ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು,
ನೀನು ಸಹ ಬಲ್ಲೆ ನಿನ್ನೆತ್ತರವ, ಅದ ನುಡಿವ
ರಾಜಸನ್ನದು ನಿನ್ನ ಮುಕ್ತನನು ಮಾಡಿದೆ.
ನಾನು ನಿನ್ನಲ್ಲಿಟ್ಟ ಸ್ನೇಹ ಪ್ರೀತಿಗಳೆಲ್ಲ
ಇನ್ನಿಲ್ಲ, ಇದ್ದೀತು ಹೇಗೆ ಒಪ್ಪದೆ ನೀನೆ ?
ಈ ಭಾಗ್ಯಕ್ಕೇನು ಅರ್ಹತೆ ತಾನೆ ನನ್ನೊಳಿದೆ ?
ಬಹುಮಾನ ಕೊಳ್ಳಲಧಿಕಾರ ಇದ್ದರೆ ತಾನೆ ?
ಹಾಗೆಂದೆ ಆ ಸ್ವಾಮ್ಯ ನಿನಗೆ ಹಿಂತಿರುಗಿದೆ.
ನೀ ಕೊಟ್ಟುಕೊಂಡೆ ತಿಳಿಯದೆ ನಿನ್ನ ಘನತೆಯನೆ,
ಅಥವ ತಿಳಿಯದೆ ಹೋದೆ ನನ್ನ ನಿಜಬೆಲೆಯನ್ನೆ ;
ತಪ್ಪು ತಿಳಿವಿನ ಮೇಲೆ ಬಂದ ಈ ಹಿರಿಕೊಡುಗೆ
ಹಿಂತಿರುಗುತಿದೆ ನಿನಗೆ ನಡೆದು ಮರುಚಿಂತನೆ.
ಹೆಮ್ಮೆಯುಕ್ಕಿಸುವ ಕನಸಿನ ಹಾಗೆ ನೀ ದೊರೆತೆ,
ನಿದ್ದೆಯಲಿ ರಾಜ, ಎದ್ದನೊ ಎಲ್ಲ ಹುಸಿ ಸಂತೆ!
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 87
Farewell! thou art too dear for my possessing