ರಾವಣಾಂತರಂಗ – ೨೦

ರಾವಣಾಂತರಂಗ – ೨೦

ಅತಿಕಾಯನ ಅವಸಾನ

ಕುಂಭಕರ್ಣನ ಮರಣವಾರ್ತೆ ನನ್ನ ಕಿವಿಗೆ ಕಾದಸೀಸವನ್ನು ಹೊಯ್ದಂತಾಯಿತು. ಎಲ್ಲರೂ ಕೈಬಿಟ್ಟು ಹೋಗುತ್ತಿದ್ದಾರೆ. ಧೂಮ್ರಾಕ್ಷ, ರುಧಿರಾಸುರ, ಪ್ರಹಸ್ತ, ಈಗ ಕುಂಭಕರ್ಣ ನಾಳೆ ಇನ್ಯಾರೋ ಹೋಗಲಿ ಎಲ್ಲರೂ ಸಾಯಲಿ, ಲಂಕೆಯೇ ನಿರ್ನಾಮವಾಗಲಿ ನನ್ನ ಹಠಕ್ಕೆ ನನ್ನ ಛಲಕ್ಕೆ ಎಲ್ಲರೂ ನಾಶವಾಗಲಿ, ಕೊನೆಗೆ ನಾನು ಪ್ರಚಂಡ ರಾವಣ, ನನ್ನ ಪ್ರಚಂಡ ಮಗ ಇಂದ್ರಜಿತ್ತು ಎಲ್ಲರೂ ರಾಮ ಬಾಣಕ್ಕೆ ಬಲಿಯಾಗಲಿ, ಇದನ್ನು ತಾನೇ ಇಡೀ ಜಗತ್ತು ಬಯಸುವುದು ನನ್ನ ಸಾವನ್ನೇ ತಾನೇ ದೇವತೆಗಳು ಎದುರು ನೋಡುತ್ತಿರುವುದು, ನೋಡಲಿ, ನನ್ನ ಹಾಗೂ ನನ್ನ ಮಕ್ಕಳ ಸಾವನ್ನು ನೋಡಲಿ !! ಆನಂದ ಪಡಲಿ ಹೊಟ್ಟೆ ತುಂಬಾ ಹಾಲು ಕುಡಿಯಲಿ, ಆಹಾ! ಆಹಾ! ಹುಚ್ಚನಂತೆ ನಗತೊಡಗಿದೆ. ನನ್ನ ನಗು ಅರಮನೆಯನ್ನು ದಾಟಿ ಊರೆಲ್ಲಾ ಪ್ರತಿಧ್ವನಿಸಿತು. ಸೇವಕರು ಗರಬಡಿದವರಂತೆ ನಿಂತಿದ್ದರು. ನಕ್ಕು ನಕ್ಕು ಸುಸ್ತಾಗಿ ಕುಸಿದು ಕುಳಿತೆ. ನಾಳೆ ಯುದ್ಧದ ಸಿದ್ಧತೆ ಮಾಡಬೇಕು. ಶತ್ರುಗಳು ಕಾಯುತ್ತಿರುತ್ತಾರೆ. ಮುಂದಿನ ಬಲಿಗೆ ರಾವಣ ಯಾರನ್ನು ಕಳಿಸುತ್ತಾನೆಂದು ಲೆಕ್ಕ ಹಾಕುತ್ತಿರಬಹುದು. ಅವರಿವರನ್ನು ಕಳಿಸುವ ಬದಲು ನಾನೇ ಹೋಗಿದ್ದರೆ ಯುದ್ಧ ಸಮಾಪ್ತಿಯಾಗುತ್ತಿತ್ತು ನನ್ನ ಅವಸಾನದೊಂದಿಗೆ. ಆದರೆ ನಾನು ಸ್ವಾರ್ಥಿಯಾಗಿ ಬಿಟ್ಟೆ, ಕಡುಮೂರ್ಖನಾದೆ. ಸಾವಿಗೆ ಹೆದರಿ ಒಬ್ಬೊಬ್ಬರನ್ನೇ ಆಹುತಿ ತೆಗೆದುಕೊಂಡೆ. ಇನ್ನುಳಿದವರು. ಮೂರು. ನಾನು ಇಂದ್ರಜಿತ್ತು, ಅತಿಕಾಯ. ಓ ಯಮರಾಜಾ, ಯಾರು ಹಿತವರು ಮೊದಲಿಗೆ ಮೂವರೊಳಗೆ ಬೇಡಾ! ಬೇಡಾ! ಮಕ್ಕಳನ್ನು ಕಳಿಸಿ ಪ್ರಯೋಗ ಮಾಡುವುದು ಬೇಡ, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ಅಳೆದಂಗಾಗುತ್ತದೆ. ಮಡದಿಯರ ಕೋಪಾಗ್ನಿಗೆ ತುತ್ತಾಗುವುದಕ್ಕಿಂತ ಮಕ್ಕಳ ಸಾವನ್ನು ಕಂಡು ನಾನು ಸಾಯುವುದು ಬೇಡಾ! “ಪುತ್ರಶೋಕ ನಿರಂತರಂ” ಎನ್ನುವಂತೆ ಆಗುವುದು ಬೇಡ. ಮಕ್ಕಳೇ ತಂದೆತಾಯಿಗಳಿಗೆ ಕೊಳ್ಳಿ ಪಿಂಡ ಹಾಕಬೇಕು. ಅದು ಬಿಟ್ಟು ನಾನೇ ನನ್ನ ಕೈಯಾರ ಮಕ್ಕಳನ್ನು ಮಾರಿಗೊಪ್ಪಿಸಿ ನಿಶ್ಚಿಂತನಾಗಿರಲು ಹೇಗೆ ಸಾಧ್ಯ! ಅತಿಕಾಯನ ಹೆಂಡತಿ ಮಗುವಿನ ತಾಯಿ, ಇಂದ್ರಜಿತುವಿನ ಹೆಂಡತಿ ಗರ್ಭಿಣಿ ತಮ್ಮ ಗಂಡಂದಿರು ಪಕ್ಕದಲ್ಲಿರಲೆಂದು ಸರ್ವಥಾಬಯಸುತ್ತಾರೆ. ಅದೂ ಅಲ್ಲದೆ ಇಂದ್ರಜಿತ್ತು ತನಗೆ ಮರಣವೇ ಬಾರದಂತೆ ವರಪಡೆಯಲು ನಿಕುಂಬಳಾ ಯಾಗದಲ್ಲಿ ತೊಡಗಿದ್ದಾನೆ. ಅವನ ಸಾಧನೆಗೆ ಅಡ್ಡಿ ಮಾಡಬಾರದು. ನನಗೇನಾದರೂ ಚಿಂತೆಯಿಲ್ಲ. ಇಂದ್ರಜಿತ್ತು ಪ್ರೀತಿಯ ಮಂಡೋದರಿಯ ಪುತ್ರ ಅವನು ನೂರಾರು ವರ್ಷ ಬಾಳಬೇಕು. ಇನ್ನು ಅತಿಕಾಯ ಪ್ರಿಯಪತ್ನಿ ಧ್ಯಾನಮಾಲಿನಿಯ ಒಬ್ಬನೇ ಮಗ ಅವನಿಗೇನಾದರೂ ಆದರೆ ಒಡೆದು ಸಾಯುತ್ತಾಳೆ. ಈಗಾಗಲೇ ಅಕ್ಷಯಕುಮಾರನನ್ನು ಕಳೆದುಕೊಂಡ ನೋವು ವಾಸಿಯಾಗಿಲ್ಲ. ಮಂಡೋದರಿಯ ಆಗ್ರಹಕ್ಕೆ ಪಾತ್ರನಾಗಿ ಅವಳ ಮುಖದರ್ಶನವೇ ಇಲ್ಲವಾಗಿದೆ. ಹೀಗಿರುವಾಗ ಯಾರನ್ನು ರಣರಂಗಕ್ಕೆ ಕಳಿಸದೆ ಹೊರಡಬೇಕು. ಯುದ್ಧವನ್ನು ಸಮಾಪ್ತಿ ಮಾಡಬೇಕು ಎಂದು ನಾಳಿನ ಯುದ್ಧಕ್ಕೆ ದಳಪತಿಗಳನ್ನು ಕರೆದು ಸಲಹೆ ಸೂಚನೆಗಳನ್ನು ತಿಳಿಸಿದೆ. ಅದು ಹೇಗೋ ವಿಷಯ ತಿಳಿದು ಅತಿಕಾಯನು ನನ್ನೆಡೆ ಬಂದು “ಅಪ್ಪಾಜಿ ನಾನಿರುವಾಗ ನೀವು ಯುದ್ಧಕ್ಕೆ ಹೋಗಬೇಕೆ? ಮಕ್ಕಳಿಬ್ಬರು ಮನೆಯೊಳಗೆ ಮಡದಿಯರ ಪಕ್ಕದಲ್ಲಿದ್ದು ವಯಸ್ಸಾದ ತಂದೆಯನ್ನು ಯುದ್ಧಕ್ಕೆ ಕಳಿಸಿದರು ಎನ್ನುವ ಅಪಕೀರ್ತಿ ಬರುವುದಿಲ್ಲವೇ ನನಗಪ್ಪಣೆ ಕೊಡಿ ನಾಳಿನ ಯುದ್ಧವನ್ನು ನಾನು ಪೂರೈಸುತ್ತೇನೆ.”

ಬೇಡ ಕುಮಾರ ನೀನಿನ್ನು ಚಿಕ್ಕವನು ಸಾಧು ಸ್ವಭಾವದವನು ಶಸ್ತ್ರಾಸ್ತ್ರಗಳ ಪರಿಚಯ, ಅನುಭವ ನಿನಗಿಲ್ಲ ಹೆಚ್ಚು ಯುದ್ಧಗಳನ್ನು ಮಾಡಿ ಅಭ್ಯಾಸವಿಲ್ಲ. ನೀನೇನಾದರೂ ಯುದ್ಧಕ್ಕೆ ಹೋದರೆ ನಿನ್ನ ತಾಯಿ ಸುಮ್ಮನೆ ಬಿಡುವುದಿಲ್ಲ. ಹೋಗು ಮುದ್ದು ಮಗುವಿನೊಂದಿಗೆ ಆಟವಾಡು, ನಾನೇ ರಣರಂಗಕ್ಕೆ ಹೋಗಿ ವೈರಿಗಳನ್ನು ಕೊಚ್ಚಿ ಹಾಕುತ್ತೇನೆ.”

“ನೀವು ನನ್ನ ಮೇಲಿನ ಪ್ರೀತಿಯಿಂದ ಹೀಗೆಲ್ಲಾ ಮಾತನಾಡುತ್ತಿರುವಿರಿ. ನಾನು ಎಲ್ಲಾ ರೀತಿಯ ವಿದ್ಯೆಗಳನ್ನು ರಣತಂತ್ರಗಳನ್ನು ತಿಳಿದಿದ್ದೇನೆ. ವೇದವೇದಾಂತ ತತ್ವಗಳನ್ನು ಬಲ್ಲ ಮಹಾಪಂಡಿತನು ನಾನು. ನಿಮ್ಮಂತೆಯೇ ತಪಸ್ಸು ಮಾಡಿ ದೇವಾನುದೇವತೆಗಳಿಂದ ಮರಣ ಬಾರದಂತೆ ವರ ಪಡೆದಿದ್ದೇನೆ. ಅಣ್ಣನೊಂದಿಗೆ ಇದ್ದು ಶಸ್ತ್ರಾಸ್ತ್ರಗಳ ಪರಿಚಯ ಮಾಡಿಕೊಂಡಿದ್ದೇನೆ. ಚಿಕ್ಕವನೆಂದು ಉದಾಸೀನ ಮಾಡಬೇಡಿ, ನನ್ನ ಆಶೀರ್ವದಿಸಿ ಕಳುಹಿಸಿಕೊಡಿ” ನಾನೆಷ್ಟೆ ಬೇಡವೆಂದರೂ ಅತಿಕಾಯಕೇಳಲಿಲ್ಲ. ನಾನೇ ಹೋಗುತ್ತೇನೆಂದು ಮಕ್ಕಳಂತೆ ಹಠಮಾಡಿದನು. ಅವನ ಹಠಕ್ಕೆ ಮಣಿದು ಒಪ್ಪಲೇಬೇಕಾಯಿತು.

“ಮಗನೇ ಧೈರ್ಯವಾಗಿ ಶತುಗಳನ್ನು ಎದುರಿಸಿ ರಾಮಲಕ್ಷ್ಮಣರಲ್ಲಿ ಒಬ್ಬರನ್ನು ಕೊಂದು ಬಾ ನಿನಗೆ ಮಂಗಳವಾಗಲಿ” ರಣವೀಳ್ಯ ನೀಡಿ ಅವನ ಸಂಗಡ ಲಕ್ಷಾನುಲಕ್ಷ ರಕ್ಕಸರ ಸೈನ್ಯವನ್ನು ಬೆಂಗಾವಲಿಗೆ ಕಳುಹಿಸಿ, ಅತಿಕಾಯನಿಗೆ ತೊಂದರೆಯಾಗದಂತೆ ನೋಡಿಕೊಳ್ಳಿರೆಂದು ಹೇಳಿ ಕಳುಹಿಸಿದೆ.

ಅತಿಕಾಯನು ಅತಿ ಉತ್ಸಾಹದಿಂದ ಒಂದು ಸಾವಿರ ಕುದುರೆಗಳನ್ನು ಕಟ್ಟಿದ ರಥದಲ್ಲಿ ಕುಳಿತು ರಣರಂಗಕ್ಕೆ ಬಂದಾಗ ವಿಭೀಷಣನು ಶ್ರೀರಾಮನಿಗೆ ಅತಿಕಾಯ ಪರಿಚಯ ಮಾಡಿಕೊಟ್ಟು ಅವನ ಶೌರ್ಯವನ್ನು ವರ್ಣಿಸಿದನು. ಲಕ್ಷ್ಮಣನಿಂದಲೇ ಇವನು ಹತನಾಗಬೇಕೆಂದು ಹೇಳಿದನು. ಶ್ರೀರಾಮನ ಅಪ್ಪಣೆಯಂತೆ ಲಕ್ಷ್ಮಣನು ಧನುರ್ಧಾರಿಯಾಗಿ ಅತಿಕಾಯನ ಎದುರಿಗೆ ನಿಂತನು. ಅತಿಕಾಯನು ಲಕ್ಷ್ಮಣನನ್ನು ಸಂಬೋಧಿಸಿ “ತಮ್ಮಾ ನೀನಿನ್ನು ಸಣ್ಣವನು ನಿಮ್ಮಣ್ಣನನ್ನು ಕಳುಹಿಸು” ಎಂದನು. ಲಕ್ಷ್ಮಣನು “ನಮ್ಮಣ್ಣನಿಗೆ ನಾನು ಸಣ್ಣವನಿರಬಹುದು. ಆದರೆ ಎಲ್ಲಾ ವಿಷಯಗಳಲ್ಲೂ ನಿನಗಿಂತಲೂ ಹಿರಿಯವನಾಗಿದ್ದೇನೆ. ಬೇಕಾದರೆ ಪರೀಕ್ಷಿಸಿ ನೋಡು ನನ್ನ ಬಾಣಗಳಿಗೆ ನಿನ್ನ ಕಾಯವು ನೆಲೆಯಾಗುವುದು ನೋಡು ಎಂದು ಬಾಣಗಳನ್ನು ಪ್ರಯೋಗಿಸಿದನು. ಆ ಬಾಣಗಳೆಲ್ಲವೂ ಅತಿಕಾಯನ ಕಾಯದಲ್ಲಿ ಸೇರಿ ಪಾರಾದವು. ಅತಿಕಾಯನು ಲಕ್ಷ್ಮಣನ ಧನುರ್ವಿಧ್ಯಾ ಚಾತುರವನ್ನು ಹೊಗಳಿ ತನ್ನ ಬಾಣಗಳ ನೈಪುಣ್ಯತೆಯನ್ನು ತೋರಿಸಲು ಲಕ್ಷ್ಮಣನು ಪ್ರಜ್ಞಾಹೀನನಾದನು. ಎಚ್ಚೆತ್ತ ಲಕ್ಷ್ಮಣನು ಇವನು ಸಾಮಾನ್ಯ ಬಾಣಗಳಿಂದ ಹತನಾಗನೆಂದು ತನ್ನ ಧನುಸ್ಸಿನಲ್ಲಿದ್ದ ಬ್ರಹ್ಮಾಸ್ತ್ರವನ್ನು ತೆಗೆದು ಅಭಿವಂತ್ರಿಸಿ ಹೊಡೆಯಲು ಅದು ಕಿಡಿಗಳನ್ನು ಕಾರುತ್ತಾ ಅತಿಕಾಯನ ಶಿರಸ್ಸನ್ನು ಹಾರಿಸಿತು. ಕತ್ತರಿಸಿದ ಕದಳಿ ವೃಕ್ಷದಂತೆ ಧರೆಗುರುಳಿದ ಅತಿಕಾಯನನ್ನು ಕಂಡು ಭಯಬೀತರಾದ ರಕ್ಕಸ ಸೇನೆ ಕಾಲಿಗೆ ಬುದ್ದಿ ಹೇಳಿದರು. ಗುಪ್ತಚಾರರು ಆತಂಕದಿಂದ ಓಡಿ ಬಂದು ಎದುರು ನಿಂತಾಗ ಅವರ ಪೇಲವ ಮುಖವನ್ನು ಕಂಡು ಭಯದಿಂದ ತತ್ತರಿಸಿದೆ. ಹೆದರುತ್ತಲೇ ಅತಿಕಾಯನು ಹತನಾದ ಸುದ್ದಿಕೇಳಿ ತಲೆ ಸಹಸ್ರ ಹೋಳಾದಂತೆನಿಸಿ ತಲೆ ತಿರುಗಿ ಬಿದ್ದೆ. ಎಚ್ಚರಗೊಂಡಾಗ ಅತಿಕಾಯನ ಕಳೇಬರದ ಮುಂದೆ ಮಂಡೋದರಿ, ಧ್ಯಾನಮಾಲಿನಿ ರಾಣೀ ವಾಸದವರು ಶೋಕಿಸುತ್ತಿರುವ ದೃಶ್ಯ ಕಂಡು ಮತ್ತೊಮ್ಮೆ ಎಚ್ಚರದಪ್ಪಿದೆನು. ಶೈತ್ಯೋಪಚಾರಗಳಾದ ಮೇಲೆ ಎದ್ದು ಕುಳಿತೆ. ಧ್ಯಾನ ಮಾಲಿನಿಯ ವಕ್ರದೃಷ್ಠಿಗೆ ಸಿಕ್ಕಿ ತಲೆಯೆತ್ತದಾದೆ. “ಈಗ ಸಮಾಧಾನವಾಯಿತೇ ಮಹಾರಾಜ ಇನ್ನೆಷ್ಟು ಜನ ಬಲಿಯಾಗಬೇಕು ನಿಮ್ಮ ಕಾಮತೃಷೆಗೆ ಇನ್ನೆಷ್ಟು ಜನರ ಮಾರಣಹೋಮವಾಗಬೇಕು ನಿಮ್ಮ ಚಪಲ ಬುದ್ಧಿಗೆ ನನ್ನ ಮಗನನ್ನೇ ಯುದ್ಧಕ್ಕೆ ಕಳಿಸಬೇಕಾಗಿತ್ತೆ. ಯುದ್ಧದ ಚಪಲವಿರುವುದು ನಿಮಗೆ ನೀವು ಯುದ್ಧಕ್ಕೆ ಹೋಗದೆ ಈ ಹಸುಳೆಯನ್ನು ಬಲಿಗೊಟ್ಟರಲ್ಲ! ಹೆತ್ತ ಮಕ್ಕಳಿಗಾಗಿ ಅವರ ಅಭ್ಯುದಯಕ್ಕಾಗಿ ಪ್ರಾಣವನ್ನೇ ಒತ್ತೆಯಿಡುತ್ತಾರೆ. ತಂದೆತಾಯಿಗಳು ತಮ್ಮ ಕರುಳ ಬಳ್ಳಿಯನ್ನೇ ಬತ್ತಿಯಾಗಿಸಿ ಮಕ್ಕಳಿಗೆ ದೀಪವಾಗಿ ಬೆಳಕು ಕೊಡುತ್ತಾರೆ. ನೊಂದರೆ ನಲುಗಿದರೆ, ಮಕ್ಕಳಿಗೆ ಸ್ವಲ್ಪ ನೋವಾದರೂ ಹೆತ್ತ ತಂದೆ ತಾಯಿಗಳ ಕರುಳು ಚುರುಕೆನ್ನುತ್ತದೆ. ನೀವು ಹೆತ್ತ ಮಗನನ್ನು ಹಂತಕನಿಗೆ ಒಪ್ಪಿಸಿ ನಿಶ್ಚಿಂತೆಯಿಂದ ನಿದ್ದೆ ಮಾಡಿದಿರಿ, ಮಗನನ್ನು ಮಾರಿಯ ಮನೆಗೆ ನೂಕಿ ಮನೆಯಲ್ಲಿ ಮದಿರೆ, ಕುಡಿಯುತ್ತಾ ಮಾನಿನಿಯರ ಜೊತೆ ಸರಸವಾಡುತ್ತಾ ಕಾಲಕಳೆದಿರೇನು? ಏನನ್ನಬೇಕು ನಿಮ್ಮ ಬುದ್ಧಿಗೆ! ಅದ್ಯಾವ ಮಂಕು ಕವಿದಿರುವುದೋ ಅದ್ಯಾವ ಮಾಯ ಮೆಟ್ಟಿಕೊಂಡಿದೆಯೋ! ಹಿಡಿದ ಹಠವನ್ನು ಬಿಡಲಿಲ್ಲವಲ್ಲ. ಸುಮ್ಮನೇಕೆ ಮಳ್ಳಿಯಂತೆ ಕುಳಿತಿರುವಿರಿ? ತೆಗೆದುಕೊಳ್ಳಿ ನಿಮ್ಮ ಚಂದ್ರಹಾಸವನ್ನು ಸಾಲಾಗಿ ನಮ್ಮನ್ನೆಲ್ಲಾ ಕೊಂದುಬಿಡಿ. ಮುಂದಾಗುವ ಅನಾಹುತಗಳನ್ನು ನೋಡುವ ಸೌಭಾಗ್ಯ ತಪ್ಪುತ್ತದೆ. “ಅಯ್ಯೋ ಮಗನೇ ಮಹಾವೀರನೆಂದು ಲಂಕಾಧಿಪತಿಯೆಂದು ಅಪ್ಸರಾಸ್ತ್ರಿಯಾದ ನಾನು ನಿಮ್ಮ ತಂದೆಯನ್ನು ಮೆಚ್ಚಿ ಮದುವೆಯಾದೆ. ಈ ನಾಲ್ಕು ಗೋಡೆಗಳ ಅರಮನೆಯಲ್ಲಿ ಬಂಧಿಯಾಗಿ ಪತಿಯ ಹೇಯಕೃತ್ಯಗಳನ್ನು ನೋಡುತ್ತಾ ಕಣ್ಣೀರುಗರೆಯುತ್ತಾ ನಿನಗಾಗಿ ಜೀವ ಹಿಡಿದಿದ್ದೆನು. ಇನ್ನು ಯಾರಿಗಾಗಿ ಬದುಕಬೇಕು? ಮುಗಿಯಿತು. ರಾವಣೇಶ್ವರಾ ನಿಮ್ಮ ಅಟ್ಟಹಾಸ! ನಿಮ್ಮ ಅಹಂಕಾರಕ್ಕೆ ನಿಮ್ಮ ದರ್ಪಕ್ಕೆ ನೀ ಮಾಡಿದ ಪಾಪಕಾರ್ಯಗಳಿಗೆ ಸರಿಯಾದ ಶಿಕ್ಷೆಯಾಯಿತು. ಯಾರನ್ನು ಕೇಳಿ ನನ್ನ ಮಗನನ್ನು ಯುದ್ಧಕ್ಕೆ ಕಳಿಸಿದಿರಿ. ನನ್ನನ್ನು ಕೇಳಿದಿರಾ ಅವನ ಹೆಂಡತಿಯನ್ನು ಹೋಗಲಿ ಅವನ ಅಜ್ಜಿಯನ್ನು ನಾವ್ಯಾರು ನಿಮಗೆ ಲೆಕ್ಕಕ್ಕಿಲ್ಲವೇ ಮಹಾರಾಜಾ ನೀವಾಡಿಸಿದಂತೆ ನಾವು ಕುಣಿಯಬೇಕು. ಮಾಡುವುದನ್ನೆಲ್ಲಾ ಮಾಡಿ ಮೌನವಾಗಿ ಕುಳಿತಿರುವುದು ನೋಡು, ಧಿಕ್ಕಾರ! ರಾವಣೇಶ್ವರ ನಿಮಗೆ, ನಿಮ್ಮ ಜನ್ಮಕ್ಕೆ, ನಿಮ್ಮ ವೈಭವಕ್ಕೆ ನಿಮ್ಮ ದುರಹಂಕಾರಕ್ಕೆ ಧಿಕ್ಕಾರ! ಧಿಕ್ಕಾರ”

“ದೇವಿ ನನ್ನನ್ನು ಕ್ಷಮಿಸು, ನಾನೆಷ್ಟು ಬೇಡವೆಂದರೂ ಕೇಳಲಿಲ್ಲ. ನಾನೇ ಹೋಗಿ ಯುದ್ಧ ಮಾಡಿ ಜಯಶಾಲಿಯಾಗಿ ಬರುತ್ತೇನೆಂದು ಮಾತುಕೊಟ್ಟು ಹೋದವನು ಮತ್ತೆ ಬರಲೇ ಇಲ್ಲ”

“ಇಲ್ಲ ಬರುವುದಿಲ್ಲ. ಯಾರೂ ಗೆದ್ದು ಮರಳಿ ಬರುವುದಿಲ್ಲ. ಯಾಕೆಂದರೆ ವಿಜಯಲಕ್ಷ್ಮಿ ಸತ್ಯ ಧರ್ಮ ನೀತಿ ಪಕ್ಷಪಾತಿ, ಕೆಡುಕರಿಗೆ, ಕಡುಪಾಪಿಗಳಿಗೆ, ಕ್ರೂರಿಗಳಿಗೆ, ಹೃದಯಹೀನರಿಗೆ, ಮಾನವೀಯತೆ ಇಲ್ಲದ ಮೃಗಗಳಿಗೆ ಮಾಲೆ ಹಾಕುವಳಲ್ಲ, ಕಣ್ಣೆತ್ತಿ ನೋಡುವವಳಲ್ಲ. ಹಾಗಿರುವಾಗ ಜಯವೆಲ್ಲಿಂದ ಬರಬೇಕು. ನಿಮಗೆಲ್ಲೊ ಭ್ರಮೆ! ರಾಮಲಕ್ಷ್ಮಣರನ್ನು ಎದುರಿಸಿ ಗೆಲ್ಲುತ್ತೇನೆ ಎಂಬುದು ಹುಚ್ಚುಮಾತು. ಇಷ್ಟು ದಿನ ನಿಮಗೆ ಯುದ್ಧದ ಹುಚ್ಚು ಹಿಡಿದಿತ್ತು. ಈಗ ಹೆಣ್ಣಿನ ಹುಚ್ಚು ಪರಸ್ತ್ರೀಯನ್ನು ಬಯಸಿ ಉದ್ಧಾರವಾದವರೂ ಯಾರೂ ಇಲ್ಲ. ಹಾಗೆಯೇ ಹೆಣ್ಣಿನ ಶಾಪ, ಕಣ್ಣೀರು, ನಿಟ್ಟುಸಿರಿನಿಂದ ಪಾರಾದವರೂ ಯಾರೂ ಇಲ್ಲ. ಇಷ್ಟು ಸಣ್ಣ ವಿಷಯ ನಿಮಗೇಕೆ ಅರ್ಥವಾಗುತ್ತಿಲ್ಲವೋ ಆಶ್ಚರ್ಯ! ವೇದ ವೇದಾಂತ ಪಂಡಿತರಿಗೆ “ದೇವಿ ಸೈರಿಸು ಸಮಾಧಾನ ಮಾಡಿಕೊ ನನ್ನ ಮಗನ ಸಾವಿನ ಪರಿಣಾಮವನ್ನು ನೋಡು, ಅತಿಕಾಯನನ್ನು ಕೊಂದ ಆ ಸೌಮಿತ್ರಿಯನ್ನು ಸುಮ್ಮನೆ ಬಿಡುವವನಲ್ಲ ಸೇಡಿಗೆ ಸೇಡು ನಿನ್ನ ಮಗನ ಮೇಲಿನ ಸೇಡನ್ನು ನಾನು ತೀರಿಸುತ್ತೇನೆ. ಅವನ ಆತ್ಮಕ್ಕೆ ಶಾಂತಿ ತರುತ್ತೇನೆ” “ಅವಿವೇಕದ ಮಾತುಗಳನ್ನಾಡಬೇಡಿ. ರಾವಣೇಶ್ವರಾ! ಸೇಡು ತೀರಿಸಿಕೊಂಡರೆ ನನ್ನ ಮಗನ ಆತ್ಮ ಅವನ ದೇಹವನ್ನು ಸೇರುತ್ತದೆಯೇ ಅವನು ಮರಳಿ ಎದ್ದು ಅಮ್ಮಾ ಎಂದು ಕೂಗುವ ಹಾಗಿದ್ದರೆ ಅವಶ್ಯಕವಾಗಿ ಸೇಡು ತೀರಿಸಿಕೊಳ್ಳಿ. ಭಲೇ ರಾವಣೇಶ್ವರಾ! ಎಂದು ಜಗತ್ತೇ ಕೊಂಡಾಡುತ್ತದೆ. ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿ”

“ಪ್ರಿಯ ಧ್ಯಾನಮಾಲಿನಿ ಮಗನನ್ನು ಕಳೆದುಕೊಂಡ ದುಃಖದಲ್ಲಿ ಅಸಂಬದ್ಧ ಮಾತುಗಳಾಡುತ್ತಿರುವೆ, ಸೈರಿಸು ಸಮಾಧಾನ ಮಾಡಿಕೊ ಈ ಭೂಮಿಯ ಮೇಲೆ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು. ಅದೂ ಅಲ್ಲದೆ ಹುಟ್ಟುವಾಗಲೇ ಇಷ್ಟೇ ಆಯಸ್ಸೆಂದು ಬ್ರಹ್ಮ ಲಿಖಿತವಿರುವಾಗ ಅದನ್ನು ಅಳಿಸುವ ಧೈರ್ಯ ಯಾರಿಗಿದೆ ಹೇಳು? ಸಮಾಧಾನ ಮಾಡಿಕೊ ನಿನ್ನ ಮಗ ರಣರಂಗದಲ್ಲಿ ಮಡಿದು ವೀರ ಸ್ವರ್ಗವನ್ನು ಸೇರಿದ್ದಾನೆ. ಅವನಿಗೋಸ್ಕರ ಅಳಬಾರದು ಹೆಮ್ಮೆ ಪಡಬೇಕು. ಶಾಂತಳಾಗುದೇವಿ.”

“ಹೌದು ಮಹಾರಾಜ, ಉಪದೇಶ ಕೊಡುವುದು ಸುಲಭ. ನೀವು ಗಂಡಸರಲ್ಲವೇ ಹೆಣ್ಣಿನ, ಅಂತರಾಳ, ಹೃದಯ ಕಲ್ಲಲ್ಲ. ನಿಮ್ಮಷ್ಟು ಗಟ್ಟಿಮನಸ್ಸು ಭಂಡತನ ನಮಗಿಲ್ಲ ಅಳುವುದಕ್ಕೆಂದೇ ಹುಟ್ಟಿ ಬಂದವರು ನಾವು ಅಳುತ್ತೇವೆ. ಅತ್ತು ಅತ್ತು ಕಣ್ಣೀರು ಬತ್ತಿಹೋದ ಮೇಲೆ ಸುಮ್ಮನಾಗುತ್ತೇವೆ. ನಿಮ್ಮ ನಾಟಕದ ಮಾತುಗಳಿಂದ ಸಾಂತ್ವನ ಮಾಡಬೇಡಿ ನನಗೆ ಅಸಹ್ಯವಾಗುತ್ತದೆ”

“ಮಂಡೋದರಿ ನೀನಾದರೂ ಸಮಾಧಾನದ ಮಾತುಗಳನ್ನಾಡು ಧ್ಯಾನ ಮಾಲಿನಿಯ ಕಣ್ಣೊರೆಸುವ ಶಕ್ತಿ ನನಗಿಲ್ಲ. ಹೆತ್ತ ತಾಯಿಯ ಸಂಕಟ ಬಲ್ಲವಳು ನೀನು, ನೊಂದ ಹೃದಯಕ್ಕೆ ಸಾಂತ್ವನ ನೀಡು” ಮಂಡೋದರಿ ಮಾತಾಡಲಿಲ್ಲ ತಲೆ‌ಎತ್ತಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಅಬ್ಬಾ! ಅವಳ ಕಣ್ಣುಗಳಲ್ಲಿದ್ದ ತಿರಸ್ಕಾರದ ಬೆಂಕಿಗೆ ಬೇರೆಯವರಾಗಿದ್ದರೆ ಸುಟ್ಟು ಹೋಗುತ್ತಿದ್ದರು. ತಿರಸ್ಕಾರದಿಂದ ವ್ಯಂಗ್ಯ ನಗೆ ನಗುತ್ತಾ “ನಾಳೆ ನನಗಾರು ಸಾಂತ್ವನ ನೀಡುವವರು ಕೆಕ್ಕರಿಸುತ್ತಾ ಕೆಂಗಣ್ಣಿನಿಂದ ಬಿರಬಿರನೆ ಹೊರಟೇ ಹೋದಳು. ಎತ್ತಿ ಕಪಾಲಕ್ಕೆ ಹೊಡೆದಂತಾಯಿತು. “ನೀತಿ ಹೇಳುವವ ನಾನೇ, ನೀತಿ ಬಿಟ್ಟು ನಡೆಯುವವನು ನಾನೇ. ಇನ್ನೊಬ್ಬರಿಗೆ ಕಲ್ಲು ಹೊಡೆಯುವ ಮುನ್ನ ನಾನು ಸರಿಯಾಗಿದ್ದೇನೆಯೇ ಎಂದು ನೋಡಿಕೊಳ್ಳಬೇಕು. ಉಪದೇಶ ಹೇಳುವುದು ಸುಲಭ ಆಚರಣೆಗೆ ತರುವಾಗಲೇ ಕಷ್ಟ. ತಪ್ಪು ನನ್ನಲ್ಲಿಟ್ಟುಕೊಂಡು ಇನ್ನೊಬ್ಬರ ಬೆರಳು ತೋರಿಸುವವನಿಗೆ ಏನೆನ್ನಬೇಕು, ರಾವಣ! ಶಿವಭಕ್ತ ಪಾರಾಯಣ! ಎಲ್ಲಿಗೆ ಬಂತು ನೋಡಿದೆಯಾ ಬಾಳು! ನಗೆ ಪಾಟಲಾಯಿತಲ್ಲ. ಯಾಕೆ ಬೇಕಿತ್ತು ನಿನಗೆ ಸೀತೆಯ ವ್ಯಾಮೋಹ! ಇನ್ನು ಕಾಲ ಮಿಂಚಿಲ್ಲ. ಈಗಲಾದರೂ ಶರಣಾಗಿ ಸೀತೆಯನ್ನು ರಾಮನಿಗೊಪ್ಪಿಸು, ಉಳಿದವರಾದರೂ ಬದುಕುತ್ತಾರೆ. ಇನ್ನೊಬ್ಬರ ಜೀವನ ಹಾಳು ಮಾಡಲು ನಿನಗೇನಿದೆ ಅಧಿಕಾರ! ಅರಳುವ ಹೂಗಳನ್ನು ಚಿಗುರಿನಲ್ಲೇ ಚಿವುಟುತ್ತಿರುವೆಯಲ್ಲ. ನಿನಗಿದು ನ್ಯಾಯವೇ ಲಂಕೇಶ ಒಬ್ಬರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಅನ್ಯರಿಗೆ, ನಿನ್ನವರಿಗೇ ಆಗಲಿ ತೊಂದರೆ ಕೊಡಬೇಡ, ಅಪಕಾರ ಮಾಡಬೇಡ ಈಶ್ವರನು ನಿನ್ನ ನಡೆ ನುಡಿಯನ್ನು ಗಮನಿಸುತ್ತಲೇ ಇರುತ್ತಾನೆ” “ನನ್ನ ಪ್ರಿಯಭಕ್ತ ರಾವಣೇಶ್ವರಾ ಹೀಗೆ ಹಾಳಾದನಲ್ಲ. ಅವನಿಗೆ ನನ್ನ ಹೆಸರು, ಕೊಟ್ಟು ಕೆಟ್ಟು ಹೋದನಲ್ಲ. ನನಗಾದರೂ ಹೆದರಿ ನನ್ನ ಮೇಲಿನ ಭಕ್ತಿಗಾದರೂ ಒಳ್ಳೆಯ ದಾರಿಯಲ್ಲಿ ನಡೆಯುತ್ತಾನೆ. ಒಳ್ಳೆ ಹೆಸರು ಪಡೆಯುತ್ತಾನೆ ಎನ್ನುವ ನಂಬಿಕೆ ಹುಸಿಯಾಯಿತಲ್ಲ ಎಂದು ಎಷ್ಟು ನೊಂದುಕೊಳ್ಳುತ್ತಿರುವನೋ ಈಶ! ಜಗದೀಶ ! ಸರ್ವೇಶ! ಈ ರಾವಣ ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗಲಿಲ್ಲ. ಮಡದಿಗೆ ತಕ್ಕ ಗಂಡನಾಗಲಿಲ್ಲ. ಮಕ್ಕಳಿಗೆ ವಾತ್ಸಲ್ಯದ ತಂದೆಯಾಗಲಿಲ್ಲ. ನಿನಗೆ ಸದ್ಭಕ್ತನಾಗಲಿಲ್ಲ. ನನ್ನ ಕ್ಷಮಿಸು ಪರಮೇಶ್ವರಾ ಕೆಟ್ಟದಾರಿಯಲ್ಲೇ ನಡೆಯುತ್ತಿರುವ ನನಗೆ ಸರಿಯಾದ ಶಿಕ್ಷೆ ನೀಡಿ ಆದಷ್ಟು ಬೇಗ ಮುಕ್ತಿಯನ್ನು ಕರುಣಿಸು. ಸಾಕು ಈ ಜೀವನದ ಜಂಜಾಟ ಸಾಕು, ಈ ಬವಣೆಗಳ ತಾಕಲಾಟ, ಸಾಕು ಈ ಅಧಿಕಾರ, ಅಂತಸ್ತು ಸಾಕು, ಈ ವೈಭವದ ಜೀವನ ಸಾಕು! ನೆಮ್ಮದಿ ಶಾಂತಿಯಿಲ್ಲದ ಒಣ ಆಡಂಬರದ ಜೀವನ! ಪರಮಾತ್ಮ ಆದಷ್ಟು ಬೇಗ ನಿನ್ನ ಸನ್ನಿಧಿಯನ್ನು ಸೇರಬೇಕು. ಹಾಗಾಗಬೇಕಾದರೆ ಯುದ್ಧ ನಡೆಯಲೇಬೇಕು. ಶಾಂತಿ, ಸಂಧಿಯಮಾತನ್ನು ತಳ್ಳಿ ಹಾಕಬೇಕು. ನಾಳೆ ಏನಾಗುವುದೋ ಭಯ ಆತಂಕಗಳನ್ನು ದೂರ ತಳ್ಳಬೇಕು. ನಾಳೆಯಷ್ಟೇ ನನ್ನದು ನಾಳೆ ಏನಾಗುತ್ತದೋ ಆಗಲಿ, ಅನ್ನುವವರು ಬೇಕಾದಷ್ಟು ಅನ್ನಲಿ, ತೆಗಳುವವರು ಹಿಂದೆ ತೆಗಳಲಿ, ಈ ರಾವಣಾಸುರನ ಎದುರಿಗೆ ಬಂದು ಮಾತಾಡುವ ಧೈರ್ಯ ಯಾರಿಗೂ ಇಲ್ಲ. ಯಾರನ್ನು ಮೆಚ್ಚಿಸಲು ನಾನೀ ಕಾರ್ಯ ಮಾಡುತ್ತಿಲ್ಲ. ನನ್ನ ಉದ್ಧಾರ ನನ್ನ ಕೈಯಲ್ಲೇ ಇದೆ. ಬೇರೆಯವರನ್ನು ನಂಬಿ ಕುಳಿತರೆ ಎಲ್ಲಾ ಕಾರ್ಯಗಳು ಹಾಳು” ನಾಳಿನ ಯುದ್ಧವನ್ನು ನಾನೇ ಮುಂದುವರಿಸಿಕೊಂಡು ಹೋಗುತ್ತೇನೆ. ಯೋಚನಾ ಲಹರಿಯಲ್ಲಿ ಮಗ್ನನಾದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂವು
Next post ನೋಯಿಸುವ ಬಲವಿದ್ದರೂ ಯಾರು ನೋಯಿಸರೊ

ಸಣ್ಣ ಕತೆ

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…