ಕನ್ನಡ ಚಳವಳಿಯ ದಿಕ್ಕುದಿಸೆ

ಕನ್ನಡ ಚಳವಳಿಯ ದಿಕ್ಕುದಿಸೆ

ಯಾವುದೇ ಚಳವಳಿಯ ಹಿಂದಿನ ಆಶಯಗಳು ಆಯಾ ಪ್ರದೇಶ ಹಾಗೂ ಸನ್ನಿವೇಶದ ಹಿನ್ನೆಲೆಯನ್ನು ಪಡೆದಿರುತ್ತವೆ. ಆದ್ದರಿಂದ ಕನ್ನಡ ಚಳವಳಿಯು ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿಲ್ಲ ಎಂದಾಗಲಿ, ತಮಿಳುನಾಡಿನ ರೀತಿಯಲ್ಲಿಲ್ಲ ಎಂದಾಗಲಿ ನಾವು ಕೊರಗ ಬೇಕಾಗಿಲ್ಲ. ಎಲ್ಲಿಂದಲೇ ಆಗಲಿ, ನಾವು ಸ್ವೀಕರಿಸಬಹುದಾದ ಅಂಶಗಳಿದ್ದರೆ, ನಮ್ಮ ಸನ್ನಿವೇಶಕ್ಕೆ ಒಗ್ಗುವಂತಿದ್ದರೆ ಸ್ವೀಕಾರ ಮಾಡೋಣ. ನಮಗೆ ನಾವೇ ಮಾದರಿಯಾಗೋಣ. ಇದು ನನ್ನ ನಿಲವು.

ಕರ್ನಾಟಕದ ಒಟ್ಟಾರೆ ಮನೋಧರ್ಮವು ತಮಿಳು ನಾಡು ಹಾಗೂ ಶಿವಸೇನೆ ಮಾದರಿಗಳಿಗಿಂತ ಭಿನ್ನವಾದುದು. ಹಾಗೆಂದು ನಾವು ಭಾಷಾಭಿಮಾನದಲ್ಲಿ ಹಿಂದಿದ್ದೇವೆ ಎಂದು ಭಾವಿಸಬೇಕಾಗಿಲ್ಲ. ಹಾಗೆ ನೋಡಿದರೆ ತಮಿಳುನಾಡಿನಲ್ಲಿ ಕಾಣಿಸುವ ಭಾಷೆಯ ಬಹಿರಾಡಂಬರವು ಅಲ್ಲಿನ ಆಡಳಿತದಲ್ಲಿಲ್ಲ. ಅಧಿಕೃತ ದಾಖಲೆಯ ಪ್ರಕಾರ ೧೯೮೩ರಲ್ಲಿ ತಮಿಳುನಾಡಿನ ಸಚಿವಾಲಯದಲ್ಲಿ ಶೇಕಡ ಎಪ್ಪತ್ತರಷ್ಟು ಆಂಗ್ಲ ಭಾಷೆಯಿತ್ತು. ಈಗ ಅದು ಶೇ. ೪೫ಕ್ಕೆ ಇಳಿದಿದೆ. ಅಂದರೆ ಕರ್ನಾಟಕದಲ್ಲಿ ಆಂಗ್ಲ ಭಾಷೆಯ ಬಳಕೆಯಾಗುತ್ತಿರುವುದಕ್ಕಿಂತ ತುಂಬಾ ಹೆಚ್ಚಾಗಿ ತಮಿಳುನಾಡಿನ ಸಚಿವಾಲಯದಲ್ಲಿ ಆಂಗ್ಲಭಾಷೆಯಿತ್ತು. ಈಗ ಏಳೆಂಟು ವರ್ಷಗಳ ಹಿಂದೆಯೇ ಅಲ್ಲಿ ‘ತಮಿಳು ಅಭಿವೃದ್ದಿ ನಿರ್ದೆಶನಾಲಯ’ವನ್ನು ಸ್ಥಾಪಿಸಲಾಗಿದೆ. ಈ ಕಾರಣದಿಂದ ಕನ್ನಡಿಗರು ಸಮಾಧಾನ ಪಟ್ಟುಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ತಮಿಳುನಾಡಿನ ಬಗೆಗಿನ ‘ದಂತಕತೆ’ಗಳು ಎಷ್ಟು ವಾಸ್ತವ ಎಂಬ ಬಗ್ಗೆ ಯೋಚಿಸಲು ಇದೊಂದು ಉದಾಹರಣೆ. ಅಲ್ಲಿ ಜನಸಾಮಾನ್ಯ ಬಡವರ ಸಂಖ್ಯೆ ಜಾಸ್ತಿ. ಎಲ್ಲ ರಾಜ್ಯದ ಜನಸಾಮಾನ್ಯರು – ಬಡವರು – ಆಯಾ ರಾಜ್ಯದ ಭಾಷೆಯನ್ನು ಕೈಬಿಡುವುದಿಲ್ಲ. ತಮಿಳುನಾಡಿನಲ್ಲೂ ಇದು ಸತ್ಯ. ಜೊತೆಗೆ ಅಲ್ಲಿ ಜನಸಾಮಾನ್ಯರನ್ನು ಸಂಘಟಿಸಿದ ದ್ರಾವಿಡ ಚಳವಳಿಯು ಒಟ್ಟಾರೆಯಾಗಿ ಒಂದು ಪ್ರಮುಖ ಸಾಮಾಜಿಕ ಚಳವಳಿಯಾಗಿತ್ತೆಂಬುದನ್ನು ಮರೆಯಬಾರದು. ಭಾಷೆಯ ವಿಷಯವು ಈ ಸಾಮಾಜಿಕ ಚಳವಳಿಯ ಒಂದು ಅಂಗವಾಗಿತ್ತು; ಅದು ಪ್ರತ್ಯೇಕವಾಗಿರಲಿಲ್ಲ. ಕೇರಳದಲ್ಲಾದರೂ ಅಷ್ಟೆ. ಸಮೂಹ ಚಳವಳಿಗಳು ಭಾಷೆಯ ವಿಷಯವನ್ನು ಅಂತರ್ಗತ ಮಾಡಿಕೊಂಡಿದ್ದವು. ಭಾಷೆಯದೇ ಪ್ರತ್ಯೇಕ ಚಳವಳಿ ಇರಲಿಲ್ಲ. ಶಿವಸೇನೆಯು ಇಡೀ ಮರಾಠಿಗರ ಪರವಾದ ಸಂಘಟನೆಯಾಯಿತು; ಕೇವಲ ಮರಾಠಿ ಭಾಷೆಯ ಚಳವಳಿಯಾಗಲಿಲ್ಲ. ಶಿವಸೇನೆಯ ಅತಿರೇಕಗಳು, ಕೋಮುವಾದಿ ನಿಲವುಗಳು ನಮಗೆ ಖಂಡಿತ ಆದರ್ಶವಾಗಬೇಕಿಲ್ಲ. ಆದರ್ಶವಾಗಬಾರದು. ಭಾಷೆಯೊಂದೇ ಚಳವಳಿಯ ಉದ್ದೇಶವಾಗಿರಲಿಲ್ಲವೆಂಬುದು ಇಲ್ಲಿ ಮುಖ್ಯ. ಪಶ್ಚಿಮ ಬಂಗಾಳವನ್ನೇ ತೆಗೆದು ಕೊಳ್ಳಿ, ಅಲ್ಲಿನ ಸಾಂಸ್ಕೃತಿಕ-ಭಾಷಿಕ ಕಾಳಜಿಗಳು ಒಟ್ಟು ಸಮೂಹ ಚಳವಳಿಯ ಭಾಗವೇ ಆಗಿವೆ.

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳವರೆಗೆ ಕೆಲವು ವಲಯಗಳಲ್ಲಿ ಈಗಲೂ ಭಾಷೆಯ ಚಳವಳಿಯೇ ಬೇರೆಯಾಗಿದೆ; ಸಾಮಾಜಿಕ-ಸಾಮುದಾಯಿಕ ಚಳವಳಿಗಳೇ ಬೇರೆಯಾಗಿವೆ. ಇವು ಪರಸ್ಪರ ಪೂರಕವಾಗುವ ಗಟ್ಟಿ ಸನ್ನಿವೇಶ ನಿರ್ಮಾಣವಾಗಿಲ್ಲ. ಇಲ್ಲಿನ ಸಮೂಹ ಚಳವಳಿಗಳು ಸಾಂಸ್ಕೃತಿಕ ಕಾಳಜಿಯನ್ನು ಅಗತ್ಯ ಪ್ರಮಾಣದಲ್ಲಿ ಅಂತರ್ಗತ ಮಾಡಿಕೊಳ್ಳಲಿಲ್ಲ. ಭಾಷಾ ಚಳವಳಿಗಳು ಅಗತ್ಯ ಪ್ರಮಾಣದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಅವಿಭಾಜ್ಯ ಅಂಗವಾಗಿಸಿ ಕೊಳ್ಳಲಿಲ್ಲ. ವಾಸ್ತವವಾಗಿ ಭಾಷೆ ಮತ್ತು ಸಮೂಹ ಚಳವಳಿಗಳು ಎಲ್ಲೆಲ್ಲಿ ಒಂದಾಗಿ ನಡೆದಿವೆಯೋ ಅಲ್ಲೆಲ್ಲ ಜನರಲ್ಲಿ ಜಾಗೃತಿಯ ಪ್ರಮಾಣ ಹೆಚ್ಚಾಗಿದೆ. ಈ ದೃಷ್ಟಿಯಿಂದ ಕರ್ನಾಟಕದ ಭಾಷಾ ಚಳವಳಿಗಳನ್ನು ಮರುಚಿಂತನೆಗೆ ಒಳಪಡಿಸಬೇಕಾಗಿದೆ. ಈ ಮಾತು ಸಮೂಹ ಚಳವಳಿಗಳಿಗೂ ಅನ್ವಯಿಸುತ್ತದೆ.

ಕನ್ನಡಾಭಿಮಾನವನ್ನು ಕೇವಲ ಹಿಂದೂಗಳ ನೆಲೆಯಲ್ಲಿ ನೋಡುವ ಮನೋಧರ್ಮದವರೂ ನಮ್ಮಲ್ಲಿದ್ದಾರೆ. ಬೇರೆ ರಾಜ್ಯಗಳಲ್ಲಿ ಹೀಗೆ ಇಲ್ಲ ಎಂಬುದನ್ನೂ ಗಮನಿಸಬೇಕು. ತೆಲುಗು ಭುವನೇಶ್ವರಿ, ಮಲೆಯಾಳಿ ಭುವನೇಶ್ವರಿ, ತಮಿಳು ಭುವನೇಶ್ವರಿಗಳು ಆಯಾ ರಾಜ್ಯಗಳಲ್ಲಿ ಕಾಣುತ್ತಿಲ್ಲ. ಎಲ್ಲ ಮತಧರ್ಮದ ಜನರೂ ಒಪ್ಪಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಲಾಗಿದೆ.

ಕನ್ನಡ ಒಂದು ಜಾತ್ಯಾತೀತ ಭಾಷೆ. ಎಲ್ಲ ಮತಧರ್ಮದವರ ಭಾಷೆ. ಎಲ್ಲರೂ ಕಲಿಯಬೇಕಾದ, ಎಲ್ಲರನ್ನೂ ಒಳಗೊಳ್ಳಬೇಕಾದ ಭಾಷೆ. ಇದು ನಮ್ಮ ದೃಷ್ಟಿಕೋನವಾಗಬೇಕು.

ದಕ್ಷಿಣ ಭಾರತದ ಬೇರೆ ರಾಜ್ಯಗಳಿಗೆ ಇಲ್ಲದ ಸಮಸ್ಯೆಯೊಂದು ನಮ್ಮ ರಾಜ್ಯಕ್ಕಿದೆ. ನಮ್ಮ ರಾಜ್ಯದ ಒಟ್ಟು ಮನೋಧರ್ಮದಲ್ಲಿ, ಭೌಗೋಳಿಕ ಪರಿಸರದಲ್ಲಿ, ನಡವಳಿಕೆಯ ವಿಧಾನದಲ್ಲಿ ಎಲ್ಲರನ್ನೂ ಒಳಗೊಳ್ಳುವ ನೆಲೆಯೊಂದು ಸೇರಿಕೊಂಡಿದೆ. ವಿವಿಧ ರಾಜ್ಯದವರು ಇಲ್ಲಿ ಬಂದು ಬೀಡು ಬಿಟ್ಟಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಮಗ್ರ ಕನ್ನಡೀಕರಣವು ನಮ್ಮ ಆಶಯವಾಗಬೇಕು.

ಒಂದು ಭಾಷೆಯ, ಒಂದು ರಾಜ್ಯದ ಸಮಕಾಲೀನ ಪರಿಸ್ಥಿತಿಗೆ ಅದರದೇ ಆದ ಚಾರಿತ್ರಿಕ ಕಾರಣಗಳು ಇರುತ್ತವೆಯೆಂಬುದನ್ನು ಅರ್ಥಮಾಡಿಕೊಂಡು ವಿವೇಕ ಮತ್ತು ಔಚಿತ್ಯಪ್ರಜ್ಞೆಯ ಚಿಂತನೆ ಮತ್ತು ಕ್ರಿಯೆಯಿಂದ ಮಾತ್ರ ಕನ್ನಡ ಹಾಗೂ ಕರ್ನಾಟಕವನ್ನು ಕಟ್ಟಲು ಸಾಧ್ಯ.

ಯಾವುದೇ ಚಳವಳಿಯ ಹಿನ್ನಡೆಗಳು ಮುನ್ನಡೆಗೆ ಬೇಕಾದ ಚಾರಿತ್ರಿಕ ಪಾಠಗಳಾಗಬೇಕು. ಹಾಗಾದರೆ ಕನ್ನಡ ಚಳವಳಿ ಹೇಗಿರಬೇಕು?

೧. ಕನ್ನಡ ಚಳವಳಿಗೆ ತನ್ನದೇ ಆದ ಪರಂಪರೆಯಿದೆ. ಪಂಪಕವಿಯು ‘ಮಾರ್ಗ’ಕ್ಕೆ ಎದುರಾಗಿ ‘ದೇಸಿ’ಯನ್ನು ಬಳಸತೊಡಗಿದ್ದಲ್ಲದೆ, ಜೈನಧರ್ಮ ಮಾರ್ಗದಲ್ಲಿದ್ದೂ ಅದನ್ನು ಮೀರಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದಾಗಲೇ ಕನ್ನಡಕ್ಕೆ, ಕನ್ನಡ ಚಳವಳಿಗೆ, ಏಕಕಾಲಕ್ಕೆ ಭಾಷಿಕ ಮತ್ತು ಸಾಮಾಜಿಕ ಆಯಾಮ ದೊರಕಿತು. ಮುಂದೆ ನಯಸೇನ, ಆಂಡಯ್ಯ, ವಚನಕಾರರು, ಕುಮಾರವ್ಯಾಸ, ದಾಸರು, ಮುದ್ದಣ ಮುಂತಾದವರ ನೆಲೆಯಲ್ಲಿ ಪ್ರಮುಖ ಮಾದರಿಗಳನ್ನು ಸೃಷ್ಟಿಸಿಕೊಂಡಿತು. ಆಧುನಿಕ ಸಂದರ್ಭದಲ್ಲಿ ಆಲೂರು ವೆಂಕಟರಾಯರು, ಬಿ.ಎಂ.ಶ್ರೀ., ಕುವೆಂಪು, ಬೇಂದ್ರೆ, ಅ.ನ.ಕೃ., ಕೆ.ಎಸ್.ನ – ಮುಂತಾದವರು ಸೃಷ್ಟಿಸಿದ ಮಾದರಿಗಳು ಅಭಿವ್ಯಕ್ತಿ ವಿನ್ಯಾಸಗಳು ವಿಸ್ತಾರಗೊಂಡವು. ಮುಂದೆ ಕನ್ನಡ ಚಿಂತಕರು ಮತ್ತು ಹೋರಾಟಗಾರರ ನಡುವೆ ಬೇಡದ ಅಂತರವೊಂದು ನಿರ್ಮಾಣವಾಯಿತು. ಇಂದಿನ ಅನೇಕ ಅನಾಹುತಗಳ ಹಿಂದೆ ಈ ‘ಅಂತರ’ದ ಪಾತ್ರವೂ ಇದೆ. ಇದರ ಪರಿಣಾಮವಾಗಿ ಅಸಹನೆಯ ಅಂಶ ಮುನ್ನೆಲೆಗೆ ಬಂದಿದೆ. ಇದಕ್ಕೆ ಆಯ್ದ ಚಿಂತಕರ ಕುಮ್ಮಕ್ಕೂ ಇದೆ. ಕನ್ನಡದ ಕರುಳು ಮತ್ತು ಕೊರಳು ಒಂದಾಗುವ ಬದಲು ಎರಡಾಗುವ ಆತಂಕ ಕಾಣುತ್ತಿದೆ. ಕೆಲವೊಮ್ಮೆ ಉಗ್ರವಾದಿ ಧೋರಣೆ ಬೇಕೆನ್ನಿಸಿದರೂ ವಿವೇಕವಿಲ್ಲದ ಉಗ್ರವಾದವು ಹಿಂಸೆಯಾಗುತ್ತದೆಯೆಂಬ ಎಚ್ಚರ ಬೇಕೇ ಬೇಕು; ಕನ್ನಡ ಪರಂಪರೆಯಲ್ಲಿ ವಿಕಾಸಗೊಂಡ ವಿವೇಕವನ್ನು ನಾವು ಮರೆಯಬಾರದು. ವಿವೇಕದ ಸ್ಫೂಲಮಾದರಿ ಹೀಗಿದೆ : ಸಂಸ್ಕೃತದ ಪ್ರಾಬಲ್ಯವನ್ನು ವಿರೋಧಿಸಿದರೂ ಅದರ ಜ್ಞಾನವನ್ನು ಕನ್ನಡವು ನಿರಾಕರಿಸಲಿಲ್ಲ. ಇಂಗ್ಲೀಷಿನ ದಾಳಿಯನ್ನು ಪ್ರತಿಭಟಿಸಿದರೂ ಅದರ ಪ್ರಬುದ್ಧ ವಿವೇಕವನ್ನು ಯಾವತ್ತೂ ಬೇಡವೆನ್ನಲಿಲ್ಲ. ಹಿಂದಿಯ ಸವಾರಿಗೆ ಖಂಡನೆಯಿದ್ದರೂ ಅದರೊಳಗಿನ ಸಾಹಿತ್ಯಕ್ಕೆ ಕುರುಡಾಗಲಿಲ್ಲ. ಒಟ್ಟಾರೆಯಾಗಿ ಇದು ಕನ್ನಡದ ವಿವೇಕ, ಈ ವಿವೇಕ ಈಗ ಹಿನ್ನೆಲೆಗೆ ಸರಿಯುತ್ತಿದೆ. ಇದಕ್ಕೆ ಮತ್ತೊಂದು ಕಾರಣ – ಆದ್ಯತೆಗಳ ಪಲ್ಲಟ. ಕನ್ನಡಕ್ಕೆ ಕರ್ನಾಟಕಕ್ಕೆ ಯಾವುದು ಮೊದಲ ಆದ್ಯತೆ ಯಾವುದು ಆನಂತರದ ಆದ್ಯತೆ ಎಂದು ಚಿಂತಿಸದೆ, ಭಾವೋದ್ರೇಕದ ಸಂಗತಿಗಳನ್ನು ಆದ್ಯತೆಯ ಅಂಶವನ್ನಾಗಿಸುತ್ತಿರುವುದು ಮತ್ತು ಅಂಥವು ಮಾತ್ರವೇ ಕನ್ನಡದ ಮುಖ್ಯ ಕೆಲಸ ಎಂಬಂತೆ ಪ್ರತಿಪಾದಿಸುತ್ತಿರುವುದು ಕನ್ನಡಪರ ಚಿಂತನೆ ಮತ್ತು ಕ್ರಿಯೆಯ ಒಂದು ಮುಖ್ಯ ಕೊರತೆ.

೨. ಭವಿಷ್ಯದ ಕನ್ನಡ ಚಳವಳಿಗೆ ಸೂಕ್ತ ಚಿಂತನಾ ಮಾದರಿಯೊಂದು ಬೇಕಾಗಿದೆ. ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯನ್ನಾಗಿ ನೋಡದೆ ಅನ್ನದ ಪ್ರಶ್ನೆಯೆಂದು ಪರಿಗಣಿಸಬೇಕು. ಮೊದಲು ಶಿಕ್ಷಣದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಕಲಿಯಲೇಬೇಕಾದ ಪಠ್ಯಕ್ರಮವನ್ನು ರೂಪಿಸಿ ಅನುಷ್ಟಾನಗೊಳಿಸಬೇಕು. ಶಿಕ್ಷಣದಲ್ಲಿ ಕನ್ನಡ ಉಳಿದರೆ ಮುಂದಿನ ಪೀಳಿಗೆಯಲ್ಲೂ ಉಳಿಯುತ್ತದೆ. ಆನಂತರ ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಿಗೆ ಕನ್ನಡ ಭಾಷೆಯ ತಿಳುವಳಿಕೆ ಕಡ್ಡಾಯವಾಗಬೇಕು. ಈ ದಿಕ್ಕಿನಲ್ಲಿ ಸೂಕ್ತ ಹಾಗೂ ಶಕ್ತ ಚಳವಳಿ ನಡೆಯಬೇಕು. ಇನ್ನು ಆಡಳಿತ ಎಲ್ಲಾ ಹಂತದಲ್ಲೂ ಕನ್ನಡದ ಅನುಷ್ಠಾನ ಸರಿಯಾಗಿ ಆಗಬೇಕು.

೩. ಆಂಗ್ಲ ಮಾಧ್ಯಮದ ಪ್ರಾಬಲ್ಯ ಹೆಚ್ಚುತ್ತಿರುವ ಮತ್ತು ವೃತ್ತಿ ಶಿಕ್ಷಣ ಮುಖ್ಯವೆಂದು ಭಾವಿಸಲಾಗುತ್ತಿರುವ ಈ ಸನ್ನಿವೇಶದಲ್ಲಿ ಶಿಕ್ಷಣದಲ್ಲಿ ‘ಸಾಂಸ್ಕೃತಿಕ ಪಠ್ಯ’ವನ್ನು ಅಳವಡಿಸಬೇಕು. ಈ ಪಠ್ಯವು ಕರ್ನಾಟಕದ ಸಾಂಸ್ಕೃತಿಕ ಪರಿಚಯ ಮಾಡಿಕೊಡುವಂತಿರಬೇಕು. ಕನ್ನಡವು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆಯುವುದು ಸಹ ತುಂಬಾ ಮುಖ್ಯ. ಹೊಸ ಸನ್ನಿವೇಶ, ಹೊಸ ತಂತ್ರಜ್ಞಾನದ ಸವಾಲುಗಳಿಗೆ ಉತ್ತರ ಕೊಟ್ಟುಕೊಂಡು ಕಟ್ಟುವ ಕ್ರಿಯೆಯಲ್ಲಿ ಕನ್ನಡದ ಒಳಿತು ಅಡಗಿದೆ. ಇದು ಚಿಂತಕರು ಮತ್ತು ಚಳವಳಿಗಾರರು ಒಟ್ಟಾಗಿ ಗಮನಿಸ ಬೇಕಾದ ಕೆಲ ಅಂಶಗಳು. ಆದರೆ ನಾನು ಆರಂಭದಲ್ಲೇ ಪ್ರಸ್ತಾಪಿಸಿದಂತೆ, ಕನ್ನಡಪರ ಚಿಂತಕರು ಮತ್ತು ಚಳವಳಿಗಾರರ ನಡುವೆ ಅಂತರವಿರುವುದರಿಂದ ‘ಒಟ್ಟಾಗಿ ಗಮನಿಸುವ’ ಬಗ್ಗೆ ಅನುಮಾನವಿದೆ. ಕೆಲ ಚಿಂತಕರು ಕೆಲವು ಚಳವಳಿಗಾರರ ವೈಪರೀತ್ಯ ವಿಚಾರಗಳಿಗಿಂತ ಭಿನ್ನವಾಗಿ ಯೋಚಿಸುವುದಿಲ್ಲವೆಂಬ ಕಟು ಸತ್ಯದ ನಡುವೆಯೂ ‘ಅಂತರ’ ಉಳಿದಿದೆ. ಹಾಗೆ ನೋಡಿದರೆ ಕನ್ನಡದ ಆದ್ಯತೆಗಳನ್ನು ಪಲ್ಲಟಗೊಳಿಸಿ ಹೋರಾಟಕ್ಕೆ ಮೂಲ ಆಹಾರ ಒದಗಿಸುವ ‘ವಿದ್ವಾಂಸರು’ (ಚಿಂತಕರು ?) ನಮ್ಮಲ್ಲಿದ್ದಾರೆ. ಆದ್ದರಿಂದ ಕೇವಲ ಚಳವಳಿಗಾರರನ್ನು ಮಾತ್ರ ಸಿನಿಕತನದಿಂದ ನೋಡಲಾಗದು ಎನ್ನುವ ಸ್ಥಿತಿ ನಮ್ಮದು. ಅನ್ನದ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಪರಚಿಂತನೆ ಮತ್ತು ಚಳವಳಿ ನಡೆಯದಿದ್ದರೆ ಇಂದಿನ ಸ್ಥಿತಿ ಖಂಡಿತ ಬದಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಾವು ಮೊದಲು ‘ಬಾಯಿಪಾಠದ ಕನ್ನಡಾಭಿಮಾನ’ದಿಂದ ಹೊರಬಂದು ಹೊಸದಾಗಿ ಯೋಚಿಸಬೇಕು. ಬಾಯಿಪಾಠಕ್ಕೆ ಉತ್ತಮ ಉದಾಹರಣೆಯೆಂದರೆ – ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿ ಗತಿ ಕುರಿತ ಮಾತುಗಳು :

೪. ಬೆಂಗಳೂರಿನಲ್ಲಿ ಕನ್ನಡಕ್ಕೆ ಆಪತ್ತು ಬಂದಿದೆ ಎಂಬ ಮಾತು ಅನೇಕ ವರ್ಷಗಳಿಂದಲೂ ಇದೆ. ಅದಕ್ಕೆ ಕಾರಣಗಳೂ ಇವೆ. ಬೆಂಗಳೂರು ಹೇಳಿ ಕೇಳಿ ಕಾಸ್ಮೊಪಾಲಿಟನ್ ನಗರ. ಇಂತಹ ನಗರಗಳ ಸ್ವರೂಪವು ಚೆನ್ನೈನಂತಹ ನಗರಗಳಿಗಿಂತ ಭಿನ್ನವಾದುದು. ಸಂವಿಧಾನಾತ್ಮಕ ಹಕ್ಕಿನ ಕಾರಣಕ್ಕಾಗಿ ಬೇರೆ ಊರಿನಿಂದ ಬರುವವರನ್ನು ತಡೆಯುವಂತಿಲ್ಲ. ತಡೆಯಲಾಗದು. ಕನ್ನಡಿಗರು ದೇಶ ವಿದೇಶದಲ್ಲಿ ನೆಲೆಸಿ ಅಲ್ಲಿ ಕನ್ನಡ ಸಂಘಗಳನ್ನು ಕಟ್ಟಿ ಸಮ್ಮೇಳನಗಳನ್ನು ನಡೆಸಿ ಕರ್ನಾಟಕವನ್ನು ಕನಸುತ್ತಿರುವಾಗ ಸಂಭ್ರಮಪಡುವ ನಾವು, ಬೇರೆ ಭಾಷೆಯವರು ಇಲ್ಲಿಗೆ ಬಂದು ನೆಲೆಸಿ ತಮ್ಮ ಮೂಲ ಭಾಷೆ-ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಪ್ರತಿರೋಧ ಒಡ್ಡುವ ಬದಲು ಅವರನ್ನು ಕನ್ನಡೀಕರಣಗೊಳಿಸುವುದೇ ಸೂಕ್ತ ಮಾರ್ಗ. ಒಕ್ಕೂಟ ವ್ಯವಸ್ಥೆಯಲ್ಲಿ ಅವರವರ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಂಡು ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಕರಗತ ಮಾಡಿಕೊಂಡು ಬದುಕುವುದು ಒಂದು ಅನಿವಾರ್ಯ ಪ್ರಕ್ರಿಯೆ
ಯಾಗಬೇಕು. ಆದ್ದರಿಂದ ಕಾಸ್ಮೋಪಾಲಿಟನ್ ನಗರವೆಂಬ ಕಾರಣಕ್ಕೆ ಕನ್ನಡವನ್ನು ಕಡೆಗಣಿಸುವುದು ಕ್ಷಮಾರ್ಹವಲ್ಲ. ಸಂವಿಧಾನಾತ್ಮಕವೂ ಅಲ್ಲ. ಆದರೂ ಬೆಂಗಳೂರಿನಲ್ಲಿ ಯಾಕೆ ಹೀಗಾಗುತ್ತಿದೆ?

ಕಾಲು ಶತಮಾನದ ಹಿಂದೆ ಬೆಂಗಳೂರನ್ನು ತಮಿಳರು ನುಂಗಿಹಾಕುತ್ತಾರೆಂಬ ವಾದ ಹುಟ್ಟಿಕೊಂಡು ಇಲ್ಲೀವರೆಗೆ ಜೀವಂತವಾಗಿತ್ತು. ಈಗ ಆ ಜಾಗಕ್ಕೆ ಐ.ಟಿ, ಬಿ.ಟಿ.ಗಳು ಬಂದಿದ್ದಾರೆ. ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ಅಂದೂ ಹೇಳಲಾಗುತ್ತಿತ್ತು; ಇಂದೂ ಹೇಳಲಾಗುತ್ತಿದೆ. ಈ ಹೇಳಿಕೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರು ಬದಲಾವಣೆಗೊಂಡಿದೆ. ಜಾಗತೀಕರಣದ ಅಬ್ಬರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ‘ಹೊಸ ಸಾಮ್ರಾಜ್ಯ’ಗಳಾಗಿ ವಿಜೃಂಭಿಸುತ್ತ ಆರ್ಥಿಕ ನೀತಿಯ ಜೊತೆಗೆ ಸಾಮಾಜಿಕ ಬದುಕನ್ನೂ ನಿಯಂತ್ರಿಸತೊಡಗಿವೆ. ಲಾಭ ಗಳಿಕೆಯ ದಾಹದಲ್ಲಿ ಬದುಕಿನ ಭಾಷೆಯೂ ಬೆಂದು ಹೋಗುತ್ತಿದೆ. ರಾಜ್ಯ ಭಾಷೆಯು ತಲ್ಲಣಗೊಂಡಿದೆ. ಇಷ್ಟಾಗಿಯೂ ಬೆಂಗಳೂರಿನಲ್ಲಿ ಕನ್ನಡವು ಅಂದೂ ನಾಶವಾಗಲಿಲ್ಲ; ಮುಂದೂ ನಾಶವಾಗುವುದಿಲ್ಲ. ಕಾಲಕಾಲಕ್ಕೆ ಜೀವಂತಿಕೆಯನ್ನು ಮೆರೆಯುತ್ತ ಬಂದಿರುವ ಕನ್ನಡ ಪರ ಕ್ರಿಯಾಶೀಲತೆಯು ಇದರ ಹಿಂದಿನ ಒಂದು ಪ್ರಮುಖ ಕಾರಣವಾಗಿದೆ.

ಬೆಂಗಳೂರು ನಗರದ ಪ್ರಸ್ತುತ ಬದಲಾವಣೆಯ ವಿನ್ಯಾಸದ ಹಿಂದೆ ರಾಷ್ಟ್ರೀಯ, ಅಂತರ ರಾಷ್ಟ್ರೀಯ ನೀತಿಗಳ ಪ್ರಭಾವವಿದ್ದು ನಮ್ಮ ರಾಜ್ಯವು ಸೂಕ್ತ ನೀತಿ ನಿರೂಪಣೆ ಮತ್ತು ಅನುಷ್ಠಾನದ ಮೂಲಕ ಕನ್ನಡಪರ ಬದ್ಧತೆಯನ್ನು ತೋರಬೇಕಾಗಿದೆ. ಕನ್ನಡಪರ ಬದ್ಧತೆಯೆಂದರೆ ಕನ್ನಡಿಗರ ಬದುಕಿನ ಪರವಾದ ಬದ್ದತೆ, ಕನ್ನಡಿಗರು ಉಳಿಯದೆ ಕನ್ನಡವು ಉಳಿಯುವುದಿಲ್ಲ. ಆದ್ದರಿಂದ ಕನ್ನಡಿಗರಿಗೆ – ಕನ್ನಡ ಬಲ್ಲವರಿಗೆ – ಮಾತ್ರ ಉದ್ಯೋಗ ಎಂಬ ನೀತಿಯು ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಕಡ್ಡಾಯವಾಗಿ ಅನ್ವಯವಾಗಬೇಕು. ಕನ್ನಡ ಮತ್ತು ಉದ್ಯೋಗಕ್ಕೆ ಸಂಬಂಧ ಕಲ್ಪಿಸುವುದು ಮುಖ್ಯವಾಗಬೇಕು. ಕನ್ನಡವನ್ನು ಓದದೆ ಈ ರಾಜ್ಯದಲ್ಲಿ ಯಾರೂ ಶಿಕ್ಷಣವನ್ನು ಪೂರೈಸಲು ಅವಕಾಶವಿರಬಾರದು. ಈ ಅಂಶಗಳಿಗೆ ಮೊದಲನೇ ಆದ್ಯತೆ ನೀಡಿ ಒತ್ತಾಯ ತರುವುದು ಹೋರಾಟ ನಡೆಸುವುದು ಜರೂರಿನ ಕ್ರಿಯೆಯಾಗಬೇಕು. ಅಲ್ಲದೆ ಆಡಳಿತದಲ್ಲಿ ಕನ್ನಡದ ಬಳಕೆ ಮತ್ತಷ್ಟು ವಿಸ್ತಾರಗೊಳ್ಳಬೇಕಾದುದು ಅಗತ್ಯ. ಹೀಗೆ ಉದ್ಯೋಗ, ಶಿಕ್ಷಣ ಮತ್ತು ಆಡಳಿತ – ಈ ಮೂರೂ ಕ್ಷೇತ್ರಗಳು ಆದ್ಯತೆಯ ಮೇಲೆ ಕನ್ನಡ ಕೇಂದ್ರಿತವಾದಾಗ ಕನ್ನಡಿಗರು ಮತ್ತು ಕನ್ನಡ ಉಳಿಯಲು, ಬೆಳೆಯಲು ಸಂಪೂರ್ಣ ಸಾಧ್ಯ. ಇದರ ಬದಲು ಆದ್ಯತೆಗಳನ್ನು ಪಲ್ಲಟಗೊಳಿಸಿ ಅದೇ ಅಂತಿಮ ಎಂಬ ಹಟಕ್ಕೆ ಬಿದ್ದರೆ ಯಾರೇನು ಮಾಡಲು ಸಾಧ್ಯ?

ಈಗಲೂ ನನಗೆ ನಂಬಿಕೆಯಿದೆ : ಕನ್ನಡದ ವಿವೇಕ ಇನ್ನೂ ಜಾಗೃತವಾಗಿರುವುದರಿಂದ ಹೊಸ ಸವಾಲಿಗೆ ಉತ್ತರ ಹುಡುಕುತ್ತ ಬೆಂಗಳೂರಲ್ಲಿ ಕನ್ನಡ ಉಳಿಯುತ್ತದೆ; ಆದರೆ ಈ ಉಳಿವಿಗಾಗಿ ಸೂಕ್ತ ಆದ್ಯತೆಯ ಕನ್ನಡ ಕ್ರಿಯಾಶೀಲತೆಯನ್ನು ಬಯಸುತ್ತದೆ.
*****
(ನವೆಂಬರ್ ೨೦೦೮)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೇ ನನ್ನ ಕಣ್ಣು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೧

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…