ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ
ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ
ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ
ಚಿತ್ತವಳಿಪನು ನನಗೆ ತಳೆಯದಿರಲಿ
ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ
ದೃಷ್ಟಿ ತಾಕಿದರಾನು ಬಾಡಿಯೇನು
ಮುಟ್ಟಲೇತಕೆ ಮುಂದೆ? ಬಾಳಲಾರೆನು ತುಂಬಿ
ಸೃಷ್ಟಿಗೀತೆಯನೆಂತು ಹಾಡಿಯೇನು
ಜನುಮವಿತ್ತನ ಪಾದ ಸೇರಲೆಂದೆಂಬಾಸೆ
ನನ್ನ ಪಾವಿತ್ರ್ಯವನು ಉಳಿಸು ಗುಂಗಿ
ಹುಡಿಯಲ್ಲಿ ಹೊರಳುವೊಲು ಮಾಡದಿರು ಕಾಡದಿರು
ಒಂದೆ ಅರೆನಿಮಿಷವನು ಇಲ್ಲಿ ತಂಗಿ
ನನ್ನ ಸೌಂದರ್ಯವದು ಈಶನಿಗೆ ಮೀಸಲಿದೆ
ನನ್ನ ಸೌರಭ್ಯವೂ ಅವನಿಗಾಗಿ
ಸುಮ್ಮನೇತಕೆ ಬಯಕೆ? ಜಾರಿಸದಿರೆನ್ನನ್ನು
ಒಂದೇ ನಿಮಿಷದ ಅಧಮ ಸೌಖ್ಯಕಾಗಿ
ಮೊರೆಯದಿರು ಮನಸಿನಲಿ ಮರೆಯದಿರು ಮೆಲು ನುಡಿಯ
ಇರಲಿ ತುಂಬಿಯೆ ನಮ್ಮ ಸೋದರತನ
ಚ್ಯುತಿ ಬರದೆ ಸತ್ಯದಾ ಸಾಧನೆಯು ನಡೆದಿರಲಿ
ತುಂಬಿರಲಿ ಸಂತಸದಿ ನಮ್ಮೀ ಮನ
ದಾರಿತಪ್ಪುವ ಚಿಂತೆ ನನಗಿಲ್ಲ ಭಾರವನು
ಗುರುದೇವ ಹೊತ್ತಿರಲು ಓ ಸೋದರ
ಬೀಳಲಿರೆ ಹಿಡಿಯುವನು ಕೈಯಿಂದಲೆತ್ತುವನು
ಏತಕ್ಕೆ ಸಾಕಿನ್ನು ಈ ಕಾತರ
*****