ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು
ಚಿತ್ರಿಸಿದೆ ಈ ಕಣ್ಣು ಚಿತ್ರಕಾರನ ಹಾಗೆ ;
ನನ್ನ ಮೈಕಟ್ಟು ಬಳಸಿದೆ ನಿನ್ನ ಚಿತ್ರವನು,
ಸಾಕ್ಷಿಯಾಗಿದೆ ಚಿತ್ರ ಬಹು ಮಹೋನ್ನತ ಕಲೆಗೆ,
ನಿನ್ನ ನಿಜವ್ಯಕ್ತಿತ್ವ ರೂಪ ಪಡೆದಿರುವ ಬಗೆ
ತಿಳಿಯುವುದು ಚಿತ್ರಕಾರನ ಕಲೆಯ ಹಿರಿಮೆಯೊಳು.
ಚಿತ್ರ ತೂಗಿದೆ ಹೃದಯದಂಗಡಿಯ ಭಿತ್ತಿಗೆ,
ನಿನ್ನ ಕಣ್ಣೋ ಅದಕೆ ತೆರೆದಿರುವ ಕಿಟಕಿಗಳು.
ಕಣ್ಣು ಕಣ್ಣಿಗೆ ಕೊಟ್ಟ ನೆರವ ಕಂಡೆಯ ನೀನು ?
ನನ್ನ ಕಣ್ಣುಗಳು ಕೊರೆದಿವೆ ನಿನ್ನ ರೂಪವನು
ನಿನ್ನಕ್ಷಿ ನನ್ನೆದೆಗೆ ತೆರೆದಿದೆ ಗವಾಕ್ಷಿಯನು
ನೋಡಿ ಖುಷಿಪಡಲು ರವಿ ಅದರೊಳಗೆ ಹಣಿಕುವನು.
ಕಣ್ಣಿಗೀ ಅರಿವಿಲ್ಲ, ಬಿಂಬಗಳ ಕಾಣುವುವು
ಕಂಡಷ್ಟೆ ಗ್ರಹಿಸಿ ಹೃದಯವ ಕಾಣದಿರುವುವು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 24
Mine eye hath played the painter and hath stelled