಗ್ಗೆ ಒಮ್ಮತವಿತ್ತು. ಒಮ್ಮೆ ಆಸ್ಥಾನ ಪುರೋಹಿತನೊಬ್ಬ ಹೆಣ್ಣುಗಳಿಗೆ ಹೃದಯವೇ ಇಲ್ಲವೆಂಬ ಶ್ಲೋಕ ಹೇಳಿದ್ದಕ್ಕೆ ಇಡೀ ಸಭೆ ಸಂತೋಷಪಟ್ಟಿತ್ತು. ಮಾನವ ದೇಹದ ಕನಿಷ್ಠ ಜ್ಞಾನವೂ ಇಲ್ಲದವನೊಬ್ಬ ರಚಿಸಿದ್ದ ಆ ಶ್ಲೋಕವನ್ನು ಅಪೌರುಷೇಯವೆಂದು ಪಂಡಿತರು ಕೊಂಡಾಡಿದ್ದರು. ತಂಗಿಯರೊಡನೆ ಆ ಶ್ಲೋಕದ ಬಗ್ಗೆ ಹೇಳಿದಾಗ ಅವರೂ ಅದನ್ನು ವಿರೋಧಿಸಲಿಲ್ಲ. ವಸ್ತ್ರಾಭರಣ ಮತ್ತು ದೇಹ ಸೌಂದರ್ಯವೇ ಪ್ರಧಾನವೆಂದು ಭಾವಿಸಿಕೊಂಡವರ ಮಿದುಳು ಸರಿಯಾಗಿ ಕೆಲಸ ಮಾಡುವುದಿಲ್ಲ!

ತಂಗಿಯರೊಡನೆ ಪತಿಯನ್ನು ಹಂಚಿಕೊಳ್ಳಲು ಅಂಬೆ ಸಿದ್ಧಳಿರಲಿಲ್ಲ. ಅಮ್ಮನೊಡನೆ ತನ್ನ ಮನಸ್ಸನ್ನು ಹೇಳಿಕೊಂಡಳು. ಹಟ ಮಾಡಿ ಒಂದೆರಡು ಸಲ ಊಟ ಬಿಟ್ಟಳು. ಅಪ್ಪ ಕರಗಲಿಲ್ಲ. ಅಮ್ಮ ಕಣ್ಣೀರಿಟ್ಟಳು. ಅದಕ್ಕಿಂತ ಹೆಚ್ಚಿನದನ್ನು ಅವಳೇನು ಮಾಡಿಯಾಳು? ಸ್ವಯಂವರದ ಪಣ ಬದಲಾಗಲಿಲ್ಲ. ಅಂಬೆಗೆ ದಿಕ್ಕೇ ತೋಚದಂತಾಯಿತು.

ಅವಳು ಎಳವೆಯಲ್ಲಿ ಹಟ ಮಾಡಿ ಶಸ್ತ್ರವಿದ್ಯೆ, ಅಶ್ವ ಸವಾರಿ ಕಲಿತಿದ್ದಳು. ಶಾಸ್ತ್ರವಿದ್ಯೆಯನ್ನು ಕಲಿಯುವ ಹಂಬಲ ತೋಡಿಕೊಂಡಾಗ ಕುಲಪುರೋಹಿತ ಹೆಣ್ಣಿಗೆ ಶಾಸ್ತ್ರವಿದ್ಯೆ ನಿಷಿದ್ಧವೆಂದು ರಾಮರಂಪ ಮಾಡಿಬಿಟ್ಟ. ಅಪ್ಪನೂ ಆರಂಭದಲ್ಲಿ ಹಿಂದೇಟು ಹಾಕಿದ. ಹೆಣ್ಣು ಕಲಿತೇನಾಗ ಬೇಕೆಂದು ಪ್ರಶ್ನಿಸಿದ. ತನಗೆ ಗಂಡು ಸಂತಾನ ಆಗಲಾರದೆಂಬ ಭಾವ ಮೂಡಿದಾಗ ಒಪ್ಪಿಕೊಂಡ.

ಅವಳಿಗೆ ಶಾಸ್ತ್ರವಿದ್ಯೆ ಹೇಳಿಕೊಡುತ್ತಿದ್ದ ಪುರೋಹಿತ ಪ್ರತಿದಿನ ಪಾಠಕ್ಕೆ ಮೊದಲು “ಹೆಣ್ಣೊಬ್ಬಳಿಗೆ ವಿದ್ಯಾದಾನ ಮಾಡಿ ನಾನ್ಯಾವ ಕುಂಭೀಪಾಕ ನರಕಕ್ಕೆ ಹೋಗುತ್ತೇನೋ” ಎಂದ ಹಳಹಳಿಸುತ್ತಿದ್ದ. ಅದು ನಿಲ್ಲಲು ದಿನವೂ ಹತ್ತು ಹೊನ್ನು ನೀಡಬೇಕಾಗಿತ್ತು. ಅಷ್ಟಕ್ಕೇ ಅದು ಮುಗಿಯುತ್ತಿರಲಿಲ್ಲ. ಪ್ರತಿ ಶುಕ್ರವಾರ ಅವನು ಸ್ತ್ರೀ ವಿದ್ಯಾದಾನ ಪಾಪ ಪರಿಹಾರ ಹವನಕ್ಕೆಂದು ನೂರು ಹೊನ್ನುಗಳನ್ನು ತೆಗೆದುಕೊಳ್ಳುತ್ತಿದ್ದ. ಅರಮನೆಯಿಂದ ದೊಡ್ಡ ಪಾತ್ರೆಗಳಲ್ಲಿ ಕ್ಷೀರ, ಘೃತ ಮತ್ತು ಮಧುವನ್ನು ಹವನಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ. ಅವನು ಹವನ ನಡೆಸುತ್ತಿದ್ದನೋ ಇಲ್ಲವೊ? ಅಂಥದ್ದೊಂದು ಹವನದ ಹೆಸರನ್ನು ಅವಳು ಯಾರ ಬಾಯಿಯಿಂದಲೂ ಕೇಳಿರಲಿಲ್ಲ. ಆದರೆ ಅಷ್ಟು ಕೊಡದಿದ್ದರೆ ಅವನು ವಿದ್ಯಾದಾನ ಮಾಡುತ್ತಿರಲಿಲ್ಲ. ಅಂಬಿಕೆ, ಅಂಬಾಲಿಕೆಯರಿಗೆ ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಗಳಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ದೇಹಕ್ಕೆ ಮಹತ್ತ್ವ ನೀಡುವವರು ಬುದ್ಧಿಗೆ ಪ್ರಾಶಸ್ತ್ಯ ಕೊಡುವುದಿಲ್ಲ. ಏನನ್ನು ಕಂಡು ಇವರು ವಿಚಿತ್ರವೀರ್ಯನನ್ನು ಒಪ್ಪಿಕೊಂಡರು? ಇವರು ವರಿಸಿದ್ದು ಅವನನ್ನಲ್ಲ, ಹಸ್ತಿನಾವತಿಯ ಅಪರಿಮಿತ ಐಶ್ವರ್ಯವನ್ನು.

ಅಂಬೆಗೆ ತಂಗಿಯರ ಭವಿಷ್ಯವನ್ನು ನೆನೆದು ಖೇದವಾಯಿತು. ಮನಸ್ಸಿನ ಮಟ್ಟದಿಂದ ಬುದ್ಧಿಯ ಮಟ್ಟಕ್ಕೇರಲು ಅವರಿಂದ ಸಾಧ್ಯವಾಗಿರಲಿಲ್ಲ. ಅಂಬೆ ಪ್ರಶ್ನಿಸದೆ ಯಾವುದನ್ನೂ ಒಪ್ಪಿ ಕೊಳ್ಳುತ್ತಿರಲಿಲ್ಲ. ಆಳುವವರ ಅನಾಚಾರ ಮತ್ತು ಪುರೋಹಿತ ವರ್ಗದ ಶ್ರೇಷ್ಠತೆಗಳನ್ನು ಸಮರ್ಥಿಸುವ ಅದೆಷ್ಟೋ ಶ್ಲೋಕಗಳು ಕಾಶಿಯ ವಿದ್ಯಾಪೀಠದಲ್ಲಿ ಹುಟ್ಟಿ ಆರ್ಯಾವರ್ತದಾದ್ಯಂತ ಸಂಚರಿಸುತ್ತಿದ್ದವು. ಶಾಸ್ತ್ರಗಳಲ್ಲಿ ಅದಾಗಲೇ ಅದೆಷ್ಟು ಪ್ರಕ್ಷಿಪ್ತ ಶ್ಲೋಕಗಳಿದ್ದವೊ? ನಾಲ್ಕು ವರ್ಣಗಳ ಹೆಣ್ಣುಗಳಿಗೆ, ಶೂದ್ರರಿಗೆ ಮತ್ತು ದಸ್ಯುಗಳಿಗೆ ವೇದ ಶಾಸ್ತ್ರಾಧ್ಯಯನದ ಹಕ್ಕಿಲ್ಲವೆಂಬುದನ್ನು ರಾಜ ಒಪ್ಪಿಕೊಂಡಿದ್ದ. ಅದಕ್ಕೆ ಪೂರಕವಾದ ಹೊಸ ಹೊಸ ಶ್ಲೋಕಗಳನ್ನು ರಚಿಸುವುದಲ್ಲಿ ಆಸ್ಥಾನ ಪಂಡಿತರು ಮಗ್ನರಾಗುತ್ತಿದ್ದರು. ತನ್ನಂಥವರೇ ಪ್ರಾಯಶ್ಚಿತ್ತ ಹವನ ಮಾಡಿಸಿ, ಬ್ರಾಹ್ಮಣರಿಗೆ ಭೂದಾನ, ಗೋದಾನ, ವಸ್ತ್ರದಾನ, ಧವಸಧಾನ್ಯ ದಾನ, ಸುವರ್ಣದಾನ ಮಾಡಿ ಪಡೆಯಬೇಕಾಗಿದ್ದ ವಿದ್ಯೆ ಬಡಹೆಣ್ಣು ಮಕ್ಕಳಿಗೆ ದಕ್ಕಲು ಸಾಧ್ಯವಿಲ್ಲವೆಂಬುದು ಅವಳಿಗೆ ತಿಳಿದಿತ್ತು. ಶೋಷಣೆಯಿಲ್ಲದ ವ್ಯವಸ್ಥೆಯೊಂದನ್ನು ರೂಪಿಸುವ ಅಧಿಕಾರ ಮತ್ತು ಸಾಮಥ್ರ್ಯ ವಿರುವ ಕ್ಷತ್ರಿಯರು, ಪುರೋಹಿತ ವರ್ಗದೊಡನೆ ಒಂದಾಗಿ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಿರುವುದನ್ನು ತೀವ್ರ ವಿಷಾದದಿಂದ ಗಮನಿಸುವುದನ್ನು ಬಿಟ್ಟರೆ ಅವಳು ಬೇರೇನನ್ನೂ ಮಾಡುವಂತಿರಲಿಲ್ಲ.

ಶಸ್ತ್ರವಿದ್ಯೆ ಬಲ್ಲವಳಾದುದರಿಂದ ಅವಳು ನಿರ್ಭಯಳಾಗಿ ಕಾಶೀರಾಜ್ಯದಲ್ಲಿ ಎಲ್ಲಿ ಬೇಕೆಂದರಲ್ಲಿ ಸಂಚರಿಸುತ್ತಿದ್ದಳು. ಪುರುಷ ವೇಷಧಾರಿಯಾಗಿ ಅವಳು ಕುದುರೆಯೇರಿ ಹೊರ ಸಂಚಾರಕ್ಕೆ ಹೊರಟರೆ ರಸ್ತೆಯ ಇಕ್ಕೆಲಗಳಲ್ಲಿ ಪ್ರಜೆಗಳು ಇವನ್ಯಾರೀ ಹೊಸಬನೆಂದು ಅಚ್ಚರಿಯಿಂದ ನಿಂತು ನೋಡುತ್ತಿದ್ದರು. ನೀನು ಗಂಡಾಗಿ ಹುಟ್ಟಬೇಕಿತ್ತು ಮಗಳೇ ಎಂದು ಅಮ್ಮ ಹಲುಬುವಾಗೆಲ್ಲಾ ಯಾವ ಗಂಡಿಗಿಂತ ನಾನು ಕಡಿಮೆಯಿದ್ದೇನೆ ಹೇಳು ಎಂದು ಅಮ್ಮನನ್ನು ಪ್ರಶ್ನಿಸುತ್ತಿದ್ದಳು. ಆದರೂ ಒಮ್ಮೊಮ್ಮೆ ಈ ಅಂಬಿಕೆ, ಅಂಬಾಲಿಕೆಯರಲ್ಲಿ ಒಬ್ಬರು ಗಂಡಾಗಿ ಹುಟ್ಟಿದ್ದರೆ ಒಳ್ಳೆಯದಿತ್ತು ಎಂದವಳಿಗೆ ಅನ್ನಿಸುತ್ತಿತ್ತು.

ಈಜೆಂದರೆ ಅವಳಿಗೆ ಪ್ರಾಣ. ಸ್ವಯಂವರದ ಮುನ್ನಾದಿನ ಕಾಶಿಯ ಉಪವನಕ್ಕೆ ಪುರುಷ ವೇಷದಲ್ಲಿ ಅವಳೊಬ್ಬಳೇ ಹೋಗಿದ್ದಳು. ಕಾವಲು ಭಟರಿಗೆ ತನ್ನ ಗುರುತನ್ನು ತಿಳಿಸಿ ಉಪವನ ದೊಳಕ್ಕೆ ನರಪಿಳ್ಳೆಯನ್ನೂ ಬಿಡಬಾರದು, ಭಟರೂ ಬರಬಾರದೆಂದು ಮೂರು ಮೂರು ಬಾರಿ ಎಚ್ಚರಿಸಿ ಒಳಹೊಕ್ಕಿದ್ದಳು. ಶೌರ್ಯವನ್ನು ಪಣವಾಗಿರಿಸಿದ ಸ್ವಯಂವರ ಅವಳಿಗಿಷ್ಟವಿರಲಿಲ್ಲ. ಅದಕ್ಕೊಂದು ಪರ್ಯಾಯವೂ ಅವಳಿಗೆ ಹೊಳೆದಿರಲಿಲ್ಲ. ಉದ್ಯಾನದ ಹೂಗಿಡ, ಮರಬಳ್ಳಿ, ಪೊದೆಗಳು, ಚಿಟ್ಟೆ, ಪತಂಗ, ದುಂಬಿಗಳು ಕಲರವವೆಬ್ಬಿಸುವ ಬಗೆ ಬಗೆಯ ಹಕ್ಕಿಗಳು, ನಲಿಯುವ ನವಿಲುಗಳು, ಹಾಡುವ ಕೋಗಿಲೆಗಳು, ಉಲಿಯುವ ಗಿಳಿಗಳು, ಮೊಲಗಳು, ಜಿಂಕೆಗಳು, ಸರೋವರದ ವೈವಿಧ್ಯಪೂರ್ಣ ಜಲಚರಗಳು ಪ್ರಕೃತಿಯೊಡನೆ ಅನುಸಂಧಾನಕ್ಕೆ ನೆರವಾಗುತ್ತಿದ್ದವು. ಮನಸ್ಸಿಗೆ ದುಗುಡವಾದಾಗಲೆಲ್ಲಾ ಅವಳು ಅಲ್ಲಿಗೆ ಬರುತ್ತಿದ್ದಳು. ಹಾಯಾಗಿ ಈಜಿ ಎಲ್ಲವನ್ನೂ ಮರೆಯುತ್ತಿದ್ದಳು. ವಿಸ್ತಾರವಾದ ಸರೋವರದಲ್ಲಿ ಒಬ್ಬಳೇ ಈಜುವಾಗ ಮಾನವನ ಕುಬ್ಜತೆಯ ಮತ್ತು ಪ್ರಕೃತಿಯ ಭೂಮ ಭವ್ಯತೆಯ ಅರಿವು ಮೂಡುತ್ತಿತ್ತು. ಆಕಾಶ ನೋಡುತ್ತಾ, ಬಾಯಿಯಲ್ಲಿ ನೀರು ತುಂಬಿ ತುಟಿಗಳಿಂದ ದೂರಕ್ಕೆ ಚಿಮ್ಮಮಿಸುತ್ತಾ, ಅಂಗಾತ ಈಜುವಾಗ ಆಕಾಶದ ನೀಲವರ್ಣ ಸರೋವರದ ನೀರಲ್ಲಿ ಫಲಿತವಾಗಿ ಬಾನು ಭುವಿಯೊಡನೆ ಸಂಗಮಿಸುವಂತೆ ಭಾಸವಾಗಿ, ಆ ಬಾನು ಈ ಭುವಿಗಳ ಪುಟ್ಟ ಶಿಶು ತಾನೆಂಬ ದಿವ್ಯ ಅನುಭೂತಿ ಮೂಡುತ್ತಿತ್ತು. ಬಾನು ಪ್ರತಿಫಲಿಸಿದ ಸರೋವರದ ನೀಲ ನೀರಲ್ಲಿ ಪ್ರಕೃತಿಯೇ ತಾನೆಂಬ ತಾದ್ಯಾತ್ಮದಲ್ಲಿ ಮೈಮರೆತು ಈಜುತ್ತಿರುವಾಗ ಅವಳ ಗಮನಕ್ಕೇ ಬಾರದಂತೆ ಅಲ್ಲಿಗೆ ಪುರುಷನೊಬ್ಬನ ಪ್ರವೇಶವಾಯಿತು.

ಉಪವನದೊಳಕ್ಕೆ ಬಂದ ರಥವನ್ನು ಅವಳು ಗಮನಿಸಿದಳು. ರಥಿಕ ಕೆಳಗಿಳಿದು ಕುದುರೆಗಳನ್ನು ಬಿಚ್ಚಿ ಸರೋವರಕ್ಕೆ ಕರೆತಂದು ನೀರು ಕುಡಿಸಿದ. ಸೊಂಪಾಗಿ ಬೆಳೆದು ನಿಂತಿದ್ದ ಹುಲ್ಲನ್ನು ಮೇಯಲು ಬಿಟ್ಟ. ಸರೋವರದಲ್ಲಿ ಈಜುತ್ತಿದ್ದ ಆಕೃತಿಯೊಂದನ್ನು ಗಮನಿಸಿ ಅವನಿಗೆ ಅದೇನು ಲಹರಿ ಬಂತೊ? ಕನಿಷ್ಠ ಉಡುಪಿನಲ್ಲಿ ನೀರಿಗೆ ಹಾರಿದ. ಎರಡೂ ಕೈಗಳಿಂದ ಬಲವಾಗಿ ನೀರನ್ನು ತಳ್ಳುತ್ತಾ ಅವಳನ್ನು ಸಮೀಪಿಸಿದ್ದ. ಅವನ ಈಜಿನ ವೇಗಕ್ಕೆ ದಂಗಾಗಿದ್ದ ಅವಳು ಮಾತು ಮರೆತಿದ್ದಳು. ತೀರಾ ಸನಿಹಕ್ಕೆ ಬಂದಾಗ ಅವಳ ಮುಖ ವಿವರ್ಣವಾಯಿತು. ಓ ದೇವರೇ ನಾನು ಇದೇನು ಮಾಡಿಬಿಟ್ಟೆ? ಅಲ್ಲಿ ದಡದಲ್ಲಿ ಕಳಚಿಟ್ಟಿದ್ದ ಉಡುಗೆಗಳನ್ನು ನೋಡಿ ಈಜುತ್ತಿರುವವ ಪುರುಷನೆಂದು ಭಾವಿಸಿ ಪರಿಚಯ ಮಾಡಿಕೊಳ್ಳೋಣವೆಂದು ಬಂದೆ. ನೀನು ಯಾರೇ ಆಗಿದ್ದರೂ ತಪ್ಪು ತಿಳಿದುಕೊಳ್ಳಬೇಡ. ನನ್ನಲ್ಲಿ ಯಾವುದೇ ಕೆಟ್ಟ ಉದ್ದೇಶಗಳಿಲ್ಲ. ಅನುದ್ದಿಷ್ಟವಾಗಿ ನಡೆದುಹೋದ ಅಚಾತುರ್ಯಕ್ಕೆ ಕ್ಷಮಿಸು” ಎಂದು ಅಸ್ಖಲಿತವಾಗಿ ಸಂಸ್ಕೃತದಲ್ಲಿ ಹೇಳಿ ಮುಖ ತಿರುಗಿಸಿದ್ದ. ಅವನು ಪದಗಳನ್ನು ಉಚ್ಛರಿಸುತ್ತಿದ್ದ ರೀತಿಯಿಂದ ಕಾಶಿಯವನಲ್ಲವೆಂದು ಸುಲಭವಾಗಿ ಊಹಿಸಬಹುದಿತ್ತು. ಇನ್ನೇನು ಅವನು ದಡದತ್ತ ಈಜುತ್ತಾನೆ ಎನ್ನುವಾಗ ಅವಳು ಗಂಭೀರ ಸ್ವರದಲ್ಲಿ ಹೇಳಿದಳು : “ನಿಲ್ಲು. ಉಪವನಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಿ. ಕಾಶೀರಾಜ ಕುವರಿಯನ್ನು ಈ ಸ್ಥತಿಯಲ್ಲಿ ನೋಡಿದ್ದಿ. ಎರಡೂ ಅಕ್ಷಮ್ಯ ಅಪರಾಧಗಳು. ಇಲ್ಲಿನ ಶಾಸನದ ಪ್ರಕಾರ ನಿನಗೆ ಮರಣದಂಡನೆಯಾಗಬೇಕಿದೆ. ಏನು, ಅಪರಾಧವೆಸಗಿ ಪಾರಾಗಿಬಿಡಬಹುದೆಂದು ಭಾವಿಸಿದ್ದೀಯಾ?”

ಆತ ದಡದತ್ತ ಮುಖಮಾಡಿ ನಿಂತಿದ್ದ. ಅದೇ ಭಂಗಿಯಲ್ಲಿ ಅವನೆಂದ: “ಅಲ್ಲಿ ದಡದ ಮೇಲೆ ಗಂಡುಡುಗೆ ಕಂಡು ಈಜುತ್ತಿರುವ ವ್ಯಕ್ತಿ ಗಂಡೆಂದುಕೊಂಡು ಬಂದವನು ನಾನು. ನನಗೆ ರಾಜಕುವರಿಯನ್ನು ಈ ಸ್ಥತಿಯಲ್ಲಿ ಕಾಣಬೇಕಾಗಿ ಬರಬಹುದೆಂಬ ಚಿಕ್ಕದೊಂದು ಊಹೆಯೂ ಇರಲಿಲ್ಲ. ಕುದುರೆಗಳು ವಿಪರೀತ ದಣಿದಿದ್ದವು. ಬಾಯಾರಿಕೆಯಿಂದ ಬುಸುಗುಡುತ್ತಿದ್ದವು. ನನ್ನಲ್ಲಿ ಕೆಟ್ಟ ಆಲೋಚನೆಗಳಿರುತ್ತಿದ್ದರೆ ನಾನು ತಡಮಾಡಬೇಕಾದ ಅಗತ್ಯವೇನಿದೆ? ನಿನ್ನನ್ನೀಗ ಏನು ಮಾಡಿದರೂ ಇಲ್ಲಿ ತಡೆಯಲು ಯಾರಿದ್ದಾರೆ? ನಾನು ಈ ಸರೋವರಕ್ಕೆ ಬರಬೇಕಾಗಿ ಬಂದ ಅನಿವಾರ್ಯತೆಯ ಬಗ್ಗೆ ಯೋಚಿಸು. ನಿನ್ನ ರಾಜ್ಯದಲ್ಲಿ ಪಥಿಕರಿಗೆ, ಮೂಕ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಏನೇನೂ ಸರಿಯಿಲ್ಲ. ಇರುತ್ತಿದ್ದರೆ ನಾನೇಕೆ ಇಲ್ಲಿಗೆ ಬರಬೇಕಿತ್ತು? ನಿನ್ನ ಭದ್ರತಾ ವ್ಯವಸ್ಥೆಯ ಮೇಲೆ ಭರವಸೆಯಿಟ್ಟು ನೀನಿಲ್ಲಿ ಹಾಯಾಗಿ ಈಜುತ್ತಿರುವೆ. ಅದು ಸರಿಯಿರುತ್ತಿದ್ದರೆ ಅಷ್ಟು ಸುಲಭವಾಗಿ ಉಪವನವನ್ನು ಪ್ರವೇಶಿಸಲು ನನ್ನಿಂದಾಗುತ್ತಿತ್ತೆ? ಇವೆರಡು ಲೋಪಗಳಿಗೆ ನಿನ್ನ ಅಪ್ಪ ಪ್ರತಾಪಸೇನ ಕಾರಣನಾಗುತ್ತಾನೆ. ಮೊದಲು ಅವನಿಗೆ ಮರಣದಂಡನೆ ಯಾಗಲಿ. ಆ ಬಳಿಕ ನಿನ್ನ ಉರುಳಿಗೆ ನಾನು ಕೊರಳೊಡ್ಡುತ್ತೇನೆ.”

ಅವನ ಮಾತುಗಳಿಗೆ ಅವಳಲ್ಲಿ ಉತ್ತರವಿರಲಿಲ್ಲ. ಕುಡಿಯುವ ನೀರನ್ನು ಒದಗಿಸಲಾಗದ, ಸ್ವಯಂ ರಾಜಕುಮಾರಿಯ ಭದ್ರತಾ ವ್ಯವಸ್ಥೆಯಲ್ಲಿಯೂ ಲೋಪವಿರುವ ರಾಜ್ಯ ತನ್ನದೆಂಬುದನ್ನು ಒಪ್ಪಿಕೊಳ್ಳಲು ಅವಳಿಗೆ ಕಷ್ಟವಾಯಿತು. ಆದರೆ ಅದು ನಿಜ. ಮಾತಿನಲ್ಲಿ ಹಾಗೆ ಬಗ್ಗು ಬಡಿದವನು ಈಗಲೂ ಅವಳಿಗೆ ಬೆನ್ನು ಹಾಕಿಯೇ ನಿಂತಿದ್ದಾನೆ. ಅದ್ಭುತ ಸಂಯಮಿ. ಅಕ್ರಮವಾಗಿ ಉದ್ಯಾನವನ್ನು ಪ್ರವೇಶಿಸಿದವನು ಸಕ್ರಮವಾಗಿ ಹೃದಯವನ್ನು ಪ್ರವೇಶಿಸಿಬಿಟ್ಟ. ಆದರದು ಪ್ರಕಟಗೊಳ್ಳದಂತೆ ಅವಳು ಗಾಂಭೀರ್ಯದಿಂದ ಹೇಳಿದಳು : “ವ್ಯಂಗ್ಯ ಬೇಡ. ಕಾಶೀ ರಾಜ್ಯದ ಶಾಸನವನ್ನು ಉಲ್ಲಂಘಿಸಿದ ಈ ಮಹಾತ್ಮ ಯಾವ ದೇಶೀಯನೊ?”

ಅವನು ದೊಡ್ಡದಾಗಿ ನಕ್ಕುಬಿಟ್ಟ : “ವ್ಯಂಗ್ಯವಿರುವುದು ಈಗ ನೀನಾಡಿದ ಮಾತುಗಳಲ್ಲಿ ರಾಜಕುಮಾರಿ. ನಾನು ನಾಳೆ ನಿನ್ನನ್ನು ಸ್ವಯಂವರ ಮಂಟಪದಲ್ಲಿ ಸರ್ವಾಲಂಕಾರ ಭೂಷಿತೆಯಾಗಿ ನೋಡಬೇಕಿದ್ದವ. ಅದೃಷ್ಟವೇ ಇರಬಹುದು, ಇಂದೇ ನಿನ್ನನ್ನು ನೋಡಿಬಿಟ್ಟೆ. ಆರ್ಯಾವರ್ತದ ಯಾವ ರಾಜರುಗಳಿಗೂ ಇಲ್ಲದ ಯೋಗ. ಬಹಳ ದೂರದಿಂದ ಬಂದಿದ್ದೇನೆ. ಅನ್ಯದೇಶದ ಅತಿಥಿಯೊಬ್ಬನನ್ನು ಹೀಗೆ ನಿಲ್ಲಿಸುವುದು ಸೌಜನ್ಯವಾಗುವುದಿಲ್ಲ. ನನ್ನದು ಸೌಭ ದೇಶ. ನನ್ನನ್ನು ಜನರು ಸಾಲ್ವ ಭೂಪತಿಯೆಂದು ಕರೆಯುತ್ತಾರೆ.

ಸೌಭದ ಸಾಲ್ವಭೂಪತಿ! ಅಂಬೆ ಬೆಚ್ಚಿಬಿದ್ದಳು. ಕುದುರೆ ಸವಾರಿಯಲ್ಲಿ ಏನಿಲ್ಲವೆಂದರೂ ಐದು ದಿನಗಳ ಪಯಣವಾಗುತ್ತದೆ ಸೌಭದಿಂದ ಕಾಶಿಗೆ. ಅವನ ಅತುಲ ಪರಾಕ್ರಮದ ಬಗ್ಗೆ ಕಾಶಿಯಲ್ಲಿ ಸಾಲು ಸಾಲು ಕತೆಗಳಿದ್ದವು. ದಸ್ಯುವೆಂದು ಅವನನ್ನು ಆರ್ಯಾವರ್ತದ ಕ್ಷತ್ರಿಯರು ದೂರವಿರಿಸಿದ್ದರು. ಅವನು ಅಳಿದುಳಿದ ದಸ್ಯುಗಳನ್ನು ಸಂಘಟಿಸಿ ಬಲಿಷ್ಠ ರಾಜ್ಯವೊಂದನ್ನು ಕಟ್ಟಿದ್ದ. ಆರ್ಯಾವರ್ತದ ಸಿಂಹಾಸನಾಧೀಶ್ವರರಲ್ಲಿ ಅವನಷ್ಟು ಪರಾಕ್ರಮಿಗಳಿಲ್ಲವೆಂದು ಅಪ್ಪನೇ ಹೇಳುತ್ತಿದ್ದ. ದಸ್ಯುವೆಂದು ಅವನಿಗೆ ಅಪ್ಪ ಸ್ವಯಂವರದ ಆಮಂತ್ರಣವನ್ನೇ ಕಳುಹಿಸಿರಲಿಲ್ಲ. ಆಮಂತ್ರಣವಿಲ್ಲದಾತ ಬಂದಿದ್ದಾನೆಂದರೆ ನಾಳೆ ವಿವಾಹ ಮಂಟಪದಲ್ಲಿ ಸಮಸ್ಯೆಗಳು ಉದ್ಭವಿಸದಿರಲು ಸಾಧ್ಯವೆ?

ಅವಳಿಂದ ಪ್ರತಿಕ್ರಿಯೆಯಿಲ್ಲದಿರುವುದನ್ನು ಗಮನಿಸಿ ಅವನೆಂದ: “ಸಾಲ್ವಭೂಪತಿಯ ಹೆಸರು ಕೇಳಿ ಹೆದರಿದೆಯಾ ರಾಜಕುಮಾರಿ? ಕಾಶೀರಾಜನಿಗೆ ಮೂವರು ಕುವರಿಯರೆಂದು ಕೇಳಿದ್ದೇನೆ. ಅವರಲ್ಲಿ ನೀನ್ಯಾರೆಂದು ಗೊತ್ತಾಗಲಿಲ್ಲ. ಶೌರ್ಯವನ್ನು ಪಣವಾಗಿರಿಸಿ ನಿನ್ನ ಅಪ್ಪ ನಾಳೆ ಸ್ವಯಂವರ ನಡೆಸುತ್ತಾನೆಂಬ ವಾರ್ತೆ ಕೇಳಿದೆ. ಆರ್ಯಾವರ್ತದ ಮಕುಟವರ್ಧನರಲ್ಲಿ ಅತಿ ಶೌರ್ಯವಂತ ಯಾರೆಂಬುದನ್ನು ನಿನ್ನ ಅಪ್ಪನಿಗೆ ತೋರಿಸಲು ಬಂದವನು ನಾನು. ಹಿಂಡುಗಟ್ಟಲೆ ರಾಣಿಯರಿರುವ ರಾಜರುಗಳಿಗೂ ನಿನ್ನಪ್ಪ ಆಮಂತ್ರಣ ಕಳಿಸಿದ್ದಾನೆ. ಆದರೆ ಒಬ್ಬ ಅವಿವಾಹಿತ ಸಾಲ್ವಭೂಪತಿಯನ್ನು ಹೊರಗಿಟ್ಟಿದ್ದಾನೆ. ಯಾಕೆಂದು ನಿನಗೆ ಗೊತ್ತಿರ ಬಹುದು. ಸಾಲ್ವಭೂಪತಿ ಅವನ ಲೆಕ್ಕದಲ್ಲಿ ದಸ್ಯು. ಮಾನವರದ್ದೆಲ್ಲಾ ಒಂದೇ ಜಾತಿಯೆಂಬುದನ್ನು ತೋರಿಸಿಕೊಡಲೆಂದೇ ಬಂದಿದ್ದೇನೆ. ನೀನು ಹೆದರಬೇಕಾಗಿಲ್ಲ. ನಾನೇನು ಸೇನಾಸಹಿತನಾಗಿ ರಕ್ತಪಾತಕ್ಕೆ ಬಂದವನಲ್ಲ. ಒಬ್ಬಂಟಿಯಾಗಿ ಬಂದಿದ್ದೇನೆ. ನಾಳೆ ಸೌಭಕ್ಕೆ ಹಿಂದಿರುಗುವಾಗ ನನ್ನ ರಥದಲ್ಲಿ ಕಾಶಿಯ ಮೂವರು ಅರಗುವರಿಯರಿರುತ್ತಾರೆ.”

ಅವನ ಆತ್ಮವಿಶ್ವಾಸದ ನುಡಿಗಳಿಗೆ ಅವಳು ಪೂರ್ತಿಯಾಗಿ ಸೋತು ಹೋದಳು : “ಸಾಲ್ವ ಭೂಪತೀ, ನಾನು ಕಾಶೀರಾಜನ ಹಿರಿಗುವರಿ ಅಂಬೆ. ಸ್ವಯಂವರ ವ್ಯವಸ್ಥೆಯ ಲೋಪದೋಷಗಳಿಗೆ ನಾನು ಬಾಧ್ಯಳಲ್ಲ. ವಿಕ್ರಮವನ್ನು ಪಣವಾಗಿರಿಸುವಾಗ ಅಪ್ಪ ನನ್ನಲ್ಲಿ ಒಂದು ಮಾತು ಕೇಳಲಿಲ್ಲ. ನಾಳೆ ನೀನು ಮಿಕ್ಕ ರಾಜರುಗಳನ್ನು ಗೆದ್ದರೆ ಸೋದರಿಯರೊಡಗೂಡಿ ನಾನು ನಿನ್ನೊಡನೆ ಬರಲೇಬೇಕಾಗುತ್ತದೆ. ತಕ್ಕಮಟ್ಟಿಗೆ ಶಸ್ತ್ರ ಮತ್ತು ವೇದಾಭ್ಯಾಸ ಮಾಡಿದ್ದೇನೆ. ಗಂಡುಡುಗೆಯಲ್ಲಿ ಹೊರಸಂಚಾರ ಮಾಡಿ ಲೋಕಜ್ಞಾನ ಪಡೆದುಕೊಳ್ಳುವುದು ನನ್ನ ಅಭ್ಯಾಸ. ರಕ್ಷಣಾ ಭಟರು ಹೇಗಿದ್ದರೂ ನಾನು ನನ್ನ ರಕ್ಷಣೆ ಮಾಡಿಕೊಳ್ಳಬಲ್ಲೆ. ಸಾಕಷ್ಟು ಉಡುಗೆಯುಟ್ಟು, ಕಂಚುಕ ತೊಟ್ಟು ನೀರಿಗಿಳಿದವಳು ನಾನು. ನೀನು ಧಾರಾಳವಾಗಿ ತಿರುಗಿ ನಿಲ್ಲಬಹುದು.

ಸಾಲ್ವಭೂಪತಿ ನಿಧಾನವಾಗಿ ತಿರುಗಿ ನಿಂತ. ವಿಶಾಲವಾದ ಹಣೆ, ದೊಡ್ಡದಾದ ಮೂಗು, ಹುರಿ ಮೀಸೆ, ಶೌರ್ಯವನ್ನು ಸೂಸುವ ಮಾಂಸಖಂಡಗಳು, ಮುಖದಲ್ಲಿ ಮಂದಹಾಸ. ಇಷ್ಟು ಹೊತ್ತಾದರೂ ಸಂಯಮ ಕಳಕೊಳ್ಳದ ನಡವಳಿಕೆ. ಹೆಣ್ಣು ಒಬ್ಬಂಟಿಯಾಗಿ ಸಿಕ್ಕಾಗ ಯಾವನು ಸಂಯಮ ಕಳಕೊಳ್ಳುವುದಿಲ್ಲವೋ ಅವನು ನಿಜವಾದ ಗಂಡು. ಅವಳ ಬಗ್ಗೆ ಅವನಲ್ಲಿ ಮೆಚ್ಚುಗೆಯ ಭಾವವಿತ್ತು. ಅವನ ಪುರುಷನೋಟ ಅವಳ ಮೇಲೆ ಹರಿದಾಡಿದಾಗ ಅವಳಲ್ಲಿ ಸ್ತ್ರೀಭಾವ ಉದ್ದೀಪನಗೊಂಡು ಕದಪುಗಳು ಅರುಣರಾಗ ರಂಜಿತವಾದವು. ಅವಳು ಅವನ ನೋಟ ಎದುರಿಸಲಾಗದೆ ತಲೆತಗ್ಗಿಸಿದಳು.

ಅವನು ತನ್ನ ಮನಸ್ಸನ್ನು ಬಿಚ್ಚಿದ : “ರಾಜಕುಮಾರೀ, ನಾನು ಅರ್ಹಳಾದ ಜೀವನ ಸಂಗಾತಿಯೊಬ್ಬಳ ಹುಡುಕಾಟದಲ್ಲಿದ್ದೇನೆ. ಅವಳು ಪಲ್ಲಂಗದ ಜತೆಗಾತಿಯಾಗಿದ್ದರೆ ಸಾಲದು. ರಾಜ್ಯ ನಡೆಸುವ ಸಾಮರ್‍ಥ್ಯ, ಪ್ರಜೆಗಳನ್ನು ಜ್ಞಾನದಾಹಿಗಳನ್ನಾಗಿ ಮಾಡುವ ಮಹತ್ತ್ವಾಕಾಂಕ್ಷೆ ಅವಳಿಗಿರಬೇಕು. ಹುಟ್ಟಿನಿಂದ ನಿರ್ಣಯವಾಗುವ ಜಾತಿ ಮತ್ತು ವರ್ಣಗಳನ್ನು ಧಿಕ್ಕರಿಸುವ ಮನುಷ್ಯತ್ವ ಅವಳಲ್ಲಿರಬೇಕೆಂಬ ಕನಸು ಕಾಣುತ್ತಿರುವವನು ನಾನು. ನಿನ್ನ ಮಾತು, ರೂಪು ಎರಡೂ ನನಗಿಷ್ಟವಾಯಿತು. ಕ್ಷಾತ್ರತ್ವ ವರ್ಣವಲ್ಲ, ಅದೊಂದು ಗುಣ. ನಿನ್ನಲ್ಲಿ ಕ್ಷಾತ್ರತ್ವವಿದೆ. ನಾಳೆ ನಾನು ಪಣವನ್ನು ಗೆದ್ದೇ ಗೆಲ್ಲುತ್ತೇನೆ. ಆಗ ನಾನು ನಿನ್ನ ತಂಗಿಯರನ್ನೂ ಮದುವೆಯಾಗ ಬೇಕಾಗುತ್ತದೆ. ನನಗೆ ಬೇಕಾಗಿರುವುದು ನೀನು ಮಾತ್ರ. ಈ ಲಂಪಟ ಕ್ಷತ್ರಿಯರ ಮಧ್ಯದಲ್ಲಿ ಏಕಪತ್ನೀ ವ್ರತಸ್ಥನಾಗಿ ಬಾಳಲು ಸಾಧ್ಯವೆಂಬುದನ್ನು ನಾನು ತೋರಿಸಿಕೊಡುತ್ತೇನೆ. ನನ್ನನ್ನು ನಿನಗಿಷ್ಟವಾದರೆ ಇಲ್ಲಿಂದಲೇ ಸೌಭಕ್ಕೆ ಹೋಗಿಬಿಡೋಣ. ಈ ಕ್ಷಣದಲ್ಲಿ, ಇಲ್ಲೇ ಬೇಕಾದರೆ ನಾವು ಗಂಧರ್‍ವ ವಿವಾಹ ಮಾಡಿಕೊಳ್ಳಬಹುದು. ಸಾಲ್ವಭೂಪತಿಯ ಪಟ್ಟಮಹಿಷಿಯಾಗಿ ಈ ಹೃದಯ ಸಿಂಹಾಸನವನ್ನು ಆಳು. ನಮ್ಮಲ್ಲಿ ನಿನಗೆ ಇನ್ನಷ್ಟು ಶಸ್ತ್ರ-ಶಾಸ್ತ್ರ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸುತ್ತೇನೆ.”

ಅಂಬೆಯ ಹೃದಯ ತುಂಬಿ ಬಂತು. ತನ್ನನ್ನು ಅರ್ಥಮಾಡಿಕೊಳ್ಳಬಲ್ಲ ಒಬ್ಬ ಗಂಡೆಂದು ಸಾಲ್ವಭೂಪತಿಯ ಬಗ್ಗೆ ಗೌರವ ಮೂಡಿತು. ಮನಸ್ಸು ಹೊಯ್ದಾಡತೊಡಗಿತು. ಹೋಗಿಬಿಡಲೆ? ಹೃದಯ ಬಿಚ್ಚಿ ನೇರವಾಗಿ ಕೇಳುತ್ತಿದ್ದಾನೆ. ಹೋಗಿ ಬಿಡಲೆ? ಆದರೆ ಕಪಟವೆಂಬುದು ಲವಲೇಶವೂ ಇಲ್ಲದ ಇವನ ರಾಣಿಯಾಗಬೇಕು. ಹೋಗಿಬಿಡಲೆ? ಆರ್ಯಾವರ್ತದ ರಾಜಮಹಾರಾಜರುಗಳಿಗೆ ಅಪಥ್ಯವಾಗಿರುವ ಏಕಪತ್ನೀವೃತದ ಸಂಕಲ್ಪ ತೊಟ್ಟಿದ್ದಾನೆ. ಹೋಗಿಬಿಡಲೆ? ನಾಳೆ ಇವನು ಗೆದ್ದರೆ ಇವನನ್ನು ತಂಗಿಯಂದಿರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಈಗಲೇ ಹೋಗಿಬಿಡಲೆ? ಶಸ್ತ್ರವಿದ್ಯೆಗೆ ಅವಕಾಶ ಕೊಡುತ್ತಾನಂತೆ, ಹೋಗಿಬಿಡಲೆ? ಶಾಸ್ತ್ರ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಿದ್ದಾನೆ. ಹೋಗಿಬಿಡಲೆ ? ಹೋಗಿಬಿಡಲೆ ? ಹೋಗಿಬಿಡಲೆ?

ಇಲ್ಲಿಂದಲೇ ಸಾಭೂಪತಿಯೊಡನೆ ಹೋಗಿಬಿಟ್ಟರೆ ಏನಾಗುತ್ತದೆ? ನಾಳೆ ಸ್ವಯಂವರ ಮಂಟಪದಲ್ಲಿ ಸೇರುವ ರಾಜಮಹಾರಾಜರುಗಳು ತಮಗೆ ಅಪಮಾನವಾಯಿತೆಂದು ಭಾವಿಸುತ್ತಾರೆ. ಅಪ್ಪನ ಮೇಲೆ ಏರಿಬರುತ್ತಾರೆ. ವಾರ್ಧಕ್ಯವನ್ನು ಪ್ರವೇಶಿಸಿರುವ ಅಪ್ಪನಿಂದ ಅವರೆಲ್ಲರನ್ನು ಏಕಕಾಲದಲ್ಲಿ ಎದುರಿಸಿ ಗೆಲ್ಲಲು ಸಾಧ್ಯವಿಲ್ಲ. ಅಪ್ಪನ ಹತ್ಯೆಯಾಗಬಹುದು. ತಂಗಿಯಂದಿರ ವಿವಾಹ ನಿಂತು ಹೋಗಬಹುದು. ಅರಾಜಕತೆಯಿಂದ ಕಾಶೀರಾಜ್ಯದಲ್ಲಿ ಕೊಲೆ, ಸುಲಿಗೆ, ಲೂಟಿ, ದೊಂಬಿಗಳು ಸಂಭವಿಸಬಹುದು. ಅಪ್ಪನ ಮಾತಿಗೆ ತಪ್ಪಿ ಅನಾಹುತಕ್ಕೆ ಕಾರಣಳಾದವರೆಂಬ ಕಳಂಕ ಶಾಶ್ವತವಾಗಿ ಅಂಟಿಕೊಂಡು ಬಿಡಬಹುದು. ದಸ್ಯುವೆಂದು ಅಪಹಾಸ್ಯಕ್ಕೆ ತುತ್ತಾಗಿರುವ ಸಾಲ್ವಭೂಪತಿ ಹೆಣ್ಣು ಕಳ್ಳನೆಂಬ ಅಪಖ್ಯಾತಿ ಹೊಂದುತ್ತಾನೆ.

ಸಂಭಾವ್ಯ ಅನಾಹುತಗಳನ್ನು ನೆನೆದು ಅಂಬೆಯೆಂದಳು : “ಸಾಲ್ವಭೂಪತೀ, ನಾಳಿನ ಸ್ಪರ್ಧೆಯಲ್ಲಿ ನೀನು ಎಲ್ಲರನ್ನೂ ಗೆಲ್ಲಬಲ್ಲೆಯೆಂಬ ವಿಶ್ವಾಸ ನನಗಿದೆ. ಅಪ್ಪ ನಿರ್‍ಣಯಿಸಿದ ಪಣವನ್ನು ಗೆದ್ದು ನೀನು ನನ್ನನ್ನು ವರಿಸುವುದೇ ಧರ್ಮ. ನಿನ್ನೊಡನೆ ನಾನೀಗ ಹೊರಟುಬಿಟ್ಟರೆ ಆಯಾ ವರ್ತದ ರಾಜಮಹಾರಾಜರುಗಳ ಕಣ್ಣಲ್ಲಿ ನೀನು ಸ್ವಯಂವರ ಮಂಟಪಕ್ಕೆ ಕಾಲಿಡಲು ಹೆದರಿದ ಹೇಡಿಯೆನಿಸುತ್ತಿ, ಪರಮವಿಕ್ರಮ ಸಾಲ್ವಭೂಪತಿಯ ಅಕಳಂಕ ಚಾರಿತ್ರ್‍ಯಕ್ಕೆ ಅಂಥದ್ದೊಂದು ಕಳಂಕ ತಗಲಬಾರದು. ನೀನು ಏನೆಂಬುದನ್ನು ಆರ್ಯಾವರ್ತದ ಸಮಸ್ತ ರಾಜ ಸಂಕುಲಕ್ಕೆ ತೋರಿಸಿ ಕೊಡಲು ನಿನಗೆ ಸಿಕ್ಕಿದ ಸುವರ್ಣಾವಕಾಶವಿದೆಂದು ಭಾವಿಸು. ಅವರೆಲ್ಲರನ್ನು ಗೆದ್ದ ಗಂಡುಗಲಿ ನನ್ನರಸನೆಂದು ಜೀವನಪರ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುವ ಸೌಭಾಗ್ಯವನ್ನು ನನಗೆ ಕರುಣಿಸು.”

ಸಾಲ್ವಭೂಪತಿಯ ಹೃದಯ ತುಂಬಿ ಬಂತು. ಅವನು ಹೆಮ್ಮೆಯಿಂದ ಅಂಬೆಯನ್ನು ದಿಟ್ಟಿಸಿ ನೋಡಿದ. ಅವಳಾಡಿದ ಮಾತುಗಳ ಭಾವಕ್ಕೆ ತಲೆದೂಗಿದ. ಒಂದಷ್ಟು ಹೊತ್ತು ನೋಟದಲ್ಲೇ ಉರುಳಿತು. ಮತ್ತೆ ಆಡಲೇಬೇಕಾದ ಮಾತುಗಳು ಉಳಿದಿರಲಿಲ್ಲ. ಅವನು ಇನ್ನಷ್ಟು ಹೊತ್ತು ಅಲ್ಲೇ ಉಳಿಯಲಿ ಎಂದು ಅವಳ ಮನಸ್ಸು ಬಯಸುತ್ತಿತ್ತು. ಅವನಿಗೂ ಉಳಿಯ ಬೇಕೆಂಬ ಮನಸ್ಸಿತ್ತು. ಆದರೆ ಹೇಗೆ ಉಳಿಯುವುದು ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು. ಅವನು ಮತ್ತೊಮ್ಮೆ ಅವಳನ್ನು ಕಣ್ತುಂಬಾನೋಡಿ ಮಂದಹಾಸ ಜಿನುಗಿಸಿ ನಿಧಾನವಾಗಿ ದಡದತ್ತ ಈಜಿದ. ಮೇಯುತ್ತಿದ್ದ ಕುದುರೆಗಳನ್ನು ರಥಕ್ಕೆ ಹೂಡಿ ತಾನೇ ಸಾರಥಿಯಾಗಿ ರಥವನ್ನು ನಿಧಾನವಾಗಿ ನಡೆಸುತ್ತಾ ಕಣ್ಮರೆಯಾದ. ಅವನು ಹೋದ ಎಷ್ಟೋ ಹೊತ್ತಾದ ಮೇಲೆ ಅವಳು ಭಾರವಾದ ಮನಸ್ಸಿನಿಂದ ಮೇಲೆದ್ದು ಬಂದಳು.

ಅರಮನೆಗೆ ತಲುಪಿದ ಮೇಲೆ ಸಾಲ್ವಭೂಪತಿಯ ವಿಷಯವನ್ನು ಅಮ್ಮನಲ್ಲಿ ಹೇಳಿಬಿಡಲೇ ಎಂದು ಅವಳು ಯೋಚಿಸಿದಳು. ಅವನ ಆಗಮನ, ಮಾತುಕತೆ, ನಿರ್ಗಮನ ಎಲ್ಲವೂ ಅನೂಹ್ಯ. ಒಂದು ಗಂಡು ಮತ್ತು ಹೆಣ್ಣು ಹಾಗೆ ಭೇಟಿಯಾದದ್ದು ಅವಳ ಊಹೆಗೂ ನಿಲುಕದ ಸಂಭವವಾಗಿತ್ತು. ಕಾಶಿಯ ಒಬ್ಬನೇ ಒಬ್ಬ ತರುಣ ಅವಳ ಹೃದಯದಲ್ಲಿ ಪ್ರೇಮದ ತರಂಗಗಳನ್ನು ಎಬ್ಬಿಸಿರಲಿಲ್ಲ. ಸಾಲ್ವಭೂಪತಿ ಮೊದಲ ಭೇಟಿಯಲ್ಲಿ ಹೃದಯಕ್ಕೇ ಲಗ್ಗೆ ಹಾಕಿದ್ದ. ಶೌರ್ಯವಂತ ಸಾಲ್ವ ಚಾರಿತ್ರ್ಯವಂತನೂ ಆಗಿದ್ದ. ತಪ್ಪಿಯೂ ಅವನು ಸರೋವರದಲ್ಲಿ ಅವಳನ್ನು ಸ್ಪರ್ಶಿಸಿರಲಿಲ್ಲ. ಹೆಣ್ಣುಗಳಿರುವುದೇ ಭೋಗಕ್ಕೆ ಎಂದು ತಿಳಿದುಕೊಂಡಿರುವ ಆರ್ಯಾವರ್ತದ ಕ್ಷತ್ರಿಯರೆಲ್ಲಿ, ಏಕಾಂಗಿನಿ ಹೆಣ್ಣು ಸಿಕ್ಕಾಗ ಊಹಿಸಲೂ ಸಾಧ್ಯವಾಗದಷ್ಟು ಸಭ್ಯತೆಯಿಂದ ನಡಕೊಂಡ ದಸ್ಯುರಾಜ ಸಾಲ್ವಭೂಪತಿ ಎಲ್ಲಿ! ಆದರೆ ಅಮ್ಮನಲ್ಲಿ ಸರೋವರದ ಪ್ರಕರಣವನ್ನು ಹೇಳಿ ಪ್ರಯೋಜನವೇನಿದೆ? ತನ್ನ ಜೀವನದ ಮೊತ್ತಮೊದಲ ಅತಿಸುಂದರ ಸಂಭವವೊಂದನ್ನು ಈಗ ಯಾರಲ್ಲೂ ಹೇಳುವುದು ಬೇಡವೆಂದು ಅಂಬೆ ತೀರ್ಮಾನಿಸಿದಳು.

ಸ್ವಯಂವರ ಮಂಟಪದಲ್ಲಿ ಸಾಲ್ವಭೂಪತಿಯನ್ನು ಯಾರಿಂದಲೂ ಸೋಲಿಸಲಾಗಲಿಲ್ಲ. ಸರ್ವಾಲಂಕಾರ ಭೂಷಿತೆಯಾಗಿದ್ದ ಅಂಬೆ ಅವನತ್ತ ಚಿಮ್ಮಿಸಿದ್ದ ಮಂದಹಾಸ ಅವನಲ್ಲಿ ಹೊಸ ಸ್ಫೂರ್ತಿಯನ್ನುಕ್ಕಿಸಿತ್ತು. ಅವನನ್ನು ನೋಡಿಯೇ ಅಪ್ಪ ವಿವರ್ಣನಾಗಿದ್ದ. ಸಾಲ್ವಭೂಪತಿಯ ವಿಜಯಗಳನ್ನು ಅಪ್ಪ ಸೋತ ಕಣ್ಣುಗಳಿಂದ ನೋಡುತ್ತಿದ್ದ. ವಿಕ್ರಮವನ್ನು ಪಣವಾಗಿಟ್ಟದ್ದು ತಪ್ಪೆಂದು ಆಗ ಅಪ್ಪನಿಗೆ ಅನ್ನಿಸಿರಬೇಕು. ಹುಟ್ಟಿನಿಂದಲೇ ಶ್ರೇಷ್ಠತೆಯೆಂದು ಭಾವಿಸಿಕೊಂಡು ಬೀಗುತ್ತಿದ್ದ ಆರ್ಯಾವರ್ತದ ಕ್ಷತ್ರಿಯ ರಾಜ ಮಹಾರಾಜರುಗಳಿಗೆ ಎಂದೆಂದೂ ಮರೆಯಲಾಗದ ಪಾಠವನ್ನು ದಸ್ಯುರಾಜ ಕಲಿಸಿಕೊಟ್ಟಿದ್ದ.

ಆಗ ಆಚಾರ್ಯ ಭೀಷ್ಮರು ಸ್ವಯಂವರ ಮಂಟಪಕ್ಕೆ ಬಿರುಗಾಳಿಯಂತೆ ಪ್ರವೇಶಿಸಿದ್ದರು. ಅವರಂತಹ ಧರ್ನುವಿದ್ಯಾನಿಪುಣ ಆರ್ಯಾವರ್ತದ ಕ್ಷತ್ರಿಯರಲ್ಲಿ ಯಾರೂ ಇಲ್ಲವೆಂಬ ಮಾತನ್ನು ಅವಳು ಎಷ್ಟೋ ಬಾರಿ ಕೇಳಿದ್ದಳು. ಅವರು ತಮ್ಮ ಪರಿಚಯ ಮತ್ತು ಉದ್ದೇಶ ತಿಳಿಸಿ ‘ಏರಿ ರೆನ್ನಯ ರಥವ’ ಎಂದು ಆಜ್ಞಾಪಿಸಿದಾಗ ಏನು ಮಾಡಬೇಕೆಂದು ತಿಳಿಯದೆ ಅಂಬೆ ಪ್ರತಾಪಸೇನನ ಮುಖವನ್ನು ನೋಡಿದಳು. ಸಿಟ್ಟಿನಿಂದ ಲಘುವಾಗಿ ಕಂಪಿಸುತ್ತಿದ್ದ ಅಪ್ಪ ಈ ಅನಿರೀಕ್ಷಿತವನ್ನು ಎದುರಿಸಲು ಸಿಡ್ಧಾನಿರಲಿಲ್ಲ. ಅವಳು ಸಾಲ್ವಭೂಪತಿಯತ್ತ ನಿಸ್ಸಹಾಯ ನೋಟ ಹರಿಸಿದ್ದಳು. ಅವನು ಕೈಯ ಖಡ್ಗವನ್ನೆತ್ತಿ ಭೀಷ್ಮರ ಮೇಲೇರಿ ಬಂದ. ಭೀಷ್ಮರೆಸೆದ ಬಾಣ ಅವನ ಖಡ್ಗವನ್ನು ಎಲ್ಲಿಗೆ ಹಾರಿಸಿತೊ? ಅವನು ಧರ್ನುಧಾರಿಯಾಗಿ ಕಾದಾಟಕ್ಕಿಳಿದ. ಆರ್ಯಾವರ್ತದ ಏಕಮೇವಾ ದ್ವಿತೀಯ ಚಾಪವಿದ್ಯಾ ಧುರಂಧರ ಪರಶುರಾಮರಿಂದ ಧನುರ್ವೇದವನ್ನು ಕಲಿತ ಆಚಾರ್ಯರನ್ನು ಸಾಲ್ವಭೂಪತಿ ಸೋಲಿಸಲಾರ ಎಂದು ಆ ಗಳಿಗೆಯಲ್ಲೂ ಕಾಶೀರಾಜ ಅವಳೊಡನೆ ಹೇಳಿದ್ದ. ಕಾಶೀ ರಾಜಕುಮಾರಿಯರ ಧರ್ಮಬದ್ಧ ಪತಿಯಾಗಬೇಕಿದ್ದ ಸಾಲ್ವಭೂಪತಿ ಸೋತ. ದಸ್ಯುರಾಜ ಸಾಲ್ವ ಯಾರಿಂದ ಬಿಲ್ವಿದ್ಯೆ ಹೇಳಿಸಿಕೊಂಡಿದ್ದನೊ? ಮಲ್ಲಯುದ್ಧದಲ್ಲಾದರೆ ಆಚಾರ್ಯ ಭೀಷ್ಮರನ್ನು ಅರೆಕ್ಷಣದಲ್ಲಿ ಎತ್ತಿ ಒಗೆಯಬಲ್ಲ ಬಲ ನಿಸ್ಸಂದೇಹವಾಗಿ ಅವನ ತೋಳುಗಳಿಗಿತ್ತು. ಅಂಬೆ ತಲ್ಲಣಿಸಿ ಹೋದಳು. ತಾನೀಗ ಸಾಲ್ವಭೂಪತಿಯೊಡನೆ ಹೊರಟು ಹೋಗುವುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಅವಳಿಗನ್ನಿಸಿತು. ವಿಕ್ರಮವನ್ನು ಪಣವಾಗಿಟ್ಟ ಅಪ್ಪನ ಮನಸ್ಸಿನಲ್ಲಿ ಹೆಣ್ಣು ಎಂದಿಗೂ ಬಲಶಾಲಿಗಳ ಸೊತ್ತು ಎಂಬ ಭಾವ ಭದ್ರವಾಗಿ ಬೇರೂರಿರಬೇಕು. ಅದೀಗ ಅಪ್ಪನ ಆಶಯಕ್ಕೆ ವಿರುದ್ಧವಾಗಿ ಹೀಗೆ ನಿಜವಾಗುತ್ತಿದೆ. ಅಂಬೆ ತಂಗಿಯರತ್ತ ದೃಷ್ಟಿ ಹಾಯಿಸಿದಳು. ಪಣ ಗೆದ್ದವನ ಪತ್ನಿಯರು ತಾವೆಂದು ನಿಶ್ಚಯಿಸಿಕೊಂಡಿದ್ದ ಅವರ ಮುಖ ಎಂದಿನಂತಿತ್ತು. ಧನುಸ್ಸು ತುಂಡಾದಾಗ ಅಂಬೆಯೆಡೆಗೊಂದು ಹತಾಶ ನೋಟ ಹರಿಸಿ, ಒಂದು ಕ್ಷಣ ಕಾದು, ಅವಳಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕ್ರುದ್ಧನಾಗಿ ನೆಲವನ್ನೊಮ್ಮೆ ಬಲವಾಗಿ ಒದ್ದು ಸಾಲ್ವಭೂಪತಿ ಹೊರನಡೆದಿದ್ದ. ಅವಳಿಗೆ ಆಗ ಅನ್ನಿಸಿತ್ತು – ತಾನು ನಿನ್ನೆಯೇ ಸರೋವರದಿಂದ ನೇರವಾಗಿ ಸಾಲ್ವಭೂಪತಿಯೊಡನೆ ಸೌಭದೇಶಕ್ಕೆ ಹೊರಟು ಹೋಗಿ ಬಿಡಬೇಕಿತ್ತೆಂದು.

ಅಂಬೆ ವರ್ತಮಾನಕ್ಕೆ ಮರಳಿದಳು. ಆಚಾರ್ಯರು ಅವಳೊಡನೆ ಕಳುಹಿಸಿಕೊಟ್ಟ ವಿದ್ವಾಂಸನ ಹೆಸರು ಪುರೋಹಿತ ದೇವೀ ಚರಣದಾಸ. ತನ್ನ ಪರಿಚಯ ಹೇಳಿಕೊಳ್ಳುವಾಗ ಅವನು ತನ್ನ ಪೂರ್ಣ ಹೆಸರು ಬ್ರಹ್ಮಶ್ರೀ ಪುರೋಹಿತ ದೇವೀ ಚರಣದಾಸ ಚತುರ್ವೇದಿ ಎಂದು ಹೇಳಿ ಕೊಂಡಿದ್ದ. ಚತುರ್ವೇದಿ ಅನ್ನುವುದು ಕುಲನಾಮವೋ, ನಾಲ್ಕು ವೇದಗಳಲ್ಲಿ ಪಾರಂಗತನೆಂಬ ಉಪಾಧಿಯೋ ಎಂದು ಅವಳು ಕೇಳಿರಲಿಲ್ಲ. ವೇದಶಾಸ್ತ್ರ ಪಾರಂಗತರಲ್ಲಿ ಶಾಸ್ತ್ರಶಠತ್ವವಿರುತ್ತದೆಯೇ ಹೊರತು ಮಾನವೀಯತೆ ಇರುವುದಿಲ್ಲವೆನ್ನುವುದು ಕಾಶಿಯಲ್ಲಿ ಅವಳ ಗಮನಕ್ಕೆ ಬಂದಿತ್ತು. ಆರ್ಯಾವರ್ತದ ಅತ್ಯಂತ ಶ್ರೇಷ್ಠ ವೇದಿಗಳು, ಶಾಸ್ತ್ರಿಗಳು, ಘನಪಾಠಿಗಳು, ಮಹಾಮಹೋಪಾಧ್ಯಾಯರುಗಳು ಕಾಶಿಯ ವಿದ್ಯಾಪೀಠದಲ್ಲಿದ್ದರು. ಮಾನವರೆಲ್ಲರೂ ಸಮಾನರು ಎನ್ನುವವರು ಯಾರೂ ಇರಲಿಲ್ಲ. ಹುಟ್ಟಿನ ಶ್ರೇಷ್ಠತೆ, ಅಸಮಾನತೆ, ಬಡತನ, ಶೋಷಣೆಗಳನ್ನು ಸಮರ್ಥಿಸುವ ಹೊಸ ಹೊಸ ಆಧಾರ ಶ್ಲೋಕಗಳನ್ನು ರಚಿಸುವುದಕ್ಕೆ ಮಾತ್ರವೇ ಅವರ ಚಿಂತನೆ ಮತ್ತು ವಿದ್ಯೆ ಸೀಮಿತವಾಗಿತ್ತು. ಪುರೋಹಿತ ದೇವೀ ಚರಣದಾಸ ಅವರಿಗಿಂತ ಭಿನ್ನವಾದ ಚಿಂತನಾಕ್ರಮ ಹೊಂದಿರಲಾರನೆಂದು ಅಂಬೆ ಅವನನ್ನು ಹೆಚ್ಚು ಮಾತಾಡಿಸಿರಲಿಲ್ಲ.

ಸೌಭದ ಗಡಿ ಪ್ರದೇಶ ಬಂದಾಗ ಅವನು ಅಂಬೆಯೊಡನೆ ಕೆಳಗಿಳಿದ. ಆಚಾರ್ಯರ ಅಪ್ಪಣೆಯನ್ನು ಉಲ್ಲಂಘಿಸಿ, ಹಸ್ತಿನಾವತಿಯ ಧ್ವಜವಿರುವ ರಥವನ್ನು ಒಳ ನುಗ್ಗಿಸಿದರೆ ಸಮಸ್ಯೆಯಾಗಬಹುದೆಂದು ಅವಳಿಗೂ ತೋರಿತು. ವಿವಾದಗಳನ್ನು ಹುಟ್ಟುಹಾಕಿ ಅವುಗಳಿಂದಲೇ ಹೊಟ್ಟೆ ಹೊರೆದುಕೊಳ್ಳುವ ಜನರು ಕಾಶಿಯಲ್ಲೂ ಇದ್ದರು, ಸೌಭದಲ್ಲೂ ಇರುತ್ತಾರೆ. ಅಂತಹ ಜನರು ಧ್ವಜವನ್ನೂ ವಿವಾದದ ವಸ್ತುವಾಗಿಸುತ್ತಾರೆ. ಧ್ವಜವೊಂದರ ನಿಮಿತ್ತವಾಗಿ ರಕ್ತದೋಕುಳಿ ಹರಿಸಿ ತಾವು ಪರಿಸ್ಥತಿಯ ಲಾಭವೆತ್ತಿಕೊಳ್ಳುತ್ತಾರೆ. ರಥ ಗಡಿಪ್ರದೇಶದಲ್ಲಿ ನಿಲ್ಲುವುದು ಕ್ಷೇಮಕರವೆಂದು ಪುರೋಹಿತ ದೇವೀ ಚರಣದಾಸನೂ ಒಪ್ಪಿದ್ದ.

ಅವನಿಗೆ ಎಪ್ಪತ್ತು ದಾಟಿರಬಹುದು. ವಾತವೋ, ಪಿತ್ತವೋ, ಕಫವೋ, ನಿಧಾನವಾಗಿ ಅವಳ ಹಿಂದಿನಿಂದ ಕಾಲೆಳೆದುಕೊಂಡು ನಡೆಯುತ್ತಿದ್ದ. ಅವಳಿಗೋ ಒಮ್ಮೆ ಸಾಲ್ವಭೂಪತಿಯನ್ನು ಕಂಡು ಎಲ್ಲವನ್ನೂ ಹೇಳಿಕೊಂಡು, ಹೊಸ ಬದುಕನ್ನು ಕಂಡುಕೊಳ್ಳುವ ತವಕ. ಪುರೋಹಿತನಿಗೆ ಅಂತಹ ಆತುರವೇನಿದೆ? ಅವನ ಆಮೆ ನಡಿಗೆಗೆ ರೋಸಿ ಅವಳು ಕೈಮುಗಿದಳು : “ಸ್ವಾಮಿ ಪುರೋಹಿತರೇ, ಸ್ವಲ್ಪ ಬೇಗ ಬಂದುಬಿಡಿ. ರಾತ್ರಿಯಾಗಿ ಬಿಟ್ಟರೆ ಸಾಲ್ವಭೂಪತಿಯ ದರ್ಶನಭಾಗ್ಯ ನಮಗಾಗದೆ ಹೋಗಬಹುದು. ಅಪರಿಚಿತ ನಾಡಲ್ಲಿ ನಾವು ಏನೇನೋ ಸಮಸ್ಯೆ ಎದುರಿಸಬೇಕಾಗಿ ಬರಬಹುದು.”

ದಾರಿಯ ಬದಿಯಲ್ಲೊಂದು ಪುಟ್ಟ ಬಂಡೆಯಿತ್ತು. ಪುರೋಹಿತ ದೇವೀ ಚರಣದಾಸ ಉಸ್ಸೆಂದು ಅದರ ಮೇಲೆ ಕುಳಿತುಬಿಟ್ಟ. ಹೆಗಲ ಉತ್ತರೀಯದಿಂದ ಗಾಳಿ ಹಾಕುತ್ತಾ ಸುಧಾರಿಸಿ ಕೊಳ್ಳತೊಡಗಿದ. ಉಬ್ಬಸದಿಂದಾಗಿ ಅವನು ಬಾಯಿಯಿಂದ ಉಸಿರಾಡಬೇಕಾಯಿತು. ಸ್ವಲ್ಪ ಹೊತ್ತಿನ ಬಳಿಕ ಅವನು ಸಹಜ ಸ್ಥತಿಗೆ ಮರಳಿದ. “ನಿನಗೇನಮ್ಮಾ ಪ್ರಾಯದ ಸೊಕ್ಕು. ನನ್ನನ್ನು ನೋಡು. ಕೈಕಾಲುಗಳಲ್ಲಿ ವಾತ. ಉದರದಲ್ಲಿ ವಾಯುಪ್ರಕೋಪ. ಸ್ವಲ್ಪ ನಡೆದಾಗ ಉಬ್ಬಸ ಬರುತ್ತದೆ. ಪಿತ್ತದಿಂದಾಗಿ ತಲೆ ತಿರುಗುತ್ತದೆ. ನಿಧಾನವಾಗಿ ನಡೆಯಲಿಕ್ಕೇ ಕಷ್ಟವಾಗುತ್ತಿದೆ. ಇನ್ನು ಮುಂದುವರಿಯಬೇಕಾದರೆ ನೀನು ನನ್ನ ಕೈ ಹಿಡಿದುಕೊಳ್ಳಬೇಕಷ್ಟೆ.”

ತನ್ನ ಪ್ರಾಯದ ಮೊಮ್ಮಗಳಿರಬಹುದಾದ ಈ ಪುರೋಹಿತನಿಗೇನು ಬಂದಿದೆ ಚಪಲವೆಂದು ಅವಳಿಗೆ ಸಿಟ್ಟೇರಿತು. ಆರ್ಯಾವರ್ತದಲ್ಲಿರುವ ಎಲ್ಲಾ ರೋಗಗಳನ್ನು ಆವಾಹಿಸಿಕೊಂಡಂತಿರುವ ಪುರೋಹಿತನ ಕಾಯಿಲೆಗಳು ತರುಣಿಯ ಸ್ಪರ್ಶದಿಂದ ಗುಣವಾಗುವುದು ಹೇಗೆ? ಹಾಗೆಂದು ಕೇಳಿದರೆ ಏನು ಉತ್ತರ ಕೊಡುತ್ತಾನೊ? ತನ್ನ ಸಂಭಾವಿತತನವನ್ನು ಯಾವ ಶ್ಲೋಕದಿಂದ ಸಮರ್ಥಿಸುತ್ತಾನೊ? ತಾಳ್ಮೆ ಕಳೆದುಕೊಳ್ಳದೆ ಮಾತನಾಡಿ ಪರಿಸ್ಥತಿ ತಿಳಿಗೊಳಿಸಬೇಕೆಂದುಕೊಂಡು ಅಂಬೆಯೆಂದಳು: “ಸ್ವಾಮಿ ಪುರೋಹಿತರೇ, ನೀವು ನನ್ನ ಪಿತೃಸಮಾನರು. ನಾನು ನಿಮ್ಮ ಕೈ ಹಿಡಿದರೆ ನಡೆಯಲಾದೀತು ಎನ್ನುತ್ತೀರಿ. ನಿಮ್ಮ ಮಾತಿನ ಅಂತರಾರ್ಥ ನನಗೆ ತಿಳಿಯುತ್ತಿಲ್ಲ. ಎರಡು ದಿನಗಳಾದವು ನಾವು ಹಸ್ತಿನಾವತಿಯಿಂದ ಹೊರಟು. ಉಟ್ಟ ಉಡುಗೆಯಲ್ಲೇ ಹೊರಟವಳು ನಾನು. ದಯವಿಟ್ಟು ನನ್ನ ಪರಿಸ್ಥತಿ ಅರ್ಥಮಾಡಿಕೊಳ್ಳಿ. ನಿಮ್ಮ ಮಗಳೆಂದು ತಿಳಿದು ನನ್ನೊಡನೆ ಹೆಜ್ಜೆ ಹಾಕಿ.”

ಪುರೋಹಿತ ದೇವೀ ಚರಣದಾಸ ಕೆರಳಿದ: “ಹೌದಮ್ಮಾ ಹೌದು. ಎಲ್ಲರಿಗೂ ಅವರವರ ಕೆಲಸವೇ ಮುಖ್ಯ. ನಿನಗೇನು? ಸುಖವಾಗಿ ಸಾಲ್ವಭೂಪತಿಯ ಅಂತಃಪುರ ಸೇರಿಕೊಳ್ಳುತ್ತಿ. ಜೀವನಪೂರ್ತಿ ಸುಖಪಡುತ್ತಿ. ನಾನು ಹೇಗೋ ಕಷ್ಟಪಟ್ಟು ಬಂದಿದ್ದೇನೆ. ಮತ್ತೆ ಹಸ್ತಿನಾವತಿಗೆ ಹೋಗುವಾಗ ನನ್ನ ವಾತ, ಕಫ ಮತ್ತು ಪಿತ್ತ ನಾಲ್ಕು ಪಾಲು ಹೆಚ್ಚಾಗುತ್ತದೆ. ನನ್ನ ಕಷ್ಟಕ್ಕೆ ಆಗುವವರು ಯಾರು?”

ಪುರೋಹಿತ ದೇವೀ ಚರಣದಾಸನ ಸಂಕಟ ಅವಳಿಗರ್ಥವಾಯಿತು. ಶಾಂತಸ್ವರದಲ್ಲಿ ಅವಳೆಂದಳು: “ಸ್ವಾಮಿ ಪುರೋಹಿತರೇ, ನಿಮ್ಮನ್ನು ಈ ಕಾರ್ಯಕ್ಕೆ ನಿಯೋಜಿಸಿದವರು ಆಚಾರ್ಯ ಭೀಷ್ಮರು. ಹಸ್ತಿನಾವತಿಗೆ ನೀವು ಹಿಂದಿರುಗಿದ ಮೇಲೆ ನಿಮ್ಮನ್ನು ಬರಿಗೈಯಲ್ಲಿ ಮನೆಗೆ ಕಳುಹಿಸುವಷ್ಟು ಅವರು ದಯಾಹೀನರಲ್ಲ. ನಿಮಗೆ ಈ ಬಗ್ಗೆ ಸಂಶಯಗಳಿರುತ್ತಿದ್ದರೆ ಭೀಷ್ಮರೆದುರೇ ಹೇಳಬೇಕಿತ್ತು. ಇಲ್ಲಿ ನನ್ನೊಡನೆ ಹೇಳಿ ಏನು ಪ್ರಯೋಜನ? ಸಾಲ್ವಭೂಪತಿಯಲ್ಲಿ ಹೇಳಿ ನಿಮಗೆ ಏನನ್ನಾದರೂ ಕೊಡಿಸುತ್ತೇನೆ. ನೀವೀಗ ಹೊರಡಿ.”

ಪುರೋಹಿತ ದೇವೀ ಚರಣದಾಸ ಸಿಡುಕಿದ: “ಭೀಷ್ಮರು ಕೊಡುತ್ತಾರೋ, ಬಿಡುತ್ತಾರೋ ಎನ್ನುವುದು ನಿನಗೆ ಸಂಬಂಧಿಸಿದ ವಿಷಯವಲ್ಲ. ಸಾಲ್ವ ಏನಾದರೂ ಕೊಟ್ಟರೆ ಅದು ಅವನ ಉದಾರತೆ ಯಾಗುತ್ತದೆ. ನಾನೀಗ ಬಂದಿರುವುದು ನಿನಗಾಗಿ. ನೀನೇನು ಕೊಡುತ್ತೀ? ಅದನ್ನು ಹೇಳು.”

ಕಾಶಿಯಲ್ಲಿ ಇಂತಹ ಸ್ವಭಾವದ ಪುರೋಹಿತರುಗಳನ್ನು ಅವಳು ಕಂಡಿದ್ದಳು. ಪರರಿಂದ ದಾನ ಪಡೆಯಲು ಸಹಸ್ರ ಹಾದಿಗಳನ್ನು ಅನ್ವೇಷಿಸುವವರು. ಬ್ರಾಹ್ಮಣರಿಗೆ ದಾನ ನೀಡಿದರೆ ಪರಲೋಕದಲ್ಲಿ ಅದೇನೇನೋ ಸುಖ ಕಾದಿರುತ್ತದೆಂದು ಶ್ಲೋಕ ಸಮರ್ಥನೆ ನೀಡುವವರು. ಇಂಥವರಿಗೆ ಬೇಕಾಗಿರುವುದು ಹೊನ್ನು ಮಾತ್ರ. ಇತರರ ಅಸಹಾಯ ಪರಿಸ್ಥತಿಯಲ್ಲಿ ಇವರು ಬಲೆ ಬೀಸುತ್ತಾರೆ. ಸುಲಿಗೆಯ ವಿವಿಧ ರೂಪಗಳಿಗೆ ಧರ್ಮದ ಪರಿವೇಷೆ ತೊಡಿಸುತ್ತಾರೆ. ಈ ಅಪರಿಚಿತ ನೆಲದಲ್ಲಿ ತಾನೇನು ನೀಡಬಲ್ಲೆನೆಂದು ದಿಙ್ಮೂಢಳಾಗಿ ಅಂಬೆ ನಿಂತಿದ್ದಾಗ ಪುರೋಹಿತನೇ ಪರಿಹಾರ ಸೂಚಿಸಿದ.

“ನಿಮಗೆ, ಕ್ಷತ್ರಿಯರಿಗೆ ಮಹಾ ದುರಾಶೆ. ನೀನು ಆಲೋಚಿಸುವುದಕ್ಕೇನಿದೆ? ನಿನ್ನ ದೇಹವನ್ನೊಮ್ಮೆ ನೋಡಿಕೋ. ಎಷ್ಟು ಸುವರ್ಣಮಾಲೆಗಳನ್ನು ಹಾಕಿಕೊಂಡಿದ್ದಿ, ಎಷ್ಟು ಬಳೆಗಳನ್ನು ತೊಟ್ಟುಕೊಂಡಿದ್ದಿ. ಎಷ್ಟು ಓದಿಕೊಂಡವನಾದರೇನು? ನನ್ನ ಮೂವರು ಹೆಣ್ಣು ಮಕ್ಕಳ ಕೊರಳಿಗೆ ಕನಿಷ್ಠ ಒಂದೊಂದು ಸುವರ್ಣಮಾಲೆ ತೊಡಿಸಲು ನನ್ನಿಂದಾಗಿಲ್ಲ. ನನ್ನಂಥವರನ್ನು ಹಿಂದಿನಿಂದ ಎಲ್ಲರೂ ಬಯ್ಯುತ್ತಾರೆ. ನಮ್ಮ ದಾರಿದ್ರ್ಯ ನಿವಾರಣೆ ಮಾಡುವವರು ಯಾರಿದ್ದಾರೆ?”

ಅಂಬೆಗೆ ಅವನ ಪರಿಸ್ಥತಿ ಅರ್ಥವಾಯಿತು. ಏನನ್ನು ಕೊಡಬಹುದೆಂಬುದನ್ನು ಪುರೋಹಿತ ಸೂಚ್ಯವಾಗಿ ತಿಳಿಸಿದ್ದಾನೆ. ತನ್ನ ದೇಹದ ಮೇಲಿರುವ ಆಭರಣಗಳನ್ನು ಯಾವಾಗ ಬೇಕಾದರೂ ಕೊಟ್ಟು ಬಿಡಬಹುದೆಂಬುದು ಹೊಳೆದಾಗ ಅವಳಲ್ಲಿ ಧೈರ್ಯ ಮೂಡಿತು. ಅನುನಯದ ಸ್ವರದಲ್ಲಿ ಅವಳೆಂದಳು.

“ಸ್ವಾಮಿ ಪುರೋಹಿತರೇ, ನಿಮ್ಮ ಚಿಂತೆಗಳನ್ನು ಬಿಟ್ಟುಬಿಡಿ. ಒಮ್ಮೆ ಸಾಲ್ವಭೂಪತಿಯ ಆಸ್ಥಾನವನ್ನು ಸೇರಿಕೊಳ್ಳೋಣ. ಯಾವಜ್ಜೀವ ಪರ್ಯಂತ ನಿಮ್ಮನ್ನು ಬಡತನ ಕಾಡದಂತೆ ನೋಡಿಕೊಳ್ಳುತ್ತೇನೆ. ನಿಮ್ಮ ಅಷ್ಟೂ ಹೆಣ್ಣುಮಕ್ಕಳಿಗೆ ಒಡವೆ ಕೊಡಿಸುತ್ತೇನೆ. ಒಳ್ಳೆಯ ಸಂಬಂಧ ನೋಡಿ ವಿವಾಹ ಮಾಡಿಸುತ್ತೇನೆ. ದಯವಿಟ್ಟು ನನ್ನನ್ನು ನಂಬಿ. ಇನ್ನು ಹೊರಡಿ.”

ವೃದ್ಧ ಪುರೋಹಿತ ಬಲ ಹಸ್ತ ಮುಂದಕ್ಕೆ ಚಾಚಿದ: “ಹಾಗಂತ ಭಾಷೆ ಕೊಡು.”

ಅಂಬೆ ಕನಲಿದಳು: “ನಾನು ಕ್ಷತ್ರಿಯಾಣಿ. ನಾನೊಂದು ಮಾತು ಹೇಳಿದರೆ ಅದು ಭಾಷೆಯಿತ್ತಂತೆ. ಕೈತಟ್ಟಿ ಭಾಷೆ ಕೊಡುವ ಕ್ರಮ ನನ್ನದಲ್ಲ. ನಿಮ್ಮಂತಹ ಜ್ಞಾನವೃದ್ಧರಿಗೆ ಮೋಸ ಮಾಡಿ ನಾನ್ಯಾಕೆ ಪಾಪ ಕಟ್ಟಿಕೊಳ್ಳಲಿ?”

ವೃದ್ಧ ಪುರೋಹಿತ ಮರುಮಾತಿಲ್ಲದೆ ಎದ್ದು ನಿಂತ. ಅಂಬೆಯ ಹಿಂದೆ ವೇಗವಾಗಿ ಹೆಜ್ಜೆ ಹಾಕತೊಡಗಿದ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೂತೂ – ಮೈಮೈ
Next post ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು

ಸಣ್ಣ ಕತೆ

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…