ಪುಣ್ಯವತಿ

ಪುಣ್ಯವತಿ

ಚಿತ್ರ: ಮ್ಯಾಟಿ ಸಿಂಪ್ಸನ್
ಚಿತ್ರ: ಮ್ಯಾಟಿ ಸಿಂಪ್ಸನ್

“ಅಶ್ವಿನಿ, ಪದೇ ಪದೇ ನನ್ನ ನಿರ್ಧಾರನ ಬದಲಿಸೋಕೆ ಪ್ರಯತ್ನಿಸಬೇಡ. ನೀನು ಕರ್ಕೊಂಡು ಬರಲಿಲ್ಲ ಅಂತ ನಿನ್ನ ನಿಷ್ಟೂರ ಮಾಡೋರು ಯಾರಿದ್ದಾರೆ? ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಅಂತ ಗೊತ್ತಿಲ್ವಾ, ನೀನೇನೂ ಒಬ್ಳೆ ಮಗಳಲ್ಲ, ನಿಮ್ಮಪ್ಪನ ಜವಾಬ್ದಾರಿ ಹೊತ್ಕೋಳ್ಳಕ್ಕೆ ಗಂಡು ಮಕ್ಕಳಿಲ್ವಾ? ಈಗೇನು ಮನೆಯಿಂದಾಚೆ ತಳ್ಳಿದ್ದಾರಾ ನಿಮ್ಮಪ್ಪನ್ನ, ಅಲ್ಲೇ ಇಲಿ ಅವ್ರು” ಖಡಾಖಂಡಿತವಾಗಿ ರಾಜೀವ್ ಹೇಳಿದಾಗ, ಉಕ್ಕಿ ಬಂದ ಮಾತುಗಳನ್ನು ಬಲವಂತವಾಗಿ ತಡೆದುಕೊಂಡು, ನೋವು ಅವಮಾನವನ್ನು ಹತ್ತಿಕ್ಕಿಕೊಂಡಳು.

ತಾನು ಎಷ್ಟು ದುಡಿದರೇನು? ಸ್ವಾವಲಂಬಿ ಅನ್ನಿಸಿಕೊಂಡರೇನು? ಕೊನೆ ಉಸಿರೆಳೆಯೋ ಜೀವಕ್ಕಿಷ್ಟು ತಂಪು ಕೊಡಲಾರದ ಅಸಹಾಯಕತೆ, ಜನ್ಮ ಕೊಟ್ಟಾತನಿಗೆ
ಆಸರೆ ಕೊಡಲಾರದ ಈ ಪರಿಸ್ಥಿತಿ ಯಾರಿಗೂ ಬರಬಾರದು.

ರಾಜೀವ್‌ಗೆ ಮೊದಲಿನಿಂದಲೂ ತನ್ನ ತೌರಿನವರನ್ನು ಕಂಡರೆ ಅಷ್ಟಕಷ್ಟೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಆದರೆ ಈ ಗಳಿಗೆಯಲ್ಲಿ ಮಾನವೀಯತೆ ಬೇಡವೇ. ದೀನಸ್ಥಿತಿಯಲ್ಲಿರುವ ಅಪ್ಪ ಎಲ್ಲ ಮಕ್ಕಳ ನಿಕೃಷ್ಟಕ್ಕೆ ಬಲಿಯಾಗಿ, ದರ್ವದಿಂದ ಬದುಕಿದ ಜೀವ, ಅಂಗೈಯಲ್ಲಿ ಜೀವ ಹಿಡಿದು ಹಿಡಿ ಪ್ರೀತಿಗಾಗಿ ಒದ್ದಾಡುತ್ತಿರುವಾಗ ನೋಡುತ್ತಾ ನೋಡುತ್ತಾ ತಾನು ಹೇಗಿರಲಿ? ಕಣ್ಣೀರು ತರಿಸುವ ಅಪ್ಪನ ಸ್ಥಿತಿ ಎಂಥವರ ಕಲ್ಲೆದೆಯನ್ನೂ ಕರಗಿಸುವಂತಿದೆ. ಹಾಗಿರುವಾಗ ಹೆತ್ತ ಮಗಳಾಗಿ ನಾನು ಹೇಗೆ ಸುಮ್ಮನಿರಲಿ? ಹೆತ್ತ ಕರುಳಿಗಾಗಿ ಜೀವ ಬಾಧಿಸುವುದಿಲ್ಲವೇ, ಅಪ್ಪನನ್ನು ನೋಡಿಕೊಳ್ಳುವ ಕರ್ತವ್ಯ ನನಗೂ ಇದೆ ತಾನೆ? ಯಾರು ಏನೆಂದರೂ ಸರಿ, ಅಪ್ಪನನ್ನು ಕರೆ ತಂದೇ ತರುತ್ತೇನೆ; ರಾಜೀವ್ ಒಂದೆರಡು ದಿನ ಅಸಮಾಧಾನ ತೋರಿಸುತ್ತಾರೆ; ನನಗಾಗಿಯಾದರೂ ನನ್ನ ನಿರ್ಧಾರನ ಮನ್ನಿಸುತ್ತಾರೆ; ದೇವರು ಕೊಟ್ಟ ಅನುಕೂಲವಿದೆ, ಎದೆಯೊಳಗೆ ಮಿಡಿಯುವ, ಹೆತ್ತವನಿಗಾಗಿ ಮರುಗುವ ಹೃದಯವಿದೆ; ಅಪ್ಪನ ಕೊನೆಗಾಲವನ್ನು ನೆಮ್ಮದಿಯಿಂದ, ಸಂತೋಷದಿಂದ ಕಳೆಯಲು ಅನುವು ಮಾಡಿಕೊಡುತ್ತೇನೆ. ದೃಢ ನಿರ್ಧಾರ ಮಾಡಿದ ಮೇಲೆ ಎದೆ ಹಗುರವಾದಂತೆ ಅನಿಸಿತು ಅಶ್ವಿನಿಗೆ.

ಹೊರಗೆ ಕಾರು ನಿಂತ ಶಬ್ದವಾದಂತಾಗಿ, ಇದೇನು ಪಾಪು ಫೋನ್ ಕೂಡ ಮಾಡದೆ ಬಂದದ್ದಾನಲ್ಲ. ಇವತ್ತು ರಜೆ ಕೂಡ ಇಲ್ಲ ಎಂದು ಅಂದುಕೊಳ್ಳುತ್ತಲೇ ಹೊರಬಂದಳು.

“ಹಾಯ್ ಮಮ್, ಹೇಗಿದ್ದೀಯಾ?” ಎನ್ನುತ್ತ ಒಳಬಂದ ಅರ್ಜುನ್.

“ಬಾ ಬಾ ಪಾಪು ಶಾಲಿನಿ ಬರಲಿಲ್ವಾ? ಬಂಟಿ ಹೇಗಿದ್ದಾಳೆ?” ಸಡಗರಿಸಿದಳು.

“ಶಾಲೂಗೆ ರಜಾ ಇಲ್ಲಮ್ಮ, ಬಂಟಿಗೆ ಟೆಸ್ಟ್. ನಡೆಯುತ್ತಿತ್ತು. ನೀನೇನೋ ಹೊಸ ಸಾಹಸ ಮಾಡೋಕೆ ಹೊರಟಿದ್ದೀಯಂತೆ! ಅಪ್ಪ ರಾತ್ರಿ ಫೋನ್ ಮಾಡಿದ್ರು. ತತ್‌ಕ್ಷಣ
ರಜೆ ಹಾಕಿ ಹೊರಟು ಬಂದುಬಿಟ್ಟೆ..”

ಓಹೋ, ಅಪ್ಪನ ಪರ ವಕಾಲತ್ತು ಮಾಡೋಕೆ ಬಂದಿದ್ದಾನೆ. ನೇರವಾಗಿಯೇ ವಿಷಯಕ್ಕೆ ಬತಾ ಇದ್ದಾನೆ ಎಂದುಕೊಂಡು “ತಿಂಡಿ ತಿನ್ತೀಯಾ” ಎಂದಳು.

“ಕಾಫಿ ಸಾಕಮ್ಮ, ದಾರೀಲಿ ತಿಂಡಿ ತಿಂದೆ. ಮಧ್ಯಾಹ್ನ ಒಟ್ಟಿಗೆ ಊಟ ಮಾಡಿಬಿಡ್ತೀನಿ” ಎಂದ.

ಬೆಳೆದು ನಿಂತ ಮಗನನ್ನು ನೋಡುತ್ತ ಎದೆ ತುಂಬಿ ಬಂತು. ನಾಳೆ ನನಗಾಸರೆ ಇವನೇ ಅಲ್ಲವೇ, ನನ್ನ ಹೆತ್ತಪ್ಪನಿಗಾಗಿ ಕರುಳು ಮಿಡಿಯುವಂತೆ ಇವನ ಕರುಳು ಮಿಡಿಯುತ್ತಿದೆ ಅಲ್ಲವೇ ನನಗಾಗಿ.

“ಅಮ್ಮಾ” ಆ ಕರೆ ಆಪ್ಯಾಯಮಾನವೆನಿಸಿತು.

“ಅಮ್ಮ, ನಿಂಗೀಗ ಎಷ್ಟು ವರ್ಷ? ಇನ್ನೆಂಟು ತಿಂಗಳಿಗೆ ರಿಟೈರ್ಡ್ ಆಗ್ತೀಯಾ. ಆಗ ನಿನ್ನನ್ನೂ ಅಪ್ಪನನ್ನೂ ನನ್ನ ಜತೆ ಕರ್ಕೊಂಡು ಹೋಗಿ ಚೆನ್ನಾಗಿ ನೋಡ್ಕೋಬೇಕು
ಅಂತ ಹಂಬಲಿಸುತ್ತಾ ಇದ್ದೇನೆ. ಕೆಲ್ಸ ಬಿಡು ಅಂದ್ರೂ ಬಿಡ್ಲಿಲ್ಲ. ಈಗಲಾದರೂ ನೀನು ಮಗ, ಸೊಸೆ, ಮೊಮ್ಮಗಳ ಜತೆ ನಗ್ತಾ ನಗ್ತಾ ಇರಬೇಡ್ವೆ?”

ಅಶ್ವಿನಿ ಮಾತೇ ಆಡದೆ ಮೌನದ ಮೊರೆ ಹೊಕ್ಕಿದ್ದಾಳೆ. ಅವಳಿಗೆ ಗೊತ್ತು, ಮಗನಿಗೆ ತನ್ನ ಮೇಲೆ ಎಷ್ಟೊಂದು ಪ್ರೀತಿ ಇದೆ, ಕಾಳಜಿ ಇದೆ ಅಂತ. ನಾನು ನೋಯುವುದನ್ನು ಸಹಿಸಲಾರ. ನಾನು ಕಷ್ಟಪಡುವುದನ್ನು ನೋಡಲಾರ. ನನಗಾಗಿ ಯೇನು ಬೇಕಾದರೂ ಮಾಡಬಲ್ಲ ಅನ್ನುವುದೂ ಗೊತ್ತು. ಆದರೆ ಅದೇ ಪ್ರೀತಿ, ಆದೇ ಕಾಳಜಿ ನನ್ನ ಹೆತ್ತಪ್ಪನ ಮೇಲೆ ನನಗಿರಬಾರದೆ? ಈ ಭೂಮಿಗೆ ತನ್ನನ್ನು ತಂದಾತನು ಇರುವ ಪರಿಸ್ಥಿತಿ ನೋಡಿಯೂ ನಾನು ನನ್ನವರೊಂದಿಗೆ ಸುಖವಾಗಿ, ಸಂತೋಷವಾಗಿ ಇದ್ದುಬಿಡಲೇ? ಇದು ಧರ್ಮವೇ? ನ್ಯಾಯವೇ?

“ಅಮ್ಮಾ” ಜೇನಿನಲ್ಲಿ ಅದ್ದಿದ ಧ್ವನಿ. ಹೆತ್ತೊಡಲಿಗೆ ತಂಪೇರಿದ ಭಾವ.

“ಅಮ್ಮ, ತಾತಂಗಾದರೆ ಇನ್ನೂ ನಾಲ್ಕು ಜನ ಮಕ್ಕಳಿದ್ದಾರೆ. ಆದ್ರೆ ನಿಂಗೆ ಇರೋನು ಒಬ್ನೆ ಮಗ ಅಲ್ವೆನಮ್ಮ. ಇರೋ ಒಬ್ನೆ ಮಗನ ಜತೆ ನೀನಿರೋದೇ ಧರ್ಮ ಕಣಮ್ಮ. ಈ ವಯಸ್ಸಲ್ಲಿ ತಾತನ ಜವಾಬ್ದಾರಿ ನಿಂಗ್ಯಾಕಮ್ಮ” ಸೀದಾ ವಿಷಯಕ್ಕೇ ಬಂದ ಅರ್ಜುನ್.

“ಪಾಪು, ನಿನ್ನ ಮಾವಂದಿರು ಅಪ್ಪನ ಯಾವ ಸ್ಥಿತೀಲಿ ಇಟ್ಟಿದ್ದಾರೆ ಅಂತ ನಿಂಗೂತ್ತಿಲ್ವಾ. ಅದನ್ನ ನೋಡ್ತಾ ಇದ್ರೆ ಕರುಳು ಕಿತ್ತು ಬರುತ್ತೆ ಕಣೋ” ಬಿಕ್ಕಳಿಸಿದಳು.

‘ನಂಗೆ ಅರ್ಥ ಆಗುತ್ತೆ ಅಮ್ಮ. ಮೊದ್ಲೆ ನಿಂದು ಹೆಂಗರುಳು. ಯಾರೇ ಕಷ್ಟದಲ್ಲಿದ್ರೂ ಸಹಿಸೋ ಶಕ್ತಿ ನಿಂಗಿಲ್ಲ. ಅಂಥದರಲ್ಲಿ ಅಪ್ಪ ಕಷ್ಟ ಪಡ್ತ ಇದ್ರೆ ನಿನ್ನಿಂದ ಸಹಿಸೋಕೆ ಆಗಲ್ಲ. ಆದರೆ ವಾಸ್ತವವನ್ನು ಅರ್ಥ ಮಾಡ್ಕೋ ಅಮ್ಮ. ತಾತನ್ನ ನೋಡಿಕೊಳ್ಳೋ ಜವಾಬ್ದಾರಿ ಅವರ ಗಂಡುಮಕ್ಕಳದ್ದು. ತಾತಂಗೆ ತೀರ ವಯಸ್ಸಾಗಿದೆ. ಮಗು ಥರಾ ನೋಡ್ಕೋಬೇಕು. ನಿನ್ನ ಕೈಲಿ ಅದು ಸಾಧ್ಯಾನಾ?”

“ಸಾಧ್ಯ ಅಸಾಧ್ಯದ ಪ್ರಶ್ನೆ ಅಲ್ಲ ಪಾಪು. ಇದು ಕರುಳಿಗೆ ಸಂಬಂಧಿಸಿದ ವಿಚಾರ. ಅಸಹಾಯಕ ವೃದ್ಧನಿಗೆ ನಾನು ಮಾಡುವ, ಮಾಡ್ಲೇಬೇಕಾದ ಕರ್ತವ್ಯ, ಮಗಳಾಗಿ ನಂಗಿರೊ ಜವಾಬ್ದಾರಿ ಇದು.”

“ಸರಿಯಮ್ಮ, ಆದ್ರೆ ನೀನು ಈ ವಯಸ್ಸಲ್ಲಿ ಮಗ-ಸೊಸೆಯ ಕೈಲಿ ಸೇವೆ ಮಾಡಿಸ್ಕೋತ ಇರಬೇಕಾದ ಕಾಲ ಇದು. ಅದೂ ಅಲ್ಲದೆ ತಾತ ನಿಂಗೆ, ದೊಡ್ಡಮ್ಮಂದಿರಿಗೆ
ಮಾಡಿರೋದನ್ನ ನೆನೆಸಿಕೊಂಡರೆ ತಾತನ ಮುಖ ಕೂಡ ನೋಡಬಾರದು. ಅವರ ಹಣೆಬರಹ, ಅನುಭವಿಸಿಕೊಳ್ಳಲಿ. ನೀನು ಮಾತ್ರ ದೊಡ್ಡಮ್ಮಂದಿರಂತೆ ಸುಮ್ಮನಿದ್ದು
ಬಿಡು. ಬೇಕಾದರೆ ವಾರಕ್ಕೊಂದು ಸಲ ಹೋಗಿನೋಡಿಕೊಂಡು ಬಾ. ಆದ್ರೆ ಮನೆಗೆ ಮಾತ್ರ ತಂದಿಟ್ಟುಕೊಳ್ಳುವುದು ಬೇಡವೇ ಬೇಡ. ಅಪ್ಪಂಗೂ ಇಷ್ಟವಾಗೋಲ್ಲ. ಅಪ್ಪನಿಗೆ
ಬೇಸರ ಪಡಿಸಬೇಡ.”

ಅಪ್ಪ-ಮಗನ ತೀರ್ಮಾನ ಒಂದೇ. ಯಾವ ಕಾರಣಕ್ಕೂ ತನ್ನ ನಿರ್ಧಾರಕ್ಕೆ ಬೆಂಬಲ ಕೊಡಲಾರರು. ಪಾಪು ಹೇಳ್ತಾ ಇರೋದು ಸತ್ಯವೇ. ಅಪ್ಪ ನನಗೂ ಅಕ್ಕಂದಿರಿಗೂ
ಮಾಡಿರುವುದನ್ನು ನೆನೆಸಿಕೊಂಡರೆ ಮನಸ್ಸು ಬೆಂಕಿಯಂತೆ ಸುಡುತ್ತೆ, ನೋವಿನಿಂದ ನರಳುತ್ತದೆ, ವಿಷಾದದಿಂದ ತಪ್ತವಾಗುತ್ತದೆ.

ಮಗ ಹೊರಟು ನಿಂತಾಗಲೂ ಮೌನವಾಗಿಯೇ ಬೀಳ್ಕೊಟ್ಟಳು. ಅಮ್ಮನಿಗೆ ಬೇಸರವಾಗಿದೆ ಅಂತ ಗೊತ್ತಿದ್ದರೂ “ತಾತನ ವಿಚಾರವನ್ನು ಬಿಟ್ಟು ಬಿಡು. ನಿನ್ನ ಆರೋಗ್ಯ
ನೋಡ್ಕೋ” ಎಂದು ತಾಕೀತು ಮಾಡಿಯೇ ಅರ್ಜುನ್ ಕಾರು ಹತ್ತಿದ. ಆದರೆ ಈ ಮನಸ್ಸು ಎಂಬುದು ಹೇಳಿದವರ ಮಾತುಗಳಿಗೆಲ್ಲ ಬಗ್ಗುವಂಥದೇ? ಅಪ್ಪ ಏನೇ ಮಾಡಿರಲಿ,
ಗಂಡ ಮಗನ ಸಹಕಾರ ಸಿಗದಿದ್ದರೂ ಚಿಂತೆ ಇಲ್ಲ. ತನ್ನ ತೀರ್ಮಾನ ಮಾತ್ರ ಬದಲಾಗದು. ಅಪ್ಪ ತಮಗೆ ಏನೇ ಅನ್ಯಾಯ ಮಾಡಿದ್ದರೂ ಆತ ತನ್ನ ಹುಟ್ಟಿಗೆ ಕಾರಣನಾದವನು. ಅಂದಿನ ದರ್ಪ-ಪೌರುಷ, ಕೋಪ-ಆರ್ಭಟಗಳನ್ನೆಲ್ಲ ಕಳೆದುಕೊಂಡಿರುವ ಅಪ್ಪ ಈಗ ಮಗುವಿವಂತಾಗಿ ಬಿಟ್ಟಿದ್ದಾನೆ. ಅಂಥ ಸ್ಥಿತಿಯಲ್ಲಿರುವ ಅಪ್ಪನ ಮೇಲೆ ತನ್ನ ಸೇಡೇ? ತಪ್ಪು ತಪ್ಪು. ಅಕ್ಕಂದಿರಂತೂ ಅತ್ತ ಸುಳಿಯಲಾರರು. ಅಪ್ಪನ ಅದೇ ದರ್ಪ, ದುರಹಂಕಾರವನ್ನು ಉಳಿಸಿಕೊಂಡಿರುವ ತಮ್ಮ, ಅಣ್ಣ, ಒಡಹುಟ್ಟಿದವರ ಬಗ್ಗೆ ಪ್ರೀತಿಯನ್ನಾಗಲಿ, ಮಮಕಾರವನ್ನಾಗಲಿ ಬೆಳೆಸಿಕೊಂಡವರಲ್ಲ. ಆದರೆ ಅಪ್ಪನಿಗಾಗಿ
ತಾನಂತೂ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿಯೇ ಇಲ್ಲ. ಕಠಿನ ಹೃದಯಗಳ ಆಶ್ರಯದಲ್ಲಿರುವ ಅಪ್ಪನಿಗೆ ಊಟ, ತಿಂಡಿಯಿಂದ ಹಿಡಿದು ಎಲ್ಲದಕ್ಕೂ ಕಂಟ್ರೋಲ್,
ಪ್ರೀತಿ ಇಲ್ಲಾ, ವಿಶ್ವಾಸ ಇಲ್ಲ, ಮಮಕಾರ ಕಾಳಜಿ ಮೊದಲೇ ಇಲ್ಲ. ಮುದುಕ ನಿವಾರಣೆ ಆದ್ರೆ ಸಾಕು ಅಂತ ಕಾಯ್ತಾ ಇದ್ದಾರೆ, ವಂಶೋದ್ಧಾರಕರು.

“ಈ ಮಕ್ಕಳಿಗಾಗಿಯೇ ಅಲ್ಲವೇ ಅಪ್ಪ ಹೆಣ್ಣು ಮಕ್ಕಳನ್ನು ಕಡೆಗಣಿಸಿದ್ದು, ಅಸಡ್ಡೆಯಿಂದ ಕಂಡಿದ್ದು, ಹೆತ್ತ ಮಕ್ಕಳೇ ಆದರೂ ಹೆಣ್ಣೆಂಬ ಕಾರಣಕ್ಕೆ ಅಲಕ್ಷಿಸಿ, ತಾತ್ಸಾರ ತೋರಿ ತಿರಸ್ಕಾರ ತೋರಿಸಿ ಹೂಮನಗಳನ್ನು ನೋಯಿಸಿದ್ದು, ಖರ್ಚು ಎಂಬ ಕಾರಣಕ್ಕೆ ಶಾಲೆಯನ್ನು ಮೊಟಕುಗೊಳಿಸಿ, ಅನ್ನ ಹಾಕುವುದೇ ದಂಡ ಎಂಬಂತೆ ಸಿಕ್ಕವರಿಗೆ ಕೊಟ್ಟು ಕೈ ತೊಳೆದುಕೊಂಡು ಮದುವೆ ಎಂಬ ಕಾರ್ಯವನ್ನು ಮುಗಿಸಿಬಿಟ್ಟ. ಕಟುಕ ಹೃದಯಿ ಅಪ್ಪ. ಮಕ್ಕಳಿಗಾಗಿ ಮೌನವಾಗಿ ಕಣ್ಣೀರು ಮಿಡಿಯುವುದಷ್ಟೆ ಅಪ್ಪನಿಗೆ ಸಾಧ್ಯವಾಗುತ್ತಿದ್ದದ್ದು. ಅಕ್ಕಂದಿರ ಯಾವ ಕಷ್ಟ ಸುಖಗಳಿಗೂ ಸ್ಪಂದಿಸದ ಅಪ್ಪ ಕೊನೆವರೆಗೂ ಅವರಿಗೆ ಹತ್ತಿರವಾಗಲೇ ಇಲ್ಲ.

ಕೊನೆಯವಳಾಗಿ ಹುಟ್ಟಿದ್ದಕ್ಕೋ ಏನೋ ತಾನು ಸ್ಕೂಲ್ ಫೈನಲ್‌ನ್ನು ಮುಗಿಸಿದ್ದೆ. ಹಠ ಮಾಡಿ ಕಾಲೇಜಿಗೆ ಸೇರಿದ್ದೆ. ಕಾಸು ಕಾಸಿಗೂ ಲೆಕ್ಕ ಹಾಕುವ ಅಪ್ಪನಿಂದ ಫೀಸು, ಪುಸ್ತಕಕ್ಕಾಗಿ ಹಣ ಪಡೆಯಲು ಹರಸಾಹಸ ಮಾಡಬೇಕಿತ್ತು. ಕದ್ದು ಮುಚ್ಚಿ ಅಮ್ಮ ಕೊಡುವ ಹಣವೇ ಆಧಾರವಾಗಿತ್ತು. ಪಿ. ಯು. ಸಿ ಮುಗಿಸುವಷ್ಟರಲ್ಲಿ ಅಪ್ಪ, ಅಕ್ಕಂದಿರಿಗೆ ಕಟ್ಟಿದಂತೆಯೇ ತನ್ನನ್ನೂ ಯಾರಿಗೋ ಕಟ್ಟಿ ಸಾಗ ಹಾಕಲೆತ್ನಿಸಿದ್ದ ಆ ಸಮಯದಲ್ಲಿಯೇ ಅಲ್ಲವೇ ರಾಜೀವ್ ತನ್ನನ್ನು ಮೆಚ್ಚಿ, ಒಪ್ಪಿಸರಳವಾಗಿ ಮದುವೆಯಾದದ್ದು. ಅಪ್ಪನ ಆಯ್ಕೆಗೆ ಬಿಟ್ಟಿದ್ದರೆ ನನ್ನ ಸ್ಥಿತಿಯೂ ಅಕ್ಕಂದಿರ ಪರಿಸ್ಥಿತಿಗಿಂತ ಭಿನ್ನವಾಗೇನೂ
ಇರುತ್ತಿರಲಿಲ್ಲ. ಆದರೆ ಈ ವಿಷಯದಲ್ಲಿ ಅಮ್ಮ ಬಲವಾಗಿ ಹಠ ಹಿಡಿದು ಮದುವೆಯೇ ಬೇಡ, ಓದು ಮುಂದುವರಿಸುತ್ತೇನೆ ಎಂದು ಗಲಾಟೆ ಮಾಡುತ್ತಿದ್ದ ತನ್ನನ್ನೂ ಒಪ್ಪಿಸಿ ರಾಜೀವನಂಥ ಸಜ್ಜನನ ಕೈಗಿಟ್ಟಿದ್ದಳು.

ತನ್ನ ಓದುವ ಹುಚ್ಚುತಿಳಿದ ರಾಜೀವ ತನ್ನನ್ನು ಕಾಲೇಜಿಗೆ ಕಳುಹಿಸಿ, ಮುಂದೆ
ಎಂ. ಎ ಮಾಡಿಸಿ, ಉಪನ್ಯಾಸಕಿ ಆಗುವ ತನ್ನ ಕನಸನ್ನು ನನಸು ಮಾಡಿದ್ದರು. ಸುಖ ಅಂದರೇನು, ಸಂತೋಷ ಎಂದರೇನು ಎಂದು ತಿಳಿದಿದ್ದೇ ಮದುವೆಯ ಅನಂತರ! ತನ್ನನ್ನು ಅತಿಯಾಗಿ ಪ್ರೀತಿಸುವ ರಾಜೀವ, ತನ್ನ ಸುಖಕ್ಕಾಗಿ, ನೆಮ್ಮದಿಗಾಗಿ ಏನನ್ನಾದರೂ ಮಾಡಲು ಸಿದ್ಧವಿರುವ ರಾಜೀವನಿಂದಾಗಿ ಬದುಕೇ ರಮ್ಯವೆನಿಸಿತ್ತು. ಪಾಪು ಹುಟ್ಟಿದ ಮೇಲಂತೂ ಬದುಕು ಸ್ವರ್ಗವೇ ಆಗಿತ್ತು. ತನ್ನ ಸುಂದರ ಬಾಳು ಕಂಡೇ ಅಮ್ಮ ಸಂತೋಷದಿಂದ ಕಣ್ಣು ಮುಚ್ಚಿದಳು. ಅವಳು ಸತ್ತದ್ದೇ ಒಳ್ಳೆಯದಾಯಿತು. ಅಪ್ಪನ ಪ್ರತಿರೂಪದಂತಿರೋ ಮಕ್ಕಳಿಂದ ಅಮ್ಮ ಸುಖ ಪಡುವುದು ಅಷ್ಟರಲ್ಲಿಯೇ ಇತ್ತು. ಅಮ್ಮ ಬದುಕಿದ್ದಿದ್ದರೆ ತಾನಂತೂ ಆ ಮನೆಯಲ್ಲಿ ಬಿಡುತ್ತಿರಲಿಲ್ಲ. ಆದರೆ ಅಮ್ಮ ಒಪ್ಪಿ ಗಂಡನನ್ನು ಬಿಟ್ಟು ಬರುತ್ತಿದ್ದಳೇ? ಅಮ್ಮನನ್ನು ಸುಖವಾಗಿ ನೋಡಿಕೊಳ್ಳುವ ಭಾಗ್ಯವಂತೂ ತನಗಿಲ್ಲ. ಅಪ್ಪನನ್ನಾದರೂ ನೋಡಿಕೊಂಡು ಅಮ್ಮನ ಋಣ ತೀರಿಸಿಕೊಳ್ಳುತ್ತೇನೆ. ತನಗಾಗಿ ಏನನ್ನಾದರೂ ತಂದಿದ್ದಾಳೆಯೇ ಎಂದು ಆಸೆಯಿಂದ ತನ್ನ ಕೈಗಳನ್ನು ನೋಡುವ ಅಪ್ಪ; ತಂದಿದ್ದನ್ನು ಕೊಟ್ಟ ಕೂಡಲೇ ಗಬಗಬನೇ ತಿನ್ನುವ ಅಪ್ಪ; ಮಗ, ಸೊಸೆಯಿಂದಾಗಿ ಹೆದರಿ ನಡುಗುವ ಅಪ್ಪ; ತನ್ನನ್ನು ಕರ್ಕೊಂಡು ಹೋಗೇ ಎಂದು
ಗೋಗರೆಯುವ ಅಪ್ಪ; ಅಕ್ಕಂದಿರ ಬಾಳನ್ನು ಹಸನು ಮಾಡದ ಅಪ್ಪ; ದುಡಿದದ್ದೆಲ್ಲವನ್ನೂ ಮಕ್ಕಳ ಕೈಗೆ ಕೊಟ್ಟು ಕೈ ತೊಳೆದುಕೊಂಡು ಅಸಹಾಯಕವಾಗಿರುವ ಅಪ್ಪ; ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದು, ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿರುವ, ಪಶ್ಚಾತ್ತಾಪದ ಉರಿಯಲ್ಲಿ ಬೆಂದು, ತಾನು ತಪ್ಪು ಮಾಡಿ ಬಿಟ್ಟಿದ್ದೇನೆ, ನನ್ನ ಕ್ಷಮಿಸಿ ಯಾರಾದ್ರೂ ನನ್ನ ಕರ್ಕೊಂಡು ಹೋಗ್ರೆ’ ನಾನಿಲ್ಲಿ ಇರಲಾರೆ ಎಂದು ಬೇಡುವ ಅಪ್ಪ …… ಅಪ್ಪನ ಚಿತ್ರಣ ಮನದ ತುಂಬ ತುಂಬಿ ಅವನನ್ನು ಇಂದೇ ಕರೆದು ತರಲು ನಿರ್ಧರಿಸಿ ಬಿಟ್ಟಳು. ಫೋನ್ ಕಿರುಗುಟ್ಟಿತು. ಪಾಪುವಿನದೇ, ಫೋನ್. “ಹಲೋ ಪಾಪು.”

“ಅಮ್ಮಾ, ನಿನ್ನ ನಿರ್ಧಾರ ಬದಲಾಯಿಸೋಲ್ವಾ? ತಾತನ್ನ ಮನೆಗೆ ಕರ್ಕೊಂಡೇ ಬರ್ತೀಯಾ?” ಗಂಭೀರವಾಗಿ ಕೇಳಿದ.

ತಾನು ಬೆಳಗ್ಗೆಯಿಂದ ಅಪ್ಪನಿಗಾಗಿ ಮೇಲಿನ ರೂಮನ್ನು ರೆಡಿ ಮಾಡಿಸುತ್ತಿದ್ದದ್ದು ಅಪ್ಪನಿಂದ ಮಗನಿಗೆ ವಿಷಯ ತಿಳಿದಿದೆ. ಅದಕ್ಕೆ ಈ ಫೋನ್.

“ಹೌದು ಪಾಪು, ಅಪ್ಪನ್ನ ಇವತ್ತೇ ಕರ್ಕೊಂಡು ಬರ್ತಾ ಇದ್ದೀನಿ. ಅಪ್ಪ ಎಷ್ಟೊಂದು ಸಂತೋಷವಾಗಿದ್ದಾರೆ ಗೊತ್ತಾ ಪಾಪು, ಇಲ್ಲಿಗೆ ಬರ್ತಾ ಇದ್ದೀನಿ ಅಂತ” ಬಡಬಡನೇ ಹೇಳಿದಳು.

“ಸಾಕು ನಿಲ್ಸಮ್ಮ. ನಿಂಗೆ ನನಗಿಂತ, ಅಪ್ಪನಿಗಿಂತ ತಾತನೇ ಹೆಚ್ಚಾದ್ರು ಅಲ್ವಾ?” ಖಾರವಾಗಿ ನುಡಿದ.

“ಅದು ಹಾಗಲ್ಲ ಪಾಪು. ನನ ಮನಸ್ಸನ್ನು ಅರ್ಥ ಮಾಡ್ಕೋ ಪಾಪು.  ನನ್ನ ಭಾವನೆಗಳನ್ನು ಅರ್ಥ ಮಾಡ್ಕೋ. ಈಗ ನನ್ನ ಮನಸ್ಸು ಎಷ್ಟು ತೃಪ್ತಿಯಿಂದ ಬೀಗ್ತಾ
ಇದೆ ಗೊತ್ತ? ಈ ಸಂತೋಷನ, ಈ ತೃಪ್ತಿನಾ ಎಷ್ಟು ಹಣ ಕೊಟ್ರೂ ಕೊಂಡುಕೊಳ್ಳೋಕೆ ಸಾಧ್ಯಾನಾ ಪಾಪು? ದಯವಿಟ್ಟು, ನನ್ನ ಅರ್ಥ ಮಾಡಿಕೊಂಡು ನಿಮ್ಮ ಅಪ್ಪಂಗೂ
ನೀನೇ ಹೇಳು.”

“ಸಾರಿ ಅಮ್ಮ. ನೀನು ನನ್ನ ನಿರಾಶೆಪಡಿಸ್ತಾ ಇದ್ದೀಯಾ. ನಂಗೂ ಈ ಆತ್ಮತೃಪ್ತಿ ಬೇಡವೇನಮ್ಮ. ನೀನು ನಿಮ್ಮಪ್ಪನ್ನ ನೋಡ್ಕೋ. ನಾನು ನಮ್ಮ ಅಪ್ಪನ್ನ ನೋಡ್ಕೋತೀನಿ” ಪಟ್ಟನೆ ಫೋನಿಟ್ಟು ಬಿಟ್ಟ. ಪೆಚ್ಚಾದ ಅಶ್ವಿನಿ ಕುಸಿದು ಕುಳಿತಳು.

ತನ್ನ ಯಾವ ಅನುನಯಕ್ಕೂ ಸ್ಪಂದಿಸದ ರಾಜೀವ ಬಿಗಿಯಾಗಿಯೇ ಇದ್ದು, ತನ್ನ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿಕೊಳ್ಳತೊಡಗಿದಾಗ ಮನಸ್ಸು ಹೊಯ್ದಾಡಿತು. ಈ
ಪ್ರಕರಣಕ್ಕೆ ತೆರೆ ಎಳೆದುಬಿಡಲೇ ಎಂದು ಆಲೋಚಿಸಿದಳು. ಥಟ್ಟನೆ ಅಪ್ಪನ ಮುಖ ನೆನಪಿಗೆ ಬಂದು, ಮಗಳ ಮನೆಗೆ ಬಂದಿರುವ ಸಂತೋಷದಲ್ಲಿ ತೇಲಾಡುತ್ತಿರುವ ಅಪ್ಪ, ಆ ಸಂತೋಷವನ್ನು ಕಿತ್ತುಕೊಂಡು ತಾನು ನೆಮ್ಮದಿಯಾಗಿರಲು ಸಾಧ್ಯವೇ? ಕೊನೆ ಉಸಿರಿರುವ ತನಕ ಆ ಪಾಪಪ್ರಜ್ಞೆ ಕಾಡಿ ಹಿಂಸಿಸುವುದಿಲ್ಲವೇ? ಬೇಡ, ಈಗ ತಾನು ನಿರ್ಧಾರ ಬದಲಿಸುವುದು ಬೇಡ. ತನ್ನ ಮಾತು ಕೇಳಲಿಲ್ಲವೆಂದು ರಾಜೀವ್ ಕೋಪಗೊಂಡು ಮಗನ ಮನೆಗೆ ಹೋಗುತ್ತಿದ್ದಾರೆ. ಅದೆಷ್ಟು ದಿನ ಈ ಕೋಪ? ತನ್ನ ಬಿಟ್ಟು ಇರಲು ಅವರಿಂದ ಸಾಧ್ಯವೇ? ಕೆಲವೇ ದಿನಗಳಲ್ಲಿ ಬಂದೇ ಬರುತ್ತಾರೆ. ತುಂಬು ಭರವಸೆಯಿಂದ ಮನಸ್ಸಿಗೆ ಸಾಂತ್ವನ ಮಾಡಿಕೊಂಡಳು. ತಾನು ಎಷ್ಟೇ ತಡೆದರೂ ರಾಜೀವ್ ಇಲ್ಲಿ ನಿಲ್ಲಲಾರನೆಂಬ ಸತ್ಯ ಅರಿವಾದೊಡನೆ ತನ್ನ ಪ್ರಯತ್ನ ನಿಲ್ಲಿಸಿ ಬಿಟ್ಟಳು.

ರಾಜೀವನಿಲ್ಲದ ಮನೆ ಬಣಬಣವೆನಿಸಿ, ಅವನಿಲ್ಲದೇ ತಾನು ಈ ಮನೆಯಲ್ಲಿ ಇರಲು ಅಸಾಧ್ಯವೆನಿಸುತ್ತಿದ್ದರೂ, ಅಪ್ಪನಿಗಾಗಿ, ಅಪ್ಪನ ಮುಖದ ಮೇಲಿನ ನಗುವಿಗಾಗಿ ಎಲ್ಲವನ್ನೂ ಸಾಧ್ಯವಾಗಿಸಿಕೊಂಡಳು. ಸ್ಕೂಲ್, ಅಪ್ಪನ ಸೇವೆಯಲ್ಲಿಯೇ ದಿನ ಕಳೆದುಹೋಗುತ್ತಿತ್ತು. ಈಗೀಗ ರಾಜೀವನ ನೆನಪಾಗುತ್ತಿದ್ದದೂ ರಾತ್ರಿ ಮಲಗುವಾಗ. ಬೆಳಗ್ಗಿನ ಆಯಾಸ ಅವಳನ್ನು ನಿದ್ದೆಗೆಳೆದು ಬಿಡುತ್ತಿತ್ತು.

ಗಂಡನಿಂದ ದೂರವಿರುವ ನೋವು ಕಾಡುತ್ತಿದ್ದರೂ ವೃದ್ಧ ತಂದೆಯ ಸೇವೆಯಿಂದಾಗಿ ಧನ್ಯತೆಯಿಂದ ಮನ ಬೀಗುತ್ತಿತ್ತು. ಅತ್ಮತೃಪ್ತಿಯಿಂದ ಏನೋ ಸಾಧಿಸಿದೆನೆಂಬ ಭಾವ ಅವಳಲ್ಲಿ ಮೂಡಿ, ಹಿಂದಿನ ಅಶ್ವಿನಿ ಅವಳಿಂದ ಕಳೆದೇ ಹೋಗಿಬಿಟ್ಟಿದ್ದಳು. ಸ್ವಾರ್ಥವಿಲ್ಲದ ಜೀವನ, ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಮೂಡಿಸುವಷ್ಟು ಅಶ್ವಿನಿ ಬದಲಾಗಿ ಬಿಟ್ಟಳು. ಈ ತೃಪ್ತಿ, ಈ ನೆಮ್ಮದಿ ಅವಳಿಗೆ ಹೆಚ್ಚು ದಿನ ಉಳಿಯದಂತೆ ಅಪ್ಪ ಸಂತೋಷದಿಂದ, ನಗುನಗುತ್ತಲೇ ಪ್ರಾಣಬಿಟ್ಟಾಗ ಎದೆಗುಂದಿದಳು. ಈ ಭಾಗ್ಯಕ್ಕಾಗಿಯೇ ತಾನು ಗಂಡನನ್ನ, ಮಗನನ್ನು ಎದುರಿಸಿ ನಿಂತದ್ದು? ಅಪ್ಪ ಇನ್ನೊಂದಿಷ್ಟು ದಿನ ತನ್ನೊಂದಿಗಿರಬಾರದಿತ್ತೇ? ಎಂದು ಹಲುಬಿದಳು. ಒಟ್ಟಿನಲ್ಲಿ ಸಾಯುವ ಕ್ಷಣಗಳಲ್ಲಿ ಅಪ್ಪನಿಗೆ ಆನಂದ ನೀಡಿದ್ದೆ ಎಂಬ ಸಂತೃಪ್ತ
ಭಾವವೊಂದೇ ಅವಳಿಗೆ ಕೊನೆಗೆ ಉಳಿದದ್ದು.

ಅಪ್ಪನ ಅಂತ್ಯಕ್ರಿಯೆಯೆಲ್ಲ ಮುಗಿದು, ಅಪ್ಪನ ಋಣ ತೀರಿತೆಂದು ಎಲ್ಲರೂ ಅವರವರ ಹಾದಿ ಹಿಡಿದು ಹೊರಟು ನಿಂತಾಗ ಅಶ್ವಿನಿಯ ಮನವು ಸ್ಪಷ್ಟವಾದ ನಿಲುವು ಕಂಡುಕೊಂಡಿತ್ತು.

ಇನ್ನೇನು ಅಮ್ಮ ತನ್ನೊಂದಿಗೆ ಬಂದೇ ಬರುತ್ತಾಳೆ. ಇಷ್ಟು ದಿನ ‘ಅಪ್ಪ ಅಪ್ಪ’ ಅಂತ ತಮ್ಮನ್ನ ದೂರ ಮಾಡಿಕೊಂಡಿದ್ದ ಅಮ್ಮ ಈಗ ಹೊರಟೇ ಹೊರಡುತ್ತಾಳೆ ಎಂಬ
ಭಾವದಿಂದ ಅರ್ಜುನ್, “ಇನ್ನೇನಮ್ಮ, ತಾತನ ಸ್ವರ್ಗಕ್ಕೆ ಕಳಿಸಿ ಆಯ್ತು. ನಾಳೆ ಮನೆ ಖಾಲಿ ಮಾಡೋದು ತಾನೇ.”

“ಯಾಕಪ್ಪ, ಅಪ್ಪ ಇಲ್ಲದೆ ಹೋದ್ರೆ ಏನು, ಅಪ್ಪನಂಥ ಸ್ಥಿತಿಯಲ್ಲಿರೋ ಎಷ್ಟೋ ಜೀವಗಳು ಪ್ರೀತಿಗಾಗಿ, ಹಿಡಿ ಕೂಳಿಗಾಗಿ ಹಂಬಲಿಸುತ್ತಾ ಇವೆ, ಅವರ ಸೇವೆ ಮಾಡ್ತಾ ನನ್ನ ಬಯಕೆನಾ ತೀರಿಸಿಕೊಳ್ಳುತ್ತೇನೆ. ಈ ಮನೆ ಇನ್ನು ಮುಂದೆ ವೃದ್ಧಾಶ್ರಮ. ಅದನ್ನು ನಡೆಸಿಕೊಂಡು ಹೋಗೋದೇ ನನ್ನ ಕೊನೆ ಆಸೆ. ಈ ಉಸಿರು ಈ ದೇಹದ ಮೇಲೆ ಇರೋತನಕ ನಿಮ್ಮ ತಾತನಂಥವರಿಗೆ ಆಸರೆ ಆಗಿ ನಿಲ್ತೀನಿ. ಇನ್ನು ನೀನು ನಿಮ್ಮಪ್ಪನ್ನ ಕರ್ಕೊಂಡು ಹೊರಡಬಹುದು.” ದೃಢವಾಗಿ, ನಿಶ್ಚಯವಾಗಿ, ನಿರ್ಭಯವಾಗಿ ಹೇಳಿದಳು ಅಶ್ವಿನಿ. ದಂಗಾಗಿ ಅಮ್ಮನನ್ನೇ ನೋಡುತ್ತಾ ನಿಂತುಬಿಟ್ಟ ಅರ್ಜುನ್.

ನನ್ನ ಅನಂತರ ಅದನ್ನು ನಡೆಸಿಕೊಂಡು ಹೋಗೋ ಜವಾಬ್ದಾರಿ ನಿಂದು. ಹೆತ್ತ ತಾಯಿಯ ಋಣ ತೀರಿಸಬೇಕು ಅನ್ನುವುದಾದರೆ ನನ್ನ ಈ ಆಸೆನಾ ನೀನು ನೆರವೇರಿಸಿ
ಕೊಡುತ್ತೀಯಾ.

ಹನಿಗಣ್ಣಾಗಿ, ಹೆಮ್ಮೆಯಿಂದ “ನೀನು ಮನುಷ್ಯಳಲ್ಲ ಅಮ್ಮಾ, ಮಹಾತಾಯಿ. ನಿನ್ನಂಥ ತಾಯಿಗೆ ಮಗನಾಗಿ ಹುಟ್ಟಿ ಅಷ್ಟೂ ಮಾಡದಿದ್ರೆ ನಾನು ಮನುಷ್ಯನಾಗೋಕೆ
ಸಾಧ್ಯವೇನಮ್ಮಾ? ನೀನು ಪುಣ್ಯವತಿ” ತಾಯಿಯ ಕೈಗಳನ್ನು ಕಣ್ಣಿಗೊತ್ತಿಕೊಂಡು ಭಾವುಕನಾದ.

“ಅಶ್ವಿನಿ, ನಿನ್ನ ಅರ್ಥಮಾಡಿಕೊಳ್ಳದೇ ತಪ್ಪು ಮಾಡಿಬಿಟ್ಟೆ. ದಯವಿಟ್ಟು ನನ್ನ ಕ್ಷಮ್ಸಿ ಬಿಡು. ನಿನ್ನ ಜತೆ ನಾನೂ ಇದ್ದೀನಿ” ರಾಜೀವನ ನುಡಿ ಅಶ್ವಿನಿಯ ಕಿವಿಗಳಿಗೆ ಅಮೃತವರ್ಷಿಣಿಯಾಯಿತು.
*****
ಪುಸ್ತಕ: ದರ್ಪಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೦೬
Next post ನಾಗರಿಕತೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys