ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು
ನನ್ನ ಪುಣ್ಯ ಪುಣ್ಯ
ಎಂಥ ಸುಕೃತುವೋ ಇದನು ಸವಿಯುವುದು
ನಾನೆ ಧನ್ಯ ಧನ್ಯ || ೧ ||

ಎತ್ತ ನೋಡಿದರು ಪ್ರಕೃತಿ ಮಾತೆಯ
ಭವ್ಯ ದಿವ್ಯ ರೂಪಾ
ಅವಳ ಮಡಿಲಿನಲಿ ನಲ್ಮೆವಡೆಯುವಾ
ಮಗುವಿನಾ ಕಲಾಪ || ೨ ||

ಕಣ್ಣು ಹಾಯಿಸುಲು ಎಂಟು ದಿಕ್ಕಿನಲು
ನೀಲವರ್ಣ ಗಿರಿಯು
ಶಾಮ ಸುಂದರನೆ ನನ್ನ ರಕ್ಷಣೆಗೆ
ಬಳಸಿದಂತೆ ಬಾಹು || ೩ ||

ಪ್ರತಿಕ್ಷಣದಲೂ ಇತ್ತ ನೋಡು
ನನ್ನಂತೆ ಎತ್ತರಾಗು
ಶಿಲೆಯ ಮಣ್ಣಿನಲೆ ಹಸಿರು ಕುಸುರಿಸುವ
ಚಿಗಾರನಾಗು || ೪ ||

ಎಂದು ಸಾರುತಿದೆ ಗಿರಿಯ ಗಾಳಿ
ಅಲ್ಲಿಂದ ಇತ್ತ ಬೀಸಿ
ಕಲ್ಲಿನಲ್ಲು ಚೈತನ್ಯದುಸಿರ
ತುಂಬುತ್ತ ಭಾವ ಬೆರೆಸಿ || ೫ ||

ಗುಡ್ಡವಲ್ಲವಿದು ದೊಡ್ಡತತ್ವ
ಬೋಧಿಸುವ ದೇವಗುರುವು
ಗಗನಚುಂಬಿ ಉತ್ತುಂಗ ಅಂಗನೀ
ನೆಲವು ಪಡೆದ ವರವು || ೬ ||

ಚೆಲುವು ಬೇಕು ಬಲ್ ಬಲವು ಬೇಕು
ಜೀವಿಸಲು ಒಲವು ಬೇಕೊ
ಹಲವು ಮಾತೇಕೆ ಇದೇ ಸಗ್ಗ
ಇದಕಿಂತ ಹೆಚ್ಚು ಏಕೋ || ೭ ||
*****