ಅಮಟೆ ಅಮಟೆ ಎಂದು ಕುಂಟೆಬಿಲ್ಲೆ
ಆಡುತ್ತ ಹತ್ತರತ್ತರ ಬಂದು ಕಡೇಮನೆ ಸೇರಿ
ಕಿಸಕ್ಕೆಂದು ಹನಿಯುತ್ತಾಳೆ.
ಹಳ್ಳತಿಟ್ಟು ಸರಿಮಾಡಿ ನನ್ನ ಹದ ಮಾಡಿ
ಕೂರಿಗೆ ಹೂಡಿ ಕಾಡುತ್ತಾಳೆ.
ದಾರಿ ಬಿದ್ದಲ್ಲಿ ಬೀಜ ಬಿತ್ತುತ್ತ ಬುಸುಗುಡುತ್ತ
ಬೆವರಿಸುತ್ತಾಳೆ.
ವಾಸನೆಯೊಡೆದು ಜುಳ ಜುಳ ಬೆಳೆದು
ಕಣ್ಣಕುಣಿಕೆ ಸರಿದು ಬಿಸಿಯುಸಿರ ಬಯಲಲ್ಲಿ
ಕೆನೆಸುತ್ತಾಳೆ; ನನ್ನ ನಗುತ್ತಾಳೆ.
ಹೊಲವೆಲ್ಲ ಕಲಕಲ ಹಸಿರುಸಿರುವಾಗ
ತೆನೆಯುತ್ತಾಳೆ; ತೂಗಿ ತಬ್ಬುತ್ತಾಳೆ.
ಮೈಗೆ ಮೈಯಾಗಿ ಮಣ್ಣಮುತ್ತೈದೆಯಾಗಿ
ಹಾಳೆಮೇಲೆ ಹರಿಯುತ್ತಾಳೆ;
ಆಳ ಮೆರೆಯುತ್ತಾಳೆ.
*****