ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ ಕಾಣುತ್ತೆ ತನ್ನ ಸಂಬಂಧಿಗಳು ಹಸಿವಿನಿಂದ ಸಾಯ್ತ ಇರೋದು, ಹೀಗೆ ಜನಾಂಗೀಯ ಪ್ರಜ್ಞೆಯನ್ನು ಪಡೆದಾದ ಮೇಲೆ ಆ ಲೇಖಕರಿಗೆ ಜೀವನದಲ್ಲಿ ನೆಮ್ಮದಿ ಮೂಡುವುದು ಬಹುಶಃ ಈ ಸಮಾಜದ ಸಂಕಷ್ಟಗಳು ದೂರವಾದಾಗಲೇ. ಇದು ಸೀಮಿತ ನೆಲೆ. ಇದಕ್ಕೂ ಅತೀತವಾದ ಇಂಡಿಯಾದಂತಹ ರಾಷ್ಟ್ರಗಳಲ್ಲಿ ಇರುವ ಮೌಢ್ಯ, ಬಡತನ, ಅಂಧಾಚರಣೆ, ನಿರುದ್ಯೋಗ, ಅನಕ್ಷರತೆ ಮೊದಲಾದವು ಸಹ ತನ್ನ ದೇಶಕ್ಕೆ ಬದ್ಧನಾದ ಯಾವ ಚಿಂತಕನಿಗೂ ನೆಮ್ಮದಿಯನ್ನು ತರಲಾರದು. ಅಕ್ಷರ ಜ್ಞೆನ ಪಡೆದು ನಮ್ಮ ಸಂಸ್ಕೃತಿ ಮತ್ತು ಅದರ ಪರಂಪರೆಯ ಬಗೆಗೆ ಚಿಕಿತ್ಸಕ ನೋಟವನ್ನು ಬೀರಿದಾಗಲೇ ಬದುಕಿನ ತಿಳಿನೀರು ಕದಡಿ ಬಗ್ಗಡವಾಗುವುದು. ಈ ನಕಾರಾತ್ಮಕ ಸಂಗತಿಗಳು ದೂರವಾಗಿ, ಕನಸಿನ ಸಮಾಜ ನಿರ್ಮಾಣವಾದಾಗಲೇ ಈ ಬಗೆಯ ಪ್ರಜ್ಞೆವಂತನಿಗೆ ನೆಮ್ಮದಿಯೆಂಬುದು ಮರುಕಳಿಸುವುದು. ಅದು ಸಾಧ್ಯವೆ? ಭಾರತದಂತಹ ‘ಗತವೈಭವ’ವನ್ನು ಅರಾಧಿಸುವ ರಾಷ್ಟ್ರಗಳಲ್ಲಿ ಅದು ಇನ್ನೂ ಸಾಧ್ಯವೆ? ಎಂಬ ಪ್ರಶ್ನೆ ಥಟ್ಟನೆ ಮೂಡುತ್ತದೆ. ಅದಕ್ಕೆ ಉತ್ತರವಾಗಿ ಸಾವಿರಾರು ವರ್ಷಗಳಿಂದ ಈ ನೆಲದಲ್ಲಿ ಮೂಡಿದ ಬೆಳಕಿನ ಕುಡಿಗಳು ಅಂತಿಮವಾಗಿ ಬೂದಿಯಾದ ನಿಜದ ಕತೆ ಕಣ್ಮುಂದೆ ತೆರೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ವೈದಿಕ ವಿರೋಧಿ ನೆಲೆಗಟ್ಟಿನಲ್ಲಿ ಪ್ರಗತಿಪರ ಆಶಯ ವ್ಯಕ್ತಪಡಿಸುತ್ತಾ ಬಂದ ಬುದ್ಧ ಈ ದೇಶದ ಮಹಾನ್ ನಾಯಕ, ಸಮಾಜ ಸುಧಾರಕನೆನಿಸಿದರೂ ಅವನು ತತ್ವ ಅನುಷ್ಠಾನದ ವಿಚಾರದಲ್ಲಿ ಯಾವ ನಾಯಕನೂ ಪಡೆಯದ ಹೀನಾಯವಾದ ಸೋಲನ್ನು ಅನುಭವಿಸಿದ. ಅವನ ತರುವಾಯ ಬಂದ ಬಸವಣ್ಣ ಮೊದಲಾದ ವಚನಕಾರರು, ಕಬೀರ, ನಾನಕ, ಚೈತನ್ಯ ಮೊದಲಾದ ಸುಧಾರಕರು, ಕನ್ನಡದ ತತ್ವಪದಕಾರರು…ಆದರೆ ಹಬ್ಬದ ಮರುದಿನಗಳಲ್ಲಿ ಮಾತ್ರವಲ್ಲ ಅವರು ಬದುಕಿದ್ದ ದಿನಗಳಲ್ಲಿಯೇ ಅಮಾವಾಸ್ಯೆ ಕವಿಯಿತು.

ಹೀಗೆ ದೇಶದ ಇತಿಹಾಸದ ಉದ್ದಕ್ಕೂ ಕಾಣಿಸುವ ಪ್ರಗತಿಪರರು ‘ಅಲ್ಪ ಸಂಖ್ಯಾತರು’ ಎಂಬುದು ಗಮನಾರ್ಹ ಸಂಗತಿ. ಇದರ ಜೊತೆಗೆ ತಮ್ಮ ಕಾಲಗಳಲ್ಲಿಯೂ ತನ್ನ ವಿಚಾರಗಳಿಗೆ ಪ್ರಾಯೋಗಿಕ ನೆಲೆಯ ಸಾಮುದಾಯಿಕ ಒಪ್ಪಿಗೆ ದೊರೆಯದೆ ಇದ್ದದ್ದು ಈ ದೇಶದ ವ್ಯಂಗ್ಯದ ವಿಚಾರ. ಈ ನೆಲೆಯಲ್ಲಿಯೇ ಕತ್ತಲು ಮತ್ತು ಬೆಳಕುಗಳು ಸಂಘರ್ಷಿಸುತ್ತಾ, ಅದರಲ್ಲಿ ಕತ್ತಲೇ ವಿಜೃಂಭಿಸುತ್ತಾ ಬಂದದ್ದು ಭಾರತೀಯ ಇತಿಹಾಸದ ಒಂದು ಗಮನಾರ್ಹ ಮುಖವೇ ಆಗಿದೆ.

ವಿಜ್ಞೆನ ಮತ್ತು ಅದನ್ನು ತಳಹದಿಯನ್ನಾಗಿ ಇಟ್ಟುಕೊಂಡ ವೈಚಾರಿಕತೆಯೇ ಪ್ರಗತಿ ಪರತೆ ಎಂದು ನಾನು ಭಾವಿಸುತ್ತೇನೆ. ಹೆಸರೇ ಸೂಚಿಸುವಂತೆ ಪ್ರಗತಿಗೆ ಸಹಾಯಕ ಅಥವಾ ಪೂರಕವಾದುವೇ ಪ್ರಗತಿ ಪರತೆ. ಮೌಢ್ಯ, ಅಂಧಾನುಕರಣೆ, ವೈಚಾರಿಕ ನೆಲೆಗಟ್ಟಿಲ್ಲದ ಧರ್ಮ, ವಿಚಾರವಿಲ್ಲದ ಆಚಾರ, ದಾಸ್ಯದ ಬಗೆಗೆ ತೀವ್ರ ಆಸಕ್ತಿ ಇವೇ ಮೊದಲಾದವುಗಳು ಪ್ರತಿಗಾಮಿತನದ ಆಧಾರ ಸ್ತಂಭಗಳೆಂದು ಗ್ರಹಿಸಿದ್ದೇನೆ. ಇವುಗಳ ದೃಷ್ಟಿಯಲ್ಲಿ ವಿಜ್ಞೆನ, ಆತ್ಮವಿಶ್ವಾಸ, ಎಡಪಂಥಿಯ ನಿಲುವು ಮೊದಲಾದವುಗಳು ನಕಾರಾತ್ಮಕವಾಗಿ ಕಂಡರೆ ಪ್ರಗತಿಪರ ತತ್ವಗಳ ದೃಷ್ಟಿಯಲ್ಲಿ ಪ್ರತಿಗಾಮಿ ತತ್ವಗಳೇ ಆ ಸ್ಥಾನದಲ್ಲಿ ನಿಲ್ಲುತ್ತವೆ. ಹೆಣ್ಣಿಗೆ ಗಂಡು ಮಾಯೆ, ಗಂಡಿಗೆ ಹೆಣ್ಣು ಮಾಯೆ’ಯೆಂಬಂತೆ ಇವೆರಡೂ ಪರಸ್ಪರ ವಿರುದ್ಧವಾದ ದಿಕ್ಕುಗಳಲ್ಲಿ ನಿಂತಿರುವುದರಿಂದ ಪರಸ್ಪರ ಘರ್ಷಣೆ ಸಾಧ್ಯವಾಗಿದೆ. ಒಂದರ ನೇತೃತ್ವವನ್ನು ವಿಜ್ಞೆನ ವಹಿಸಿದ್ದರೆ, ಮತ್ತೊಂದರ ನೈತೃತ್ವವನ್ನು ಧರ್ಮ ವಹಿಸಿದೆ. ಜನರಲ್ಲಿ ಸಾಕ್ಷರತೆ, ವಿಚಾರವಂತಿಕೆ ಬೆಳೆಯದಿದ್ದಾಗ ಧರ್ಮವೇ ಪ್ರಾಧಾನ್ಯತೆಯನ್ನು ಪಡೆದಿರುತ್ತದೆ. ಅದೇ ಸಂದರ್ಭದಲ್ಲಿ ವಿಜ್ಞೆನದ ವಿಜಯವು ಧರ್ಮದ ಸೋಲೂ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಜ್ಞೆನ ಪರವಾದ ನೆಲೆಯಲ್ಲಿ ನಾನು ಪ್ರಗತಿ ಪರತೆಯನ್ನು ಗುರುತಿಸುತ್ತೇನೆ.

ಕಾಲ ಸೀಮಿತವಾದ ಹೊಸಗನ್ನಡ ಕಾವ್ಯಕ್ಕೂ ಕಾಲ ಮತ್ತು ದೇಶಾತೀತವಾದ ಪ್ರಗತಿ ಪರತೆಗೂ ನಿಕಟ ಸಂಬಂಧವಿದೆ. ಪ್ರಧಾನವಾಗಿ ಮೂರು ಅವಸ್ಥೆಗಳಲ್ಲಿ ದಾಖಲಾಗಿರುವ ಹೊಸಗನ್ನಡ ಕಾವ್ಯದಲ್ಲಿ ಪ್ರಗತಿಪರ ಚಿಂತನೆಯ ಸ್ವರೂಪವು ವೈವಿಧ್ಯಮಯವಾಗಿ ಮೂಡಿ ನಿಂತಿದೆ. ಇಂತಹ ಚಿಂತನ ಸ್ವರೂಪವನ್ನು ಪ್ರಾತಿನಿಧಿಕ ಕವಿಗಳ ಮೂಲಕ ವಿವರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನವೋದಯಕ್ಕೆ ಪ್ರಾತಿನಿಧಿಕವಾಗಿ ಕುವೆಂಪು ಮತ್ತು ಬೇಂದ್ರೆ, ನವ್ಯಕ್ಕೆ ಅಡಿಗ ಮತ್ತು ಜಿ.ಎಸ್.ಎಸ್. ಹಾಗೂ ದಲಿತ-ಬಂಡಾಯಕ್ಕೆ ಸಿದ್ಧಲಿಂಗಯ್ಯ ಅವರನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಈ ಚರ್ಚೆ ಮುಖ್ಯವಾಗಿ ಸಮಾಜ, ಧರ್ಮ ಮತ್ತು ದೇಶ ಕೇಂದ್ರಿತ ನೆಲೆಗಳಲ್ಲಿ ನಡೆದರೂ ಸದರಿ ಅವಸ್ಥೆಗಳಿಗೆ ಹಿನ್ನೆಲೆಯಾದ ಸಾಂಸ್ಕೃತಿಕ ಸಂದರ್ಭ ಮತ್ತು ಆ ಹಿನ್ನೆಲೆಯ ಒಟ್ಟು ಬೌದ್ಧಿಕತೆಯನ್ನು ಸಹ ಲಕ್ಷಿಸಲಾಗಿದೆ. ಇದೇ ಸಂದರ್ಭದಲ್ಲಿ ನವೋದಯ, ನವ್ಯ ಮತ್ತು ದಲಿತ-ಬಂಡಾಯಗಳ ತಾತ್ವಿಕತೆಯು ಏಕಕಾಲಕ್ಕೆ ಕಾಲಧರ್ಮ ಸೂಚಕವೂ ಹೌದು ಎಂಬ ಪ್ರಜ್ಞೆಯನ್ನು ಇರಿಸಿಕೊಳ್ಳಲಾಗಿದೆ.

ಸಾವಿರ ವರ್ಷಗಳ ಕನ್ನಡ ಇತಿಹಾಸವು ಮಹತ್ವದ ತಿರುವು ಪಡೆದದ್ದು ಈ ಶತಮಾನದ ಆರಂಭದಲ್ಲಿ. ಬ್ರಿಟಿಷ್ ಸಂಸ್ಕೃತಿಯ ಸಂಪರ್ಕಕ್ಕೆ ಈಡಾದ ಭಾರತದಲ್ಲಿ ಆಡಳಿತ, ಅಂಚೆ, ಪೊಲೀಸ್, ಸಾರಿಗೆ, ಕಾನೂನು ಮೊದಲಾದ ಭೌತಿಕ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಬೌದ್ಧಿಕ ಜಗತ್ತಿನಲ್ಲೂ ಕೂಡ ಮಹತ್ವದ ಬದಲಾವಣೆಗಳನ್ನು ತಂದಾಗ ಆಗ ಬ್ರಿಟಿಷ್ ವಸಾಹತುಶಾಹಿಯು ನೀಡಿದ ಇಂಗ್ಲೀಷ್ ಶಿಕ್ಷಣದ ಪರಿಣಾಮವಾಗಿ ಪಾಶ್ಚಾತ್ಯ ಜಗತ್ತಿನ ಸಾಹಿತ್ಯ, ವೈಚಾರಿಕತೆ, ವೈಜ್ಞೆನಿಕತೆ, ಸ್ವಾಭಿಮಾನ, ಅದರ ಪರವಾದ ರಾಷ್ಟ್ರೀಯತೆಯ ಹೋರಾಟ ಮೊದಲಾದವು ಅಂಕುರಿಸಿದವು. ಹೀಗೆ ಬ್ರಿಟಿಷರ ವಸಾಹತುವಾಗಿದ್ದ ಭಾರತದಲ್ಲಿ ಬ್ರಿಟಿಷರನ್ನು ಕುರಿತ ಆಕರ್ಷಣೆ ಮತ್ತು ವಿಕರ್ಷಣೆಯ ನೆಲೆಗಳು ಏಕಕಾಲಕ್ಕೆ ಅತ್ಯಂತ ಸಂಕೀರ್ಣ ಮತ್ತು ಅನ್ಯೋನ್ಯವಾಗಿ ಗೋಚರಿಸಿದವು. ಇಂತಹ ಸನ್ನಿವೇಶದಲ್ಲಿ ಕನ್ನಡದ ಪ್ರಗತಿಪರ ಚಿಂತನವು ಅಭೂತಪೂರ್ವವಾಗಿ ಕಾಣಿಸಿಕೊಂಡಿತು. ಅಂತಹ ದಾಖಲೆಗಳಲ್ಲಿ ಕಾವ್ಯವೂ ಒಂದು. ಈ ಸನ್ನಿವೇಶದ ಹಿನ್ನೆಲೆಯಲ್ಲಿ ಮೂಡಿದ ಮನೋಧರ್ಮವನ್ನೇ ನವೋದಯ ಎಂದೂ, ಇದನ್ನು ಅಳವಡಿಸಿಕೊಂಡ ಕಾವ್ಯವನ್ನೇ ನವೋದಯ ಕಾವ್ಯವೆಂದೂ ಕರೆದದ್ದು ಈ ದಿನಕ್ಕೆ ಹಳೆಯ ಮಾತು.

ನವೋದಯದ ಒಟ್ಟು ಪ್ರಗತಿಪರ ಚಿಂತನ ಸ್ವರೂಪವನ್ನು ಕುವೆಂಪು ಮತ್ತು ಬೇಂದ್ರೆ ಕವಿತೆಗಳು ಬಹಳ ಸಮರ್ಪಕವಾಗಿ ಕಟ್ಟಿ ಕೊಡುತ್ತವೆ ಎಂದು ಇಲ್ಲಿ ಆಶಿಸಲಾಗಿದೆ.

ಸಮಾಜ ಮತ್ತು ಧರ್ಮ ಕೇಂದ್ರಿತವಾದ ಕುವೆಂಪು ಕವಿತೆಗಳಲ್ಲಿ ಪ್ರಖರವಾದ ಪ್ರಗತಿಪರ ಆಶಯಗಳನ್ನು ಗುರುತಿಸಬಹುದು. ಇದು ನಡು ಬಿಸಿಲಿನ ಸೂರ್ಯನಷ್ಟೇ ತೀಕ್ಷ್ಣವಾಗಿದೆ. ಇಲ್ಲಿ ಪರಂಪರೆಯ ನೈಜಪ್ರಜ್ಞೆ ಕ್ರಿಯಾಶೀಲವಾಗಿದೆ. ಪರಿಣಾಮವಾಗಿ ಈಗಾಗಲೇ ರಚನೆಯಾದ ಜನಪ್ರಿಯ ಭಾರತದ ಇತಿಹಾಸಕ್ಕೆ ಪರ್ಯಾಯವಾಗಿ ಅದರದೇ ಆದ ಮತ್ತೊಂದು ಕಪು ಇತಿಹಾಸ ಇಲ್ಲಿ ಅನಾವರಣಗೊಳ್ಳುತ್ತದೆ. ಪುರೋಹಿತಶಾಹಿಯ ವಿರೋಧ, ಶ್ರಮ ಸಂಸ್ಕೃತಿಯ ಪರವಾದ ನಿಲುವು, ಸಾಂಸ್ಥಿಕ ಧರ್ಮಗಳ ಮತ್ತು ಅವುಗಳ ಪ್ರತೀಕಗಳಾದ ಗುಡಿ, ಚರ್ಚು, ಮಸಜೀದಿ ಹಾಗೂ ಇವುಗಳ ವಕ್ತಾರರಾದ ಪೂಜಾರಿ, ಪಾದ್ರಿ, ಮೌಲ್ವಿಗಳ ಬಗೆಗಿನ ಸ್ಪಷ್ಟ ಹಾಗೂ ಉಗ್ರ ನಿರಾಕರಣ ಇಲ್ಲಿ ವ್ಯಕ್ತವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಕೇಂದ್ರಿತ ನೆಲೆಯಲ್ಲಿ ಕಲ್ಕಿ, ಗೊಬ್ಬರ, ರೈತನ ದೃಷ್ಟಿ, ಹೊಸಬಾಳಿನ ಗೀತೆ, ಮೊದಲನೆ ದೇವರು ಈ ಹಣ್ಮುದುಕಿ ಮೊದಲಾದ ಪದ್ಯಗಳು ಪ್ರಾತಿನಿಧಿಕವಾಗಿ ಮುಖ್ಯವಾಗುತ್ತವೆ. ಇಂತಹ ಪದ್ಯಗಳಲ್ಲಿ ಕಾವ್ಯಾತ್ಮಕತೆ ಸ್ವಲ್ಪ ಸೊರಗಿದರೂ ಚಿಂತನ ಪ್ರಧಾನವಾದ ಪ್ರಗತಿಪರ ಆಶಯಗಳು ಕಳೆಗುಂದುವುದಿಲ್ಲ ಎಂಬುದು ಕುವೆಂಪು ಮಟ್ಟಿಗೆ ಗಮನಾರ್ಹ ಎನಿಸುತ್ತದೆ. ಇಂತಹ ಅಭಿವ್ಯಕ್ತಿ ಅಸಂಕೀರ್ಣ, ಸ್ಪಷ್ಟ ಮತ್ತು ನೇರ. ಈ ಮಾತು ಕುವೆಂಪು ಅವರ ಕಾವ್ಯೇತರ ನೆಲೆಗಳಿಗೂ ಚಾಚಿಕೊಳ್ಳುತ್ತದೆ. ಇದೇ ವಿಚಾರಗಳನ್ನು ಪುಷ್ಟೀಕರಿಸುವಲ್ಲಿ ‘ದೇವರು-ಪೂಜಾರಿ’, ‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?’ ‘ಓ ಬನ್ನಿ ಸೋದರರೆ’ ಮೊದಲಾದ ಧರ್ಮ ಕೇಂದ್ರಿತ ಪದ್ಯಗಳು ದುಡಿಯುತ್ತವೆ.

ಹೆಚ್ಚು ಕಡಿಮೆ ಇದೇ ಸಾಂಸ್ಕೃತಿಕ ಹಿನ್ನೆಲೆಯನ್ನು ಪಡೆದಿರುವ ಬೇಂದ್ರೆಯವರ ಕವಿತೆಗಳಲ್ಲಿ ವ್ಯಕ್ತವಾಗುವ ಪ್ರಗತಿಪರ ಚಿಂತನ ಸ್ವರೂಪವು ಇದಕ್ಕಿಂತಲೂ ಭಿನ್ನವಾದದ್ದು. ಕುವೆಂಪು ಅವರಲ್ಲಿ ವೈಚಾರಿಕತೆಯು ಬಹಳ ನೇರ ಮತ್ತು ಪ್ರಖರವಾಗಿ ಕಂಡರೆ ಬೇಂದ್ರೆಯವರಲ್ಲಿ ಅದು ವಿಷಾದದ ದನಿಯಾಗಿ ಮನ ಮುಟ್ಟುತ್ತದೆ ಎನ್ನುವುದಕ್ಕಿಂತ ಹೃದಯವನ್ನು ತಟ್ಟುತ್ತದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಸ್ಥಾವರವಾಗಿರುವ ಮನುಷ್ಯ ನಿರ್ಮಿತ ಸಾಂಸ್ಥಿಕ ಧರ್ಮಗಳು ಗೊಡ್ಡುಗಳಾಗಿ ಬದುಕಿನ ಚೆಲುಮೆಗಳನ್ನು ದಮನ ಮಾಡುವುದನ್ನು ಹಲವು ಕವಿತೆಗಳು ಚಿತ್ರಿಸುತ್ತವೆ. ಸೂಕ್ಷ್ಮ ಸಂವೇದನಾ ಶೀಲತೆಯನ್ನು ಪಡೆದ ಇಂತಹ ಕವಿತೆಗಳು ಉತ್ತಮ ಕಾವ್ಯವಾಗಿ ಜಯಿಸಿ ಬಿಡುತ್ತವೆ. ಈ ನೆಲೆಯಲ್ಲಿ ಪುಟ್ಟ ವಿಧವೆ, ಹೆಣದ ಹಿಂದೆ, ಅನ್ನಾವತಾರ, ತುತ್ತಿನ ಚೀಲ, ಭೂಮಿತಾಯ ಚೊಚ್ಚಿಲ ಮಗ, ಕೆಲಸವಿಲ್ಲದವರ ಹಾಡು, ಕುರುಡು ಕಾಂಚಾಣ ಮೊದಲಾದ ಪದ್ಯಗಳು ಗಮನಾರ್ಹ ಎನಿಸುತ್ತವೆ.

ಹೀಗೆ ವಿಭಿನ್ನ ಸಂವೇದನಾಶೀಲ ನೆಲೆಗಳಲ್ಲಿ ಕಾಣುವ ಕುವೆಂಪು ಮತ್ತು ಬೇಂದ್ರೆ ಅವರ ಸದರಿ ಪದ್ಯಗಳು ಮತ್ತು ಅವುಗಳ ಆಶಯದಲ್ಲಿ ಇರುವ ಆರೋಗ್ಯಕರ ಬಂಡಾಯ ಧೋರಣೆಯಿಂದಲೇ ಇಂದಿನ ಕಾವ್ಯ ವಲಯಕ್ಕೂ ಇವರು ಗುರುಗಳ ಸ್ಥಾನದಲ್ಲಿರುವುದು-ಎಂಬುದು ನನ್ನ ಗ್ರಹಿಕೆಯಾಗಿದೆ.
* * *

ಸ್ವಾತಂತ್ರ್ಯ ಪೂರ್ವದ ಕನಸುಗಳು ಭಗ್ನವಾದಾಗ ಭಾರತೀಯ ಪ್ರಜ್ಞೆವಂತ ಮನಸ್ಸು ವಿಘಟನೆಗೆ ಒಳಗಾಯಿತು. ಹಾಗಾಗಿ ನಿರಾಶಾವಾದ, ಹತಾಶೆ, ನೋವು, ವ್ಯಂಗ್ಯ, ವಿಡಂಬನೆ, ಪರಂಪರೆಯನ್ನು ಕುರಿತ ಚಿಕಿತ್ಸಕ ನೋಟ ಮೊದಲಾದವುಗಳು ನವ್ಯ ಎಂಬ ಹೆಸರು ಪಟ್ಟಿ ಧರಿಸಿದ ನವ ವಸಾಹತು ಕಾಲದ ಸಾಹಿತ್ಯದಲ್ಲಿ ಮುಖ್ಯ ಅವಯವಗಳಾದವು. ಈ ನಿಟ್ಟಿನಲ್ಲಿ ನವ ವಸಾಹತುಶಾಹಿ ಅನುಭವವನ್ನು ಅನೇಕ ಕವಿಗಳು ಕಟ್ಟಿಕೊಟ್ಟಾಗಲೂ ಅಡಿಗರು ಇದರ ಮಾರ್ಗ ನಿರ್ಮಾಪಕರಾದದ್ದು ಅವರಿಗಿರುವ ಚಾರಿತ್ರಿಕ ಮಹತ್ವವನ್ನು ಸೂಚಿಸುತ್ತದೆ. ಕಾಂಗ್ರೆಸ್ ಅಥವಾ ನೆಹರು ಸಂತತಿಯ ಅಂಕುಶಕ್ಕೆ ಒಳಗಾದ ಭಾರತದ ರಾಜಕೀಯ ಮತ್ತು ಸಾಮಾಜಿಕ ಜಗತ್ತಿನಲ್ಲಿ ಅಧಿಕಾರ ಕೇಂದ್ರೀಕರಣ, ಎಡಪಂಥೀಯ ಧೋರಣೆಯ ವೇಷಗಾರಿಕೆ, ರಾಜಕೀಯ ಶೋಷಣೆ, ನಗರ ಮತ್ತು ಕೈಗಾರಿಕೀಕರಣಗಳ ಪರಿಣಾಮವಾಗಿ ತೀವ್ರ ಆತಂಕವನ್ನು ಎದುರಿಸಿದ ಗ್ರಾಮ ಜಗತ್ತು, ಇಷ್ಟಾಗಿಯೂ ಇದರ ವಿರುದ್ಧ ಬಂಡೇಳದ ಭಾರತೀಯರ ನಾಯಿ ನಿಷ್ಠೆಗಳು ಅಡಿಗರಂತಹ ಚಿಂತಕರನ್ನು ತೀವ್ರವಾಗಿ ಕಾಡಿದವು. ಹಾಗಾಗಿ ನವ್ಯ ಕಾವ್ಯವು ನವೋದಯಕ್ಕಿಂತ ಭಿನ್ನವಾದ ಆಶಯವಾಗಿ ರೂಪುಗೊಂಡಿತು. ಅದರ ಮೂಲಕ ತನ್ನ ಕಾಲ ಮತ್ತು ದೇಶಕ್ಕೆ ಅತ್ಯಂತ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿತು. ಈ ಹಿನ್ನೆಲೆಯಲ್ಲಿಯೇ ನವೋದಯಕ್ಕಿಂತ ಭಿನ್ನವಾದ ಪ್ರಗತಿಪರ ಚಿಂತನೆಗಳು ನವ್ಯದಲ್ಲಿ ಮೂಡಿ ನಿಲ್ಲುವುದು. ಈ ನಿಟ್ಟಿನಲ್ಲಿ ಅಡಿಗರ ಸಮಾಜಕೇಂದ್ರಿತವಾದ ‘ನೆಹರೂ ನಿವೃತ್ತರಾಗುವುದಿಲ್ಲ’, ‘ಬರುತ್ತಾರೆ’, ‘ಎಡಬಲ’ ಮತ್ತು ಧರ್ಮ ಕೇಂದ್ರಿತವಾದ ‘ಸುಲಿಗೆಯೆಂಬ ಯಾಗ’ದಂತಹ ಪದ್ಯಗಳು ಪ್ರಾತಿನಿಧಿಕವಾಗಿ ಮುಖ್ಯವಾಗುತ್ತವೆ. ಇದೇ ನೆಲೆಯಲ್ಲಿ ಜಿ.ಎಸ್. ಶಿವರುದ್ರಪ್ಪನವರ ‘ಯಾವುದೀ ಪ್ರವಾಹವು?’, ‘ಬುದ್ಧ ಜಯಂತಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಮೊದಲಾದ ಪದ್ಯಗಳೂ ಗಮನಾರ್ಹ ಎನಿಸುತ್ತವೆ.
* * *

ಒಟ್ಟು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ದಲಿತ ಬಂಡಾಯದ ಘಟ್ಟ ಅತ್ಯಂತ ವಿಶಿಷ್ಟದ್ದು. ಕಾರಣ, ಅದಕ್ಕೆ ಹಿನ್ನೆಲೆಯಾದ; ಮುಖ್ಯವಾಗಿ ಕರ್ನಾಟಕವನ್ನು ಒಳಗೊಂಡ ಭಾರತೀಯ ಸಂದರ್ಭ. ಅದು ಈ ಶತಮಾನದ ಎಪ್ಪತ್ತರ ದಶಕ.

ಎಪ್ಪತ್ತರ ದಶಕದಲ್ಲಿ ಭಾರತದಾದ್ಯಂತ ವಿನೂತನವಾದ ಬಿರುಗಾಳಿ ಬೀಸಿತು. ಪರಿಣಾಮವಾಗಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ೧೪೪ ಸೆಕ್ಷನ್ನನ್ನೂ ಜಾರಿಗೊಳಿಸಿದರು. ಇದನ್ನು ವಿರೋಧಿಸಿ ಅಸಂಖ್ಯ ಪ್ರಜಾಪ್ರಭುತ್ವವಾದಿಗಳು ಸೆರೆಮನೆ ಸೇರಿದರು. ಇದರ ನಾಯಕತ್ವವನ್ನು ಜಯಪ್ರಕಾಶನಾರಾಯಣ ಅವರು ವಹಿಸಿದ್ದರು. ಇದೇ ಜನತಾ ಆಂದೋಲನವಾಯಿತು. ಇದು ಕರ್ನಾಟಕವನ್ನು ತಟ್ಟದೆ ಬಿಡಲಿಲ್ಲ.

ಇದಕ್ಕೂ ಪೂರ್ವದಲ್ಲಿ ಬೂಸಾ ಪ್ರಕರಣದಿಂದಾಗಿ ಸಾಹಿತ್ಯಕ ವಲಯದಲ್ಲಿ ಒಂದು ಅಲೆ ಎದ್ದಿತು. ಇದಕ್ಕೆ ಕುವೆಂಪು ಆದಿಯಾಗಿ ಅನೇಕ ಪ್ರಗತಿಪರ ಚಿಂತಕರು ಗುಣಾತ್ಮಕವಾಗಿ ಪ್ರತಿಕ್ರಿಯಿಸಿ, ಹಲವರು ಸಕ್ರಿಯವಾಗಿಯೂ ಭಾಗವಹಿಸಿದ್ದರು. ಈ ನೆಲೆಯಲ್ಲಿ ಕನ್ನಡದ ಒಂದು ದೊಡ್ಡ ಸಮುದಾಯವು ಕನ್ನಡ ಸಾಹಿತ್ಯ ಪರಂಪರೆಯ ಬಗೆಗೆ ಪೂಜಾ ಮನೋಭಾವವನ್ನು ತ್ಯಜಿಸಿ, ಅದನ್ನು ಕುರಿತ ನಿಜದ ಪ್ರಜ್ಞೆಯನ್ನು ಉದ್ದೀಪಿಸಿಕೊಂಡರು. ಪರಿಣಾಮವಾಗಿ ಕನ್ನಡ ಸಾಹಿತ್ಯದ ಅನೇಕ ಬೂಸಾ ಸಂಗತಿಗಳು ಬಯಲಾದವು.

ಎಪ್ಪತ್ತರ ದಶಕದ ದಲಿತ-ಬಂಡಾಯ ಸಾಹಿತ್ಯದ ನಿರ್ಮಿತಿಗೆ ಈ ಎರಡು ಪ್ರಮುಖ ಪ್ರಕರಣಗಳು ಗ್ರಾಸ ನೀಡಿದವು. ಜೊತೆಗೆ ಮಹಾರಾಷ್ಟ್ರದಲ್ಲಿ ಈ ಹೊತ್ತಿಗಾಗಲೇ ಜನಪ್ರಿಯವಾಗಿದ್ದ ದಲಿತ ಚಳುವಳಿ ಕರ್ನಾಟಕವನ್ನೂ ವ್ಯಾಪಿಸಿತು. ಆಂಧ್ರದ ದಿಗಂಬರ ಕಾವ್ಯ, ಕನ್ನಡದ ಪ್ರಜ್ಞೆಯನ್ನು ಹೊಸ ರೀತಿ ಆಲೋಚಿಸುವಂತೆ ಮಾಡಿತು.

ಹೀಗೆ ಅನ್ಯದೇಶೀ ಪ್ರಭಾವಗಳಿಗೆ ಬಹುತೇಕ ವರ್ಗಗಳಿಂದ ಮೂಡಿಬಂದಿದ್ದ ಅಕ್ಷರಸ್ಥ ಸಮುದಾಯ ಒಳಗಾಯಿತು. ತೀವ್ರವಾದ ವೈಯಕ್ತಿಕತೆಯಲ್ಲಿ ಮಗ್ನವಾಗಿದ್ದ ನವ್ಯ ಸಾಹಿತ್ಯದ ಬಗೆಗೆ ಅನಾದರವೂ ಮೂಡಿತು. ಪರಿಣಾಮವಾಗಿ ವ್ಯಕ್ತಿಗಿಂತ ಸಮಷ್ಟಿ ಪರವಾದ ಅಥವಾ ಜನಮುಖಿಯಾದಂಥ ಸಾಹಿತ್ಯ ರಚನೆಯ ಎಡೆಗೆ ಕನ್ನಡದ ಮನಸ್ಸು ವಾಲಿತು. ಸಾಮಾಜಿಕ ಬದ್ಧತೆಯೇ ಮುಖ್ಯತತ್ವವಾದ ದಲಿತ-ಬಂಡಾಯ ಸಾಹಿತ್ಯದಲ್ಲಿ ಪ್ರಗತಿಪರ ಅಥವಾ ಜನಪರತೆಯ ನಿಲುವು ಅತ್ಯಂತ ಸ್ಪಷ್ಟವಾಗಿ ಗೋಚರವಾಯಿತು.

ಈ ಹಿನ್ನೆಲೆಯಲ್ಲಿ ಮೂಡಿದ ದಲಿತ-ಬಂಡಾಯ ಸಾಹಿತ್ಯವನ್ನು ಅನೇಕ ಪ್ರಗತಿಪರ ಚಿಂತಕರು ಅದರಲ್ಲಿ ಹಾಸುಹೊಕ್ಕಾಗಿ ಎನ್ನುವ ರೀತಿಯಲ್ಲಿ ಪ್ರಭಾವಿಸಿದರು. ಅದರಲ್ಲಿ ಮುಖ್ಯವಾಗಿ, ಅಸ್ಪೃಶ್ಯತೆಯ ಕಾರಣದಿಂದ ಅಪಮಾನವನ್ನು ಸಾವಿರಾರು ವರ್ಷಗಳಿಂದ ಸಹಿಸುತ್ತಾ, ಅದರ ಮೌನವು ದಾರುಣ ನೋವನ್ನು ನುಂಗಿ, ಕರಾಳ ಮೌನವನ್ನು ಧರಿಸಿದ್ದ ದಲಿತರನ್ನು ಬಡಿದೆಬ್ಬಿಸಿ, ಅವರಲ್ಲಿ ಸ್ವಾಭಿಮಾನವನ್ನು ಮೂಡಿಸಿದ ಅಂಬೇಡ್ಕರ್; ಶೂದ್ರ ಪ್ರಜ್ಞೆಯನ್ನು ಜಾಗೃತಗೊಳಿಸಿ, ಪುರೋಹಿತ ಶಾಹಿಯ ವಿರುದ್ಧ ಪ್ರಜ್ಞೆವಂತರು ಕೆಂಡ ಕಾರುವಂತೆ ಮಾಡಿದ ಲೋಹಿಯಾ; ವೈದಿಕಶಾಹಿ ಮತ್ತು ಅದರ ಸಂಸ್ಕೃತಿಯ ಬಗೆಗೆ ಸಾತ್ವಿಕ ಸಿಟ್ಟನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಮೂಲಕ ದ್ರಾವಿಡ ಚಳುವಳಿಯನ್ನು ಆರಂಭಿಸಿದ ಮತ್ತು ಅದರ ಬಿಸಿ ಕರ್ನಾಟಕವನ್ನು ಮುಟ್ಟುವಂತೆ ಮಾಡಿದ ಪೆರಿಯಾರ್; ಭಾರತದಲ್ಲಿ ವರ್ಗ ಪ್ರಜ್ಞೆಯನ್ನು ಮೂಡಿಸಿದ ಮಾರ್ಕ್ಸ್; ಗ್ರಾಮ ಸ್ವರಾಜ್ಯದ ಬಗೆಗೆ ಆಸಕ್ತಿ ಮೂಡಿಸಿದ ಗಾಂಧಿಜಿ ಮೊದಲಾದವರ ಚಿಂತನೆಗಳು ಬಹಳ ದಟ್ಟವಾಗಿ ದಲಿತ ಬಂಡಾಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದವು; ಎಂಬುದಕ್ಕಿಂತ ಅದನ್ನು ರೂಪಿಸಿತು ಎಂಬುದೇ ಹೆಚ್ಚು ಹತ್ತಿರದ ಮಾತು ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜದ ಬಹುತೇಕ ವರ್ಗಗಳಿಂದ ಚಿಂತಕರ-ಬರಹಗಾರರ ಮಹಾಪೂರವೇ ಹರಿದು ಬಂದಿತು. ಒಂದು ರೀತಿಯಲ್ಲಿ ಇಡೀ ಕರ್ನಾಟಕವೇ ಕಲ್ಯಾಣವಾಯಿತು. ಇಲ್ಲಿ ಡಿ.ಆರ್. ನಾಗರಾಜ್ ಗುರುತಿಸುವಂತೆ ಸಿದ್ಧಲಿಂಗಯ್ಯನವರು ಕನ್ನಡದ ಆದಿ ದಲಿತ ಕವಿಯೂ ಹೌದು. ಆದ್ದರಿಂದ ಇಂತಹ ಸಾಹಿತ್ಯದ ಬೌದ್ಧಿಕತೆಯನ್ನು ಗ್ರಹಿಸಲು ಸಿದ್ಧಲಿಂಗಯ್ಯನವರನ್ನು ಪ್ರಾತಿನಿಧಿಕವಾಗಿ ನೋಡುವುದು ಔಚಿತ್ಯಪೂರ್ಣ ಎನ್ನಿಸುತ್ತದೆ.

ಸಿದ್ಧಲಿಂಗಯ್ಯನವರ ಸಮಾಜ ಕೇಂದ್ರಿತ ಪದ್ಯಗಳಲ್ಲಿ ಶೋಷಿತರ ಪರವಾದ ನಿಲುವು, ಅವರ ಸಾವಿರಾರು ವರ್ಷಗಳ ಮೂಕ ಇತಿಹಾಸ, ಊಳಿಗಮಾನ್ಯ ಪ್ರಭುಗಳ ದಮನಕಾರೀ ನೀತಿ, ಅದರ ವಿರುದ್ಧವಾದ ಹೋರಾಟ, ಹೋರಾಟದಲ್ಲಿ ಗೆಲುವು ಎಂಬ ಆಶಾವಾದ, ಗಳಿಸಿದ ಸ್ವಾತಂತ್ರ್ಯ ಪುನಃ ಊಳಿಗಮಾನ್ಯ ವಕ್ತಾರರ ಸ್ವತ್ತಾದದ್ದು ಮೊದಲಾದ ಆಶಯಗಳು ಸ್ಪಷ್ಟವಾಗಿ ದಾಖಲಾಗುತ್ತವೆ. ಕೆಲವು ಪದ್ಯಗಳಲ್ಲಿ ಕುವೆಂಪು ಇಣುಕಿದರೂ ಅಂತಿಮವಾಗಿ ಅವರಿಗಿಂತ ಭಿನ್ನವಾಗಿಯೇ ಇಲ್ಲಿ ಇವರು ಬೆಳೆದು ನಿಲ್ಲುತ್ತಾರೆ. ಇದನ್ನು ಪುಷ್ಟೀಕರಿಸಲಿಕ್ಕಾಗಿ ಗಮನ ಸೆಳೆಯುವ ಪದ್ಯಗಳೆಂದರೆ – ‘ಬಿಡುಗಡೆ’, ‘ನಲವತ್ತೇಳರ ಸ್ವಾತಂತ್ರ್ಯ’, ‘ಸಾವಿರಾರು ನದಿಗಳು’ ಮೊದಲಾದ ಹತ್ತು-ಹಲವು.

ಆತ್ಮ ವಿಶ್ವಾಸವನ್ನು ಪಾರಂಪರಿಕವಾಗಿ ಕುಂದಿಸುತ್ತಾ ಬಂದ ಧರ್ಮ, ಅದು ಈ ದೇಶದ ಇತಿಹಾಸದಲ್ಲಿ ನಿರ್ವಹಿಸಿದ ಕಂಸ ಪಾತ್ರ, ಅದರ ಸಾಕ್ಷೀ ಪ್ರಜ್ಞೆಯಲ್ಲಿ ನಡೆದ ಬಹುಸಂಖ್ಯಾತರ ಆಶೋತ್ತರ ವಧೆ ಮೊದಲಾದ ಸತ್ಯ ‘ಕತೆ ಮತ್ತು ಧರ್ಮ’, ‘ಸುಂಟರಗಾಳಿ’, ‘ಹಣೆ ಬರವು ಎಂಬ ನಾಟಕವು’ ಮೊದಲಾದ ಹಲವು ಧರ್ಮಕೇಂದ್ರಿತ ಪದ್ಯಗಳಲ್ಲಿ ಸ್ಪಷ್ಟವಾಗಿ ದಾಖಲಾಗುತ್ತದೆ. ಈ ಬಗೆಯ ವಿನ್ಯಾಸಗಳು ಅನಂತರದ ಕವಿಗಳ ಮೇಲೂ ಉದಾರವಾದ ಪ್ರಭಾವ ಬೀರುವುದರಿಂದ ಸದರಿ ಜನಪರ ಸಾಹಿತ್ಯವು ಅದೇ ಕಾಲಕ್ಕೆ ಜನಪರ ಚಳವಳಿಯಾಗುವುದರತ್ತಲೂ ತುಡಿಯುತ್ತದೆ.

ಹೀಗೆ ಹೊಸಗನ್ನಡ ಕಾವ್ಯದ ಸಂದರ್ಭದಲ್ಲಿ ಪ್ರಗತಿಪರ ವಿಚಾರಗಳು ನವೋದಯದಲ್ಲಿ ಆಂಶಿಕವಾಗಿ ಕಂಡರೆ, ಅದು ಮತ್ತಷ್ಟು ವಿಸ್ತರಿಸಿದ್ದು ಒಂದು ರೀತಿಯಲ್ಲಿ ‘ಭವ್ಯ’ ಗೋಪುರಗಳಿಂದ ಹೊರಬಂದ ನವ್ಯ ಕಾವ್ಯದಲ್ಲಿ. ಇವುಗಳೆರಡಕ್ಕೂ ಮೀರಿದ ಮತ್ತು ಸಮಗ್ರೀಕರಣದ ನೆಲೆಯಲ್ಲಿ ಅಂತಹ ಚಿಂತನೆಗಳು ಪ್ರಕಟವಾದದ್ದು ದಲಿತ-ಬಂಡಾಯ ಸಾಹಿತ್ಯದಲ್ಲಿ.

ಹೀಗೆ ವಿವಿಧ ಅವಸ್ಥಾಂತರಗಳನ್ನು ದಾಟಿ ಬಂದ ಕನ್ನಡ ಕಾವ್ಯವು ಜನ ಮುಖಿಯಾದ ಸನ್ನಿವೇಶಗಳಲ್ಲೆಲ್ಲ ಪ್ರಗತಿಪರ ವಿಚಾರಗಳನ್ನು ಗಣನೀಯ ಪ್ರಮಾಣದಲ್ಲಿ ತನ್ನ ಉಸಿರನ್ನಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸಗನ್ನಡ ಕಾವ್ಯವು ಸಹ ಪ್ರಗತಿಪರ ವಿಚಾರಗಳನ್ನು ಕಾಲಕ್ರಮೇಣ ತನ್ನ ಒಡಲಲ್ಲಿ ವೃದ್ಧಿಸಿಕೊಳ್ಳುತ್ತಾ ಬಂದಿರುವುದು ತಾನು ಜನಮುಖಿಯಾಗಿ ಚಲಿಸುತ್ತಾ ಬಂದಿರುವುದರ ದ್ಯೋತಕವೇ ಆಗಿದೆ. ಈ ತಾತ್ವಿಕ ನೆಲೆಯಲ್ಲಿ ಕನ್ನಡದ ಬದುಕಿಗೆ ಆಶಾದಾಯಕವಾದ ಭವಿಷ್ಯವಿದೆ ಎಂಬ ಒಳನೋಟವೇ ಪ್ರಸ್ತುತ ಲೇಖನದ ಅಂತಿಮ ಮಾತಾಗುತ್ತದೆ.
*****
ಬಹುಜನ ಕನ್ನಡಿಗರು, ಆಗಸ್ಟ್ ೨೦೦೦
ಒತ್ತಾಸೆ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿದ ದತ್ತಿ ಉಪನ್ಯಾಸ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂಥ ಮಣ್ಣಿನಲಿ
Next post ಅವಳು

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys