ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ!
ಕತ್ತಲಲ್ಲಿ ಎಡವದಿರಿ—ಎಡವಿದರೆ
ಒಡನೆ ಕಾಲಿಗೆ ಬಿದ್ದು
ಮಾಫಿ ಕೇಳುವುದು!

ಬರಲಿದೆ ಮಂಡೂಕಗಳ ರಾಜ್ಯ!
ಗುಪ್ತಪಡೆಗಳು ತಯಾರಾಗುತ್ತಿವೆ
ಯಾರಿಗೂ ಗೊತ್ತಾಗದಲ್ಲಿ
ಕವಾಯತು ನಡೆಸುತ್ತಿದೆ!

ನಾಲ್ಕೂ ಕಡೆಯಿಂದ ಹಠಾತ್ತನೆ
ಧಾಳಿ ಹಾಕುವುದು ಯೋಜನೆ
ರಸ್ತೆ ತುಂಬ ಮಂಡೂಕ ಯೋಧರು
ವಿಧಾನಸೌಧದಲ್ಲೂ ಅವರು!

ಅದೇ ವೇಳೆ ಆಕಾಶವಾಣಿ
ಬಿತ್ತರಿಸುವುದು ಸಂದೇಶ:
“ಭ್ರಷ್ಠ ಸರಕಾರವನ್ನು ಇಳಿಸಿದ್ದೇವೆ
ಮಂಡೂಕ ರಾಜ್ಯ ತಂದಿದ್ದೇವೆ
ಸುಖದ ದಿನಗಳು ಮುಂದಿವೆ!
ಹೊಸ ಸರಕಾರದೊಂದಿಗೆ ಸಹಕರಿಸಿ!
ಎಲ್ಲರೂ ಶಿಸ್ತಿನಿಂದ ನಡೆಯಿರಿ
ನಾಲ್ಕು ಕಾಲುಗಳ ಮೇಲೆ”

ಕೆಲವರು ಈಗಾಗಲೇ ಹಾಗೆ
ನಡೆಯುತ್ತಿದ್ದಾರೆ!
*****

Latest posts by ತಿರುಮಲೇಶ್ ಕೆ ವಿ (see all)