ಪ್ರಿಯ ಸಖಿ
ಅನ್ನವನು ಕೊಡು ಮೊದಲು
ಬಟ್ಟೆಯನು ಕೊಂಡು ಉಡಲು
ಕಟ್ಟಿಕೊಡು ಮನೆಗಳನು
ಬಳಿಕ ನೀನು ಕವಿಯಾಗಿ ಬಾ
ನೀತಿವಿದನಾಗಿ ಬಾ
ಶಾಸ್ತ್ರಿಯಾಗಿ ಧಾರ್ಮಿಕನಾಗಿ
ಮನುಜಕತೆಯನು ಕಲಿಸು ಬಾ
ಇವನದನು ಕಲಿಯ ಬಲ್ಲ!
ಇದು ಮೊದಲು ಆಮೇಲೆ ಉಳಿದುದೆಲ್ಲ!
ಗೋಪಾಲಕೃಷ್ಣ ಅಡಿಗರ ‘ಇದು ಮೊದಲು’ ಕವನದ ಈ ಕೊನೆಯ ಸಾಲುಗಳು ಮನವನ್ನು ಹೊಕ್ಕು ಎಷ್ಟೊಂದು ಆಳವಾಗಿ ತಟ್ಟುತ್ತವೆಯಲ್ಲವೇ ಸಖಿ? ಶಾಸ್ತ್ರ,  ನೀತಿ, ತತ್ವ, ಮೌಲ್ಯ, ಕಾನೂನು, ಮಾನವೀಯತೆ ಎಷ್ಟೆಲ್ಲಾ ಬುದ್ದಿ ಹೇಳಲು ತಯಾರಾಗಿದ್ದೇವೆ ನಾವು! ಆದರೆ ಹಸಿದ ಹೊಟ್ಟೆಗೆ ಅನ್ನ ನೀಡದೇ, ಮೈ ಮುಚ್ಚಲು ಬಟ್ಟೆ ಕೊಡದೇ, ಸುರಕ್ಷಿತವಾಗಿರಲು ಮನೆಯ ನೀಡದೇ ಏನು ಹೇಳಿದರೇನು? ಎಲ್ಲ ವ್ಯರ್ಥ ಎನ್ನುತ್ತಾರೆ ಕವಿ.

ಹಸಿದ ಹೊಟ್ಟೆಯ ಮುಂದೆ, ಬದುಕಿಗೆ ಬೇಕೇಬೇಕಾದ ಕೆಲವೊಂದು ಮೂಲಭೂತ ಅವಶ್ಶಕತೆಗಳ ಮುಂದೆ ಯಾವುದೇ ನೀತಿ-ತತ್ವಗಳೂ ಬೆಲೆಯಿಲ್ಲದ್ದಾಗುತ್ತದೆ. ಹೇಗಾದರೂ ಸರಿ ಏನು ಮಾಡಿಯಾದರೂ ಸರಿ ಹೊಟ್ಟೆ ತುಂಬಿಸಿಕೊಳ್ಳುವದು, ತನ್ಮೂಲಕ ಬದುಕುಳಿಯುವುದು ಹಸಿದವನ ಗುರಿಯಾಗಿರುತ್ತದೆ. ಅಲ್ಲಿ ಯಾವುದೇ ನೀತಿ-ನಿಯಮವೂ ಅವನನ್ನು ಎಚ್ಚರಿಸುವುದಿಲ್ಲ.

ಸಖಿ, ಇಂದಿನ ಸಮಾಜದ ಭ್ರಷ್ಟತೆಗೆ ಮೂಲ ಕಾರಣವೂ ಹಸಿವೇ ಆಗಿದೆ ಎಂಬುದು ಸಮಾಜವಾದಿಗಳ ನಿಲುವು. ಹಸಿವು ಹಿಂಗದ ಲಕ್ಷಾಂತರ ಒಡಲುಗಳು ಯಾವ ಕೀಳು ಮಟ್ಟಕ್ಕಾದರೂ ಇಳಿದು ಹಸಿವು ಹಿಂಗಿಸಿಕೊಳ್ಳಲು ಹಾತೊರೆಯುತ್ತವೆ. ಅದಕ್ಕೆಂದೇ ಕವಿ ಶೇಕ್ಸ್‍ಪಿಯರ್ “ಹಸಿವು ಎಲ್ಲವನ್ನೂ ಕಲಿಸುತ್ತದೆ” ಎನ್ನುತ್ತಾನೆ. ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ಮನುಷ್ಯನ ಮೂಲಭೂತ ಅವಶ್ಶಕತೆಗಳನ್ನು ಪೂರೈಸಬೇಕು. ನಂತರವಷ್ಟೇ ನೀತಿ, ಕಾನೂನು, ಧರ್ಮ, ಕಲೆ, ಮಾನವೀಯತೆ ಇತ್ಯಾದಿ ಅವನಿಗೆ ಅರ್ಥವಾದಾವು. ಈ ಕುರಿತು ನಿನ್ನ ನಿಲುವೇನು ಸಖಿ?
*****