ಚಿತ್ರ: ರೂಬೆನ್ ಲಗಾಡಾನ್

ಮೋಹನನ ಅಧ್ಯಾಯ ಆಲ್ಲಿಗೆ ಮುಗಿದಂತಾಯಿತು. ಹತ್ತಿರದವರನ್ನು ಬಿಟ್ಟರೆ ಎಲ್ಲರೂ ಹೊರಟು ನಿಂತರು. ಮನೆಯಲ್ಲಿ ಸ್ಮಶಾನ ಮೌನ, ಒಂದು ರೂಮಿನಲ್ಲಿ ಇಳಾ ಮಲಗಿ ದುಃಖಸುತ್ತಿದ್ದಳು. ಅವಳನ್ನು ಸಮಾಧಾನಿಸುತ್ತ ಸುಂದರೇಶ, ರಮೇಶ ಅಲ್ಲಿಯೇ ಇದ್ದರು. ನೀಲಾ ಮತ್ತೊಂದು ರೂಮಿನಲ್ಲಿ ಅರೆ ಪ್ರಜ್ಞಾವಸ್ತೆಯಲ್ಲಿ ಮೋಹನ, ಮೋಹನ ಅಂತ ಕನವರಿಸುತ್ತಲೇ, ಇಹದ ಪರಿವೇ ಇಲ್ಲದಂತಿದ್ದರೆ, ಗಿರೀಶ ಅವನ ಹೆಂಡತಿ, ಅವಳಿಗೆ ಬಲವಂತವಾಗಿ ಎಳನೀರನ್ನು ಚಮಚದಲ್ಲಿ ಕುಡಿಸುತ್ತ, ಒಂದಿಷ್ಟು ಶಕ್ತಿ ತುಂಬಲು ಯತ್ನಿಸುತ್ತಿದ್ದರು.

ಅಮ್ಮನ ಸ್ಥಿತಿ ಹೀಗಿದ್ದರೂ ಇಳಾ ಬಂದು ತಾಯಿಯನ್ನು ನೋಡಲೇ ಇಲ್ಲ. ಅವಳ ಹೃದಯ ಅಗ್ನಿಕುಂಡವಾಗಿತ್ತು. ಹೀಗೆ ಧುತ್ತೆಂದು ವಿಪತ್ತು ಎಗರಿ ಅವಳ ಹೃದಯವನ್ನೇ ಛಿದ್ರವಾಗಿಸಿತ್ತು. ತಾನಾದರೂ ಏಕೆ ಬದುಕಿರಬೇಕೆಂಬ ಜಿಗುಪ್ಸೆ ಕಾಡಿ, ಸತ್ತು ಬಿಡಬೇಕೆಂದು ಹಲವು ಬಾರಿ ಆಲೋಚಿಸಿದಳು. ಆದರೆ ದೊಡ್ಡಪ್ಪ, ದೊಡ್ಡಮ್ಮ, ಮಾಮಾ, ಆತ್ತೆಯ ಭದ್ರ ಕಾವಲಿನಲ್ಲಿ ಅವಳು ಅಲ್ಲಿಂದ ಅಲುಗಾಡಲೂ ಆಗುತ್ತಿರಲಿಲ್ಲ. ಅತ್ತು ಅತ್ತು ಸುಸ್ತಾದ ಇಳಾ ಮನಸ್ಸಿನಲ್ಲಿಯೇ ನೂರೆಂಟು ಆಲೋಚನೆ ಮಾಡುತ್ತಿದ್ದಳು. ಎಲ್ಲಾ ಸರಿಯಾಗಿದ್ದಿದ್ದರೆ ಈ ಸಮಯದಲ್ಲಿ ತಾನು ಪರೀಕ್ಷೆಯ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆಯಬೇಕಿತ್ತು. ವಿಧಿ ಇಲ್ಲಿ ಪಪ್ಪನನ್ನು ಕಳೆದುಕೊಂಡು ತಬ್ಬಲಿಯಾಗಿ ಅಳುವಂತೆ ಮಾಡಿದೆ. ತನ್ನ ಆಸೆ, ಕನಸುಗಳೆಲ್ಲವನ್ನು ಪಪ್ಪ ಛಿದ್ರ ಮಾಡಿಬಿಟ್ಟರು. ಪಪ್ಪ ಸಾಯಲು ಕಾರಣವೇನು? ಪಪ್ಪ ಸಾಯುವಾಗ ಪತ್ರ ಬರೆದಿಟ್ಟಿದ್ದರೇ? ತಕ್ಷಣವೇ ದೊಡ್ಡಪ್ಪನನ್ನು ಕೇಳಿದಳು. ಹೌದೆಂದು ತಲೆ ಆಡಿಸಿದ ದೊಡ್ಡಪ್ಪ ಪತ್ರದ ಝೆರಾಕ್ಸ್ ಕಾಫಿಯನ್ನು ತಂದು ಅವಳ ಕೈಯೊಳಗಿರಿಸಿದರು.

‘ಪ್ರಿಯ ನೀಲಾ, ನನ್ನನ್ನು ಕ್ಷಮಿಸು, ನಿನ್ನನ್ನು ಇಳಾಳನ್ನು ನಡುಬೀದಿಯಲ್ಲಿ ಕೈಬಿಟ್ಟು ಹೋಗ್ತಾ ಇದ್ದೇನೆ. ಸಾಲದ ಭಾದೆಯಿಂದ ತತ್ತರಿಸಿದ್ದೇನೆ. ಕಾರು, ಒಡವೆ ಎಲ್ಲಾ ಮಾರಿದ್ದೇನೆ. ಬ್ಯಾಂಕಿನಲ್ಲಿ ತೀರಿಸಲು ಆಗದಷ್ಟು ಸಾಲವಾಗಿದೆ. ಇಳಾಳನ್ನು ಡಾಕ್ಟರ್‌ನಾಗಿ ಮಾಡುವ ಯೋಗ್ಯತೆ ಕಳೆದುಕೊಂಡಿದ್ದೇನೆ. ನನ್ನ ಮೇಲೆ ನನಗೆ ಜಿಗುಪ್ಸೆ ಬಂದಿದೆ. ನಿನ್ನ ಮಾತು ಕೇಳದೆ ಶುಂಠಿಗೆ ಹಣ ಹಾಕಿ ಎಲ್ಲವನ್ನು ಕಳೆದುಕೊಂಡು ನಿಮಗೆ ಮುಖ ತೋರಿಸದವನಾಗಿದ್ದೇನೆ. ಈ ಪಾಪಿಯನ್ನು ಮರೆತುಬಿಡಿ.’ ಪತ್ರದ ಸಾರಾಂಶ ಓದಿ ಇಳಾಳಿಗೆ ಪರಿಸ್ಥಿತಿಯ ಸ್ಪಷ್ಟ ಅರಿವಾಯಿತು. ಎಲ್ಲೋ ಕೇಳುತ್ತಿದ್ದ, ಓದುತ್ತಿದ್ದ ರೈತರ ಆತ್ಮಹತ್ಯೆ ಇವತ್ತು ತನ್ನ ಮನೆಯಲ್ಲಿಯೇ ನಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪಪ್ಪ ಸಾವಿನತ್ತ ಕೈಚಾಚಿದ್ದಾರೆ. ಆ ಕ್ಷಣದಲ್ಲಿ ಅದೊಂದೇ ಪರಿಹಾರವಾಗಿ ಕಂಡಿದೆ. ಸಾಲದ ಹೊರೆ, ಕಾರು, ಒಡವೆ ಮಾರಾಟದಿಂದಾಗಿ ಕಂಗೆಟ್ಟ ಪಪ್ಪ ದುಡುಕಿದ್ದಾರೆ. ಕೂತು ಆಲೋಚಿಸಿದ್ದರೆ, ಬೇರೆ ಏನಾದರೂ ಪರಿಹಾರ ಹೊಳೆಯುತ್ತಿತ್ತೇನೋ? ಮನಸ್ಸಿಗೆ ಹತಾಶೆ ಕವಿದು, ಈ ಬಾರಿ ತನ್ನ ಪರೀಕ್ಷೆ ಮುಗಿದೊಡನೆ ನನ್ನ ಮೆಡಿಕಲ್ ಸೀಟಿಗಾಗಿ ಖರ್ಚಾಗುವ ಹಣವನ್ನು ಊಹಿಸಿಯೇ, ಆ ಪರಿಸ್ಥಿತಿಯನ್ನು ಎದುರಿಸುವ ಧ್ಯೆರ್ಯ ಸಾಲದೆ ಮಗಳನ್ನು ಓದಿಸಲಾರದ ಆಶಕ್ತತೆಯನ್ನು ಮನಗಂಡು ಸಾವೇ ಇದಕ್ಕೆ ಪರಿಹಾರವೆಂದುಕೊಂಡ ಪಪ್ಪನ ಮನಸ್ಸನ್ನು ನೆನೆದು ದುಃಖ ಉಮ್ಮಳಿಸಿ ಪಪ್ಪ ನೀನೊಬ್ಬ ನನ್ನೊಂದಿಗಿದ್ದರೆ ಸಾಕಾಗಿತ್ತು. ಈ ಮೆಡಿಕಲ್ ನಂಗೆ ಬೇಡವಾಗಿತ್ತು. ನಿನ್ನೊಂದಿಗೆ ನಾನೂ ಕೈಜೋಡಿಸುತ್ತಿದ್ದೆ. ನಿನಗಿಂತಲೂ ನನಗೆ ಬೇರೇನು ಹೆಚ್ಚಿನದಿರುತ್ತಿತ್ತು. ಪಪ್ಪ ಎಲ್ಲವನ್ನೂ ಮುಚ್ಚಿಟ್ಟು, ನಮಗೆ ಮೋಸ ಮಾಡಿಬಿಟ್ಟೆ. ಪಪ್ಪ ನಮ್ಮೊಂದಿಗೆ ಚರ್ಚಿಸಬಹುದಿತ್ತು. ಬೇರೆ ಏನಾದರೂ ದಾರಿ ಕಾಣ್ತಿತ್ತು. ಅವಸರ ಮಾಡಿಕೊಂಡುಬಿಟ್ಟೆ ಎಂದು ಮನದಲ್ಲೇ ರೋಧಿಸುತ್ತ ಬಿಕ್ಕಳಿಸಿದಳು. ಸುಂದರೇಶ ಒಂದೂ ಮಾತನಾಡದೆ ಸುಮ್ಮನೆ ಬೆನ್ನು ಸವರಿದರು.

ಯಾರು ಎಷ್ಟು ಸಮಾಧಾನಿಸಿದರೂ ಕಳೆದು ಹೋದದನ್ನು ಮತ್ತೆ ತರಲು ಸಾಧ್ಯವಿಲ್ಲ. ಪಪ್ಪ ಮತ್ತೆ ಎಂದಿಗೂ ಹಿಂದಿರುಗಿ ಬರಲಾರ, ನನ್ನ ಕಾಲೇಜಿನ ಕಥೆ ಮುಗಿಯಿತು. ಇನ್ನೇನಿದ್ದರೂ ಮುಂದಿನ ಹೋರಾಟ… ಬದುಕ ನಡೆಸುವ ಹೋರಾಟ – ಮನದಲ್ಲಿಯೇ ನಿರ್ಧರಿಸಿಕೊಂಡು ಎದೆ ಗಟ್ಟಿ ಮಾಡಿಕೊಂಡಳು. ಇನ್ನು ತಾನು ಅಳಬಾರದು. ಅತ್ತು ಹೇಡಿಯಾಗಬಾರದು. ಮೋಹನನ ಮಗಳು ಹೇಗೆ ಬದುಕುತ್ತಿದ್ದಾಳೆ ಎಂದು ಸಾಧಿಸಿ ತೋರಿಸಬೇಕು. ಈ ಬದುಕು ಕವಲೊಡೆದಿದೆ. ಅಲ್ಲಿಯೇ ತಾನು ದಿಟ್ಟ ಹೆಜ್ಜೆಯನಿರಿಸಬೇಕು. ಕಳೆದುಕೊಂಡಲ್ಲಿಯೇ ಮತ್ತೆ ಪಡೆದುಕೊಳ್ಳಬೇಕು. ಮೋಹನನ ಮಗಳು ಮೋಹನನಂತೆ ಹೇಡಿಯಲ್ಲ, ಧೈರ್ಯವಂತೆ, ಸಾಹಸಿ ಎಂದು ತೋರಿಸುವ ಸಂದರ್ಭ ಈಗ ಎದುರಾಗಿದೆ. ಇಲ್ಲಿ ತಾನು ಗೆಲ್ಲಬೇಕು, ಗೆಲ್ಲಲೇಬೇಕು-ಎಂದು ಸಂಕಲ್ಪಿಸಿಕೊಂಡಳು.

ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಇರುವ ಅಂಬುಜಮ್ಮನಿಗೆ ಇಲ್ಲಿ ಕೆಲಸವೋ ಕೆಲಸ. ಮಗನ ಮನೆಯಲ್ಲಿ ಬೇಗ ಎಚ್ಚರವಾದರೂ ಹಾಸಿಗೆಯಲ್ಲಿಯೇ ಹೊರಳಾಡಿ ಸಮಯ ಕಳೆಯಬೇಕಿತ್ತು. ಎದ್ದು ಯಾವುದೇ ಕೆಲಸ ಮಾಡುವಂತಿರಲಿಲ್ಲ!

ಮಗ, ಸೊಸೆ, ಮೊಮ್ಮಕ್ಕಳ ಸ್ನಾನ ಮುಗಿಯುವ ತನಕ ಕಾದಿದ್ದು ನಂತರ ಸ್ನಾನ ಮಾಡಿ ಸೊಸೆ ಮಾಡಿಟ್ಟಿದ್ದ ತಿಂಡಿಯನ್ನು ತಿಂದು ಮತ್ತೆ ಸುಮ್ಮನೆ ಕುಳಿತಿರುವುದಷ್ಟೆ ಕೆಲಸ. ಮತ್ತೆ ಮಧ್ಯಾಹ್ನ ಊಟಕ್ಕೆ ಕಾಯುವುದು. ಊಟ ಮಾಡಿ ಮಲಗುವುದು. ಯಾರೊಂದಿಗೂ ಮಾತಿಲ್ಲ, ಕಥೆಯಿಲ್ಲ. ಸೊಸೆ ಅಂತೂ ಮಾತೇ ಆಡುವುದಿಲ್ಲ. ಮೊಮ್ಮಕ್ಕಳಿಗೆ ಓದುವುದು, ಬರೆಯುವುದೇ ಆಗುತ್ತಿತ್ತು. ಇನ್ನು ಆಜ್ಜಿಯನ್ನು ವಿಚಾರಿಸಲು ಸಮಯವಾದರೂ ಎಲ್ಲಿರುತ್ತಿತ್ತು. ಮಗ ಬರುವುದು ರಾತ್ರಿಯಾಗಿರುತ್ತಿತ್ತು. ಬಂದವನೇ ಸುಸ್ತು ಎನ್ನುತ್ತ ಊಟ ಮಾಡಿ ಮಲಗಿಬಿಡುತ್ತಿದ್ದ. ಅಮ್ಮನ ಊಟ ಆಯ್ತಾ ಎಂದು ಕೇಳಿ ಉತ್ತರಕ್ಕೂ ಕಾಯದೆ ಮಲಗಿಬಿಡುತ್ತಿದ್ದ. ಬೆಳಿಗ್ಗೆ ಎದುರಿಗೆ ಸಿಕ್ಕರೆ ಕಾಫಿ ಆಯ್ತಾ, ತಿಂಡಿ ಆಯ್ತಾ ಅಂತ ಕೇಳಿದ್ರೆ ಆಗೋಯ್ತು ಮಗನ ಕರ್ತವ್ಯ. ಅಷ್ಟಕ್ಕೆ ತಾಯಿ ಮಗನ ಸಂಬಂಧ ಮುಗಿದುಹೋಗುತ್ತಿತ್ತು. ಆಕ್ಕಪಕ್ಕದಮೊಂದಿಗೆ ಮಾತನಾಡುವುದು ಆಮ ಮನೆಗೆ ಹೋಗುವುದು, ಆಕ್ಕಪಕ್ಕದವರು ತಮ್ಮ ಮನೆಗೆ ಬರುವುದು. ಸೊಸೆಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಒಬ್ಬಳೇ ಇದ್ದು ಇದ್ದು ಹುಚ್ಚು ಹಿಡಿಯುವಂತಾಗಿ, ಇಲ್ಲಿಂದ ಪಾರಾಗಲು ವೃದ್ಧಾಶ್ರಮ ಸೇರಲು ಮನಸ್ಸು ಮಾಡಿದ್ದರು. ಅದಷ್ಟು ಸುಲಭವಾಗಿರಲಿಲ್ಲ ಅಂತ ಗೊತ್ತಿದ್ದರೂ, ಮಗನಿಗೂ ಹೇಳದೆ ಹೋಗಲು ನಿರ್ಧರಿಸಿದ್ದರು.

ವೃದ್ಧಾಶ್ರಮದ ವಿಳಾಸಗಳನ್ನೆಲ್ಲ ಬರೆದಿಟ್ಟುಕೊಂಡಿದ್ದರು. ಮಗನಿಗೆ ಗೊತ್ತಾದರೆ ನೊಂದುಕೊಳ್ಳುತ್ತಾನೆ. ಆದರೆ ನನ್ನ ವೇದನೆ, ನನ್ನ ಒಂಟಿತನದ ಪರಿಸ್ಥಿತಿ ಅವನಿಗೆ ಆರ್ಥವಾಗುವುದಿಲ್ಲ. ಅಮ್ಮನನ್ನು ಸುಖವಾಗಿಟ್ಟುಕೊಂಡಿದ್ದೇನೆ ಅಂದುಕೊಂಡಿದ್ದಾನೆ. ಪಾಪ, ಈ ವಯಸ್ಸಿನಲ್ಲಿ ಹೀಗಿರಲು ತನ್ನಿಂದ ಸಾಧ್ಯವೇ, ವೃದ್ಧಾಶ್ರಮದಲ್ಲಾದರೇ ತನ್ನ ವಯಸ್ಸಿನವರೇ ಇರುತ್ತಾರೆ. ಅವರೊಂದಿಗೆ ಕಷ್ಟ ಸುಖ ಹಂಚಿಕೊಂಡು, ಅಲ್ಲಿನ ಕೆಲಸ ಮಾಡುತ್ತ ದಿನ ಕಳೆಯುವುದು ಕಷ್ಟವಾಗಲಾರದು. ಟಿ.ವಿ.ಯಲ್ಲಿ ವೃದ್ದಾಶ್ರಮಗಳನ್ನು ನೋಡಿ ತನ್ನ ಒಂಟಿತನದ ನೋವಿಗೆ ಅದೇ ಮದ್ದು ಎಂಬ ಆನಿಸಿಕೆಯಿಂದಾಗಿ ದಿನಗಳ ಎಣಿಕೆ ಮಾಡುತ್ತ ಸಮಯ ಕಾಯುತ್ತಿದ್ದರು. ಮಗ, ಸೊಸೆ ಇಲ್ಲದ ಸಮಯ ನೋಡಿ, ಪತ್ರ ಬರೆದಿಟ್ಟು ಹೊರಟುಬಿಡುವುದು ಎಂದು ಆ ದಿನಗಳ ನಿರೀಕ್ಷೆಯಲ್ಲಿರುವಾಗಲೇ ಮೋಹನನ ದುರಂತ ಇಲ್ಲಿಗೆ ಕರೆತಂದಿತ್ತು. ತಾನು ಇಲ್ಲಿರುವುದು ಮಗನಿಗೂ ಒಂದು ಸಮಾಧಾನ. ಚಿಕ್ಕಮ್ಮನ ಋಣ ತೀರಿಸುವ ಹಂಬಲದಿಂದ ಅಮ್ಮನನ್ನು ಬಿಡಲು ಸುಲಭವಾಗಿ ಒಪ್ಪಿಗೆ ಕೊಟ್ಟಿದ್ದ. ಇನ್ನು ಸೊಸೆಯೋ… ಇದ್ದರೂ ಅಡ್ಡಿಯಿಲ್ಲ, ಇಲ್ಲದಿದ್ದರೂ ಬೇಸರವಿಲ್ಲ ಅನ್ನೋ ಸ್ವಭಾವದವಳು. ಒಟ್ಟಿನಲ್ಲಿ ಅಂಬುಜಮ್ಮನ ಕೊನೆ ದಿನಗಳು ಒಂದು ರೀತಿ ಸುಖಾಂತವಾಗಿತ್ತು. ಅದು ಈ ರೀತಿ ಈಡೇರುವಂತಾಯಿತಲ್ಲ ಅನ್ನೋ ನೋವು ಮಾತ್ರ ಅವರನ್ನು ಕಾಡುತ್ತಿತ್ತು.

ಮೋಹನನ್ನು ಕಳೆದುಕೊಂಡಿರುವ ನೀಲಾಳ ಬಗ್ಗೆ ಅತೀವ ಅನುಕಂಪ ಉಕ್ಕಿಬರುತ್ತಿತ್ತು. ಒಬ್ಬಳೇ ಮಗಳೆಂದು ಅತಿ ಮುದ್ದಿನಿಂದ ಸಾಕಿ, ಶ್ರೀಮಂತರೆಂದು ಮೋಹನನಿಗೆ ೧೬ ವರುಷಕ್ಕೆ ಮದುವೆ ಮಾಡಿದ್ದ ತಂಗಿಯ ಬಗ್ಗೆ ಈಗ ಕೋಪ ಬರುತ್ತಿದೆ. ವಿದ್ಯಾವಂತೆಯನ್ನಾಗಿ ಮಾಡದೆ, ಆರ್ಥಿಕ ಸ್ವಾವಲಂಬನೆಯನ್ನು ಕಲ್ಪಿಸದೆ ಅಂದು ಮದುವೆ ಮಾಡಿದ್ದಕ್ಕೆ ಇಂದು ನೀಲಾ ಈ ಸಂಸಾರದ ಭಾರ ಹೊತ್ತು ನಲುಗಬೇಕಾಗಿದೆ. ತನ್ನ ಬದುಕನ್ನು ನೋಡಿಯಾದರೂ ತಂಗಿ ಬುದ್ಧಿಯನ್ನು ಕಲಿಯಬೇಕಿತ್ತು.

ಮೋಹನ ಒಳ್ಳೆಯವನೇ. ನೀಲಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಆದರೆ ಈಗ ಈ ಸಂಸಾರದ ದಿಕ್ಕಾಗುವವರು ಯಾರು? ಇಳಾ ಇನ್ನೂ ಮಗು. ಪ್ರಪಂಚದ ಯಾವ ಕಷ್ಟಗಳ ಅರಿವೇ ಇಲ್ಲಾ. ಇನ್ನು ನೀಲಾ ಗಂಡನ ಆಶ್ರಯದಿ ಬೆಚ್ಚಗೆ ಇದ್ದಾಕೆ. ಈಗ ಈ ಆಸ್ತಿ ನೋಡಿಕೊಂಡು, ಗಂಡನ ಸಾಲ ತೀರಿಸಿ, ಮಗಳನ್ನು ಒಂದು ದಡ ಸೇರಿಸುವಷ್ಟು ಶಕ್ತಳೇ? ಭಾವಂದಿರು, ಆಣ್ಣಂದಿರ ಸಹಾಯ ದೊರೆಯಬಹುದು. ಆದರೆ ಪ್ರತಿಕ್ಷಣ ಅವರ ನೆರವು ನಿರೀಕ್ಷಿಸಲು ಸಾಧ್ಯವೇ?- ಏನಾಗಿಹೋಯಿತು. ತನ್ನಕಣ್ಮುಂದೆ ಬೆಳೆದ ನೀಲಾಳ ಬದುಕು, ಹೇಗೆ ಚೇತರಿಸಿಕೊಳ್ಳುತ್ತಾಳೆ. ಇಳಾಳ ಭವಿಷ್ಯವೇನು. ತಾನಾದರೂ ಅದೆಷ್ಟು ದಿನ ಜೊತೆ ಇರಬಲ್ಲೆ. ಮುಂದೆ ಅವರಿಬ್ಬರ ಬದುಕೇನು? ದೇವರೇ ಅವರಿಬ್ಬರ ಬದುಕನ್ನು ನೇರಗೊಳಿಸು. ಮೋಹನ ಸತ್ತ ದುಃಖದಿಂದ ಹೊರ ಬಂದು ಬದುಕಿನ ಹಾದಿ ಕೊಡುಕೊಳ್ಳುವ ಧೈರ್ಯ, ಶಕ್ತಿ ಅವರಲ್ಲಿ ತುಂಬು, ಇಳಾಗೆ ಒಬ್ಬ ಒಳ್ಳೆ ಹುಡುಗ ದೊರೆತು ಅವಳ ಬಾಳು ಬಂಗಾರವಾಗಲಿ ಎಂದು ಮನಸ್ಸಿನಲ್ಲಿಯೇ ಹಾರೈಸಿದರು ಅಂಬುಜಮ್ಮ.

ಇಳಾ ಬೆಳಗ್ಗೆ ಎದ್ದವಳೇ ಅಜ್ಜಿಮಾಡಿಕೊಟ್ಟ ಕಾಫಿ ಕುಡಿದು-‘ತೋಟಕ್ಕೆ ಹೋಗಿ ಬರ್ತೀನಿ ಅಜ್ಜಿ’ ಅಂದಳು. ‘ತಿಂಡಿ ಏನು ಮಾಡ್ಲಿ ಪುಟ್ಟ’ ಅಂಬುಜಮ್ಮ ಕೇಳಿದರು. ‘ಯಾವುದೋ ಒಂದು ಮಾಡಿ ಅಜ್ಜಿ’ ಉದಾಸವಾಗಿ ನುಡಿದು ವೇಲ್ ಹೊದ್ದುಕೊಳ್ಳುತ್ತ ಹೊರನಡೆದಳು. ಇಳಾ ಉದಾಸವಾಗಿ ನಡೆದು ಹೋಗುವುದನ್ನು ನೋಡುತ್ತ- ‘ಜಿಂಕೆ ಮರಿ ಹಂಗೆ ಇದ್ದವಳು ಹೇಗಾಗಿಬಿಟ್ಟಳು. ೧೮ ವರುಷಕ್ಕೆ ಗಾಂಭೀರ್ಯ ಬಂದುಬಿಟ್ಟಿದೆ. ಮೋಹನ ಹೆಂಡತಿಯ ಬದುಕನ್ನು ನರಕವಾಗಿಸಿಬಿಟ್ಟ. ಮಗಳ ಭವಿಷ್ಯವನ್ನು ಹಾಳು ಮಾಡಿಬಿಟ್ಟ. ಹಕ್ಕಿ ಹಾಗೆ ಹಾರ್ಕೊಂಡು ಇರೋ ವಯಸ್ಸಿನಲ್ಲಿ ಮನೆ ಜವಾಬ್ದಾರಿ ಹೊತ್ತುಕೊಳ್ಳುವ ಹಾಗಾಯ್ತು ಮಗೂಗೆ, ಏನು ಮಾಡುತ್ತೊ ಇದು. ನೀಲಾ ಅಂತೂ ಹಾಸಿಗೆ ಬಿಟ್ಟು ಏಳ್ತಾ ಇಲ್ಲ. ಮಗಳ ಮುಖವಾದ್ರೂ ನೋಡಿಕೊಂಡು ದುಃಖ ಮರೆಯಬಾರದೇ’ ಅಂತ ಅಂದುಕೊಳ್ಳುತ್ತಲೇ ಉಪ್ಪಿಟ್ಟಿಗೆ ಈರುಳ್ಳಿ, ಹೆಚ್ಚತೊಡಗಿದರು.

ತೋಟಕ್ಕೆ ಬಂದ ಇಳಾ ಇಡೀ ತೋಟವನ್ನೆಲ್ಲ ಸುತ್ತಿದಳು. ಕಾಫಿ ಗಿಡ ಹಸಿರು ಎಲೆಗಳಿಂದ ತುಂಬಿಕೋಡು ಬಸುರಿಯ ಕಳೆಯಿಂದ ಕಂಗೊಳಿಸುತ್ತಿತ್ತು. ಇನ್ನೇನು ಹೂವಾಗಿ ಬಿಡುತ್ತವೆ. ತೋಟದ ಯಾವ ಕೆಲಸಗಳೂ ಗೊತ್ತಿಲ್ಲ. ಆದರೆ ಇನ್ನು ಮುಂದೆ ಎಲ್ಲವನ್ನು ತಿಳಿದುಕೊಳ್ಳಬೇಕು. ಅಪ್ಪ ಸೋತು ಸಾವಿಗೆ ಶರಣಾಗಿ ನಮ್ಮನ್ನೆಲ್ಲ ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ. ಆದರೆ ನಾನು ಇಲ್ಲಿ ಗೆಲ್ಲಲೇಬೇಕು. ಗೆದ್ದು ‘ಮೋಹನನ ಮಗಳು ಹೀಗೆ…’ ಅಂತ ನಾಲ್ಕು ಜನ ಅನ್ನಬೇಕು. ಹಾಗೆ ಬದುಕಿ ತೋರಿಸುತ್ತೇನೆ. ಈ ನಿರ್ಧಾರ ಪದೇ ಪದೇ ಅವಳಲ್ಲಿ ಮೂಡಿ ಗಟ್ಟಿಯಾಗತೊಡಗಿತು. ಅಪ್ಪ ಸತ್ತ ದಿನವೇ ಈ ನಿರ್ಧಾರ ಮೂಡಿತ್ತು. ಈಗ ಮತ್ತೆ ಈ ನಿರ್ಧಾರ ಬದಲಿಸಲಾರೆ ಎಂದು ಶಪಥಗೊಂಡಳು.

ತೋಟವೆಲ್ಲ ಸುತ್ತಿ ಸುಸ್ತಾಗಿ ಮನೆಗೆ ಬರುವಷ್ಟರಲ್ಲಿ ದೊಡ್ಡಪ್ಪ ಸುಂದರೇಶ ಬಂದು ಕುಳಿತಿದ್ದುದು ಕಾಣಿಸಿ ವೇಗವಾಗಿ ಮನೆಯೊಳಗೆ ಹೆಜ್ಜೆ ಹಾಕಿದಳು. ‘ದೊಡ್ಡಪ್ಪ ಯಾವಾಗ ಬಂದ್ರಿ’ ವಿಶ್ವಾಸದಿಂದಲೇ ಪ್ರಶ್ನಿಸಿದಳು.

‘ಬಾ ಇಳಾ, ಎದ್ದಕೂಡಲೇ ತೋಟ ಸುತ್ತೋಕೆ ಹೋಗಿದ್ಯಾ, ಅಲ್ಲೇನು ನಿಂಗೆ ಗೊತ್ತಾಗುತ್ತೆ. ಆರಾಮವಾಗಿ ಮಲಗಿರುವುದು ಬಿಟ್ಟು ಈ ಚಳೀಲಿ ಯಾಕಮ್ಮ ಹೋಗಿದ್ದೆ’ ಕಳಕಳಿಯಿಂದ ವಿಚಾರಿಸಿದರು.

‘ಇನ್ನೆಲ್ಲಿ ಆರಾಮವಾಗಿ ಮಲಗುವುದು ದೊಡ್ಡಪ್ಪ. ಇನ್ನುಮೇಲೆ ತೋಟ ಸುತ್ತಲೇಬೇಕಲ್ಲಾ.’

‘ಆದ್ಯಾಕೆ ಇಳಾ ಹಾಗೆನ್ನುತ್ತಿ. ಅಪ್ಪ ಸತ್ತುಹೋದ ಅಂತ ನಾವ್ಯಾರೂ ಇಲ್ಲಾ ಅಂತ ಅಂದುಕೊಂಡ್ಯಾ. ನೀನು ಮತ್ತೆ ಕಾಲೇಜಿಗೆ ಹೋಗಬೇಕು, ನಿನ್ನಪ್ಪನ ಆಸೆಯಂತೆ ಡಾಕ್ಟರ್ ಆಗಬೇಕು.’

‘ಡಾಕ್ಟರಾ ದೊಡ್ಡಪ್ಪ, ಅದೆಲ್ಲ ಮುಗಿದು ಹೋದ ಕನಸು. ಆ ಕನಸುಗಳಾವುವು ಇನ್ನು ಬಾಳಿನಲ್ಲಿ ಬಾರವು ದೊಡ್ಡಪ್ಪ’-ನಿರಾಶೆಯಿತ್ತು ಧ್ವನಿಯಲ್ಲಿ.

‘ಹಾಗಂದ್ರೆ ಹೇಗಮ್ಮ. ನೀನು ಹುಟ್ಟಿದಾಗಲೇ ನಿಮ್ಮಪ್ಪ, ಅಮ್ಮ ಡಾಕ್ಟರ್ ಮಾಡ್ತೀವಿ ಅಂತಿದ್ದರು. ನಿಮ್ಮಪ್ಪ ಒಬ್ಬ ಮೂರ್ಖ. ನಿನ್ನಂಥ ಚಿನ್ನದ ಗಣಿ ಇರುವಾಗ ಯಕಃಶ್ಚಿಕ್ ಸಾಲಕ್ಕೆ ಹೆದರಿ ಹೇಡಿಯಾದ. ಅವನು ಕೈಬಿಟ್ಟರು ನಾವು ಕೈಬಿಡಲ್ಲ ಇಳಾ. ನಾನು ನಿಮ್ಮ ಮಾವಂದಿರ ಜೊತೆ ಮಾತನಾಡಿದ್ದೇನೆ.’

‘ಈ ವರುಷ ಹೇಗೂ ಹಾಳಾಗಿ ಹೋಯ್ತು. ಮುಂದಿನ ಸಾರಿ ಪರೀಕ್ಷೆ ಕಟ್ಟು, ಟ್ಯೂಷನ್ನಿಗೆ ಹೋಗು. ಮನಸ್ಸಿಟ್ಟು ಓದಿ ಮೆರಿಟ್ ಸೀಟ್ ತಗೋ. ಓದಿಸೋ ಭಾರ ನನ್ನದು. ನಿಮ್ಮ ಮಾವಂದಿರೂ ನಿಂಗೆ ಸಹಾಯ ಮಾಡ್ತಾರೆ’- ಭರವಸೆ ತುಂಬಿದರು.

‘ಇಲ್ಲಾ ದೊಡ್ಡಪ್ಪ ನಾನು ಓದುವುದಿಲ್ಲ. ಮನೆ ಪರಿಸ್ಥಿತಿ ನಂಗೆ ಅರ್ಥವಾಗುತ್ತೆ. ಡಾಕ್ಟರ್ ಓದೋದು ತುಂಬಾ ಕಷ್ಟ ಅಂತ ನಂಗೆ ಗೊತ್ತು. ನಿಮ್ಗೂ ಕಷ್ಟ ಇದೆ. ಅಷ್ಟೊಂದು ಲಕ್ಷ ಖರ್ಚು ಮಾಡೋಕೆ ನಮ್ಮ ಮಾವಂದಿರಿಗೆ ಕಷ್ಟವಾಗುತ್ತೆ. ನಂಗೂ ಓದೋ ಮೂಡು ಇಲ್ಲಾ.’

‘ಮತ್ತೇನೂ ಮಾಡ್ತೀಯಾ, ಮದ್ವೆ ಆಗ್ತೀಯಾ, ವೀಣಾನ ಜೊತೆ ನಿಂಗೂ ಮಾಡಿಬಿಡ್ತೀನಿ. ಎರಡು ಮದ್ವೆ ಒಂದೇ ಖರ್ಚಲ್ಲಿ ಆಗುತ್ತೆ. ನಿಮ್ಮಂಗೂ ಭಾರಕಳ್ಕೊಂಡು ನೆಮ್ಮದಿಯಾಗಿರೋಕೆ ಆಗುತ್ತೆ’ ಅದಕ್ಕೂ ತಯಾರು ಎನ್ನುವಂತೆ ಹೇಳಿದರು.

‘ಮದ್ವೇನಾ ದೊಡ್ಡಪ್ಪ, ಇಷ್ಟು ಬೇಗ, ಅಪ್ಪ ಸತ್ತಮೇಲೆ ನನಗೊಂದು ಗುರಿ ಕಾಣಿಸ್ತಿದೆ. ಆ ಗುರಿ ಮುಟ್ಟಿದ ಮೇಲೆ ನನ್ನ ಮುಂದಿನ ನಿರ್ಧಾರಗಳು ತೀರ್ಮಾನವಾಗೋದು. ಅದೇನು ಅಂತ ನಾನು ನಿಧಾನಕ್ಕೆ ನಿಮ್ಮ ಹತ್ರ ಮಾತಾಡ್ತೀನಿ. ಅಜ್ಜಿ ತಿಂಡಿ ಆಗಿದ್ರೆ ದೊಡ್ಡಪ್ಪಂಗೆ ಕೊಡು’ ಅಂತ ಕೂಗು ಹಾಕಿದಳು. ಇವಳು ಹೇಳುವುದನ್ನೇ ಕಾಯುತ್ತಿದ್ದ ಅಂಬುಜಮ್ಮ ಎರಡು ತಟ್ಟಿಗೆ ಉಪ್ಪಿಟ್ಟು ಹಾಕಿಕೊಂಡು ಹೇರಳೆಕಾಯಿ ಉಪ್ಪಿನ ಕಾಯಿಯನ್ನು ಸೈಡಿಗೆ ಹಾಕಿಕೊಂಡು ಬಂದರು.

‘ನೀಲಾ ಎದ್ದಿಲ್ವಾ ಇನ್ನೂ. ಅವಳು ಹೀಗೆ ಮಲಗಿದ್ರೆ ಹೇಗೆ? ನೀವಾದ್ರೂ ಹೇಳಿ ಮನೆಕಡೆ, ಮಗಳ ಕಡೆ ಗಮನ ಕೊಡೋಕೆ ಹೇಳಬಾರದೆ…’ ಅಂತ ಅಂಬುಜಮ್ಮನನ್ನು ಉದ್ದೇಶಿಸಿ ಹೇಳಿದರು.

‘ನನ್ನ ಮಾತು ಎಲ್ಲಿ ಕೇಳ್ತಾಳೆ. ಸದಾ ಕಣ್ಣೀರು ಹಾಕ್ತಾ ಇರ್ತಾಳೆ. ಊಟ, ತಿಂಡಿ ಬಲವಂತವಾಗಿ ತಿನ್ನಿಸಬೇಕು- ದಿನ ಕಳೆದಂತೆ ಆವಳೇ ಸರಿಹೋಗ್ತಾಳೆ ಅಂತ ಸುಮ್ಮನಿದ್ದೇನೆ’ ಅಂದರು.

ತಿಂಡಿ ತಿಂದು ‘ನಾನು ಬಂದಿದ್ದೆ ಅಂತ ನೀಲಾಗೆ ಹೇಳಿಬಿಡಿ.’ ‘ಇಳಾ ಬರ್ತೀನಿ ಕಣಮ್ಮ. ನೀನಾದ್ರೂ ಧೈರ್ಯ ತಂದುಕೊಂಡು ಓಡಾಡ್ತಿಯಲ್ಲ ಬಿಡು. ಅಮ್ಮಂಗೂ ಮೋಹನನ ನೆನಪಿನಿಂದ ಹೊರ ಬರೋಕೆ ಏನಾದ್ರೂ ಮಾಡ್ತಾ ಇರು, ಬರ್‍ಲಾ.’

ಕಾರು ಹತ್ತಿ ಹೊರಟವರನ್ನೇ ಕಣ್ತುಂಬಿ ನೋಡುತ್ತಿದ್ದ ಇಳಾಗೆ ಕಂಬನಿ ಉಕ್ಕಿ ಬಂತು. ಅಪ್ಪನ ನೆನಪಾಗಿ ಅತ್ತುಬಿಡಬೇಕೆನಿಸಿದರೂ ಅಳಬಾರದು. ಅಳಬಾರದು ಅಂತ ಮನವನ್ನು ಕಲ್ಲು ಮಾಡಿಕೊಂಡಳು.

ಸ್ನಾನ ಮಾಡಿಕೊಂಡು ‘ಅಜ್ಜಿ ನಾನು ಮೈಸೂರಿಗೆ ಹೋಗಿ ಬರ್ತೀನಿ ಬಟ್ಟೆ, ಲಗೇಜ್, ಪುಸ್ತಕ ಎಲ್ಲಾ ಹಾಸ್ಪಲಿನಲ್ಲಿಯೇ ಉಳಿದಿದೆ. ಒಂದು ದಿನ ಇದ್ದು ಎಲ್ಲವನ್ನೆಲ್ಲ ತೆಗೆದುಕೊಂಡು ಬಂದುಬಿಡುತ್ತೇನೆ. ಮತ್ತೆ ಅಲ್ಲಿಗೆ ಹೋಗುವುದಿಲ್ಲವಲ್ಲ’ ಅಂತ ತಿಳಿಸಿ ಹೊರಟಳು. ಅಮ್ಮಂಗೆ ಹೇಳಿ ಹೋಗು ಅಂದಾಗ ನೀನೇ ಹೇಳಿಬಿಡು ಅಜ್ಜಿ ಎನ್ನುತ್ತ ಹೊರಟೇಬಿಟ್ಟಾಗ ಅಂಬುಜಮ್ಮನಿಗೆ ಇಳಾ ಯಾಕೋ ಅಮ್ಮನ ಜೊತೆ ಮೊದಲಿನಂತಿಲ್ಲ. ಅವಳನ್ನು ನೇರವಾಗಿ ಮಾತನಾಡಿಸಿಲ್ಲ. ಮುಖ ಕೊಟ್ಟು ನೋಡಿಲ್ಲ ಅನ್ನಿಸಿ ಇದು ನಿಜಾನೋ ಅಥವಾ ನಂಗೆ ಹಾಗೆ ಅನ್ನಿಸುತ್ತ ಇದೆಯೋ ಅಂತ ದ್ವಂದ್ವಕ್ಕೆ ಒಳಗಾದರು.

ನೀಲಾಗೆ ವಿಷಯ ತಿಳಿಸಿದಾಗ ತಿಂಡಿ ತಿನ್ನುತ್ತಿದ್ದವಳು ಹಾಗೇ ನಿಲ್ಲಿಸಿಬಿಟ್ಟಳು. ‘ಮೈಸೂರಿಗೆ ಹೋದ್ಲ’ ಆ ಧ್ವನಿಯಲ್ಲಿ ನಂಗೆ ಹೇಳದೆ ಹೋದಳಾ ಅನ್ನೋ ಆಶ್ಚರ್ಯ ತುಂಬಿತ್ತು.

ತಕ್ಷಣವೇ ಅಂಬುಜಮ್ಮ ‘ನೀನು ಮಲಗಿದ್ದೆಯಲ್ಲಾ ಏಳಿಸೋದು ಬೇಡಾ ಅಂದ್ಕೊಂಡು ‘ಎದ್ದಮೇಲೆ ಹೇಳಿ’ ಅಂತ ಹೇಳಿ ಹೋದಳು. ನಾಳೆ ಬಂದು ಬಿಡ್ತಾಳಂತೆ. ಬಟ್ಟೆ, ಪುಸ್ತಕ ಎಲ್ಲಾ ಅಲ್ಲೇ ಇದೆಯಂತಲ್ಲ ತರೋಕೆ ಹೋಗಿದ್ದಾಳಂತೆ. ನೀನು ತಿಂಡಿ ತಿನ್ನು’ ಎಂದರು.

ಯಾಕೋ ಮನಸ್ಸಿಗೆ ಪಿಚ್ಚೆನಿಸಿತು. ಇಳಾ ನನ್ನ ಒಂದು ಮಾತೂ ಕೇಳದೆ ಮೈಸೂರಿನಿಂದ ಎಲ್ಲವನ್ನೂ ವಾಪಸ್ಸು ತರೋಕೆ ಹೋಗಿದ್ದಾಳೆ. ನಾಳೆ ಬಗ್ಗೆ ಏನು ನಿರ್ಧಾರ ಮಾಡಿದ್ದಾಳೆ. ಎಲ್ಲಾ ವಾಪಸ್ಸು ತಂದು ಹಾಸ್ಟಲ್ ಬಿಡ್ತೀನಿ ಅಂದ್ರೆ ಮತ್ತೆ ಅಲ್ಲಿಗೆ ಹೋಗುವುದಿಲ್ಲ ಅಂತ ತಾನೇ. ಅಂದ್ರೇ ಎಲ್ಲವನ್ನೂ ಅವಳೇ ತೀರ್ಮಾನಿಸುವಷ್ಟು, ದೊಡ್ಡವಳಾಗಿಬಿಟ್ಟಳೇ. ಮುಂದೆ ಓದುವುದರ ಬಗ್ಗೆ ಯಾವ ನಿರ್ಧಾರ ತಗೊಂಡಿದ್ದಾಳೆ. ನಾವಿರೋ ಸ್ಥಿತೀಲಿ ಡಾಕ್ಟರ್ ಓದೋಕೆ ಆಗದೆ ಇದ್ದರೂ, ಡಿಗ್ರಿನಾದ್ರೂ ಮಾಡಿಸೋ ಅಷ್ಟು ಶಕ್ತಿ ಇಲ್ವಾ ನಂಗೆ. ಅಲ್ಲೇ ಇದ್ದು ಮತ್ತೆ ಪರೀಕ್ಷೆ ಕಟ್ಕೊಂಡು ಓದಬಹುದಿತ್ತು- ಯಾವುದಾದರೂ ಕೋರ್ಸ್ ಮಾಡಬಹುದಿತ್ತು. ಮುಂದಿನ ವರ್ಷ ಡಿಗ್ರಿಗೆ ಸೇರಿ ಎಂ.ಎಸ್ಸಿ., ಮಾಡಿಕೊಂಡ್ರೆ, ಲೆಕ್ಚರರ್ ಆಗಿ ತನ್ನ ಕಾಲ ಮೇಲೆ ತಾನು ನಿಂತ್ಕೋಬಹುದಿತ್ತು. ಯಾರನ್ನೂ ಕೇಳದೆ ಯಾಕೆ ಇಳಾ ಎಲ್ಲಾ ತಗೊಂಡು ವಾಪನ್ನು ಬರ್ತಾ ಇದ್ದಾಳೆ. ತಿಂಡಿ ಗಂಟಲಲ್ಲಿ ಇಳಿಯಲಿಲ್ಲ.

ಮೋಹನ್ ಇದ್ದಿದ್ದರೆ! ಈ ವೇಳೆಗೆ ಇಳಾ ಪರೀಕ್ಷೆ ಮುಗಿಸಿಕೊಂಡು ಬಂದಿದ್ದು, ಮುಂದಿನ ಓದಿಗಾಗಿ ಯಾವ ಮೆಡಿಕಲ್ ಕಾಲೇಜು ಚೆನ್ನಾಗಿದೆ ಅಂತ ಚರ್ಚೆ ನಡೀತಿರುತ್ತಿತ್ತು. ಇನ್ನೈದು ವರುಷದಲ್ಲಿ ಡಾ.ಇಳಾ ಆಗಿಬಿಡುತ್ತಿದ್ದಳು. ಅವಳ ಹಣೆಯಲ್ಲಿ ಹೀಗೆಲ್ಲ ಬರೆದಿರುವಾಗ ಡಾಕ್ಟರ್ ಆಗೋಕೆ ಸಾಧ್ಯಾನಾ? ನನ್ನ ಮಗಳಾಗಿ ಹುಟ್ಟಿದ್ದ ಅವಳ ತಪ್ಪು. ಎಷ್ಟೊಂದು ಬುದ್ಧಿವಂತೆ. ಎಷ್ಟೊಂದು ಶ್ರಮಪಟ್ಟಿದ್ದಳು. ಎಲ್ಲವನ್ನು ಮೋಹನ್ ವ್ಯರ್ಥ ಮಾಡಿಬಿಟ್ರು. ಕೋಪ, ಅಸಹಾಯಕತೆ, ನಿರಾಶೆ, ನೋವು ಎಲ್ಲವೂ ಒಮ್ಮೆಲೇ ಕಾಡಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಏನಾಗಿ ಹೋಯ್ತು ತನ್ನ ಬದುಕು, ಇರುವ ಒಬ್ಬಳೇ ಮಗಳು. ಡಾಕ್ಟರಾಗಲೆಂದೇ ಹುಟ್ಟಿದವಳು. ಇಂದು ಪಿಯುಸಿ.ಗೆ ವಿದ್ಯಾಭ್ಯಾಸ ನಿಲ್ಲಿಸುವಂತಹ ಪರಿಸ್ಥಿತಿ. ಮೋಹನ್ ನಿಮ್ಗೆ ಇದು ಗೊತ್ತಿರಲಿಲ್ಲವೇ. ಈ ಆಸ್ತಿನೆಲ್ಲ ಮಾರಿಯಾದ್ರೂ ಅವಳ್ನ ಓದಿಸಿ ನಾವು ಹೇಗೋ ಬದುಕಬಹುದಿತ್ತು. ನಿಮ್ಮ ದುಡುಕುತನ ನಿಮ್ಮ ಮಗಳ ಬದುಕನ್ನು ಸರ್ವನಾಶ ಮಾಡಿಬಿಡ್ತಲ್ಲ. ನಿಮ್ಮನ್ನ ನಾನು ಕ್ಷಮಿಸಲ್ಲ. ಈ ಜನ್ಮದಲ್ಲಿ ಕ್ಷಮಿಸಲ್ಲ. ಕಣ್ಣೀರಿನಿಂದ ದಿಂಬನ್ನು ತೋಯಿಸುತ್ತ ಬಡಬಡಿಸುತ್ತಲೇ ಇದ್ದಳು.

ಅಂಬುಜಮ್ಮ ಒಳಬಂದವರು ತಿಂಡಿಯನ್ನು ತಿನ್ನದೆ ನೀಲಾ ಅಳುತ್ತ ಮಲಗಿರುವುದನ್ನು ನೋಡಿ ರೇಗಿದರು. ‘ನೀಲಾ ಎದ್ದೇಳು ಮೇಲೆ, ಮೋಹನ ಅಂತೂ ಹೋಗಿ ಅಯ್ತು. ಈಗ ನೀನು ಹೀಗೆ ಅತ್ತು ಊಟ, ತಿಂಡಿ ಬಿಟ್ಟು ಇಳಾನ ತಬ್ಬಲಿ ಮಾಡಬೇಕೂ ಅಂತ ಇದ್ದೀಯಾ? ಇವತ್ತಿನಿಂದ ತೋಟಕ್ಕೆ ಜನ ಬರ್ತಾರಂತೆ. ಬೆಳಿಗ್ಗೆ ನಿಮ್ಮ ಭಾವ ಬಂದು ಹೇಳಿ ಹೋದರು. ಸಾಯುವವರು ಸತ್ರು. ಇರೋರು ಬದುಕಬೇಕಲ್ಲ. ಎದ್ದು ಸ್ನಾನ ಮಾಡಿ ಸೀರೆ ಉಟ್ಕೊಂಡು ತೋಟಾನ ಒಂದು ಸಲ ಸುತ್ತಿ ಬಾ. ಏನು ಕೆಲ್ಸ ಮಾಡಿಸಬೇಕು ಅಂತ ಒಂದು ಸಲ ಅವರಿಗೆ ಹೇಳು. ಮನೆ ರಥ ನಡೆಯಬೇಡವಾ, ಎದ್ದೇಳು ಈಗ ಈ ಮನೆಗೆ ನೀನು ಗಂಡಸು ಆಗಬೇಕು. ಮೋಹನನ ಸ್ಥಾನದಲ್ಲಿ ನಿಂತು ಸಂಸಾರ ನಡೆಸಬೇಕು. ಸಾಕು, ಕೋಣೆ ಒಳಗೆ ಕೂತಿದ್ದು ಕಟುವಾಗಿಯೇ ನುಡಿದು ಬಲವಂತವಾಗಿ ಎಬ್ಬಿಸಿ ಬಚ್ಚಲ ಮನೆಗೆ ಕರೆತಂದರು.

ಸ್ನಾನ ಮಾಡಿ ಹೊರ ಬಂದು ನೀಲಾ ಒಂದಿಷ್ಟು ಸಮಾಧಾನ ಹೊಂದಿದಂತೆ ಕಂಡರೂ ದುಃಖದ ಛಾಯೆ ಏನೂ ಕಡಿಮೆ ಆಗಿರಲಿಲ್ಲ. ಯಾಂತ್ರಿಕವಾಗಿ ಸೀರೆ ಉಟ್ಟು ಹೊರಬಂದಳು. ಸೂರ್ಯನ ಕಿರಣ ಕಣ್ಣಿಗೆ ಚುಚ್ಚಿದಂತಾಗಿ ಕಣ್ಣುಬಿಡಲೇ ಪ್ರಯಾಸಪಟ್ಟಳು. ಈ ರೀತಿಯ ಬೆಳಕು ಕಂಡು ಒಂದು ತಿಂಗಳ ಮೇಲಾಗಿತ್ತಲ್ಲ! ಬದುಕಿನಾ ಬೆಳಕೆ ಮರೆಯಾಗಿ ಹೋಯ್ತಲ್ಲ. ಇನ್ನೆಲ್ಲ ಕತ್ತಲು… ಕಾರ್ಗತ್ತಲ ಬದುಕು… ಕಾಲು ಯಾಂತ್ರಿಕವಾಗಿ ತೋಟಕ್ಕೆ ಕರೆದೊಯ್ದವು. ಆಳುಗಳೆಲ್ಲಾ ಗುಂಪಾಗಿ ಕುಳಿತು ಮಾತಾಡಿಕೊಳ್ಳುತ್ತಿದ್ದವರು ನೀಲಾಳನ್ನು ಕಂಡೊಡನೆ ಗಡಬಡಿಸಿ ಎದ್ದು ನಿಂತರು. ಈ ಸಮಯದಲ್ಲಿ ಅವಳನ್ನು ಇಲ್ಲಿ ನಿರೀಕ್ಷಿಸಿರದ ಅವರಿಗೆ ಗೊಂದಲವುಂಟಾಗಿ ಪೆಚ್ಚಾಗಿ ಅವಳನ್ನು ನೋಡುತ್ತ ನಿಂತುಬಿಟ್ಟರು. ಅವರ ಬಳಿ ಬಂದ ನೀಲಾ ‘ಏನು ಕೆಲಸ ಮಾಡ್ತೀರಿ’, ಎಷ್ಟು ಜನ ಬಂದಿದ್ದೀರಿ. ಇವತ್ತು ಧೂಳ ಅಗತೆ ಮಾಡ್ತೀರಾ, ಮಳೆ ಬಂದಿದೆ. ಹೂವಾಗುತ್ತೆ… ಇನ್ನು ಧೂಳು ಅಗತೆ ಮುಗಿಸಿ, ಆಮೇಲೆ ಮರಗಸಿ ಮಾಡಿ, ನಿಮ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. ನಾಳೆ ನಿಮ್ಮ ಜೊತೆ ಇನ್ನೊಂದಿಷ್ಟು ಜನಾನ ಕರ್ಕೊಂಡು ಬನ್ನಿ, ಬೇಗ ಕೆಲಸ ಮುಗಿಸಬಹುದು’ ಎಂದು ಹೇಳಿದಳು. ಆ ದನಿಯಲ್ಲಿ ಜೀವವೇ ಇರಲಿಲ್ಲ. ಹೇಳಬೇಕಲ್ಲ ಅಂತ ಹೇಳ್ತಾ ಇರೋದು ಸ್ಪಷ್ಟವಾಗಿ ಕಾಣಿಸಿತು. ಅವರುಗಳು ಒಂದೂ ಮಾತಾಡದೆ ಸುಮ್ಮನೆ ತಲೆಯಾಡಿಸಿದರು. ಸೋತ ಹೆಜ್ಜೆ ಇರಿಸುತ್ತ ಹೋಗುತ್ತಿದ್ದ ನೀಲಾಳನ್ನು ನೋಡುತ್ತಿದ್ದ ಆಳುಗಳು ‘ಪಾಪ, ಅಮ್ಮಾವರಿಗೆ ಈ ಗತಿ ಬರಬಾರದಾಗಿತ್ತು. ನೆನ್ನೆ ಮೊನ್ನೆ ಲಗ್ನ ಆಗಿ ಬಂದಂಗೈತೆ, ಹಸೆಮಣೆ ಮೇಲೆ ಕೂರಿಸಬಹುದು ಅಂಗಿದಾರೆ. ಮೋಹನಯ್ನೋರು ತಪ್ಪು ಮಾಡಿಬಿಟ್ರು. ಇಂಥ ಚಂದದ ಹೆಣ್ಣು. ಗೊಂಬೆ ಮಗಳನ್ನು ಬಿಟ್ಟೋಗೋಕೆ ಅದೆಂಗೆ ಮನಸ್ಸು ಮಾಡಿದ್ರೋ’ ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಭೈರಪ್ಪ ‘ನೋಡ್ರಪ್ಪ ಈ ತೋಟದ ಕೆಲ್ಸ ಏನೇನು ಆಗಬೇಕೂ ಅದನ್ನು ನಾವೇ ಮುಂದೆ ನಿಂತು ಮಾಡೋಣ. ಅಮ್ಮಾವ್ರಿಗೂ ಏನೂ ಗೊತ್ತಾಗಲ್ಲ. ಆ ಮಗೀಗೂ ಏನೂ ಗೊತ್ತಾಗೊಲ್ಲ. ನಮ್ಮ ತೋಟ ಇದು ಅಂತ ಕೆಲ್ಸ ಮಾಡೋಣ. ಕೂಲಿ ಎಷ್ಟು ಕೊಡ್ತಾರೋ ಕೊಡ್ಲಿ. ಕೊಡೋಕೆ ಆಗದೆ ಇದ್ರೆ ಬಿಡ್ಲಿ. ನಾವು ದಿನಾ ಇಲ್ಲಿ ಅರ್ಧ ದಿನ ಕೆಲಸ ಮಾಡಿ, ಇನ್ನರ್ಧ ದಿನ ಬೇರೆ ಕಡೆ ಮಾಡೋಣ. ಈ ವರುಷ ಸ್ವಲ್ಪ ಅವರಿಗೆ ಸಹಾಯ ಮಾಡೋಣ’ ಅಂತ ಹೇಳಿದಾಗ ಇತರರೂ ಅದಕ್ಕೆ ಒಪ್ಪಿಕೊಂಡರು.

ಅವರಿಗೆಲ್ಲಾ ಗೊತ್ತಿತ್ತು. ಹಣಕಾಸಿನ ಸಮಸ್ಯೆಯಿಂದಾಗಿಯೇ ಮೋಹನ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಮನೆ ಪರಿಸ್ಥಿತಿ ಸ್ವಲ್ಪವೂ ಸರಿ ಇಲ್ಲ ಅಂತ ಗೊತ್ತಾಗಿಯೇ ಅವರೆಲ್ಲ ಭೈರಪ್ಪ ಹೇಳಿದ್ದಕ್ಕೆ ಒಪ್ಪಿಕೊಂಡಿದ್ದು. ಮೋಹನ ಬದುಕಿರುವಾಗ ಆಳುಗಳನ್ನು ಆಳುಗಳಂತೆ ಕಾಣುತ್ತಿರಲೇ ಇಲ್ಲ. ಅವರೊಂದಿಗೆ ತಾನೂ ಕೆಲಸಕ್ಕೆ ಇಳಿದುಬಿಡುತ್ತಿದ್ದ. ಹಾಸ್ಯ ಪ್ರವೃತ್ತಿಯವನಾದ ಮೋಹನ ಸದಾ ಏನಾದರೂ ಹೇಳುತ್ತ, ನಗಿಸುತ್ತ ಆಳುಗಳೊಂದಿಗೆ ಬೆರೆತು ಹೋಗಿ ಅವರಾರಿಗೂ ಮೋಹನ ತೋಟದ ಯಜಮಾನ ಅಂತ ಅನ್ನಿಸುತ್ತಿರಲೇ ಇಲ್ಲ. ಕಷ್ಟಸುಖ ಅಂದರೆ ಮನೆಯವನಂತೆ ಸ್ಪಂದಿಸುತ್ತಿದ್ದ. ಹಣಕಾಸಿನ ವಿಚಾರದಲ್ಲಿ ಧಾರಾಳವಾಗಿ ನೆರವಾಗುತ್ತಿದ್ದ. ಮದುವೆ, ಮುಂಜಿ, ಸಾವು- ನೋವುಗಳಲ್ಲಿ ಮನೆಯವನಂತೆ ನಿಂತು ಕೆಲಸ ನಿರ್ವಹಿಸುತ್ತಿದ್ದ. ಈ ಸರಳ ನಡೆನುಡಿಯೇ ಎಲ್ಲರಲ್ಲೂ ಮೋಹನ್ ಬಗ್ಗೆ ಅಭಿಮಾನ ಮೂಡಿಸಿ ತಮ್ಮವರಲ್ಲಿ ಒಬ್ಬ ಎಂದೇ ಭಾವಿಸಿಕೊಂಡಿದ್ದರು. ಮೋಹನ ಸತ್ತಾಗ ಸ್ವಂತ ಅಣ್ಣನನ್ನೋ, ತಮ್ಮನನ್ನೋ ಕಳೆದುಕೊಂಡಷ್ಟು ದುಃಖ ಅವರಿಗೂ ಆಗಿತ್ತು. ಈ ರೀತಿ ತಮ್ಮ ಕಷ್ಟಸುಖಗಳಲ್ಲಿ ನೆರವಾಗುವವರು ತಮ್ಮವರನ್ನು ತಬ್ಬಲಿ ಮಾಡಿಬಿಟ್ರಲ್ಲ ಅಂತ ಒಬ್ಬರನೊಬ್ಬರು ತಬ್ಬಿ ಅತ್ತು ಗೋಳಾಡಿದ್ದರು. ಹಾಗೆಂದೇ ಈಗ ಮೋಹನನ ತೋಟದಲ್ಲಿ ಕೂಲಿ ಇಲ್ಲದೆ ಕೆಲಸ ಮಾಡಲು ಸಿದ್ದರಾದರು.

ಕಾಫಿ ಮಾಡ್ಕೊಂಡು ಫ್ಲಾಸ್ಕಿನಲ್ಲಿ ಹಾಕಿಕೊಂಡು ಇವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದ ಅಂಬುಜಮ್ಮ ‘ಬನ್ನೀಪ್ಪ ಕಾಫಿ ಕುಡೀರಿ’ ಅಂತ ಕರೆದರು. ಮೋಹನ ಇದ್ದಾಗ ಇದೇ ಸಮಯಕ್ಕೆ ನೀಲಾ ಹೀಗೇ ಕಾಫಿ ತರುತ್ತಿದ್ದದ್ದು. ತಾನೊಬ್ಬನೇ ಕುಡಿಯದೆ ಎಲ್ಲರಿಗೂ ಕೊಟ್ಟು ಕುಡಿಯುತ್ತಿದ್ದದ್ದು ನೆನಪಾಗಿ ದುಃಖದಿಂದ ಭಾರವಾದರು. ‘ನೀವ್ಯಾಕೆ ತರೋಕೆ ಹೋದ್ರಿ ಅಮ್ಮಾವ್ರೆ, ಯಾವ ತೋಟದಲ್ಲೂ ಹೀಗೆ ಆಳುಗಳಿಗೆ ಕಾಫಿ ಕೊಡಲ್ಲ. ನಾಳೆಯಿಂದ ಇದ್ನೆಲ್ಲ ಹಚ್ಕೋಬೇಡಿ. ಮೋಹ್ನಪ್ಪನೋರು ಇದ್ದಾಗ ಅವರಿಗಾಗಿ ನೀಲಮ್ಮೋರೇ ತರೋರು. ಈಗ ನಮಗೋಸ್ಕರ ತರಬೇಡಿ ಅಮ್ಮೋರೇ. ಈ ವಯಸ್ಸಿನಲ್ಲಿ ನೀವು ಹೀಗೆ ತರಬೇಕಾ?’ ಭೈರಪ್ಪ ಸಂಕೋಚದಿಂದ ನುಡಿದ. ‘ಅಯ್ಯೋ ಬಿಡ್ರಪ್ಪ. ಇದೆಲ್ಲ ಕಷ್ಟಾನಾ. ನಂಗೂ ಅಡ್ಗೆ ಮಾಡಾಗಿತ್ತು.’ ಸುಮ್ನೆ ಕೂತ್ಕೊಂಡು ಏನು ಮಾಡ್ಲಿ. ತೋಟಾನಾದ್ರೂ ನೋಡೋಣ ಅಂತಾ ಬಂದೆ. ಕಾಫಿಪುಡಿ ಕೊಳ್ಳೋಹಾಗಿಲ್ಲ. ಹಾಲು ಕೊಳ್ಳೋ ಹಾಗಿಲ್ಲ ಮೊದಲಿಂದ್ಲೂ ಕಾಫಿ ಕೊಟ್ಟು ಅಭ್ಯಾಸ ಇಲ್ಲಿ. ಮೋಹನ ಇಲ್ಲಾ ಅಂತ ಯಾಕಪ್ಪ ತಪ್ಪಿಸಬೇಕು. ಮೇಲೆ ನೋಡ್ತಾ ಇರ್ತಾನೆ. ನೀವು ಕುಡೀರಿ. ನೀವು ಕುಡಿದು ತೃಪ್ತಿಪಟ್ಟರೆ ಅವನ ಆತ್ಮ ಸಂತೋಷ ಪಡುತ್ತೆ’ ಹೇಳುತ್ತ ಫ್ಲಾಸ್ಕಿನಿಂದ ಕಾಫಿ ಬಗ್ಗಿಸಿ ಕೊಡುತ್ತ ಅಲ್ಲೇ ಕುಳಿತರು.

‘ಅಜ್ಜಮ್ಮ, ನೀವು ಇರೋದ್ರಿಂದ ನೀಲಮ್ಮೋರಿಗೆ ಎಷ್ಟೋ ಆಸರೆ ಆಗೈತೆ. ನೀವೂ ಇಲ್ಲದೆ ಇದ್ದಿದ್ರೆ ಅವರ ಗತಿ ಏನಾಗಬೇಕಿತ್ತು. ಸಣ್ಣ ಮಗ ಅದು. ಅದನ್ನ ಕಟ್ಕೊಂಡು ನೀಲಮ್ಮ ಹೇಗೆ ಇರ್ತ ಇದ್ರೋ ಏನೋ. ನೀವೊಂದು ಬಲ ಇದ್ದಂಗೆ’ ಶೇಖರ ಹೇಳಿದ.

‘ನಾನು ತಾನೇ ಬೇರೆಯವಳಾ. ನಂಗೂ ಮಗನ ಜೊತೆ, ಸೊಸೆ ಜೊತೆ ಏಗಿ ಏಗಿ ಸಾಕಾಗಿತ್ತು. ನೀಲಾಳಿಗೆ ಒಂದು ಆಸರೆ. ನಂಗೂ ಒಂದು ಆಸರೆ. ಜೀವನ ಅಂದ್ರೆ ಇದೆ ಅಲ್ವಾ ಒಬ್ಬರಿಗೊಬ್ಬರು ಆಗೋದು. ಇಲ್ಲಿ ನಂಗೆ ಯಾವ ಕೊರತೆ ಇದೆ. ನಂದೇ ಕೈ…. ನಂದೇ ಯಜಮಾನಿಕೆ ಪಟ್ಟ ಸಿಕ್ಕಿಬಿಟ್ಟಿದೆ. ಈ ರೀತಿ ಆಗ ಬೇಕಾಗಿತ್ತಾ…’ ಮತ್ತೆ ಮೋಹನನ ಸಾವಿನತ್ತ ಹೊರಳಿದರು.

‘ಮೋನಪ್ಪರಿಗೆ ಅದೃಷ್ಟ ಇಲ್ಲಾ ಬಿಡ್ರಮ್ಮ, ಅವರ ಆಯಸ್ಸೇ ಅಷ್ಟಿತ್ತು ಅಂತ ಕಾಣುತ್ತೆ. ಹೋದೋರು ಹೋದ್ರು ಈಗ ಇರೋರು ಬದುಕಬೇಕಲ್ಲ. ಹೆಂಗೂ ನೀಲಮ್ಮನೋರ ಚೆನ್ನಾಗಿ ನೋಡಿಕೊಳ್ಳಿ. ಇಲ್ಲದೆ ಇದ್ರೆ ಇಳಾಮ್ಮೋರೋ ತಬ್ಬಲಿ ಆಗಿಬಿಡ್ತಾರೆ. ನೀವೇ ಅವರಿಗೆ ದಿಕ್ಕಾಗಬೇಕು ಈಗ’- ಸಮಾಧಾನಿಸಿದರು ಎಲ್ಲರೂ.

ಹೀಗೆ ಎಲ್ಲರೊಂದಿಗೆ ಮಾತನಾಡುತ್ತಲೇ ಅಂಬುಜಮ್ಮ ಸಮಯ ಕಳೆದರು. ಅವರು ಕೆಲಸ ಮುಗಿಸಿ ಹೊರಟು ನಿಂತರು. ನಾಳೆ ಬರುವುದಾಗಿ ಹೇಳಿದಾಗ ‘ಬೇಗ ಬಂದು ನಿಮ್ಮ ತೋಟ ಅಂತ ಕೆಲ್ಸ ಮಾಡ್ರಪ್ಪ, ನಮ್ಮ ನೀಲಂಗು ಏನೂ ಗೊತ್ತಾಗಲ್ಲ. ಅವರ ಭಾವ ಪ್ರತಿದಿನ ಇಲ್ಲಿಗೆ ಬರೋಕೆ ಆಗುತ್ತ. ನೀವೇ ಈ ತೋಟಾನ ಉಳಿಸಬೇಕು. ನೀವು ಮನಸ್ಸು ಮಾಡಿ ದುಡಿದ್ರೆ ಸಾಲ ತೀರಿಸಿ ಅವರು ಈ ಆಸ್ತೀನಾ ಉಳಿಸಿಕೊಳ್ಳಬಹುದು ಅಂತ ನಿವೇದಿಸಿಕೊಂಡರು.

‘ನೀವು ಹೇಳಬೇಕಾ ಅಮ್ಮೋರೇ. ಮೋಹನಪ್ಪ ನಮಗೆಲ್ಲ ಅಣ್ಣನಂಗೆ ಇದ್ರು, ಈಗ ಅವರಿಲ್ಲ ಅಂತ ಕೈ ಬಿಟ್ಟುಬಿಡ್ತೀವಾ? ಹೆದರಬೇಡಿ ಇದು ನಮ್ಮ ತೋಟ. ಇದನ್ನ ಚಿನ್ನ… ಚಿನ್ನ ಇಟ್ಕಂಡಂಗೆ ಇಟ್ಕೊತೀವಿ. ನೀವೇನು ಚಿಂತೆ ಮಾಡಬೇಡಿ. ಈ ಸಲ ಪಸಲು ಚೆನ್ನಾಗಿ ಬರೋಹಂಗೆ ಕೆಲ್ಸ ಮಾಡ್ತೀವಿ’ ಎಲ್ಲರೂ ಅಂಬುಜಮ್ಮನಿಗೆ ಧೈರ್ಯ ತುಂಬಿದರು. ಮೋಹನನ ಒಳ್ಳೆಯತನ ಅವನ ಹೆಂಡ್ತೀನಾ ಮಗಳನ್ನ ಕಾಪಾಡುತ್ತೆ ಅಂತ ಅಂದುಕೊಳ್ಳುತ್ತ ಪಾಪ ಈ ಜನ ಎಲ್ಲಾ ಒಳ್ಳೆಯವರು. ಮೋಹನನ ಮೇಲೆ ಅವರಿಗೆಲ್ಲ ಎಷ್ಟೊಂದು ಅಭಿಮಾನ. ಹೇಗೋ ಕಾಲ ತಳ್ಳಿದರೆ ಆಯ್ತ. ಆ ಮಗೂದು ಒಂದು ಮದ್ವೆ ಆಗಿ ಒಳ್ಳೆಮನೆ ಸೇರೋ ತನಕ ಈ ಆಸ್ತೀನೆಲ್ಲ ಜೋಪಾನ ಮಾಡಬೇಕು. ಆಮೇಲೆ ನೀಲಂದು ಹೇಗೋ ಆಗುತ್ತೆ ಅಂದುಕೊಳ್ಳುತ್ತಲೇ ಫ್ಲಾಸ್ಕ್ ಹಿಡಿದುಕೊಂಡು ಮನೆಗೆ ನಡೆದರು. ನೀಲನೊಂದಿಗೆ ಆಳುಗಳು ಆಡಿದ ಮಾತೆಲ್ಲವನ್ನ ಹೇಳಿಕೊಂಡು ಸಂತೋಷಿಸಿದರು. ‘ಇಷ್ಟೆಲ್ಲ ಇರುವಾಗ ನಂಗೆ ಏನು ಆತಂಕ ಇಲ್ಲಾ ಕಣೆ ನೀಲಾ. ತೋಟದ ಕೆಲ್ಸದ ಜವಾಬ್ದಾರಿನೆಲ್ಲ ಅವರೇ ಹೊತ್ತುಕೊಂಡಿದ್ದಾರೆ. ಮೋಹನನ ಕಂಡ್ರೆ ಅವರಿಗೆಲ್ಲ ತುಂಬಾ ಪ್ರೀತಿ ಕಣೆ’. ಅಂತಾ ದಿನವೆಲ್ಲ ಹೇಳ್ತಾನೇ ಇದ್ರು. ನೀಲಾ ಮಾತ್ರ ಮೌನ ಮುರಿಯಲೇ ಇಲ್ಲ.

ಊಟ ಮಾಡಿ ಮಲಗಿದ್ದ ನೀಲಾ ನಿದ್ರೆ ಬಾರದೆ ಹೊರಳಾಡಿ, “ದೊಡ್ಡಮ್ಮ, ಕೆಲ್ಸ ಹೇಗೆ ಮಾಡಿದ್ದಾರೋ ನೋಡಿಕೊಂಡು ಬರ್ತ್ತೀನಿ. ತೋಟಕ್ಕೆ ಹೋಗ್ತೀನಿ ನೀನು ಮಲಗಿರು” ಎಂದು ನೀಲಾ ಎದ್ದು ಹೊರಟಾಗ ‘ನಂಗೂ ನಿದ್ದೆ ಬರ್ತಾ ಇಲ್ಲಾ ಕಣೆ, ಒಬ್ಳೆ ತೋಟಕ್ಕೆ ಹೋಗಬೇಡ, ಇರು ನಾನೂ ಬತ್ತೀನಿ’ ಅಂತಾ ಅಂಬುಜಮ್ಮನೂ ಹೊರಟು ನಿಂತರು. ತೋಟದಲ್ಲಿ ಗಿಡಗಳ ಕೆಳಗಿದ್ದ ಒಣ ಎಲೆಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿದ್ದರು. ಈಗ ತೋಟ ಕಳೆ ಕಳೆಯಾಗಿ ಸ್ವಚ್ಛವಾಗಿ ಕಾಣುತ್ತಿತ್ತು. ‘ಪರವಾಗಿಲ್ಲ ಮನೆಯವರೊಬ್ಬರೂ ಜೊತೆಯಲ್ಲಿ ಇಲ್ಲದೆ ಇದ್ದರೂ ನೀಟಾಗಿ ಕೆಲಸ ಮುಗಿಸಿದ್ದಾರೆ ದೊಡ್ಡಮ್ಮ, ನಾಳೆ ಇಳಾ ಬರ್ತ್ತಾಳಲ್ಲ’- ನೀಲಾ ಕೇಳಿದಳು.

‘ಹ್ಹೂ ಕಣೆ. ನಾಳೇನೆ ಬರ್ತ್ತೀನಿ ಅಂದ್ಲು. ಈಗ ಕಾಲೇಜು ಇಲ್ಲ…. ಪರೀಕ್ಷೆನೂ ಇಲ್ಲ… ಅಲ್ಲೇನು ಮಾಡ್ತಾಳೆ ಇದ್ದುಕೊಂಡು…’ ‘ಅಲ್ಲಾ ದೊಡ್ಡಮ್ಮ, ನನ್ನ ಒಂದು ಮಾತು ಕೇಳಬೇಕು ಅಂತ ಅವಳಿಗೆ ಅನ್ನಿಸಲಿಲ್ಲವಾ?’

‘ಹಾಗಲ್ಲ ಕಣೆ, ಬೆಳಿಗ್ಗೇನೆ ನಾನು ನಿಂಗೆ ಹೇಳಲಿಲ್ಲವಾ, ನೀನು ಮಲಗಿದ್ದೆ. ಯಾಕೆ ಸುಮ್ನೆ ಏಳಿಸೋದು ಅಂತ ಅಂದುಕೊಂಡಿದ್ದಾಳೆ.’

‘ಇಲ್ಲಾ ದೊಡ್ಡಮ್ಮ, ಮೋಹನ ಸತ್ತಾಗಲಿಂದ ಅವಳು ನನ್ನ ಜೊತೆ ಮಾತಾಡ್ತ ಇಲ್ಲ. ನೋಡ್ತ ಇಲ್ಲ. ಮುಂಚಿನಂತೆ ಅಮ್ಮ ಅಂತ ನನ್ನ ಹತ್ರ ಬರ್ತ ಇಲ್ಲಾ. ನಾನೂ ನನ್ನದೇ ಲೋಕದಲ್ಲಿ ಇದ್ದುಬಿಟ್ಟೆ. ನನ್ನದೆ ದುಃಖದಲ್ಲಿ ಅವಳನ್ನು ಗಮನಿಸಲೇ ಇಲ್ಲ. ಅವಳಿಗಾಗಿರೋ ದುಃಖ ನಂಗೂ ಆಗಿದೆ. ನಾವಿಬ್ಬರೂ ಸಮಾನ ದುಃಖಿಗಳು. ಆದ್ರೆ ನಾನು ಅವಳ ಬಗ್ಗೆ ಆಲೋಚಿಸಲಿಲ್ಲ. ಅವಳಾದ್ರೂ ನನ್ನ ಬಗ್ಗೆ ಆಲೋಚಿಸಬೇಕಿತ್ತು ಅಲ್ವಾ, ದೊಡ್ಡಮ್ಮ’ ದೀರ್ಘವಾಗಿ ನುಡಿದಳು.

‘ನೀನು ಏನೇನೋ ಅಂದ್ಕೊಂಡು ಮತ್ತೆ ಮತ್ತೆ ಮನಸ್ಸನ್ನು ಕೆಡಿಸಿಕೊಳ್ಳಬೇಡ. ಅವಳು ಮುಂದೇನು ಅನ್ನೋ ಚಿಂತೆಯಲ್ಲಿ ಬೇರೆ ಕಡೆ ಗಮನ ಕೊಡ್ತಾ ಇಲ್ಲಾ ಅದನ್ನೆ ದೊಡ್ಡದು ಮಾಡಬೇಡ’ ಅಂತ ಗದರಿಸಿದರು ಅಂಬುಜಮ್ಮ.
*****