ನೋಯಿಸುವ ಬಲವಿದ್ದರೂ ಯಾರು ನೋಯಿಸರೊ,
ಬಾಧಿಸುವ ಥರ ನಟಿಸಿ ಎಂದಿಗೂ ಬಾಧಿಸರೊ,
ತಾವು ಸ್ಥಿರವಿದ್ದು ಅನ್ಯರ ಮನವ ಚಲಿಸುವರೊ,
ಶಿಲೆಯಂತೆ ಅಚಲರೋ, ಆಮಿಷಕೆ ಮಣಿಯರೊ,
ಅವರಷ್ಟೆ ಸ್ವರ್ಗದಾಶೀರ್ವಾದಕ್ಕೆ ಪಾತ್ರರು;
ಪೋಲಾಗದಂತೆ ಬಳಸುವರು ಪ್ರಕೃತಿಯ ಸಿರಿಯ,
ತಮ್ಮ ಮುಖಭಾವಕ್ಕೆ ತಾವೆ ಪ್ರಭುವೆನಿಸುವರು.
ಉಳಿದವರೊ ಇಳೆಗೆ ಸಲಿಸುವರವರ ಘನತೆಯ.
ಚೈತ್ರದಲಿ ಹೂ ಕಂಪು ಚೆಲ್ಲುವುದು ಲೋಕಕ್ಕೆ,
ತನ್ನಷ್ಟಕ್ಕೆ ಅರಳಿ ತಾನುರುಳಿದರು ನೆಲಕೆ;
ಎಡೆ ನೀಡಿತೋ ತಪ್ಪಿ ಯಾವುದೋ ರೋಗಕ್ಕೆ,
ಕಳಪೆ ಕಳೆಯೇ ಎಷ್ಟೊ ಮೇಲೆನಿಸುವುದು ಅದಕೆ.
ಅತಿ ಮಧುರವಾದುರೂ ಕೃತಿಗೆಡಲು ಕೊಳೆಯುವುದು,
ಕೊಳೆತ ಹೂ ಕಸಕಿಂತ ದುರ್‍ನಾತ ಹೊಡೆಯುವುದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 93
They that have power to hurt and will do none