ನನ್ನೊಡಲ ತುಂಬ
ನೋವಿನ ಧ್ವನಿಗಳು, ಚೀತ್ಕಾರಗಳು.
ಉಸಿರುಗಟ್ಟಿ ಸಾಯುತ್ತಿರುವ
ಹತಾಶ ಕನಸುಗಳು
ಹೆಡೆಬಿಚ್ಚಿ ಹೊಗೆಯಾಡುವ
ಬುಸುಗುಡುವ ಬಯಕೆಗಳು,
ಬಾಡಿ ಮುದುಡಿ –
ಕಮರಿ ಕರಕಾರಿ
ಭಸ್ಮವಾದ ಚಿಗುರುಗಳು –
ನಿನ್ನ ಕಾಲಡಿ ಸಿಕ್ಕು –
ಬದುಕು ಮರಮರ ಎನುತ್ತಿದೆ.

ನಿನ್ನ ದಟ್ಟ ಕಡು
ಕಪ್ಪು ಛಾಯಿಯ
ಅಡಿಯಲ್ಲಿ ನುಚ್ಚುನೂರಾದ
ನನ್ನ ಆಶಾ ಗೋಪುರಗಳು
ನನ್ನ ನಿಟ್ಟುಸಿರು
ಹೊಗೆಯಾಗಿ ಕಪ್ಪನೆ
ಮೋಡವಾಗಿ
ಆಗಸದ ತುಂಬಾ
ಕತ್ತಲೋ ಕತ್ತಲು
ಭೀಕರ ಕತ್ತಲು
ಸುತ್ತ ಮುತ್ತಲೂ,
ಕಾಲಗರ್ಭದ ಹೊಟ್ಟೆ
ಸೀಳಿಕೊಂಡು,
ಅಗೋ ಬರುತ್ತಿದೆ
ಮಿಂಚು,
ಆಗಸದ ತುಂಬಾ ಈ
ಗುಡುಗು ಸಿಡಿಲು
ಮಿಂಚೋ ಮಿಂಚು.
*****