(ಬಿ. ಜಿ. ಎಲ್. ಸ್ವಾಮಿಯ ನೆನಪಿಗೆ)

ಹೆಸರು ತಿಳಿಯದ ವಸ್ತುಗಳು ಕಾಣಸಿಕ್ಕಿದರೆ
ಹೆಸರಿಗಾಗಿ ಹುಡುಕುತ್ತೇವೆ.
ಹೆಸರಿಲ್ಲದೆ ಗುರುತಿಸುವುದು
ಗುರುತಿಸದೆ ಕರೆಯುವುದು
ಅಸಾಧ್ಯ.

ಸಾರ್ತೃ ತನ್ನ ಆತ್ಮಕಥೆಯಲ್ಲಿ ಹೀಗನ್ನುತ್ತಾನೆ:
ವಿಶ್ವದ ವಸ್ತುಗಳೆಲ್ಲ ಹೆಸರು ಬೇಡುತ್ತ
ನನ್ನ ಬಳಿ ಬಂದಂತಾಯಿತು.
ಹೆಸರಿಡುವ ಮೂಲಕ ಅವನ್ನೆಲ್ಲ
ನನ್ನದಾಗಿಸಿದೆ ಅಂದುಕೊಂಡಿದ್ದೇನೆ;
ಈ ಭ್ರಮೆಯೊಂದು ಇಲ್ಲದಿರುತ್ತಿದ್ದರೆ
ನಾನು ಬರೆಯುತಿರಲಿಲ್ಲ.

ಬೇಲಿಯ ಆಚೀಚೆ ಬೆಳೆದಿದೆ
ಕಾಡ ಹೂಗಳು,
ಕೆಲವೊಮ್ಮೆ ಅದನ್ನು ಆರಿಸಿ
ನನ್ನ ಕೋಣೆಯಲ್ಲಿ ಇರಿಸಿ ಹೋಗುತ್ತಾಳೆ
ಒಬ್ಬಳು.
ಹೆಸರುಗಳನ್ನು ಮರೆತ ನಾನು
ಅದನ್ನು ನನ್ನದಾಗಿಸುವುದು ಹೇಗೆ?
ರಾತ್ರಿ ಮಲಗಿ ಏಳುವ ಹೊತ್ತಿಗೆ
ಅವು ಉದುರಿ ಹೋಗಿರುತ್ತವೆ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)