ವಲಸಿಗ ಕನ್ನಡಿಗರು ಮತ್ತು ಸಂಕರ ಸಂಸ್ಕೃತಿ

ವಲಸಿಗ ಕನ್ನಡಿಗರು ಮತ್ತು ಸಂಕರ ಸಂಸ್ಕೃತಿ

ವಲಸೆ ಮತ್ತು ವಿಭಿನ್ನ ಸಂಸ್ಕೃತಿ/ಪರಿಸರಗಳಿಗೆ ತೆರೆದುಕೊಳ್ಳುವ ವಿಶಿಷ್ಟ ಸನ್ನಿವೇಶಗಳು ಸಂಕರ ಸಂದರ್‍ಭಗಳನ್ನು ಸೃಷ್ಟಿಸುತ್ತವೆ. ಸಾಮಾನ್ಯವಾಗಿ ವಿಭಿನ್ನ ಭಾಷಿಕ ಸಮಾಜಗಳಲ್ಲಿ ಬದುಕುತ್ತಿರುವವರಿಗೆ ಬೇರೆ ಬೇರೆ ದೇಶಗಳಲ್ಲಿ ಬದುಕುತ್ತಿರುವವರಿಗೆ ಸಂಕರವು ಒಂದು ವಾಸ್ತವ ಪ್ರಕ್ರಿಯೆ. ಭಾರತೀಯ ಸಂದರ್‍ಭದಲ್ಲಿ ಬಹುಭಾಷಿಕ ಪರಿಸರ ಮತ್ತು ಬಹು ಧರ್‍ಮಸಂಸ್ಕೃತಿಗಳ ಪರಿಸರ ಸಹಜವೆನ್ನುವಂತೆ ಒದಗಿ ಬರುವುದರಿಂದ ಸಂಕರದ ಪ್ರಜ್ಞೆ ಇಲ್ಲಿ ಸಹಜವೆನ್ನುವಂತೆ ಮೊಳೆತಿರುತ್ತದೆ. ಇದನ್ನು ಚಾರಿತ್ರಿಕವಾಗಿ ಸಹ ಗುರುತಿಸಬಹುದು. ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರು ಕರ್‍ನಾಟಕದ ವಲಸೆ ಪ್ರಕ್ರಿಯೆಯನ್ನು ವಸಾಹತು ಪೂರ್‍ವ, ವಸಾಹತು ಕಾಲ ಮತ್ತು ವಸಾಹತೋತ್ತರ ಕಾಲದ ವಲಸೆಗಳೆಂಬ ಕಾಲಗಣನೆಯಲ್ಲಿ ತೆಗೆದುಕೊಳ್ಳಬಹುದು ಎನ್ನುತ್ತಾರೆ. ಅನೇಕ ಭಾಷಿಕ, ಧಾರ್‍ಮಿಕ ವಲಸೆಗಳು, ಮತಾಂತರಗಳು ಕನ್ನಡ ನಾಡಿನಲ್ಲಿ ನಡೆಯುತ್ತಲೇ ಬಂದಿದ್ದು ಕನ್ನಡದ ಮಟ್ಟಿಗೆ ಸಂಕರ ಪ್ರಜ್ಞೆಯು ಹಾಸುಹೊಕ್ಕಾಗಿದೆ ಎನ್ನಬಹುದು. ಈಗೀಗ ವಿದೇಶಗಳಲ್ಲಿ ವಾಸ ಮಾಡುತ್ತಿರುವವರ ಹಿನ್ನೆಲೆಯಲ್ಲಿ ಮಾತ್ರವೇ ಸಂಕರ ಪ್ರಜ್ಞೆಯನ್ನು ಅರ್‍ಥ ಮಾಡಿಕೊಳ್ಳಲಾಗುತ್ತದೆ. ಆದರೆ ವಲಸೆ ಮತ್ತು ಸಂಕರ ಪ್ರಕ್ರಿಯೆಗಳು ಆದಿಕಾಲದಿಂದಲೂ ಇವೆ. ಸಂಕರ ಪ್ರಜ್ಞೆಯು ಕನ್ನಡದ ಆದಿಕವಿ ಪಂಪನಿಂದಲೇ ಆರಂಭವಾಗಿದೆಯೆನ್ನಬಹುದು. ಪಂಪ ತಾನು ‘ಮುನ್ ಬ್ರಾಹ್ಮಣ’ ಎಂದು ಹೇಳಿಕೊಳ್ಳುವುದೇ ಇದಕ್ಕೆ ಸಾಕ್ಷಿ. ಕನ್ನಡದ ಸಂದರ್‍ಭದಲ್ಲಿ ಆಧುನಿಕಪೂರ್‍ವ ಕಾಲದಲ್ಲಿ ನಿಚ್ಚಳವಾಗಿದೆ.

ಇಂದು ಭಾರತಾದಾದ್ಯಂತ ಅನೇಕ ಕನ್ನಡಿಗ ವಲಸಿಗ ಸಮುದಾಯಗಳಿದ್ದಾವೆ. ಈ ವಲಸೆಗೆ ಉದ್ಯೋಗ ಮತ್ತು ಆರ್‍ಥಿಕ ಅಭಿವೃದ್ಧಿಯ ಅನೇಕ ಕಾರಣಗಳಿರುವುದು ತಿಳಿಯುತ್ತದೆ. ಅದರಲ್ಲಿಯೂ ಗಡಿಭಾಗಗಳ ಜನರು ಹೆಚ್ಚಾಗಿ ವಲಸೆ ಹೋಗುತ್ತಾರೆ. ಅನೇಕ ಸಾರಿ ಭಾಷಾ ಗಡಿಗಳು ಸಹ ರಾಷ್ಟ್ರದ ಗಡಿಗಳಂತೆ ದ್ರವೀಕರಣಗೊಂಡಿರುತ್ತವೆ. ವಲಸೆಯ ಪ್ರಕ್ರಿಯೆ ವಿದೇಶಗಳಿಗು ವಿಸ್ತರಿಸಿದೆ. ಅದರ ಬೆನ್ನ ಹಿಂದೆಯೂ ಆರ್‍ಥಿಕ ಕಾರಣಗಳು ಹೆಚ್ಚಾಗಿ ಇವೆ ಎಂದು ಊಹಿಸಲಾಗಿದೆ. ಈ ಬಗೆಯ ವಲಸೆಗಳಲ್ಲಿ ಹೊರನಾಡಿನ ವಲಸೆಗಳು ಮತ್ತು ಒಳನಾಡಿನ ವಲಸೆಗಳು ಎಂದು ವಿಂಗಡಿಸಬಹುದು. ಹೊರನಾಡುಗಳಲ್ಲಿ ವಾಸಿಸುವ ಕನ್ನಡಿಗರು ವಿದೇಶೀಸಂಸ್ಕೃತಿಗೆ ತೆರೆದುಕೊಳ್ಳುವ ಪರಿಣಾಮ ಅವರ ಸಂಕರ ಪ್ರಜ್ಞೆಯು ಭಾರತದೊಳಗೇ ವಲಸೆ ಹೋದ ಒಳನಾಡಿನ ವಲಸಿಗರಿಗಿಂತ ವಿಭಿನ್ನವಾಗಿರುತ್ತದೆ. ಕರ್‍ನಾಟಕದಲ್ಲಿ ಗಡಿಭಾಗಗಳು ಹಾಗು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳು ವಲಸೆಗೆ ಹೆಸರಾಗಿವೆ. ಕಡಲ ತಡಿಯ ಕಾರಣದಿಂದಾಗಿ ಕೆನರಾ ಜಿಲ್ಲೆಗಳು ಮುಂಬೈ, ಗೋವಾ, ಕೊಲ್ಲಿ ರಾಷ್ಟ್ರಗಳ ತನಕ ತಮ್ಮ ವಲಸೆಯನ್ನು ವಿಸ್ತರಿಸಿಕೊಂಡಿವೆ. ಉಡುಪಿ ಹೋಟೆಲ್ಲುಗಳ ಉಪಾಹಾರ ಗೃಹಗಳು, ಬ್ಯಾಂಕ್‌ ಉದ್ಯಮ, ಬಂಟ್ಸ್ ಜನರ ಹೋಟೆಲ್ ಉದ್ಯಮ ಮತ್ತು ಇತರ ವ್ಯಾಪಾರಗಳು ದಕ್ಷಿಣ ಕನ್ನಡಿಗರನ್ನು ವಿಶ್ವಕ್ಕೆ ಪರಿಚಿತ ವಲಸಿಗರನ್ನಾಗಿ ಮಾಡಿದೆ. ಈ ವಲಸಿಗ ಅನುಭವವು ಈ ಜನರನ್ನು ತಾಯ್ನಾಡಿನ ಬಗ್ಗೆ ಹೆಚ್ಚು ಅಭಿಮಾನವನ್ನೂ ತಾವು ನೆಲೆಸಿದ ನಾಡಿನ ಬಗೆಗೆ ಅಭದ್ರತೆಯನ್ನೂ ಏಕಕಾಲದಲ್ಲಿ ಉಂಟು ಮಾಡುವುದುಂಟು. ಆದುದರಿಂದ ಸಂಸ್ಕೃತಿಯ ಕೆಲವು ಭಾಗಗಳನ್ನು ಅವರು ಸಂಕರಗೊಳಿಸಿಕೊಂಡಿದ್ದರೆ, ಕೆಲವು ಅಂಶಗಳಲ್ಲಿ ತಮ್ಮ ಮೂಲ ಸಂಸ್ಕೃತಿಯ ಪರಿಕಲ್ಪನೆಗಳನ್ನು ಪೋಷಿಸುತ್ತಿರುತ್ತಾರೆ. ಆದರೆ ಅದು ಕಾಲ್ಪನಿಕ ಮಾತ್ರವಾಗಿದ್ದು ಅವರು ಬದುಕುತ್ತಿರುವ ಪರಿಸರವು ಅವರನ್ನು ಬದಲಾವಣೆ, ರೂಪಾಂತರಗಳಿಗೆ ಒತ್ತಾಯಿಸುತ್ತಿರುತ್ತದೆ. ಈ ಇಬ್ಬಂದಿ ಭಾವವೇ ಅವರನ್ನು ಸಂಕರ ಪ್ರಜೆಯನ್ನಾಗಿಸಿರುತ್ತದೆ.

ಕನ್ನಡದಲ್ಲಿ ಭಾಷಿಕ ಸಂಕರಕ್ಕೆ ಅನ್ಯಭಾಷಿಕರ ಆಡಳಿತ ಮುಖ್ಯವಾದ ಕಾರಣ. ದಿವಾನರ ಆಡಳಿತದ ಕಾಲದಲ್ಲಿ ಮೈಸೂರು ಪ್ರಾಂತ್ಯಕ್ಕೆ ವಲಸೆ ಬಂದ ತಮಿಳರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ನಿಜಾಮರ ಹೈದರಾಬಾದು ಪ್ರದೇಶಾಡಳಿತಗಳು ವಲಸೆಗೆ ಅವಕಾಶವಿತ್ತವು. ಇವು ಕ್ರಮೇಣ ಸಂಸ್ಕೃತಿ ಪಲ್ಲಟಗಳಿಗೆ, ಕೊಡು ಕೊಳ್ಳುವಿಕೆಗೆ ತಿರುಗಿಕೊಂಡಿದೆ. ಕನ್ನಡದ ಹಲವಾರು ಮುಖ್ಯ ಲೇಖಕರು ಅನ್ಯಭಾಷಿಕರು. ಅವರ ಭಾಷಿಕ ಅನ್ಯತೆಯು ಪ್ರಾದೇಶಿಕ ಭಾಷೆಯ ಜೊತೆಗೆ ಮಾಡಿಕೊಳ್ಳುವ ಅನುಸಂಧಾನವು ಸಾಂಸ್ಕೃತಿಕ ಕೊಡು ಕೊಳ್ಳುವಿಕೆಗೆ ಅವಕಾಶವೀಯುತ್ತದೆ. ಬೇಂದ್ರೆ, ಶ್ರೀರಂಗ ಮೊದಲಾದವರು ಮರಾಠಿ-ಕನ್ನಡದ ಅಸ್ಮಿತೆಯನ್ನುಳ್ಳವರು. ಮಾಸ್ತಿ, ಎ.ಕೆ ರಾಮಾನುಜನ್, ಡಿವಿಜಿ, ರಾಜರತ್ನಂ, ಬಿ.ಜಿ.ಎಲ್ ಸ್ವಾಮಿ ಮುಂತಾದವರು ತಮಿಳು- ಕನ್ನಡದ ಭಾಷಿಕರಾದರೆ ನಾ.ಕಸ್ತೂರಿ ಮಲಯಾಳಂ-ಕನ್ನಡದವರು. ಇವರ ಅಸ್ಮಿತೆಗಳು ಕನ್ನಡದಲ್ಲಿ ವಿಸ್ತರಣೆಯ ಭಾಗವಾಗಿಯೇ ಬೆಳೆದು ಬಂದಿವೆ.

ಕನ್ನಡದ ಸಂದರ್‍ಭದಲ್ಲಿ ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವ ಕ್ರಿಯೆಯು ಸಾಂಸ್ಕೃತಿಕವಾದ ಪಲ್ಲಟಗಳಿಗೆ ಕಾರಣವಾಗುತ್ತದೆ. ಎರಡು ಭಿನ್ನ ಪ್ರದೇಶಗಳಿಗೆ ತೆರೆದುಕೊಂಡ ಪ್ರಜ್ಞೆಯು ವಿಶಿಷ್ಟವಾದ ಗ್ರಹಣಶಕ್ತಿಯನ್ನು ಹೊಂದಿರುತ್ತದೆ. ಹಳ್ಳಿ ಮತ್ತು ನಗರಗಳ ಬದುಕಿನ ವಿನ್ಯಾಸಗಳು ಭಿನ್ನವಾಗಿರುವುದರಿಂದ ಒಂದು ಪರಿಸರದಿಂದ ಇನ್ನೊಂದಕ್ಕೆ ಹೋಗುವವರು ಇಬ್ಬದಿಯ ಸ್ಥಿತಿಯನ್ನು ಅನುಭವಿಸುತ್ತಾರೆ. ಅವರಲ್ಲಿ ಈ ಎರಡೂ ಪ್ರದೇಶಗಳ ನೆನಪುಗಳು ಸಂಕೀರ್‍ಣವಾಗಿ ಸಂಯೋಜನೆಗೊಂಡಿರುತ್ತವೆ. ಗ್ರಾಮೀಣ ಪ್ರದೇಶಗಳಿಂದ ಬಂದ ಲೇಖಕರ ಹಿಂಡೇ ನಮ್ಮಲ್ಲಿದೆ. ಅವರ ಸಂವೇದನೆಗಳು ತಾವು ಬಿಟ್ಟುಬಂದ ಗ್ರಾಮೀಣ ಪರಿಸರದ ಪರಿಕರಗಳನ್ನು ಆಧರಿಸಿರುತ್ತವೆ.

ಕನ್ನಡದ ವಲಸಿಗ ಸಾಹಿತ್ಯವು ಗಟ್ಟಿಯಾಗಿ ಗೋಚರಿಸುವುದು ಗದ್ಯಬರಹಗಳಲ್ಲಿ (ನಾನ್ ಫಿಕ್ಷನ್). ಈ ಬಗೆಯ ಸಾಹಿತ್ಯ ಎಂದು ಗುರುತಿಸಬಹುದಾದುದೆಂದರೆ ಬಿ.ಜಿ.ಎಲ್. ಸ್ವಾಮಿ, ಕೃಷ್ಣಾನಂದ ಕಾಮತ್, ಎ.ಕೆ.ರಾಮಾನುಜನ್, ಹಿರೇಮಲ್ಲೂರು ಈಶ್ವರನ್, ಕಾಮರೂಪಿ, ಮುಂತಾದ ಕೆಲ ಲೇಖಕರ ಗದ್ಯದಿಂದ. ಇವರು ಕನ್ನಡದ ಸಾಂಸ್ಕೃತಿಕ ಪರಿಸರದಿಂದ ದೂರವಿದ್ದು ಅನ್ಯಭಾಷಿಕ/ವಿದೇಶಿ ನೆಲಗಳಲ್ಲಿ ಡಯಾಸ್ಪೋರಿಗರಾಗಿ ಬದುಕಬೇಕಾದ್ದರಿಂದ ಸಹಜವಾಗಿಯೇ ಎರಡು ಸಂಸ್ಕೃತಿಗಳ ಒಳಹೊರಗೆ ನಿಂತು ನೋಡುವ ಅವಕಾಶ ಅವರಿಗೆ ಸಿಕ್ಕಿದೆ. ಎ.ಕೆ.ರಾಮಾನುಜನ್ ಅವರನ್ನು ಬಿಟ್ಟರೆ ಸ್ವಾಮಿ ಮತ್ತು ಕಾಮತ್ ಅವರು ಬರೆದಿದ್ದು ಪ್ರವಾಸೀ ಕಥನ ಮತ್ತು ಅನುಭವ ಕಥನಗಳನ್ನು. ಎ.ಕೆ.ರಾಮಾನುಜನ್ ಕೃತಿಗಳಲ್ಲಿ ಕೂಡ ತತಕ್ಷಣ ಸಂಸ್ಕೃತಿಗಳನ್ನು ತುಲನೆ ಮಾಡುವ, ತಾಯ್ನಾಡಿನ ಹೋಲಿಕೆ ತರುವ ಕ್ರಿಯೆಗಳು ಬರುತ್ತವೆ. ತಮಿಳುನಾಡಿನಲ್ಲಿದ್ದ ಸ್ವಾಮಿ ಅವರು ಸಸ್ಯಶಾಸ್ತ್ರದ ಅಧ್ಯಾಪಕರಾಗಿದ್ದು ತಮ್ಮ ಅನುಭವ ಕಥನಗಳನ್ನು ನಿರೂಪಿಸುತ್ತಾರೆ. ಅವರು ತಮಿಳು ಸಂಸ್ಕೃತಿ ಮತ್ತು ತಮಿಳರ ಐಲುಗಳ ಬಗ್ಗೆ ಸಾಕಷ್ಟು ವಿಮರ್‍ಶಾತ್ಮಕವಾಗಿದ್ದಾರೆ. ಕನ್ನಡದವನೆಂಬ ಎಚ್ಚರ ಮತ್ತು ಅನ್ಯ ನೆಲದ ಬಗೆಗಿನ ಅನ್ಯತಾಭಾವದಿಂದ ಸ್ವಾಮಿ ಒಬ್ಬ ಉತ್ತಮ ವಲಸಿಗ ಲೇಖಕ ಎನ್ನಿಸುತ್ತಾರೆ. ಇವರ ಹಾಗೆಯೇ ಬರೆಯುವ ಕಾಮತ್ ಬಂಗಾಲದ ಹುಳುಕುಗಳನ್ನು ತೆರೆದಿಡುವುದರ ಜೊತೆಗೆ ತಮ್ಮ ಸಂಸ್ಕೃತಿಯ ತುಲನೆಯನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಲೇಖಕರ ಅನುಭವದಲ್ಲಿ ಹೊರಗಿನವರಾಗಿ ಬದುಕಬೇಕಾದಾಗ ಅನಿವಾರ್‍ಯವಾಗಿ ಸಾಮರ್‍ಥ್ಯವನ್ನು ತೋರುವಂತೆ ಇರಬೇಕು. ಇದು ಉಳಿವಿಗಾಗಿ ನಡೆಯುವ ಹೋರಾಟವೂ ಹೌದು. ಇತ್ತೀಚಿನ ಬರಹಗಾರರಲ್ಲಿ ಗುರುಪ್ರಸಾದ್ ಕಾಗಿನೆಲೆ ವಲಸಿಗ ಅನುಭವವನ್ನು ಕಟ್ಟಿಕೊಡುವುದರಲ್ಲಿ ಸಫಲರಾಗಿದ್ದಾರೆ.

ನವ್ಯದ ಕಾಲದಲ್ಲಿ ಬಂದ ಮುಂಬೈ ಲೇಖಕರಾದ ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಅರವಿಂದ ನಾಡಕರ್‍ಣಿ, ಆನಂತರದ ಜಯಂತ ಕಾಯ್ಕಿಣಿ, ಉಮಾರಾವ್, ಸುನೀತ ಶೆಟ್ಟಿ, ಹಾ.ಮ.ಕನಕ, ಮಿತ್ರಾ ವೆಂಕಟರಾಜ್, ಶ್ರೀನಿವಾಸ ಜೋಕಟ್ಟೆ, ವಿ.ಎಸ್.ಶಾನುಭಾಗ್, ಮುಂತಾದವರು ವಲಸಿಗ ಲೇಖಕರಾದ ಕಾರಣ ಅವರ ಸಂವೇದನೆಗಳು ಕನ್ನಡ ನಾಡಿನಲ್ಲಿದ್ದು ಬರೆಯುವವರಿಗಿಂತ ವಿಭಿನ್ನವಾಗಿರುವುದನ್ನು ಗಮನಿಸಬಹುದು. ಇವರಂತೆ ಮದ್ರಾಸ್ ಕನ್ನಡಿಗರು, ಗೋವಾ ಕನ್ನಡಿಗರು, ಅಮೆರಿಕಾ ಕನ್ನಡಿಗರು ಬರವಣಿಗೆಯಲ್ಲಿ ತೊಡಗಿದ್ದಾರೆ. ಆದರೆ ಕನ್ನಡದ ಮಟ್ಟಿಗೆ ಇವರ ಸಾಹಿತ್ಯ ಇನ್ನೂ ಅಪರಿಚಿತ ವಲಯದಲ್ಲೇ ಉಳಿದಿದೆ. ಇದಕ್ಕೆ ಕಾರಣ ಮೊದಲನೆಯದಾಗಿ ಕನ್ನಡವೇ ಕ್ಷೀಣಿಸುವ ಪರಿಸರ ಅವರ ಸಮುದಾಯಗಳಲ್ಲೇ ಉಂಟಾಗಿರುವುದು. ಅಂದರೆ ಮನೆಗಳಲ್ಲಿ ಕನ್ನಡದ ಬಳಕೆ ಕ್ರಮೇಣ ಕಡಿಮೆಯಾಗುತ್ತಾ ಬಂದಿರುವುದು. ಅಲ್ಲದೆ, ಅನ್ಯರಾಜ್ಯ/ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಎರಡನೆ ಮೂರನೇ ತಲೆಮಾರು ಈಗ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಕನ್ನಡ ನಾಡು ನುಡಿಯ ನೇರ ಪರಿಚಯ ಇರುವುದಿಲ್ಲ. ಯಾವಾಗಲಾದರೊಮ್ಮೆ ರಜೆಗೆ ಬಂದು ಹೋಗುವ ಅವಕಾಶ ಬಿಟ್ಟರೆ ಅವರಿಗೆ ಕನ್ನಡದ ಸಂಪರ್‍ಕ ಬಹುತೇಕ ಇರುವುದಿಲ್ಲ. ಇದಲ್ಲದೆ ಈ ಹೊರನಾಡ ಕನ್ನಡಿಗರಲ್ಲೇ ಅನೇಕ ಒಳಗುಂಪುಗಳಾಗಿದ್ದು ಅವರ ಭಾಷಿಕ/ಸಾಂಸ್ಕೃತಿಕ ಗುರುತುಗಳನ್ನು ಅವರು ಪದೋನ್ನತಿಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಹೊರನಾಡ ಕನ್ನಡಿಗರ ಸಾಹಿತ್ಯವು ಭಾಷಿಕ ಸಂಕರ ಹಾಗು ಸಾಂಸ್ಕೃತಿಕ ಸಂಕರಗಳಿಗೆ ಮುಖಾಮುಖಿಯಾಗಿ ಬರುತ್ತಲಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಕ್ಕ್ ಒಪ್ಪೊ ಮಾತು
Next post ಮುದ್ದು ಕಂದನ ವಚನಗಳು : ಆರು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys