ಐವತ್ತನೆಯ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ರಾಷ್ಟನಾಯಕರಾದ ಎಸ್. ನಿಜಲಿಂಗಪ್ಪ ಅವರನ್ನು ನಾನು ಅವರ ಸ್ವಗೃಹದಲ್ಲಿ ಭೇಟಿಯಾದಾಗ ಅನಾರೋಗ್ಯದಲ್ಲೂ ಅವರು ಅತ್ಯಂತ ಖುಷಿಯಿಂದ ಹಿಂದಿನ ರೋಚಕ ಘಟನೆಗಳ ಬಗ್ಗೆ ಮೆಲುಕು ಹಾಕಿದರು. ಅದನ್ನು ಹಾಗೆಯೇ, ಅವರ ಮಾತುಗಳಲ್ಲೇ ಇಲ್ಲಿ ಕೊಡಲಾಗಿದೆ.

ಸ್ವಾತಂತ್ರ ಹೋರಾಟ ನಡೆದಾಗ ಆಗಿನ ಜನರಲ್ಲಿ ಯಾವುದೇ ಆಶೆಗಳಿರಲಿಲ್ಲ… ನನಗೇನಾದರೂ ಅನುಕೂಲವಾದೀತು ಎಂಬ ಭಾವನೆ ಕನಸು ಮನಸಲ್ಲೂ ಇರಲಿಲ್ಲ. ಗಾಂಧಿ ಅವರು ಹೇಳ್ತಾರೆ, ನಾವು ಸ್ವತಂತ್ರರಾಗಬೇಕು. ಸತ್ಯಾಗ್ರಹ ಮಾಡಿದರೆ ಅದು ಸಾಧ್ಯವಾಗ್ತದೆ. ಅವರು ವಾಗ್ದಾನ ಮಾಡಿದ್ದಾರೆ. ಅದನ್ನ ಈಡೇರಿಸಬೇಕು ಎಂಬ ನಂಬಿಕೆ ಜನರಲ್ಲಿತ್ತು. ಆಗಿನ ರಾಷ್ಟ್ರನಾಯಕರು ಇದ್ದರಲ್ಲ, ಸರ್ದಾರ್ ವಲ್ಲಭಭಾಯಿ ಪಟೇಲ್, ನೆಹರು, ತಿಲಕರು – ಇಂಥವರನ್ನೆಲಾ ನೋಡಿ ಜನ ವಿಶ್ವಾಸದಿಂದ ಚಳುವಳಿಯಲ್ಲಿ ದುಮುಕಿದರು. ಜನರಲ್ಲಿ ಆಶೆಯಿತ್ತು ನಿಜ. ಆದರೆ ಏನು ಆಶೆ ಇತು? ನನ್ನ ದೇಶ ಸ್ವತಂತ್ರವಾಗಬೇಕು ಅನ್ನೋ ಒಂದೇ ಆಶೆ ವಿನಹ, ಮತ್ತಾವ ಆಶೆನೂ ಇರಲಿಲ್ಲ.

ಬ್ರಿಟಿಷರ ಆಡಳಿತದಲ್ಲಿ ದಬಾಳಿಕೆಯಿತ್ತು ಬ್ರಿಟನ್ ನ ಆಡಳಿತದಲ್ಲಿದ್ದಂತೆ ಇಲ್ಲೂ ದಕ್ಷತೆ – ‘ಸಿನ್ಸಿಯಾರಿಟಿ’ ಇತ್ತು ಅಂತ ಹೇಳಬಹುದಾದರೂ ಈ ದೇಶವನಾಳುವಾಗ ಅವರಲ್ಲಿ ಈ ದೇಶದ ಅಭಿವೃದ್ಧಿ ಬಗ್ಗೆ ತಿಲಮಾತ್ರವೂ ಕಳಕಳಿಯಿರಲಿಲ್ಲ. ನಮ್ಮ ಸಾಮ್ರಾಜ್ಯ ಇಲ್ಲಿ ಚೆನ್ನಾಗಿ ನಡೀಬೇಕು ಅಷ್ಟೇ ವಿನಾ ಅವರ ಜೀವನದ ಸ್ಥಿತಿಗತಿ, ಶಿಕ್ಷಣ, ಉದ್ಯೋಗ, ಈ ಜನ ಹಾಗೆ ಮುಂದೆ ಬಂದಾರು ಎಂಬ ಯಾವ ಉದ್ದೇಶವಿರಲಿಲ್ಲ. ಅವರೆಲ್ಲಾ ದೇಶದ ಸಂಪತ್ತನ್ನು ಲೂಟಿ ಮಾಡೋಕೆ ಅಂತ್ಲೆ ಬಂದವರೇ ವಿನಾ ಅವರಲ್ಲಿ ಇನ್ನಾವ ಘನ ಉದ್ದೇಶಗಳೂ ಇರಲಿಲ್ಲ ನಿಷ್ಠೆಯೂ ಇರಲಿಲ್ಲ. ಇಂತವರನ್ನು ಓಡಿಸಬೇಕಾದರೆ ಬಹಳಷ್ಟು ತ್ಯಾಗ ಮಾಡಬೇಕಾಯ್ತು… ಬಲಿದಾನಗಳಾದವು. ಆಮೇಲೆಯೇ ಸ್ವಾತಂತ್ರ ಸಿಕ್ಕಿದ್ದು.

ಸ್ವಾತಂತ್ರ ಬಂದ ೧೯೪೭ರ ಆಗಸ್ಟ್ ೧೫ರ ರಾತ್ರಿ ನಾನು ಡೆಲ್ಲಿಯಲ್ಲಿದ್ದೆ. ಅಂದು ಅತ್ಯಂತ ಸಂಭ್ರಮ. ಸೆಂಟ್ರಲ್ ಹಾಲ್ನಲ್ಲಿ ನೆಹರು, ಪಟೇಲರು, ರಾಜಗೋಪಾಲಾಚಾರಿ ನಾವೆಲ್ಲಾ ಇದ್ವಿ. ಲಾರ್ಡ್ ಮೌಂಟ್ ಬ್ಯಾಟನ್ನೂ ಇದ್ದ. ಮಧ್ಯರಾತ್ರಿ ಬ್ರಿಟಿಷರ ಧ್ವಜ ಇಳಿಸಿದರು. ನಮ್ಮ ಧ್ವಜ ಮೇಲಕ್ಕೆ ಏರಿತು. ಅದನ್ನು ನಮ್ಮ ರಾಜಗೋಪಾಲಾಚಾರಿಗೆ ವಹಿಸಿಕೊಟ್ಟಿದ್ದರು. ಆ ದೃಶ್ಯ ನೋಡಿ ಸಂತೋಷ ಪಡಬೇಕೇ ವಿನಃ ಅದು ಹೇಳೋಕೆ ಆಗದಂತಹ ವಿಷಯ. ಅವರ್ಣನೀಯ ಅಂತೀರಲ್ಲಾ ಹಾಗೆ. ಹೃದಯ ತು೦ಬಿ ಬಂದ ಕಾಲ, ಅದೊಂದು ರಸ ನಿಮಿಷ.

ಸ್ವಾತಂತ್ರವೇನೋ ಬಂತು, ಆ ಮೇಲಿನ ದೇಶದ ನಾಯಕರು ಸಾಮಾನ್ಯ ಜನರ ಸ್ಥಿತಿಗತಿಗಳ ಬಗ್ಗೆ ಯೋಚನೆ ಮಾಡಲಿಲ್ಲ. ಯಾಕೆ ಅಂದ್ರೆ ಯಾವ ರೀತಿ ಆಡಳಿತ ನಡೆಸಿದ್ರೆ ಜನರು ಕ್ಷೇಮವಾಗಿರ್ತಾರೆ ಅನ್ನೋ ಬಗ್ಗೆ ಬರೀ ಕಲ್ಪನೆ ಇತ್ತೇ ಹೊರ್ತು ಮಾರ್ಗ ಇರಲಿಲ್ಲ, ಗಾಂಧೀಜಿಗೆ ಗೊತ್ತಿತ್ತು ತನ್ನ ದೇಶ ಹ್ಯಾಗಿದೆ. ಹಳ್ಳಿಗಳಲ್ಲಿ ಜನ ಅವರ ವಿದ್ಯೆ-ಉದ್ಯೋಗಗಳ ಬಗ್ಗೆ ಗಾಂಧಿ ಅವರಿಗೆ ಕಾಳಜಿಯಿತ್ತು ಹಳ್ಳಿಯಿಂದಲೇ ಅಭಿವೃದ್ಧಿ ಕಾರ್ಯ ಆರಂಭವಾಗ್ವೇಕು. ವಿಕೇಂದ್ರಿಕರಣವಾಗ ಬೇಕು ಅನ್ನೋಲ್ಲ. ಅವರ ತತ್ತ್ವವನ್ನು ನೆಹರು ಮರ್ತುಬಿಟ್ಟರು. ಗಾಂಧೀಜಿ ತೀರಿಹೋದ್ರು. ನೆಹರು ಕೈಲಿ ಆಡಳಿತ ಬಂತು. ಪಟೇಲರೂ ತೀರಿ ಹೋದ್ರು, ನೆಹರೂ ಅವರಿಗೆ ಈ ದೇಶದ ಜನಸಾಮಾನ್ಯರ ಪರಿಸ್ಥಿತಿ ತಿಳೀದು. ಅವರೇನೋ ದೊಡ್ಡ ಮನುಷ್ಯರೇ. ಆದರೆ ಅವರಿಗೆ ಬಡತನವಾಗಲಿ, ಹಳ್ಳಿಗಳ ಪರಿಚಯವಾಗಲಿ ಇರಲಿಲ್ಲ. ಕನ್ವಿಕ್ಷನ್ ಯಾವ್ದೂ ಇರಲಿಲ್ಲ. ಹೀಗಾಗಿ ದೇಶ ತಪ್ಪುದಾರಿ ಹಿಡ್ದು ಏನೇನೋ ಆಗೊಯ್ತು. ಅವರು ಒರಿಜಿನಲ್ ಥಿಂಕರ್ ಅಲ್ಲ ಸೋಷಲಿಸ್ಟಿಕ್ ಪ್ಯಾಟ್ರನ್ ಆಫ್ ಸೊಸೈಟಿ ಅಂತೇಳಿ ಹೊರಟರು. ಅದು ಸರಿಯಲ್ಲ, ಅವರು ರಷ್ಯಾನ ಇಮಿಟೇಟ್ ಮಾಡಿದರು. ಅರೆಹೊಟ್ಟೆ, ಆನಾರೋಗ್ಯ, ನಿರುದ್ಯೋಗ…

ಪ್ಲ್ಯಾನಿಂಗ್ ಕಮಿಷನ್ನೂ ಯೋಗ್ಯರ ಕೈಲಿ ಸಿಗಲಿಲ್ಲ, ಪ್ಲಾನಿಂಗ್ ಕಮಿಷನ್ಗೆ ಕಾನ್‌ಸ್ಟಿಟ್ಯೂಷನ್ ನಲ್ಲಿ ಸ್ಥಾನ ಇರಲಿಲ್ಲ . ಅದು ಫಿಪ್ತ್‌ವೀಲ್ ಇನ್ ದಿ ಕೋಚ್… ನೆಹರೂ ಮಾಡಿದ್ದು, ಬರೀ ಖರ್ಚಾಯಿತೇ ವಿನಹ, ಜನಕ್ಕೆ ಅನುಕೂಲವಾಗಲಿಲ್ಲ. ಗಾಂಧೀ ಹೇಳಿದಂತೆ ನಡೆದಿದ್ದರೆ ಈ ದೇಶದ ಪರಿಸ್ಥಿತಿ ಬೇರೇನೆ ಆಗಿತ್ತು. ನೆಹರೂ ಪ್ರಾಮಾಣಿಕರು. ಆದರೆ ದೇಶ ಆಳೋ ಅರ್ಹತೆ, ಅನುಭವ ಅವರಿಗೆ ಸಾಲ್ದು.

ಪ್ರಾಮಾಣಿಕತೆ ಒಂದು ಬಿಟ್ಟ ಇನ್ನೆಲ್ಲಾ ಇದೆ ಈಗಿನ ರಾಜಕಾರಣಿಗಳಲ್ಲಿ. ಪಟ್ಟಣಗಳೇ ಬೆಳೆದು ಹಳ್ಳಿಗಳು ಹಾಗೇ ಉಳಿದು ಜನ ವಿದ್ಯಾವಂತರು ಬುದ್ಧಿವಂತರೂ ಆಗಲಿಲ್ಲ. ಅವರ ಜೀವನ ಮಟ್ಟ ಸುಧಾರಿಸೂ ಇಲ್ಲ… ಉದ್ಯೋಗವೂ ಅವರಿಗಿಲ್ಲ… ನಮ್ಮದು ಎರಡು ರೀತಿ ಇಂಡಿಯಾ ಆಗೋಯುತ್. ಒಂದು ಇಂಡಸ್ಟ್ರಿಯಲ್ ಇಂಡಿಯ, ಇನ್ನೊಂದು ವಿಲೇಜರ್ಸ್ ಇಂಡಿಯ. ಇಲ್ಲೇ, ಶೇಕಡಾ ೭೫ ಜನ ಇರೋದು. ಅಮೇರಿಕಾ, ಜಪಾನ್, ಜರ್ಮನಿ, ಪ್ರಾನ್ಸ್ ರೀತಿ ಬೆಳೆದಿರೋ ಕೈಗಾರಿಕಾ ಇಂಡಿಯಾ ಒಂದಾದಾರೆ ಅರೆಹೊಟ್ಟೆ , ಅನಾರೋಗ್ಯ, ನಿರುದ್ಯೋಗದಿಂದ ನರಳ್ತಾ ಇರೋದು ಇನ್ನೊಂದು ಇಂಡಿಯಾ.

ಈ ದೇಶ ವಿಭಜನೆ ಆಗಬಾರದಿತ್ತು. ವಿಭಜನೆಗೆ ಸ್ವಲ್ಪಮಟ್ಟಿಗೆ ಜಿನಾ ಕಾರಣ. ಅವರಿಗೆ ಗಾಂಧಿ ಅವರೊಂದಿಷ್ಟು ಪ್ರಾಮುಖ್ಯತೆನೂ ಕೊಟ್ಟರು. ಅದೂ ಕಾರಣ. ಗಾಂಧಿ ಅವರದ್ದೇನೋ ಸದುದ್ದೇಶವೇ. ಆದರೆ ಅವರಿಗೆ ಪ್ರಾಮುಖ್ಯತೆ ಕೊಟ್ಟಿದ್ದಂತೂ ತಪ್ಪು. ಈ ಮಾತು ನಂದಲ್ಲ ಅಬುಲ್ ಕಲಂ ಆಜಾದ್ ಹೇಳಿದ್ದಾರೆ. ಹಾಗೇನೇ ನೆಹರು, ಅವರನ್ನೂ ಸಹ ಗಾಂಧಿಜಿ ಮೇಲೆತ್ತಿದ್ದರು. ಅರ್ಹತೆ ಇರೋ ಪಟೇಲರನ್ನು ಕೆಳಕ್ಕೆ ತಳ್ಳಿದರು. ಪಟೇಲರಿಗೇ ಆಡಳಿತ ವಹಿಸಿದ್ದರೆ ಈ ದೇಶದ ಚಿತ್ರಣವೇ ಬೇರೆ ಆಗೋದು. ಈ ಮಾತನ್ನು ನಾನ್ ಹೇಳೋದಲ್ಲ, ಜೆ.ಆರ್.ಡಿ. ಟಾಟಾ ಹೇಳಿದ್ದು ?

ಅನಿಬೆಸೆಂಟ್ ಪ್ರಭಾವ
ಹೀಗಾಗಿ ನೆಹರೂ ಇಂಥಾವರಾರು ನನ್ನ ಮೇಲೆ ಪ್ರಭಾವ ಬೀರಲೇ ಇಲ್ಲ. ನನ್ನ ಮೇಲೆ ಪ್ರಬಾವ ಬೀರಿದವರು ಮೊಟ್ಟ ಮೊದಲನೆದಾಗಿ ಅನಿಬೆಸೆಂಟ್. ಆಮೇಲೆ ಗಾಂಧೀಜಿ, ತಿಲಕರು, ಬರ್ತಾ ಬರ್ತಾ ನಾನು ಒಂದು ಸ್ಥಾನಕ್ಕೆ ಬಂದಾಗ ಸರ್ದಾರ್ ಪಟೇಲರು, ಅವರಿಗೂ ನನಗೂ ಬಹಳ ಸಾಮೀಪ್ಯತೆಯಿತ್ತು. ನೆಹರೂಗೂ ನನಗೂ ಸರಿಬರಲಿಲ್ಲ. ಅಲ್ಲಿಂದ್ಲೆ ದುಷ್ಟರು, ಭ್ರಷ್ಟರು, ಲಂಚಕೋರರು ಹುಟ್ಟಿಕೊಂಡರು. ಈಗ ಈ ವಿಷವೃಕ್ಷ ಕಡಿಯೋಕೆ ಆಗದಷ್ಟು ಹೆಮ್ಮರವಾಗಿದೆಯಪಾ. ಇದನ್ನು ನಿಯಂತ್ರಿಸೋದು ಹೇಗೆ ಅಂತ ನಾನು ಯಾವಾಗ್ಲೂ ಚಿಂತೆ ಮಾಡಾ ಇರ್ತಿನಿ.

ಅಷ್ಟೇನೂ ಅಲ್ಲ. ದೇಶದ ಮುಖಂಡರನ್ನು ಆಗಾಗ ಒಟ್ಟಿಗೆ ಸೇರಿಸಿ ವಿಚಾರ ವಿನಿಮಯವನ್ನೂ ಮಾಡ್ತಾ ಇರ್ತಿನಿ. ಜನರಲ್ಲಿ ಜಾಗೃತಿ ಮೂಡಬೇಕು. ಅದಕ್ಕಾಗಿ ಪ್ರಯತ್ನ
ನಡೀಬೇಕು. ಈ ದಿಸೆಯಲ್ಲಿ ಯುವಕರು ಮುಂದಾಗಬೇಕು. ಈವತ್ತಿಗೂ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಅವರು ಯುವಕರನ್ನು ಮುಂದಿಟ್ಕೊಂಡು ಕೆಲ್ಸ ಮಾಡಬೇಕು ಅಂತ ನನ್ನ ಭಾವನೆ.

ಒಂದು ಸಂತೋಷದ ವಿಷಯ ಏನಪಾ ಅಂದ್ರೆ ಕಾನ್ಸ್ಟಿಟ್ಯೂಯಂಟ್ ಅಸೆಂಬ್ಲಿನಲ್ಲಿ ಒಂದು ಭಾಗ ಇದೆ. ಇದು ಮುಖ್ಯ ವಿಚಾರ. ಅದರಲ್ಲಿ ಡೈರೆಕ್ಟಿವ್ ಪ್ರಿನ್ಸಿಪಲ್ ಆಫ್ ಸ್ಟೇಟ್ ಪಾಲಿಸಿ ಅಂತೇಳಿ. ಅದನ್ನು ಸರಕಾರ ಮರೆತುಬಿಡ್ತು. ಅದು ಗಾಂಧಿವಾದವೆ. ಅದರಲ್ಲೇನು ಪ್ರಾವಿಷನ್ಸ್ ಇದೆ, ಅದನ್ನು ಮಾನ್ಯತೆ ಮಾಡಿದ್ದರೆ, ಜಾರಿಗೆ ತಂದಿದ್ದರೆ ಈ ದೇಶದಲ್ಲಿ ಬಡತನ, ಲಂಚ ಇವಕ್ಕೆಲಾ ಜಾಗ ಇರ್ತಾ ಇರಲಿಲ್ಲ. ಆದರೆ ಆ ಪಾಲಿಸಿಯಲ್ಲಿ ಒಂದು ಇಂಪ್ಲಿಮೆಂಟಾಯ್ತು. ಜುಡಿಶಿಯರಿ ಆಂಡ್ ಎಕ್ಸ್‍ಕ್ಯೂಟರಿ ಬೇರೆ ಆಗಬೇಕು ಅಂತಿದೆ. ಅದನ್ನು ಮಾಡಿದರು. ಆದ್ದರಿಂದ ಹೈಕೋರ್ಟು ಸುಪ್ರೀಂಕೋರ್ಟು ಚೆನಾಗಿ ಕೆಲಸ ಮಾಡ್ತಾ ಇವೆ. ಕಾರ್ಯಾಂಗ ಬಲಿಷ್ಟವಾಯ್ತು. ಸಿ.ಬಿ.ಐ. ಕೂಡ ಸೀರಿಯಸ್ ಆಗಿ ಈಗ ಕೆಲಸ ಮಾಡ್ತಾ ಇದೆ. ಆದ್ದರಿಂದ ಮೇಯೊ ಕಳ್ಳರಿಗೆ ಶಿಕ್ಷೆ ಆಗಬಹುದು ಅಂತ ಆಶೆ ಇಟ್ಕೊಬಹುದು.. ನೋಡೋಣವಂತೆ.

ವೇದವಾಕ್ಯವಾದ ಮಾತು
ಹಿಂದೆಲ್ಲಾ ದೇಶಕ್ಕಾಗಿ ದುಡಿಯೋದು, ಮಡಿಯೋದು ಗೊತ್ತಿತ್ತು. ದಗಾಕೋರತನ ಗೊತ್ತಿರಲಿಲ್ಲ. ನಾವೆಲ್ಲಾ ಮುಖ್ಯಮಂತ್ರಿ ಆಗ್ಬೇಕು, ಮಂತ್ರಿ ಆಗ್ಬೇಕು ಅಂತ ಚಳುವಳಿ ಮಾಡಿದೋರಲ್ಲಾ. ಅವೆಲ್ಲಾ ಬಯಸದಿದ್ದರೂ ಬಂತು. ಕಷ್ಟನೂ ಪಟ್ಟಿದ್ದೀನಿ. ಬಡತನವನ್ನೂ ಉಂಡು ಹೊದ್ದಿದ್ದೀನಿ. ದುರ್ಗದಲ್ಲಿ ಲಾಯರ್ ಆದ್ಮೇಲೆ ಬೇಕಷ್ಟು ಸುಖಾನೂ ಪಟ್ಟಿದ್ದೀನಿ. ಇಲ್ಲಿ ಬಾರ್‍ಗೇ ನಂದೇ ಒಳ್ಳೆ ಪ್ರಾಕ್ಟೀಸು. ನಾಲ್ಕೈದು ವರ್ಷದಲ್ಲಿ ಈಗಿರೋ ಈ ಮನೆ ಕಟ್ದೆ. ಹೆಂಡ್ತಿ, ತಾಯಿ, ಮಕ್ಕಳು ಸುಖ ಸಂಸಾರ. ಹೀಗಿರೋವಾಗ ಗಾಂಧಿ ಕರೆ ಬಂತು. ಚಿತ್ರದುರ್ಗದಲ್ಲೇ ಮೊದ್ಲು ಸತ್ಯಾಗ್ರಹ ಆರಂಭಿಸಿದ್ವಿ, ಇದು ಹೆಮ್ಮೆ ಮಾತು.

ದುರ್ಗದ ಹತ್ತಿರ ತುರವನೂರು ಇದೆಯಲಾ ಅಲ್ಲಿಂದ್ಲೆ ಮೊದ್ಲು ಅರಣ್ಯ ಸತ್ಯಾಗ್ರಹವನ್ನು ಪಾಸಿಟಿವ್ ಆಗಿ ನಡೆಸಿದ್ದು. ಅಲ್ಲಿ ಅರೆಸ್ಟ್ ಮಾಡಿದರೆ ನನ್ನ, ಗಲಾಟೆಯಾಗುತ್ತೆ ಅಂತ್ಲೊ ಏನೋ ಮನೆ ಹತ್ತಿರ ಕಾಯ್ಕೊಂಡಿದ್ದರು. ಮಾರನೆ ದಿವಸ, ಬೆಳಗಿನ ಜಾವ ೪.೩೦ ಗಂಟೆ ಸಮಯ ಹೆಂಡ್ತಿ ಪಕ್ಕದಲ್ಲೇ ಇದ್ಲು. ಆಕಿನಾ ಕೇಳ್ದೆ- ‘ಈಗ ನನ್ನ ಅರೆಸ್ಟ್ ಮಾಡ್ತಾರೆ. ಎರಡು ಮೂರು ವರ್ಷ ಜೈಲೂ ಆಗಬಹುದು. ನೀನು, ನಿನ್ನ ಮಕ್ಳು, ನಿನ್ನ ಅತ್ತೆ ಬಹಳ ಬಡತನ ಅನುಭವಿಸಬೇಕಾಗತ್ತೆ ನನ್ನ ಬಾರ್ ನಿಂದಲೂ ಡಿಬಾರ್ ಮಾಡ್ತಾರೆ. ಜೀವನ ಸಂಕಷ್ಟಕ್ಕೆ ಸಿಕ್ಕುತ್ತೆ ಈಗೇನು ಮಾಡ್ಲಿ? ನಿನ್ನ ಅಭಿಪ್ರಾಯ ಏನು?” ಅಂತ ಕೇಳ್ದೆ. ಹೊರಗಡೆ ಬೆಳಗಿನ ಜಾವ. ಪೊಲೀಸರು ಬಾಗಿಲು ತಟ್ತಾ ಇದ್ದರು. ಆ ಸಮಯದಲ್ಲಿ ಅವಳು ಒಂದು ಮಾತು ಹೇಳಿದ್ಲು- ‘ನೀವು ಗಾಂಧಿ ಪರೀಕ್ಷೆ ಕಟ್ಟಿದೀರಾ ಹೋಗಿ, ಅದರಲ್ಲಿ ಪಾಸಾಗಿ ಬನ್ನಿ’ ಅಂತ. ಆ ಮಾತು ನನಗೆ ವೇದವಾಕ್ಯ ಆಯ್ತು. ಅದೇ ನನ್ನ ಜೀವನದಲ್ಲಿ ದಾರಿದೀಪ. ಆಮೇಲೆ ಎಂದೂ ತಾಯಿಯಾಗ್ಲಿ, ಹೆಂಡ್ತಿಯಾಗ್ಲಿ ವಿರೋಧ ಮಾಡಲಿಲ್ಲ. ನೀವು ಮಾಡ್ತಾ ಇರೊದು ತಪ್ಪು ಅನ್ಲಿಲ್ಲ. ಬೆಂಬಲಕೊಟ್ಟರು.

ನಾನು ಜೈಲಿನಲ್ಲಿದ್ದಾಗ ಯಾರೇ ಮನೆಗೆ ಬರ್‍ಲಿ ಅವರಿಗೆ ಬಡತನ ಮುಚ್ಚಿಟ್ಟು ಅತಿಥಿ ಸತ್ಕಾರ ಮಾಡಿದ್ದಾರೆ. ನನ್ನ ತಾಯಿನೂ ಅಷ್ಟೆ. ಅವಳು ದಿಟ್ಟೆ ಅವಳು ಸ್ವಾತಂತ್ರ್ಯ ಪ್ರಿಯೆ. ಅವಳು ಹೇಳಿದ ಮಾತು ನನಗೆ ಈವತ್ತು ಗ್ಯಾಪ್ಕಕ್ಕೆ ಬರ್ತಾ ಇದೆ. “ತಮ್ಮಾ ಗಾಂಧಿ ಹೇಳಿದ್ದಾನೆ”- ಅವಳು ನನ್ನ ತಮ್ಮಾ ಅಂತ್ಲೆ ಕರಿತಿದ್ದುದು – “ತಮ್ಮಾ ಗಾಂಧಿ ಹೇಳಿದ್ದಾನೆ ನೀನೇನೂ ಯೋಚ್ನ ಮಾಡ್ಬೇಡ. ಮನೆ ಭಾರ ನನಗಿರ್‍ಲಿ ಹೋಗ್ ತಮ್ಮಾ” ಅಂದ್ಲು. ಅವಳ ಬೆಂಬಲ ಭಾಳ ಇತ್ತು. ಬಡತನದಲ್ಲಿ ನಮ್ಮನ್ನು ಬೆಳ್ಸಿದ್ಲು . ವಿದ್ಯಾ ಬುದ್ಧಿಕೊಟ್ಲು, ಎಲ್ಲಾ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರ್ತಾಳೆ ಅಂತಾರೆ. ನಂಗೆ ಇಬ್ಬರು. ಒಬ್ಬಾಕೆ ತಾಯಿ, ಇನ್ನೊಬ್ಬಳು ಹೆಂಡ್ತಿ. ಇವರಿಬ್ಬರೂ ಸಹಕಾರ ಕೊಟ್ಟರು. ಒಳ್ಳೆ ದಾರೀಲಿ ನಡೆಸಿದರು. ನನ್ನ ತಾಯಿ ಆಶೀರ್ವಾದ ದೊಡ್ಡದು. ಹೀಗೆ ಏನೇನೋ ಆಯ್ತು ನಡೀತು. ಮುಖ್ಯಮಂತ್ರಿಯೂ ಆದೆ. ಕಾಂಗ್ರೆಸ್ ಇಬ್ಬಾಗ ಆಯ್ತು. ವಾಪಾಸ್ ಬಂದೆ. ಮತ್ತೆ ಆ ಕಡೆ ತಿರುಗಿ ನೋಡ್ಲಿಲ್ಲ . ಆ ಮೇಲೆ ಬಂದವರೆಲ್ಲಾ ದೇಶವನ್ನು ಉದಾರ ಮಾಡ್ದೆ, ದೇಶಾನೇ ತಿಂದು ತೇಗಿದವರು.. ಅದು ಬಿಡಿ.

ಈಗ ಸ್ವಾತಂತ್ರ್ಯ ಬಂದು ೫೦ ವರ್ಷ ಆಗ್ತಾ ಇದೆ. ದೇಶದ ಸ್ಥಿತಿ ಮಾತ್ರ ಹಾಗೆ ಇದೆ. ಹದ ತಪ್ಪಿದೆ. ಒಂದು ವಿಶೇಷ ಏನಪ್ಪಾ ಈವತ್ತು ದಲಿತನೊಬ್ಬ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿರೋದು ಇದು ಆಗಬೇಕಾದ್ದೆ. ಕೆ.ಆರ್. ನಾರಾಯಣ್’ಗೆ ನಿನ್ನೆ ತಾನೆ ನಾನೊಂದು ಟೆಲಿಗ್ರಾಂ ಗ್ರೀಟಿಂಗ್ ಕಳಿಸ್ದೆ “ವಿಶ್‍ಯು ಎವ್ವೆರಿ ಸಕ್ಸಸ್” ಅಂತ. ಅವರು ದಲಿತ ಅನ್ನೋದೇ ಪ್ರಚಾರವಾಗಬೇಕಿಲ್ಲ. ದಕ್ಷ, ಯಾವುದೇ ದೃಷ್ಟಿಯಿಂದ ನೋಡಿದರೂ ಯೋಗ್ಯರೇ, ಆ ಪೀಠಕ್ಕೆ ಅರ್ಹರೇ. ಅವರು ಆಗ್ಬೇಕು ಅನ್ನೋದು ನನ್ನ ಆಶೆ ಕೂಡಾ. ಆಗ್ತಾರೆ ಅಂತ ನಂಬಿಕೆ. ಎಲೆಮರೆ ಕಾಯಿಯಂತೆ ಕೆಲಸ ಮಾಡ್ಕೊಂಡು ಬಂದಿದ್ದಾರೆ. ಸಂಭಾವಿತ, ಅವರು ಆಗೋದೇ ಉಚಿತ.

ಈವತ್ತು ನಮ್ಮದೇನಿದ್ದರೂ ಇತರರ ಒಳ್ಳೆಯದನ್ನು ನೋಡಿ ಸಂತೋಷ ಪಡೋ ಕಾಲ, ಈ ದೇಶ, ಗಾಂಧಿ ಅನ್ಕೊಂಡಹಾಗೆ ಆಗ್ಬೇಕು. ಅಂತಹ ನಾಯಕರು ಬರಬೇಕು. ಯುವ ಜನತೆ ಏನ್ ಇದೆಯಲ್ಲ, ಅದರಲ್ಲಿ ಜಾಗೃತಿ ಮೂಡಬೇಕು. ಅಂತಹ ಪ್ರಯತ್ನಗಳಾಗ್ಬೇಕು. ಆಗ್ಲಿ ಅಂತ ಈ ಶುಭ ಘಳಿಗೆಯಲ್ಲಿ ನಾನು ಹಾರೈಸ್ತೆನೆ. ನಮಸ್ಕಾರ.
*****