ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಎ.ಆರ್.ಕೃಷ್ಣಶಾಸ್ತ್ರಿ ಗಳನ್ನು ಕುರಿತು ಹೇಳುವ ಮುಂಚೆ ನಾನು ಅವರನ್ನು ಕಂಡ ಒಂದೆರಡು ಪ್ರಸಂಗಗಳನ್ನು ಹೇಳಬೇಕೆನ್ನಿಸಿದೆ. ನಾನು ಶಾಲಾ ವಿದ್ಯಾರ್ಥಿ ಆಗಿದ್ದಾಗ ಸಾಹಿತ್ಯ ಪರಿಷತ್ತಿನಲ್ಲಿ ಹಲವಾರು ಬಾರಿ ದೂರದಿಂದ ನೋಡುತ್ತಿದ್ದೆ. ಸಾಹಿತ್ಯ ಪರಿಷತ್ತಿನಲ್ಲಿ ಅವರಿಗೊಂದು ದತ್ತಿ ನಿಧಿ ಇದೆ. ಅದು ಮಹಿಳಾ ಕಾರ್‍ಯಕ್ರಮಕ್ಕೆ ಮೀಸಲು ಆಗಿತ್ತು. ಕನ್ನಡ ದೇವರನಾಮ ಸ್ಪರ್ಧೆ ಆ ದತ್ತಿ ನಿಧಿಯಿಂದ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಕೊಡುತ್ತಿದ್ದರು. ಕೋಸಂಬರಿ, ಕಡಲೆಹಿಟ್ಟು, ಗುಗ್ಗುರಿ ಹೀಗೆ ಏನಾದರೊಂದು ಚರಪು ನೀಡುತ್ತಿದ್ದರು. ಅದನ್ನು ಆ ಮೇಲೆ ನಿಲ್ಲಿಸಿ ಬಿಟ್ಟರು. ವ್ಯವಸ್ಥಾಪಕರನ್ನು ಚರಪು ನೀಡುವುದನ್ನು ಏಕೆ ನಿಲ್ಲಿಸಿದಿರಿ ಎಂದಾಗ ಅದನ್ನು ಕೊಡಲು ದತ್ತಿ ನಿಧಿ ಯಿಂದ ಬರುವ ಹಣ ಸಾಲದು ಎಂದರೆ. ‘ಇದು ಅನ್ಯಾಯ, ನೀವು ಚರಪು ನಿಲ್ಲಸಬಾರದು’ ಎಂದು ನಾನು ನನ್ನ ಮಿತ್ರ ವಾದಿಸಿದವರು. ನಾವು ವಿದ್ಯಾರ್ಥಿಗಳಾದ್ದರಿಂದ ರುಚಿಕರವಾದ ಚರಪು ಸವಿ ಅನುಭವಿಸಿದವರು; ಜೊತೆಗೆ ಸಹಜವಾಗಿ ತಿಂಡಿ ಆಸೆಯ ವಯಸ್ಸು ನಮ್ಮದು. ನಾವು ವಾದ ಮಾಡಿದರೆ “ನೀವು ದತ್ತಿ ಇಟ್ಟವರನ್ನು ದತ್ತಿ ಹಣ ಹೆಚ್ಚಿಸಲು ಹೇಳಿ ಆಗ ಚರಪು ಕೊಡುತ್ತೇವೆ” ಎಂದರು. ನಮಗೆ ಕೃಷ್ಣಶಾಸ್ತ್ರಿಗಳ ಮನೆ ಗೊತ್ತಿತ್ತು. ಮನೆಗೆ ಹೋದೆವು. “ಶಾಸ್ತ್ರಿಗಳು ಏನು ಬಂದಿರಿ? ಅಂದರೆ. ವಿಷಯ ಹೇಳಿದೆವು.” ದತ್ತಿನಿಧಿ ವಿಷಯ ನಿಮಗೆ ಬೇಡ ನೀವು ಹುಡುಗರು ಈ ವಿಷಯಗಳಿಗೆಲ್ಲ ಬರಬಾರದು ಹೋಗಿ ಎಂದು ಗದರಿದ ದನಿಯಲ್ಲಿ ಹೇಳಿದರು ನಾವು ಪೆಚ್ಚಾಗಿ ಹಿಂದಿರುಗಲು ಸಿದ್ದರಾದೆವು. “ನಿಲ್ಲಿ” ಎಂದು ಹೇಳಿ ಡ್ರಾಯರಿಂದ ಪೆಪ್ಪರ್ ಮೆಂಟ್‌ಗಳನ್ನು ಕೈತುಂಬ ತೆಗೆದುಕೊಟ್ಟರು. ಬೈದರೂ ಎಷ್ಟು ಒಳ್ಳೆಯವರು ಕೈತುಂಬ ಪೆಪ್ಪರ್‌ಮೆಂಟ್ ಕೊಟ್ಟಿದ್ದಾರೋ ಎಂದು ನಾನು ನನ್ನ ಮಿತ್ರ ಮಾತಾಡಿಕೊಂಡೆವು.

ಇನ್ನೊಂದು ಪ್ರಸಂಗ, ಬಸವನಗುಡಿ ಸೊಸೈಟಿಯಲ್ಲಿ ನಮ್ಮನೆ ರೇಷನ್ ಕಾರ್ಡ್ ಇತ್ತು. ನಾನು ಕ್ಯೂನಲ್ಲಿ ನಿಂತು ರೇಷನ್ ತರುತ್ತಿದ್ದೆ. ಶಾಸ್ತ್ರಿಗಳು ಕ್ಯೂನಲ್ಲಿ ನಿಂತು ತರುತ್ತಿದ್ದಾರೆ. ನಾನು ಕ್ಯೂನಲ್ಲಿ ಮುಂದೆ ಇದ್ದೆ; ಶಾಸ್ತ್ರಿಗಳು ಸಾಕಷ್ಟು ಹಿಂದೆ ನಿಂತಿದ್ದರು. ಚರಪು ಪ್ರಸಂಗದಿಂದ ಶಾಸ್ತ್ರಿಗಳ ಪರಿಚಯ ಆಗಿತ್ತಲ್ಲ ಆ ವೇಳೆಗೆ ಅವರ ವಚನ ಭಾರತ, ಬಂಕಿಮಚಂದ್ರ, ಕಥಾಮೃತ ಓದಿದ್ದೆ. “ಶಾಸ್ತ್ರಿಗಳೆ ನೀವು ಮುಂದೆ ನಿಲ್ಲಿ ನಾನು ನಿಮ್ಮ ಜಾಗದಲ್ಲಿ ನಿಲ್ಲುತ್ತಾನೆ” ಎಂದೇ ಆಗ ಅವರು ಹೇಳಿದ ಮಾತು ಈಗಲೂ ನೆನಪಿದೆ “ಮಗು ಹಾಗಲ್ಲ. ಕ್ಯೂ ತಪ್ಪಿಸಬಾರದು; ನಿಯಮ ಪಾಲಿಸಿದರೆ ಚಿಕ್ಕವರು ದೊಡ್ಡವರಾಗುತ್ತಾರೆ. ನಿಯಮ ಭಂಗ ಮಾಡಿದರೆ ದೊಡ್ಡವರೂ ಚಿಕ್ಕವರಾಗುತ್ತಾರೆ. ಹೋಗಿ ನೀನಿರುವ ಕಡೆ ನಿಂತುಕೋ” ಎಂದರು. ಮಾತಾಡದೇ ನಾನಿದ್ದ ಜಾಗಕ್ಕೆ ಬಂದೆ. ಮತ್ತೊಮ್ಮೆ ಸೊಸೈಟಿ ಬಳಿ ಅವರನ್ನು ಭೇಟಿ ಮಾಡಿದವರೊಬ್ಬರು ಶಾಸ್ತ್ರಿಗಳೇ ನಿಮಗೆ ಕನ್ನಡ ಚೆನ್ನಾಗಿ ಬರುತ್ತೆ ಅಂತ ನನ್ನ ಸ್ನೇಹಿತರು ಹೇಳಿದರು. “ನೀವು ನಮ್ಮ ಮಗಳಿಗೆ ಕನ್ನಡ ಪಾಠ ಹೇಳಬೇಕು. ಅವಳು ಒಂದನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ಸರಿಯಾಗಿ ಕನ್ನಡ ಕಲಿತಿಲ್ಲ ನಾನು ೩ ರೂ ತಿಂಗಳಿಗೆ ಫೀಸ್ ಕೊಡ್ತಿದ್ದೆ. ನೀವು ದೊಡ್ಡ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಹೇಳ್ತಿರಿ ಅಂತ ನನ್ನ ಸ್ನೇಹಿತರು ಹೇಳಿದರು. ನಿಮಗೆ ೫ ರೂ ಕೊಡುತ್ತೇನೆ ತಿಂಗಳಿಗೆ ಎಂದರು. ಶಾಸ್ತ್ರಿಗಳು ನಕ್ಕು ಬಹಳ ಸಂತೋಷ ನಿಮ್ಮ ಮಗು ಕನ್ನಡ ಚೆನ್ನಾಗಿ ಕಲಿಯಬೇಕು ಅದಕ್ಕೆ ಪಾಠ ಹೇಳಿಸಬೇಕು ಎಂಬುದನ್ನು ಮೆಚ್ಚಿದೆ. ಫೀಸೇನೂ ಬೇಡ ನಿಮ್ಮ ಮಗು ಕನ್ನಡ ಕಲಿತರೆ ಅದೇ ನನ್ನ ಫೀಸು” ಎಂದರು. ಅವರು ಬೆರಗಾದರು. ಮತ್ತೊಂದು ಅವಿಸ್ಮರಣೀಯ ಸಂಗತಿ ಎಂದರೆ ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಬೆಂಗಳೂರಿನಲ್ಲಿ ಸನ್ಮಾನ ಸಮಾರಂಭ ಏರ್ಪಟ್ಟಿತ್ತು. ಸಮಾರಂಭದಲ್ಲಿ ತಮ್ಮ ಗುರುಗಳಾದ ಎ.ಆರ್.ಕೃ ಅವರನ್ನು ಕುವೆಂಪು ಕಂಡು ಅವರ ಬಳಿ ಬಂದು “ಗುರುಗಳ ಇದೆಲ್ಲಾ ನಿಮ್ಮ ಅನುಗ್ರಹ” ಎಂದರು. ಆಗ ಕೃಷ್ಣಶಾಸ್ತ್ರಿಗಳು “ನನ್ನ ಅನುಗ್ರಹ ಅಲ್ಲವಯ್ಯಾ ನಿನ್ನ ಪ್ರತಿಭೆ ಪಾಂಡಿತ್ಯಕ್ಕೆ ದೊರೆತ ಪ್ರತಿಫಲ ನನಗೆ ತುಂಬಾ ಸಂತೋಷವಾಗಿದೆ ನಿನಗೆ ಪ್ರಶಸ್ತಿ ಬಂದದ್ದು” ಎಂದರು. ಯಾರೂ ಅಂದರಂತೆ, ನಿಮಗೆ ಗಂಡು ಮಕ್ಕಳು ಇಲ್ಲವಲ್ಲ ಶಾಸ್ತ್ರಿಗಳೇ ಅಂತ. ಅದಕ್ಕೆ ಶಾಸ್ತ್ರಿಗಳು ಹೇಳಿದರಂತೆ. “ನನ್ನ ವಚನ ಭಾರತ, ನನ್ನ ಶಿಷ್ಯ ಪುಟ್ಟಪ್ಪ ನನ್ನ ಗಂಡು ಮಕ್ಕಳು ಕಣಯ್ಯ” ಅಂದರಂತೆ ವಿನೋದವಾಗಿ, ಅಂಥ ಶಿಷ್ಯಪ್ರೇಮ ಶಾಸ್ತ್ರಿಗಳದು. ಗುರುಗಳು ಅಂದ್ರೆ ಹೀಗಿರಬೇಕು. ಇವರೇ ನಿಜವಾದ ಕನ್ನಡ ದ್ರೋಣರು ಅಂತ ನನಗನ್ನಿಸಿದೆ.

ನಮ್ಮಲ್ಲಿ ಅಧಿಕಾರದಲ್ಲಿದ್ದಾಗ ಹೊಗಳಿಸಿಕೊಳ್ಳುವವರು ಬೇಕಾದಷ್ಟು ಮಂದಿ ಇದ್ದಾರೆ. ಆದರೆ ನಿವೃತ್ತರಾದ ಮೇಲೆ ಪ್ರಸಿದ್ದರಿಂದ ಹೊಗಳಿಸಿ ಕೊಳ್ಳುವುದು ಸುಲಭವಲ್ಲ. ಏಕೆಂದರೆ ಅಧಿಕಾರದ ಇರುವುದಿಲ್ಲ. ಇನ್ನೂ ತಾರುಣ್ಯದಲ್ಲಿ ಮಾಡಿದ ಸಾಹಸಗಳನ್ನು ಮಾಡಲು ಉತ್ಸಾಹ ಶಕ್ತಿ ಇರುವುದಿಲ್ಲ. ಆದರೆ ಆ ಮಾತು ಕೃಷ್ಣಶಾಸ್ತ್ರಿಗಳಿಗೆ ಅನ್ವಯಿಸುವುದಿಲ್ಲ. ಕುವೆಂಪು ಕೃಷ್ಣಶಾಸ್ತ್ರಿಗಳ ಬಗ್ಗೆ ಹೇಳಿದ ಈ ಮಾತುಗಳು ಸಾಕ್ಷಿ ಆಗಿವೆ. – “ಶ್ರೀ ಕೃಷ್ಣ ಶಾಸ್ತ್ರಿಗಳು ನಿವೃತ್ತಿ ಕನ್ನಡ ಪ್ರಾಧ್ಯಾಪಕರು, ನೌಕರಿಯಿಂದ ನಿವೃತ್ತರಾಗುವುದೆಂದರೆ ಹಲವರ ಪಾಲಿಗೆ ಅದೊಂದು ವಿಷಾದದ ಘಟನೆ. ಸಂಬಳ ಕಡಿಮೆ ಆಗುತ್ತದೆ, ಅಧಿಕಾರ ನಿಂತುಹೋಗುತ್ತದೆ; ಮನ್ನಣೆ ಮೊಟಕಾಗುತ್ತದೆ. ಆದ್ದರಿಂದಲೇ ಅನೇಕರು ನಿವೃತ್ತರಾದ ಮೇಲೆ ಹೊಸ ನೌಕರಿಯನ್ನು ಹುಡುಕುತ್ತಾ ಹೋಗುತ್ತಾರೆ. ಕೆಲವು ಜನ ರಾಜಕೀಯಕ್ಕೂ ಇಳಿಯುತ್ತಾರೆ. ಶ್ರೀ ಕೃಷ್ಣಶಾಸ್ತ್ರಿಗಳು ಈ ಜಾತಿಯವರಲ್ಲ. ಅವರು ಹೆಸರಿಗೆ ಮಾತ್ರ ನಿವೃತ್ತರು. ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಘಂಟೆಗಳಲ್ಲಿ ಪಾಠ ಹೇಳುವುದನ್ನು ಬಿಟ್ಟರೆ ಉಳಿದಂತೆ ಅವರ ಕಾರ್ಯಕ್ರಮ ಯಥಾ ಪ್ರಕಾರವಾಗಿದೆ. ಸರ್ಕಾರಿ ನೌಕರಿಯಿಂದ ನಿವೃತ್ತರಾದ ಮೇಲೆ ಮೀಸಲು ಕಟ್ಟಿಕೊಂಡಿದ್ದವರಂತೆ ಕೃತಿ ರಚನಾಕಾರ್‍ಯದಲ್ಲಿ ತೊಡಗಿದ್ದಾರೆ. ವಚನ ಭಾರತ, ಕಥಾಮೃತ, ಬಂಕಿಮಚಂದ್ರ, ನಿಬಂಧ ಮಾಲಾ ಒಂದೊಂದು ಬೃಹತ್ತಾದ ಗ್ರಂಥಗಳು ಹೊರಬಂದಿವೆ. ಹೀಗೆ ನಿವೃತ್ತಿ ತರುವಾಯ ಬಾಳನ್ನು ಇಷ್ಟು ಸಾರ್ಥಕವಾಗಿ ಬಳಸಿಕೊಂಡವರು ಬಹಳ ಅಪೂರ್ವ.”

೧೯೬೧ರಲ್ಲಿ ನಿವೃತ್ತರಾದ ೧೫ ವರ್ಷಗಳ ಅನಂತರ ರವೀಂದ್ರನಾಥ ಠಾಕೂರರ ಪ್ರಬಂಧ ಸಂಕಲನ ಪ್ರಕಟವಾಯಿತು. ೭೦ ನೇ ವಯಸ್ಸಿನಲ್ಲಿ ಇದನ್ನು ಅನುವಾದಿಸಲು ತೆಗೆದುಕೊಂಡಾಗ ದೈಹಿಕವಾಗಿ ಮಾನಸಿಕವಾಗಿ ಬಳಲಿದ್ದರೂ, “ಬಂಗಾಳಿ ಭಾಷೆ ಬಲ್ಲ ಕನ್ನಡಿಗನಾಗಿ ತಾನು ಮಾಡಬೇಕಾದ ಕರ್ತವ್ಯವೆಂದು” ಭಾವಿಸಿ ಕೃತಿ ಅನುವಾದಕ್ಕೆ ತೊಡಗಿದರು. ಇಂಥ ಜೀವನೋತ್ಸಾಹವನ್ನು ಶಾಸ್ತ್ರಿಗಳಂಥವರಲ್ಲಿ ಮಾತ್ರ ಕಾಣಲು ಶಕ್ಯ.

ದೃಢ ದೇಹ – ಸ್ಥಿರಚಿತ್ತ (Sound mind Sound Body) ಎಂಬ ಮಾತಿಗೆ ಎ.ಆರ್.ಕೃ. ಒಳ್ಳೆಯ ಉದಾಹರಣೆ ಆಗಿದ್ದಾರೆ. ಕೃಷ್ಣಶಾಸ್ತ್ರಿಗಳು ಬುದ್ಧಿ ಚುರುಕಾಗಿರುವಷ್ಟೇ ದೇಹ ದೃಢವಾಗಿರಬೇಕು ಎಂದು ನಂಬಿದ್ದರು. ಅವರು ಬೆಳಗ್ಗೆ ೪ ೧/೨ ಗಂಟೆಗೆ ಎದ್ದು ಸಾಮು ಮತ್ತು ಗಾದೆ ತಿರುಗಿಸುವುದು. ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ವ್ಯಾಯಾಮ ಮುಂತಾದವನ್ನು ಮಾಡುತ್ತಿದ್ದರು. ಒಂದು ಗಂಟೆ ಬಿರುಸಾಗಿ ನಡೆದು ಮನೆಗೆ ಬರುತ್ತಿದ್ದರು.

ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ದೇವರನ್ನು ಅಲಂಕರಿಸುವುದು ಅವರಿಗೆ ಪ್ರಿಯವಾದ ಕೆಲಸವಾಗಿತ್ತು. ಸಹಸ್ರನಾಮದಿಂದ ದೇವತಾರ್ಚನೆ ಮಾಡುತ್ತಿದ್ದರು. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಬಾವಿಯಿಂದ ನೀರು ಸೇದಿ ಗಿಡಗಳಿಗೆ ಹಾಕುತ್ತಿದ್ದರು.

ಹಿಂದಿನ ಕಾಲದ ವರೆಗೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದು ಬೆಳ್ಳಿ ತಂಬಿಗೆಯಲ್ಲಿ ನೀರು ಕುಡಿಯುವುದು ಪದ್ಧತಿ. ಸುಬೋಧ ರಾಮರಾಯರು ಹಾಗೇ ಮಾಡುತ್ತಿದ್ದರು. ತಮ್ಮ ತಟ್ಟೆ ಯನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಹಣೆಯಲ್ಲಿ ಅಕ್ಷತೆ ಧರಿಸುತ್ತಿದ್ದರು. ಕಾಲೇಜಿಗೆ ಹೋಗುವಾಗ ಅಂಚಿನ ರೇಷ್ಮೆ ಪಂಚೆ, ಟ್ವೀಡ್ಕೋಟ್ ಮತ್ತು ದೊಡ್ಡಂಚಿನ ಜರತಾರಿ ಮೈಸೂರು ರುಮಾಲು ಧರಿಸುತ್ತಿದ್ದರು. ಸೈಕಲ್ಲಿನಲ್ಲಿ ಸಂಚರಿಸುತ್ತಿದ್ದರು. ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿ ಲಾಲ್‌ಬಾಗಿಗೆ ಹೋಗಿಬರುತ್ತಿದ್ದರು. ೧೧ರ ಹೊತ್ತಿಗೆ ಗಾಂಧಿ ಬಜಾರಿಗೆ ಭೇಟಿ ನೀಡಿ ಹಾಗೆ ಮಗಳ ಮನೆಗೆ ಬಂದು ಮೊಮ್ಮಗಳನ್ನು ಕರೆದು ಕೊಂಡು ಹೋಗುತ್ತಿದ್ದರು. ವಚನ ಭಾರತ, ಬಂಕಿಮಚಂದ್ರ ಬರೆಯುವಾಗ ವಿದ್ಯಾರ್ಥಿಗಿಂತ ಹೆಚ್ಚಾಗಿ ಹಗಲು ೧೨ ರಿಂದ ಸಂಜೆ ೫ ಗಂಟೆಯವರೆಗೆ ಬರೆಯುತ್ತಿದ್ದರು. ವ್ಯಾಕರಣದಪಟು ಭಾಷೆಯಲ್ಲಿ, ಕುಸ್ತಿಪಟು ದೇಹದಲ್ಲಿ ಅವರಾಗಿದ್ದರು. ರುಚಿ ರುಚಿಯಾದ ತಿಂಡಿಗಳನ್ನು ತಿನ್ನುವುದು ಇತರರಿಗೆ ಕೊಡಿಸುವುದು ಹವ್ಯಾಸವಾಗಿತ್ತು. ಎಂ.ವಿ. ಸಿತಾರಾಮಯ್ಯನವರು ಡಾ.ಎ.ಆರ್. ಕೃಷ್ಣಶಾಸ್ತ್ರಿಗಳ ಪರಮ ಶಿಷ್ಯರಲ್ಲಿ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಂ.ವಿ.ಸೀ. ಸಹಾಯಕರಾಗಿ ಎ.ಆರ್.ಕೃ ಅವರ ಬಳಿ ಕಾರ್‍ಯ ನಿರ್ವಹಿಸುತ್ತಿದ್ದರು. ತಾವು ಬರೆದ ಒಂದು ಕಥಾ ಸಂಕಲನ ಕೃತಿಯನ್ನು ಎ.ಆರ್.ಕೃ. ಅವರಿಗೆ ಅಭಿಪ್ರಾಯ ನೀಡಲು ಕೊಟ್ಟರು. ಆಗ ಅದನ್ನು ಕಂಡು ಶಾಸ್ತ್ರಿಗಳು ಶಿಷ್ಯನಿಗೆ ಹೇಳಿದ ಮಾತಿದು.

“ಕನ್ನಡ ಎಂ.ಎ. ಮಾಡಿಕೊಂಡು ನೀನು ಕಥೆ ಬರೆಯುತ್ತಾ ಕುಳಿತು ಕೊಳ್ಳುವುದು ಮಹಾ ಸಂಗೀತ ವಿದ್ವಾಂಸ ಹರಿಕಥೆ ಮಾಡಲು ಹೊರಟ ಹಾಗೆ. ನಿನಗೆ ಶಕ್ತಿ ಇದೆ- ಯಾವುದಾದರೂ ಹಳಗನ್ನಡ ಗ್ರಂಥವನ್ನು ಸಂಪಾದನೆ ಮಾಡು, ಪಾಂಡಿತ್ಯ ಪೂರ್ಣ ಲೇಖನಗಳನ್ನು ಇನ್ನು ಹೆಚ್ಚಾಗಿ ಬರೀ” ಎಂದು ನಿಜವಾದ ವಾತ್ಸಲ್ಯ ದಿಂದ ಬುದ್ಧಿ ಹೇಳಿದರು. ಆಗ ಎಂ ವಿ ಸೀ ಅವರು ಚಿತ್ರಗಾರ ನಾಗಲು ಸಾಧ್ಯವಿಲ್ಲದೆ ಎಂ.ಎ.ಗೆ ಸೇರಿದ ಸಂಗತಿ ನೆನಪಿಸಿದಾಗ ಎ.ಆರ್.ಕೃ ಹೇಳಿದರು, “ಹೌದು ಹೌದು ನೀನು ಚಿತ್ರಗಾರನಾಗಬೇಕೆಂದು ಟಿ.ಎಸ್. ವೆಂಕಣ್ಣಯ್ಯನವರಿಗೆ ಆಸೆ ಇತ್ತು ನನಗೆ ಅದೇ ಆಸೆ ಇತ್ತು. ಆದರೆ ಬ್ರಷ್ ನಿನ್ನ ಕೈ ಗೆ ಸಿಗಲಿಲ್ಲ. ಲೇಖನಿ ಹಿಡಿದೆ; ಹೋಗಲಿ ಬಿಡು ಎಂದಾಗ ಎಂ ವಿ ಸೀ ಹೇಳಿದರು ಅಷ್ಟೇ ಅಲ್ಲ ಸಾರ್, ಕಥೆ ಕಾದಂಬರಿ ಬರೆದರೆ ನಾಲ್ಕು ಕಾಸು ಬರುತ್ತದೆ. ನಮ್ಮ ಸೀಮೆಯಲ್ಲಿ ಪಾಂಡಿತ್ಯ ಕ್ಕೆ ಏನು ಬೆಲೆ ಇದೆ? ಪ್ರಮೋಷನ್ ಕೊಡುವಾಗ ಕೂಡಾ ಅದು ಲೆಕ್ಕಕ್ಕೆ ಬರುವುದಿಲ್ಲ ಎಂದು ಸ್ನೇಹಿತರೊಬ್ಬರ ಪಾಡನ್ನು ನೆನೆದು ಎಂ ವಿ ಸೀ ಹೇಳಿದರು. ಎ.ಆರ್.ಕೃ ಅವರಿಗೆ ಆ ಮಾತಿನ ಅರ್ಥ ಆಯಿತು. ಅದಕ್ಕೆ ಅವರ “ಅದು ದಿಟ ಅಂತ ಇಟ್ಟುಕೊ, ಆದರು ಪಾಂಡಿತ್ಯದ ಕೆಲಸವನ್ನು ಕರ್ತವ್ಯ ಎಂದು ಮಾಡಬೇಕು” ಎಂದರು. ಆ ಮಾತು ಎಂ.ವಿ.ಸೀ. ಅವರ ಮನಸ್ಸಿಗೆ ನಾಟಿತು ಏಕೆಂದರೆ ಗುರುಗಳು ತಮ್ಮ ಬದುಕನ್ನು ಪಾಂಡಿತ್ಯಕ್ಕೆ ಮೀಸಲಾಗಿಟ್ಟಿದ್ದಾಗ ಅವರ ಪಾಂಡಿತ್ಯದ ಕೆಲಸವನ್ನು ಕರ್ತವ್ಯ ಕರ್‍ಮವಾಗಿ ನಡೆಸಿ ಕೊಂಡು ಬಂದಿದ್ದರು. ಪೂಜ್ಯ ಶಾಸ್ತ್ರಿಗಳು ತೀರಿಕೊಳ್ಳುವ ಮುನ್ನ ಅಪಘಾತವೊಂದಕ್ಕೆ ಸಿಕ್ಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರನ್ನು ನೋಡಿಕೊಂಡು ಬರಲು ಹೋದ ಎಂ.ವಿ.ಸೀ. ಅವರ ವಿದ್ವತ್ಪೂರ್ಣವಾಗಿ ಕವಿರಾಜಮಾರ್ಗವನ್ನು ಸಿದ್ದ ಮಾಡುತ್ತಿರುವುದನ್ನು ತಿಳಿಸಿದಾಗ, ಎ.ಆರ್.ಕೃ ಮಂದಹಾಸದಿಂದ ಸಂತೋಷ ವ್ಯಕ್ತಪಡಿಸಿದರು. ಗುರುವಿನ ಪ್ರಭಾವಕ್ಕೆ ಇದೊಂದು ನಿದರ್ಶನ.

ಸಾಮಾನ್ಯರಿಗೆ ಬೇಕಾದ ಸಾಹಿತ್ಯವು ಸುಲಭವಾಗಿರಬೇಕೆಂಬ ತತ್ವವನ್ನು ನಾನು ಒಪ್ಪುತ್ತೇನೆ. ತಿಳಿಯದವರನ್ನು ಪಾಂಡಿತ್ಯದಿಂದ ಬೆರಗು ಮಾಡಿದರೆ ಇಬ್ಬರಿಗೂ ಕಷ್ಟ ಯಾರಿಗೂ ಲಾಭವಿಲ್ಲ. ಆದರೆ ಸಾಹಿತ್ಯವನ್ನು ಕೆಳಗೆ ಇಳಿಸುವುದಕ್ಕಿಂತ ಹೆಚ್ಚಾಗಿ ಸಾಮಾನ್ಯರನ್ನು ಮೇಲಕ್ಕೆ ಎತ್ತುವುದು ಸಾಹಿತಿಯ ಉದ್ದೇಶವಾಗಿರಬೇಕು.

ನಿಜ, ಆದರೆ ಮಕ್ಕಳನ್ನು ಎಷ್ಟು ವರ್ಷ ಆದರೂ ಹಾಲಿನ ಮೇಲೆಯೇ ಬೆಳಸುವುದಕ್ಕಾದೀತೇ? ಕ್ರಮೇಣ ಆಹಾರ ನೀಡಿ ಬೆಳೆಸಬೇಕು ಮಕ್ಕಳಿಗೆ ಕಥೆ ಹೇಳುವಾಗ ಮಾತು ಚಿಕ್ಕದಾಗಿದ್ದರೆ ಅರ್ಥ ಸುಲಭವಿರುವುದಿಲ್ಲ.

ಒಮ್ಮೆ ಕೃಷ್ಣಶಾಸ್ತ್ರಿಗಳು ಮೊಮ್ಮಗಳಿಗೆ ಕಥೆ ಹೇಳಲು ಮೊದಲು ಮಾಡಿದರು. “ಒಂದು ಕಾಡಿನಲ್ಲಿ ಒಬ್ಬ ಋಷಿಯಿದ್ದನಂತೆ. ಅದಕ್ಕೆ ಆ ಮಗು ‘ಕಾಡು’ ಎಂದರೆ ಏನು? ಎಂದು ಕೇಳಿ ಬಿಟ್ಟಿತು. ನನಗೆ ನಾಲಗೆ ಕಟ್ಟಿತು. ಅದಾದ ಒಂದು ತಿಂಗಳ ಮೇಲೆ ಬಾಬಾಬುಡನ್ ಬೆಟ್ಟವನ್ನು ನೋಡುವುದಕ್ಕೆ ಹೋಗಿದ್ದಾಗ ಅಲ್ಲಿದ್ದ ಕಾಡನ್ನು ತೋರಿಸಿ, ಅದರ ಅರ್ಥ ಹೇಳಿದೆ. ಆದರೆ ಋಷಿಯನ್ನು ತೋರಿಸುವುದಕ್ಕಾಗಲಿ ಹೇಳುವುದಕ್ಕಾಗಲಿ ಇನ್ನೂ ಆಗಿಲ್ಲ.” ಎಂಬುದಾಗಿ ಮಿತ್ರರಿಗೆ ಹೇಳಿದರು, ೧೯೬೦ ರಲ್ಲಿ ೭೫ ನೇ ವಯಸ್ಸಿನಲ್ಲಿ ವಚನಭಾರತ ಬರೆದಾಗ ಮೊಮ್ಮಕ್ಕಳು ನಿರ್ಮಲ-ಭಾರತ ತಮಗೆ ಓದುವುದು ಕಷ್ಟ ಎಂದಾಗ ಅದೇ ವಯಸ್ಸಿನ ಎಲ್ಲ ಮಕ್ಕಳು ಓದುವುದಕ್ಕಾಗಿ ಸರಳ ಶೈಲಿಯಲ್ಲಿ ಮಕ್ಕಳಿಗಾಗಿ ಬರೆದರು. ಎಡಗಡೆ ಪುಟದಲ್ಲಿ ಚಿತ್ರ ಬಲಗಡೆ ದಪ್ಪಕ್ಷರಗಳಲ್ಲಿ ಪುಟ್ಟ ಪುಟ್ಟ ವಾಕ್ಯ, ಸರಳ ಪದಗಳಿಂದ ಕಥೆಗಳ ಮೂಲಕ ಮಹಾಭಾರತವನ್ನು ಪರಿಚಯಿಸಿದ್ದಾರೆ. ಭಾರತದ ಕಥೆ ಜೊತೆಗೆ ನಳನ ಕಥೆ, ನಾಯಿ ಕಥೆ, ಮೂರು ಮುನಿಗಳ ಕಥೆ, ಇಲಿ ಕಥೆ, ಗೌತಮಿ ಕಥೆ, ಮುಂಗುಸಿ ಮೈ ಚಿನ್ನವಾದ ಕಥೆ ಮೊದಲಾದವನ್ನು ಹೇಳಿದ್ದಾರೆ. “ಮಕ್ಕಳಿಗೆ ಈ ಕಥೆಗಳನ್ನು ಹೇಳಿದ ಪುಣ್ಯ ಲಭಿಸಿದ್ದರಿಂದ ಭಗವಂತನಿಗೆ ಪ್ರೀತಿಯಾಗುತ್ತದೆ. ಮಕ್ಕಳ ಸಾಹಿತ್ಯ ಸೇವೆ ಭಗವಂತನ ಸೇವೆ ಎಂದು ತಿಳಿಸಿದರು.

ಪ್ರಬುದ್ಧ ಕರ್ನಾಟಕದಂತ ಪ್ರೌಢ ಪತ್ರಿಕೆ ನಡೆಸಿ ಕನ್ನಡಕ್ಕೆ ಅವರು ಕೊಟ್ಟ ಕೊಡುಗೆ ಅಪಾರವಾದುದು. ಅಮೂಲ್ಯವಾದುದು, ಹೊಸ ಹತ್ತಾರು ಲೇಖಕರನ್ನು ಬೆಳಕಿಗೆ ತಂದರು. ಹೊಸಗನ್ನಡ ಸಾಹಿತ್ಯ ಹುಲುಸಾಗಿ ಬೆಳೆ ಬರಲು ಕಾರಣ ಕರ್‍ತರಾದರು. ಕರ್ನಾಟಕ ಸಂಘ, ಪ್ರಬುದ್ಧ ಕರ್ನಾಟಕ ಪತ್ರಿಕೆ ಈ ಎರಡೂ ಶಾಸ್ತ್ರಿಗಳು ಕನ್ನಡ ಸಾಹಿತಿಗಳನ್ನು ಕನ್ನಡ ಸಾಹಿತ್ಯವನ್ನು ಹೇಗೆ ಬೆಳೆಸಬೇಕು ಎಂಬುದನ್ನು ತೋರಿಸಿದ್ದಕ್ಕೆ ಸಾಕ್ಷಿ ಆಗಿವೆ. ಉಳಿದವರಿಗೆ ಮಾದರಿ ಆಗಿದೆ.

ಪ್ರಬುದ್ಧ ಕರ್ನಾಟಕ ಕೊಡುಗೆಯನ್ನು, ಕೃಷ್ಣಶಾಸ್ತ್ರಿಗಳ ಬದುಕು ಬರಹ ಎಂಬ ಮಾಹಾ ಪ್ರಬಂಧವನ್ನು ಬರೆದು ಅವರ ಸಮಗ್ರ ಕೃತಿಗಳ ಸಮೀಕ್ಷೆಯನ್ನು ಸಂಕ್ಷಿಪ್ತವಾಗಿ ಸೊಗಸಾಗಿ ಮಾಡಿರುವ ಶ್ರೀಮತಿ ರುಕ್ಮಿಣಿ ರಘುರಾಮ ಅವರು ಈ ರೀತಿ ಗುರುತಿಸಿದ್ದಾರೆ. “ಶಾಸ್ತ್ರಿಗಳು ಸಂಪಾದಕರಾಗಿ ಕಾರ್‍ಯ ನಿರ್ವಹಿಸಿದ ಕಾಲದಲ್ಲಿ ಪ್ರಬುದ್ಧ ಕರ್ನಾಟಕದಲ್ಲಿ ೨೫೦ ವಿದ್ವಾಂಸರ ಲೇಖಕರ ಬರಹಗಳು ಪ್ರಕಟವಾಗಿದೆ. ೨೦೦ ನವೀನ-ಪ್ರಾಚೀನ ಕವಿತೆಗಳು ೧೪೫ ಸಂಶೋಧನಾ ಲೇಖನಗಳು ೧೨೫ ಸಣ್ಣ ಕತೆ, ಪ್ರಬಂಧ, ಗದ್ಯ ಇತ್ಯಾದಿಗಳು, ೨೨ ನಾಟಕಗಳು, ೨೦ ಐತಿಹಾಸಿಕ ಕಾದಂಬರಿಗಳು, ೪೦೦ ಗ್ರಂಥ ವಿಮರ್ಶೆಗಳು ಪ್ರಕಟವಾಗಿದೆ.”

ಈ ಸಾಧನೆ ಸುಲಭವಾಗಿ ಆಗಿಲ್ಲ, ಶಾಸ್ತ್ರಿಗಳು ತಾವೇ ಬೈಸಿಕಲ್ ಮೇಲೆ ಮುದ್ರಣಾಲಯ ಕ್ಕೆ ಹೋಗಿ, ಮುದ್ರಣ ಮಾಡಿಸಿ ವಿದ್ಯಾರ್ಥಿಗಳ ನೆರವಿಂದ ಅಂಚೆ ಸಿದ್ಧಪಡಿಸಿ, ಮನೆ ಮನೆಗೆ ತಾವೇ ಹೋಗಿ ಸಂಚಿಕೆಗಳನ್ನು ಹಂಚಿ ಚಂದಾ ಕೇಳಿದಾಗ ಆಗ ಬಾ ಈಗ ಹೋಗಿ ಬಾ ಎಂದಾಗಲೂ ಬೇಜಾರಿಲ್ಲದೆ ಹತ್ತಾರು ಸಲ ಹೋಗಿ ಚಂದಾ ವಸೂಲಿ ಮಾಡುತ್ತಿದ್ದರು. ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಿದರು. ಪ್ರಬುದ್ಧ ಕರ್ನಾಟಕದಲ್ಲಿ ಲೇಖನ ಕಥೆ, ಕವಿತೆ ಪ್ರಕಟವಾದರೆ ಅವರು ಗಣ್ಯ ಲೇಖಕ ಎಂಬ ಮಟ್ಟಕ್ಕೆ ಪ್ರಬುದ್ಧ ಕರ್ನಾಟಕವನ್ನು ತಂದರು. ಲೇಖನ ಆಯ್ಕೆಯಲ್ಲಿ ನಿಷ್ಟುರರಾಗಿ ವರ್‍ತಿಸಿ ಪ್ರಬುದ್ಧ ಕರ್ನಾಟಕ ಉನ್ನತ ಮಟ್ಟವನ್ನು ಕಾಪಾಡಿದ್ದಾರೆ. ಇದು ಆ ಕಾಲದಲ್ಲಿ ಬೇರೆ ಯಾರಿಗೂ ಸಾಧ್ಯವಾಗಿಲ್ಲ.

ಎ.ಆರ್.ಕೃ. ರಚಿಸಿದ ಕೊನೆಯ ಗ್ರಂಥ ನಿಬಂಧ ಮಾಲೆಯ ಭಾಗ-೨ ೧೯೬೨ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯಿಂದ ಪ್ರಕಟವಾಯಿತು. ರವೀಂದ್ರನಾಥ ಠಾಕೂರರ ಪ್ರಬಂಧಗಳು ಈ ಸಂಗ್ರಹವನ್ನು ಬಂಗಾಳಿಯಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಅನುವಾದಕರಲ್ಲಿ ಎರಡು ವರ್ಗದವರು ಇದ್ದಾರೆ. ಮೂಲ ಭಾಷೆ ಅನುವಾದಕರು ಎಂದರೆ ನೇರವಾಗಿ ಇನ್ನೊಂದು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದವರು. ಇಂಥ ಅನುವಾದಗಳು ಹೆಚ್ಚು ಪ್ರಾಮಾಣಿಕವಾದವು. ಮೂಲ ಮೂಲವೇ ಎಂದರೆ ಸಹಾ ಮೂಲದ ಸ್ವರೂಪವನ್ನು ಅನುವಾದಕ ನೇರವಾಗಿ ಗ್ರಹಿಸುತ್ತಾನೆ. ವ್ಯಾಪಾರದಲ್ಲಿ ಗ್ರಾಹಕ ನೇರವಾಗಿ ಉತ್ಪಾದಕನಿಂದ ವಸ್ತುಕೊಂಡಹಾಗೆ ಇನ್ನೊಂದು ಬಗೆಯ ಅನುವಾದಕರಿದ್ದಾರೆ. ಅನ್ಯಭಾಷಾವಲಂಬಿ ಅನುವಾದಕರು ಅಂದರೆ ಒಂದು ಮೂಲ ಕೃತಿಯ ಭಾಷೆ ತಿಳಿದಾಗ ಅದರ ಇನ್ನೊಂದು ಭಾಷೆಯ ಕೃತಿಯನ್ನು ಆಧರಿಸಿ ಅನುವಾದಿಸುವುದು. ಕನ್ನಡದಲ್ಲಿ ಎರಡೂ ಬಗೆಯ ಅನುವಾದಕರಿದ್ದಾರೆ. ಎ.ಆರ್. ಕೃಷ್ಣಶಾಸ್ತ್ರಿಗಳು ಮೊದಲ ವರ್ಗದವರು. ಬಂಗಾಳಿಯಿಂದಲೇ ನೇರವಾಗಿ ಕನ್ನಡಕ್ಕೆ ಅನುವಾದ ಮಾಡಿದ ಮಹಾಶಯರು, ಶ್ರೀ ರಾಮಕೃಷ್ಣ ಪರಮಹಂಸ ಜೀವನ ಚರಿತ್ರೆ, ನಿಬಂಧ ಮಾಲಾ ಮೊದಲಾದವನ್ನು ಅನುವಾದಿಸಿದ್ದಾರೆ. ಪ್ರಭುಶಂಕರ ಮೊದಲಾದವರು ವಿವೇಕಾನಂದರ ಕೃತಿಗಳನ್ನು ಇಂಗ್ಲೀಷಿನಿಂದ ಅನುವಾದಿಸಿದ್ದಾರೆ. ಸಾಫೋಕ್ಲಿಸ್ ನಾಟಕಗಳನ್ನು ಕ.ವೆಂ. ರಾಘವಾಚಾರ್ ಗ್ರೀಕ್‌ನಿಂದ ಕನ್ನಡಕ್ಕೆ ತಂದರೆ, ಲಂಕೇಶ್ ಮೊದಲಾದವರು ಇಂಗ್ಲಿಷನಿಂದ ಕನ್ನಡಕ್ಕೆ ತಂದಿದ್ದಾರೆ. ಮೂಲಕ್ಕೆ ಹತ್ತಿರ ವಿರುವುದು ಮೂಲ ಭಾಷೆ ಯಿಂದ ನೇರವಾಗಿ ಕನ್ನಡಕ್ಕೆ ತಂದ ಕೃತಿಗಳು ಎಂದರೆ ತಪ್ಪಿಲ್ಲ. ಈ ದೃಷ್ಟಿಯಿಂದ ಸಂಸ್ಕೃತದಿಂದ, ಬಂಗಾಳಿಯಿಂದ ಎ.ಆರ್. ಕೃಷ್ಣಶಾಸ್ತ್ರಿಗಳು ಮಾಡಿದ ಅನುವಾದ ಗ್ರಂಥಗಳು, ಆದರ್ಶ ಪ್ರಿಯವಾದುದು.

ಹಲವಾರು ವರ್ಷ ಬಂಗಾಳಿ ಸಾಹಿತ್ಯ ಅಭ್ಯಾಸ ಮಾಡಿದಷ್ಟೇ ಅಲ್ಲದೆ ಸಾಕಷ್ಟು ಪರಿಣಿತಿ ಪಡೆದವರು. ಅನುವಾದಕ್ಕೆ ಒಂದು ಭಾಷೆಯ ಪರಿಚಯ ಇದ್ದರೆ ಸಾಲದು ವಿಶಾಲ ಓದು, ಭಾಷಾ ಪರಿಣತಿ ಎರಡೂ ಭಾಷೆಗಳಲ್ಲಿ ಇರಬೇಕು. ಎಷ್ಟೋ ಜನ ಲೇಖಕರಿಗೆ ಕನ್ನಡದಲ್ಲಿ ಇರುವ ಪರಿಣಿತಿ ಅನ್ಯ ಭಾಷೆಯಲ್ಲಿ ಇಲ್ಲದಾಗ ಆ ಭಾಷೆಗೆ ಕನ್ನಡ ಕೃತಿ ಅನುವಾದಿಸಿದಾಗ ಅದು ಪೇಲವವಾಗುತ್ತದೆ. ಮಂಕುತಿಮ್ಮನ ಕಗ್ಗದ ಇಂಗ್ಲಿಷ್ ಅನುವಾದಗಳು, ಉಮರ್ ಖಯ್ಯಾಮ್ ಕನ್ನಡಾನುವಾದಗಳು ಉದಾಹರಣೆ ಆಗಬಲ್ಲವು.

ಅನುವಾದ ಮಾಡುವಾಗ ಗದ್ಯ ಕೃತಿಗಳ ಅನುವಾದದ ಕಷ್ಟ ಬೇರೆ ಪದ್ಯ ಕೃತಿಗಳ ಅನುವಾದದ ಕಷ್ಟ ಬೇರೆ. ಪದ್ಯ ಗದ್ಯ ಎರಡೂ ಕೂಡಿರುವ ಕೃತಿ ಅನುವಾದ ಮಾಡಿದವರು ಕವಿಗಳು ಗದ್ಯ ವಿಚಕ್ಷಕರೂ ಆಗಿರಬೇಕು. ಕೃಷ್ಣಶಾಸ್ತ್ರಿಗಳು ಬಂಗಾಳಿ ಕೃತಿಗಳ ಅನುವಾದ ದಲ್ಲಿ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ಸರಳ ಪದ್ಯಾನುವಾದಗಳಿಂದ ಕವಿ ಪ್ರತಿಭೆ ತೋರಿದ್ದಾರೆ. ನಿಬಂಧಮಾಲಾ-೨ ರಲ್ಲಿ ಹಲವಾರು ಪದ್ಯಗಳ ಅನುವಾದ ಇದಕ್ಕೆ ನಿದರ್ಶನವಾಗಿದೆ.

ಉದಾಹರಣೆಗೆ ರವೀಂದ್ರರ ಬಾಲ್ಯದ ಜೀವನೋತ್ಸಾಹ ಪ್ರತಿಬಿಂಬಿಸುವ ಈ ಸಾಲುಗಳನ್ನು ಗಮನಿಸಬಹುದು.

ನುಡಿಯುತಲಿದ್ದೆನು ಧಾರಾಕಾರದಿ
ನನ್ನಯ ಮಾತನನ್ಯರಿಗೆ
ಹೇಳುತಲಿದ್ದೆನು ಮನೆ ಬಾಗಿಲೊಳು
ಎನಿತೊ ಮನೆ ಮಾತುಗಳ

ನಾನಾ ಮಾತನು ಉರಿಯೊಳು ದಹಿಸಿ
ಮುಳುಗಿಸಿ ತೇಲಿಸಿ ಕಣ್ಣೀರೊಳಗೆ
ಹೊಸ ಪ್ರತಿಮೆಯ ಹೊಸ ಕುಶಲದೆ
ರಚಿಸಿದೆ ನಿನ್ನಯ ಮನ ಮತದೆ (ನಿಬಂಧಮಾಲಾ ಪು. ೨೭)

ಈ ಸಂದರ್ಭದಲ್ಲಿ ಪ್ರಸಂಗವೊಂದನ್ನು ಬಿಜಿ‌ಎಲ್ ಸ್ವಾಮಿ ಹೇಳಿದ್ದು ನೆನಪಾಗುತ್ತದೆ.

ಕೃಷ್ಣಶಾಸ್ತ್ರಿಗಳು ನಿಬಂಧ ಮಾಲಾ ಅನುವಾದ ಕಾರ್ಯ ಕೈಗೊಂಡಾಗ ರವೀಂದ್ರರ ಮೂಲ ಕೃತಿ ಪದಗಳು, ಆಶಯ ಬಂಗಾಳಿ ಭಾಷೆಯಲ್ಲಿ ಯಾವ ರೀತಿ ಇದೆ ಎಂದು ತಿಳಿಯುವುದಕ್ಕಾಗಿ ಚರ್ಚಿಸಲು ಬೆಂಗಳೂರು ಬಸವನಗುಡಿಯ ರಾಮಕೃಷ್ಣ ಮಠದ ಸ್ವಾಮಿ ಯತೀಶ್ವರಾನಂದ ಮತ್ತು ಸ್ವಾಮಿ ಸಂಜ್ಞಾನಂದರ ಸಹಾಯ ಪಡೆಯುತ್ತಿದ್ದರು.

ಸ್ವಾಮಿಗಳನ್ನು ಭೇಟಿಯಾದಾಗ ಮೊದಲಿಗೆ ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರವನ್ನು ಶಾಸ್ತ್ರಿಗಳು ಮಾಡುತ್ತಿದ್ದರು. ಸ್ವಾಮಿಗಳು “ನೀವು ಹಿರಿಯರು ವಿದ್ವಾಂಸರು ನಾವು ಕಿರಿಯರು ನಮಗೆ ನೀವು ನಮಿಸಬೇಡಿ” ಎನ್ನುತ್ತಾ ಅವರು ಪ್ರತಿ ನಮಸ್ಕಾರ ಮಾಡುತ್ತಿದ್ದಂತೆ. ಆಗ ಶಾಸ್ತ್ರಿಗಳು ವರ್ಣಮಾತ್ರಂ ಕಲಿಸಿದಾತಂ ಗುರು. ಕಲಿಸುವವರು ಯಾರೇ ಆಗಲಿ ಗುರು, ಕಲಿಯುವರು ಯಾರು ಆಗಿರಲಿ ಶಿಷ್ಯ. ನಾನೀಗ ಕಲಿಯಲು ಬಂದವನು ಎಂದು ಮತ್ತೆ ನಮಿಸುತ್ತಿದ್ದರು.

ವಿದ್ಯಾದದಾತಿ ವಿನಯಂ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನಬೇಕೇ?

ಕೃಷ್ಣಶಾಸ್ತ್ರಿಗಳ ಸ್ವಾತಂತ್ರ್ಯ ಕೃತಿಗಳು ೧೦ ಸಂಪಾದಿತ ಕೃತಿಗಳು ೪.
೧. ಕೆಳದಿ ನೃಪ ವಿಜಯ (೧೯೨೧)
೨. ಧರ್ಮಾಮೃತ (೧೯೨೪)
೩. ಹರಿಶ್ಚಂದ್ರ ಕಾವ್ಯ ಸಂಗ್ರಹ (ಟಿ.ಎಸ್.ವಿ. ಜತೆ) ೧೯೩೧
೪. ಕವಿ ಜಿಹ್ವಾ ಬಂಧನ (೧೯೫೨)

ವಿದ್ವತ್ಪೂರ್ಣ ಸಂಪಾದಿತ ಕೃತಿಗಳು, ಸ್ವತಂತ್ರ ಕೃತಿಗಳಲ್ಲಿ ವಚನ ಭಾರತ, ಕಥಾಮೃತ, ನಿರ್ಮಲ ಭಾರತ, ಭಾಸ ಕವಿ ಸಂಸ್ಕೃತ ನಾಟಕ, ಸಂಸ್ಕೃತ ಕಾವ್ಯ ಸಾಹಿತ್ಯ ಕುರಿತು, ಸರ್ವಜ್ಞ ಕವಿ – ಶ್ರೀಪತಿಯ ಕಥೆಗಳು, ಭಾಷಣಗಳು ಲೇಖನಗಳು, ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ (ಟಿ.ಎಸ್.ವಿ. ಜತೆ) ಕನ್ನಡ ಕೃತಿಗಳು. ಬಂಕಿಂಚಂದ್ರ ಬಂಗಾಳಿ ಸಾಹಿತ್ಯ ಆಧಾರಿತ ಸ್ವತಂತ್ರ ಕೃತಿಗಳು ಇವುಗಳಲ್ಲಿ ವಚನ ಭಾರತದ ಅದ್ವಿತೀಯ ಜನಪ್ರಿಯ ಕೃತಿ ಆಗಿದೆ. ವಚನ ಭಾರತ ಕೃತಿಯಲ್ಲಿ ಮೂಲ ಸಂಸ್ಕೃತ ಭಾರತವನ್ನು ಕನ್ನಡಕ್ಕೆ ಇಳಿಸಿರುವ ರೀತಿಯನ್ನು ಅವರು ಹೀಗೆ ಹೇಳಿದ್ದಾರೆ.

“ಕನ್ನಡಿ ಯಲ್ಲಿ ದಿಗ್ಗಜವನ್ನು ತೋರಿಸಿದ ಹಾಗೆ ಮಹಾಭಾರತವನ್ನು ಕಿರಿದಾಗಿ ಆದರೆ ಎಲ್ಲಾ ಭಾಗಗಳು ಇರುವಂತೆ ಸಂಗ್ರಹಿಸಿದ್ದೇನೆ ಎಂದು ಕ್ಷೇಮೇಂದ್ರ ಕವಿ ಹೇಳಿದ್ದಾನೆ. ಈ ಕವಿಯ ಸಾಮರ್ಥ್ಯ ನನ್ನಲ್ಲಿಲ್ಲ. ನನ್ನ ಉದ್ದೇಶವೂ ಸರ್ವಾವಯವ ಸಂಗ್ರಹವಲ್ಲ.

“ಕಬ್ಬಿನ ಜಲ್ಲೆಯಲ್ಲಿ ಬೇರು ಗರಿ ಗಿಣ್ಣು ಗಳನ್ನು ಕಿತ್ತು ಹಾಕಿ ಸಿಪ್ಪೆ ಹರಿದು ಸಿಗುರು ಕಳೆದು ಹೋಳು ಮಾಡಿ ಅದನ್ನು ಬಟ್ಟಲಲ್ಲಿ ತಂದು ಕೊಡುವಂಥದ್ದು. ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ತೊಳೆ ಬಿಡಿಸಿ ನಾರು ಬೀಜಗಳನ್ನು ತೆಗೆದು ಹಾಕಿ ಕುಸುಮವನ್ನು ಒಂದು ಅಡಕವಾದ ಬೆಳ್ಳಿ ತಟ್ಟೆಯಲ್ಲಿ ಜೋಡಿಸುವಂಥದ್ದು. ಆದರೆ ಮೂಲದಲ್ಲಿ ಸ್ವಾರಸ್ಯವಿದ್ದ ಕಡೆ ಒಂದು ವಾಕ್ಯವನ್ನು ಬಿಟ್ಟಿಲ್ಲ ಒಂದು ಉಪಮಾನವನ್ನು ಬಿಟ್ಟಿಲ್ಲ. ಇನ್ನು ಕೆಲವು ಕಡೆ ಸಂಗ್ರಹಿಸಿದ್ದಾರೆ. ದೊಡ್ಡ ದೊಡ್ಡ ಪ್ರಕರಣಗಳನ್ನು ಬಿಟ್ಟಿದ್ದೇನೆ. ಒಂದು ಕಡೆಯೂ ಪುನರುಕ್ತಿಯಿಲ್ಲ” ಎಂದಿದ್ದಾರೆ. ವಚನ ಭಾರತ ಬರೆದಾಗ ಶಾಸ್ತ್ರಿಗಳು ಮಹಾಭಾರತದ ಬಗ್ಗೆ ಅಪಾರ ಚಿಂತನೆ, ವಿಮರ್ಶೆ ಮಾಡಿದ್ದಾರೆ. ಉದಾಹರಣೆಗೆ ಪೀಠಿಕೆ ಪುಟ ೬೪ದಲ್ಲಿ (ಮೊದಲ ಮುದ್ರಣ) ೧೯೫೦ ರಲ್ಲಿ ಒಂದು ಮಾತು ಬರೆದಿದ್ದರು. “ಮಹಾಭಾರತ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಮಡೆಯಿತಲ್ಲ ಅವರೆಲ್ಲರೂ ಒಂದೇ ವಿಧವಾದ ಕರ್‍ಮವನ್ನು ಆ ೧೮ ದಿನಗಳಲ್ಲಿಯೇ ಫಲ ಕೊಡುವಂಥ ಕಾರ್‍ಮವನ್ನು ಮಾಡಿದ್ದರೇ? ಹೌದು ಎನ್ನಲೇಬೇಕು” ಎಂದಿದ್ದರು. ಎರಡನೇ ಮುದ್ರಣದಲ್ಲಿ ಈ ಬಗ್ಗೆ ಟಿಪ್ಪಣಿ ಹೀಗೆ ಬರೆದಿದ್ದಾರೆ.

“ಈ ಮಾತುಗಳನ್ನು ಬರೆದಾಗ ನನ್ನ ಮನಸ್ಸಿನಲ್ಲಿ ದೃಢವಾದ ನಿಶ್ಚಯ ವೇನು ಇರಲಿಲ್ಲ…. ಭೂಕಂಪ ಅಗ್ನಿಪರ್ವತದ ಪ್ರಕೋಪ, ಸಮುದ್ರದ ಹೊರಳಿಕೆ ಮುಂತಾದ ವಿಪತ್ತುಗಳಿಂದ ಅಲ್ಪ ಕಾಲದಲ್ಲಿ ಬಹು ಪ್ರಾಣಿ ನಾಶವಾಗುವುದೆಂದು ಗೊತ್ತಿತ್ತು. ಇಂದಿಗೂ ಯುದ್ಧದಲ್ಲಿ ಲಕ್ಷಾಂತರ ಜನರ ಸಾಯುತ್ತಾರೆಂದು ಗೊತ್ತಿತ್ತು. ನಾಗಸಾಕಿಯಲ್ಲಿ ಅಣುಬಾಂಬಿನಿಂದ ಕ್ಷಣ ಮಾತ್ರದಲ್ಲಿ ಊರಿಗೆ ಊರೇ ನಾಶವಾಯಿತು ಎಂಬುದೂ ಗೊತ್ತಿತ್ತು. ಆದರೆ ಇದು ಕರ ಪರಿಪಾಕವಾದ ಫಲವಾಗುವುದು ಸಂಭವವೇ? ದೈವಸಂಕಲ್ಪವಾದೀತೇ? ಪ್ರಕೃತಿ ನಿಯಮ ಕ್ಕೆ ಅನುಸಾರಿಯಾಗಿದ್ದೀತೇ? ಎಂದು ಸಂದೇಹ ಬಾಧಿಸುತ್ತಲೇ ಇತ್ತು. ಆದರೂ ಬರೆದುದನ್ನು ಅಚ್ಚಿಗೆಕೊಟ್ಟೆ, ಪುಸ್ತಕ ಅಚ್ಚಾದ ಒಂದು ತಿಂಗಳ ಮೇಲೆ ಚಳಿಗಾಲ ಬಂತು. ಆಗ ನಮ್ಮ ಮನೆಯ ಮುಂದೆ ಇದ್ದ ಒಂದು ದೊಡ್ಡ ಅರಳಿ ಮರದ ಎಲೆಗಳು ಹಣ್ಣಾಗಲು ಮೊದಲಾಗಿ ೧೫ ದಿನಗಳೊಳಗೆ ಎಲ್ಲ ಉದುರಿ ಹೋದವು. ಲಕ್ಷಾಂತರ ಎಲೆಗಳು ಉದುರಿ ಮರವು ಬರಿಯ ಬರಲಾಗಿ ಉಳಿಯಿತು. ಅದನ್ನು ನೋಡಿ ಈ ಎಲೆಗಳಿಗೆ ಅನ್ವಯಿಸುವುದು ಮನುಷ್ಯನಿಗೆ ಅನ್ವಯಿಸಲಾರದೇ ಅನ್ನಿಸಿತು. ಮನುಷ್ಯನು ತನ್ನ ಮಟ್ಟಿಗೆ ತಾನು ದೊಡ್ಡವನು ಎಂದುಕೊಂಡಿರಬಹುದು. ಆದರೆ ಈ ಸನಾತನವಾದ ಅಶ್ವತ್ಥದಲ್ಲಿ ಮನುಷ್ಯರು ಎಲೆಗಿಂತ ಹೆಚ್ಚಿನವರೇನಲ್ಲ. ಜಗತ್ತಿನ ಅಗಾಧವಾದ ಪರಿಣಾಮವನ್ನು ಮನಸಿಗೆ ತಂದುಕೊಂಡರೆ ಎಲೆ ಇರಲಿ ಅಣುವಿಗಿಂತ ಅಣಿಯ. ವಸಂತ ಮಾಸ ಬರಲು ವಾರವಲ್ಲ ೧೫ ದಿನಗಳಲ್ಲಿ ಉಗುರು ಊರುವುದಕ್ಕೆ ಅವಕಾಶ ವಿಲ್ಲದಂತೆ ಕೆಂಪು ಚಿಗುರುಗಳಿಂದ ತುಂಬಿ ಹೋಯಿತು. ಆ ವಾರದಲ್ಲಿ ಎಷ್ಟು ಚೈತನ್ಯ ಜನಕಶಕ್ತಿ ಎಲ್ಲಿ ಅಡಗಿತ್ತು ಎನಿಸಿತು.

ವಚನ ಭಾರತ ರಚನೆ ಆದ ರೀತಿ ಸ್ವಾರಸ್ಯಕರವಾದುದು. ಮೂಲವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಅದೇ ತಿಂಗಳಲ್ಲಿ ವಚನ ಭಾರತವನ್ನು ತಪಸ್ಸಿನಂತೆ ಶ್ರದ್ದೆಯಿಂದ ಭಕ್ತಿಯಿಂದ ರಚಿಸಿದರು. ದಿನಕ್ಕೆ ೧೬ ಪುಟಗಳಷ್ಟಾದರೂ ಬರೆಯುತ್ತಿದ್ದರು. ಒಂದೊಂದು ಪರ್ವ ಮುಗಿದ ನಂತರವೂ ಹಸ್ತ ಪ್ರತಿ ಮೇಲೆ ಸರಸ್ವತಿ ವಿಗ್ರಹವನ್ನಿಟ್ಟು ಬಗೆ ಬಗೆಯ ಹೂಗಳಿಂದ ಪೂಜಿಸಿ ಸಿಹಿ ಪ್ರಸಾದ ಕೊಡುತ್ತಿದ್ದರು. ಅಚ್ಚಿಗೆ ಮಲ್ಯರವರ ಪ್ರೆಸ್ಸಿಗೆ ರಾಜರತ್ನಂ ತಂದು ಕೊಡುತ್ತಿದ್ದರು. ಅಲ್ಲಿ ಕೆಲಸಗಾರರು ಬೀಡಿ ಸೇದದೆ, ಕೈ ಕಾಲು ತೊಳೆದು ಕೊಂಡು ಕೃತಿಗೆ ನಮಸ್ಕರಿಸಿ ಮೊಳೆ ಜೋಡಿಸುತ್ತಿದ್ದರಂತೆ. ಹೀಗೆ ಪುಸ್ತಕ ಒಂದು ಪೂಜೆ ಎಂಬಂತೆ ಮಾಡಿ ಮಡಿಯಾಗಿ ರಚಿತವಾದ ಕೃತಿ ಇದು.

ಕೃಷ್ಣಶಾಸ್ತ್ರಿಗಳು ತಮ್ಮ ೬೦ನೇ ವರ್ಷದ ಹುಟ್ಟು ಹಬ್ಬದ ದಿನ ೧೯೬೧ರಲ್ಲಿ ಬಂಧು ಮಿತ್ರರನ್ನೆಲ್ಲಾ ಭೋಜನಕ್ಕೆ ಆಹ್ವಾನಿಸಿ ಅಂದೇ ಬಂದಿದ್ದ ವಚನ ಭಾರತವನ್ನು ಎಲ್ಲರಿಗೂ ಉಡುಗೊರೆಯಾಗಿ ಕೊಟ್ಟು ಆನಂದಿಸಿದರು.

ವಚನ ಭಾರತವನ್ನು ಓದುತ್ತಿದ್ದಾಗ ಮೊಮ್ಮಕ್ಕಳು ಅರ್ಥವಾಗದು ಎಂದು ಅವರಿಗಾಗಿ ರಚಿಸಿದ್ದು ನಿರ್ಮಲ ಭಾರತ ಮಕ್ಕಳ ಭಾರತ ಕಥೆಯ ಪುಸ್ತಕ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಉಪಯುಕ್ತ ಗ್ರಂಥ ಇದು. ಅವರೊಮ್ಮೆ ಹೇಳಿದರು; ಮನೆ ಮಂದಿಯೆಲ್ಲ ಕುಳಿತು ಓದುವ ಗ್ರಂಥವೇ ಶ್ರೇಷ್ಠ ಗ್ರಂಥ; ವಚನ ಭಾರತ ಆ ಸಾಲಿನ ಪುಸ್ತಕ ವಾಗಿದೆ.

ಕಥಾಮೃತ ಇನ್ನೊಂದು ಕಥಾಗ್ರಂಥ, ಚಂದಮಾಮ ಬಾಲಮಿತ್ರ ಓದಿ ಆನಂದಿಸಿದ ಮಕ್ಕಳಿಂದ ಹಿಡಿದು ಹಿರಿಯರಿಗೆ ನೀತಿ ಪಾಠ ಹೇಳಿದ ಕಥೆಗಳ್ವರೆಗೆ ನಾನಾ ಕಥೆಗಳಿವೆ. ಕಥಾಮೃತ, ವಚನಭಾರತಗಳಿಗೆ ಬರೆದ ವಿದ್ವತ್ಪೂರ್ಣ ವಿಸ್ತಾರವಾದ ಪೀಠಿಕೆಗಳು ಪದೇ ಪದೇ ಓದಿ ಮನನ ಮಾಡುವಂಥ ಪೀಠಿಕೆಗಳಾಗಿವೆ.

ಬಂಕಿಮಚಂದ್ರ ಗ್ರಂಥ ರಚನೆ ಬಗ್ಗೆ ಶಾಸ್ತ್ರಿಗಳು ಹೇಳಿದ ಮಾತನ್ನು ಗಮನಿಸಬೇಕು. ಬಂಕಿಮರ ಕೃತಿ ಅವರಿಗೆ ಪರಿಚಯವಾದ ಸಂದರ್ಭವೇ ಕುತೂಹಲಕಾರಿಯಾಗಿದೆ. ಕೃಷ್ಣಶಾಸ್ತ್ರಿಗಳ ಪುಸ್ತಕ ಪ್ರೇಮವು ಇದರಲ್ಲಿ ಅಡಗಿದೆ. ಕೃಷ್ಣಶಾಸ್ತ್ರಿಗಳು ಬಂಕಿಮಚಂದ್ರ ಗ್ರಂಥದಲ್ಲಿ ಬರೆದ ಗ್ರಂಥ ಕರ್ತನ ಬಿನ್ನಹ ದಲ್ಲಿ ಹೇಳಿದ ಮಾತುಗಳಿವು:

“ಈಗ್ಗೆ ಸುಮಾರು ೬೦ ವರ್ಷಗಳ ಕೆಳಗೆ ನಾನು ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ದಿನ ನನಗೆ ಎರಡು ತಿಂಗಳ ವಿದ್ಯಾರ್ಥಿ ವೇತನವಾಗಿ ಎಂಟು ರೂಪಾಯಿ ಬಂತು. ಆಗ ಇನ್ನೂ ಒಂದು ರೂಪಾಯಿಗೆ ನೋಟಾಗಲಿ ನಿಕ್ಕಲ್ ಆಗಲಿ ಬಂದಿರಲಿಲ್ಲ. ಆದ್ದರಿಂದ ಬೆಳ್ಳಿಯ ಎರಡು ಗಟ್ಟಿ ರೂಪಾಯಿಗಳು ನನ್ನ ಕೈ ತುಂಬಾ ಇದ್ದವು. ಬಡತನದಲ್ಲಿ ಬೆಳೆದಿದ್ದ ನಾನು ಅಷ್ಟೊಂದು ಹಣವನ್ನು ನನ್ನದಾಗಿ ಅಲ್ಲಿಯವರೆಗೆ ನೋಡಿರಲಿಲ್ಲ. ಆದ್ದರಿಂದ ಅದನ್ನೇನು ಮಾಡಬೇಕೆಂದು ಗಹನವಾದ ಸಮಸ್ಯೆಯಾಯಿತು. [ಈವತ್ತು ಎರಡು ರೂಪಾಯಿ ಇದ್ದರೆ ಇದನ್ನು ಯಾತಕ್ಕೂ ಬಳಸಲಾಗದಲ್ಲಾ ಎಂಬ ಸಮಸ್ಯೆ ನಮಗೆ]

ದುರ್‍ವ್ಯಯ ಮಾಡಬಾರದೆಂಬುದೇನೋ ಸಂಪ್ರದಾಯ ಸಂಸ್ಕಾರಗಳಿಂದ ಮನಸ್ಸಿನಲ್ಲಿ ರೂಢಮೂಲವಾಗಿತ್ತು. ಆದರೆ ಸದ್ವ್ಯಯ ಮಾಡುವುದು ಹೇಗೆ? ಅದಕ್ಕೆ ತಿಂಡಿಕೊಂಡು ತಿಂದು ಬಿಡಬೇಕೆಂಬ ಯೋಚನೆ ಬರಲಿಲ್ಲ. ಅಷ್ಟೊಂದು ಹಣವನ್ನು ನಿಮಿಷಾರ್ಧದಲ್ಲಿ ವೆಚ್ಚ ಮಾಡಿಬಿಡಬಹುದಾದ ಇಂದ್ರ ಭವನ ಚಂದ್ರಭವನಗಳು ಆಗ ಇನ್ನೂ ಹುಟ್ಟಿರಲಿಲ್ಲ. ಕೊನೆಗೆ ಕಾಸಿಗೆ ಒಂದು ದೋಸೆ, ಕಾಸಿಗೆ ಒಂದು ವಡೆ, ಚಕ್ಕುಲಿ ಮಾರುವಂಥ ಎಲ್ಲೋ ಒಂದೆರಡು ಹೋಟೆಲುಗಳು ಮಾತ್ರ ಇದ್ದೆವು. ನಾನು ಆ ಎರಡು ರೂಪಾಯಿ ಹಿಡಿದು ಆ ಕಾಲದಲ್ಲಿ ದೊಡ್ಡ ಷಾಪು ಜಿ.ಟಿ.ಎ.ಗೆ ಹೋದೆ, ಅದರೊಳಕ್ಕೆ ಹೋಗಿ ಸುತ್ತಲೂ ನೋಡಿದೆ. ನನ್ನ ಕಣ್ಣಿಗೆ ಪ್ರಧಾನವಾಗಿ ಕಂಡದ್ದು ಪುಸ್ತಕಗಳು, ಅದರಲ್ಲಿ ಆನಂದ ಮಠ ಕಂಡೆ. ಅದರಿಂದ ಏನೋ ಆನಂದ ವಾಗುತ್ತದೆ ಎಂಬುದು ನನ್ನ ಭಾವನೆ. ಸುಮಾರು ೧ ೧/೨ ರೂ ಕೊಟ್ಟು ಕೊಂಡುಕೊಂಡೆ. ಅದೇ ನನ್ನ ಹಣದಿಂದ ನಾನು ಕೊಂಡುಕೊಂಡ ಮೊದಲನೆಯ ಪುಸ್ತಕ. ಏನೋ ಜಯವನ್ನು ಸಾಧಿಸಿದವನಂತೆ ಮನೆಗೆ ಬಂದು ಅಂದೆ ಆದಷ್ಟೂ ಓದಿದೆ.

ಬಂಕಿಮ ಚಂದ್ರ ಬಗ್ಗೆ ಬರೆದ ಪುಸ್ತಕದ ಮೊದಲು ಪುಟವನ್ನು ಓದುತ್ತಿದ್ದಂತೆಯೆ ನನಗೆ ಅದರ ಶೈಲಿ ಆಕರ್ಷಕವಾಗಿ ನವೀನವಾಗಿ ಕಂಡಿತು. ಹೀಗೆ ಬರೆದರೆ ನಾವೆಲ್ಲು ಎಂದುಕೊಂಡೆ. ಬಂಕಿಂಚಂದ್ರ ಸಾಹಿತ್ಯಕ್ಕೆ ನನಗೆ ಪ್ರವೇಶವಾದದ್ದು ಹೀಗೆ.

ನಾನು ಉಪಾಧ್ಯಾಯನಾದಾಗ ವಿಷವೃಕ್ಷ, ದೇವೀ ಚೌಧುರಾಣಿ, ಆನಂದ ಮಠ ಇತ್ಯಾದಿ ಪಾಠ ಹೇಳಬೇಕಾಯಿತು. ಪಾಠ ಹೇಳುವಾಗ ಅವುಗಳ ವಿವರವಾದ ಆಳವಾದ ವ್ಯಾಸಂಗವಾಯಿತು. ಅವುಗಳ ಮೂಲವನ್ನು ನೋಡ ಬೇಕೆಂದು ಬಂಗಾಳಿ ಗ್ರಂಥಗಳನ್ನು ತರಿಸಿ ಓದಬೇಕಾಯಿತು. ಬಂಗಾಳಿ ಸಾಹಿತ್ಯ ಚರಿತ್ರೆಯನ್ನು ಓದಬೇಕಾಯಿತು. ಬಂಕಿಂಚಂದ್ರರ ಅಪ್ರಕಾಶಿತ ಎಂದರೆ ಕನ್ನಡಕ್ಕೆ ಭಾಷಾಂತರವಾಗದ ಗ್ರಂಥಗಳನ್ನು ನೋಡಬೇಕಾಗಿ ಬಂತು. ಇವುಗಳ ವ್ಯಾಸಂಗ ಹೀಗೆ, ಆಗ ಈಗ ಉಪಾಧ್ಯಾಯ ವೃತ್ತಿಯಿಂದ ನಿವೃತ್ತನಾಗುವವರೆಗೆ ನಡೆಯುತ್ತಲೇ ಇತ್ತು.

ಬಂಕಿಮಚಂದ್ರ ಮೂಲ ಗ್ರಂಥಗಳನ್ನು ಬಂಗಾಳಿಯಲ್ಲೇ ಓದಿ ಚರ್ವಣ ಮಾಡಿ, ಬಂಕಿಮನ ಜೀವನ ಚರಿತ್ರೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನನಗೆ ಸೂಕ್ತ ಕಂಡ ಅಭಿಪ್ರಾಯಗಳನ್ನು ನನ್ನದೆ ರೀತಿಯಲ್ಲಿ ಬರೆದಿದ್ದೇನೆ. ಇಲ್ಲಿನ ವಿಮರ್ಶಾಭಾಗವು ಬಹುಮಟ್ಟಿಗೆ ನನ್ನದೇ.

ಜಿ.ಪಿ. ರಾಜರತ್ನಂ ಬೌದ್ಧಧರ್ಮವನ್ನು ಚೆನ್ನಾಗಿ ಮೂಲದಲ್ಲಿ ತಿಳಿಯಲು ಜೈನಧರ್ಮವನ್ನು ತಮ್ಮ ವಾದ ಸಮರ್ಥನೆ ಬಳಸಿಕೊಳ್ಳಲು ಪಾಳಿ-ಪ್ರಾಕೃತ ಭಾಷೆಗಳನ್ನು ಕಲಿತರು. ಹಾಗೆಯೇ ಗ್ರೀಕ್ ಅನ್ನು ರಾಘವಾಚಾರ್, ಬಿ ಎಂ ಶ್ರೀ ಕಲಿತರು, ಬಂಗಾಳಿಯನ್ನು ವಿ.ಸೀ. ವೆಂಕಟಾಚಾರ್ಯ, ವೆಂಕಣ್ಣಯ್ಯ, ವ್ಯಾಸರಾವ್ ಮೊದಲಾದವರು ಧನದಾಹಿಗಳಾಗಿ ಅಲ್ಲ ಜ್ಞಾನದಾಹಿಗಳಾಗಿ ಕಲಿತರು. ಒಬ್ಬ ಲೇಖಕನನ್ನು ಅವರ ಕೃತಿಗಳನ್ನು ಮೂಲದ ಭಾಷೆಯಲ್ಲಿ ಓದಲು ಆ ಭಾಷೆಯನ್ನು ಕಲಿಯಬೇಕು ಎಂಬ ಛಲ ಆಸೆ ಆದರ್ಶ ಕೃಷ್ಣಶಾಸ್ತ್ರಿಗಳಿಗಿದ್ದಂತೆ ಈಗಿನ ಅಧ್ಯಾಪಕರಲ್ಲಿ ಯಾರಿಗಿದೆ? ನಮ್ಮ ವಿದ್ಯಾಭ್ಯಾಸ ಮಟ್ಟಕ್ಕೆ ಇದೊಂದು ಅಳತೆಗೋಲು.

ಎ.ಆರ್. ಕೃಷ್ಣಶಾಸ್ತ್ರಿಗಳು ಎಂದೊಡನೆ ನನಗೆ ನೆನಪಾಗುವುದು ಗುಂಡಿ ನೇಟಿನಂಥ ಕನ್ನಡದ ಸಿಡಿಲು ನುಡಿಗಳು, ಸಿಂಹಘರ್ಜನೆ, ರಣಘೋಷ ನಿರ್ಭೀತರಾಗಿ, ಎನ್ನ ನುಡಿ ಟಾಠಡಢಣ ಎಂಬ ಭೀಮ ವಾಕ್ಕು, ವೀರಯೋಧನ ವಾಣಿ, ಗಂಡುಗಲಿ ಕನ್ನಡಿಗನ ದಿಟ್ಟಗಟ್ಟಿ ನುಡಿಗಳು. ಒಂದಲ್ಲ ಎರಡಲ್ಲ ನೂರಾರು. ಇದಕ್ಕೆ ನಿದರ್ಶನವಾಗಿ ೧೯೪೧ರಲ್ಲಿ ಹೈದರಾಬಾದಿನಲ್ಲಿ ಸೇರಿದ ೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಅಣಿ ಮುತ್ತುಗಳನ್ನು ಗಮನಿಸಬಹುದು.

“ಮೈಸೂರಿನವರು ಧಾರವಾಡದವರು, ಮಂಗಳೂರಿನವರು ಹೈದರಾಬಾದಿನವರು ಕೊಡಗಿನವರ ಎನ್ನುವುದಕ್ಕಿಂತ ಕನ್ನಡಿಗರು ಎನ್ನುವುದು ಶ್ರೇಯಸ್ಸು.

ಮರಾಠಿಗರು ತೆಲುಗರು ತಮಿಳರು ಎನ್ನುವುದಕ್ಕಿಂತ ಭಾರತೀಯರು ಎನ್ನುವುದು ಮತ್ತು ಶ್ರೇಯಸ್ಸು.

ಭಾರತೀಯರು, ಇಂಗ್ಲಿಷರು, ಅಮೆರಿಕನ್ನರು, ಆಫ್ರಿಕನ್ನರ ಎನ್ನುವುದಕ್ಕಿಂತ ನಾವೆಲ್ಲ ಈ ಭೂಮಿತಾಯ ಮಕ್ಕಳು ಎನ್ನುವುದು ವಿಶ್ವಭಾವನೆ ಸರ್ವೋತ್ತಮ”

ಹೀಗೆಂದು ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವ ಪ್ರಜೆಯಾಗಿ ಕೆಲಸ ಮಾಡಲು ಆಗುತ್ತದೆಯೇ?

ಪ್ರಪಂಚವನ್ನು ಉದ್ಧಾರ ಮಾಡುತ್ತೇನೆಂದು ಹೊರಡುವುದಕ್ಕಿಂತ ಹೆಚ್ಚಿನ ಅವಿವೇಕ ಮತ್ತೊಂದಿಲ್ಲ.

ತನ್ನನ್ನು ತಾನು ಉದ್ದಾರ ಮಾಡಿಕೊಳ್ಳಬೇಕು, ಆ ಮೇಲೆ ತನ್ನವರ ತನ್ನ ನಾಡು, ತನ್ನ ಲೋಕ, ಉದ್ದಾರಕಾರ ದಾನದಂತೆ ತನ್ನಿಂದ ಆರಂಭವಾಗಬೇಕು, ಆದರೆ ಅದು ತನ್ನಲ್ಲಿಯೇ ನಿಲ್ಲಬಾರದು, ತಾನು ವಿದ್ಯಾವಂತನಾದರೆ ಮತ್ತೊಬ್ಬರಿಗೆ ಹೇಳಿ ಕೊಡಬಹುದು ಹಾಗಲ್ಲದೆ ದೇಶವನ್ನು ಉದ್ಧಾರ ಮಾಡುತ್ತೇನೆ ಎಂದು ಯಾರಾದರೂ ತನ್ನನ್ನು ತನ್ನ ತಾಯಿ ತಂದೆಗಳನ್ನು ಹೆಂಡತಿ ಮಕ್ಕಳನ್ನು ಅಲಕ್ಷ್ಯ ಮಾಡಿದರೆ ಅದು ದೇಶೋದ್ದಾರವಲ್ಲ ದೇಶ ದ್ರೋಹ, ಊರಿನ ಅಭಿಮಾನದಿಂದ ಊರನ್ನು ಬೆಳೆಸಿಕೊಂಡು ಬಂದರೆ ಅದರಿಂದ ಒಟ್ಟು ದೇಶಕ್ಕೆ ಹಾನಿಯಿಲ್ಲ. ಕನ್ನಡಿಗರು ತಮ್ಮ ನಾಡಿನ ಅಭಿಮಾನ ನಿಂದ ಅದನ್ನು ಪುಷ್ಟಿಗೊಳಿಸಬೇಕೆಂದರೆ ಅದು ಸ್ವಾಭಾವಿಕವೂ ನ್ಯಾಯವೂ ಆಗಿರುವುದು ಅಲ್ಲದೆ ಒಟ್ಟು ದೇಶಕ್ಕೂ ಕ್ಷೇಮ.

“ನಮ್ಮ ದೇಶದಲ್ಲಿ ಖಿಲವಾಗಿ ನಷ್ಟವಾಗಿ ಹೋದಂತೆ ಸಂಸ್ಕೃತವೂ ಆಗಿ ಹೋಗುವುದಾದರೆ ಅದು ಬೌದ್ಧಧರ್ಮದಂತೆ ಹೊರ ದೇಶಗಳಲ್ಲಿ ಬದುಕಿರುತ್ತದೆ ಬಾಳುತ್ತಿರುತ್ತದೆ. ಆದರೆ ಕನ್ನಡ?

ಕನ್ನಡಿಗರೇ, ನಿಮ್ಮ ಕನ್ನಡವನ್ನು ಇಂಡಿಯಾ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೀವು ನೋಡಲಾರಿರಿ. ನೀವು ಅದನ್ನು ಅಲಕ್ಷ್ಯ ಮಾಡಿದರೆ ಮಿಕ್ಕ ಯಾವ ದೇಶದ ಯಾವ ಜನರೂ ಅದನ್ನು ಎತ್ತಿ ಹಿಡಿಯಲಾರರು.

ಅದು ಹೋದರೆ ಹೋಗಲಿ ಎನ್ನುವುದಾಗಿದ್ದರೆ ಈ ಕಡೆ ಬಂಗಾಳ ಕೊಲ್ಲಿ ಇದೆ. ಆ ಕಡೆ ಅರಬ್ಬಿ ಸಮುದ್ರ ಇದೆ. ಗುಡಿಸಿ ಹಾಕಿ ಬಿಡಿ, ಇತರ ಭಾಷೆಗಳು. ಒತ್ತಿಕೊಂಡು ಬರಲಿ.”
* * *

“ಮಾತೃಭಾಷೆ ಮೂಲಕ ಕಲಿತಿದ್ದು ಮೈ ಹತ್ತುವುದು, ಮಾತೃಭಾಷೆಯಲ್ಲಿ ಬರೆದಿದ್ದೆ ನಿಲ್ಲುವುದು, ಪರಿಭಾಷೆಯಲ್ಲಿ ಯಾರು ಎಷ್ಟೇ ಪಂಡಿತರಾಗಿ ಏನು ಬರೆಯಲಿ ಅದು ಆ ಸಾಹಿತ್ಯಕ್ಕೆ ಸೇರಿ ಗಣ್ಯವಾದ ಸ್ಥಾನ ಪಡೆಯುತ್ತದೆಂಬುದು ಸಂದೇಹದ ಮಾತುಗಳು. ಕೃಷ್ಣಶಾಸ್ತ್ರಿಗಳು ಈ ಮಾತನ್ನು ಹೇಳುವ ಸಂದರ್ಭದಲ್ಲಿ ನನಗೆ ಶ್ರೀಕಂಠೇಶಗೌಡರು ಷೇಕ್ಸ್ಪಿಯರ್‌ನ ಮಾಕ್ಬೆತನ್ನು ಕನ್ನಡಕ್ಕೆ ಅನುವಾದಿಸಿದ ಸಂದರ್ಭದಲ್ಲಿ ಹೇಳಿದ ಮಾತು ನೆನಪಾಗುತ್ತದೆ. “ನಾನು ಎಷ್ಟೇ ಚೆನ್ನಾಗಿ ಇಂಗ್ಲಿಷ್ ನಲ್ಲಿ ಬರೆದರೂ ಷೇಕ್ಸ್ಪಿಯರನನ್ನು ಮೀರಿಸಲಾರೆ, ಷೇಕ್ಸ್ ಪಿಯರ್ ಎಷ್ಟು ಚೆನ್ನಾಗಿ ಕನ್ನಡದಲ್ಲಿ ಬರೆದರು ನನ್ನನ್ನು ಮೀರಿಸಲಾರ.” ಈ ಮಾತು ಮಾತೃಭಾಷೆ ಮಹತ್ವವನ್ನು ಚೆನ್ನಾಗಿ ತಿಳಿಸುತ್ತದೆ.
* * *

ಎ.ಆರ್.ಕೃ. ಹೇಳುತ್ತಾರೆ. ರವೀಂದ್ರನಾಥ ಠಾಕೂರರ ಇಂಗ್ಲೀಷನ್ನು ಇಂಗ್ಲಿಷರಿಗಿಂತ ಚೆನ್ನಾಗಿ ಬರೆಯಬಲ್ಲ ಶಕ್ತಿಯನ್ನು ಗಳಿಸಿದರು. ನೊಬೆಲ್ ಬಹುಮಾನ ಬಂತು. ನಿಜ ಆದರೆ ಅವರ ಕಾವ್ಯಗಳು ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾಯಿಯಾದ ಸ್ಥಾನ ಪಡೆದಿದೆ ಮತ್ತು ಇಂಥವರು ಭರತ ಖಂಡಕ್ಕೆಲ್ಲಾ ಬೆರಳು ಮಡಿಸುವಷ್ಟು ಜನ ಕೂಡ ಸಿಗಲಾರರು. ಆದ್ದರಿಂದ ಎಲ್ಲರೂ ಮೊದಲು ತಂತಮ್ಮ ನುಡಿಯೊಳ್ ಎಲ್ಲರ್‌ ಜಾಣರ್ ಆಗಬೇಕು.

ಜಾತಿ ಮತ ವೇಷಭೂಷಣ ಊಟ ತಿಂಡಿ ಸತ್ಕಾರ ಮುಂತಾದವುಗಳೇ ಕನ್ನಡಿಗರು ತಮ್ಮ ಕನ್ನಡವನ್ನು ಕನ್ನಡತನವನ್ನೂ ಉಳಿಸಿಕೊಂಡರೆ ಅದೇ ಸಾಕಾಗಿದೆ. ನಾವು ಮೊದಲು ಕನ್ನಡಿಗರು ಅನಂತರ ಭಾರತೀಯರು, ಎಂದರೆ ಅದು ಸ್ವಾಭಾವಿಕ. ಕಾರ್‍ಯಸಾಧ್ಯ ಕ್ಷೇಮಕರ. ಅವಶ್ಯಕರ್ತವ್ಯ ಆದ್ದರಿಂದ ಮಾತೃ ಭಾಷೆಗೆ ಮೊದಲ ಸ್ಥಾನ; ದೇಶ ಭಾಷೆಗೆ ಎರಡನೇ ಸ್ಥಾನ, ಮೂರನೆಯದು ಇಂಗ್ಲೀಷ್.

ಎಲ್ಲಿ ಮಾತೃಭಾಷೆಯೇ ದೇಶಭಾಷೆ ಆಗುತ್ತದೋ ಅಲ್ಲಿ ದಾರಿ ಸುಗಮವಾಯಿತು. ಸೋದರಳಿಯನೇ ಸ್ವಂತ ಅಳಿಯನಾದಂತೆ ಆಯಿತು ನಂಟು ಉಳಿಯಿತು ಗಂಟು ಉಳಿಯಿತು. ಇಲ್ಲದಿದ್ದರೆ ಹೊರಗಿನಿಂದ ಒಬ್ಬ ಹುಡುಗನನ್ನು ಹಿಡಿದು ತಂದು ವರಪೂಜೆ ಮಾಡಿ ಮಗಳನ್ನು ಕೊಟ್ಟು, ಬಳುವಳಿಕೊಟ್ಟು ಉಪಚಾರ ಮಾಡಿ ಒಲಿಸಿಕೊಂಡಂತಾಯಿತು. ಮಗನ ಜೊತೆಗೆ ಅವನೂ ಒಬ್ಬ-ಮಗಳ ಗಂಡ ಮಿಕ್ಕ ಭಾಷೆಗಳು ಮನೆಗೆ ಬರುವ ನೆಂಟರು ಇಷ್ಟರ ಹಾಗೆ ಆದರೆ ಅವರೆಲ್ಲರನ್ನೂ ಮಗನಂತೆ ಅಳಿಯನಂತೆ ಕಾಣಲಾಗುವುದಿಲ್ಲ, ಆದ್ದರಿಂದ ನಮ್ಮದೇ ವಿದ್ಯಾವಂತ ನೆನ್ನಿಸಿಕೊಳ್ಳಬೇಕಾದವನು ತನ್ನ ಜನಕ್ಕೆ ತಿಳಿವಳಿಕೆ ಕೊಡಬೇಕಾದರೆ ನೆಲಸಿದ ಕಡೆ ಬದುಕಿ ಬಾಳಬೇಕಾದರೆ ಈ ಎರಡು ಭಾಷೆಗಳನ್ನಾದರೂ ಕಲಿಯಬೇಕು.

ಸಂಸ್ಕೃತದಿಂದ ಸಾರವತ್ತಾದುದನ್ನು ಕೃತಜ್ಞತೆ ಯಿಂದ ತೆಗೆದುಕೊಳ್ಳೋಣ ಕನ್ನಡಿಸಿಕೊಳ್ಳೋಣ, ಬರಿಯ ಅದರ ಗಾಂಭೀರ್‍ಯಕ್ಕೆ ಮರುಳಾಗದಿರೋಣ. ಭಾಷೆ ಗಿಂತಲೂ ಭಾವ ಮುಖ್ಯ.

ಭಾಷೆ ಗಾಡಿಯಿದ್ದ ಹಾಗೆ. ಗೊಬ್ಬರದ ಗಾಡಿಯಲ್ಲಿ ಚಿನ್ನದ ಗಟ್ಟಿಗಳನ್ನು ಹೇರಿಕೊಂಡು ಬಂದರೆ ಅವಕ್ಕೆ ಬೆಲೆ ಕಡಿಮೆ ಆಗುತ್ತದೆಯೇ? ಗಂಭೀರ ಭಾಷೆ, ಗಂಡು ಭಾಷೆ ಎಂದು ಅನ್ನಭಾಷೆಗಳಿಗೆ ಸೋತು ಬೀಡೋಣವೇ? ಉಹುಂ ಅದರ ಬದಲು ಭಾಷಾಂತರ ಮಾಡಿಕೊಂಡರೆ ಸಿಪ್ಪೆಯ, ಬಣ್ಣ, ಸ್ವಲ್ಪ ಹಣ್ಣು ಹೋದರೂ ತಿರುಳು ಸಿಗುತ್ತದೆ.

ಅನ್ಯ ಭಾಷೆಗಳಿಗೆ ಯಾವ ಸ್ಥಾನಮಾನ ಕೊಡಬೇಕು ಎಷ್ಟರಮಟ್ಟಿಗೆ ಅವುಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ಮಾರ್ಮಿಕವಾಗಿ ಕೃಷ್ಣಶಾಸ್ತ್ರಿಗಳು ಹೀಗೆ ಹೇಳಿದ್ದಾರೆ. “ನಾವು ಮನುಷ್ಯರು ಮನುಷ್ಯತ್ವವನ್ನು ಉಳಿಸಿಕೊಳ್ಳೋಣ. ಉತ್ತಮ ಪಡಿಸಿಕೊಳ್ಳೋಣ ಎಂದರೆ ಮಿಕ್ಕ ಪ್ರಾಣಿಗಳ ಮೇಲೆ ದ್ವೇಷವೆಂದಲ್ಲ ಹಸುಗಳನ್ನು ಸಾಕಿ ಕೊಳ್ಳೋಣ ಹಾಲು ಕರೆದುಕೊಳ್ಳೋಣ. ಕುರಿಗಳನ್ನು ಸಾಕೋಣ ಕಂಬಳಿಗಳನ್ನು ಮಾಡಿಕೊಳ್ಳೋಣ. ನಮ್ಮ ಕೆಲಸಕ್ಕೆ ಉಪಯೋಗವಾಗುವುದಾದರೆ ಬೆಕ್ಕು ಮುಂತಾದ ಪ್ರಾಣಿಗಳನ್ನು ಸಾಕಿಕೊಳ್ಳೋಣ. ಆದರೆ ಅವು ಎಲ್ಲಿರಬೇಕೋ ಅಲ್ಲಿರಲಿ, ಅವನ್ನು ಊಟದ ಮನೆಗೆ ಬಿಟ್ಟರೆ ನಾವು ತಿನ್ನುವ ಅನ್ನವು ನಮ್ಮ ಮಕ್ಕಳು ಕುಡಿಯುವ ಹಾಲು ಅವುಗಳ ಪಾಲಾಗುತ್ತವೆ.”

ಈ ಮಾತಿನ ಪ್ರಸ್ತಾಪ ಬಂದಾಗ ಒಬ್ಬ ಅಧ್ಯಾಪಕರು ಹಸು ಎಂದರೆ ಸಂಸ್ಕೃತಿ, ಕುರಿ ಎಂದರೆ ಇಂಗ್ಲೀಷ್, ಬೆಕ್ಕು ಎಂದರೆ ಇತರ ಪಾಶ್ಚಾತ್ಯ ಭಾಷೆಗಳು ಅಂತ ತಿಳಿಯಬೇಕು ಎಂದಿದ್ದರು.

“ನನ್ನ ಕನ್ನಡದ ಅಭಿಮಾನವನ್ನು ಕನ್ನಡದ ಮೇಲಿನ ಮಮತೆಯನ್ನು ಹಿಂದಿಯ ದ್ವೇಷ ಸಂಸ್ಕೃತದ ವೈರ ಎನ್ನಬಹುದು (ಯಾರಾದರೂ) ನನಗೂ ಅಲ್ಪ ಸ್ವಲ್ಪ ಹಿಂದಿ ಪರಿಚಯವಿದೆ. ಅದರ ವಿಚಾರವಾಗಿ ಬರೆದಿರುವ ಲೇಖನ ಗ್ರಂಥಗಳ ಪರಿಚಯವಿದೆ. ಅದಕ್ಕಿಂತ ಹೆಚ್ಚಾಗಿ ಸಂಸ್ಕೃತದ ಪರಿಚಯವಿದೆ. ನಾನು ಬರೆದಿರುವ ಲೇಖನಗಳು ಗ್ರಂಥಗಳು ಕನ್ನಡಕ್ಕಿಂತ ಹೆಚ್ಚಾಗಿ ಸಂಸ್ಕೃತ ವಿಷಯಗಳಿಗೆ ಸಂಬಂಧಪಟ್ಟಿದ್ದಾಗಿದೆ.

ಆದರೂ ಕನ್ನಡಿಗರ ಅಭ್ಯುದಯ ದೃಷ್ಟಿಯಿಂದ ಕನ್ನಡಕ್ಕೆ ಪ್ರಥಮ ಸ್ಥಾನ ಬೇಕೆಂದು ಹೇಳುತ್ತೇನೆ, ಪೋಷಣೆ ಬೇಕೆಂದು ಹೇಳುತ್ತೇನೆ.” ಈ ಮಾತುಗಳನ್ನು ಹೇಳಿದ ಶಾಸ್ತ್ರಿಗಳು ಅಚ್ಚಗನ್ನಡಿಗರೆಂದು ನಾವು ನೆನಪಿಡಬೇಕು.

ಕನ್ನಡ ಓದು ಬರಹ ಮಾತು ಕಲಿತು ಕನ್ನಡಿಗರಾಗಬೇಕು. ಅದು ಮುಖ್ಯ ಎಂಬುದನ್ನು ತುಂಬಾ ಸೊಗಸಾಗಿ ಶಾಸ್ತ್ರಿಗಳು ಹೇಳಿದ್ದಾರೆ. ಕನ್ನಡ ಪ್ರೋತ್ಸಾಹ, ಪ್ರಶಸ್ತಿ ಬಹುಮಾನಗಳಿಂದ ಉದ್ದಾರವಾಗದು ಎಂಬ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಂತ ಪ್ರಶಸ್ತಿ ಪ್ರೋತ್ಸಾಹ, ಬೇಕಿಲ್ಲ ಎಂದಲ್ಲ ಆದರೆ ಅದಕ್ಕಿಂತ ಪ್ರಾಶಸ್ತ್ಯ ಆದ್ಯತೆ ಕೊಡಬೇಕಾದ್ದು ಕನ್ನಡ ಕಲಿಕೆಗೆ ಕನ್ನಡ ವಿದ್ಯಾಭ್ಯಾಸಕ್ಕೆ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ.

“ಕನ್ನಡಕ್ಕೆ ಕೊಡುವ ‘ಪ್ರೋತ್ಸಾಹ’ ತುತ್ತು ಭಿಕ್ಷವೆನ್ನುವುದು ಆರೋಗ್ಯ ಸೂಚಕವಲ್ಲ. ಅದು ಅಜೀರ್ಣವಿರುವ ರೋಗಿಗೆ ಉತ್ತೇಜಕವಾದ ಔಷಧಿಯನ್ನು ಕೊಟ್ಟು ಹಸಿವುಂಟು ಮಾಡುವ ಹಾಗೆ, ಅದು ಕೃತಕ ಸ್ಪರ್ಧೆಗಳನ್ನು ಏರ್ಪಡಿಸಿ ಪದಕಗಳನ್ನು ಪಾತ್ರೆಗಳನ್ನು ಕೊಡುವುದು. ಹೀಗೆಯೇ ಗಿಡ ಚೆನ್ನಾಗಿರಲೆಂದು ಅದರ ಒಂದೆರಡು ರೆಂಬೆಗೆ ಸುನೇರಿಯನ್ನು ಅಂಟಿಸಿ ದೀಪಗಳನ್ನು ತಗುಲಿ ಹಾಕಿದ ಹಾಗೆ. \

ಗಿಡವೇ ಹೂ ಬಿಡಬೇಕು. ಜೀವದಿಂದ ಕಳಕಳಿಸಬೇಕು ಆಗ ಒಂದೊಂದು ಎಲೆಯೂ ಹೂವು ಸುನೇರಿಗಿಂತ ದೀಪಗಳಿಗಿಂತ ಸಾವಿರ ಪಾಲು ಸುಂದರ ವಾಗಿರುತ್ತದೆ. ಸಜೀವವಾಗಿರುತ್ತದೆ. ಸ್ವಾಭಾವಿಕವಾಗಿ ಆರೋಗ್ಯ, ದಾರ್ಢ್ಯ, ಸೌಂದರ್‍ಯ ಬರಬೇಕಾದರೆ ಒಂದೂವರೆ ಕೋಟಿ ಕನ್ನಡಿಗರಲ್ಲಿ (ಆಗ) ಒಂದು ಕೋಟಿ ಜನವಾದರೂ ಅಕ್ಷರಸ್ಥರಾಗಿ ಐವತ್ತು ಲಕ್ಷ ಜನವಾದರೂ ವಿದ್ಯಾವಂತರಾಗಿ ಐದು ಲಕ್ಷ ಜನರಾದರೂ ದುಡ್ಡು ಕೊಟ್ಟು ಪುಸ್ತಕ ಪತ್ರಿಕೆಗಳನ್ನು ಕೊಂಡು ಓದುವಂತಾಗಬೇಕು”

ಸಾಮಾನ್ಯವಾಗಿ ನಮ್ಮಲ್ಲಿ ಪದ್ಯ ಬರೆದವರು ಕವಿ, ಗದ್ಯ ಬರೆದರು ಸಾಹಿತಿ ಸಂಶೋಧನೆ ಮಾಡಿದರೆ ವಿದ್ವಾಂಸ, ನಾಟಕ ಬರೆದಾಡಿದರೆ ಕಲಾವಿದ ಎಂದು ಭಾವಿಸುವವರು ಇದ್ದಾರೆ. ಗದ್ಯ ಬರೆವ ಸಾಹಿತ್ಯದಲ್ಲಿ ಕವಿ ಇರುತ್ತಾನೆ ಪದ್ಯ ಬರೆಯುವ ಕವಿಯಲ್ಲಿ ಸಾಹಿತಿ, ಸಂಶೋಧಕ ಇರುತ್ತಾನೆ ಎಂಬುದು ತಿಳಿದ ಮಾತು, ವಿ.ಸೀ., ಕುವೆಂಪು, ಬೇಂದ್ರೆ, ಬಿ‌ಎಂಶ್ರೀ ಮೊದಲಾದವರು ಕವಿಗಳು ಎಂಬುದೆಷ್ಟು ನಿಜವೋ ಅವರು ವಿದ್ವಾಂಸರು ಸಾಹಿತಿಗಳು ಎಂಬುದು ಅಷ್ಟೇ ನಿಜ. ಹೀಗಾಗಿ ಒಬ್ಬರಲ್ಲಿ ಹಲವು ಬಗೆಯ ಪ್ರತಿಭಾ ಶಕ್ತಿಗಳು ಅಡಗಿರುವುದನ್ನು ಕಾಣಬಹುದು. ಆದರೆ ಅದು ದೊಡ್ಡ ಪ್ರಮಾಣದಲ್ಲಿ ಹೊರ ಹೊಮ್ಮಿರುವುದಿಲ್ಲ. ಕೃಷ್ಣಶಾಸ್ತ್ರಿಗಳು ವಿದ್ವಾಂಸರಾದರೂ ಕವಿ ಹೃದಯ ಉಳ್ಳವರು, ಕಾವ್ಯ ಬಲ್ಲವರು, ರಸವತ್ತಾದ ಕಾವ್ಯಾಸ್ವಾದನ ಪ್ರವೀಣರು. ಅವರಲ್ಲಿ ಕವಿತಾ ಶಕ್ತಿ ಇದ್ದರೆ ಅದು ಸಾಕಷ್ಟು ಹೊರಹೊಮ್ಮಲಿಲ್ಲ ಅನ್ನಿಸುತ್ತದೆ. ಅಪರೂಪಕ್ಕೆ ಒಂದೆರಡು ಕಡೆ ಕಾಣಿಸಿರುವ ತುಣುಕುಗಳು ಅವರು ಕವಿತೆ ಬರೆಯ ಬಲ್ಲರು ಎಂಬುದಕ್ಕೆ ಸಾಕ್ಷಿ ಆಗಿದೆ.

೧೯೪೭ ನೇ ಜುಲೈನಲ್ಲಿ ಮೈಸೂರು ವಿಶ್ವವಿದ್ಯಾಲಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸ್ವಾಗತ ಕವನವೊಂದು ಬರೆದಿದ್ದಾರೆ. ಅದರ ಒಂದು ತುಣುಕು ಇಲ್ಲಿದೆ.

ಮೈಸೂರು ಮಕ್ಕಳಿಗೆ ಅರಿವಿನಮೃತವ ಮಾಡಿ
ಸಂಸ್ಥೆ ವಿಶ್ವವಿದ್ಯಾಲಯದ ಸಂತತಂ ಪೋಷಿಸಿದ
ಸಂಸ್ಕೃತದ ಕನ್ನಡದ ಹಿರಿಯಣ್ಣರೇ ಬನ್ನಿ
ಪುಟ್ಟ ಕವಿಗಳೇ ಬನ್ನಿ ದೊಡ್ಡ ಕಾವ್ಯವ ತನ್ನಿ,
ಕನ್ನಡ ಕಂದಗಳೇ ಸಾಹಿತ್ಯ ಕಂದಗಳೇ
ಕವಿತೆಯುಕ್ತಾಂಬಗಳೇ ಕಾವ್ಯ ಮಾಕಂದಗಳೇ
ದಯಮಾಡಿ ತಮಗೆಲ್ಲ ಬಯಸುವೇ ಸ್ವಾಗತವ
ಸುಸ್ವಾಗತವ

ಬಂಕಿಮಚಂದ್ರ ಎಂಬ ಸಮಗ್ರಾವಲೋಕನ ಗ್ರಂಥದಲ್ಲಿ ಬಂಕಿಮರ ಕವಿತೆಗಳನ್ನು ಕುರಿತು ಬರೆಯುವಾಗ ಮೂಲ ಕವಿತೆಗಳನ್ನು ಸರಳ ಪದ್ಯಗಳಾಗಿ ಎ.ಆರ್.ಕೃ ಅನುವಾದಿಸಿದ್ದಾರೆ.

ಮರವನ್ನು ಬೆಳೆಸಿದೆ ಹೆಣ್ಣಿಗಾಗಿ
ಆದರೆ ದೊರೆಯಿತು ಬರೀ ಮುಳ್ಳೇ
ಮದುವೆ ಮಾಡಿಕೊಂಡೆ ಸುಖಕಾಗಿ
ಆದರೆ ದೊರೆಯಿತು ಪೊರಕೆಯ ಸೇವೆ.

ಮೂಲದಲ್ಲಿ ಕವಿತೆಯಲ್ಲಿರುವ ಶ್ಲೇಷಾರ್ಥವನ್ನು ಕನ್ನಡಕ್ಕೆ ತರಲಾಗಿದೆ ಅದನ್ನು ಹೇಗೆ ವಿವರಿಸಿದ್ದಾರೆ.

ಕೊನೆಯ ಸಾಲುಗಳು
ರಾಜನ ಮೇಲೆ ರಾಜನಾದರೆ
ಲಾಟ್ ಸಾಹೇಬನ ಲಾಟ್.

ಇಲ್ಲಿ ಮೊದಲನೆಯ ಲಾಟ್ ಶಬ್ದಕ್ಕೆ ಆಡಳಿತಾಧಿಕಾರಿ (ಗವರ್ನರ್) ಎಂದೂ ಎರಡನೆಯ ಲಾಟ್ ಶಬ್ದಕ್ಕೆ ಹಣೆಯ ಬರಹವೆಂದೂ ಅರ್ಥ ವಿರಬಹುದು-ಮೀರ್‌ಜಾಫರ ಕಾಲದಂತೆ ಎಂದಿದ್ದಾರೆ.

ಆದರೆ ಕವಿತೆಯಲ್ಲಿ ಪ್ರಣಯಿ ಪ್ರಾಣಭಿಕ್ಷೆಗೆ ಹೇಳುವ ನಾಲ್ಕು ಪದ್ಯಗಳನ್ನು ವಿವರಿಸುವಾಗ ಕೆಲವು ಭಾಗವನ್ನು ಹೀಗೆ ರಚಿಸಿದ್ದಾರೆ.

ಮರುಭೂಮಿಯೊಳೊಂದ ಸುಮ
ಸುಗಂಧವಿಡಿದ ಸುಮಾ
ಕಾರಿರುಳೊಳೊಂದೆ ತಾರೆ
ಅಂಧಕಾರ ತುಂಬಿರೆ ಗಗನದೊಳು
ಬೇಸಿಗೆ ಬೇಗೆಯೊಳೊಂದೇ ಸರಸಿ
ವಿಶಾಲ ಪ್ರಾಂತದೊಳಗೆಲ್ಲಾ
ಅನಂತ ಸಾಗರದೊಳಗಣ ತರಣಿ
ರತ್ನ ಸುಶೋಭಿತ ತರಣಿ
ನೀನೂ ಸಂಸಾರದೊಳಂತೆನಗೆ ಪ್ರಿಯೇ.

ಬಂಕಿಮರ ಬರೆದ ಕವಿತೆಗಳಲ್ಲಿ ಕಾದಂಬರಿ ನಡುವೆ ಬರೆದ ಪದ್ಯಗಳಲ್ಲಿ ಒಂದಾದ ವಂದೇ ಮಾತರಂ ಬಂಗಾಳದಲ್ಲಿಯೇ ಅಲ್ಲ ಭಾರತದಲ್ಲಿ ರಾಷ್ಟ್ರಗೀತೆಯಾಯಿತು. ವಂದೇ ಮಾತರಂ ಎಂಬ ಮಾತು ಪಂಚಾಕ್ಷರಿ ಆಗಿ ಅದರ ಉಚ್ಚಾರಣೆಯಲ್ಲೇ ಲಕ್ಷಾಂತರ ಜನ ತನುಮನ ದನಗಳನ್ನು ದೇಶಕ್ಕೆ ಅರ್ಪಿಸಿದರು. ಐತಿಹಾಸಿಕವಾಗಿ ಇಷ್ಟು ಪ್ರಭಾವ ಬೀರಿದ ಕವಿತೆ ಈ ದೇಶದೊಳು ಇನ್ನೊಂದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂಗಳೂರು
Next post ಬೆಸುಗೆ

ಸಣ್ಣ ಕತೆ

 • ಜಂಬದ ಕೋಳಿ

  ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…