“ಮರಗಳೆಲ್ಲಾ ಯಾಕೆ ಅಷ್ಟೊಂದ್
ದೊಡ್ಡಕ್ ಇರ್‍ತಾವೆ?”
“ಒಳ್ಳೇವ್ರೆಲ್ಲಾ ಹಾಗೇ ಮರಿ,
ಎತ್ತರ ಇರ್‍ತಾರೆ.”

“ಒಳ್ಳೇವ್ರಾದ್ರೆ ಯಾಕೆ ಮತ್ತೆ
ಮಾತೇ ಆಡೊಲ್ಲ?”
“ಮಾತಾಡಿದ್ರೆ ಬಂತೇ ಚಿನ್ನ
ನಡತೆಗೆ ತಪ್ಪಲ್ಲ.”

“ಎಲೇನ್ ಕಿತ್ರೂ, ಹೂವನ್ ಕಿತ್ರೂ
ಯಾಕೆ ಬೈಯಲ್ಲ?
ಕೊಡೋಕೇಂತ್ಲೆ ಹೂಬಿಡೋರು
ಎಂದೂ ಅನ್ನಲ್ಲ.”

“ಇರೋವಾಗ ಕಾಯಿ ಹಣ್ಣು
ನೆರಳೂ ಕೊಡ್ತಾವೆ,
ಉರುಳಿದ ಮೇಲೂ ಕಿಟಕಿ ಬಾಗಿಲು
ಮೇಜು ಆಗ್ತಾವೆ”

“ದೊಡ್ಡೋರೆಲ್ಲ ಅದೇ ರೀತಿ
ನೋವನ್ ತಾಳ್ತಾರೆ,
ಸುಖವಾಗಿರ್‍ಲಿ ಜನರು ಅಂತ
ಜೀವ ಕೊಡ್ತಾರೆ.”
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)