ಮಳೆಯಲ್ಲಿ ಎಲ್ಲಬಾಗಿಲು ಹಾಕಿಕೊಂಡೋ
ಚಳಿಯಲ್ಲಿ ಬೆಚ್ಚನೆಯ ಶಾಲು ಹೊದ್ದುಕೊಂಡೋ
ಕವನಗಳು ಸುರಿಸುವಂತೆ
ಈ ಬೇಸಗೆಯೆ ಬಸಿಲಿನ
ಮುಂಜಾವು ಮುಸ್ಸಂಜೆಯಲ್ಲಿಯೂ
ನಾನೇ ನೀರೆರದು ಬೆಳೆಸಿದ ಮರಗಳ
ಸಾಲಿನಲ್ಲಿ ಕುಳಿತು.
ಅದರ ಮೇಲೆ ವರ್ಷ ವರ್ಷಗಳವರಗೆ
ಚಿಲಿಪಿಲಿಸಿದ ಹಕ್ಕಿಗಳ
ಚಳಿಯಲ್ಲಿ ಉದುರುವ ಎಲೆಗಳ
ಚೈತ್ರದಲ್ಲಿ ಚೈತ್ರಿಸುವ ಚಿಗುರುಗಳ
ವಸಂತದಲ್ಲಿ ಕಾಮನ ಬಿಲ್ಲಿನ ಚೂರು ಹೂಗಳಲ್ಲಿ
ಸ್ಪಂದಿಸುತ್ತ
ನಿನ್ನ ನೆರಳಲ್ಲಿ ಬೆಳೆದ ಹೂ ಮೊಗ್ಗುಗಳ
ಹುಲ್ಲು, ಮಂಜು ಮುಸುಕು ಕುರಿತು
ನನ್ನ ಹೃದಯದ ಮೂಲಕ ನಿನ್ನೊಂದಿಗೆ ಚರ್ಚಿಸಿ
ಏನೆಲ್ಲ ಬರೆಯಬೇಕೆಂದು
ದೂರದ ಊರಿನಿಂದ ಮರಳಿದ್ದೆ
ಆದರೆ ಆಗಲೇ –
ನಿಷ್ಕರುಣೆಯ ಬಲಿಷ್ಟ ಕೈಗಳು
ಸಲಗದಂತಾಗಿ ನಿನ್ನನ್ನು
ಶಸ್ತ್ರಿಸಿದ್ದು ಅಷ್ಟೇ ಅಲ್ಲ ಬುಲ್‌ಡೋಜರಿಸಿದ್ದು
ಅನಾಮಿಕ ಹಕ್ಕಿಗಳನ್ನು
ಮುಗಿಲಿನೇಕಾಂತವನ್ನು ಅನಾಥಿಸಿದ್ದು
ನೋಡಿ
ದಿಕ್ಕು ದಿಕ್ಕಿಗೆ ದಿಕ್ಕೆಟ್ಟು ಓಡುವ
ಹುಲ್ಲೆಯಂತೆ
ನನ್ನ ಗಂಟಲಾರಿ ಉಸಿರು ಸಿಕ್ಕು
ಕರಾಳದಿನ ಹೊತ್ತಿ
ಶೂನ್ಯಕ್ಕೇ ಏರಿಳಿದಂತಾಗಿದ್ದೆ
*****