ಕತ್ತಲ ಕಾರ್ಮೋಡವೋ, ನಗುವ ಎಳೆಯ ಬಿಸಿಲೋ
ನಮ್ಮ ನಾಳೆ ಹೇಗಿರಬಹುದೋ, ಗೊತ್ತಿಲ್ಲ.
ಹೆಜ್ಜೆಗುರುತಿಲ್ಲದ ಕಾಡ ಬಯಲಿಗೆ ಕರೆದೊಯ್ದೀತು
ಕಾಲಹಾದಿ- ಯೌವನ ಮರ್ಮರದ ಕಿರುತೊರೆಗೆ,
ತಳವಿಲ್ಲದ ಕತ್ತಲ ಕೂಪಕ್ಕೆ, ಹಗಲ ಬಿಂಬವೂ
ಮರೆಯಾದ ಎಡೆಗೆ. ಅಪರಿಚಿತ ನಾಡು
ಕೈಬೀಸಿ ಕರೆದಾವು. ಸೂರ್ಯನ ನೆನಪೂ
ಮರೆಯಾಗಿ ಕವಿತೆಯ ಸೊಲ್ಲು ಶಬ್ದ
ಉದುರಿಬಿದ್ದಾವು. ಅಯ್ಯೋ ನಚ್ಚಗೆ ಕಟ್ಟಿಕೊಂಡ
ನಮ್ಮ ಬದುಕಿನ ಕಿನ್ನರಕಥೆ, ಹೇಳಲೇ
ಬಾರದ ವ್ಯಥೆಯಾಗಿ ತಟ್ಟನೆ ಬದಲಾದೀತು!
ಆದರೂ, ಅಯ್ಯಾ, ಇಷ್ಟು ನಿಜ ಗಟ್ಟಿಮಾಡಿದ್ದೀಯ-
ನಾವು ಗುನುಗು ಹಕ್ಕಿಗಳು, ನೀನಿತ್ತ ವರದಲ್ಲಿ
ಒಂದಿಷ್ಟನ್ನು ನಮ್ಮ ಶಬ್ದಗಳಲ್ಲಿ ಹೊತ್ತು ಹಾರುತ್ತೇವೆ.
ನಾವಿರುವ ಎಡೆಗಳಲ್ಲಿ ನಿನ್ನ ದನಿಯ ಮರುದನಿ
ಕಾಪಾಡಿಕೊಳ್ಳುತ್ತೇವೆ-ಹಳೆ ಮನೆಯ ಮುಂದೆ ಇರುವ
ಒಣ ಹುಲ್ಲು ಎಳೆ ಬಿಸಿಲನ್ನು ನೆನಪಿಟ್ಟುಕೊಂಡಂತೆ.
ನೀನು ಬೆಳೆಸಿದ ಶಬ್ದವಿಲ್ಲದ ಈ ಮಾತು
ಬೇಸರದಲ್ಲಿ ಮೌನದಲ್ಲಿ ಬೆಳೆದ ಈ ಮಾತು
ಕಡಲ ಮೇಲಿನ ಉಪ್ಪು ಗಾಳಿಯ ರುಚಿಯೊಂದಿಗೆ
ಎಳೆಯ ತಮ್ಮಂದಿರ ಎದೆಗೆ ತಾಗಿ ಮತ್ತೆ ಹಸುರೊಡೆದಾವು.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale
















