ದೂರದೂರ ದಿಕ್ದಿಗಂತದಿಂದ ದೂರಕೆ
ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ
ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಕಣ್ಣ ಮುಚ್ಚಿ
ಹೃದಯ ಮುಚ್ಚಿ
ಒಮ್ಮೆ ಅಂದು ಕಾತರಿಸಲು
ಮಿಂಚಿನಂತೆ ತೂರಿ ನೀನು
ಜೀವ ತೋರಿದೆ
ಬಲವ ಕಲಕಿದೆ!

ಯಾರಿಗಾಗಿ ಕೊರಗುತಿಹೆನೊ ಅದನೆ ಅರಿಯದೆ
ಸಾಗುತಿಹುದು ಜೀವ ನನ್ನ ನೆಲೆಯ ಕಾಣದೆ!   ೧

ಎಲ್ಲೆಡೆಯಲು ಬೆಳಕು ಇರಲು ನನಗೆ ಕತ್ತಲು!
ಅಲೆಗಳಂತೆ ಜಿಗಿದು ಜಿಗಿದ ಬಾಳು ಬತ್ತಲು
ಕಂಡುದೊಮ್ಮೆ-ಕಾಂಬುದೆಲ್ಲಿ-ಶೂನ್ಯ ಸುತ್ತಲು!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಮನಸು ಸೊರಗಿ
ಜೀವ ಕೊರಗಿ
ಸುತ್ತಮುತ್ತು ತಿರುಗಿ ತಿರುಗಿ
ಮೌನದಲ್ಲೆ ಮರುಗಿ ಮರುಗಿ
ನಿನ್ನ ಕಾಣದೆ
ಬಾಡಿ ಒರಗಿದೆ!

ಕಾಲ ದುಗುಡದಾಳದಲ್ಲಿ ಹರಿದು ಸಾಗಿದೆ
ಸಾಗುತಿಹುದು ಜೀವನಿನ್ನ ನೆಲೆಯ ಕಾಣದೆ!   ೨

ಎಳೆಮಂಜಿನ ಮೇಲ್ಮೈಯಿನ ಮೃದುತೆಯಂತೆದೆ
ಎಳೆಹರಯದ ದಳಗಳೊಳಗೆ ಹುದುಗಿ ಹೋಗಿರೆ
ಬೀಗಿ ಬಳುಕಿ ಸಾರಿಹೋದ ಬೆಳಗಿನ ಕನಸೆ!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ತಾಯ ಮಮತೆ
ಎದೆಯ ಕೊರತೆ
ನೀಗುತೆನ್ನ ಮನಕೆ ಶಾಂತಿ
ತರುವುದೆಂಬ ಬಯಕೆ ಭ್ರಾಂತಿ
ಕಂಡುದೇನನು?
-ತನ್ನತನವನು!

ಪ್ರೇಮ ತನ್ನ ಬೆಲೆಯಿದೆಂದು ಬೇಡಲು ಬಹುದೆ?
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೩

ಹೆಣ್ಣೊಂದರ ಕಣ್ಣಿನಲ್ಲಿ ಮಿಂಚಿನ ಮಿಣುಕು
ಕಂಡೆನೊಮ್ಮೆ ಅಲ್ಲೆ ಇಹುದು ಒಲವಿನ ಬದುಕು
ಎನುತ ಹಾರಿಹೋದೆನಾಗ ಆಕೆಯ ಬಳಿಗು
ಸಾಗುತಿರಲು ಜೀವ ನಿನ್ನ ಮೂರ್ತಿಯರಸುತೆ!

ಇನಿತು ದಿನವು
ಕಾಣದಿರವು
ಹೃದಯ ಬಯಸಿ ಬೆಳೆಸಿದೊಲವು
ಹೂವಾಗಿದೆ ಆಕೆ ಚೆಲುವು
ಎನುವ ಭರವಸೆ
ಎದೆಯ ತುಂಬಿರೆ
ಆಸೆಯೊಡೆದು ಒಲವು ಸಿಡಿದು ಹೃದಯ ಬಿರಿದಿದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೪

ಮುಳುಗುತಿರುವ ತಾರೆ ತನ್ನ ಕಂಗಳ ತೊಳೆದು
ಕಳುಹುತಿರಲು ಭುವಿಯ ಕಡೆಗೆ ಮಂಜಿನ ಹರಳು
ಹಾತೊರೆಯುತ ಕಾಯುವಂತೆ ಹೂವಿನ ಎದೆಯು
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ನೆಲೆಯನರಸಿ
ಬದುಕ ಸವೆಸಿ
ಕೊನೆಯಿಲ್ಲದ ಕಡಲಿನಲ್ಲಿ
ಕೊರಗು ಕೊಟ್ಟ ದೋಣಿಯಲ್ಲಿ
ಅಲೆಗೆ ಬೆದರುತೆ
ಜೀವ ಸಾಗಿದೆ!

ಒಲವವಸತಿ ಕಾತರಿಸಿದೆ ನಾಳೆಯರಿಯದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೫
*****