ಚೈತ್ರದ ಪಲ್ಲವಿ ಚಿಗುರಿತು

ಚೈತ್ರದ ಪಲ್ಲವಿ ಚಿಗುರಿತು

ಚಿತ್ರ: ಕ್ರಿಸ್ಟಿಯಾನಸ್ ಕುರ್‍ನಿಯ / ಪಿಕ್ಸಾಬೇ
ಚಿತ್ರ: ಕ್ರಿಸ್ಟಿಯಾನಸ್ ಕುರ್‍ನಿಯ / ಪಿಕ್ಸಾಬೇ

ಅವಳ ಪರಿಚಯವೇನೂ ಇತ್ತೀಚಿನದಲ್ಲ ನಾನು ಮೊಟ್ಟ ಮೊದಲು ಕೆಲಸಕ್ಕೆ ಸೇರಿದ್ದೆ. ಅವಳಿದ್ದ ಆಫೀಸಿನಲ್ಲಿ ನಾನು ಕೆಲಸಕ್ಕೆ ಜಾಯಿನ್ ಆಗಿ ಹದಿನೈದು ದಿನವಾಗಿತ್ತೇನೋ, ಅಷ್ಟರಲ್ಲಿ ಬೆಂಗಳೂರಿಗೆ ವರ್ಗವಾಗಿತ್ತು. ಅವಳಿಗೆ ಅಲ್ಲಿಗೇ ವರ್ಗ ಆಗುತ್ತೆ ಅಂತ ಗೊತ್ತಿತ್ತೇನೋ ಕಂಗೆಟ್ಟು ಹೋಗಿದ್ದಳು, ಕ್ಯಾನ್ಸಲ್ ಮಾಡಿಸೋಕೂ ಕೂಡ ಆಗದೆ ಬೆಂಗಳೂರಿಗೆ ಹೊರಟು ಹೋಗಿದ್ದಳು. ಅವಳ ಗಂಡ, ಸಂಸಾರ ಎಲ್ಲಾ ಇಲ್ಲಿಯೇ ಸ್ವಂತ ಊರು ಮನೆ ಆಸ್ತಿ ಪಾಸ್ತಿ ಒಟ್ಟು ಸಂಸಾರವನ್ನು ಅಲ್ಲಿಗೆ ಶಿಫ್ಟ್ ಮಾಡೋಕಾಗದೆ ಪ್ರತಿನಿತ್ಯ ಪ್ರಯಾಣಿಸುತ್ತಿದ್ದಳು.

ನನ್ನ ಹಣೆಬರಹವೂ ಅದೇ ಆಗಿತ್ತು. ಫ್ಯಾಕ್ಟರಿಯಲ್ಲಿದ್ದ ಇವರಿಗೆ ಟ್ರಾನ್ಸ್‌ಫರ್‌ ಇರಲಿಲ್ಲ. ಸಣ್ಣ ಮಗುನ ಬಿಟ್ಟು ನಾನು ಬೇರೆ ಮನೆ ಮಾಡೋ ಹಾಗಿರಲಿಲ್ಲ. ಮಗು ನೋಡ್ಕೊಳ್ಳೋಕೆ ಅತ್ತೆ ಇದ್ದರು. ಎರಡೆರಡು ಮನೆ ಮಾಡಿ ನಿಭಾಯಿಸೋ ಶಕ್ತಿ ಮೊದ್ಲೇ ಇರಲಿಲ್ಲ. ಹಾಗಾಗಿ ನಾನೂ ನಿತ್ಯ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತಿದ್ದೆ ಈ ನಿತ್ಯದ ಓಡಾಟದಲ್ಲಿ ಹೆಚ್ಚು ಕಡಿಮೆ ನಾನು ಕಳೆದೇ ಹೋಗಿಬಿಟ್ಟಿದ್ದೆ. ಮಗ ಏಳೋಕೆ ಮುಂಚೆ ಮನೆ ಬಿಟ್ರೆ ಅವನು ಮಲಗಿದ ಮೇಲೆ ಮನೆ ಸೇರ್ತಾ ಇದ್ದೆ. ಪ್ರಯಾಣದ ಆಯಾಸದ ಜೊತೆ ಕೆಲಸದ ಒತ್ತಡವೂ ಸೇರಿ ನನ್ನನ್ನು ಹಣ್ಣು ಮಾಡುತ್ತಿತ್ತು. ಯಾವಾಗ ಇಲ್ಲಿಗೆ ವರ್ಗ ಆಗುತ್ತೋ ಅಂತ ಹಗಲಿರುಳು ಪರಿತಪಿಸುತ್ತ ಇದ್ದೆ. ಸಾಮಾನ್ಯ ವರ್ಗಾವಣೆ ಅಂತೂ ಸಾಧ್ಯ ಇರಲಿಲ್ಲ. ಆಗಲೇ ಮ್ಯೂಚಿಯಲ್ಗಾಗಿ ಯಾಕೆ ಟ್ರೈ ಮಾಡಬಾರದು ಅಂತ ಸಹೋದ್ಯೋಗಿಗಳು ಸೂಚಿಸಿದಾಗ ಅವಳ ನೆನಪಾಯಿತು.

ನನ್ನ ಹಾಗೆ ಪರಿತಪಿಸುತ್ತ ಇರೋ ಅವಳು ಖಂಡಿತಾ ಒಪ್ತಾಳೇ ಅಂತ ನೂರಾರು ನಿರೀಕ್ಷೆ. ಆಸೆ ಇಟ್ಟುಕೊಂಡು ಭೇಟಿ ಮಾಡಿದೆ. ಛೇ ಹೇಗೆ ಮುಖಕ್ಕೆ ಹೂಡೆದ ಹಾಗೆ ಪರಿಚಯವೇ ಇಲ್ಲದಂತೆ ಮ್ಯೂಚಿಯಲ್ ಕೊಡಲ್ಲ ಅಂದು ಬಿಟ್ಟಳಲ್ಲ. ಕಣ್ಣಲ್ಲಿ ನೀರು ಬರುವಂತಾಗಿತ್ತು ಆ ಒರಟುತನಕ್ಕೆ.

ಆದರೂ ಸಾವರಿಸಿಕೊಂಡು “ಇಲ್ಲಿಗೆ ಫ್ಯಾಮಿಲಿ ಶಿಫ್ಟ್ ಮಾಡ್ತಿದಿರಾ” ಅಂತಾ ಕೇಳಿದರೆ ನಿಮಗ್ಯಾಕೆ ಅವೆಲ್ಲಾ ಎನ್ನುವಂತೆ ನೋಡಿ “ಇಲ್ಲಾ” ಎಂದು ಎದ್ದೆ ಬಿಟ್ಟಳು.

ಇವಳಿಗೇನು ಹುಚ್ಚೇ ಎನಿಸಿತು. ನಾನು ಪಡ್ತ ಇರೋ ಕಷ್ಟವೇ ಅವಳಿಗೂ, ಆದರೂ ಸಿಕ್ಕಿದ ಅವಕಾಶನ ದೂರ ಮಾಡ್ತಾ ಇದ್ದಾಳೆ. ಅಂದ್ರೆ ಅವಳ ಬಗ್ಗೆ ಒಳ್ಳೆ ಅಭಿಪ್ರಾಯವೇ ಬರಲಿಲ್ಲ. ಮನದಲ್ಲಿ ಅನುಮಾನ ಇಣುಕಿ ಹಾಕಿತು. ಅಂದುಕೊಂಡಿದ್ದು ಆಗಲಿಲ್ಲವಲ್ಲ ಅನ್ನೋ ಚಿಂತೆ ಜೊತೆಗೆ ಆಕೆಯಿಂದಾದ ಅವಮಾನ ಒಂದೆಡೆ ಸೇರಿ ಆಕೆಯನ್ನು ದ್ವೇಷಿಸುವಂತೆ ಮಾಡಿತು. ಮತ್ಯಾವತ್ತೂ ಆಕೆಯನ್ನು ಭೇಟಿ ಮಾಡಲೇಬಾರದು ಅಂದುಕೊಂಡು ಹೊರಟು ಬಂದುಬಿಟ್ಟೆ.

ಆಫೀಸಿನಲ್ಲಿ ಸಹೋದ್ಯೋಗಿಗಳೊಂದಿಗೆ ಎಲ್ಲವನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿರುವಾಗಲೇ ನನ್ನ ಅನುಮಾನ ನಿಜಾ ಅಂತ ಗೂತ್ತಾಯ್ತು. ನೋಡೋಕೆ ಸುಂದರಿಯಾಗಿರುವ ಆಕೆಗೆ ಬೆಂಗಳೂರು ಬಿಡಲಾರದಂತಹ ಆಕರ್ಷಣೆ ಅಲ್ಲಿ ಇದೆ ಅಂತಾ ನೇರವಾಗಿ ಗೊತ್ತಾದ ಮೇಲಂತೂ ಆಕೆ ಬಗ್ಗೆ ತಿರಸ್ಕಾರ ಉಂಟಾಯಿತು. ಥೂ ಏನು ಜನರೋ ಇಂತವರಿಂದಲೇ ಕೆಲಸಕ್ಕೆ ಬರೋ ಹೆಣ್ಣುಗಳ ಬಗ್ಗೆ ಕೆಟ್ಟ ಹೆಸರು ಬೈಯ್ದುಕೊಳ್ಳುತ್ತಲೇ ಅವಳನ್ನು ಮರೆತೇ ಬಿಟ್ಟಿದ್ದೆ.

ಒಂದು ವರ್ಷ ಕಳೆದಿತ್ತು ನಂಗೆ ಪ್ರಮೊಷನ್ ಸಿಕ್ಕಿ ಬೆಂಗಳೂರಿಗೆ ವರ್ಗವಾಗಿತ್ತು. ಒಂದೇ ಆಫೀಸ್, ಒಂದೇ ಕಡೆ ಕೆಲಸ ಆದ್ರೂ ಅವಳನ್ನು ನಾನು ಮಾತಾಡಿಸುತ್ತ ಇರಲಿಲ್ಲ. ಮೇಲೆ ಬಿದ್ದು ಅವಳೂ ಬರಲಿಲ್ಲ. ಒಂದೆರಡು ತಿಂಗಳು ಹೀಗೆ ಇದ್ವಿ. ಆದ್ರೆ ಮಾತನಾಡಿಸಲೇ ಬೇಕಾದ ಸಂದರ್ಭ ಬಂದೇ ಬಿಡ್ತು. ಇಬ್ಬರಿಗೂ ಧಾರವಾಡದಲ್ಲಿ ಟ್ರೈನಿಂಗ್‌ಗೆ ಹಾಕಿದ್ದರು. ನನಗಂತು ತುಂಬಾ ಬೇಜಾರಾಗಿತ್ತು. ಹೋಗಿ ಹೋಗಿ ಅವಳ ಜೊತೆ ಟ್ರೈನಿಂಗ್ ಅವಳ ಕಂಡ್ರೆ ಆಗ್ತಾ ಇರಲಿಲ್ಲ. ಅವಳ ನಡೆ ನುಡಿ ಡ್ರೆಸ್ ಇದ್ಯಾವುದೂ ನಂಗೆ ಹಿಡಿಸ್ತಾ ಇರಲಿಲ್ಲ. ತುಟಿಗೆ ರಂಗು ಬಳಿದುಕೊಂಡು, ದಿನಕ್ಕೊಂದು ತರಹ ಒಡವೆ, ಸೀರೆ ಉಟ್ಕೊಂಡು, ಜೀವನ ಇರೋದೇ ಮೋಜು ಮಾಡಲು ಎನ್ನುವಂತಿದ್ದ ಆಕೆ ಜೊತೆ ಸಾಲಸೋಲ ಮಾಡಿ ಮನೆ ಕಟ್ಕೊಂಡು ಸಾಲ ತೀರಿಸೋಕೆ ಕಷ್ಟ ಪಡ್ತಾ ಜೀವನ ಇರೋದೆ ಕಷ್ಟ ಪಡೋಕೆ ಅನ್ನೋ ಬದುಕು ನನ್ನದು ಅತ್ತೇ ಗಂಡ ಒಳ್ಳೆಯವರೇ ಆದರೂ ಸಂಸಾರದ ತಾಪತ್ರಯಗಳಿಂದ ಖರ್ಚು ವೆಚ್ಚಗಳಿಂದ ರೋಸಿಹೋಗಿದ್ದ ನನಗೆ ಒಮ್ಮೊಮ್ಮೆ ಅವಳ ಬಗ್ಗೆ ಹೊಟ್ಟೆಕಿಚ್ಚು ಬತಾ ಇತ್ತು. ಧಾರಾಳವಾಗಿ ಖರ್ಚು ಮಾಡೋ ಅವಳ ಮುಂದೆ ಪೈಸೆ ಪೈಸೆಗೂ ಲೆಕ್ಕ ಹಾಕಬೇಕಾದ ನನ್ನ ಪರಿಸ್ಥಿತಿ ನೆನೆದೇ ಹೀನಾಯವೆನಿಸುತ್ತಿತ್ತು. ಅಂತಹುದರಲ್ಲಿ ಈಗ ಜೊತೆಯಲ್ಲಿಯೇ ೧೫ ದಿನ ಇರಬೇಕಾದ ಸ್ಥಿತಿ. ಹೇಗಪ್ಪ ಅವಳ ಮುಂದೆ ನನ್ನ ಬದುಕಿನ ಸ್ಥಿತಿ ತೋರಿಸೋದು. ಇವಳಲ್ಲದೆ ಹೋಗಿದ್ದರೇ ಹೇಗೋ ನನ್ನ ಬಡ್ಜೆಟ್ಟಿಗೆ ಸರಿದೂಗಿಸುತ್ತಾ ಇದ್ದೆ. ಈಗ ಹೇಗೆ ಕೀಳಾಗೋದು. ಇದೊಂದೇ ಕಾರಣವಾಗಿರಲಿಲ್ಲ. ಅವಳ ಬಗ್ಗೆ ಕೇಳಿದ್ದ ಅವಳ ನಡತೆ ಕೂಡ ನನ್ನ ಹಿಂತೆಗೆಯುವಂತೆ ಮಾಡಿತ್ತು. ಅವಳ ಜೊತೆ ಇದ್ರೆ ನಂಗೂ ಕೆಟ್ಟ ಹೆಸರು ಅಂದ್ಕೊಂಡು ಟ್ರೈನಿಂಗ್ ಕ್ಯಾನ್ಸಲ್ ಗಾಗಿ ಸಾಕಷ್ಟು ಪ್ರಯತ್ನ ನಡಸಿದೆ ಅದೂ ಸಫಲವಾಗದೇ ಇದ್ದಾಗ ತೆಪ್ಪಗೆ ಹೊರಟು ನಿಂತೆ.

ಅವಳೂ ಬಂದ್ರೆ ಏನಾಯ್ತು ಮಾತಂತೂ ಆಡಲ್ಲವಲ್ಲ. ಅಲ್ಲೂ ಹಾಗೆ ಇದ್ರಾಯ್ತು. ನನ್ನ ಜೊತೆ ಅವಳಿಗೂ ಬೇಕಾಗಿರಲ್ಲ. ಅವಳನ್ನು ಕಾಯ್ಕೊಂಡು ಅಲ್ಲಿ ಯಾರು ಇತಾರೋ, ಅವರ ಜೊತೆ ಬಿಟ್ಟು ನನ್ನ ಜೊತೆ ಬತಾಳಾ, ಸದ್ಯ ಅವಳು ಹಾಗೆ ಮಾಡಿದ್ರೆ ಸಾಕು, ಅವಳ ರೀತಿನೀತಿ ಒಂದೂ ನಂಗೆ ಹಿಡಿಸೊಲ್ಲ ಮೊದ್ಲೆ ಅವಳು ಸರಿ ಇಲ್ಲಾ ಅವಳ ಸಹವಾಸವೇ ಬೇಡ. ಅಂದುಕೊಂಡು ಸಮಾಧಾನ ಮಾಡಿಕೊಂಡೆ.

ಬೆಳಗ್ಗೆ ಇವರೂ ಬಸ್ಸು ಹತ್ತಿಸೋಕೆ ನನ್ನ ಜೊತೆ ಬಂದ್ರು. ಹದಿನೈದು ದಿನ ಅಂದ ಮೇಲೆ ಲಗೇಜ್ ಸಾಕಷ್ಟು ಇತ್ತು. ಬಸ್ಸು ರಶ್ ಬೇರೆ, ಮೊದಲೇ ಬುಕ್ಕಿಂಗ್ ಮಾಡಿಸಲಿಲ್ಲವಲ್ಲ ಅಂತ ಪೇಚಾಡಿಕೊಂಡೆ. ಅಷ್ಟರಲ್ಲಿ ಕಂಡಕ್ಟರ್ ಕೂಗಿದ. ಬನ್ನಿ ಮೇಡಂ ಇಲ್ಲೊಂದು ಸೀಟಿದೆ ಅಂತ.

ಸದ್ಯ ಬದುಕಿದೆ ಎಂದುಕೊಂಡು ಸೀಟಿರುವತ್ತ ನಡೆದರೆ ಕಿಟಕಿ ಬಳಿ ಅವಳಾಗಲೇ ಕುಳಿತು ಬಿಟ್ಟಿದ್ದಾಳೆ. ಅವಳ ಪಕ್ಕದ್ದೇ ಸೀಟು. ಯಾರಿಗಾಗಿ ಸೀಟು ಕಾದಿರಿಸಿದ್ದಳೋ ಪಾಪ ಕಂಡಕ್ಟರ್‌ಗೆ ತಿಳಿಯದೆ ನನ್ನ ಕರೆದುಬಿಟ್ಟಿದ್ದಾನೆ. ತಾನೀಗ ಕೂರಲೊ ಬೇಡವೋ ಅಂತ ಅನುಮಾನ ಪ್ರಾರಂಭವಾಯಿತು.

ತನ್ನ ಬ್ಯಾಗ್ ತೆಗೆದು ‘ಕುತ್ಕೊಳ್ಳಿ’ ಎಂದಳು. ಗಂರ್ಭಿರವಾಗಿ ಪಾಪ ನಿರಾಶೆಯಾಯಿತೇನೋ. ಸದ್ಯ ನನಗೆ ಸೀಟು ಸಿಕ್ಕಿತ್ತಲ್ಲ ಅನ್ನೋ ಸಮಾಧಾನದಿಂದ ಲಗೇಜ್ ತಂದು ಇಟ್ಟು ‘ಜೋಪಾನ ಫೋನ್ ಮಾಡ್ತ ಇರು, ಪಾಪು ಬಗ್ಗೆ ಯೋಚ್ನೆ ಮಾಡಬೇಡ’ ಎಂದು ಇವರು ‘ಹಣನಾ ನೋಡಿ ಖರ್ಚು ಮಾಡು’ ಮೆಲ್ಲಗೆ ನುಡಿದು ನಾ ಬರ್ತೀನಿ ಎಂದು ಕೆಳಗಿಳಿದು ಬಸ್ಸು ಹೊರಡುವ ತನಕ ಕಾದಿದ್ದು ಕೈ ಬೀಸಿ ಬೀಳ್ಕೊಟ್ಟರು.

ಬಸ್ಸು ಮುಂದೆ ಮುಂದೆ ಹೋಗುತ್ತಿದ್ದಂತೆ ಪತಿಯನ್ನು ಮಗುವನ್ನು ಬಿಟ್ಟು ಇನ್ನು ಹದಿನೈದು ದಿನ ಹೇಗೆ ಇರೋದು ಅನ್ನೋ ಬೇಸರದಲ್ಲಿ ನಿಟ್ಟುಸಿರು ಬಿಡುತ್ತಿದ್ದಂತೆ ‘ಯಾಕ್ರಿ ಬೇಸರವಾ ನಿಮ್ಮವರನ್ನು ಬಿಟ್ಟಿರೋದು ಕಷ್ಟ ಆಗ್ತಾ ಇದೆಯಾ’ ಅವಳೇ ಮಾತಾಡಿಸಿದ ಮೇಲೆ ಮಾತನಾಡದೆ ಇರಲು ನನಗೆ ಕಷ್ಟವಾಯಿತು.

‘ಹಾಗೇನೂ ಇಲ್ಲಪ್ಪ’ ಎಂದೆ.

ಊಟಕ್ಕೆ ಬಸ್ಸು ನಿಲ್ಲಿಸಿದರು. ಬನ್ನಿ ಎಂದು ಕರೆಯುತ್ತ ಕೆಳಗೆ ಇಳಿದಳು. ವಿಧಿ ಇಲ್ಲದೆ ಹಿಂಬಾಲಿಸಿದೆ. ಊಟದ ಟಿಕೇಟ್ ತಾನೇ ಖರೀದಿಸಿಬಿಟ್ಟಳು. ದುಡ್ಡು ಕೊಡಲು ಹೋದರೆ ನಿರಾಕರಿಸಿದಳು. ಪ್ರಾರಂಭದಲ್ಲಿಯೇ ಅವಳ ದಾಕ್ಷಿಣ್ಯಕ್ಕೆ ಬೀಳುವಂತಾಯಿತು. ಇವರು ಬೇರೆ ಅವಳಿಗೆ ಕೇಳುವಂತೆಯೇ ನೋಡಿ ಖರ್ಚು ಮಾಡು ಎಂದಿದ್ದು ನೆನಪಾಗಿ ಮನಸ್ಸು ಮುದುಡಿತು. ಧಾರವಾಡ ತಲುಪುತ್ತಿದ್ದಂತೆ ‘ಬನ್ನಿ ನಮ್ಮ ಫ್ರಂಡ್ ಮನೆ ಇದೆ. ಅಲ್ಲಿ ಉಳಿದಿದ್ದು ನಾಳೆ ಟ್ರೈನಿಂಗ್ ಸೆಂಟಗೆ ಹೋಗೋಣ’ ಎಂದಳು. ಇಲ್ಲಾ ಎನ್ನುವಂತೆ ಖಡಾಖಂಡಿತವಾಗಿ ನಿರಾಕರಿಸಿ ಬಿಟ್ಟೆ. ಬೇಸರ ಆಯಿತೇನೋ ಅವಳು ಮನಸ್ಸು ಬದಲಿಸಿ ಸರಿ ನಡೀರಿ ನೇರಾ ಸೆಂಟಗೆ ಹೋಗಿ ಬಿಡೋಣ ಎಂದು ನನ್ನ ಜೊತೆಯೇ ಹೊರಟಳು. ಅವಳು ಅವಳ ಫ್ರೆಂಡ್ ಮನೆಗೆ ಹೋಗಿದ್ದರೆ ಚೆನ್ನಾಗಿತ್ತು. ನಾನೊಬ್ಬಳೇ ಸೆಂಟಗೆ ಹೋಗಬಹುದಿತ್ತು ಅನ್ನಿಸಿತ್ತು. ಜೊತೆಗೆ ಬತೀನಿ ಅಂದ್ರೆ ಹೇಗೆ ಬೇಡ ಅನ್ನೋದು. ಸೆಂಟರಿಗೆ ಬಂದರೆ ಇಬ್ಬರಿಗೂ ಒಂದೇ ರೂಮ್ ಅಲಾಟ್ ಮಾಡಿದ್ದರು. ತಲೆ ಮೇಲೆ ಕೈ ಹೊತ್ತು ಕುಳಿತೆ. ಕೋಪ, ಬೇಸರ, ಅಸಹಾಯಕತೆ ಒಂದೇ ಸಲ ಮೂಡಿ ಅವಳನ್ನು ಸುಟ್ಟು ಬಿಡುವಂತೆ ದುರುದುರು ನೋಡಿದೆ ಅದರ ಅರಿವೇ ಇಲ್ಲದ ಆಕೆ ತನ್ನ ಲಗೇಜ್‌ನ್ನು ಕೆಲಸದವನ ಹತ್ತಿರ ಹೊರಿಸಿ ‘ಬನ್ನಿ ರೂಮ್ ಹೇಗಿದೆ ಮೋಡೋಣ’ ನನ್ನ ಬ್ಯಾಗೊಂದನ್ನು ತನ್ನ ಕೈಗೆತ್ತಿಕೊಂಡು ಕೆಲಸದವನನ್ನು ಹಿಂಬಾಲಿಸಿದಳು.

ರೂಮ್ ಹೇಗಿದ್ದರೇನು ಜೊತೆಗಿರುವವರೇ ಸರಿ ಇಲ್ಲವಲ್ಲ ಎಂದುಕೊಂಡು ಮೌನವಾಗಿ ಹೆಜ್ಜೆ ಹಾಕಿದೆ.

‘ಥೂ ಏನ್ ರೂಮೋ, ಒಂಚೂರು ಚೆನ್ನಾಗಿಲ್ಲ. ನಾನು ಯಾವುದಾದ್ರೂ ಹೋಟೆಲಿನಲ್ಲಿಯೇ ರೂಮ್ ನೋಡಬಹುದಿತ್ತು ಏನಂತೀರಾ’.

“ಅಯ್ಯೋ ಬಿಡಿ ಎಷ್ಟು, ದಿನ ಇರೋಕೆ, ಇದೇ ಬೇಕಾದಷ್ಟಾಯಿತು. ಹೋಟೇಲಿನಲ್ಲಿ ರೂಮ್ ಅಂದ್ರೆ ಖರ್ಚೇನೂ ಕಡಿಮೆನಾ’ ಎಂದೇಬಿಟ್ಟೆ.

‘ಖರ್ಚೇನೂ ಮಹಾಬಿಡ್ರಿ, ನೀವು ಬರ್ತೀನಿ ಅಂದ್ರೆ ಖರ್ಚೆಲ್ಲಾ ನಾನೇ ನೋಡಿಕೊಳ್ಳುತ್ತೇನೆ ಒಬ್ಳೆ ಹೋಗಿರಲು ಭಯ ಕಂಡ್ರಿ’

‘ಬೇಡಪ್ಪಾ ನಾನು ಬಂದಿರುವುದು ಟ್ರೈನಿಂಗ್ಗೆ, ಎಂಜಾಯ್ ಮಾಡೋಕಂತು ಅಲ್ಲಾ, ಹೇಗೋ ಇದ್ದು ಹೋದರಾಯಿತು.’ ಕಡ್ಡಿ ತುಂಡಾಗುವಂತೆ ಮಾತಾಡಿ ಲಗೇಜ್ ಜೋಡಿಸತೊಡಗಿದೆ. ಒತ್ತಾಯ ಮಾಡಲಾರದೆ ಸ್ವಲ್ಪ ಹೊತ್ತು ನನ್ನ ಕೆಲಸ ನೋಡುತ್ತಿದ್ದವಳು ತಾನೂ ಲಗೇಜ್ ಜೋಡಿಸತೊಡಗಿದಳು.

ಬೆಳಗ್ಗೆಯಿಂದಲೇ ತರಬೇತಿ ಆರಂಭವಾಯಿತು. ಕ್ಷಣ ಕ್ಷಣಕ್ಕೂ ಸೆಂಟರ್‌ನ್ನು ಬಯ್ಯುತ್ತಲೇ ಊಟ, ತಿಂಡಿಯನ್ನು ಜರಿಯುತ್ತಲೇ ಹೊರಟು ನಿಂತಳು. ಅವಳ ಶೃಂಗಾರವನ್ನು ಬೆರಗಿನಿಂದ ನೋಡುತ್ತಾ ನಿಂತೆ. ನನ್ನದಾಗಲೇ ಅಲಂಕಾರ ಮುಗಿಸಿಬಿಟ್ಟಿದ್ದೆ. ಬ್ಯೂಟಿಕಾಂಟೆಸ್ಟಿಗೆ ಹೋಗ್ತಾ ಇದ್ದಾಳೋ, ಟ್ರೈನಿಂಗ್ಗೆ ಹೋಗ್ತಾ ಇದ್ದಾಳೋ ಅನುಮಾನವಾಯಿತು. ಅವಳ ಜೊತೆ ಹೋಗೋದು ಹೇಗೆ ಅನ್ನುವ ಮುಜುಗರ ಕಾಡತೊಡಗಿತು.

ತರಗತಿ ಒಳಗೆ ಕಾಲಿಟ್ಟ ಒಡನೇ ಅವಳ ಬೇಸರ ಕೋಪ ಎಲ್ಲಾ ಮಾಯವಾಗಿ ಅಲ್ಲಿದ್ದವರೊಡನೆ ಬೆರೆತು ಹೋದನ್ನು ಕಂಡು ದಿಗ್ಭ್ರಾಂತಿಯಾಯಿತು. ಅಬ್ಬಾ ಏನವಳ ಗತ್ತು. ಏನವಳ ವಯ್ಯಾರ, ಕೊಂಕು, ತನ್ನೊಂದಿಗೆ ಮಾತನಾಡಲು ಹಾತೊರೆಯುತ್ತಿದ್ದವರೊಂದಿಗೆ ಅದೇನು ಮಾತು, ಅದೇನು ನಗು, ರೋಸಿ ಹೋಗಿ ಅವಳಿಂದ ಬಹುದೂರ ಕುಳಿತುಬಿಟ್ಟೆ.

ಸಂಜೆಯಾಗುತ್ತಿದ್ದಂತೆ ಹುಡುಕಿಕೊಂಡು ಬಂದು ‘ಯಾಕಪ್ಪಾ ನೀವು ಬೇರೆ ಕುತ್ಕೊಂಡು ಬಿಟ್ರಿ, ನಂಗಂತೂ ಈ ಟ್ರೈನಿಂಗ್ ಎಲ್ಲಾ ಆಸಕ್ತಿನೇ ಇಲ್ಲಾ ಕಂಣ್ರೀ ಚೇಂಜ್ ಸಿಗುತ್ತೆ ಅಂತ ಅಷ್ಟೆ ಬಂದಿದ್ದು’.

ಸಿಟಿಗೋಗೋಣ ಬನ್ನಿ. ಅಲ್ಲಿ ಊಟ ಮುಗಿಸಿ, ಬಂದ್ರಾಯ್ತು ಎಂದಾಗ ಈಗ ಹೂ ಎಂದುಬಿಡುತ್ತಿದ್ದಳೇನೋ, ಆದರೆ ಅವಳಿಗಾಗಿ ಕಾಯುತ್ತಿದ್ದ ಅವರನ್ನೆಲ್ಲ ನೋಡಿ ನಯವಾಗಿ ನಿರಾಕರಿಸಿ ತನ್ನ ರೂಮಿಗೆ ಬಂದು ಬಿಟ್ಟಳು. ಮನಸ್ಸಿನ ತುಂಬಾ ಹೇಸಿಗೆ ಭಾವ.

ಹೀಗೆ ಹದಿನೈದು ದಿನ ಕಳೆದು ಹೋಯಿತು. ಊರಿಗೆ ಹೊರಡಲು ಸಿದ್ದವಾಗುತ್ತಿದ್ದವಳನ್ನು ತಡೆದ ಅವಳು ಪ್ಲೀಸ್ ಇನ್ನೊಂದು ದಿನ ಇರೋಣ. ಸ್ವಲ್ಪ ಶಾಪಿಂಗ್ ಮಾಡಬೇಕು. ಇವತ್ತಾದರೂ ನೀವು ನನ್ನ ಜೊತೆ ಬರಲೇಬೇಕು. ಇಲ್ಲಾ ಅನ್ನಬಾರದು ನನ್ನಾಣೆ ಸೆಂಟಿಮೆಂಟ್ಸ್‌ಗೆ ಸೋಲಲೇಬೇಕಾಯ್ತು.

ಊರಿಂದ ತಂದ ಹಣ ಹಾಗೆಯೇ ಉಳಿದಿತ್ತು. ಜೊತೆಗೆ ಇಲ್ಲಿ ಸಿಕ್ಕಿದ್ದ ಟಿ. ಎ. ಡಿ. ಎ ಕೂಡ ಸಾಕಷ್ಟು ಇತ್ತು. ಸರಿ ಪಾಪುಗಾಗಿ ಏನನ್ನಾದರೂ ಕೊಳ್ಳೋಣವೆಂದು ತೀರ್ಮಾನಿಸಿ ಅವಳೊಂದಿಗೆ ಹೊರಟು ನಿಂತಳು.

ಅವಳಂತೂ ಸಾಕಷ್ಟು ಖರೀದಿಸಿದಳು ಮಗಳಿಗೆ, ಅವಳ ತಾಯಿಗೆ ತಂಗಿಗೆ, ತಮ್ಮನಿಗೆ, ಗಂಡನಿಗಾಗಿ ಗಂಡನ ಕಡೆಯವರಿಗಾಗಿ ಏನನ್ನೂ ಕೊಳ್ಳದ ಅವಳ ಬಗ್ಗೆ ಆಶ್ಚರ್ಯವಾಯ್ತು. ತಾನು ಇದ್ದ ಹಣದಲ್ಲಿಯೇ ಅತ್ತೆಗೊಂದು ಸೀರೆ, ಪತಿಗಾಗಿ ಒಂದು ಶರಟ್, ಪಾಪುಗಾಗಿ ಆಟಿಕೆ ಎಲ್ಲಾ ಕೊಂಡಿದ್ದಳು.

ದೊಡ್ಡ ಹೋಟೆಲಿಗೆ ಊಟಕ್ಕಾಗಿ ಕರೆದೊಯ್ದಳು. ಏನೂ ಸಂದಿಗ್ಧದಲ್ಲಿರುವಂತೆ ಭಾಸವಾಯಿತು.

‘ನಿಮ್ಮನ್ನು ಯಾಕೆ ಇಲ್ಲಿಗೆ ಕರ್ಕೊಂಡು ಬಂದೆ ಗೊತ್ತಾ’ ಪ್ರಶ್ನಿಸಿದಳು.

‘ಇನ್ಯಾಕೆ ಊಟ ಮಾಡೋಕೆ’ ನಕ್ಕಳು. ‘ನೀವು ತುಂಬಾ ಚೆನ್ನಾಗಿ ನಗ್ತೀರಾ’ ಅವಳ ಅನಿರೀಕ್ಷಿತ ಹೊಗಳಿಕೆಗೆ ಕೆಂಪಾದಳು. ‘ನಿಮ್ಮನ್ನು ನೋಡಿದ್ರೆ ನಂಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತೆ, ಯಾಕೆ ಗೊತ್ತಾ. ನೀವು ಯಾವಾಗಲೂ ಸಂತೋಷವಾಗಿತೀರಾ, ಸದಾ ಗಂಡನ್ನ, ಅತ್ತೇನಾ, ಮಗುವಾ ನೆನೆಸಿಕೊಂಡು ಅದು ಬಿಟ್ರೆ ಬೇರೆ ಪ್ರಪಂಚವೇ ಇಲ್ಲಾ ಅನ್ನೋ ಥರ ಇರ್ತೀರಾ, ಎಷ್ಟು ಒಳ್ಳೇ ಗಂಡ, ಅತ್ತೆ, ಮಗು ನಿಮ್ಗೆ ಸಿಕ್ಕಿದ್ದಾರೆ. ನೀವು ನಿಜವಾಗಿಯೂ ಅದೃಷ್ಟವಂತರೂ’ ಭಾವುಕಳಾದಳು.

‘ನಿಮ್ಮ ಅದೃಷ್ಟಕ್ಕೇನು ಕೊರತೆ. ನೋಡೋಕೆ ಎಷ್ಟು ಚೆನ್ನಾಗಿದ್ದೀರಾ, ಕೈ ತುಂಬಾ ಖರ್ಚು ಮಾಡೋ ಅಷ್ಟು ಹಣ, ಎಷ್ಟು, ಖರ್ಚು ಮಾಡಿದ್ರೂ ಕೇಳದೆ ಇರೋ ಪತಿ, ನಿಮಗೇನು ಕಡಿಮೆ’ ಹೃದಯದಿಂದ ಬಂದ ಮಾತನ್ನು ನುಡಿದಳು.

ತಟ್ಟನೆ ವ್ಯಥೆ ಅವಳ ಮುದ್ದಾದ ಮೊಗವನ್ನು ಆವರಿಸಿದಾಗ ವಿಸ್ಮಿತಳಾದಳು. ಏನೋ ಆಲೋಚಿಸುತ್ತಿದ್ದವಳು ಇವಳತ್ತ ತಿರುಗಿ “ನನ್ನ ಬಗ್ಗೆ ನಿಮ್ಗೆ ಏನೇನೋ ಅನ್ನಿಸಿರಬೇಕಲ್ವಾ. ನೀವು ಬಾಯಿಬಿಟ್ಟು ಏನೂ ಹೇಳದೆ ಇದ್ದರೂ, ನಂಗೆಲ್ಲ ಗೊತ್ತಾಗುತ್ತೆ. ಆದ್ರೆ ನೀವು ನಿಮ್ಮ ನಡೆ ನುಡಿಯಲ್ಲಿ ಯಾವುದನ್ನೂ ತೋರಿಸಿಕೊಳ್ಳುತ್ತಿರಲಿಲ್ಲವಲ್ಲ ಅದೇ ನನ್ಗೆ ತುಂಬಾ ಮೆಚ್ಚುಗೆಯಾದದ್ದು. ಮ್ಯೂಚಿಯಲ್ ಕೇಳಿ ಬಂದ ನಿಮ್ಗೆ ತಾನು ಒರಟಾಗಿ ವರ್ತಿಸಿದ್ದು ಕೋಪ ತರಿಸಿದ್ದರೂ ಅದನ್ನೇ ನೀವು ಸಾಧಿಸಲಿಲ್ಲ. ಈ ವರ್ತನೆಗಳೇ ನಿಮ್ಮ ಬಗ್ಗೆ ನಾನು ಮೃದುವಾಗೋಕೆ ಕಾರಣವಾಗಿದ್ದು. ನನ್ನ ಮನಸ್ಸಿನಲ್ಲಿರೋ ಕೋಲಾಹಲವನ್ನು, ಹಾಲಾಹಲವನ್ನು ನಿಮ್ಮ ಮುಂದೆ ಹೇಳ್ಕೋಬೇಕು ಅನ್ನೋ ತುಡಿತ ನನ್ನಲ್ಲಿ ಹೆಚ್ಚಾಗ್ತಾ ಇದೆ. ‘ನನ್ನ ಒಂದು ಮುಖ ನೋಡಿರೋ ನಿಮ್ಗೆ ನನ್ನ ಮನದ ಕಡಲಿನಾಳದ ಇನ್ನೊಂದು ಮುಖವನ್ನು ತೋರಿಸಬೇಕು. ನಾನು ಮಾಡಿದ್ದು ಸರಿನಾ ತಪ್ಪೋ ಅನ್ನೋದನ್ನು ಜಡ್ಜ್ ಮಾಡೋ ಯೋಗ್ಯತೆ ನಿಮಗಿದೆ. ಹೇಳ್ತೀನಿ ಎಲ್ಲ ಹೇಳಿ ಬಿಡ್ತೀನಿ’.

ಏನು ಹೇಳಬಹುದು ಅವಳು. ಸದಾ ನಗುತ್ತಾ ಬದುಕನ್ನು ಆಸ್ವಾದಿಸುತ್ತಾ ಇರೋ ಅವಳ ಅಂತರಾಳದ ಆಳದಲ್ಲೇನೂ ನಿಧಿ ಅಡಗಿದೆ. ನೋವಿನದೇ, ನಲಿವಿನದೇ, ಕುತೂಹಲ ಹೆಚ್ಚಾಗತೊಡಗಿತು. ಆತ್ಮೀಯತೆಯಿಂದ ಅವಳ ಹಸ್ತವನ್ನು ಅದುಮಿದೆ.

‘ಶ್ರೀಮಂತ ಮನೆಯಲ್ಲಿ ಹುಟ್ಟಿದೆ ಶ್ರೀಮಂತನನ್ನೇ ಸೇರಿದೆ. ನನ್ನ ಬುದ್ಧಿವಂತಿಕೆ, ನನ್ನ ಸೌಂದರ್ಯ, ಶ್ರೀಮಂತಿಕೆ ನನ್ನಲ್ಲಿ ಮೇಲರಿಮೆ ಬೆಳೆಸಿದರೆ, ಅದೇ ಪ್ಲಸ್‌ಪಾಯಿಂಟ್‌ಗಳು ನನ್ನ ಗಂಡನಲ್ಲಿ ಕೀಳುಭಾವನೆ ಬೆಳೆಸಿದವು. ಸಾಕಷ್ಟು ಬುದ್ಧಿವಂತರೇ ಆಗಿದ್ದ ಅವರಿಗೆ ಅವರು ಬಯಸಿದ ಉದ್ಯೋಗ ಸಿಗಲಿಲ್ಲ. ಆ ಹತಾಶೆಯಲ್ಲಿ ಕೆಲಸದಲ್ಲಿದ್ದ ನನ್ನ ಬಗ್ಗೆ ಅಸೂಯೆ ತಾಳಿದರು. ಕೆಲ್ಸ ಬಿಡು ಅಂದ್ರು, ಗಂಡ ಕೆಲ್ಸದಲ್ಲಿಲ್ಲದ ಮೇಲೆ ಹೆಂಡತಿಗ್ಯಾಕೆ ಕೆಲಸ ಅಂದ್ರು ಪ್ರತಿಯೊಂದರಲ್ಲೂ ತಪ್ಪು ಹುಡುಕೋಕೆ ಪ್ರಯತ್ನಿಸುತ್ತ ನನ್ನ ಕಾಡತೊಡಗಿದರು.

ಈ ಬದುಕು ಬೇಡಾ ಅನ್ನುವ ಹೊತ್ತಿಗೆ ಮಗಳು ಹುಟ್ಟಿಬಿಟ್ಟಳು. ಮಗಳಿಗಾಗಿ ಬದುಕು ಸಹ್ಯ ಮಾಡಿಕೊಳ್ಳಲೇಬೇಕಾಗಿತ್ತು. ಇವರಿಗೆ ಕೆ. ಎ. ಎಸ್. ಪರೀಕ್ಷೆ ಪಾಸು ಮಾಡಿಸಿ ಕೆಲಸ ಕೊಡಿಸಿ ಬಿಟ್ಟರೆ ಸರಿ ಹೋಗ್ತಾರೆ ಅನ್ನೋ ಹಂಬಲದಿಂದ ತೌರುಮನೆಯಿಂದ ಹಣ ತಂದು ಅವರಿಗೆ ಗೊತ್ತಿಲ್ಲದ ಹಾಗೆ ಅವರ ಆಸೆ ಈಡೇರಿಸಲು ಪ್ರಯತ್ನಿಸಿದೆ. ಸಹಾಯಹಸ್ತ ನೀಡಲು ಮುಂದಾದೆ ಗೆಳೆಯರಿಗೆ ಹಣ ಕೊಟ್ಟೆ. ಅದೇ ಪ್ರಯತ್ನದಲ್ಲಿ ಅವರ ಜೊತೆ ಮಡಿಕೇರಿಗೆ ಹೋಗಬೇಕಾಯ್ತು. ನನ್ನ ಗಂಡನಿಗೆ ಸುಳ್ಳು ಹೇಳಿ ಹಿಡಿಯಬೇಕಾದವರನ್ನೆಲ್ಲ ಹಿಡಿದು ಕೆಲಸ ಗ್ಯಾರಂಟಿ ಎಂದು ವಾಪಸ್ಸು ಬರುವಷ್ಟರಲ್ಲಿ ಹೇಗೋ ವಿಷಯ ತಿಳಿದುಕೊಂಡ ನನ್ನ ಗಂಡ ನನ್ನ ಇಡೀ ಬದುಕನ್ನು ಅಪಮಾನಿಸಿ ಬಿಟ್ಟರು. ಯಾವ ತಪ್ಪು ಮಾಡದ ನಾನು ನನ್ನ ಚರಿತ್ರೆಯನ್ನು ಅವರಿಂದ ವಧೆ ಮಾಡಿಸಿಕೊಳ್ಳಬೇಕಾಯಿತು.

ಮನೆ ಬಿಟ್ಟುಹೊರಹಾಕಲು ಪ್ರಯತ್ನಿಸಿದರು. ನಾನು ಏನು ಹೇಳಿದ್ರೂ ನಂಬದ ಸ್ಥಿತಿ ಅವರದಾಗಿತ್ತು. ಬೇಡಿದೆ, ಕಾಡಿದೆ, ಅತ್ತೆ ಗೋಗರೆದೆ ಯಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ. ಮನೆ ಬಿಟ್ಟು ಹೊರಟುಹೋಗು ಎಂಬುದು ಒಂದೇ ಹಟವಾಗಿತ್ತು. ನನಗೂ ಸಿಟ್ಟು ಬಂತು ಯಾವ ತಪ್ಪು ಮಾಡದ, ಒಳ್ಳೆಯದನ್ನೇ ಮಾಡಲು ಹೊರಟ ತಾನೇಕೆ ಮನೆಬಿಟ್ಟು ಹೋಗಬೇಕು. ನಾನು ಕೆಟ್ಟಿದ್ದೀನಿ ಅನ್ನೋದನ್ನ ತೋರಿಸಿಕೊಡಿ ಆಗ ಈ ಮನೇನಾ, ನಿಮ್ಮನ್ನು ಬಿಟ್ಟು ಹೋಗುತ್ತೇನೆ ಅಂತ ಹಟ ತೊಟ್ಟೆ. ಅದೇ ಹಟದಲ್ಲಿ ಆ ಮನೆಯಲ್ಲಿ ಉಳಿದಿದ್ದೇನೆ ಯಾವ ಸಂಬಂಧವೂ ಇಟ್ಟುಕೊಳ್ಳದೆ ನಿಲ್ಲಿಸಿದಳು.

ಅರ್ಥವಾಗದೆ ‘ಅಂದ್ರೆ’ ಎಂದೆ. “ಗಂಡನೊಡನೆ ಮಾತುಕತೆ ಇಲ್ಲದೆ, ಹೆಂಡತಿಯ ಯಾವ ಸಂಬಂಧವೂ ಇಲ್ಲದೆ, ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಾ, ಅಡುಗೆ ಮಾಡಿಕೊಳ್ಳುತ್ತಾ ಇಡೀ ಗಂಡನ ಮನೆಯವರ ಸಂಪರ್ಕ ಕಡಿದುಕೊಂಡು, ಹಟಕ್ಕಾಗಿ, ಛಲಕ್ಕಾಗಿ, ಸ್ವಾಭಿಮಾನ ಕಳೆದುಕೊಂಡು ಬದುಕುತ್ತಿದ್ದೇನೆ”. ಕಣ್ಣಲ್ಲಿ ಧಾರಾಕಾರವಾಗಿ ನೀರು ಇಳಿಯುತ್ತಿತ್ತು.

‘ಇದು ಯಾವಾಗಿನಿಂದ’

‘ಹತ್ತು ವರ್ಷದಿಂದ’ ನಿಧಾನವಾಗಿ ನುಡಿದಳು.

‘ಹತ್ತು ವರ್ಷದಿಂದ’ ಜೋರಾಗಿಯೇ ಚೀತ್ಕರಿಸಿದೆ.

‘ಹೌದು ಹತ್ತು ವರ್ಷದಿಂದ. ಆ ಘಟನೆ ನಡೆದಾಗ ನನ್ನ ಮಗಳು ಹೊಟ್ಟೆಯಲ್ಲಿದ್ದಳು. ಈಗ ಅವಳಿಗೆ ಹತ್ತುವರ್ಷ. ನನ್ನ ತವರು ಮನೆಯಲ್ಲಿ ಬೆಳೀತಾ ಇದ್ದಾಳೆ. ಅಪ್ಪಾ ಅಂತಾ ಒಂದು ದಿನವೂ ಕರೆಯೋ ಯೋಗ ಅವಳಿಗಿಲ್ಲ. ಅಪ್ಪನ ಪ್ರೀತಿನಾ ಕಳ್ಕೊಂಡ ದುರದೃಷ್ಟ ಮಗು.’

ಆ ಮನೆಯಲ್ಲಿ ನನ್ನವರು ಯಾರೂ ಇಲ್ಲಾ ನನ್ನ ಕಷ್ಟಕ್ಕೆ ನನ್ನ ನೋವಿಗೆ ಸ್ಪಂದಿಸೋ ಹೃದಯ ಇಲ್ಲಾ. ಇಡೀ ಮನೆಯಲ್ಲಿ ಒಂಟಿಯಾಗಿ ಕಾಲ ತಳ್ತ ಇದ್ದೀನಿ. ಈ ಒಂಟಿತನನಾ ದೂರ ಮಾಡಿಕೊಳ್ಳೋಕೆ ಬೆಂಗಳೂರಿಗೆ ವರ್ಗಾ ಮಾಡಿಸಿಕೊಂಡೆ. ದಿನಾ ಪ್ರಯಾಣದಲ್ಲಿ ಆಫೀಸಿನಲ್ಲಿ ನನ್ನ ಕಾಲವನ್ನೆಲ್ಲ ಕಳೆದು, ಒಂದೊಂದು ರಾತ್ರಿ ಕಳೆಯೋಕು ಪ್ರಯಾಸಪಡ್ತ, ನೊವಿನಿಂದ ನರಳುತ್ತಾ ಗಂಡನ ಕಾಠಿನ್ಯತೆ ಎಂದೂ ಕರಗುತ್ತೋ ಅನ್ನೋ ನಿರೀಕ್ಷೆಯಿಂದ ಬದುಕುತ್ತ ಇದ್ದೀನಿ.

‘ಹತ್ತು ವರ್ಷದಿಂದ ಒಂದು ಸಲವೂ ಮಾತಾಡಿಸಿಲ್ವಾ’ ಇದು ಹೇಗೆ ಸಾಧ್ಯ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ ‘ಆದ್ರೆ ಹತ್ತು ವರ್ಷ ಆದ್ರೂ ಮುಗಿದಿಲ್ಲ ಅಂದ್ರೆ ಹೇಗೆ, ಹೇಗೆ ಸಾಧ್ಯ.’

“ಸಾಧ್ಯ ಆಗಿದೆಯಲ್ಲ, ಇವತ್ತಲ್ಲ ನಾಳೆ ನಾನು ಆ ಮನೆಬಿಟ್ಟು ಬರ್ತೀನಿ, ಆಗ ಬೇರೆಯವಳನ್ನು ಮದ್ವೆ ಆಗಬಹುದು ಅನ್ನೋ ಆಸೆ ಅವರಿಗೆ. ತಪ್ಪೇ ಮಾಡದ ಶಿಕ್ಷೆ ಅನುಭವಿಸೋಕೆ ನಾನು ಹೇಗೆ ಸಿದ್ದವಾಗಲಿ, ನನಗೂ ಶಿಕ್ಷೆ, ಅವರಿಗೂ ಓಂಟಿಯಾಗಿರೋ ಶಿಕ್ಷೆ, ಅವರು. ಒಂಟಿಯಾಗಿ ನರಳ್ತಾ ಇದ್ದರಲ್ಲ, ನನ್ನ ಮನಸ್ಸಿಗೆ ಅದು ಶಾಂತಿ ಕೊಡ್ತಾ ಇದೆ. ಈ ಜನ್ಮದಲ್ಲಿ ಡೈವರ್ಸ್ ಕೊಡಲ್ಲ”.

‘ನಿಮ್ಮ ತೀರ್ಮಾನ ತಪ್ಪು ಅನ್ನಿಸುತ್ತಾ ಇದೆ. ಬೇಡದ ಬದುಕನ್ನು ದೂರತಳ್ಳಿ, ನಿಮ್ಮದೇ ಆದ ಹೊಸ ಬದುಕನ್ನು ಯಾಕೆ ನೀವು ಒಪ್ಕೋಬಾರದು’

‘ಹೊಸ ಬದುಕು’ ಗಹಗಹಿಸಿ ನಕ್ಕಳು. ಈ ಬದುಕೇ ಹೀಗಾಯ್ತು. ಇನ್ನು ಬೇರೆ ಬದುಕು ಹೇಗಿರಬಹುದು. ರಿಸ್ಕ್ ತಗೋಳೋಕೆ ಧೈರ್ಯ ಬರಲಿಲ್ಲ. ಹಾಗಂತ ನನ್ನ ಬದುಕನ್ನು ಆಶೋಕವನದಲ್ಲಿ ಸೀತೆ ಕಣ್ಣೀರಿಡುತ್ತ ಕಳೆದ ಹಾಗೆ ಕಳೀತಾ ಇಲ್ಲಾ. ಎಲ್ಲೋ ಒಂದು ಕಡೆ ಬದುಕಿನ ಸುಖವನ್ನು ಅನುಭವಿಸುತ್ತಾ ಇದ್ದೀನಿ. ಇದು ತಪ್ಪು ನನಗೊತ್ತು. ನನ್ನ ಗಂಡ ಕೂಡ ಸಿಗದೆ ಇರೋ ಸುಖವೇ ಬೇರೆ ಕಡೆ ಹುಡುಕ್ತಾ ಇರುವಾಗ ನಾನು ಹೇಗೆ ಸಹಿಸಲಿ, ಕೆಟ್ಟ ಹೆಸರು ಹೊತ್ತುಕೊಂಡು ಆಗಿದೆ. ಮಾಡಿಲ್ಲದ ತಪ್ಪು ಹೊರಿಸಿ ನನ್ನ ಬದುಕು ಛಿದ್ರಗೂಳಿಸಿದರು. ಅಂಥ ಕಟು ಮನುಷ್ಯನಿಗಾಗಿ ನನ್ನ ಸುಖ, ಸಂತೋಷ, ತ್ಯಾಗ ಮಾಡಲಿ. ಇವತ್ತಲ್ಲ ನಾಳೆ ಅವರಿಗೆ ತಮ್ಮ ತಪ್ಪು ತಿಳಿದೇ ತಿಳಿಯುತ್ತೆ. ಆಗ ನನ್ನ ಹತ್ರ ಬಂದೇ ಬರುತ್ತಾರೆ. ಇನ್ನು ಹತ್ತು ವರ್ಷ ಆದ ಮೇಲಾದ್ರೂ ಹೆಂಡತಿ ಅನ್ನೋಳು ಬೇಕಾಗಬಹುದು ಅಲ್ಲವೇ? ಆ ಪ್ರತೀಕ್ಷೆಯಲ್ಲಿಯೇ ಈ ಬದುಕು ಕಳೆದುಹೋಗುತ್ತಾ ಇದೆ. ಎತ್ತಲೋ ನೋಡುತ್ತಾ ಮಾತು ನಿಲ್ಲಿಸಿದಳು.

ಸರಿತಪ್ಪು ತೀರ್ಮಾನಿಸುವ ಶಕ್ತಿ ನನಗಿಲ್ಲದೆ ಹೋಯಿತು. ಊಟ ತಣ್ಣಗಾಗಿ ಹೋಗಿತ್ತು. ‘ಊಟ ಮಾಡಿ ದೇವರು ನಿಮ್ಮ ನಿರೀಕ್ಷೇನಾ ಸುಳ್ಳು ಮಾಡದಿರಲಿ’ ಎಂದೆ ಮೃದುವಾಗಿ.

‘ನಿಮ್ಮ ಪತಿಯ ಕಾಠೀಣ್ಯತೆ ಕರಗಿಸೋಕೆ ಯಾರೂ ಪ್ರಯತ್ನ ಪಡಲಿಲ್ಲವೇ’ ಊಟ ಮಾಡುತ್ತ ಕೇಳಿದೆ.

‘ಎಲ್ಲರ ಪ್ರಯತ್ನವು ಮುಗಿದುಹೋಯಿತು. ಯಾರ ಮಾತನ್ನು ಕೇಳದೆ ಕೆಟ್ಟ ಹಟವಂತ. ತಪ್ಪೇ ಮಾಡದ ನನ್ನ ದೂರಿದರು. ಈಗ ಅದೇ ತಪ್ಪು ಮಾಡಿದ್ರೂ ಯಾಕೆ ಅಂತಾ ಕೇಳದೆ ನೋಡಿಯೂ ನೋಡದಂತಿದ್ದಾರೆ. ನನ್ನ ಮಗು ಅನ್ನೋ ಮಮಕಾರ ಕೂಡಾ ಇಲ್ಲಾ. ಅದಕ್ಕೆ ನಾನು ಅವರನ್ನು ದ್ವೇಷಿಸುತ್ತಾ ಇದ್ದೀನಿ. ಅವರ ಮನಸ್ಸು ನೋಯೋ ಕೆಲ್ಸ ಮಾಡ್ತಾ ಇದ್ದೀನಿ. ನನ್ನ ತಪ್ಪನ್ನಾದಾರೂ ಖಂಡಿಸಲು ನನ್ನ ಜೊತೆ ಮಾತಾಡಬಹುದು ಅಂತ ಅಂದುಕೊಂಡಿದ್ದೀನಿ. ಸಮಾಜದ ಮುಂದೆ ಹೆಂಡತಿ ಬಿಟ್ಟೋನು ಅನ್ನಿಸಿಕೊಳ್ಳೋಕೆ ಇಷ್ಟವಿಲ್ಲವೇನೋ ಅದಕ್ಕೆ ಇತ್ತೀಚೆಗೆ ಮನೆ ಬಿಟ್ಟೋಗು ಅಂತ ಹೇಳ್ತಾನೆ ಇಲ್ಲಾ. ವಯಸ್ಸಾಗ್ತಾ ಆಗ್ತಾ ಜೀವನದ ಜೊತೆ ರಾಜಿ ಅನಿವಾರ್ಯವೇನೋ, ನಾನೆಷ್ಟು ದ್ವೇಷಿಸುತ್ತೇನೆ ಅಂದ್ರೂ ಅವರಿಲ್ಲದ ಬದುಕು ನನ್ನಿಂದ ಅಸಾಧ್ಯ. ಪ್ರತಿದಿನ ನೋಡ್ತಾ ಅವರ ಮಾತು ಕೇಳ್ತಾ ಅವರು ಬದಲಾಗೋ ನಿರೀಕ್ಷೆಯಲ್ಲಿ ಕಾಲತಳ್ತಾ ಇದ್ದೇನೆ’

“ನಿಮ್ಮ ನಿರೀಕ್ಷೆ ಖಂಡಿತಾ ನಿಜವಾಗುತ್ತೆ ನಿಮ್ಮ ಕಾಯುವಿಕೆ ವ್ಯರ್ಥವಾಗಲ್ಲ. ಹಾಗಂತ ನನಗನ್ನಿಸುತ್ತದೆ”. ಅಂತರಾಳದಿಂದ ಮಾತು ಬಂದಿತು.

ಆಫೀಸಿನ ಯಾಂತ್ರಿಕ ದಿನಚರಿ ಮತ್ತೇ ಆರಂಭವಾಗಿತ್ತು. ಟ್ರೈನಿಂಗ್‌ನಿಂದಾಗಿ ಬಹಳಷ್ಟು ಹತ್ತಿರವಾಗಿದ್ದರಿಂದ ಈಗ ಎಲ್ಲದಕ್ಕೂ ಜೊತೆಯಾಗಿಯೇ ಓಡಾಡುತ್ತಿದ್ದೆವು. ಅಂದೇನೋ ಭಾವುಕಳಾಗಿ ಅವಳಾಸೆ ಈಡೇರಲಿ ಎಂದು ಹಾರೈಸಿದ್ದೆ. ಆದರೆ ಅದು ಖಂಡಿತಾ ನೆರವೇರಲಾರದು ಅಂತ ಸದಾ ನನಗೆ ಅನ್ನಿಸುತ್ತಾ ಇತ್ತು. ಜೊತೆಗೆ ಅವಳ ನಿಲುವು ಕೂಡ ನನಗೆ ಸರಿ ಅನ್ನಿಸುತ್ತಿರಲಿಲ್ಲ. ಇಷ್ಟು ಚಿಕ್ಕವಯಸ್ಸಿಗೆ ಏನೆಲ್ಲ ಅನುಭವಿಸಬೇಕಾದ ಅವಳ ಪರಿಸ್ಥಿತಿಗೆ ಮನ ನೋಯುತ್ತಿತ್ತು. ತಪ್ಪು ಮಾಡುತ್ತಿರುವ ಅವಳನ್ನು ತಿದ್ದಿ ಹೊಸ ಬದುಕಿನತ್ತ ತಳ್ಳಲು ಮನಸ್ಸು ಚಡಪಡಿಸುತ್ತಿತ್ತು. ಅದರ ಪ್ರಯತ್ನದಲ್ಲಿಯೂ ನಿರತಳಾಗಿ ಬಿಟ್ಟೆ. ಅದಷ್ಟು ಸುಲಭವಾಗಿರಲಿಲ್ಲ. ಬೇಡ ಅಂದವನ ಕೃಪೆಗಾಗಿ ಕಾಯುತ್ತಾ ಇಡೀ ಬದುಕನ್ನು ವ್ಯರ್ಥಗೊಳಿಸುತ್ತಿರುವ, ಸೇಡಿಗಾಗಿ ತನ್ನತನವನ್ನು ಕಳೆದುಕೊಳ್ಳುತ್ತ ನೈತಿಕತೆಯ ಅಧಃಪತನದತ್ತ ವಾಲಿ ಎಲ್ಲರ ಕುಹಕಕ್ಕೆ ಗುರಿಯಾಗಿ ಬಾಳುವ ಬದಲು ಒಲ್ಲೆಯೆಂದವನ ಬಿಟ್ಟು ಹಳೆ ಬದುಕಿಗೆ ವಿದಾಯ ಹೇಳಬಾರದೆ, ಪದೇ ಪದೇ ಹೇಳುತ್ತಾ ಒತ್ತಾಯಿಸುತ್ತಾ ಪ್ರಯತ್ನ ಮುಂದುವರಿಸಿದೆ. ನನ್ನ ಪ್ರಯತ್ನ ನಿಧಾನವಾಗಿಯಾದರೂ ಫಲಿಸುವಂತೆ ಕಾಣುತ್ತಿತ್ತು.

ಅಂದು ಆಕೆಯ ಗಂಡ ಡೈವೊರ್ಸ್‌ಗಾಗಿ ಪೀಡಿಸಿ, ದೈಹಿಕವಾಗಿಯೂ ಹಲ್ಲೆ ನಡೆಸಿ ರಾದ್ದಾಂತ ಮಾಡಿದ್ದನ್ನು ಕಣ್ಣೀರು ಹರಿಸುತ್ತಲೇ ಹೇಳಿಕೊಂಡಾಗ ಸಿಟ್ಟೇ ಬಂದಿತ್ತು.

‘ಯಾಕೆ ಬೇಕಿತ್ತು ಈ ಕರ್ಮಕಾಂಡವೆಲ್ಲ. ಬೇಡವಾಗಿರುವವನಿಗೆ ಯಾಕೆ ನೀವಿಷ್ಟು ಪ್ರಾಮುಖ್ಯತೆ ಕೊಟ್ಟು ಹೆಣ್ಣುತನನಾ ಸಾಬೀತು ಪಡಿಸ್ತಾ ಇದ್ದೀರಾ. ನಿಮ್ಮಂತ ಹೆಣ್ಣುಗಳಿಂದಲೇ ಹೆಣ್ಣುತನಕ್ಕೆ ಅಪಮಾನ, ಗಂಡು ಕೊಬ್ಬಲು ನಿಮ್ಮಂತವರೇ’ ಕಾರಣ ಜೋರಾಗಿಯೇ ರೇಗಿದೆ. ಬೈಸಿಕೊಳ್ಳುತ್ತಾ ಅತ್ತಳೇ ವಿನಃ ನಿರ್ಧಾರ ಬದಲಿಸುವ ಲಕ್ಷಣವೇ ತೋರಲಿಲ್ಲ.

ಇನ್ನು ನಾನು ಸುಮ್ಮನೇ ಅವಳ ಮನ ಬದಲಿಸುವ ಪ್ರಯತ್ನ ನಡೆಸುತ್ತಾ ಕುಳಿತರೇ ಆಗದು ಎಂದುಕೊಂಡು ಆಗಾಗ್ಗೆ ಅವಳನ್ನು ಭೇಟಿ ಮಾಡುತ್ತಿದ್ದ ತನ್ನ ಸ್ನೇಹಿತ ಎಂದು ಪರಿಚಯಿಸಿದ್ದವರನ್ನು ಫೋನಿನ ಮೂಲಕ ಕಾಂಟೆಕ್ಟ್ ಮಾಡಿದೆ. ಆತನ ಬಗ್ಗೆ ಎಲ್ಲ ವಿವರ ತಿಳಿದುಕೊಂಡು ಮುಂದಡಿ ಇಡಲು ನಿರ್ಧರಿಸಿದೆ.

ಇನ್ನು ಮದುವೆ ಆಗದೆ ಇರೋ ಆತನಿಗೆ ಆಕೆ ಬಗ್ಗೆ ಇರುವ ಒಲವು, ಕಾಳಜಿ ಎಲ್ಲವನ್ನು ಒಮ್ಮೆ ಪರೀಕ್ಷಿಸಿ, ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದೆ. ಆಕೆ ಒಪ್ಪುವುದಾದರೆ ನಾನು ಸಿದ್ಧ ಎಂದಾಗ ಸಂತೋಷ ತಡೆಯಲಾರದೆ ಅತ್ತು ಬಿಟ್ಟೆ.

ನನ್ನ ಪರಿಶ್ರಮ ವ್ಯರ್ಥವಾಗಲಿಲ್ಲ. ಗಂಡನ ದೈಹಿಕ ಹಿಂಸೆಯಿಂದಲೋ, ನನ್ನ ಬಲವಂತದಿಂದಲೋ, ಮತ್ತಾವ ಕಾರಣದಿಂದಲೋ ಡೈವರ್ಸ್‌ಗೆ ಒಪ್ಪಿಬಿಟ್ಟಳು. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದು ನೊಂದ ಹೆಣ್ಣಿನ ಬದುಕಿನಲ್ಲಿ ನವಚೈತ್ರದ ಪಲ್ಲವಿ ಉದಯಿಸಿತು. ಹೊಸ ಬದುಕು ಅವಳದಾಗಲು ನಾ ಪಟ್ಟ ಶ್ರಮ ಒಂದು ಹೋರಾಟವೇ ಆದರೂ ಅದು ಸಫಲವಾಗಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೦೨
Next post ಬದುಕು

ಸಣ್ಣ ಕತೆ