ಗೀತೆಯಲ್ಲಿ ಮುಪ್ಪುರಿ

ಗೀತೆಯಲ್ಲಿ ಮುಪ್ಪುರಿ

“ಭಗವದ್ಗೀತೆಯೆಂದರೆ ಶ್ರೀಕೃಷ್ಣನುಸುರಿದ ಉಪದೇಶಾಮೃತ; ಅರ್ಜುನನು ಸವಿದ ದಿವ್ಯ ಸಂಜೀವಿನಿ; ವ್ಯಾಸಮಹರ್ಷಿಗಳು ರಚಿಸಿದ ಅಮರಸಾಹಿತ್ಯ, ವೀರಾಗ್ರಣಿಯಾದ ಅರ್ಜುನನಿಗೆ ಯುದ್ಧರಂಗದಲ್ಲಿ ಕಾಳಗಕ್ಕೆ ಅನುವಾದಾಗ ಬಂದ ವಿಷಾದದ ಕಗ್ಗತ್ತಲೆಯನ್ನು ಕಿತ್ತೋಡಿಸಲು ಹೊಂಬಣ್ಣವನ್ನು ಹೊರಸೂಸುತ್ತ ಬಂದ ಸಹಸ್ರ ಕಿರಣನಾದ ಜ್ಞಾನರವಿ. ಸಾವಿರಗಟ್ಟಲೆ ವರುಷಗಳಿಂದ ತಾಳಿ ಬಾಳಿ, ಇನ್ನೂ ಲಕ್ಷಾವಧಿ ವರುಷ ಬಾಳಿಯುಳಿಯುವ ಸನಾತನ ಧರ್ಮಬೀಜದ ತೆನೆಯಿದು. ಜಗತ್ತಿನ ಮುಖ್ಯ ಭಾಷೆಗಳಲ್ಲೆಲ್ಲಾ ರೂಪಾಂತರ ಹೊಂದಿ, ಸಮ್ರಾಟ ಭಾಷೆಗಳ ಮುಗುಟವನ್ನು ಮೆರುಗುಗೊಳಿಸುತ್ತಿರುವ ಮಹಾಮಣಿ. ಲೋಕದ ಮಹಾಪುರುಷರಿಗೆಲ್ಲ ಜೀವನಸಮುದ್ರದಲ್ಲಿ ಕಡೆಗಾಣಿಸಿದ ನೌಕೆಯ ಹುಟ್ಟು.” ಎಂದು ಮುಂತಾಗಿ ಗೀತೆಯ ಬಗೆಗೆ ಇನ್ನೆಷ್ಟೋ ಹೇಳಬಹುದು. ಆದರೆ ಇಷ್ಟು ಮಹತ್ತು ಆದಕ್ಕೇತರಿಂದ ಬಂತು?

ಗೀತೆಯನ್ನು ಮೊದಲು ಆಲಿಸಿದವನು ಸಂಜಯ. ಅವನ ಅದರ ಬಗ್ಗೆ ಹೇಳಿದ ಮಾತು ಹೆಚ್ಚು ಮಹತ್ವದಷ್ಟೇ? ಸಂಜಯನು ಇಂತೆಂದನೆಂದು ಗೀತೆಯನ್ನು ಉಪಸಂಹರಿಸಿ, ಶ್ರೀವ್ಯಾಸಮಹರ್ಷಿಗಳು ಅದಕ್ಕೆ ತಮ್ಮ ಒಪ್ಪಿಗೆಯನ್ನಿತ್ತಿದ್ದಾರೆ. ಅದಾವ ಮಾತದು?

– “ಎಲ್ಲಿ ಯೋಗೇಶ್ವರ ಕೃಷ್ಣನಿರುವನೋ, ಎಲ್ಲಿ ಧನುರ್ಧಾರಿಯಾದ ಪಾರ್ಥನಿರುವನೋ ಅಲ್ಲಿಯೇ ಸಿರಿಯುಂಟು, ವಿಜಯವುಂಟು, ವೈಭವವುಂಟು, ಮತ್ತು ಅಚಲವಾದ ನೀತಿಯುಂಟೆಂದು ನನ್ನ ಅಭಿಪ್ರಾಯ.”

ಸಿರಿ, ವಿಜಯ, ವೈಭವ, ಅವಿಚಲವಾದ ನೀತಿ ಇವು ಯಾರಿಗೆ ಬೇಡ? ಯಾವ ಮಹಾಪುರುಷನಾದರೂ ಇವುಗಳ ಬಗ್ಗೆ ಅನಾಸಕ್ತಿಯಿಂದ ಇರಬಲ್ಲನೇ ಹೊರತು, ತಿರಸ್ಕಾರದಿಂದ ಇವನ್ನು ಕಾಣಲಾರನು. ಹಾಗೆ ಕಂಡವನು ಮಹಾ ಪುರುಷನಾಗಿಲ್ಲ. ಯೋಗೇಶ್ವರ ಕೃಷ್ಣ, ಧನುರ್ಧಾರಿಯಾದ ಅರ್ಜುನ ಇವರನ್ನು ನಮ್ಮಲ್ಲಿ ಅಳವಡಿಸಿಕೊಂಡರೆ, ಮೇಲೆ ಕಾಣಿಸಿದ ದಿವ್ಯವಸ್ತುಗಳು ನಮ್ಮ ಮೈಗೂಡುತ್ತವೆಂದಾಯಿತು. ಕೃಷ್ಣ – ಅರ್ಜುನ ಅಂದರೆ ಶುದ್ಧ ಜ್ಞಾನ ಮತ್ತು ತದನುಸಾರವಾದ ಕ್ರಿಯೆ, ಒಂದು ಒಳಗಿನದು, ಇನ್ನೊಂದು ಹೊರಗಿನದು. ಇವೆರಡು ಶಕ್ತಿಗಳನ್ನು ಗಳಿಸಿದ ಪುರುಷೋತ್ತಮನು ಪುರುಷೋತ್ತಮನೇ ಸರಿ. ಮಳೆ ನೀರು ಎಲ್ಲಿ ಬಿದ್ದರೂ, ಹೇಗೆ ಹರಿದರೂ ಸಮುದ್ರನಾಥನನ್ನು ಸೇರುವುದೇ ಅದಕ್ಕೆ ಕೊನೆಯ ಗುರಿಯಾಗಿರುವಂತೆ ಈ ನರನು ಆ ನರೋತ್ತಮನಾದ ನಾರಾಯಣನಲ್ಲಿ ಒಂದುಗೂಡಿ ಹೋಗುವುದೇ ಈ ವಿಶ್ವಲೀಲೆಯ ಉದ್ದೇಶ. ಮಳೆಯದೂ ನೀರು, ಸಮುದ್ರದ್ದೂ ಮಹಾಜಲ; ಒಂದಕ್ಕೊಂದು ಬೆರೆತುಹೋಯಿತು. ಆದರೆ ದೇವ ಮಾನವರೆಲ್ಲಾ ಒಂದೇಯೇ? ಹೌದು, ನಿಶ್ಚಯವಾಗಿ ಒಂದೇ. ಒರೆಯಲ್ಲಿ ಕಟ್ಟಿ ಹಾಕಿಟ್ಟ ಹಾಗೆ. ಈ ಮನುಷ್ಯ ಶರೀರಗಳೆಲ್ಲಾ ಅಂಥ ಒರೆಗಳು. ಒಳಗಿನ ಆತ್ಮವು ಇಟ್ಟ ಕತ್ತಿ, ಬರೇ ಒರೆ ನೋಡಿದರೆ ಕತ್ತಿ ಕಾಣಿಸದು, ಬರೇ ಶರೀರ ನೋಡಿದರೆ ಆತ್ಮ ಕಾಣಿಸದು. ಆದರೆ ನಿಜವಾಗಿಯೂ ಒಳಗಿದೆ. ಪ್ರತಿ ಒಬ್ಬನ ವಿಚಿತ್ರ ಸ್ವಭಾವ, ಆಶ್ಚರ್ಯಕರವಾದ ಕೃತಿ, ಮನೋಹರವಾದ ರೂಪ, ಮಧುರವಾದ ಕಂಠ ಮುಂತಾದವುಗಳೆಲ್ಲಾ ಬೈತಿಟ್ಟ ಆತ್ಮನ ಕಿರಣಾಂಶಗಳ ಬೆಳಕೇ. ಅಂತೂ ಪ್ರತಿ ಒಬ್ಬ ಪ್ರತಿ ಒಂದು ದೈವಾಂಶವೇ. “ಯಾವಯಾವದು ವಿಭೂತಿಯುಳ್ಳದ್ದಾಗಿಯೂ, ಸಿರಿಯುಳ್ಳದ್ದಾಗಿಯೂ, ಪ್ರಭಾವವುಳ್ಳದ್ದಾಗಿಯೂ ಇದೆಯೋ ಅದೆಲ್ಲವೂ ನನ್ನ ತೇಜಸ್ಸಿನ ಅಂಶದಿಂದಲೆ ಉಂಟಾದುದೆಂದು ತಿಳಿ.”

ಎಂಥದೇ ಆಗಲಿ ಸಿರಿ ಪ್ರಭಾವ ಯಾರಿಗೆ ಇಲ್ಲ? ಅಂತೂ ಎಲ್ಲವೂ ದೇವನ ಅಂಶ. ಅದರಂತೆ ಮನುಷ್ಯನೂ ಆದರೆ ಮನುಷ್ಯನ ಆತ್ಮದ ಆವರಣವು ಹರಿದಾಗ ಅದರ ಬೆಳಕು ಕಳೆಗೊಳ್ಳುವದು. ಆಗ ಆತ್ಮದ ಅಣುವು ಪರಮಾತ್ಮನನ್ನು ಬೆರೆಯಲು ತಕ್ಕದಾಗುವದು. ವಿಶ್ವವೀರನಿಗೆ ಮನಸ್ಸಾದಾಗ ಸಮರ ಕೋಲಾಹಲದ ಇಚ್ಛೆಯಾದಾಗ ಆತನು ಕತ್ತಿಯನ್ನು ಹಿರಿದು ಹೊರದೆಗೆಯುವನು. ಆವರಣವನ್ನು ಹರಿದುಕೊಳ್ಳಲು ಯಾವ ಆತ್ಮವು ಒದೆದಾಡುವದೋ ಅದನ್ನು ಎತ್ತಿ ಹಿಡಿದು ಪರಾಮರಿಸದಿರುವದೇ ಪರಮ ಆತ್ಮವು! ಕೆಸರಿನಲ್ಲಿ ಸಿಕ್ಕು ಒದೆದಾಡುವುದನ್ನು ಕಂಡ ಮೀನಿನ ಮರಿಯನ್ನು ಬದುಕಿಸಲೆಳಸುವದಿಲ್ಲವೇ ತಾಯಿ ಮೀನು? ಪೂರಾ ಕೆಸರಲ್ಲಿಯೇ ಮುಚ್ಚಿ ಹೋಗಿ ಮೈಮರೆಸಿಕೊಂಡರೆ ಸಧ್ಯಕ್ಕೆ ಉಪಾಯವೇ ಇಲ್ಲ. ಅಂತು ಎಲಿವಿಲಿ ಒದೆದಾಡಬೇಕು. “ಹೇಡಿತನದಿಂದ ನನ್ನ ವೃತ್ತಿಯು ಕಂದಿಹೋಗಿದೆ. ನಾನು ಕರ್ತವ್ಯ ಮೂಢನಾಗಿ ಬಿಟ್ಟಿದ್ದೇನೆ. ಆದುದರಿಂದ ಏತರಲ್ಲಿ ನನಗೆ ಹಿತವುಂಟೆಂಬುದನ್ನು ನಿಶ್ಚಯಪೂರ್ವಕವಾಗಿ ಹೇಳಬೇಕೆಂದು ಪ್ರಾರ್ಥಿಸುತ್ತೇನೆ. ನಾನು ನಿನ್ನ ಶಿಷ್ಯನಾಗಿದ್ದೇನೆ. ನಿನ್ನನ್ನು ಶರಣು ಹೊಕ್ಕಿದ್ದೇನೆ. ನನಗೆ ದಾರಿ ತೋರಿಸು” ಎಂದು ಮೊರೆಯಿಡಬೇಕು. ಹೀಗೆ ಮೊರೆ ಇಟ್ಟಾಗಲೇ, ಯುದ್ಧರಂಗವಿದ್ದರೂ ಇರಲೆಂದು ಶ್ರೀಕೃಷ್ಣ ಪರಮಾತ್ಮನು ಸಮಸ್ತ ಜ್ಞಾನ ಭಂಡಾರವನ್ನೇ ಅವನ ಮುಂದೆ ತೆರೆದಿಟ್ಟು, ತಾನು ಗಾರುಡಿಗನಾಗಿರದೆ – “ಜ್ಞಾನ ನಿಧಿ-ಸರ್ವ ಶಕ್ತಿವಂತ”ನೆಂಬುದನ್ನು ತೋರಿಸಲಿಕ್ಕೆ ವಿಶ್ವರೂಪಧಾರಣ ಮಾಡಿ ಕ್ಷಣಹೊತ್ತು ಭಕ್ತನ ಮುಂದೆ ಕುಣಿದನು. “ಚರ್ಮಚಕ್ಷುಗಳಿಂದ ನೀನು ನನ್ನನ್ನು ನೋಡಲಾರಿ. ನಿನಗೆ ದಿವ್ಯ ಚಕ್ಷುಗಳನ್ನು ಕೊಡುವೆನು” ಎಂದು, ಕೇಳದೆ ಇದ್ದರೂ ತನ್ನನರಿಯುವಂತೆ ದಿವ್ಯ ಚಕ್ಷುಗಳನ್ನಿತ್ತನು ಏಕೆ? ಅರ್ಜುನನು ಬೀಗನೆಂದೋ, ಗೆಳೆಯನೆಂದೋ? ಅಲ್ಲ. “ದೇವತೆಗಳಿಗೂ, ತಪಸ್ವಿಗಳಿಗೂ ಮಹಾದಾನಿಗಳಿಗೂ ಅಸಾಧ್ಯವಾದ ಇಂಥ ಜ್ಞಾನವೂ, ಈ ದರ್ಶನವು ಅನನ್ಯ ಭಕ್ತಿಯಿಂದಲೇ ಸಂಭವಿಸುವದು” ಅನನ್ಯ ಭಕ್ತಿಯೆಂದರೆ “ನನ್ನೊಡನೆ ಸೇರಿದವನಾಗು, ನನ್ನ ಭಕ್ತನಾಗು, ನನಗೋಸ್ಕರ ಯಜ್ಞಮಾಡು, ನನಗೆ ವಂದನೆಮಾಡು. ನೀನು ನನ್ನನ್ನೆ ಪಡೆಯುವೆ. ಇದು ನನ್ನ ಸತ್ಯ ಪ್ರತಿಜ್ಞೆ ನೀನು ನನಗೆ ಪ್ರಿಯನು.”

ಇಂತು ಭಗವಂತನು ಸತ್ಯಪ್ರತಿಜ್ಞೆಯನ್ನು ಮಾಡಿ ಭಕ್ತಿಯ ದ್ವಾರವನ್ನು ಸರ್ವರಿಗೂ ಮುಕ್ತದ್ವಾರವೆಂದು ಹೇಳಿರುವನು.

-೨-
ಭಕ್ತಿಭರಿತವಾದ ಹೃದಯ ರಥವನ್ನೇರಿ ಪರಮಾತ್ಮನು ಆಂತರಿಕ ಮತ್ತು ಬಾಹ್ಯಿಕ ಶಕ್ತಿಗಳೆರಡನ್ನೂ ಬೆಳೆಸಲನುವಾಗಿ, ಜ್ಞಾನವನ್ನು ಬೆಳೆಗುತ್ತ, ಕರ್ಮ ಕೌಶಲ್ಯವನ್ನುಳಿಸುತ್ತ ಅಂತರಾತ್ಮನನ್ನು ಎಚ್ಚರಿಸುವನು. ಈಗ ಜ್ಞಾನದ ವಿಷಯವನ್ನು ತೆಗೆದುಕೊಂಡರೆ ಜ್ಞಾನಕ್ಕೂ ದೇವನಿಗೂ ಸಂಬಂಧವಿದೆಯೋ?-

“ಜ್ಞಾನವೆಂಬ ತಪಸ್ಸಿನಿಂದ ಪವಿತ್ರರಾದ ಅನೇಕರು ನನ್ನ ಸ್ವರೂಪವನ್ನು ಹೊಂದುವರು. ಸೂರ್ಯನಿಗೆ ಸಮನಾಗಿ ಪ್ರಕಾಶಮಾನವಾದ ಜ್ಞಾನವು ಪರಮತತ್ವದ ದರ್ಶನವನ್ನು ಮಾಡಿಸುತ್ತದೆ. ನಾನು ಜ್ಞಾನಿಗೆ ಅತ್ಯಂತ ಪ್ರಿಯನು, ಮತ್ತು ಜ್ಞಾನಿಯು ನನಗೆ ಪ್ರಿಯನು. ಜ್ಞಾನಿಯಾದರೋ ನನ್ನ ಆತ್ಮವೇ ಆಗಿದ್ದಾನೆಂದು ನನ್ನ ಮತ.”

ಜ್ಞಾನಸ್ವರೂಪನಾಗುವದಕ್ಕೂ, ಪರಮಾತ್ಮನಲ್ಲಿ ವಿಲೀನವಾಗುವದಕ್ಕೂ ಭೇದವಿಲ್ಲ. ಆದರೆ ಜ್ಞಾನಸ್ವರೂಪನಾಗುವದೆಂತು; ಈಗ ಜ್ಞಾನದ ಅವಸ್ಥೆ ಹೇಗಿದೆ? ಮುಂತಾದವುಗಳನ್ನು ಅರಿಯುವುದು ಅವಶ್ಯಕವಾಗಿದೆ.

ಯಾವ ರೀತಿಯಲ್ಲಿ ಹೊಗೆಯಿಂದ ಬೆಂಕಿಯೂ, ಕೊಳೆಯಿಂದ ಕನ್ನಡಿಯೂ, ಚರ್ಮದ ಪರೆಯಿಂದ ಗರ್ಭವೂ ಮುಚ್ಚಿರುತ್ತದೆಯೋ ಅದೇ ರೀತಿಯಲ್ಲಿ ಕಾಮಾದಿರೂಪ ಶತ್ರುಗಳಿಂದ ಈ ಜ್ಞಾನವು ಮುಚ್ಚಿರುತ್ತದೆ. ಎಲೈ ಕೌಂತೇಯನೇ, ಇಂತಹ ತೃಪ್ತಿಪಡಿಸಲು ಶಕ್ಯವಲ್ಲದ ಈ ಕಾಮರೂಪ ಅಗ್ನಿಯು ನಿತ್ಯದ ಶತ್ರುವು, ಅದರಿಂದ ಜ್ಞಾನಿಯ ಜ್ಞಾನವು ಮುಚ್ಚಿರುತ್ತದೆ. ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವು ಶತ್ರುವಿನ ನಿವಾಸ ಸ್ಥಾನವಾಗಿವೆ. ಇವುಗಳ ಮೂಲಕ ಜ್ಞಾನವನ್ನು ಮುಚ್ಚಿ ಈ ಶತ್ರುವು ದೇಹಧಾರಿಯನ್ನು ಮೂರ್ಛೆಗೊಳಿಸುತ್ತದೆ. ಮಾಯೆಯ ಮೂಲಕ ಅವರ ಜ್ಞಾನವು ಆವರಿಸಲ್ಪಟ್ಟಿರುತ್ತದೆ. ಆದ್ದರಿಂದ ಜ್ಞಾನ ಮತ್ತು ಅನುಭವವನ್ನು ನಾಶಗೊಳಿಸತಕ್ಕ ಈ ಪಾಪಿಯನ್ನು ಅವಶ್ಯವಾಗಿ ತ್ಯಜಿಸು.” ಆದರೆ ಮುಚ್ಚಿ ಮುಸುಕಿದ ಕಾಮಾದಿ ರೂಪಗಳನ್ನು ಹೇಗೆ ತ್ಯಜಿಸುವುದು?” “ಯೋಗದಲ್ಲಿ – ಸಮತೆಯಲ್ಲಿ ಪೂರ್ಣತೆ ಹೊಂದಿದ ಮನುಷ್ಯನು ಕಾಲಾಂತರದಲ್ಲಿ ತನ್ನಲ್ಲಿ ತಾನೇ ಆ ಜ್ಞಾನವನ್ನು ಪಡೆಯುತ್ತಾನೆ. ಶ್ರದ್ಧೆಯುಳ್ಳವನೂ ಈಶ್ವರ ಪರಾಯಣನೂ ಜಿತೇಂದ್ರಿಯನೂ ಆದ ಪುರುಷನು ಜ್ಞಾನವನ್ನು ಪಡೆಯುತ್ತಾನೆ. ನನ್ನಲ್ಲಿ ತನ್ಮಯರಾಗಿ ನನ್ನನ್ನು ಪ್ರೇಮಪೂರ್ವಕ ಭಜಿಸುವವರಿಗೆ ನಾನು ಜ್ಞಾನವನ್ನು ಕೊಡುತ್ತೇನೆ… ಅವರ ಮೇಲೆ ದಯೆಗೈದು ಅವರ ಹೃದಯದಲ್ಲಿ ಸ್ಥಿತನಾಗಿ ಜ್ಞಾನವೆಂಬ ಪ್ರಕಾಶಮಯ ದೀಪದಿಂದ ಅವರ ಅಜ್ಞಾನ ರೂಪ ಅಂಧಕಾರವನ್ನು ನಾಶಗೊಳಿಸುತ್ತೇನೆ. ನನ್ನನ್ನೇ ಶರಣು ಹೋಗುವವರು ಈ ಮಾಯೆಯನ್ನು ದಾಟಿಬಿಡುತ್ತಾರೆ.”

ಸಮತೆಯಲ್ಲಿ ಪೂರ್ಣತೆ ಹೊಂದಿ, ಶ್ರದ್ಧೆಯಿಟ್ಟು, ಈಶ್ವರ ಪರಾಯಣನೂ ಜಿತೇಂದ್ರಿಯನೂ ಆಗಿ ತನ್ನಲ್ಲಿ ತನ್ಮಯನಾದವನ ಹೃದಯದಲ್ಲಿ ದೇವನು ಸ್ಥಿತನಾಗುವನು. ಆತನು ಆತ್ಮನಾಶಗೊಳಿಸುವ ನರಕದ ಮೂರು ಬಾಗಿಲುಗಳನ್ನು ಮುಚ್ಚಿ, ಅಜ್ಞಾನದ ಕತ್ತಲೆಯನ್ನು ಕತ್ತರಿಸಿ ಜ್ಞಾನ ಜ್ಯೋತಿಯನ್ನು ಬಿತ್ತರಿಸುವನು. “ನಹಿ ಕಲ್ಯಾಣ ಕೃತ್ಕಚ್ಚಿದ್ದು ರ್ಗತಿಂ ತಾತ ಗಚ್ಛತಿ’ ಎಂಬ ದೃಢವಿಶ್ವಾಸವಿರಲಿ.

-೩-
ಧನುರ್ಧಾರಿಯಾದ ಅರ್ಜುನನಂತೆ ಬಾಹ್ಯ ಶಕ್ತಿಯನ್ನು ಸಂಪಾದಿಸಬೇಕಾದರೆ ಕರ್ಮವಿಲ್ಲದೆ ಗತಿಯಿಲ್ಲ. ಕರ್ಮಾನುಸರಣೆಯೇ ನಮ್ಮ ಮಾರ್ಗವೆಂದರೆ ಅದು ಯೋಗ ಯುಕ್ತವಾಗಿರಲೇಬೇಕು. ಅದು ಕರ್ಮಯೋಗದಿಂದಲೇ ಸಾಧ್ಯ. “ಕರ್ಮ ಸನ್ಯಾಸಕ್ಕಿಂತ ಕರ್ಮಯೋಗವು ಹೆಚ್ಚಿನದು.”

ರಹಸ್ಯವನ್ನರಿತು ಮಾಡಿದ ಕರ್ಮವು ದಿವ್ಯತೆಯನ್ನುಂಟು ಮಾಡಿ ಪಾಪದಿಂದ ವಿಮುಕ್ತಗೊಳಿಸುವದು. “ಸ್ವಭಾವಕ್ಕನುರೂಪವಾದ ಕರ್ಮಗೈವ ಮನುಷ್ಯನಿಗೆ ಪಾಪ ತಟ್ಟುವುದಿಲ್ಲ.”

ಜ್ಞಾನ ಯೋಗದಿಂದ ಪರಮಾತ್ಮ ಸ್ವರೂಪವನ್ನು ಹೊಂದುವಂತೆ ಕರ್ಮ ಯೋಗವೂ ಬ್ರಹ್ಮವನ್ನು ಪ್ರಾಪ್ತಮಾಡಿಕೊಳ್ಳುವದು.-

“ಅರ್‍ಪಣವು ಬ್ರಹ್ಮ, ಹವಿಸ್ಸು ಬ್ರಹ್ಮ, ಬ್ರಹ್ಮರೂಪೀ ಅಗ್ನಿಯಲ್ಲಿ ಹವನ ಮಾಡುವವನೂ ಬ್ರಹ್ಮ. ಈ ಪ್ರಕಾರ ಕರ್ಮದೊಡನೆ ಯಾವನು ಬ್ರಹ್ಮವನ್ನು ಸೇರಿದ್ದಾನೋ ಅವನು ಬ್ರಹ್ಮವನ್ನೇ ಪಡೆಯುತ್ತಾನೆ.”

“ಯಜ್ಞಶೇಷವಾದ ಅಮೃತವನ್ನು ಸೇವಿಸುವ ಜನರು ಸನಾತನವಾದ ಬ್ರಹ್ಮವನ್ನು ಪಡಎಯುತ್ತಾರೆ.”

“ಸಮತೆಯುಳ್ಳ ಮುನಿಯು ಶೀಘ್ರವಾಗಿ ಮೋಕ್ಷವನ್ನು ಹೊಂದುತ್ತಾನೆ.”

ತಂತಮ್ಮ ಕರ್ಮಗಳಲ್ಲಿ ನಿರತರಾದ ಜನರು ಮೋಕ್ಷವನ್ನು ಪಡೆಯುತ್ತಾರೆ. ಸಮತ್ವವೇ ಯೋಗ, ಅದೇ ಕಾರ್ಯಕುಶಲತೆ, ಕರ್ಮಯೋಗಕ್ಕೆ ಸಮತೆಯೇ ಜೀವ. ಅಂತೆಯೇ “ನೀನು ಸಮತಾಬುದ್ಧಿಯನ್ನು ಆಶ್ರಯಿಸು, ಫಲವನ್ನು ಉದ್ದೇಶವನ್ನಾಗಿ ಮಾಡಿಕೊಳ್ಳುವ ಮನುಷ್ಯನು ಕರುಣಾಪಾತ್ರನು” ಎಂದು ಸಾರಿಹೇಳಿದೆ.

ಸಮತೆಯೆಂದರೆ ಕರ್ಮಕ್ಕೆ ಪ್ರತಿಫಲವು ಬಂದರೂ ಬಾರದಿದ್ದರೂ ಸರಿಯೇ ಎಂಬ ಭಾವನೆಯು ಮೈಗೂಡಿ ಮನಗೂಡಿ ಹೋಗುವುದು, ಈ ಬುದ್ಧಿಯುಂಟಾದರೆ ಸಮತಾ ಬುದ್ಧಿಯುಳ್ಳ ಜನರು ಕರ್ಮದಿಂದ ಹುಟ್ಟುವ ಫಲವನ್ನು ತ್ಯಜಿಸಿ ಜನಬಂಧನದಿಂದ ಮುಕ್ತರಾಗಿ ಬಿಡುತ್ತಾರೆ. ಮತ್ತು ನಿಷ್ಕಳಂಕ ಗತಿಯನ್ನು ಮೋಕ್ಷವನ್ನು ಪಡೆಯುತ್ತಾರೆ.”

ಅದಿಲ್ಲದಿದ್ದರೆ… “ಸಮತಾಬುದ್ಧಿಯಿಲ್ಲದವನಿಗೆ ವಿವೇಕವಿಲ್ಲ, ಭಕ್ತಿಯಿಲ್ಲ.”

ಸಮತೆ, ಅನಾಸಕ್ತಿ, ಕರ್ಮಫಲ ಸಮರ್ಪಣ ಇವೆಲ್ಲಾ ಕರ್ಮಯೋಗದ ರಹಸ್ಯ ನುಡಿಗಳೇ, ಸಮತೆಯಿಲ್ಲದಿದ್ದರೆ ವಿವೇಕಭಕ್ತಿಗಳ ವಿನಾಶವಾಗುವಂತೆ, ಅನಾಸಕ್ತಿಯಿಲ್ಲದಿದ್ದರೆ ಅಂದರೆ “ಆಸಕ್ತಿಯಿಂದ ಕಾಮವೂ, ಕಾಮದಿಂದ ಕ್ರೋಧವೂ, ಕ್ರೋಧದಿಂದ ಮೌಢ್ಯವೂ ಹುಟ್ಟಿ, ಮೌಢ್ಯದಿಂದ ಎಚ್ಚರತಪ್ಪುವದು. ಅದರಿಂದ ಜ್ಞಾನವು ನಾಶವಾಗುವದು.” ಜ್ಞಾನ ವಿನಾಶದಿಂದ ದಿವ್ಯಶಕ್ತಿಯು ಮುಗಿಲುಮಲ್ಲಿಗೆಯಾಗುವಂತೆ ಆಸಕ್ತಿಯಿಂದ ಅದೇ ಹಾಡು ಆಗುತ್ತದೆಂದಾಯಿತು.

“ಯಜ್ಞಾರ್ಥವಾಗಿ ಮಾಡಿದ ಕರ್ಮಗಳನ್ನು ಬಿಟ್ಟು ಉಳಿದ ಕರ್ಮಗಳಿಂದ ಈ ಲೋಕದಲ್ಲಿ ಬಂಧನ ಹುಟ್ಟುತ್ತದೆ.” ಆದ್ದರಿಂದ ಸಂಗರಹಿತನಾಗಿ ನಿರಂತರವೂ ಕರ್ತವ್ಯಕರ್ಮ ಮಾಡೆಂದು ಭಗವಂತನ ಆಜ್ಞೆ. ಅಂತೆಯೇ ಅನಾಸಕ್ತಿ, ಯಜ್ಞ ಕರ್ಮಫಲತ್ಯಾಗ, ಸಮತೆ ಮುಂತಾದ ಶಬ್ದಗಳಲ್ಲಿ ಗರ್ಭಿತವಾದ ತತ್ವವನ್ನು ಸಂಪಾದಿಸುವ ಬಗೆ ಹೇಗೆ? ಮಗನಿಗೆ ಮನೆಯನ್ನೆಲ್ಲಾ ಒಪ್ಪಿಸಿಕೊಡುವ ತಂದೆ ಅದರ ಕೀಲಿಯನ್ನು ಕೊಡದಿರುವನೇ?-

“ನನ್ನ ವಿಭೂತಿಯನ್ನು, ಶಕ್ತಿಯನ್ನು ಯಥಾರ್ಥವಾಗಿ ಅರಿತವನು ಅವಿಚಲವಾದ ಸಮತೆಯನ್ನು ಹೊಂದುವನೆಂಬುದರಲ್ಲಿ ಸಂಶಯವಿಲ್ಲ.”

-೪-
ಗೀತೆ ಕಲ್ಪತರುವಿನ ಒಂದು ಮೊಳಕೆಯೆಂದರೆ, ಜ್ಞಾನ ಕರ್ಮಗಳು ಅದರ ಎರಡು ಎಲೆಗಳು. ಅವಕ್ಕೆ ಭಕ್ತಿಯೇ ದೇಟು, ಜ್ಞಾನಕರ್ಮಗಳ ಅನಿವಾರ್ಯ ಐಕ್ಯವು ಭಕ್ತಿಯಲ್ಲಿ, ಗೀತೆಯಲ್ಲೆಲ್ಲ ಒಡೆದು ಕಾಣಿಸುವುದೆಂದರೆ ಜ್ಞಾನಪೂರಿತ ಕರ್ಮ ಹಾಗೂ ಕರ್ಮ ಪ್ರೇರಿತ ಜ್ಞಾನ. ಯೋಗೇಶ್ವರ ಕೃಷ್ಣ ಮತ್ತು ಧನುರ್ಧಾರಿ ಅರ್ಜುನ, ಸಾಂಖ್ಯ ಹಾಗೂ ಯೋಗ, ಜ್ಞಾನ ಕರ್ಮಗಳ ಹೊಂದಿಕೆಯೂ, ಕೃಷ್ಣಾರ್ಜುನರ ಸಖ್ಯವೂ, ಸಾಂಖ್ಯ ಯೋಗಗಳ ಸಮ್ಮಿಲನವೂ ಭಕ್ತಿಯ ಬಹಿರಂಗದಲ್ಲಿ ತಂದು ನಿಲ್ಲಿಸಿದವು. ಆದರೆ ಕೃಷ್ಣಾರ್ಜುನರನ್ನು ಅಂದರೆ ಜ್ಞಾನಕರ್ಮಗಳನ್ನು ಒಂದಿಸಿದ್ದು ಭಕ್ತಿ, ಭಕ್ತಿ ಹಸಿವೆ; ಜ್ಞಾನ ಅಮೃತ, ಕರ್ಮತೃಪ್ತಿ.

ಎಲ್ಲಕ್ಕೂ ಮೊದಲಿಗೆ ಅರ್ಜುನನ ಸ್ವಾಭಾವಿಕ ವೃತ್ತಿಯು ಹೇಡಿತನದಿಂದ ಕುಂದಿ, ಆತನು ಕರ್ತವ್ಯಮೂಢನಾಗಿ – ನಾನು ನಿನ್ನ ಶಿಷ್ಯನು; ನಿನಗೆ ಶರಣಾಗತನಾಗಿರುವೆನು. ಮಾರ್ಗ ತೋರಿಸು.” ಎಂದು ಮೊರೆ ಇಡುವನು. ಅರ್ಜುನನ ಹೃದಯಪಾತ್ರೆಯು ಹೀಗೊಮ್ಮೆ ಬರಿದಾಗಿ ಬಿಟ್ಟಾಗಲೆ ಜ್ಞಾನಪೀಯೂಷವು ಹನಿಯಲಿಕ್ಕೆ ಆರಂಭವಾಯಿತು. ಅಂತೇ ಆ ಅವಿನಾಶಿಯಾದ ಪುರಾತನ ಯೋಗವನ್ನು – ಭಗವಂತನು ಆ ಮುಂಚೆ ಸೂರ್ಯನಿಗೆ ಮಾತ್ರ ಉಸುರಿದ್ದನ್ನು ಅಂದು ಅರ್ಜುನನಿಗೆ “ನೀನು ನನ್ನ ಭಕ್ತನಾದ್ದರಿಂದ ಉಸುರುವೆನೆಂದನು.

‘ನನ್ನ ಮೊರೆಹೊಕ್ಕವರು, ನನ್ನ ಸ್ವರೂಪವನ್ನು ಹೊಂದುವರು’

‘ನನಗೆ ಶರಣಾಗತರಾದವರು ದುಸ್ತರವಾದ ತ್ರಿಗುಣಮಯ ದೈವೀಮಾಯೆಯಿಂದ ಪಾರಾಗುವರು.’

‘ನನ್ನ ಸ್ಮರಣೆ ಮಾಡು; ಮತ್ತು ಯುದ್ಧ ಮಾಡು, ನೀನು ಸಂದೇಹವಿಲ್ಲದೆ ನನ್ನನ್ನು ಹೊಂದುವಿ.’

‘ದಿವ್ಯವಾದ ಪರಮಪುರುಷನನ್ನೈದುವರೆ ಭಕ್ತಿಯಿಂದ ಆರ್ದ್ರನಾಗಿರು.”

‘ನಿತ್ಯದಲ್ಲಿಯೂ ಸತತವಾಗಿ ನನ್ನ ಸ್ಮರಣೆಮಾಡುವ ನಿತ್ಯ ಯೋಗಿಯು ನನ್ನನ್ನು ಸಹಜವಾಗಿ ಹೊಂದುವನು.’

“ಉತ್ತಮಪುರುಷನ ದರ್ಶನವು ಅನನ್ಯಭಕ್ತಿಯಿಂದ ಲಭಿಸುವದು.”

“ಅನನ್ಯಭಾವದಿಂದ ನನ್ನನ್ನು ಚಿಂತಿಸುತ್ತ ನನ್ನನ್ನೇ ಭಜಿಸುವವರ ಯೋಗಕ್ಷೇಮವನ್ನು ನಾನು ಯಾವಾಗಲೂ ವಹಿಸಿಕೊಳ್ಳುವೆನು.”

“ಅನ್ಯ ದೇವತೆಗಳನ್ನಾದರೂ ಶ್ರದ್ಧಾಪೂರ್ವಕವಾಗಿ ಪೂಜಿಸುವವರು ನನ್ನನ್ನೇ ಪೂಜಿಸುವರು.”

“ಭಕ್ತಿಪೂರ್ವಕವಾಗಿ ಇತ್ತ ಎಲೆ, ಹೂ, ಹಣ್ಣು, ಏನೇ ಇರಲಿ ನಾನೂ ಸೇವಿಸುವೆ.”

“ಕರ್ಮಬಂಧನದಿಂದ ಬಿಡುಗಡೆ ಹೊಂದಿ ಜನನಮರಣಗಳಿಂದ ಮುಕ್ತನಾಗಿ ನನ್ನನ್ನೇ ಸೇರಬೇಕಾದರೆ, ನೀನು ಮಾಡುವುದೆಲ್ಲವನ್ನೂ ನನಗೆ ಅರ್ಪಣೆ ಮಾಡಿಯೇ ಮಾಡು.”

“ಭಕ್ತಿಪೂರ್ವಕವಾಗಿ ನನ್ನ ಭಜನೆ ಮಾಡುವವರು ನನ್ನಲ್ಲಿರುವರು.”

“ಅನನ್ಯಭಾವದಿಂದ ನನ್ನ ಭಜಿಸಿದ ದುರಾಚಾರಿಯು ಕೂಡ ಸಾಧುವಾಗಿರುವನೆಂತಲೇ ತಿಳಿಯಬೇಕು.”

“ನನ್ನ ಭಕ್ತನು ಎಂದಿಗೂ ನಷ್ಟವನ್ನೈದುವದಿಲ್ಲ.”

“ಸ್ತ್ರೀ, ವೈಶ್ಯ, ಶೂದ್ರರೂ ಕೂಡ ನನಗೆ ಶರಣು ಬಂದರೆ ಪರಮಗತಿಯನ್ನು ಹೊಂದುವರು.”

ವೇದಾಭ್ಯಾಸದಿಂದ, ಯಜ್ಞದಿಂದ, ಬೇರೆ ಶಾಸ್ತ್ರಾಭ್ಯಾಸದಿಂದ, ದಾನದಿಂದ, ಕ್ರಿಯೆಗಳಿಂದ ಉಗ್ರ ತಪಸ್ಸಿನಿಂದ ಸಾಧ್ಯವಾಗದೆ ತನ್ನ ರೂಪವನ್ನು ನೋಡುವುದಕ್ಕೆ ಅರ್ಜುನನು ಹೇಗೆ ಸಮರ್ಥನಾದನು?

“ಅಂಥ ದರ್ಶನವೂ ಜ್ಞಾನವೂ ನನ್ನಲ್ಲಿ ನಿಜವಾದ ಪ್ರವೇಶವೂ ಕೇವಲ ಅನನ್ಯ ಭಕ್ತಿಯಿಂದ ಸಾಧ್ಯ.”

“ಏಕನಿಷ್ಠ ಭಕ್ತಿಯೋಗದಿಂದ ನನ್ನ ಸೇವೆ ಮಾಡುವವನು ತ್ರಿಗುಣಾತೀತನಾಗಿ ಬ್ರಹ್ಮರೂಪವನ್ನೈದಲು ಯೋಗ್ಯನಾಗುತ್ತಾನೆ.”

‘ನಾನಾರು, ನಾನು ಹೇಗಿರುವೆನು ಎಂಬುದನ್ನು ಚೆನ್ನಾಗಿ ಅರಿಯುವುದು ಭಕ್ತಿಯಿಂದ.’

“ನೀನು ಪರಮ ಶಾಂತಿಮಯವೂ ಆಮರವೂ ಆದ ಪದವನ್ನು ಹೊಂದುವೆ, ಶರಣಾಗತನಾಗು.”

“ಸಕಲ ಧರ್ಮಗಳನ್ನು ತ್ಯಜಿಸಿ ನೀನು ನನಗೊಬ್ಬನಿಗೇ ಶರಣಾಗತನಾಗು. ನಾನು ಸಕಲ ಪಾಪಗಳಿಂದ ನಿನ್ನನ್ನು ಬಿಡುಗಡೆ ಮಾಡುವನು. ನೀನು ಶೋಕಿಸಬೇಡ.”

“ನನ್ನಲ್ಲಿಯೇ ಮನಸ್ಸಿಡು, ನನ್ನ ಭಕ್ತನಾಗು. ನನಗೋಸ್ಕರ ಯಜ್ಞಮಾಡು. ನನಗೇ ನಮಸ್ಕರಿಸುತ್ತಿರು. ನೀನು ನನ್ನನ್ನೆ ಹೊಂದುವೆ. ಇದು ನನ್ನ ಸತ್ಯ ಪ್ರತಿಜ್ಞೆ”

ಹೀಗೆ ಗೀತೆಯ ತುಂಬ ಅರ್ಪಣ, ಅನನ್ಯಭಕ್ತಿ, ಶರಣಾಗತಿ, ಶ್ರದ್ಧೆ ಇವು ಹಂದರವೇರಿದ ಬಳ್ಳಿಯ ಹೂ, ಕಾಯಿಗಳಂತೆ ಸೂರೆಗೊಂಡಿವೆ.

ಜ್ಞಾನಿಯಾದರೊ ತನ್ನ ಆತ್ಮವೆಂದುಸುರಿದ ಭಗವಂತನು, ಅನನ್ಯ ಭಾವದಿಂದ ಭಜಿಸುವ ಜ್ಞಾನಿಯೇ ಶ್ರೇಷ್ಠ (೭-೧೫) ನೆಂದೂ, ಈ ಪವಿತ್ರ ಅಮೃತರೂಪದ ಜ್ಞಾನವನ್ನು ನನ್ನಲ್ಲಿ ಪರಾಯಣರಾಗಿ ಶ್ರದ್ಧೆಯಿಂದ ಸೇವನೆ ಮಾಡುವವರು ನನಗೆ ಅತ್ಯಂತ ಪ್ರಿಯಭಕ್ತರೆಂದೂ (೧೨-೨೦) ಸಾರಿದ್ದಾನೆ. ಜ್ಞಾನದ ಗುರುತುಗಳನ್ನು ಹೇಳುವದರಲ್ಲಿ ಅನನ್ಯ ಧ್ಯಾನಪೂರ್ವಕ ಏಕನಿಷ್ಠಾ ಭಕ್ತಿ (೧೩-೯) ಯನ್ನು ಮರೆತಿಲ್ಲ. ಜನನ ಮರಣಗಳ ಚಕ್ರದಲ್ಲಿ ಬೀಳಿಸದಿರುವಂಥ ಪದವನ್ನು ಹುಡುಕಲೆತ್ನಿಸುವ ಮುಂಚೆ. “ಸನಾತನ ಪ್ರವೃತ್ತಿ ಮಾಯೆಯನ್ನು ಹರಡಿದ ಆ ಆದಿಪುರುಷನಿಗೆ ನಾನು ಶರಣು ಹೋಗುವೆನು” ಎಂದು ಪ್ರಾರ್ಥಿಸಲಿಕ್ಕೆ ತಿಳಿಸಿದ್ದಾನೆ. (೧೫- ೪)

ದೇವತೆಗಳಿಗೂ ವೇದಾಭ್ಯಾಸಿಗಳಿಗೂ ದುರ್ಲಭವಾದ ವಿಶ್ವರೂಪ ದರ್ಶನವೂ ಅದಕ್ಕೆ ಬೇಕಾಗುವ ದಿವ್ಯ ಚಕ್ಷುಗಳೂ ಭಕ್ತರಿಗೆ ಮಾತ್ರ ಲಭಿಸುವವು. ಜನ್ಮ-ಮೃತ್ಯು ಜಗತ್ತಿನ ದುಃಖಗಳಿಂದ ಬಿಡುಗಡೆ ಹೊಂದಲು, ತ್ರಿಗುಣಾತೀತನಾಗೆಂದು ಹೇಳಿ ಅಷ್ಟಕ್ಕೆ ಬಿಡದೆ “ಏಕನಿಷ್ಠಭಕ್ತಿಯೋಗ”ದ ತತ್ವವನ್ನು ಹೇಳುವ ಕಾರಣವೇನು? ಕೊನೆಗೆ “ಸರ್ವಗುಹ್ಯತಮ” ವಾದ ರಹಸ್ಯದಲ್ಲಿ “ನನ್ನನ್ನು ಹೊಂದುವೆ, ಆಣೆಮಾಡಿ ಹೇಳುತ್ತೇನೆ” ಎಂದುದು ಏತಕ್ಕಾಗಿ? ಭಕ್ತನು ದೇವನ ಸೇವಕ, ದೇವನು ಭಕ್ತನ ದಾಸ ಎಂದಲ್ಲವೇ? ಆದರೆ ಈ ಭಕ್ತಿಯು ಹೇಗೆ ಸಾಧ್ಯವೆಂಬುದನ್ನು ಹೇಳಲಿಕ್ಕೂ ಭಗವಂತನಿಗೆ ಮರವೆಯಾಗಿಲ್ಲ. ಬೊಕ್ಕಸದ ಕೀಲಿ ಒಪ್ಪಿಸಿದವನು ಅದನ್ನು ತೆರೆಯುವ ಯುಕ್ತಿಯನ್ನು ತಿಳಿಸದಿರುವನೇ?-

“ನಿನ್ನ ಮನಸ್ಸನ್ನು ನನ್ನಲ್ಲಿ ನೆಲೆಯಾಗಿಡು. ನಿನ್ನ ಬುದ್ಧಿಯನ್ನು ನನ್ನಲ್ಲಿಡು.”

ಇದಕ್ಕೆ ಅಸಮರ್ಥರಾದವರು. “ಅಭ್ಯಾಸಯೋಗದ ಮೂಲಕ ನನ್ನನ್ನು ಹೊಂದುವ ಇಚ್ಛೆ ತಳೆಯಬೇಕು.”

ಈ ಅಭ್ಯಾಸವೂ ಬಿಗಿಯೆನಿಸಿದರೆ – “ಸಕಲ ಕರ್ಮಗಳನ್ನೂ ನನಗೆ ಅರ್ಪಿಸು” ಅದಾಗದಿದ್ದರೆ – “ಕರ್ಮಫಲಗಳನ್ನು ತ್ಯಾಗಮಾಡು.”

ಒಟ್ಟಿಗೆ ಕರ್ಮಫಲ ತ್ಯಾಗವು ಸರಳವೂ, ತತ್ಕಾಲಕ್ಕೆ ಶಾಂತಿದಾಯಕವೂ ಆಗಿದೆ. ಅದಕ್ಕೂ ಮೊದಲು ನಮ್ಮ ಸಂಪೂರ್ಣ ಜೀವನವು ಭಗವಂತನಿಗೆ ನೈವೇದ್ಯ ಹಾಗೂ ಬಲಿದಾನವೆಂದು ನಿರ್ಧಾರವಾಗಬೇಕು. ಈ ನಿರ್ಧಾರದ ನೆನಪು, ನಮ್ಮ ಮುಂದಿನ ಹೆಜ್ಜೆಗಳಿಗೆ ಬೆಳಕನ್ನೀಯುತ್ತ ಹೋಗುವುದರಲ್ಲಿ ಸಂಶಯವಿಲ್ಲ.

-೫-
ಇಂತು ಅಂತರ್ಬಾಹ್ಯ ಸಾಧನೆಗಳಿಂದ ಪೂರ್ಣತೆಯನ್ನು ಹೊಂದಿದ ಆತ್ಮವು ತಾನಾಗಿಯೇ ಪರಮಾತ್ಮವಿಲೀನವಾಗಿ ಬಿಡಬಲ್ಲದು. ಆಗ ಜಗತ್ತಿನೊಳಗೆ ಕಷ್ಟ, ಸಂಕಟ, ಸಾವು, ನೋವು, ಮುಪ್ಪು, ದುಃಖ ಇವುಗಳಿಂದ ಯಾವ ತೊಂದರೆಯೂ ಉಂಟಾಗದು. ಮೀನು ಮೊಸಳೆಗಳೇ ಮುಟ್ಟದಿರುವಂತೆ ಔಷಧಿಯನ್ನು ಬಳಿದುಕೊಂಡು ಸಮುದ್ರದಲ್ಲಿ ಈಸು ಬೀಳಲಿಕ್ಕೆ ಸಂಕಟವೇನು? ಅಲ್ಲಿ ಮುಳುಗಿದರೆ ಮುತ್ತು -ಹವಳಗಳ ರಾಸಿ ಕೈವಶವಾಗುವ ಸಂಭವವಿದೆ. ಕಟ್ಟಿಟ್ಟ ಸ್ವರ್ಗವನ್ನು ಅರಸುತ್ತ ಅಲೆಯುವದಕ್ಕಿಂತ ಕುಳಿತಲ್ಲಿಯೆ ಅದನ್ನು ನಿರ್ಮಿಸಿಕೊಂಡವನು ಮುಕ್ತಿಯನ್ನು ಪಡೆದಂತಲ್ಲವೇ? ಅಂಥವರಿಗೆ ಮೋಕ್ಷವಾದರೂ ಏತಕ್ಕೆ ಬೇಕಾದೀತು? ಅವನು ತನ್ನ ವಿಮುಕ್ತ ಸ್ಥಿತಿಯನ್ನೇ ಜೀವಜೀವರುಗಳಿಗೆ ತಂದೊದಗಿಸುವ ಅಜೇಯ ಶಕ್ತಿವಂತನು, ಮೋಕ್ಷದ ರಾಣೀವಾಸವನ್ನು ಸೇರಿಕೊಂಡು ಕುಳ್ಳಿರಲೆಳಸುವನೇ? ಮನೆಯ ಯಜಮಾನನಾದವನು ಬಂದ ಅತಿಥಿ ಅಭಾಗ್ಯತರನ್ನು ಮೊದಲು ಉಣಬಡಿಸಿ, ಹಿಂದಿನಿಂದ ತಾನು ಊಟ, ಮಾಡಬೇಕಂತೆ! ಸ್ವರ್ಗದಲ್ಲಿರುವ ವಿಭೂತಿ -ಶಕ್ತಿಗಳು ಇಲ್ಲಿಯೂ ಇರಲೇಬೇಕು. ಅವುಗಳನ್ನರಿತು ಕೊಂಡು ಕುಡಿ ಬಂದು ಕಣ್ಣು ಮುಚ್ಚಿದ ಸುತ್ತಲಿನ ಆತ್ಮದೀಪಗಳು ಬೆಳಗಿಸುತ್ತ ಪರಮಾತ್ಮನ ಲೀಲಾರಂಗದಲ್ಲಿ ಸ್ವರಗೂಡಿಸುವ ಸೌಭಾಗ್ಯಕ್ಕಿಂತ ಸ್ವರ್ಗವೇನು ಮಿಗಿಲೇ?

ಪಾರ್ಥಸಾರಥಿಯು ನಮ್ಮ ಹೃದಯರಥವನ್ನೇರಿ, ನಮ್ಮನ್ನು ಯುದ್ಧ ರಂಗಕ್ಕೆಳತಂದು ನಿಲ್ಲಿಸದಿದ್ದರೆ, ಕರ್ಮಕೌಶಲವೂ ಜ್ಞಾನಪ್ರಾಪ್ತಿಯೂ ಉಂಟಾಗಲಾರದು. ಆದ್ದರಿಂದ ಹೃದಯವನ್ನು ತೆರವು ಮಾಡಿಟ್ಟುಕೊಂಡು ಆತನನ್ನು ಬರಮಾಡೆಂದು ಪ್ರಾರ್ಥಿಸುವಾ-

“ಹೇ! ಸರ್ವ! ನಿನಗೆ ಮುಂದೆ ಹಿಂದೆ ಎಲ್ಲ ಕಡೆಯಿಂದಲೂ ನಮಸ್ಕಾರ. ನಿನ್ನ ವೀರ್ಯವು ಅನಂತವಾದುದು. ನಿನ್ನ ಶಕ್ತಿ ಅಪಾರವಾದುದು. ಎಲ್ಲವನ್ನೂ ನೀನೇ ರಕ್ಷಿಸುವೆ. ಆದ್ದರಿಂದ ಸರ್ವವೂ ನೀನೇ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಳಿ
Next post ತಿಂಗಳ ಬೆಳಕಿಗೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…