ಕಣ್ಣಲ್ಲಿ ನೀರು ತುಂಬಿ
ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು
ನಗುನಗುತ್ತಾ ಅಳುತ್ತೇವೆ.
ಅಳು ಮುಚ್ಚಿ ನೋವು ಮರೆಸಿ
ನಗುನಗುತ್ತಾ ಬೆರೆಯುತ್ತೇವೆ.
ಹೊರಜಗತ್ತಿಗೆ ಸದಾ ಸುಖಿಗಳು ನಾವು
ನಗುನಗುತ್ತಲೇ ಇರುವ
ಅದೃಷ್ಟಶಾಲಿಗಳು!
ಗೃಹಲಕ್ಷ್ಮಿಗಳು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಹತ್ತಿರ ಹೋದರೆ
ಏರು ತಗ್ಗು ಕಲ್ಲು ಮುಳ್ಳು ಎಲ್ಲ-
ಹೆಜ್ಜೆ ಹಾಕುವುದು ಕಷ್ಟ.
ಆದರೂ ಹೆಜ್ಜೆ ಹಾಕುತ್ತೇವೆ ನಾವು,
ಕಾಲಲ್ಲಿ ನೆತ್ತರು ಸುರಿಸುತ್ತಾ
ಮುಖದಲ್ಲಿ ನಗು ಸೂಸುತ್ತಾ
ಹೆಜ್ಜೆ ಹಾಕುತ್ತೇವೆ!
ಏನಾದರೂ ನಗುತ್ತೇವೆ ನಾವು
ಕಣ್ಣಲ್ಲಿ ನೀರು ತುಂಬಿ ನಗುತ್ತೇವೆ
ನಗುನಗುತ್ತಾ ಅಳುತ್ತೇವೆ.
ಯಾಕೆಂದರೆ,
ಹೆಣ್ಣಾಗಿ ಹುಟ್ಟಿದ್ದೇವೆ ನಾವು
ನಮ್ಮ ಜೀವನವೇ ಹಾಗೆ
ಚಕ್ರವ್ಯೂಹವ ಒಳಹೊಕ್ಕು
ಹೊರಬರಲು ದಾರಿಕಾಣದ ಹಾಗೆ.
ಯಾವ ವಾದಗಳೂ ನಮ್ಮ ನೆರವಿಗೆ ಬರಲಿಲ್ಲ;
ಜಾಗತೀಕರಣ ನಮ್ಮ ನೋವಿಗೆ
ಪರಿಹಾರ ಹುಡುಕಲಿಲ್ಲ.
ನಾವಿನ್ನೂ ಬದುಕುತ್ತಿದ್ದೇವೆ
ಮೊದಲಿನ ಹಾಗೇ.
ಚಕ್ರವ್ಯೂಹವ ಒಳಹೊಕ್ಕು ಹೊರಬರದ
ಅಭಿಮನ್ಯುವಿನ ಹಾಗೆ!
*****