ಬಿಡಿಸಲಾಗದ ಬಂಧವಿದು
ಆದರೂ ಒಗಟು.
ಒಳಗೊಳಗೆ ತುಡಿತ-ಮಿಡಿತ
ತೋರಿಕೆಯ ಹಿಂದೆಗೆತ
ಭಾನು-ಭುವಿಯರ ಮಿಲನ
ಅಂಭವ ಮಧ್ಯಂತರಾಳದೊಳು
ಕ್ಷಿತಿಜದೊಳು ಭಂಗರಹಿತ
ತುಂಬು ಬಿಂದಿಗೆಯಂತೆ
ಹಬ್ಬಿ ನಿಂತಿದೆ ಪ್ರೀತಿ
ಬಿಂಬ ಪ್ರತಿಬಿಂಬವಾಗುವ ಬಯಕೆ
ಆದರೂ ಮನ ಬೆರೆತರೂ
ಬೆರೆಯದಂತೆ, ಒಲಿದರೂ
ಒಲಿಯದಂತೆ ಇರುವುದೇತಕೆ
ಪದ್ಮಪತ್ರದಂತೆ?
ಒಡಲು ತುಂಬಬೇಕು
ಆ ಉರಿ ಜ್ವಾಲೆ ಕಿರಣಗಳಿಂದಷ್ಟೇ
ಗರ್ಭ ಫಲಿತ, ಇಲ್ಲದಿರೆ
ಕೆಟ್ಟು ಸ್ಖಲಿತ, ಈಚೆ ಈ ವಧು
ತೆರೆದುಕೊಂಡರೆ ತಾನೆ
ಈ ಶಾಖ ಶಾಲೆ ಮೌಲ್ಯ ಸಹಿತ
ಇಲ್ಲದಿರೆ ವ್ಯರ್ಥ ಮೊರೆತ
ನೀ ನನಗಾರೆ ನಾ ನಿನಗೆ
ಈ ನಂಟು ಜನ್ಮ ಜನ್ಮದ ಗಂಟು
ಅರಿತು ನಡೆ ಸವಿಯುಂಟು
ಬೆಲ್ಲದ ಅಂಟು.
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.