೧  (ಹಾಳಾದ ರೈತನು ಹೊಲವನ್ನು ಕೋರಿಗೆ ಕೇಳುವನು.)
ಪೇಳುವುದಾರಿಗೆ ಗೋಳನ್ನು!
ಕೇಳುವ ಜನರನು ನಾ ಕಾಣೆ !!
ತಿರೆಯೊಳು ಸಿರಿಯಂ ಬೆರೆತಿಹರು
ಮಲೆತಿಹ ಮದಗಜದಂತಿಹರು
ತುಳಿಯುತ ಒಕ್ಕಲ ಮಕ್ಕಳನು
ಗಳಪುತ ಸೆಳೆಯುತ ಭೂಮಿಯನು
ಒಕ್ಕಲ ಮಕ್ಕಳು ಹೆಕ್ಕಳದೆ
ಕಳೆಯುವ ಬಾಳುವೆ ಬೈತಿಹುದು
ನೇಸರ ಬೇಗೆಗೆ ಬಳಲದಿಹ
ಕಾಯವು ಕೊರಗಿತು ಸಿರಿಸೆರೆಗೆ
ಹಳ್ಳಿಯ ಪಳ್ಳಿಯ ಸುಖಜನವು
ಸಾಲದ ಶೂಲದ ನೆಳಲಲ್ಲಿ
ನೆಲಸಲು ನೆಲವೇ ಕಾಣದಿರೆ
ಹೊಟ್ಟೆಯ ಬಟ್ಟೆಯು ತೋರದಿರೆ
ಮನಕದು ಮನ್ನಣೆ ಮಾಡದಿರೆ
ಸಿರಿವನೆ ಸೆರೆವನೆ ಸೇರಿದನು
ತಿರೆಯನ್ನು ಕೋರಿಗೆ ಕೋರಿದನು
ಪೇಳುಪುದಾರಿಗೆ ಗೋಳನ್ನು !
ಕೇಳುವ ಜನರನು ನಾಕಾಣೆ !!
೨ (ಹೊಲದ ಒಡೆಯರು ಒಕ್ಕಲಿಗನಿಗೆ ಹೇಳುವ ಮಾತು)
ಒಡೆಯನು ಒಡತಿಯು ಸಡಗರದೆ
ಬಿಡಿಬಿಡಿ ಮಾತಿನ ಉಡುಪಿನಲಿ
“ಕೊಡುವದು ಕೋರಿಗೆ ಕಡುಕಷ್ಟ
ಕೊಟ್ಟೆವು ಹೊಲಗಳ ಲಾವಣಿಗೆ
ಉಳಿದಿಯ ಹೊಲಗಳ ಮಾತುಗಳ
ತೆಗೆಯಲು ಬಗೆಯದು ಬಾರದಿದೆ
ಊಳಿಗ ಬಳಗವು ಬಳಸುತಿದೆ
ತಳೆಯಲು ಹೊಲವನ್ನು ಹಲಬುತಿದೆ
ಚಣದೊಳು ಜನಗಣ ಮುಗುವರಿದು
ಲಾವಣಿಗಲೆಯುವ ಬಗೆಯನ್ನು
ಮಾಣದೆ ಕಾಣುವೆ ಮೌನವಿಡು
ಮೀರಿದ ಗೇಣಿಯ ಮಾತಲ್ಲ
ಮಾತಿನ ಮಲ್ಲರು ನಾವಲ್ಲ
ಸಂತೆಯ ಹೊಂಚಿನ ಮಾತಲ್ಲ
ನಡೆ ನಡೆ ಬಿಡು ಬಿಡು ಹೊಲವನ್ನು
ಕೊಡುವೆವು ಬಿಡದಲೆ ಎನಿಬರಿಗೊ
ಸಲುವಳಿಯಾದರೆ ಬಳಿಸಾರು
ಚೆಲುವಿನ ಹೊಲವನು ಸಲುಗೆಯೊಳು
ಲಾವಣಿಯೋಲೆಯ ಲಕ್ಷಣದ
ಮೇಳದ ಮಾತನು ಬಳಸದಲೆ
ಆಳಿನ ಹೋಳಿನ ಹದವರಿತು
ಬಿಟ್ಟಿಯ ಬಿಡಯವ ಬೈತಿಡದ
ಬಿಡದಿರು ಹಿಡಿದಿಹ ಭೂಮಿಯನು
ನೋಡುವೆ ಸಮಯವ ಸಂದರಿತು
ಗೇಣಿಗೆಯಾಣೆಯ ಮಾಡದಿರು
ನ್ಯಾಯದ ಸಹನಕೆ ಸೆಳೆಯದಿರು”
ರೈತ:-
ಗೇಣಿಗೆ ಗೋಣನು ಕಟ್ಟಿದನು
ಮಾರಿಯ ಮೋರೆಯ ಮೆಟ್ಟಿದನು
ಪೇಳುಪುದಾರಿಗೆ ಗೋಳನ್ನು!
ಕೇಳುವ ಜನರನು ನಾಕಾಣೆ !!
ಮೆಲುನುಡಿ ಬಿರುನುಡಿ ಬಿಡುವಿನಲಿ
ನೀಡಿದ ಬೇಟದ ಬಲೆಯಲ್ಲಿ
ಎರೆಯನು ಸೇರಿಸೆ ರೈತನನು
ಮರಳಿದ ಮನದನುತಾಪದಲಿ
ಮುಂದಿನ ಬೆಳೆಯನು ಮುಡುಪಿಟ್ಟು
ಇಂದಿನ ಕಾಳಿನ ಇರ್ಮಡಿಗೆ
ತಂದುಣ್ಣುವಸೊಗ ಬಗೆಬಗೆದು
ಸಂದಿತು ಸಮಯವು ಎಂದೆನದೆ
ಇಂದಿನ ಸಾವನು ಮುಂದೊತ್ತಿ
ಒ೦ದಕೆ ಎರಡನು ಬರೆದಿತ್ತ
ಮರುಗುವ ರೈತನ ನೋಡತ್ತ
 X  X  X  X
ಬಾಳಿಕೆ ಬಾರದ ಆವುಗಳು
ಬಾಳಿನ ಕೊರಳನು ಕೊಯ್ಯುತಿರೆ
ತುರುಗಳ ತರುತಿಹ ಧನನಿಧಿಗೆ
ತರಳನ ತರಳೆಯ ಲಗುನಕ್ಕೆ
ತನ್ನಯ ಹೊಲವನು ಅಡವಿಟ್ಟು
ನೀಗದ ಸಾಲದ ಹೊರೆಹೊತ್ತು
ತೀರದ ಬಡ್ಡಿಗೆ ಹಣತೆತ್ತು
ಸಾಲದ ಬೇಗೆಗೆ ಬೇಯುತಿಹ
ಕೊನೆಯಲಿ ಹೊಲವನು ಮಾರುತಿಹ
ಸಾವಿನ ಬರವನು ಬಯಸುತಿಹ
ಮಿಡುಕುವ ರೈತನ ನೋಡಲ್ಲಿ
 X  X  X  X
ಸೈರಣೆಗೊಳ್ಳುವ ಸತಿಮಣಿಯ
ಮುದ್ದಿನ ಮಕ್ಕಳ ಮೈ ಸಿರಿಯ
ಹೊಲಬಿಗೆ ಬಾರೆಯ ಮೈ ಸೊಬಗ
ನಾಣನು ಮುಚ್ಚಲು ಬಟ್ಟೆಗಳ
ಮೇಣದೂ ಕಾಣದೆ ಕೊರಗುತಿಹ
ಹೂಣಿಗ ರೈತನ ಕಾಣಲ್ಲಿ
 X  X  X  X
ಪಡೆದಿಹ ಹಿರಿಯರ ಕೋಟಲೆಗೆ
ಮಡದಿಯ ಮಕ್ಕಳ ಮದ್ದಿ೦ಗೆ
ದೂರದೆ ಇರುತಿಹ ವೈದ್ಯನನು
ಸಾರುತ ಮೊರಯಿದೆ ಹಣವನ್ನು
ಸೂರೆಯ ಗೆಯ್ಯಲು ಬರುತಿಹನು
ಕರುಳಿನ ಪಾಶವ ಬಿಟ್ಟಿಹನು
ಕುಳಿತರೆ ನಿಂತರೆ ದುಡ್ಡಿಹುದು
ದುಡಿಗೆ ಮಾರುವ ಮದ್ದಿಹುದು
ಬಡ್ಡಿಯ ದುಡ್ಡಿಗೆ ಗತಿಯಿಲ್ಲ
ಬಾಳಿನ ಕೂಳಿಗೆ ಮೊದಲಿಲ್ಲ.
ಅದರಿಂ ಕೋಟಲೆ ಕುತ್ತುಗಳ
ತುದಿಮೊದಲಿಲ್ಲದ ತೊಳಲಿಕೆಗೆ
ನರಳುವ ಹೊರಳುವ ಒಕ್ಕಲನು
ನಡೆನಡೆ ನೋಡದೊ ದೂರದಲಿ
X  X  X  X
ಬಾಳಿನ ಗೋಳಿಗೆ ತಲೆತೆಗೆದು
ಸೆಳೆಯದು ಸರಳದು ಎಂದೆನದೆ
ಸಿಟ್ಟಿಗೆ ಬಾರದ ಸತಿಸುತರ
ಮಟ್ಟಿನ ಮಾತಿಗೆ ಸಿಡಿದೆದ್ದು
ಸೆಳೆಯುತ ಸವೆಯುತ ಮನೆಯವರ
ಮಿಡುಕುತ ಮಿಂಚಿದ ಮಾತಿಂಗೆ
ತೊಳಲುವ ಒಕ್ಕಲ ನೋಡಲ್ಲಿ
X  X  X  X
ಹಳ್ಳಿಯ ಮುರುಕರು ಹಳ್ಳಿಗರ
ಸದನದ ಸಿರಿಸಂಪತ್ತುಗಳ
ಸೆಳೆವ ವಕೀಲರ ಹೇಸೆಗಳ
ಸವಿಸವಿ ಮಾತಿನ ಜೋಡಣೆಯ
ಕಲಿಯುತ ಹಳ್ಳಿಗಳಲೆಯುತಲಿ
ಕಲಹವ ಬೀರುತ ಬೆಳ್ನಗೆಯೊಳ್
ನಾಡಲಿ ನಟ್ಟಿಹ ನಂಬುಗೆಯ
ನೆಗೆನೆಗೆದೋಡಿಸಿ ಕದನದಲಿ
ಮಿಗೆಮಿಗೆ ನ್ಯಾಯದ ಸದನದಲಿ
ಬಾಳುವೆ ಬದುಕನು ಬಲಿಗೊಳ್ವ
ಒಕ್ಕಲವ ತ೦ಡ ನೋಡಲ್ಲಿ
X  X  X  X
ಪುರಜನ ವ್ಯಸನವ ಬಳಿಸಾರಿ
ಹರಡುತ ಹಳ್ಳಿಗರನು ಕೂಡಿ
ಹಿಂದಣ ಹಿಡಿತದ ವೆಚ್ಚವನ್ನು
ಮುಂದೆಳದೋಡಿಸಿ ಒಡನಾಡಿ
ನಾಡಿನ ಸಗ್ಗವ ಪಾಳ್ಗೆಯ್ದು
ಬೇಡಿಪ ರೈತನ ನೋಡಲ್ಲಿ
X  X  X  X
ಶಿಕ್ಷಣ ಹೊಂದಿದ ಕೆಲಜನವು
ನೀತಿಯ ನೇಮವ ತೆಗೆದೊಗೆದು
ಸತಿಸುತೆಹಿತೆಯರ ಶೀಲವನು
ಬಿರುದಿಗೆ ಸೂರೆಯ ಗೆಯ್ವವೊಲು
ಬಿರುದಿನ ಸಿರಿಗರ ಸೆಳವಿನೊಳು
ಸತಿ ಸುತೆ ಹಿತೆಯರ ಮಾನವದು
ಮಸಣವ ಕಾಣಲು ಒಲುಮೆಯೊಳು
ಮಿಡುಕುವ ಮಣ್ಣಿನ ಮನುಜನಿಗೆ
ಸದನವ ಸೇರಲು ಸೆರೆಯಾಯ್ತು
ಪೇಳುಪುದಾರಿಗೆ ಗೋಳನ್ನು !
ಕೇಳುವ ಜನರನು ನಾಕಾಣೆ !!
ಸಮತಾವಾದಿಯ ದಿನವೊಲಿದು
ಸಮನಿಸ ಜಂಬೂ ದ್ವೀಪಕದು
ಒಕ್ಕಲ ಸಂಘಗಳೊತ್ತರದ
ಒತ್ತುವ ಬೇಗೆಗೆ ಭೋರ್ಗರೆದು
ಮೊಳೆಯಲು ಬೆಳೆಯಲು ಕಳೆವತ್ತು
ಗಳಿಕೆಯ ಬಾಳಿಗೆ ಬೆಲೆವೆತ್ತು
ಉಚಿತದ ಒಲುಮೆಯ ಶಿಕ್ಷಣದ
ಮುಕುತಿಯ ಮಾರ್ಗವ ಮನಕಿತ್ತು
ಕೀಳ್ಮೇಲೆನ್ನುವ ಭಾವನೆಯ
ಕೇಳಿಯ ಬೇರ್ಗೊಲೆ ಗೆಯ್ಯುತಲಿ
ಬವರದ ಬಯಕೆಯ ಕೂರ್ಮೆಯಲಿ
ಹಾರಿಸಿ ಹಳಿಯುತ ಗೆಮ್ಮೆಯಲಿ
ಜೀವನ ಧರ್ಮವು ನೇಹದಲಿ
ನೆಲಸಿರೆ ನಾಡಿನ ಜನರೆಲ್ಲ
ನಾಡಿನ ಜೀವಿಗೆ ಪಾಡುತಲಿ
ಜೀವಿಯು ನಾಡಿಗೆ ಆಡುತಲಿ
ಮೀಸಲವೀಯುತ ಮನವೊಲಿದು
ಹಳ್ಳಿಯ ಸದನವ ಸುಮನಸರ
ಸದನಕೆ ಸಾಸಿರ್ಮಡಿಮಾಡಿ
ಸಗ್ಗವೆ ಹಿಗ್ಗಿದ ಹಳ್ಳಿಯಿದೊ
ಮುಗ್ಗಿತು ಮೊದಲಿನ ತಾಪವದೊ
ಎನುತಲಿ ಸಾರುತ ಬರುತಿರುವ
ದಿನಗಳ ಬರವನೆ ಹಾರೈದು
ಮರುಗುತ ಮಿಡುಕುತ ಮೈಮರೆದೆ
ಪೇಳುಪುದಾರಿಗೆ ಗೋಳನ್ನು !
ಕೇಳುವ ಜನರನು ನಾಕಾಣೆ !!
*****