ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು.

“ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ.
“ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗುರುಗಳು.
“ಅರ್ಥವಾಗಲಿಲ್ಲ ಗುರುಗಳೇ” ಎಂದು ಶಿಷ್ಯ ಪೆಚ್ಚು ಮೋರೆ ಹಾಕಿದ.
“ವೃಕ್ಷವನ್ನು ಸುತ್ತುವಾಗ ನಿನಗೆ ಸವೆಯದ ದಾರಿ ಇದೆ. ಮೇಲೆ ಶಾಕೆಗಳ ಅನೇಕ ಕವಲುಗಳ ದಾರಿಯಲ್ಲಿ ಹೂ, ಕಾಯಿ ಫಲ ದೊರೆಯದೆ ಇರದು” ಎಂದರು ಗುರುಗಳು.

ಅಂತರಾರ್‍ಥದ ಮರ್‍ಮವನ್ನು ಅರಿತ ಶಿಷ್ಯ ‘ಧನ್ಯೂಸ್ಮಿ’ ಎಂದ.

“ಅವನಿಗೆ ವೃಕ್ಷವು ದಾರಿಯಾದರೆ ನನಗೆ ಯಾವುದು ದಾರಿ?” ಎಂದ ಮತ್ತೊರ್‍ವ ಶಿಷ್ಯ.

“ನಿನ್ನ ಮುಂದಿರುವ ಸಾಗರವೇ ನಿನಗೆ ದಾರಿ, ನಡೆದು ಹೋಗು” ಎಂದರು ಗುರುಗಳು.

“ಸಾಗರದಲ್ಲಿ ದಾರಿ ಎಲ್ಲಿ? ಮುಳುಗಿಹೋಗುವೆನಲ್ಲ, ಗುರುಗಳೇ?” ಎಂದ ಎರಡನೇಯ ಶಿಷ್ಯ.

“ನಿನ್ನ ಹೃದಯ ಸಾಗರದಲ್ಲಿ ಮನವೆಂಬ ಹಡಗು ಅಲೆಗಳ ಆರ್‍ಭಟವ ಸಹಿಸಿ ತೇಲುತ್ತ ಹೋದರೆ ದಡದಲ್ಲಿ ಕಾಣದೇ ನಿನ್ನ ದಾರಿ?” ಎಂದರು ಗುರುಗಳು. ಶಿಷ್ಯ ತೃಪ್ತನಾಗಿ ಧ್ಯೇಯದತ್ತ ದಾರಿ ಹಿಡಿದು ಸಾಗಿದ.

ಮೂರನೆಯ ಶಿಷ್ಯ ಮತ್ತೆ ಮುಂದೆ ಬಂದು “ನನಗೇನು ದಾರಿ ಹೇಳಿಗುರುಗಳೆ?” ಎಂದಾಗ.

“ಅಯ್ಯೋ! ಮೂರ್‍ಖಾ, ದಾರಿ ನಮ್ಮ ಕಣ್ಣಿಗೆ ಕಾಣಬೇಕು, ದೃಷ್ಟಿಯಲ್ಲಿ ದಾರಿಯಲ್ಲವೆ? ನಮ್ಮ ಕಾಲು ನಡೆದರೆ, ದಾರಿ ಓಡಿ ಬರುತ್ತದೆ. ಎಲ್ಲರಿಗೂ ಒಂದೊಂದು ದಾರಿ ಕಾದಿರುತ್ತದೆ. ಅದು ಕಂಡು ಕೊಳ್ಳುವುದು ಬಾಳಿನ ಗುಟ್ಟು” ಎಂದಾಗ ಶಿಷ್ಯರ ಗುಂಪಿಗೆ ಸತ್ಯವು ಮನದಟ್ಟಾಯಿತು.
*****