ಗಾಳಿಪಟದ ಹಾರಾಟವ
ನಿಯಂತ್ರಿಸುವ ಹುಡುಗನ ಕೈ
ಕರುವಿನ ಮೇಯುವಿಕೆಯನ್ನು
ನಿಯಮಿಸುವ ಗೂಟ
ತಾಯಿಯ ತಿರುಗಾಟವನ್ನು
ತಡೆಯುವ ಕರು
ಹಡಗಿನ ವೇಗವನ್ನು
ಕುಂಠಿಸುವ ಸಾಗರದಲೆ
ಹಕ್ಕಿಯ ಹಾರಾಟವನ್ನು
ಸೋಲಿಸುವ ಬಾಹುಮೂಲಪ್ರಾಣ
ಚಿಗುರು ಛತ್ರಿಯ ಗಟ್ಟಿ ಹಿಡಿಕೆ
ತಲೆತಿರುಕತನವನ್ನು ಗದರಿಸುವ
ಮಣ್ಣ ತುಳಿವ ಹೆಜ್ಜೆ
ಕಸರತ್ತಿನ ಕಲೆಯನ್ನು
ಸೂತ್ರವಾಡಿಸುವ ರಂಜಕತೆ
ದಬ್ಬಾಳಿಕೆಯ ನೆಲ ಕಚ್ಚಿಸುವ
ಜನಮನ ಶಕ್ತಿ
ಚರಿತ್ರೆಯ ಪುರಾಣವಾಗದಂತೆ
ಬಯಲಾಗಿಸುವ ವಾಸ್ತವತೆ
ಹಗುರತೆಯಿಂದ ಹದ್ದುಮೀರುವುದನೆಲ್ಲ
ತನ್ನೆಡೆ ಸೆಳೆವ ಗುರುತ್ವ
ಹುಡುಗಾಟದ ಚಲ್ಲಾಟತನವನ್ನು
ಸುಮ್ಮನಾಗಿಸುವ ಬದುಕಿನ ಕಠೋರತೆ
*****