ಪ್ರನಾಳದಲ್ಲಿ ಅರಣ್ಯ ಕೃಷಿ

ಪ್ರನಾಳದಲ್ಲಿ ಅರಣ್ಯ ಕೃಷಿ

ಅರಣ್ಯ-ಪ್ರಕೃತಿ ನಮಗೆ ನೀಡಿರುವ ವರ. ಅದು ಪ್ರಮುಖ ನವೀಕರಿಸುವಂತಹ ನೈಸರ್‍ಗಿಕ ಸಂಪನ್ಮೂಲವಾಗಿದೆ. ಅರಣ್ಯ ನಮಗೆ ಮರ, ಇಂಧನ, ಕಾಗದ ಇತ್ಯಾದಿಗಳನ್ನು ಒದಗಿಸುತ್ತದೆ. ಅದರ ಇನ್ನಿತರ ಉಪಯೋಗವೆಂದರೆ ವನ್ಯಪ್ರಾಣಿ ನೆಲೆ, ಗಾಳಿ ಮತ್ತು ನೀರು ಹರಿಸುವುದು. ಪರಿಸರ ವಿಜ್ಞಾನದ ದೃಷ್ಟಿಯಲ್ಲಿ ನೋಡಿದರೆ, ಅರಣ್ಯವು ಭೂಮಿಯ ಮೇಲೆ ಮಣ್ಣನ್ನು ಕೊಚ್ಚಿಕೊಂಡು ಹೋಗದಂತೆ ತಡೆಯಲು ನೆರವಾಗುತ್ತದೆ. ವಾತಾವರಣದಲ್ಲಿನ ತೇವವನ್ನು ಕಾಪಾಡಿ, ಉಷ್ಣದ ಹೆಚ್ಚುವಿಕೆಯನ್ನು ಕಡಿಮೆ ಮಾಡುವುದರ ಮೂಲಕ ಮೋಡಗಳನ್ನು ಆಕರ್‍ಷಿಸಿ ಮಳೆ ಸುರಿಯಲು ಕಾರಣವಾಗುತ್ತದೆ. ಅದು ಮಹಾಪೂರ, ಅನಾವೃಷ್ಟಿಯನ್ನು ನಿಯಂತ್ರಿಸುತ್ತದೆ.

“ಅರಣ್ಯದಿಂದಲೇ ಮಳೆ, ಮಳೆಯಿಂದಲೇ ಬೆಳೆ”. ಹವಾಮಾನದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದೂ ಅರಣ್ಯವೇ. ವನ್ಯಪ್ರಾಣಿಗಳ ತವರು ಮನೆಯೂ ಅರಣ್ಯವೇ ಆಗಿದೆ. ಅಷ್ಟೇ ಅಲ್ಲ ಹಲವು ಬಗೆಯ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಅರಣ್ಯ ಒದಗಿಸುತ್ತದೆ. ಆದರೆ ಸತತವಾಗಿ ಏರುತ್ತಿರುವ ಜನಸಂಖ್ಯೆಯಿಂದಾಗಿ ಇನ್ನೂ ಹೆಚ್ಚಿನ ಆಹಾರ, ಇಂಧನ ಮತ್ತು ವಾಸಿಸಲು ಜಾಗ ಬೇಕಾಗಿದೆ. ಹಾಗಾಗಿ ಒಕ್ಕಲುತನ ಮತ್ತು ವಾಸಸ್ಥಳದ ಸಲುವಾಗಿ ಅರಣ್ಯವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, ಪ್ರತಿ ನಿಮಿಷಕ್ಕೆ ೨೦ ರಿಂದ ೫೦ ಹೆಕ್ಟೇರ್‌ಗಳಷ್ಟು ಅರಣ್ಯ ಜಗತ್ತಿನಿಂದ ನಾಶವಾಗುತ್ತಿದೆ. ಇದು ವರುಷಕ್ಕೆ ೩.೫ ಮಿಲಿಯನ್ ಹೆಕ್ಟೇರ್‌ಗಳಷ್ಟು.

ಫಾಸಿಲ್ ಇಂಧನವು ಒಂದು ಪರಿಮಿತಿಯಲ್ಲಿದ್ದು, ನವೀಕರಿಸಲಾಗದ್ದು. ಹಾಗಾಗಿ ಅರಣ್ಯ ಉತ್ಪನ್ನಗಳೇ ಇಂಧನದ ಕೊರತೆ ತುಂಬುವ ಏಕೈಕ ಪರ್‍ಯಾಯವಾಗಿವೆ. ಇದೇ ಸಮಯದಲ್ಲಿ, ನಮ್ಮ ಪರಿಸರದಲ್ಲಿ ಸಮತೋಲನವು ತಪ್ಪುತ್ತಿದ್ದು, ಪ್ರತಿವರ್‍ಷ ಆಪತ್ತುಗಳು ಎದುರಾಗುತ್ತಿವೆ.

ಈ ವಿಧಾನದಿಂದ ಅನುವಂಶಿಕವಾಗಿ ತಾಯಿ ಸಸ್ಯಗಳನ್ನು ಹೋಲುವ ಸಸ್ಯಗಳು ಉತ್ಪತ್ತಿಯಾಗುತ್ತವೆ. ಅದೇನೆಂದರೆ ಕೆಲವು ಸಣ್ಣ ಪ್ರಮಾಣದ ಸಸ್ಯಗಳು ಉತ್ಪತ್ತಿಯಾಗಿ ಅವು ಹೊಲಗದ್ದೆ ಅಥವಾ ಅರಣ್ಯದಲ್ಲಿ ನೆಡುವಂತಾಗಲು ವರುಷಗಳೇ ಬೇಕಾಗುತ್ತವೆ. ಕೆಲವು ಬಾರಿ ಈ ವಿಧಾನ ಯಶಸ್ವಿಯೂ ಆಗಲಿಕ್ಕಿಲ್ಲ. ಗಿಡಗಳ ದೀರ್‍ಘ ಕಾಲದ ಜೀವನ ಚಕ್ರದಿಂದ ಉತ್ಕೃಷ್ಟಮಟ್ಟದ ತಳಿಗಳನ್ನು ಉತ್ಪತ್ತಿಮಾಡುವುದು ಬಹು ಆಯಾಸಕರ ಕ್ರಮ. ಸಸ್ಯ ತಳಿಸಂವರ್‍ಧನೆ ಮತ್ತು ಅಭಿವೃದ್ಧಿ ಪಡಿಸುವಂತಹ ಸಂಪ್ರದಾಯ ಪರಂಪರೆಯಿಂದ ಅಂದರೆ ವಂಶಾವಾಹಿ ವಿಕಸನದಿಂದ ಬೆಳವಣಿಗೆಯ ಮಟ್ಟ, ರೋಗನಿರೋಧಕ ಶಕ್ತಿ, ರಾಸಾಯನಿಕಗಳನ್ನು ತಾಳಿಕೊಳ್ಳುವ ಸಾಮರ್‍ಥ್ಯ ಹೊಂದಿರುವ ಮಿಶ್ರತಳಿ ತಯಾರಿಕೆಗೆ ಹಲವು ವರುಷಗಳೇ ಬೇಕಾಗಬಹುದು. ಕೆಲವೊಮ್ಮೆ ಇದು ಸಾಧ್ಯವಾಗದೇ ಇರಬಹುದು.

ಹಾಗೆಯೇ, ಬೀಜಗಳಿಂದ ಅರಣ್ಯ ಗಿಡಗಳನ್ನು ಅಭಿವೃದ್ಧಿಪಡಿಸಲು ಕೆಲವು ಸಮಸ್ಯೆ ಎದುರಾಗುತ್ತವೆ. ಬೀಜಗಳನ್ನು ದೀರ್‍ಘಕಾಲದವರೆಗೆ ಸಂಗ್ರಹಿಸಿಡುವುದರಿಂದಲೂ ಜನನದ್ರವ್ಯ ಸುರಕ್ಷಿತವಾಗಿಡಲು ಸಾಧ್ಯವಾಗುವುದಿಲ್ಲ.

ಇತ್ತೀಚಿನ ವರ್‍ಷಗಳಲ್ಲಿ “ಸಸ್ಯ ಊತಕ ಕೃಷಿ” (Plant Tissue Culture) ಎಂಬ ತಂತ್ರಜ್ಞಾನ ಬೆಳವಣಿಗೆಯಾಗಿದ್ದು, ಇದು ಸಂಪ್ರದಾಯ ಪರಂಪರೆಯ ಸಮಸ್ಯೆಗಳಿಗೆ ಸಮಾಧಾನವಾಗಬಹುದು. ಸಾಂಪ್ರದಾಯಿಕ ಪದ್ಧತಿಯ ತಳಿಗಳನ್ನು ಅಭಿವೃದ್ಧಿಪಡಿಸಲು, ಸಸ್ಯ ಊತಕ ಕೃಷಿಯು ಅತ್ಯಂತ ಸಾಮರ್‍ಥ್ಯವುಳ್ಳದ್ದಾಗಿದೆ. ಈ ತಂತ್ರಜ್ಞಾನವು ಹೊಸ ತಳಿಗಳನ್ನು ಉತ್ಪಾದಿಸುವ ಅವಧಿಯನ್ನು ಮೊಟಕುಗೊಳಿಸಬಹುದು. ಅಷ್ಟೇ ಅಲ್ಲದೆ ಇದು, ಅಧಿಕ ಸಂಖ್ಯೆಯಲ್ಲಿ ಅರಣ್ಯ ಸಸ್ಯಗಳ ಏಕರೂಪ ಸಂತಾನಾಭಿವೃದ್ಧಿಗೆ ಸಹಾಯಕವಾಗಿದೆ. ಊತಕ ಕೃಷಿಯಲ್ಲಿ, ಸಸ್ಯದ ಗುಣನವು ಋತುಕಾಲವಲ್ಲದೇ ವರ್‍ಷವಿಡೀ ವೃದ್ಧಿಸುತ್ತದೆ. ಯಾವುದೇ ಸಸ್ಯದ ವಂಶಾವಳಿಗಳನ್ನು ರಕ್ಷಿಸಿಟ್ಟುಕೊಂಡು, ಆನಂತರ ಈ ಊತಕ ಕೃಷಿಯ ವಿಧಾನದಿಂದ ಇಡೀ ಸಸ್ಯವಾಗಿ ಬೆಳೆಸಬಹುದು. ಹೀಗೆ ಮಿಲಿಯನ್‌ಗಟ್ಟಲೇ ಅರಣ್ಯ ಗಿಡಗಳನ್ನು ಒಂದೇ ಒಂದು ಟೆಸ್ಟ್‌ಟ್ಯೂಬ್ ಅಂದರೆ ಪ್ರನಾಳದಲ್ಲಿ ಸಂಗ್ರಹಿಸಿಡಬಹುದು!

ಅರಣ್ಯಗಾರಿಕೆಯಲ್ಲಿ ಈಗಾಗಲೇ ತಳವೂರಿರುವ ಊತಕ ಕೃಷಿಯ ಕುರಿತು ಒಂದಿಷ್ಟು ತಿಳಿಯೋಣ.

ಊತಕ ಕೃಷಿ (Tissue Culture) ಎಂದರೆ ಜೀವಿಯ ಯಾವುದೇ ಭಾಗ ಅಥವಾ ಅಂಗವನ್ನು ಸರಿಯಾದ ಆರೈಕೆ, ಪೌಷ್ಠಿಕಾಂಶವನ್ನು ಸತತವಾಗಿ ಒದಗಿಸಿ, ಅವನ್ನು ಜೀವಂತವಾಗಿರಿಸುವುದೇ ಅಲ್ಲದೇ, ಅದು ಕೋಶಿಕಾ ವಿಭಜನೆಯಿಂದ ಬೇಕಾದ ರೀತಿ ರೂಪಾಂತರ ಹೊಂದುವಂತೆ ಮಾಡಬಹುದಾದ ವ್ಯವಸಾಯ.

ಸಸ್ಯ ಊತಕ ಕೃಷಿಗಾಗಿ ಪೌಷ್ಠಿಕಾಂಶಗಳನ್ನು ನಿರ್‍ದಿಷ್ಟವಾಗಿ ಬೆರೆಸಿರುವ ಮಾಧ್ಯಮ ಉಪಯೋಗಿಸಬೇಕಾಗುತ್ತದೆ. ಊತಕ ಕೃಷಿಗಾಗಿ ಅನೇಕ ಬಗೆಯ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತಿದ್ದು, ಅವುಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮಾಧ್ಯಮವೆಂದರೆ “ಮುಸ್ಕೂ” (Murashige and Skoog Medium)

ಮಾಧ್ಯಮದಲ್ಲಿ ಪ್ರತಿಯೊಂದು ರಾಸಾಯನಿಕ ವಸ್ತುವು ಗೊತ್ತಾದ ಪರಿಮಾಣಗಳ ಮಿತಿಯಲ್ಲಿರುತ್ತದೆ. ಮಾಧ್ಯಮದಲ್ಲಿ ಜೀವಸತ್ವಗಳು, ಅಮೀನೋ ಆಮ್ಲಗಳು, ನೈಟ್ರೋಜನ್ ಮತ್ತು ವಿಟಮಿನ್‌ಗಳನ್ನು ಬಳಸಲಾಗುತ್ತದೆ. ಬೆಳವಣಿಗೆಗೆ ಅತಿ ಮುಖ್ಯವಾಗಿ ಬೇಕಾಗುವ ಪ್ರಚೋದಕಗಳಾದ ಆಕ್ಸಿನ್‌ಗಳು, ಸೈಟೋಕೈನಿನ್‌ಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸಲಾಗುತ್ತದೆ.

ವಂಧ್ಯಕರಣದ ವಿಧಾನ

ಊತಕ ಕೃಷಿಗಾಗಿ ಬಳಸಲ್ಪಡುವ ಸಸ್ಯದ ಭಾಗಗಳು ಹಾಗೂ ಪ್ರತಿಯೊಂದು ಗಾಜಿನ ಸಾಮಾನುಗಳನ್ನು ಮತ್ತು ಸ್ಟೆನ್‌ಲೆಸ್ ಸ್ಟೀಲ್ ಉಪಕರಣಗಳನ್ನು ವಂಧ್ಯಕರಿಸಬೇಕು. ಅವನ್ನು ಆಲ್ಕೋಹಾಲ್‌ನಲ್ಲಿ ತೊಳೆದು, ಬಿಸಿನೀರಿನಲ್ಲಿ ಶುಭ್ರಗೊಳಿಸಿ, ಶಾಖ ಪೆಟ್ಟಿಗೆಯಲ್ಲಿ ೩ ರಿಂದ ೪ ಗಂಟೆಗಳವರೆಗೆ ೧೫೦ ಡಿಗ್ರಿ ಸೆ. ನಷ್ಟು ಶಾಖ ಕೊಡಬೇಕು.

ಸಸ್ಯಭಾಗದ ವಂಧ್ಯಕರಣ

ಸಸ್ಯದ ಯವುದೇ ಕಾಯಿಕ ಭಾಗ ಅಥವಾ ಎಳಸು ಎಲೆಗಳನ್ನು ಉಪಯೋಗಿಸಬಹುದು. ಊತಕ ಕೃಷಿಗಾಗಿ ಬಳಸಬೇಕಾಗಿರುವ ಸಸ್ಯಗಳ ಭಾಗವನ್ನು ಸಸ್ಯದಿಂದ ಬೇರ್‍ಪಡಿಸಿ, ಈ ಮುಂದೆ ಹೇಳುವಂಥೆ ವಿವಿಧ ಹಂತಗಳಲ್ಲಿ ವಂಧ್ಯಕರಿಸಬೇಕು.

ಆನಂತರ ಅವನ್ನು ಶೇ.೫ ರ ಡಿಟರ್‍ಜೆಂಟ್ ದ್ರಾವಣದಲ್ಲಿ ೧೦ ನಿಮಿಷಗಳವರೆಗೆ ನೆನಸಿಡಬೇಕು. ನೀರಿನಿಂದ ತೊಳೆಯಬೇಕು.

ಸಸ್ಯಭಾಗವನ್ನು ಶೇ. ೭೦ರಲ್ಲಿ ಮಧ್ಯಸಾರ ದ್ರಾವಣದಲ್ಲಿ ೩೦ ಸೆಕೆಂಡಿನವರೆಗೆ ಇಟ್ಟು, ತೆಗೆದು, ೧೦ ರಿಂದ ೧೫ ನಿಮಿಷಗಳವರೆಗೆ ಸೋಡಿಯಂ ಹೈಪೋಕ್ಲೋರೈಡ್‌ನಲ್ಲಿ ಚೆನ್ನಾಗಿ ತೊಳೆದು, ಅನಂತರ ಕೋಶವನ್ನು ಬೇರ್‍ಪಡಿಸಿ ಕೃಷಿಗಾಗಿ ಉಪಯೋಗಿಸಿಕೊಳ್ಳಬೇಕು.

ಕೃಷಿಯ ಸಮಯದಲ್ಲಿ ಸೂಕ್ಷ್ಮಕ್ರಿಮಿ ಪ್ರವೇಶಿಸದಂತೆ ಬಹು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಹಾಗಾಗಿ ಪೂತಿರಹಿತ ಸ್ಥಿತಿಯಲ್ಲಿ ಕೃಷಿಮಾಡಬೇಕು.

ವಂಧ್ಯಕರಿಸಿದ ಎಲ್ಲ ಉಪಕರಣಗಳನ್ನು ಇನ್ಯಾಕುಲೇಶನ್ ಪೆಟ್ಟಿಗೆಯ ಕ್ರಿಮಿಶುದ್ಧೀಕಾರಕ ಮೇಜಿನ ಮೇಲೆ ಇಡಬೇಕು.

ಅಲ್ಟ್ರಾವಯೋಲೆಟ್ ದೀಪದ ಸ್ವಿಚ್ಚನ್ನು ಕೆಲಸ ಶುರುಮಾಡುವ ಒಂದು ಗಂಟೆಗಿಂತ ಮುಂಚೆ ಹಾಕಿಡಬೇಕು ಹಾಗೂ ಕೆಲಸ ಶುರುಮಾಡುವ ೧೫ ನಿಮಿಷಗಳ ಮೊದಲು ಕ್ರಿಮಿಶುದ್ಧಿಕಾರಕ ಸ್ವಿಚ್ಚು ಹಾಕಬೇಕು.

ಊತಕ ಕೃಷಿಯ ಕೊಠಡಿಯನ್ನು ಪ್ರವೇಶಿಸುವ ಮುನ್ನ ಅಲ್ಟ್ರಾವಯೋಲೆಟ್ ದೀಪ ಆರಿಸಬೇಕು. ಆದರೆ ಕ್ರಿಮಿಶುದ್ಧೀಕಾರಕ ಸ್ವಿಚ್ಚು ತೆಗೆಯಬಾರದು. ಕ್ರಿಮಿಶುದ್ಧೀಕಾರಕದ ಮೇಜನ್ನು ಆಲ್ಕೋಹಾಲ್‌ನಿಂದ ಒರೆಸಬೇಕು.

ಆಲ್ಕೋಹಾಲ್‌ನಿಂದ ಕೈ ತೊಳೆದುಕೊಂಡು ಒಣಗಲು ಬಿಡಬೇಕು.

ಆಲ್ಕೋಹಾಲ್‌ನ್ನು ಹೊಂದಿರುವ ಜಾರ್‌ನಲ್ಲಿ ಉಪಕರಣಗಳನ್ನು ಅದ್ದಿಡಬೇಕು. ದೀಪ ಹೊತ್ತಿಸಿ, ವಂಧ್ಯಕರಿಸಿದ ಸಸ್ಯದ ಭಾಗವನ್ನು ಪೆಟ್ರಿಪ್ಲೇಟ್‌ನಲ್ಲಿ ಇಡಬೇಕು.

ಪ್ರನಾಳ ತುದಿಯನ್ನು ಜ್ವಾಲೆಯ ಹತ್ತಿರ ತಂದು ಮುಚ್ಚಳಿಕೆ ತೆಗೆಯಬೇಕು. ಊತಕವನ್ನು ಪ್ರನಾಳದಲ್ಲಿಯ ಮಾಧ್ಯಮದಲ್ಲಿ ಇಟ್ಟು ಮತ್ತೆ ಮುಚ್ಚಳ ಮುಚ್ಚಬೇಕು.

ಕೃಷಿಯ ಕೆಲಸವಾದ ನಂತರ ಎಲ್ಲ ಕೃಷಿಕೆಗಳನ್ನು ಬೆಳಕು, ಶಾಖ ಮತ್ತು ತೇವಾಂಶಗಳನ್ನು ನಿಯಂತ್ರಿಸಲಾಗುವ ಕೊಠಡಿಯಲ್ಲಿ ಇಡಬೇಕು.

ಅರಣ್ಯಗಾರಿಕೆಯಲ್ಲಿ ತಳವೂರಿರುವ ಸಸ್ಯ ಊತಕ ಕೃಷಿಯ ಕುರಿತು ತಿಳಿಯೋಣ.

೧. ಸೂಕ್ಷ್ಮ ಅನುವಂಶಿಕ ಕೃಷಿ (Micropropagation)
೨. ಜೀವಕೋಶ ಕೃಷಿ (Meristem Culture)
೩. ಭ್ರೂಣ ಕೃಷಿ (Embryo Culture) ಮತ್ತು
೪. ಬರಿಮೈ ಕೋಶ ಮತ್ತು ಕಾಯಕ ಸಂಕರಣ (Protoplast and Somatic Hybridisation)

ಸೂಕ್ಷ್ಮ ಅನುವಂಶಿಕ ಕೃಷಿ

ವರ್‍ಧನೋತಕ ಅಂಗಾಂಶಗಳ ಜೀವಕೋಶಗಳನ್ನು ಸೂಕ್ಷ್ಮ ಅಂಗಚ್ಛೇದ ವಿಧಾನದಿಂದ ಬೇರ್‍ಪಡಿಸಿ, ನಿರ್‍ಧಿಷ್ಟ ಜೈವಿಕ ಮಾಧ್ಯಮದಲ್ಲಿ ಬೆಳೆಸಿದಾಗ ಮೂಲ ಕೋಶ ಗಡ್ಡೆಗಳಾಗಿ ಮಾರ್‍ಪಾಡಾಗುವುದು. ಇಂಥ ಗಡ್ಡೆಗಳ ಕೋಶಗಳನ್ನು ಪುನಃ ಬೇರ್‍ಪಡಿಸಿ ಹೊಸ ಮಾಧ್ಯಮಕ್ಕೆ ವರ್‍ಗಾಯಿಸಿದರೆ, ಅಲ್ಪಕಾಲದಲ್ಲೇ ಒಂದೇ ಅನುವಂಶಿಕ ಗುಣವುಳ್ಳ ಸಾವಿರಾರು ತಳಿಗಳನ್ನು ಎಬ್ಬಿಸಬಹುದು.

ಉದಾಹರಣೆಗೆ ತೇಗವು ಭಾರತ ಮತ್ತು ನೆರೆಯ ದೇಶಗಳಲ್ಲಿ ಬಹು ಪ್ರಮುಖವಾದ ಚೌಬಿನೆ ಮರವಾಗಿದೆ. ಅದರ ಕಟ್ಟಿಗೆಯು ಗಟ್ಟಿತನ, ಬಾಳಿಕೆ ಮತ್ತು ಕೀಟ ನಿರೋಧಕ ಗುಣಗಳಿಗೆ ಹೆಸರುವಾಸಿ. ಅದರಂತೆಯೇ ನೀಲಗಿರಿ ಮರವೂ ಕೂಡ ಕಟ್ಟಿಗೆ ಮತ್ತು ಎಲೆಯಿಂದ ಬೇರ್‍ಪಡಿಸುವ ತೈಲಕ್ಕಾಗಿ ಬೆಲೆಬಾಳುವುದಾಗಿ ಕತ್ತರಿಸುವಿಕೆ (Cutting) ವಿಧಾನದಿಂದ ಈ ಗಿಡಗಳನ್ನು ಆಭಿವೃದ್ಧಿಗೊಳಿಸುವುದು ಸಾಧ್ಯವಾಗಿಲ್ಲ. ಆದರೆ ಸೂಕ್ಷ್ಮ ಅನುವಂಶಿಕ ವೃದ್ಧಿಯಿಂದ ಕೇವಲ ಒಂದೇ ಒಂದು ಕುಡಿಯನ್ನು ಉಪಯೋಗಿಸಿ ವರುಷಕ್ಕೆ ೫೦೦ ತೇಗದ ಮತ್ತು ೧೦೦,೦೦೦ ನೀಲಗಿರಿಯ ಸಸ್ಯಗಳನ್ನು ಪಡೆಯಲಾಗುತ್ತದೆ. ಹೀಗೆ ಈ ವಿಧಾನದಿಂದ ಅಸಂಖ್ಯಾತ ಸಂಖ್ಯೆಯ ಸಸ್ಯಗಳನ್ನು ವೃದ್ಧಿಸಿ ಪುನರ್‍ ಅರಣ್ಯೀಕರಣದ ಕೊರತೆಯನ್ನು ನೀಗಿಸಬಹುದು ಹಾಗೂ ಮುಂಬರುವ ಪೀಳಿಗೆಗೆ ಚೌಬಿನ, ತೈಲ, ಉರುವಲು ಮತ್ತು ಕಾಗದ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಒದಗಿಸಬಹುದು.

ಜೀವಕೋಶ ಕೃಷಿ

ಮೆರಸ್ಟಮ್ಯಾಟಿಕ್ (Meristematic Tissue) ಟಿಶ್ಯೂಗಳ ವಿಭಜನಾ ಶಕ್ತಿಯುಳ್ಳ ಅಂಗಾಂಶಗಳು. ಇದನ್ನು ಸಸ್ಯಾಂಗದ ಸ್ಥಾನಕ್ಕನುಗುಣವಾಗಿ ಅಗ್ರಸ್ಥ, ಮಧ್ಯಸ್ಥ ಮತ್ತು ಪಾರ್‍ಶ್ವಸ್ಥ (Apical, Intercalary and Lateral) ಮೆರಿಸ್ಟಮ್ ಗಳೆಂದು ಗುತುತಿಸಬಹುದು. ಇವೆಲ್ಲವೂ ಅವಿರತ ವಿಭಜನಾ ಸಾಮರ್‍ಥ್ಯ ಹೊಂದಿದ್ದು ಸಸ್ಯಗಳ ನಿರಂತರ ಬೆಳವಣಿಗೆಗೆ ಸಹಾಯಕವಾಗುತ್ತದೆ. ಈ ಊತಕಗಳನ್ನು ಬೇರ್‍ಪಡಿಸಿ, ವಿಶೇಷವಾಗಿ ಜೈವಿಕ ತಂತ್ರಜ್ಞಾನವನ್ನು ಬಳಸಿ, ವೈರಸ್ ರಹಿತವನ್ನಾಗಿ ಮಾಡಿ ವೃದ್ಧಿಸಬಹುದು. ಸಾಮಾನ್ಯವಾಗಿ ಅಗ್ರಸ್ಥ ಜೀವಕೋಶವು ವೈರಸ್ ರಹಿತವಾಗಿರುವುದರಿಂದ, ಈ ವಿಧಾನವನ್ನು ಉಪಯೋಗಿಸಿ ವೈರಸ್‌ರಹಿತವಾದ ಸಸ್ಯಗಳನ್ನು ವೃದ್ಧಿಸಬಹುದು.

ಉದಾಹರಣೆಗೆ: ಮರಗೆಣಸು ಸಸ್ಯಕ್ಕೆ ಆಫ್ರಿಕನ್ ಮಚ್ಚೆರೋಗ ಮತ್ತು ಕಂದುಬಣ್ಣದ ಪಟ್ಟಿರೋಗಗಳು ಎಂಬ ಎರಡು ರೋಗಗಳು ಸಾಮಾನ್ಯವಾಗಿ ಹರಡುತ್ತವೆ. ಈ ವೈರಸ್‌ಗಳ ಆಕ್ರಮಣದಿಂದ ಸಸ್ಯವು ಸಾಯುವುದಿಲ್ಲವಾದರೂ, ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಅಗ್ರಸ್ಥ ಜೀವಕೋಶ ಕೃಷಿ ವಿಧಾನದಿಂದ ವೈರಸನ್ನು ಹತೋಟಿಯಲ್ಲಿಡಬಹುದು. ಅಲ್ಲದೇ, ಅಧಿಕ ಇಳುವರಿ ಪಡೆಯಬಹುದು. ಒಂದೇ ಒಂದು ಅಗ್ರಸ್ಥ ತುದಿಯಿಂದ ಅಸಂಖ್ಯಾತ ಸಸ್ಯಗಳನ್ನು ಪಡೆಯಬಹುದು.

ಭ್ರೂಣ ಕೃಷಿ

ಈ ವಿಧಾನದಿಂದ ಬೇರೆ ಪ್ರಭೇದದ ಸಸ್ಯಗಳನ್ನು ಮಿಶ್ರ (Cross) ಮಾಡಲಾಗುತ್ತದೆ. ಕೆಲವು ಸಂದರ್‍ಭಗಳಲ್ಲಿ ಭ್ರೂಣವು ಕುರುಟಿ ಹೋಗಬಹುದು. ಭ್ರೂಣ ಕೃಷಿ, ವಿಧಾನದಿಂದ ಪರಾಗಸ್ಪರ್‍ಶದ ನಂತರದ ಹೊಂದಿಕೊಳ್ಳದಿರುವಿಕೆಯಿಂದ ಪಾರಾಗಲು ಶಕ್ಯವಾಗುತ್ತದೆ ಮತ್ತು ಸಸ್ಯ ಜಾತಿಯ ಅನುವಂಶಿಕ ಮೂಲವು ಮಹತ್ತರವಾಗಿ ವಿಕಸನವಾಗುತ್ತದೆ. ಈ ವಿಧಾನವನ್ನು ಕಟ್ಟಿಗೆಯ ಗುಣಮಟ್ಟ ತೈಲಪ್ರಮಾಣ ಇತ್ಯಾದಿ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಉಪಯೋಗಿಸಬಹುದು.

ಬರೀಮೈ ಕೋಶ ಮತ್ತು ಕಾಯಕ ಸಂಕರಣ

ಸಸ್ಯ ಜೀವಕೋಶಗಳು ಪ್ರಾಣಿಗಳ ಜೀವ ಕೋಶಗಳಿಗಿಂತ ಭಿನ್ನವಾಗಿರುತ್ತವೆ. ಇವು ಸೂಕ್ಷ್ಮ ಪೊರೆಯೇ (Plasma Membrane) ಅಲ್ಲದೇ ಗಡುಸಾದ ಸೆನ್ಯುಲೋಸ್‌ನ ಕೋಶಭಿತ್ತಿ (Cell Wall) ಯನ್ನೂ ಹೊಂದಿರುತ್ತವೆ. ಈ ಕೋಶಭಿತ್ತಿಯನ್ನು ಯಾಂತ್ರಿಕವಾಗಿ ಸೂಕ್ಷ್ಮ ಚಿಕಿತ್ಸೆಯಿಂದ ಅಥವಾ ಕಿಣ್ವಗಳ ಬಳಕೆಯಿಂದ ಬೇರ್‍ಪಡಿಸಿದಾಗ ಜೀವರಸ (Protoplasm) ತೆಳು ಪೊರೆಯಿಂದ ಮಾತ್ರ ಆವೃತವಾಗಿರುವುದು. ಹೀಗೆ ಕೋಶಭಿತ್ತಿಯನ್ನು ಬೇರ್‍ಪಡಿಸಿದ ಎರಡು ಕೋಶಗಳ ನಡುವೆ ಸಂಪರ್‍ಕ ಕಲ್ಪಿಸಿದಾಗ ಹೊಸ ತಳಿಯೊಂದನ್ನು ಪಡೆಯಬಹುದು. ಅಡ್ಡತಳಿ ಪ್ರಯೋಗಗಳಲ್ಲಿ ಕಣಬೀಜಗಳ ಸಂಕರ ಸಾಧ್ಯ. ಆದರೆ ಬರೀಮೈ ಕೋಶ ತಳಿಯಲ್ಲಿ ಯಾವುದೇ ಎರಡು ಶಾರೀರಿಕ ಕೋಶಗಳ ನಡುವೆ ಸಂಪರ್‍ಕ ಕಲ್ಪಿಸಿ, ಹೊಸ ಸಂಕರ ತಳಿಯನ್ನು ಸೃಷ್ಟಿಸಬಹುದು. ಈ ವಿಧಾನದಿಂದ ಅರಣ್ಯ ಗಿಡಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

ಜಾಲಿ, ಸಿರಸ್ಸ, ಬೇವು, ಕೆಂಪು ಕಂಚುವಾಳ, ಮುತ್ತುಗ, ಬೇಟೆ, ಪೋಪುಲಾರ ಗಿಡಗಳು, ನೀಲಗಿರಿ, ಅಕಳಿ ಮರ, ಹಿಪ್ಪುನೇರಳೆ, ಅಶ್ವಕರ್‍ಣ, ತೇಗ, ರಾಯಿ, ಖಾಸಿ ಪಾಯಿನ್ ಮುಂತಾದ ಗಿಡಗಳ ಅರಣ್ಯಗಳನ್ನು ಪ್ರನಾಳಗಳಲ್ಲಿ ಬೆಳೆಸಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ಯೋಗಿಯ ತೊಳಲಾಟ
Next post ಪ್ರೀತಿಗೊಂದು ಹೆಸರು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…