ಅಯ್ಯ ನಾನು ಊರ ಮರೆದು ಆಡ ಹೋದರೆ
ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು.
ಇದ ಕಂಡು ಊರ ಹೊಕ್ಕೆ,
ಸ್ಥಾನದಲ್ಲಿ ನಿಂದೆ,
ಒಂಬತ್ತು ಬಾಗಿಲ ಕದವನಿಕ್ಕಿದೆ.
ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು.
ಉಷ್ಣ ಊರ್ಧ್ವಕ್ಕೇರಿತ್ತು.
ತಲೆ ಎತ್ತಿ ನೋಡಲು ಒಕ್ಕಲು ಓಡಿತ್ತು.
ಊರು ಬಯಲಾಯಿತ್ತು.
ಆ ಬಯಲನೆ ನೋಡಿ ನಿರಾಳದೊಳಗಾಡಿ,
ಮಹಾಬೆಳಗನೆ ಕೂಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****