ಮೊಂಜಾವಿನಂದದಿ ಬೆಳಕಾಗಿ ಮೂಡಣದಾ
ಇಬ್ಬನಿ ಹನಿಗಳೇ ಮಣಿಮುತ್ತಾಗಿ ಸಿಂಗರಿಸೆ ತಾಯೆ

ಹಸಿರ ಹೊನಲಿಗೆ ತಳಿರು ತೋರಣ ನಾಚಿ
ತಾಯ ಗುಡಿ ಬಾಗಿಲತೆರೆಯೆ ಮುತ್ತೈದೆಯರು
ಪಂಚಮುಖಿ ಆರತಿ ಎತ್ತಿ ನುಡಿದಿಹರು
ಚವತಿ ಚುಕ್ಕೆಗಳ ಹರಸಿ ||

ಸಪ್ತವರ್‍ಣಗಳಿಂದ ಮೂರ್‍ತವಾಗಿರಿಸಿ
ಸಪ್ತಪದಿಯಂಗಳದಿ ಷಡಕ್ಷರ ಶೃತಿಯಾಗಿ
ಅಷ್ಟ ಮಂಗಳಗಳಿಂದ ಅಲಂಕೃತಳಾಗಿ
ಸಪ್ತಮಾತೃಕೆಯರಿಗೆ ಇಪ್ಪತ್ತೊಂದಾರತಿ ||

ನವರಾತ್ರಿಗಳ ಪೂಜಾನಿಧಿಯಾಗಿ
ಅಷ್ಟ ಒಡತಿಯರ ಸಮಾಗಮ ನವಭಾರತೀಯ
ಜನಮನದಿ ತನುಜಾತೆಯ ಗುಣಗಾನ
ದಾನವ ಶಕ್ತಿಗಳ ಸಂಹರಿಸಿದಾ ದೇವಿಯೇ ||

ಶಿಷ್ಟ ರಕ್ಷಣೆಯ ಮಾನವಿಜಯ ಪತಾಕೆಯ
ರಥವೇರಿದ ನಿನಗೆ ವಿಜಯೋತ್ಸವವು ತಾಯೆ
ಹೂಮಳೆಗೆರೆಯ ತಾಳ ಮೃದಂಗ ಸ್ವರ
ಜಯಘೋಷವು ನಿನಗೆ ತಾಯೆ ಕನ್ನಡಾಂಬೆಯೇ ||
*****