ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಅಕ್ಕ ಮತ್ತು ಹೊನ್ನಮ್ಮನನ್ನು ಹೊರತು ಪಡಿಸಿದರೆ ಕನ್ನಡ ಸಾಹಿತ್ಯದ ವಿಶಿಷ್ಟ ಮಹಿಳಾ ಪ್ರತಿಭೆಗಳನ್ನು ಕಾಣಲು ನಾವು ಹೊಸಗನ್ನಡ ಸಾಹಿತ್ಯಕ್ಕೇ ಬರಬೇಕು. ನವೋದಯ ಸಾಹಿತ್ಯದ ಲೇಖಕಿಯರಾದ ನಂಜನಗೂಡು ತಿರುಮಲಾಂಬಾ ಅವರಿಂದ ಪ್ರಾರಂಭವಾದ ಹೊಸಗಾಳಿ ತಿರುಮಲೆ ರಾಜಮ್ಮ, ಕಲ್ಯಾಣಮ್ಮ, ಹೆಚ್.ವಿ. ಸಾವಿತ್ರಮ್ಮ, ಕೊಡಗಿನ ಗೌರಮ್ಮ, ಮೂಕಾಂಬಿಕಮ್ಮ, ಸೀತಾದೇವಿ ಪಡುಕೋಣೆ, ಶ್ಯಾಮಲಾದೇವಿ ಬೆಳಗಾವಕರ್, ಹೆಚ್.ಎಸ್. ಕಾತ್ಕಾಯಿನಿ – ಹೀಗೆ ಕುಡಿವರಿದರೂ ಅಪ್ಪಟ ಹೊಸತನಕ್ಕೆ “ನಮ್ಮ”ದ ವರೆಗೂ ಕಾಯಬೇಕಾಯಿತು. ಏಕೆಂದರೆ ಹೊಸ ಗಾಳಿಗೆ ತುಡಿಯುತ್ತಿದ್ದ ನವೋದಯದ ಈ ಲೇಖಕಿಯರು ಅತ್ತ ಸಂಪ್ರದಾಯವನ್ನೂ ಬಿಡಲಾರದೆ ಇತ್ತ ಪ್ರಗತಿಗೆ ಬೆನ್ನು ತೋರಿಸಲೂ ಆಗದೇ ದಂದ್ವ ಮನೋಭಾವದಿಂದ ನರಳಿರುವುದನ್ನು ಅವರ ಸಾಹಿತ್ಯ ಕುರಿತ ಪ್ರತ್ಯೇಕ ಅಧ್ಯಯನಗಳಿಂದ ಈಗ ಸಮೀಕ್ಷಿಸಲಾಗಿದೆ. ಒಂದೇ ಒಂದು ಉದಾಹರಣೆ ಕೊಡಬಹುದಾದರೆ, ರಾಜಾರಾಂ ಮೋಹನ್‌ರಾಯ್ ಪ್ರತಿಪಾದಿಸಿದ ಪ್ರಗತಿಪರ ಧೋರಣೆಗೆ ಸ್ಪಂದಿಸಿದ ಬ್ರಿಟಿಷ್ ಸರ್ಕಾರವು ಬಾಲ್ಯವಿವಾಹವನ್ನೂ ಸತೀ ಪದ್ಧತಿಯನ್ನೂ ನಿಷೇದಿಸುವುದರೊಂದಿಗೆ ವಿಧವಾ ವಿವಾಹವನ್ನು ಪ್ರೋತ್ಸಾಹಿಸಿತು. ಈ ಸುಧಾರಣೆಯ ಅರಿವಿದ್ದ ಈ ಲೇಖಕಿಯರು ವಿಧವಾ ವಿವಾಹವನ್ನು ವಸ್ತುವಾಗಿ ಎತ್ತಿಕೊಂಡರೂ ಸಾಕಾರತ್ಮಕ ಪರಿಣಾಮ ಮೂಡಿಸುವಲ್ಲಿ ಸೋಲುತ್ತಾರೆ. ‘ನಭಾ’ ಎಂಬ ತಮ್ಮ ಕಾದಂಬರಿಯಲ್ಲಿ ವಿಧವೆಗೆ ಮರುವಿವಾಹ ಬೇಕೆಂದು ಉದ್ದಕ್ಕೂ ಪ್ರತಿಪಾದಿಸುವ ತಿರುಮಲಾಂಬಾ ಕೊನೆಗೆ ‘ಬೇಡ’ ಎಂದು ಬಿಡುತ್ತಾರೆ. ಇದೇ ವಸ್ತುವನ್ನು ಕೈಗೆತ್ತಿಕೊಳ್ಳುವ ಕಲ್ಯಾಣಮ್ಮ ತಮ್ಮ “ನಿರ್ಭಾಗ್ಯ ವನಿತೆ” ಎಂಬ ಕತೆಯಲ್ಲಿ ವಿಧವೆಗೆ ಮರುವಿವಾಹ ಮಾಡಿಸಿಬಿಡುತ್ತಾರೆ. ಆದರೆ ಅದಕ್ಕೆ ಮೊದಲೊಮ್ಮೆ ಅಂದಿನ ಸುಧಾರಣಾ ವಾದಿಗಳೊಂದಿಗೆ ಕಥಾನಾಯಕನ ಚರ್ಚೆಯನ್ನೇರ್ಪಡಿಸುತ್ತಾರೆ. ನಂತರದ ತಲೆಮಾರಿನಲ್ಲಿ ಬರುವ ತ್ರಿವೇಣಿ ಮತ್ತು ಉಷಾ ನವರತ್ನರಾಂ ಕೂಡ ವಿಧವಾ ವಿವಾಹವನ್ನು ಸುಲಲಿತವಾಗಿ ಆಗಗೊಡಿಸುವುದಿಲ್ಲ. ಅವರ “ದೂರದ ಬೆಟ್ಟ” ಮತ್ತು “ಆಂದೋಲನ” “ಆಶ್ವಾಸನ”ಗಳಿಗಿಂತ “ಘಣಿಯಮ್ಮ”ನಲ್ಲಿ ಎಂ.ಕೆ. ಇಂದಿರಾ ತರುವ ದಾಕ್ಷಾಯಣಿಯ ಪಾತ್ರ ಹೆಚ್ಚು ಪ್ರಗತಿಪರವಾಗಿದೆ.
ಹೀಗೆ ತಲೆಮಾರಿನಿಂದ ತಲೆಮಾರಿಗೆ, ದಶಕದಿಂದ ದಶಕಕ್ಕೆ ಪ್ರಗತಿ ಪರತೆಯ ಕಡೆಗೆ ಹೆಜ್ಜೆ ಹಾಕುತ್ತಾ ಬಂದ ಈ ಧೋರಣೆಯು ‘ನವೋದಯ’ವನ್ನು ತಿರಸ್ಕರಿಸುತ್ತಾ ಬಂದ ‘ನವ್ಯ’ದ ವೇಳೆಗೆ ಒಮ್ಮೆಲೇ ಸ್ಫೋಟಗೊಂಡಿದ್ದು “ವೀಣಾ ಎಲಬುರ್ಗಿ” ಅವರ “ಮುಳ್ಳುಗಳು” ಕತೆಯಲ್ಲಿ. ‘ಸಂಕ್ರಮಣ’ದಲ್ಲಿ ಪ್ರಕಟವಾದ ಈ ಕತೆಯು ತನ್ನ ಹೊಸತನದಿಂದಾಗಿಯೇ ಎಲ್ಲರ ಗಮನಸೆಳೆದು ಕನ್ನಡ ಕಥಾ ಲೋಕದಲ್ಲೊಂದು ಛಾಪು ಮೂಡಿಸಿತು. “ನವೋದಯದ”ದಲ್ಲಿ ಕಥೆ, ಕಾವ್ಯಗಳಿಗೆ ಸೀಮಿತಗೊಂಡಿದ್ದ ಕನ್ನಡ ಸಾಹಿತ್ಯ ನವ್ಯ’ದಲ್ಲಿ ನಾಟಕಕ್ಕೂ ಕೈ ಚಾಚಿತು. ಅದು ಭಾಷೆಗೆ ನೀಡಿದ ಕಾಯಕಲ್ಪ ಚಿಕಿತ್ಸೆ, ಛಂದಸ್ಸು, ಲಯಗಳನ್ನು ನಿರಾಕರಿಸಿದ ರೀತಿ, ಸಮಾಜವನ್ನು ದೂರ ಸರಿಸಿದ ವ್ಯಕ್ತಿ ಕೇಂದ್ರಿತ ಪ್ರಜ್ಞೆ ಮತ್ತು ವಿಕ್ಷಿಪ್ತತೆ – ಇವು ಸುಮಾರು ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯವನ್ನು ಆಳಿದ್ದು ಮತ್ತು ಅಭಿವ್ಯಕ್ತಿಯನ್ನು ಅಭಿರುಚಿಯನ್ನು ರೂಪಿಸಿದ್ದು ಸುಳ್ಳಲ್ಲ. ದಲಿತ-ಬಂಡಾಯ ಚಳವಳಿ ಪ್ರಾರಂಭವಾಗಿ ‘ನವ್ಯ’ದ ಕಾಲ ಮುಗಿದರೂ ಅದು ಮೂಡಿಸಿದ ಅಂತಸ್ಸತ್ವ, ರೂಪಿಸಿದ ಲೇಖಕ ವರ್ಗದ ಸಾಲು, ಕನ್ನಡ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿ ಇಂದಿಗೂ ನವ್ಯ ಪ್ರಜ್ಞೆಯಾಗಿ ಉಳಿದಿದೆ. ಲೇಖಕಿಯಾಗಿ ಈ ಪ್ರಜ್ಞೆಯ ಅತ್ಯುತ್ತಮ ಪ್ರತಿನಿಧಿಯಾಗಿ ವೀಣಾ ಕಾಣಿಸುತ್ತಾರೆ. ‘ನವ್ಯ’ದ ಬಗ್ಗೆ ಮಾತನಾಡುವಾಗ ವೀಣಾ ಮತ್ತು ರಾಜಲಕ್ಷ್ಮಿ ಎನ್. ರಾವ್ ಇವರಿಬ್ಬರ ಹೆಸರು ಹೇಳದೇ ಹೋದರೆ ತಪ್ಪಾಗಿಬಿಡುತ್ತದೇನೋ ಎಂಬ ಭಯವನ್ನು ಉಂಟುಮಾಡುವಂತಹ ಒಂದು ಪರಿಸ್ಥಿತಿ ವಿಮರ್ಶಕರಲ್ಲಿ ಉಂಟಾಯಿತು ಎಂದು ಡಾ. ವಿಜಯಾ ಹೇಳುವುದು ಈ ಅರ್ಥದಲ್ಲಿಯೇ.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದ ವೀಣಾ ಶಾಂತೇಶ್ವರ ಅವರು “ಮುಳ್ಳುಗಳು”, “ಕೊನೆಯ ದಾರಿ”, “ಕವಲು”, “ಹಸಿವು”, “ಬಿಡುಗಡೆ” ಎಂಬ ಐದು ಕಥಾ ಸಂಕಲನಗಳ ಮೂಲಕ ಇಡೀ ಕರ್ನಾಟಕದಲ್ಲಿ ಹೆಸರಾದ ವೀಣಾ ಅವರ ಮೊದಲ ಒಲವು ಸಣ್ಣ ಕತೆಯೇ. ಹೀಗಾಗಿ “ಮಹಿಳೆಯರ ಸಣ್ಣ ಕತೆಗಳು”, “ಮಹಿಳಾ ಅಧ್ಯಯನ”, “ಸ್ವಾತಂತ್ರೋತ್ತರ ಕಾಲದಲ್ಲಿ ಲೇಖಕಿಯರ ಸಣ್ಣ ಕತೆಗಳು” ಎಂಬ ಪ್ರಾತಿನಿಧಿಕ ಸಂಕಲನಗಳನ್ನು ಅವರು ಸಂಪಾದಿಸಿದ್ದಾರೆ. ಅವರ ಎಲ್ಲ ಕತೆಗಳ ಕೇಂದ್ರ ವಸ್ತು ಮಹಿಳೆ ಮತ್ತು ಅವಳ ಶೋಷಣೆ. ಆದ್ದರಿಂದ ಅವರ ಇತರ ಕೃತಿಗಳಲ್ಲಿ “ಮಹಿಳಾ ಸಾಹಿತ್ಯದಲ್ಲಿ ವೈಚಾರಿಕತೆ”, “ಕನ್ನಡ ಸಣ್ಣ ಕತೆಗೆ ಮಹಿಳೆಯರ ಕೊಡುಗೆ”, “ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ”, “ಲೇಖಕಿಯ ಸಮಸ್ಯೆಗಳು”, “ಕನ್ನಡ ಲೇಖಕಿಯರ ಸಾಧನೆ ಸಾಧ್ಯತೆಗಳು”, “ಮಹಿಳಾ ಜಾಗೃತಿ”, “ಮಹಿಳೆಯರು ಮತ್ತು ಪೊಲೀಸರು” ಮತ್ತು “ಮಹಿಳಾ ಸಾಮಾಜಿಕ ಕಾರ್ಯಕರ್ತೆಯರು” – ಇವು ಸೇರುತ್ತವೆ. ಇವಲ್ಲದೇ ಅವರು “ಅಭಿವ್ಯಕ್ತಿ”, “ಹೊಸ ಹೆಜ್ಜೆ” ಎಂಬ ಪುಸ್ತಕಗಳನ್ನೂ ಸಂಪಾದಿಸಿ, ಆಕಾಶವಾಣಿಗಾಗಿ ಹದಿನೈದು ನಾಟಕಗಳನ್ನು ಬರೆದಿದ್ದಾರೆ. “ಅದೃಷ್ಟ” ಎಂಬ ಹೆಸರಿನಲ್ಲಿ ಅಮೆರಿಕನ್ ಇಂಗ್ಲಿಷ್ ಕತೆಗಳನ್ನೂ, “ನದೀ ದ್ವೀಪಗಳು” ಎಂಬ ಹೆಸರಿನಲ್ಲಿ ಆಜ್ಞೆಯರ ಹಿಂದೀ ಗ್ರಂಥವನ್ನೂ ಅನುವಾದಿಸಿದ್ದಾರೆ.
ತಮ್ಮ ‘ಗಂಡಸರು’ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವೀಣಾ ಅನಂತರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸದೋದಿತಾ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಪಡೆದಿದ್ದಾರೆ.
ಇವರ ಪ್ರಾರಂಭದ ಎಲ್ಲ ಕತೆಗಳಿಂದ ಹಿಡಿದು ‘ಬಿಡುಗಡೆ’ ಕತೆಯವರೆಗೂ, ಎಲ್ಲ ಕತೆಗಳಲ್ಲೂ ಒಬ್ಬ ಸ್ಥಾಯೀ ಕಥಾನಾಯಕನಿರುತ್ತಾನೆ. ಅವನು ನಾಯಕಿಯ ಎಲ್ಲ ಭಾವನೆಗಳಿಗೂ ಸ್ಪಂದಿಸಲು ಅನರ್ಹನಾದವನು. ಪರಿಪೂರ್ಣನಲ್ಲದವನು. ಹೀಗಾಗಿ ಅವನಿಂದ ಭ್ರಮನಿರಸನ ಹೊಂದಿದ ನಾಯಕಿ ಬದುಕಿನಲ್ಲಿ ಬೇರೊಂದು ತಿರುವನ್ನು ಆಯ್ದುಕೊಳ್ಳುತ್ತಾಳೆ. ಅಲ್ಲೂ ಅವಳು ಸುಖವನ್ನೇ ಕಾಣುತ್ತಾಳೆ ಎಂದೇನೂ ಅಲ್ಲ. ಆ ಕಾಲಕ್ಕೆ, ನವ್ಯದ ಪ್ರಾರಂಭದ ಕಾಲಕ್ಕೆ, ನವೋದಯದ ಸುಖೀ ಕೌಟುಂಬಿಕ ಬದುಕಿನ ಕನಸುಗಳಿಗೆ ವಿರುದ್ಧವಾಗಿ ವಿವಾಹೇತರ ಸಂಬಂಧಗಳು, ವಿವಾಹ ಪೂರ್ವ ಸಂಬಂಧಗಳು, ಮದುವೆಯಿಲ್ಲದೇ ಮಗುವನ್ನು ಪಡೆಯುವ “ಕೊನೆಯ ದಾರಿ” ಕತೆಯ ನಾಯಕಿಯ ನಿರ್ಧಾರ, ಇವು ರೋಚಕವಾಗಿ ಕಂಡವು. [ನಾವು ಎಂ.ಎ. ತರಗತಿಯಲ್ಲಿದ್ದಾಗ ಇವರ ಇಂತಹ ಕತೆಗಳನ್ನು ಓದಿ, ನಮ್ಮನ್ನೇ ನಾಯಕಿಯ ಸ್ಥಾನದಲ್ಲಿ ಕಲ್ಪಿಸಿಕೊಂಡು ಸಂಭ್ರಮಿಸಿದ್ದೂ ಉಂಟು]. ಪ್ರಾರಂಭದ ಅನೇಕ ಕತೆಗಳನ್ನು ಈ ಜಾಡಿನಲ್ಲೇ ಬರೆದ ವೀಣಾ ‘ನವ್ಯ’ದ ಕಾಲ ಮುಗಿದ ನಂತರವೂ ನವ್ಯದ ಆಶಯವನ್ನು ಒಳಗಿಟ್ಟುಕೊಂಡ ನವೋತ್ತರ ಪಂಥದ ಕತೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ತುಂಬಾ ಮುಖ್ಯವಾದ ಎರಡನ್ನು ಇಲ್ಲಿ ಪ್ರಸ್ತಾಪಿಸಬಹುದೆಂದು ತೋರುತ್ತದೆ. ‘ಬಿಡುಗಡೆ’ ಕತೆಯ ನಾಯಕಿಯ ಗಂಡ ಸತ್ತಿದ್ದಾನೆ. ಅದಕ್ಕಾಗಿ ಅವಳು ದುಃಖಿಸುತ್ತಿದ್ದಾಳೆಂದು ಮನೆಯವರೆಲ್ಲಾ ಭಾವಿಸಿದ್ದಾರೆ. ಆದರೆ ಅವನು ತನ್ನ ಒಂದೊಂದೇ ಕನಸುಗಳನ್ನು ಕೊಂದುದನ್ನು ಅವಳು ಎಳೆ ಎಳೆಯಾಗಿ ನೆನೆಯುತ್ತಿದ್ದಾಳೆ. ಅವನು ಸತ್ತುದರಿಂದ ತನ್ನ ಬದುಕಿಗೆ ಬಿಡುಗಡೆ ಸಿಕ್ಕಿತೆಂದು ಅವಳು ಭಾವಿಸುತ್ತಾಳೆ. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯ ಒಳಗಡೆ ಗಂಡ, ಮುತ್ತೈದೆತನ, ಅರಿಶಿನ ಕುಂಕುಮ. ಇವುಗಳಿಗಿರುವ ಸ್ಥಾನದ ಹಿನ್ನಲೆಯಲ್ಲಿ ವೀಣಾ ಅವರ ಈ ಕತೆ ತುಂಬಾ ಮುಖ್ಯವಾಗಿ ವಿವಾಹಿತ ಮಹಿಳೆಯರ ಅನಾವರಣವನ್ನು ಕಲಾತ್ಮಕವಾಗಿ ಮಾಡುತ್ತದೆ. ಈ ಆಶಯಕ್ಕೆ ತೀರಾ ವ್ಯತಿರಿಕ್ತವಾದ “ಕನಸುಗಳು ಒಡೆಯುತ್ತವೆ” ಕತೆಯಲ್ಲಿ ಒಡೆಯನ ಮನೆಯಲ್ಲಿ ಕೆಲಸಕ್ಕಿದ್ದ ಹುಡುಗಿ ಕಸ ಗುಡಿಸುವಾಗ ಬಟ್ಟೆ ಒಗೆಯುವಾಗ ಅವನ ಮೋಹದ ಬಲೆಯಲ್ಲಿ ಬಿದ್ದು ಅವನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನಿಗೆ ಮದುವೆಯಾಗಿ ಮಕ್ಕಳಾಗಿ, ಮೊಮ್ಮಕ್ಕಳಾಗಿ ಅವನು ಸತ್ತಾಗಲೂ ಇವಳ ಮೋಹ ಅಳಿಯುವುದಿಲ್ಲ. ಅವನ ಹಳೆಯ ಬಟ್ಟೆಯನ್ನು ಎದೆಗಪ್ಪಿಕೊಂಡು ಅವನ ಗೋರಿಯ ಬಳಿ ಅಳುತ್ತಾ ಕುಳಿತ ಹಣ್ಣು ಮುದುಕಿಯ ಚಿತ್ರದೊಂದಿಗೆ ಕತೆ ಮುಗಿಯುತ್ತದೆ.
ನಗರ ಕೇಂದ್ರಿತ ವಿವರಗಳಿಗೆ ಕಟ್ಟುಬಿದ್ದ ವೀಣಾ ಅವರ ಕತೆಗಳಲ್ಲಿ ಗ್ರಾಮೀಣ ಬದುಕಿನ ಸೂಕ್ಷ್ಮ ಎಳೆಗಳು ಇಲ್ಲವಾಗುತ್ತವೆ. ಹಾಗಾಗಿಯೇ ಬದುಕಿನ ಎಲ್ಲ ಮುಖಗಳ ಸಂಕೀರ್ಣತೆ ಮಾಯವಾಗಿ ಬರೀ ಕಪ್ಪು-ಬಿಳುಪಿನ ಪಾತ್ರಗಳನ್ನು ಅವರು ಚಿತ್ರಿಸುತ್ತಾರೆ. ಇವರ ಎಲ್ಲ ನಾಯಕರೂ ಕೆಟ್ಟವರೇ ಆಗಿ ವಿಜೃಂಭಿಸುವುದರ ಮೂಲಕ ಸ್ತ್ರೀ ವಾದದ ಒಂದು ಅತಿರೇಕವಾದ ಪುರುಷದ್ವೇಷ ಅವರ ಕತೆಗಳಲ್ಲಿ ಎದ್ದು ತೋರುತ್ತದೆ. ಈ ಹಿನ್ನೆಲೆಯಲ್ಲಿ ಸ್ತ್ರೀವಾದದ ಅಬ್ಬರದ ಚೌಕಟ್ಟಿಲ್ಲದೆಯೇ ಸ್ತ್ರೀ ಸಂವೇದನೆಯನ್ನು ನವಿರಾಗಿ ಕಲಾತ್ಮಕವಾಗಿ ಮೈಗೂಡಿಸಿಕೊಂಡ ನೇಮಿಚಂದ್ರ, ನಾಗವೇಣಿ ಮತ್ತು ವೈದೇಹಿಯವರ ಕತೆಗಳು ಪರಿಪೂರ್ಣತೆಯ ಅಂಚನ್ನು ಮುಟ್ಟುತ್ತವೆ. ವಿವಾಹೇತರ ಸಂಬಂಧವನ್ನೇ ಚಿತ್ರಿಸುವ ನೇಮಿಚಂದ್ರ ಅವರ “ಕಳೆಯಬೇಕಿದೆ ನಿಮ್ಮೊಂದಿಗೆ ಒಂದು ಶ್ಯಾಮಲ ಸಂಜೆ ಮತ್ತು ನಾಗವೇಣಿಯವರ “ಗಾಳ” ಕತೆಗಳು ರೋಚಕತೆಗೆ ಬದಲಾಗಿ ಅನುಕಂಪ ಮೂಡಿಸುವಲ್ಲಿ ಗೆಲ್ಲುತ್ತವೆ. ವೈದೇಹಿಯವರ ಎಲ್ಲ ಕತೆಗಳೂ ಈ ಸಾಲಿಗೆ ಸೇರುತ್ತವೆ. ಇತ್ತೀಚೆಗೆ ಬರೆಯುತ್ತಿರುವ ಮಿತ್ರಾ ವೆಂಕಟರಾಜ್, ತುಳಸೀ ವೇಣುಗೋಪಾಲ್ ಮತ್ತು ಗಂಗಾ ಸಾದೇಕಲ್ ಕೂಡ ಕಪ್ಪು ಬಿಳುಪಿನ ಚಿತ್ರ ಕೊಡುವುದರಿಂದ ಪಾರಾಗುತ್ತಾರೆ. ಮೊದಲು ಹೀಗೆ ಬರೆಯುತ್ತಿದ್ದ ತ್ರಿವೇಣಿ ನೆನಪಾಗುತ್ತಾರೆ ಮತ್ತು ಲೇಖಕರು ನಿರ್ಮಿಸಿದ ಪಾತ್ರಗಳೂ ಅನೇಕ ವೇಳೆ ಈ ದೋಷಕ್ಕೆ ಸಿಲುಕುತ್ತವೆ.
ಆದರೂ ನವೋದಯದ ಹುಸಿ ಗಾಂಭೀರ್‍ಯ ಮತ್ತು ಆದರ್ಶದ ಭ್ರಮೆಗಳನ್ನು ಮುರಿದದ್ದು ಮತ್ತು ಸ್ತ್ರೀವಾದ ಎಂಬ ಪದವು ಕನ್ನಡ ಸಾಹಿತ್ಯವನ್ನು ಪ್ರವೇಶಿಸದೇ ಇದ್ದ ಕಾಲದಲ್ಲಿ ತೀವ್ರ ಸ್ತ್ರೀ ಸಂವೇದನೆಯನ್ನು ಕತೆಗಳ ಮೂಲಕ ಪ್ರತಿಪಾದಿಸಿದ್ದು ವೀಣಾ ಅವರ ಸಾಧನೆಯಾಗಿದ್ದು ಕನ್ನಡ ಕಥಾ ಸಾಹಿತ್ಯದಲ್ಲಿ ಅವರಿಗೊಂದು ದೊಡ್ಡ ಸ್ಥಾನವಿದೆ.
ಪ್ರಾಸಂಗಿಕವಾಗಿ ರಾಜಲಕ್ಷ್ಮಿ ಎನ್. ರಾವ್ ಅವರ ಹೆಸರನ್ನು ಇಲ್ಲಿ ಪ್ರಸ್ತಾಪಿಸಬಹುದೆಂದು ನನಗೆ ತೋರುತ್ತದೆ. “ಆವೇ ಮರಿಯಾ” ಎಂಬ ಕತೆಯಿಂದ ಪ್ರಸಿದ್ಧಿಗೆ ಬಂದ ಇವರೂ ವೀಣಾ ಅವರಂತೆ ನವ್ಯದ ಮೂಲದಿಂದ ಬಂದವರೇ. ಬಿ.ಎಂ.ಶ್ರೀಕಂಠಯ್ಯನವರ ಮೊಮ್ಮಗಳು ಇವರು ಎಂಬ ಅಂಶ ಇವರ ಪಾಲಿಗೆ ಹೆಮ್ಮೆಯ ವಿಷಯವಾಗದೇ ಅದೇ ಒಂದು ವ್ಯಸನವಾಗಿ ಅವರು ಮನೆಯನ್ನೇ ಬಿಟ್ಟು, ಸನ್ಯಾಸಿಯಾದುದು ಒಂದು ದುರಂತ. ಇಲ್ಲದಿದ್ದರೆ “ವೈಶಾಖ ಶುದ್ಧ ಪೂರ್ಣಿಮೆ”, “ವಿಫಲ ದಂತಹ ಸಿನಿಕ ಕತೆಗಳನ್ನೊಳಗೊಂಡ ಅವರ ಸಂಕಲನ ’ಸಂಗಮ’ ಅವರಿಗೊಂದು ಉತ್ತಮ ಪ್ರಾರಂಭವಾಗಿ ನಮ್ಮ ಕಥಾ ಲೋಕದಲ್ಲಿ ಅವರು ಉತ್ತಮ ಸೇರ್ಪಡೆಯಾಗಬಹುದಿತ್ತು. ಈ ಘಟನೆ ವೀಣಾ ಅವರ ಹೆಸರು ಹೆಚ್ಚು ಪ್ರಚಾರವಾಗಲು ಸಹಾಯಕವೂ ಆಯಿತು.
ಮಾಸ್ತಿಯವರಿಂದ ಪ್ರಾರಂಭವಾದ ಆಧುನಿಕ ಕನ್ನಡ ಸಾಹಿತ್ಯದ ಸಣ್ಣಕತೆಗಳ ಧಾರೆ ನವೋದಯದಿಂದ ಮೊದಲು ಮಾಡಿ ನಮ್ಮ ಪ್ರಗತಿಶೀಲ, ದಲಿತ ಬಂಡಾಯವನ್ನು ದಾಟಿ ನವ್ಯೋತ್ತರ ಮತ್ತು ಸ್ತ್ರೀ ಸಂವೇದನೆ ಮುಸ್ಲಿಂ ಸಂವೇದನೆಗಳನ್ನೂ ಒಳಗೊಳ್ಳುತ್ತಿರುವ ಈ ಸಂದರ್ಭದಲ್ಲಿ ತಮ್ಮ ಚಿಂತನಶೀಲತೆ, ತೀವ್ರ ಸಂವೇದನೆ ಮತ್ತು ಅಭಿವ್ಯಕ್ತಿ ಕ್ರಮದಿಂದಾಗಿ ವೀಣಾ ಶಾಂತೇಶ್ವರ ಅವರು ವಿಮರ್ಶಕರನ್ನೂ ಸಹೃದಯರನ್ನೂ ಹೆಚ್ಚು ಸೆಳೆದ ಕತೆಗಾರ್ತಿ.
*****
“ಪ್ರಜಾ ಸಾಹಿತ್ಯ” ಮಾಸಪತ್ರಿಕೆಗಾಗಿ ಬರೆದ ಲೇಖನ.