ಅಬ್ಬಬ್ಬಾ! ಏನು ಆ ಬಿಸಿಲು-ಏನು ಆ ಉರಿ! ಉರಿಯೆಂದರೆ ಆ ಬೇಸಿಗೆಯ ಮಧ್ಯಾಹ್ನದ ಬಿಸಿಲೇ ಮೈಗೊಂಡು ಉರಿಯಲಗಿನಂತೆ ಹೊಳೆಯುತ್ತಿತ್ತು. ಝಳಪಿಸುತ್ತ ಮುಗಿಲ ಮನೆಗೆ ತಿವಿಯುವ ಆ ಮೊನೆಯಾದ ಜ್ವಾಲೆಗಳೆಂಥವು! ಇಪ್ಪತ್ತು ಮಾರು ದೂರ ನಿಂತರೂ ಕಡಿದು ಹಾರಿಬರುವ ಆ ಜ್ವಾಲೆಯ ಶಿಖೆಗಳೇನು! ಅದನ್ನಾರಿಸಲಿಕ್ಕೆ ನೆರೆದ ಸಾವಿರಾರು ಜನರ ದಟ್ಟಣೆ ಎಷ್ಟು!! ಉಣ್ಣುವ ಹೊತ್ತು ಆದರೂ ಉಣ್ಣದೇ ಕೈಯಲ್ಲೊಂದು ಕೊಡ, ಹರಿವೆ, ಪಾತ್ರೆ ಇದ್ದ ನನ್ನೆಲ್ಲಾ ನೀರುಸಹಿತ ಎತ್ತಿತಂದು, ಸುಡುವ ಹುಡಿ ನೆಲದಲ್ಲಿ ಓಡಾಡಿ ನೀರೆರಚುವ ಆ ಜನರ ಎಸರಿಲ್ಲದ ಮುಖ, ಇಷ್ಟು ಜನರ ಗದ್ದಲವಿದ್ದರೂ ಶಾಂತರೀತಿಯಿಂದ ಕೆಲಸ ತೆಗೆದುಕೊಳ್ಳುತ್ತಿರುವ ಆ ಹಳ್ಳಿಯ ಗೌಡನ ಧೈರ್ಯಪೂರ್ವಕವಾದ ಓಡಾಟ, ಇಷ್ಟು ನೋಡಿದ ಕಣ್ಣುಗಳು ಬವಳಿಕೆಯ ಬೇನೆಗೀಡಾಗಬೇಕು! ಎದೆಹಾರಿಕೆ ಒಡೆಯುವಷ್ಟು ಒತ್ತರವಾಗಬೇಕು! ಅಂಥಾ ಉರಿಯೆಲ್ಲಾ ಆರಿ ನೆಲಕ್ಕುದುರಿದ ಆ ಹುಲ್ಲು ಬೂದಿಯಲ್ಲಿ ಹೆಣವು ಸಿಕ್ಕಿದ್ದನ್ನೂ, ಅದು ಹದಿನಾರು ವಯಸ್ಸಿನ ತರಳನದೆಂಬದನ್ನೂ ಕಣ್ಣಾರೆ ಕಂಡವರು ಕುಳಿತಕುಳಿತಲ್ಲೇ ಕೈಕಾಲೊಳಗಿನ ಜೀವ ಕಳಕೊಂಡರು. ‘ಕರುಣಾಕರ, ದೀನದಯಾಳು, ಅಲ್ಲಾ ಹೋ ಅಕ್ಬರ್’ ಅನ್ನುವವರಿಗೆಲ್ಲಾ ಅಂದು ಅನಿಸಿಬಿಟ್ಟಿತು-ದೇವರು ಕ್ರೂರತನದ ಕಣಿ; ಮನುಷ್ಯನ ಅಮಾನುಷ ವೃತ್ತಿಗಿಂತ ದೇವನ ಕಟುಕತನವು ತಿರಸ್ಕರಣೀಯವೆಂದು. ಕಿಟ್ಟಿನ ಗೊಂಬೆಗಳು ಎಲ್ಲಾ ಒಂದೇ ತೆರನಾಗಿ ಮಾಡಲ್ಪಟ್ಟಿದ್ದರೂ ಅವು ಒಡೆದು ಹಾಳಾಗುವುದು ಅನೇಕ ವಿಧ, ಯಾವ ಗೊಂಬೆಗೆ ಯಾವ ತರದ ಕೊನೆಯು ಪ್ರಾಪ್ತವಾಗುವುದೋ ಹೇಳಲಿಕ್ಕಾಗದೆಂಬ ತತ್ತ್ವಜ್ಞಾನವೂ ಅನೇಕರಿಗೆ ಹೊಳೆಯಿತು. ಜುಲಪಿದಲೆಯ ಮಾಟಗಾರರೂ, ತಿಳುವಂಗಿಯ ರಸಿಕರೂ, ಲೋಲಾ ಪ್ರಿಯರಾದ ಲೋಕಮಾನ್ಯರೂ ಅಂದು ತಿಳಕೊಂಡರು-ನಾವೂ ಒಮ್ಮೆ ಸತ್ತು ಮಣ್ಣುಗೂಡಿ ಹೋಗುವವೆಂದು, ಎಷ್ಟೋ ಹೆಣ್ಮಕ್ಕಳ ಒಡೆದೆದೆಯನ್ನು ಹೊಂದಿಸಲಿಕ್ಕೆ ಎಷ್ಟೋ ಉಪಚಾರ ಮಾಡಬೇಕಾಯ್ತು. ಅಂದು ನೀರು ಸುರಿಸದ ಬರಡು ಕಣ್ಣುಗಳು ಆ ಊರಲ್ಲಿ ಇರಲೇ ಇಲ್ಲ. ಈ ಸುದ್ದಿ ಕೇಳಿದವರ ಕಣ್ಣುಗಳೇ ಬಿಡುವಿಲ್ಲದೆ ಬೇಕಾದಷ್ಟು ಒಸರುತ್ತಿರುವಾಗ ಆ ಊರಲ್ಲಿದ್ದು ಕಂಡವರ ಗೋಳು ಕಡೆಗಿರಲಿ ಅನಕಾ.

-೨-
ನಾಗೂರೊಂದು ದೊಡ್ಡ ಹಳ್ಳಿ, ಸಾಧಾರಣ ಉದ್ದಿಮೆದಾರರ ಊರೇ. ಎಂಥ ಕಾಲುಹಾರಿದ ಸಂಸಾರಿಕ ಬಂದರೂ ಆ ಊರಲ್ಲಿ ಹೊಟ್ಟೆಗೂ ಬಟ್ಟೆಗೂ ಸಿಗುತ್ತಿತ್ತು. ಅಂದರೆ ದಾನಧರ್ಮದ ಪ್ರಸ್ತವೇ ಅಷ್ಟು ಬೆಳದಿತ್ತೆಂದು ಯಾರೂ ತಿಳಿಯಬಾರದು. ಸಣ್ಣ ಪುಟ್ಟ ಕೂಲಿಕುಂಬಳಿಗಳೇ ಅಷ್ಟು ಇರುತ್ತಿದ್ದವಲ್ಲಿ.

ಆ ಊರಲ್ಲಿ ದಾನಮ್ಮನೆಂಬ ಒಬ್ಬ ವಿಧವೆ, ಗಂಡನು ಹೆಂಡತಿಗಾಗಿ ಬೆಳ್ಳಿ ಬಂಗಾರ, ಹೊಲಮನೆಗಳನ್ನೇನೂ ಗಳಿಸಿ ಇಟ್ಟಿರದಿದ್ದರೂ ಆರು ಮಕ್ಕಳ ರತ್ನಮಾಲೆಯನ್ನಾದರೂ ಕೊರಳಿಗಿಡಿಸಿ, ತಾನು ನಿಶ್ಚಿಂತೆಯಿಂದ ಪರಲೋಕದ ಹಾದಿಯನ್ನು ಹಿಡಿದು ಹೋಗಿದ್ದ. ದಾನಮ್ಮನು ತನ್ನ ಹೊಟ್ಟೆಗೂ ಮಕ್ಕಳ ಸಂರಕ್ಷಣೆಗೂ ಕೂಲಿಕುಂಬಳೆ ಮಾಡದೆ ಗತ್ಯಂತರವೇ ಇಲ್ಲ. ಅವಳ ಜಾತಿಯಲ್ಲಿ ಉಡಿಕೆಯ (ಪುನರ್ವಿವಾಹ) ಪದ್ಧತಿಯಿದ್ದರೂ ಈಕೆಯನ್ನು ಯಾರು ಮಾಡಿಕೊಂಡಾರು? ಇವಳೊಬ್ಬಳೇ ಇದ್ದರೆ ಮರುದಿನವೇ ಸೌಭಾಗ್ಯವತಿಯಾಗಿರಬಹುದಾಗಿತ್ತು. ಆದರೆ ಆಕೆಯ ಉಡಿಯಲ್ಲಿ ಆರು ಗಂಡುಗಳು ಬೇರೆ ಬಿದು ಕೊಂಡಿದ್ದವಲ್ಲವೇ? ಆಕೆಯ ಹೆಣ್ಗೂಲಿಯಿಂದ ಏಳು ಜೀವಗಳ ಪೋಷಣೆ ಹೇಗೆ ಆಗಬೇಕು? ಒಮ್ಮೊಮ್ಮೆ ಬೇಜಾರಪಟ್ಟರೂ ಉಪಾಯವೇನು? ಇಚ್ಛೆಯಿರಲಿ ಇಲ್ಲದಿರಲಿ, ಉಡಿಕೆಯ ಆಶೆಯನ್ನಂತೂ ಬದಿಗಿರಿಸಲೇ ಬೇಕಲ್ಲಾ! ಬೇಸತ್ತು ಮನಸ್ಸು ಮುದುಡಿದಾಗ ಗಳಿಗೆ ಹೊತ್ತು, ತನ್ನಲ್ಲಿ ತಾನೆ ದುಃಖ ದೆಣಿಕೆಯಿಂದ ಮನಸಿನ ಮಾಪನ್ನು ಅಳೆದಳೆದು ಬರುಕುವಳು. ಅಳಿಯುವುದಾದರೂ ಎಷ್ಟು ಹೊತ್ತು? ಹೀಗೆ ಕತ್ತಲೆಯು ಹರಿದಾಗ ಬೆಳಕಿನ ಚಿಹ್ನಗಳೂ ಆಕೆಗೆ ತೋರದಿರುತಿರಲಿಲ್ಲ. ಆರು ಮಕ್ಕಳಲ್ಲಿ ನಾಲ್ವರು ಗಂಡು ಮಕ್ಕಳು ನಾಳೆ ದುಡಿಯುವವರಾದ ಮೇಲೆ, ತನ್ನ ಸುಖಕ್ಕೇನು ಕೊರತೆ? ಹುಲಿಯಂಥ ಮಕ್ಕಳು ನನ್ನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರೆಸಿಯಾರು ದೊಡ್ಡವರಾದ ಮೇಲೆ. ಈ ವಿಚಾರ ಬಂದಾಗ ಮಕ್ಕಳೆಲ್ಲ ಮಲಗಿರಲಿ, ಕಗ್ಗತ್ತಲೆಯ ದಟ್ಟ ಕಾಡಿಗೆಯೇ ಎಲ್ಲಾ ಕಡೆಗೂ ತೂರಿರಲಿ, ಆ ತಟ್ಟನೆ ಕೈಗೆ ಬಂದ ಮಗುವನ್ನು ಮಗ್ಗುಲಲ್ಲಿ ಎಳಕೊಂಡು, ‘ಲೊಟಲೊಟ’ ಮುದ್ದು ಕೊಡುವಳು, ಅಳುವ-ಹಟಮಾಡುವ ಕಾಟವೂ, ಅವುಗಳ ಹೊಟ್ಟೆ ಬಟ್ಟೆಗೆ ದುಡಿಯುವ ಶ್ರಮವೂ ಆಗ ಎಲ್ಲಿ ಮಾಯವಾಗಿ ಹೋಗುವವೋ ಯಾರು ಬಲ್ಲರು? ಆರುಮಕ್ಕಳ ಹಾವಳಿ ಎದ್ದಾಗ, ಅವುಗಳ ಬೇನೆ ಬೇಸರಿಕೆಯಲ್ಲಿ, ಹಬ್ಬ ಹುಣ್ಣಿವೆ ಬಂದು ಹೊಸ ಅಂಗಿ- ಹೋಳಿಗೆಗಳನ್ನು ಬೇಡಿದಾಗ ಒಮ್ಮೊಮ್ಮೆ ಗಂಡನನ್ನು ಬಯ್ದೂ ಬಿಡುವಳು. ಹಡೆದವರು ಇಬ್ಬರು, ಆದರೆ ಅಷ್ಟೆಲ್ಲಾ ಕಾಟ ತನಗೊಬ್ಬಳ ಕೊರಳಿಗೆ ತೊಡಕಿಸಿ ಹೋಗಬೇಕೇ ಆ ಕಟುಕ? ಗಂಡನ ಸಲುವಾಗಿ ತಾನು ಅದೆಷ್ಟೋ ಅಳುವಳಾದರೂ, ಮಕ್ಕಳೂ ತಂದೆಯ ನೆನಪು ತೆಗೆದು ತನ್ನೊಡನೆ ಅಳಹತ್ತಿದರೆ ಈಕೆ ರಂಬಿಸುವ ಬಗೆಯೇ ಬೇರೆ- “ನಮ್ಮನ್ನೆಲ್ಲಾ ಬಿಟ್ಟು ಹೋದ ಆತನ ನೆನಪನ್ನೇ ತೆಗೆಯೋಣ ಬೇಡ ನಾವು ಯಾರೂ” ಎನ್ನುವಳು.

ಆಕೆಯ ಮಕ್ಕಳಲ್ಲಿ ‘ನಂಜುಂಡ’ ಹಿರೇ ಮಗ, ವಯಸ್ಸು ಎಂಟು-ಒಂಬತ್ತು ಇದ್ದರೂ ಬಡವರ ತಕ್ಕ ಮಗು. ಅವ್ವ ಹೊಟ್ಟೆಯ ಪಾಡಿಗಾಗಿ ಹೊಲದ ಕೆಲಸಕ್ಕೆ ಹೋದರೆ ಆಯ್ವರೂ “ತಮ್ಮ-ತಂಗಿ”ಯರನ್ನು ಆಡಿಸುವನು; ಅತ್ತರೆ ಎತ್ತಿಕೊಳ್ಳುವನು; ಹಸಿದರೆ ಉಣ್ಣಿಸುವನು; ಹಾಸುವನು; ಹೊಚ್ಚುವನು; ಮಲಗಿಸುವನು; ಮೈ ತೊಳೆಯುವನು; ಅಂಗಿ ತೊಡಿಸುವನು. ಇಷ್ಟೆಲ್ಲಾ ಮಾಡಿ ಶಾಲೆಗೆ ಹೋಗುತ್ತಿದ್ದ. ಮನೆಯ ಕೆಲಸದಲ್ಲಿ ಅದೆಷ್ಟು ಜಾಗರೂಕನೋ ಅಷ್ಟೇ ಶಾಲೆಯಲ್ಲಿಯೂ, ಮೊದಲನೆ ನಂಬರು ಎಂದೂ ಬಿಟ್ಟಿಲ್ಲ, ಮಾಸ್ತರರು ಒಮ್ಮೆ ಹೇಳಿಕೊಟ್ಟರೆ ಎಂದೂ ಮರೆಯನು, ತನ್ನ ವರ್ಗದ ಹುಡುಗರಿಗೆ ಆತ ಒಬ್ಬ ಮಾಸ್ತರನೇ ಸರಿ, ಅಭ್ಯಾಸ ಹೇಳುವುದು, ಓದಿಸಿಕೊಳ್ಳುವುದು, ಕಠಿಣಲೆಕ್ಕಗಳನ್ನು ದೃಷ್ಟಿ ಮಣಿಗಳಿಗೆ ತಿಳಿಸಿಕೊಡುವುದು ಇತ್ಯಾದಿ ಕೆಲಸಗಳಿಂದ ಮಾಸ್ತರರಿಗೂ, ಹುಡುಗರಿಗೂ ಕೂಡಿಯೇ ಪ್ರಿಯನಾಗಿದ್ದನು.

ಬಡತನ, ಮೈ ತುಂಬಾ ಕೆಲಸ, ಸ್ವಲ್ಪವಾದರೂ ಬುದ್ಧಿಯ ಬಂಡವಲು ಇವಿಷ್ಟಿದ್ದರೆ ಮನುಷ್ಯನು ತಪ್ಪು ದಾರಿ ಹಿಡಿಯಲಿಕ್ಕೆ ಬಹಳ ಆತಂಕವುಂಟಾಗುತ್ತದೆ. ಕೈಯಲ್ಲಿ ಕಾಸಿದ್ದರೆ ಹುಡುಗರು ಕೋತಿಯಂತೆ ಕಟ್ಟಾಣಿಯನ್ನೂ ಹುಡಿಗೂಡಿಸುವರು. ಕೆಲಸಗೇಡಿಗಳು ಕಾಲುಬಿಟ್ಟ ಕತ್ತೆಯಂತೆ ತಿರುಗುವುದರಲ್ಲಿ ಸಂಶಯವೇನು? ಹೂಟಗೇಡಿಯ ಮುಂದೆ ಹುಲ್ಲು ಹಾಕಿದರೆ, ಗೂಟ ಕಿತ್ತಿಕೊಂಡು ಇದಿರಿಗೆ ಬರುವುದೆಂದು ಹೇಳುವರಲ್ಲಾ! ಕೈಯಲ್ಲಿ ದುಡ್ಡು, ಸಿಕ್ಕಲ್ಲಿ ತಿರುಗುವ ಬಿಡುವು ಸಿಕ್ಕರೆ ಅವಗುಣಗಳ ಸುಂಟರಗಾಳಿಯಲ್ಲಿ ಸಿಕ್ಕು ಬೀಳುವುದುಂಟು. ಅದರಲ್ಲಿ ಬುದ್ಧಿ ಹೀನ ಮನಸ್ಸು, ‘ಮನವೆಂಬ ಮರ್ಕಟ’ ಮೊದಲೇ! ಕೇಳುವದೇನು? ನಂಜನಿಗೆ ಈ ಯಾವ ಖೊಟ್ಟಿ ಸುಳಿಗಳಿರಲಿಲ್ಲವೆನ್ನಬೇಕು. ಅಂತೇ ಆತ ಸದ್ಗುಣಸಂಪನ್ನ. ಇವನಲ್ಲಿ ಸೇರಿಕೊಳ್ಳಲಿಕ್ಕೆ ಬಂದ ದುರ್ಗುಣಗಳೆಲ್ಲಾ ರಿಝರ್ವ್ ತಿಕೀಟಿನ ಸದ್ಗುಣಗಳನ್ನು ಕಂಡು ಹೊರಗಿನಿಂದ ಹೊರಗೇ ಮರಳುವವು. ಈತನ ಸಮೀಪ ಇಂಥ ಭೂತವೇತಾಳಗಳು ಸುಳಿಯಬಾರದೆಂದೋ ಏನೋ- ‘ನಂಜುಂಡ’ ಎಂದು ಹೆಸರಿಟ್ಟದ್ದು;- ಕೇರು ಬಜಿ ಕಟ್ಟಿದಂತೆ.

-೩-
೧೯೩೪ನೇ ಇಸವಿಯ ಆರಂಭ, ಜಿಲ್ಲೆಯಂತ ಜಿಲ್ಲೆಯೆಲ್ಲಾ ಪ್ಲೇಗ ರಾಜನ ಹಾವಳಿ. ಬೇಕಾದ ಮನೆ ಹೊಕ್ಕು ಯಾರನ್ನು ನುಂಗಿ ನೀರು ಕುಡಿದರೂ ಕೇಳುವವರಾರು? ರಾಜನ ಕೆಲಸ! ಸರ್ಕಾರದ ಕಡೆಗೆ ದೂರ ಹೇಳಿದರೆ ಅವರು ಲಷ್ಕರೀ ಕಾಯ್ದೆ ಯನ್ನು ಸಾರಿ, ಮೈಲಿಯ ಶಸ್ತ್ರಧಾರಿಗಳ ಕಡೆಗಟ್ಟುವರು, ಅಲ್ಲಿಯೂ ಪ್ಲೇಗರಾಜನ ಮುದ್ರೆಯೇ, ಹೀಗೆ ಬೇಲಿಯೇ ಕುಳಿತು ತೋಟ ಮೇಯಲಿಕ್ಕೆ ನಿಂತರೆ ದೇವರ ಕಡೆಗೆ ಹೋಗದೆ ಗತ್ಯಂತರವೇ ಇಲ್ಲ; ಅದೂ ಇಲ್ಲದಿದ್ದರೆ ಅಡವಿಯ ಪಾಲು.

ಪ್ಲೇಗವೆಂಬುದು, ಶ್ರೀಮಂತರಿಗೆ ಸಂಪತ್ತಿನ ಸಂರಕ್ಷಣೆ ಹೇಗಾದೀತೆಂಬ ಚಿಂತೆಯ ಗಾಳಿ; ದುಡಿಕೊಂಡು ತಿನ್ನುವವರಿಗೆ ಪ್ರಾಣರಕ್ಷಣೆ ಆಗುವ ಬಗೆ ಹೇಗೆಂದು ಕೊರೆಯುವ ಚೂರಿ; ಸೋಟಪಟಿಂಗರಿಗೆ ಅದೊಂದು ಸುಗ್ಗಿದೇವರಾಯನ ಕರುಣೆ, ಅಂತೂ ಬಂತು ನಾಗೂರಿಗೂ ಪಾಳಿ, ಜನರೆಲ್ಲಾ ತಂತಮ್ಮ ಶಕ್ತ್ಯಾನುಸಾರ ಗುಡಿಸಲು ಕಟ್ಟಿಕೊಂಡು ಬೈಲಿಗೆ ಬಂದು ನಿಂತರು, ದಾನಮ್ಮನೂ ಒಂದು ಕಣಿಕೆಯ ಗೂಡು ಕಟ್ಟಿ ಕೊಂಡು ತನ್ನ ಮರಿಗಳನ್ನ ಇಟ್ಟು ಸಲಹಹತ್ತಿದಳು.

ನಮ್ಮಲ್ಲಿ ಆಪ್ತತ್ವವಿಲ್ಲದಿದ್ದರೂ ಹತ್ತುಗಡೆ ಹೆಚ್ಚು ಒಮ್ಮೊಮ್ಮೆ. ಇಷ್ಟು ಜಾತಿ-ಇಷ್ಟು ಮೋತಿಗಳಲ್ಲಿ ಪರಸ್ಪರ ಸಹಾನುಭೂತಿ-ಪ್ರೀತಿಗಳಿರದಿದ್ದರೂ ನಿರ್ಜೀವ ಗುಡಿಸಲುಗಳಲ್ಲಿ ಪರಸ್ಪರ ಪ್ರೇಮೋದಯವಾಗಿ ಬಿಟ್ಟಂತೆ, ಒಂದಕ್ಕೊಂದು ಹತ್ತಿದ ಗುಡಿಸಲುಗಳು ಬಿನ್ ಇಯತ್ತೆಯ ಹುಡುಗರು ಡ್ರಿಲ್‌ಗೆ ನಿಂತಂತೆ ನಿಂತವು.

ನೆರೆಹೊರೆಯ ಹಳ್ಳಿಗಳಲ್ಲಿ ಪ್ಲೇಗರಾಜನ ಕ್ರೌರ್ಯದ ಕತೆಗಳನ್ನು ಕೇಳಿದ ನಾಗೂರಿನ ಜನರು ಇಲಿಗಳು ಬೀಳಹತ್ತಿದಾಗಲೆ ಪಟಪಟ ಊರು ಬಿಟ್ಟು, ಅಡವಿ ಸೇರಿದ್ದರಿಂದ ಊರ ಗೌಡನು ‘ಜನನ ಮರಣ ಪತ್ರಿಕೆ’ಯಲ್ಲಿ ಬರೇ ಜನನದ ಲೆಕ್ಕವನ್ನೇ ಬರಕೊಂಡು ಬರಬೇಕಾಯ್ತು. ಪ್ಲೇಗಿನಲ್ಲಿ ಮರಣ ಸಂಖ್ಯೆಯೇ ಶೂನ್ಯ. ಬರೇ ಹುಟ್ಟಿದವರು! ಕೆಲವು ದೊಡ್ಡ ಮನುಷ್ಯರು ಒಳಗೊಳಗೆ ಮಿಡುಕಿಯೂ ಬಿಟ್ಟರು, ಪ್ಲೇಗವೆಂದು ಮೋಸಹೋಗಿ ಸುಮ್ಮನೇ ಊರು ಬಿಟ್ಟು ಖರ್ಚಿಗೀಡಾದೆವಲ್ಲಾ ಎಂದೇ ಅವರ ವಿಚಾರ, ಮದುವೆ ಯಲ್ಲಿ ಬೀಗಬೀಗರಲ್ಲಿ ಜಗಳವಾಗುವುದೇ ಸಂಪ್ರದಾಯವಾಗಿರುವಂತೆ ಮರಣವಿಲ್ಲದ ಪ್ಲೇಗದಿಂದೇನು ಪ್ರಯೋಜನ? ನೂರು ಬಿದ್ದು ನೂರಾರು ಸತ್ತಿದ್ದರೆ ಸೊಗಸಿತ್ತು!-ಅರಿವೆಯಂಗಡಿಯವರಿಗೆ. ಅಲ್ಲದೆ, ಮತ್ತೆ ಆ ಪಾಳಿ ತಮಗೆ ಬಂದಿದ್ದರೆ? ಅಡವಿಗೆ ಬಂದವರೆಲ್ಲಾ ಸುಖರೂಪದಿಂದ ಮನೆ ಸೇರುವೆವಲ್ಲಾ ಎಂಬ ಹಿಗ್ಗೂ ಬಹು ಜನರಿಗಿತ್ತು.

ಇನ್ನೆಂಟು ದಿನಕ್ಕೆ ಈ ವನವಾಸವು ತೀರುವುದಿತ್ತು. ಮಾರಿಯ ಬಾಯಿಂದುಳಿದ ಜನರೆಲ್ಲಾ ಸೇರಿ ಕಾಳುಬೆಲ್ಲ ಕೂಡಿಸಿ ಸಮಾರಂಭವೊಂದು ಹೂಡಿದರು. ನುಂಗದೆ ಬಿಟ್ಟು ಕರುಣೆ ತೋರಿಸಿದ ಮರಗವ್ವನಿಗೆ ನೈವೇದ್ಯ ಬೇಡವೇ? ನೀಲಕಂಠೇಶ್ವರ ಗುಡಿಯೊಂದರಲ್ಲಿ ಅಡಿಗೆ ಮಾಡಿಸಿ, ಆ ಭಾಗದ ಗುಡಿಸಲಿನವರಿಗೆಲ್ಲಾ ಊಟಕ್ಕೆ ಹೇಳಿದರು.

ದಾನವ್ವ ಎಂದಿನಂತೆ ತನ್ನ ಹೊಲದ ಕೂಲಿಗೆ ಹೋಗಿದ್ದಳು, ಮಕ್ಕಳ ಮಾಲೆಯು ನಂಜನ ಕೊರಳಿಗೆ. ಈವೊತ್ತು ಊಟಕ್ಕೆ ಹೇಳಿದ್ದರಿಂದ ದಾನವ್ವ ರೊಟ್ಟಿ ಸಹ ಮಾಡಿದ್ದಿಲ್ಲ, ಇದ್ದ ತಂಗುಳ ರೊಟ್ಟಿಯಲ್ಲಿ ಎರಡು ಮಕ್ಕಳಿಗಿಟ್ಟು ತಾನೊಂದು ಸುತ್ತಿಕೊಂಡು ಒಯ್ದಿದ್ದಳು, ನಂಜುಂಡ ಹುಡುಗರೊಡನೆ ಮೊದಲನೇ ಊಟವನ್ನು ಮನೆಯಲ್ಲಿ ಮುಗಿಸಿ, ಇನ್ನೆಂಟು ದಿನಕ್ಕೆ ಶಾಲೆಯ ಅಭ್ಯಾಸ ಪ್ರಾರಂಭವಾಗುವದಲ್ಲಾ ಎಂದುಕೊಂಡು ಗಂಟಿನೊಳಗಿನ ಪುಸ್ತಕ ತೆಗೆದು ಧೂಳು ಜಾಡಿಸಿ ಓದುತ್ತ ಕುಳಿತ. ಹುಡುಗರೆಲ್ಲಾ ಅಲ್ಲಿ-ಇಲ್ಲಿ ಆಡುತ್ತ ಹೋದರು. ಉಂಡು ಓದುತ್ತ ಕುಳ್ಳಿರುವದೆಂದರೆ, ನಿದ್ರೆಯ ಔಷಧಿ ಕುಡಿದಂತೆಯೇ ನಿದ್ದೆ ಬರಲು ಅಲ್ಲಿಯದಲ್ಲೇ ಮಲಗಿದ ಆ ನಂಜ.
* * *

ಆರು ತಾಸು. ಹೊಲಗೆಲಸ ಮಾಡಿಕೊಂಡು ಬಂದವರೂ, ಊರೊಳಗಿನ ನೇಕಾರ ಮುಂತಾದವರೂ ಜಳಕ ಮಾಡುವ ಹೊತ್ತು. ಹಳ್ಳದಲ್ಲಿ ನೆರೆದ ಜನರಿಗದೊಂದು ಉಲ್ಲಾಸ. ಗುಡಿಯಲ್ಲಿ ನೆರೆದ ಕಾರುಭಾರಿಗಳಿಗೊಂದು ಸೊಗಸು, ಖಟಪಿಟ ಮಾಡಿ, ಜನರಿಗೆಲ್ಲಾ ಪ್ರಸಾದಲಾಭ ಮಾಡಿಕೊಟ್ಟೆವೆಂದು ಹೆಮ್ಮೆಯಿಂದ ವೇದಮೂರ್ತಿ-ರಾಚಯ್ಯನವರು ಗುಡಿಯ ಪಾವಟಿಗೆಯ ಮೇಲೆ, ಕಾಲ ಮೇಲೆ ಕಾಲು ಹಾಕಿ ಕುಳಿತು ತಮ್ಮ ಕೈಗುಣವನ್ನು ಹೊಗಳಿಕೊಳ್ಳುತ್ತಿದ್ದರು. ಭಕ್ತಜನರೂ ಹಿಂದೆ ಕೈ ಕಟ್ಟಿಕೊಂಡು ಸುತ್ತಲು ನೆರೆದು ನಿಂತು, ಕೇಳಿ ತಮ್ಮ ಗುರುವರ್ಯರ ಪೌರುಷಕ್ಕೆ ತಲೆದೂಗುತ್ತಿದ್ದರು. ಆಗ ನಿಂತವರು ನಿಂತಲ್ಲೇ ಬೆಚ್ಚಿ ಬಿದ್ದರು! ಬೊಬ್ಬೆ! ಬೊಬ್ಬೆಯ ಮೇಲೆ ಬೊಬ್ಬೆ!! ಹೊರಳಿ ನೋಡಿದರೆ ಗುಡಿಸಲ ಗುಂಪಿನೊಳಗಿಂದ ಒತ್ತರಿಸಿ ಹೊಗೆಯೇಳುತ್ತಿದೆ! ಹಳ್ಳದೊಳಗಿನ ಜನರು ಹಸಿಯರಿವೆ ಉಟ್ಟುಕೊಂಡೇ ಕೊಡ ಹೊತ್ತು ಹೊತ್ತುಕೊಂಡು ಓಡುತ್ತಿದ್ದಾರೆ! ಗುಡಿಸಲಿಗೆ ಬೆಂಕಿ ಬಿದ್ದಿದೆ, ಜನರೆಲ್ಲಾ ಓಡಿ ಓಡಿ ಬಂದರು, ನೀರು ತಂದರು. ಗೌಡ ಬಂದು- ‘ಪಾಪಿ ದಾನಮ್ಮನ ಕಾಳುಕಡ್ಡಿಯ ಗಂಟನ್ನಾದರೂ ಹೊರಗೆಳಕೊಳ್ಳಿರೋ’ ಎಂದು ಕೂಗಿದ. ಅಷ್ಟರಲ್ಲಿ ಎಲ್ಲಾ ಸುಟ್ಟು, ಹೊಂದಿದ ನಾಲ್ಕಾರು ಗುಡಿಸಲುಗಳಿಗೆ ಕೊಳ್ಳಿ ಬಿದ್ದುದನ್ನು ಜನರು ನೋಡುತ್ತಿದ್ದರು. ಹಾಗೇ ನನ್ನದು-ಪರರದು ಎಂಬ ಭೇದವಿಲ್ಲದೆ ಹೌಹಾರಿ ಜನರು ಉರಿಗೆ ನೀರೆರಚುತ್ತಿದ್ದರು. ಈ ಗುದುಮುರಿಗೆ ಅರ್ಧ ತಾಸಿನಲ್ಲಿಯೆ ಕೊನೆಗಂಡಿತಾದರೂ ಒಂಬತ್ತು ಗುಡಿಸಲುಗಳು ಬೂದಿಯಾಗಿ ಮಣ್ಣು ಗೂಡಿಬಿಟ್ಟಿದ್ದವು. ಮುಗಿಯುವ ಹೊತ್ತಿಗೆ ನೆರೆದ ಜನ ಏಳೆಂಟು ನೂರಕ್ಕೆ ಮಿಕ್ಕಿತ್ತು. ‘ಕಾಯ’ದವರಾದ ಗಂಡಸರ ಕಾಯಕಷ್ಟವು ಮುಗಿಯುವಷ್ಟರಲ್ಲಿ, ‘ವಾಚೆ’ ಯವರಾದ ಹೆಂಗಸರು ನೆರೆದು ತಮ್ಮ ವಾಚಾಳತನವನ್ನು ಮೊದಲು ಮಾಡಿದರು-“ಆಯ್, ಎಳೇ ಮಕ್ಕಳೀಗಿ ಬಿಟ್ಟು ಕೂಲಿಗೊಗ ಬೇಕೇನ ಮುದೊಡಿ?” “ದೇವರ ಹಬ್ಬ ಇಂದ, ಇಂದೂ ಬಿಡಬಾರದಾ ದಾವತೀನ್ನ? ಅದಕೇ ನೀಲಕಂಟಪ್ಪ ಸಿಟ್ಟು ಕಾರಿದ,” “ಏನ್ರ್‍ಏ, ಹ್ಯಾಂಗಿದ್ರೂ ಉಳ್ಳಿಕ್ಕಿ ಹೇಳಿದ್ರು, ಹೊಟ್ಟೇ ಚಿಂತೇನಿತ್ತು ಇಕೀಗಿ, -ಹಾ ತೊರೆದು ಹೊಲಕ್ಕೆ ಹೋಗಲಿಕ್ಕ.” ಹೀಗೆ ಹಿಂದು ಮುಂದಿನ ವಿಚಾರವಿಲ್ಲದ ತಲೆಗಳು ಬಾಯಿಯ ಗಂಟೆಯನ್ನು ಬಾರಿಸತೊಡಗಿದವು. ಆದರೆ ನೆರೆದ ಗಂಡಸರಿನ್ನೂ ಬೆಂಕಿಯಲ್ಲಿ ಸಿಕ್ಕ ಸಾಮಾನುಗಳನ್ನೆತ್ತಿ ಕಡೆಗೊಗೆಯುವುದು, ಉರಿಯುತ್ತಿದ್ದುದನ್ನು ನೊಂದಿಸುವುದು ಮುಂತಾದುದರಲ್ಲಿ ತೊಡಗಿದ್ದರು.

ಯಾರೋ ಕೂಗಿದರು- “ಗೌಡರೇ, ಹೆಣ ಇಲ್ಲಿ”, ಗೌಡ ಓಡಿ ಹೋಗಿ ನೋಡುತ್ತಾನೆ – ಬೂದಿಯ ಗುಂಪಿನಲ್ಲೊಂದು ಹೆಣ! ಮುದುಡಿ ಯಾಗಿ ಬಿದ್ದಿದೆ!! ಆದರೆ ಯಾರದದು? ಅರಿವೆ ಗುರುತಿಗೂ ಇಲ್ಲ! ಮೈತೊಗಲು ಸುಟ್ಟು ಸುಲಿದಿದೆ! ಎಲುವು ಕರಕಾಗಿವೆ! ಆಗ ಎದ್ದಿತು ಜನರಲ್ಲಿ ಹಾಹಾಕಾರ! ಬೆಂಕಿ ಆರಿಸುವಾಗ ಯಾರು ಬಿದ್ದರೋ? ಯಾರ ಹೆಣವೋ? ಪ್ರತಿ ಒಂದು ಮನೆಯವರೆಲ್ಲಾ ತಂತಮ್ಮ ಜನರನ್ನು ನೋಡಿಕೊಂಡರು, ಲೆಕ್ಕ ಸರಿಯಾಗಿತ್ತು, ಕಡೆಗೆ, ಸತ್ತವನು ನಂಜುಂಡನೇ ನಿಜವೆಂದು ನಿರ್ಧಾರವಾಯ್ತು.

ತಾಸಿನ ಮೇಲೆ ಈ ಸುದ್ದಿ ದಾನಮ್ಮನಿಗೆ ತಿಳಿಯಲು, ಆಕೆ ಬಡಕೊಳ್ಳುತ್ತ ಓಡಿ ಬಂದು ಮಗನ ಮೇಲೆ ಬಿದ್ದಳು!-“ಮಗನೇ, ಪಾಪಿ-ನನ್ನ ಬಿಟ್ಟಿನ್ನೆಲ್ಲಿಗೆ ಹೋದೆಯೋ? ಯಾರೂ ಸಾಯದಿದ್ದ ಈ ಸಾರೆಯ ಪ್ಲೇಗಿಗೆ, ಊರವತಿಯಿಂದ ನೀನೊಬ್ಬ ಆಹುತಿಯಾದೆಯಾ?” ಎಂದು ಹಾಡಿಹಾಡಿಕೊಂಡು-ಬಡಬಡಕೊಂಡು ಅಳಹತ್ತಿದಳು.

ನೀಲಕಂಠ ದೇವರ ಉತ್ಸವಕ್ಕೆ ಕೂಡಿಸಿದ ವರ್ಗಣೀ ಹಣದಿಂದ ನಂಜುಂಡನ ಅಂತ್ಯ ವಿಧಿಯನ್ನು ಮಾಡಿ ಮುಗಿಸದೆ ಗತ್ಯಂತರವೇ ಇರಲಿಲ್ಲ. ಮಾಡಿದ ಪ್ರಸಾದವು ಹಳಸಿ ನಂಜ-ನಿವಾಳಿ ಆಯ್ತು.

ಹಗಲು, ಮಧ್ಯಾಹ್ನ, ಊರಲ್ಲೆಲ್ಲಾ ಜನರಿದ್ದು ಗುಡಿಸಲಿಗೆ ಬೆಂಕಿಹತ್ತಿ, ಏಳೆಂಟುನೂರರ ವರೆಗೆ ಜನನೆರೆದು, ಜೀವದ ಹಂಗುದೊರೆದು ಬೆಂಕಿಯನ್ನು ನೊಂದಿಸಿದವರು ಜೀವವನ್ನುಳಿಸಲಿಲ್ಲವಲ್ಲಾ! ತಾಯಿಗೆ ಅಡವಿಗಟ್ಟಿ, ಹುಡುಗರಿಗೆ ಆಡಲಿಕ್ಕೆ ಕಳಿಸಿ, ಓದುತ್ತ ಮಲಗಿದ ನಂಜುಂಡನಿಗೆ ನಂಜು ಉಣಿಸಿದ ವಿಧಿಯ ಕಣ್ಮಸಕು ಅಲ್ಲವೇ ಇದು?
*****

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)